ಕೃಷ್ಣದ್ವೈಪಾಯನರಾಗಿ ಜನಿಸಿ, ಅನೇಕ ಮಹತ್ಕಾರ್ಯಗಳನ್ನು ಮಾಡಿ, ಸನಾತನಧರ್ಮದ ಜ್ಞಾನಭಂಡಾರವನ್ನು ಚತುರ್ವೇದಗಳಾಗಿ ವಿಂಗಡಿಸಿ ವೇದವ್ಯಾಸರಾಗಿ ಬೆಳೆದ ಮಹಾಪುರುಷರು ಇವರು. ಮಹಾಭಾರತದಲ್ಲಿ ಭೀಷ್ಮರು ಪಿತಾಮಹ ಎಂದು ಹೆಸರಾಗಿದ್ದರೂ ನಿಜವಾದ ಅರ್ಥದಲ್ಲಿ ಕೌರವ ಹಾಗೂ ಪಾಂಡವ ಕುಲಗಳಿಗೆ ಪಿತಾಮಹರು ವೇದವ್ಯಾಸರೇ! ಮಹಾಭಾರತದ ಉದ್ದಕ್ಕೂ ಹಾಸುಹೊಕ್ಕಾಗಿದೆ ಅವರ ಪಾತ್ರ. ಕೊನೆಗೆ ಮಹಾಭಾರತದ ಆಗುಹೋಗುಗಳಿಗೆ ಅಕ್ಷರ ರೂಪವನ್ನು ಕೊಟ್ಟವರೂ ಅವರೇ. ಭಗವಂತನ ಮುಖವಾಣಿಯಿಂದ ಬಂದಿದೆಯೆನ್ನಲಾದ ಭಗವದ್ಗೀತೆಯು ಈ ಮಹಾಭಾರತದ ಭಾಗವಾಗಿದೆ. ಇವೆಲ್ಲದರ ಜೊತೆಗೆ ವೇದಜ್ಞಾನವನ್ನು ವಿಂಗಡಿಸಿ, ಶಿಷ್ಯರಿಗೆ ಬೋಧಿಸಿ, ಆ ಜ್ಞಾನವು ಹೆಚ್ಚಿನ ಜನರಿಗೆ ತಲಪುವಂತೆ ಮಾಡಿದವರು. ಮಹಾಪುರಾಣಗಳನ್ನು ಸಂಪಾದಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಇವರು ಮಹಾವಿಷ್ಣುವಿನ ಅಂಶದಿಂದ ಹುಟ್ಟಿದ ಒಬ್ಬ ಮಹಾಜ್ಞಾನಿ. ಇವರೊಬ್ಬ ತ್ರಿಕಾಲಜ್ಞಾನಿ ಎನ್ನಿಸಿಕೊಂಡಿದ್ದಾರೆ. ಬಲಿ ಚಕ್ರವರ್ತಿ, ಪರಶುರಾಮ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಅಶ್ವತ್ಥಾಮರೊಂದಿಗೆ ಅಮರತ್ವವನ್ನು ಪಡೆದ ಸಪ್ತಚಿರಂಜೀವಿಗಳ ಪಟ್ಟಿಯಲ್ಲಿ ಇವರೂ ಇದ್ದಾರೆ. ಅಂದರೆ ಇವರಿಗೆ ಸಾವೇ ಇಲ್ಲ! ಈ ಕೆಳಗಿನ ಶ್ಲೋಕವು ಎಲ್ಲ ಚಿರಂಜೀವಿಗಳನ್ನೂ ಹೆಸರಿಸುತ್ತದೆ:

ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಶ್ಛ ವಿಭೀಷಣಃ |

ಕೃಪಃ ಪರಶುರಾಮಶ್ಚ ಸಪ್ತೇತೇಃ ಚಿರಂಜೀವಿನಃ ||

ಮಹಾವಿಷ್ಣುವು ಧರ್ಮಸಂಸ್ಥಾಪನೆಗಾಗಿ, ಕಲ್ಕಿಯ ರೂಪದಲ್ಲಿ, ಹತ್ತನೆಯ ಅವತಾರವಾಗಿ ಭೂಮಿಯಲ್ಲಿ ಜನ್ಮತಳೆದಾಗ ಕಲ್ಕಿಯ ಸಹಾಯಕ್ಕಾಗಿ ನಿಲ್ಲಲು ಈಗ ಅಜ್ಞಾತವಾಸದಲ್ಲಿರುವ ಈ ಏಳೂ ಜನ ಚಿರಂಜೀವಿಗಳು ಮತ್ತೆ ಪ್ರಕಟಗೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ. ಒಂದು ಶತಮಾನದ ಪೂರ್ಣಾಯುಷ್ಯವನ್ನು ಬಯಸುವವವರು ಮೇಲಿನ ಶ್ಲೋಕದ ಧ್ಯಾನವ್ನನ್ನು ಮಾಡುತ್ತಿದ್ದರೆ ಫಲವು ಸಿಗುವುದು ಎನ್ನುವ ನಂಬಿಕೆಯೂ ಇದೆ.

ಇವರ ಜನನವಾದದ್ದು ಆಷಾಢ ಶುದ್ಧ ಪೂರ್ಣಿಮೆಯ ದಿನ. ಸಾವಿರಾರು ವರ್ಷಗಳ ಅನಂತರವೂ ವ್ಯಾಸರು ಹುಟ್ಟಿದ ದಿನವನ್ನು ವ್ಯಾಸಪೂರ್ಣಿಮೆ ಅಥವಾ ಗುರುಪೂರ್ಣಿಮೆ ಎಂದು ತಮ್ಮ ತಮ್ಮ ಗುರುಗಳಿಗೆ ಶ್ರದ್ಧಾಭಕ್ತಿಗಳಿಂದ ಕೃತಜ್ಞತೆಯನ್ನು ಸಲ್ಲಿಸುವ ದಿನವಾಗಿ ಇಂದಿಗೂ ಆಚರಿಸಲಾಗುತ್ತಿದೆ. ಅಂತಹ ಅದ್ವಿತೀಯ ಗುರುಗಳು ವೇದವ್ಯಾಸರು! ಮಹಾಭಾರತದಲ್ಲಿ ಇವರ ಪಾತ್ರವು ಅನೇಕ ಅಪರೂಪದ, ಸ್ವಾರಸ್ಯಮಯ ವಿದ್ಯಮಾನಗಳನ್ನು ಒಳಗೊಂಡಿದೆ. ಕೆಲವು ಪ್ರಸಂಗಗಳಂತೂ ಕೇವಲ ಒಬ್ಬ ಪರಮೋಚ್ಚ ವಿಜ್ಞಾನಿಗೆ ಮಾತ್ರ ಸಾಧ್ಯವಾಗುವಂತಹವು. ಇವರು ಮಹಾಭಾರತದಲ್ಲಿ ಕಾಣಿಸಿಕೊಂಡ ಸ್ವಾರಸ್ಯಕರವಾದ ಪ್ರಸಂಗಗಳನ್ನು ಹೆಕ್ಕಿ ತೆಗೆಯುವುದೇ ಈ ಲೇಖನದ ಮುಖ್ಯ ಉದ್ದೇಶ.

       ವ್ಯಾಸರ ಜನ್ಮವೃತ್ತಾಂತವೇ ಒಂದು ಸ್ವಾರಸ್ಯಕರವಾದ ಸಂಗತಿ. ವ್ಯಾಸರ ತಂದೆ ಮಹಾಮುನಿಗಳಾದ ಪರಾಶರರು ಹಾಗೂ ತಾಯಿ ಮತ್ಸ್ಯಗಂಧಿ. ಆಕೆಯ ದೇಹದಿಂದ ಮೀನಿನ ವಾಸನೆ ಒಸರುತ್ತಿತ್ತು. ಅವಳು ಜನರನ್ನು ದೋಣಿಯಲ್ಲಿ ಯಮುನಾ ನದಿ ದಾಟಿಸುವ ಬೆಸ್ತರ ಕನ್ಯೆಯಾಗಿದ್ದಳು. ಒಮ್ಮೆ ನದಿಯನ್ನು ದಾಟಲು ಬಂದ ಪರಾಶರ ಮುನಿಗಳು ನದಿಯ ಮಧ್ಯದಲ್ಲಿ ಆಕೆಗೆ ಪುತ್ರಸಂತಾನವನ್ನು ನೀಡುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಅವರಿಗೆ ತಿಳಿದಿತ್ತು ತಮ್ಮಿಬ್ಬರಿಗೆ ಹುಟ್ಟುವ ಮಗನು ಒಬ್ಬ ಮಹಾಪುರುಷನಾಗುತ್ತಾನೆ ಎಂದು. ಇದರಿಂದ ವಿಚಲಿತಗೊಂಡ ಮತ್ಸ್ಯಗಂಧಿಯು ಇದು ಅನೈತಿಕವಾದ ಆಸೆ ಎಂದು ಅದಕ್ಕೆ ಒಪ್ಪಲಿಲ್ಲ. ಆದರೆ ಪರಾಶರರು ತಮ್ಮಿಂದ ಆಕೆಗೆ ಒಬ್ಬ ದೈವಿಕ ಮಹಾಪುರುಷನು ಹುಟ್ಟಲಿದ್ದಾನೆ ಎಂದು ತಿಳಿಸಿದರು. ಆಗ ಅವಳು ಅವರಿಗೆ ಮೂರು ಷರತ್ತುಗಳನ್ನು ಹಾಕಿದಳು. ಮೊದಲನೆಯದು ತಾವು ನದಿಯ ಮಧ್ಯೆ ಎಲ್ಲರಿಗೂ ಕಾಣುವಂತೆ ಇದ್ದರೂ ತಮ್ಮಿಬ್ಬರ ಸಮಾಗಮ ಯಾರ ಕಣ್ಣಿಗೂ ಬೀಳಕೂಡದು. ಎರಡನೆಯದು, ಮಗುವಿನ ಜನನದ ನಂತರವೂ ತಾನು ಕನ್ಯೆಯಾಗಿಯೇ ಉಳಿಯಬೇಕು ಮತ್ತು ಮೂರನೆಯದಾಗಿ ತನ್ನ ದೇಹದ ಮೀನಿನ ವಾಸನೆ ಹೋಗಿ ಅದು ಪರಿಮಳಯುಕ್ತವಾಗಬೇಕು ಎಂದು. ಪರಾಶರರು ಈ ಮೂರೂ ಷರತ್ತುಗಳಿಗೆ ಒಪ್ಪಿ ಯಮುನೆಯ ಒಂದು ನಡುಗಡ್ಡೆಯಲ್ಲಿ ಕತ್ತಲಿನ ಹೊದಿಕೆಯನ್ನು ಸೃಷ್ಟಿಸುತ್ತಾರೆ. ಸಮಾಗಮದ ಅನಂತರ ಅವಳ ದೇಹದಿಂದ ಹೂಗಳ ಪರಿಮಳ ಹೊರಸೂಸಲಾರಂಭಿಸುತ್ತದೆ. ಮತ್ಸ್ಯಗಂಧಿಯಾಗಿದ್ದ ಆಕೆ ಈಗ ಯೋಜನಗಂಧಿಯಾದಳು! ತಕ್ಷಣವೇ ಅವಳಿಗೆ ಪುತ್ರಸಂತಾನವಾಯಿತು. ಆ ಮಗು ಕೃಷ್ಣವರ್ಣದ್ದಾಗಿದ್ದು ಯಮುನೆಯ ದ್ವೀಪದಲ್ಲಿ ಹುಟ್ಟಿದ್ದರಿಂದ ಮಗುವಿಗೆ ಕೃಷ್ಣದ್ವೈಪಾಯನ ಎಂದು ನಾಮಕರಣ ಮಾಡಿದಳು.  ಆ ದ್ವೀಪದಲ್ಲಿ ಬಾದರ ಮರಗಳು (ಬೋರೆ ಹಣ್ಣು ಅಥವಾ ಎಲಚಿ ಹಣ್ಣು) ಹೆಚ್ಚಿದ್ದರಿಂದ ಅವರಿಗೆ ʻಬಾದರಾಯಣʼ ಎನ್ನುವ ಹೆಸರು ಕೂಡ ಬಂದಿತು. ದೈವಾಂಶಸಂಭೂತನಾದ ಈ ಹುಡುಗ ಸ್ವಲ್ಪ ದೊಡ್ಡವನಾದಮೇಲೆ, ತನ್ನ ತಾಯಿಗೆ ಅಗತ್ಯವಿದ್ದಾಗ ಕಾಣಿಸಿಕೊಳ್ಳುವೆ ಎಂದು ವಚನವನ್ನಿತ್ತು ತಾಯಿಯನ್ನು ತೊರೆದು ಹೊರಟನು. ಅದಕ್ಕೆ ಮುನ್ನ ತನ್ನ ತಾಯಿಗೆ ಸತ್ಯವತಿ ಎಂದು ನಾಮಕರಣವನ್ನು ಮಾಡಿದನು. ಅನಂತರ ಕೃಷ್ಣದ್ವೈಪಾಯನನು ಜ್ಞಾನವನ್ನು ನೇರವಾಗಿ ಬ್ರಹ್ಮನಿಂದ, ನಾರದರಿಂದ ಹಾಗೂ ಸನತ್ಕುಮಾರ ಸಹೋದರರಿಂದ ಪಡೆಯುತ್ತಾನೆ. ಮಹಾವಿಷ್ಣುವಿನ ಅಂಶದಿಂದ ಹುಟ್ಟಿದವರಿಗೆ ಈ ರೀತಿಯ ಜ್ಞಾನಾರ್ಜನೆ ಅಸಾಧ್ಯವಾದುದೇನಲ್ಲ!

       ಮುಂದೆ ಸತ್ಯವತಿಯು ಶಂತನು ಮಹಾರಾಜನನ್ನು ಮದುವೆಯಾಗಿ, ಅವನಿಂದ ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳನ್ನು ಪಡೆಯುತ್ತಾಳೆ. ಭೀಷ್ಮನು ಮೊದಲು ಪ್ರಾಪ್ತ ವಯಸ್ಕನಾದ ಚಿತ್ರಾಂಗದನಿಗೆ ಪಟ್ಟವನ್ನು ಕಟ್ಟಿ ಸಿಂಹಾಸನದ ಮೇಲೆ ಕೂರಿಸುತ್ತಾನೆ. ಆದರೆ ತನ್ನದೇ ಹೆಸರಿನ ಗಂಧರ್ವನೊಂದಿಗೆ ಹೋರಾಡುವಾಗ ಚಿತ್ರಾಂಗದನು ಸಾವನ್ನಪ್ಪುತ್ತಾನೆ. ಆಗ ಬಾಲಕನಾದ ವಿಚಿತ್ರವೀರ್ಯನಿಗೆ ಪಟ್ಟವನ್ನು ಕಟ್ಟಿ ಭೀಷ್ಮನು ಸಿಂಹಾಸನದ ರಕ್ಷಣೆಗಾಗಿ ನಿಲ್ಲುತ್ತಾನೆ. ವಿಚಿತ್ರವೀರ್ಯನು ಪ್ರಾಪ್ತವಯಸ್ಕನಾದಮೇಲೆ ಭೀಷ್ಮನು ಕಾಶೀರಾಜನ ಇಬ್ಬರು ಕುವರಿಯರಾದ ಅಂಬಿಕೆ, ಅಂಬಾಲಿಕೆಯರನ್ನು ಗೆದ್ದು ತಂದು ವಿಚಿತ್ರವೀರ್ಯನಿಗೆ ವಿವಾಹಮಾಡಿಸುತ್ತಾನೆ. ಆದರೆ ವಂಶವೃಕ್ಷಕ್ಕೆ ತನ್ನ ಕಾಣಿಕೆಯನ್ನು ನೀಡುವ ಮೊದಲೇ ರೋಗಿ ವಿಚಿತ್ರವೀರ್ಯನು ಅಸುನೀಗುತ್ತಾನೆ. ತಮ್ಮ ವಂಶವನ್ನು ಬೆಳೆಸುವುದು ಹೇಗೆ ಎನ್ನುವ ಚಿಂತೆ ಸತ್ಯವತಿಯನ್ನು ಆವರಿಸುತ್ತದೆ. ಅವಳು ತನ್ನ ಮಲಮಗ ಭೀಷ್ಮನನ್ನು ವಿಧವೆಯರಾದ ಅಂಬಿಕೆ ಮತ್ತು ಅಂಬಾಲಿಕೆಯರನ್ನು ವರಿಸುವಂತೆ ಕೋರುತ್ತಾಳೆ. ಆದರೆ ಅವನು ಎಂದಿಗೂ ಮದುವೆಯಾಗುವುದಿಲ್ಲ ಎನ್ನುವ ತನ್ನ ಭೀಷ್ಮಪ್ರತಿಜ್ಞೆಯ ಕಾರಣ ಆಕೆಯ ಸಲಹೆಯನ್ನು ನಿರಾಕರಿಸುತ್ತಾನೆ. ಆಗ ಸತ್ಯವತಿಗೆ ವೇದವ್ಯಾಸ ಎಂದು ಹೆಸರಾಗಿರುವ ತನ್ನ ಮಗ ಕೃಷ್ಣದ್ವೈಪಾಯನರ ನೆನಪು ಬರುತ್ತದೆ. ಆತನು ಸನ್ಯಾಸಿಯಾಗಿರುವುದರಿಂದ ಮದುವೆ ಸಾಧ್ಯವಿರಲಿಲ್ಲ, ಆದರೆ ನಿಯೋಗ ಪದ್ಧತಿಯ ಮೂಲಕ ಅವರು ರಾಣಿಯರಿಗೆ ಪುತ್ರಸಂತಾನವನ್ನು ಕರುಣಿಸಬಹುದು ಎಂದು ಯೋಚಿಸಿ ಭೀಷ್ಮನ ಮೂಲಕ ಅವರನ್ನು ಕರೆಸಿದಳು. ಹಿಂದೆ ಒಬ್ಬ ಹೆಣ್ಣು ಗರ್ಭವತಿಯಾಗುವ ಮುನ್ನವೇ ವಿಧವೆಯಾಗಿದ್ದರೆ ವಂಶವನ್ನು ಮುಂದುವರೆಸಲು ಕಾಮಾಪೇಕ್ಷೆಯಿಲ್ಲದ ವ್ಯಕ್ತಿಯಿಂದ ಆಕೆಯು ಗರ್ಭಧರಿಸಬಹುದಾಗಿತ್ತು. ಆ ಮಗುವಿನ ಮೇಲೆ ಗರ್ಭದಾನವನ್ನು ಮಾಡಿದ ವ್ಯಕ್ತಿಗೆ ಯಾವ ಹಕ್ಕೂ ಇರುತ್ತಿರಲಿಲ್ಲ. ಆ ಮುಗುವನ್ನು ತಾಯಿಯಾದ ಹೆಣ್ಣು ಸೇರಿದ ವಂಶದ ಕುಡಿಯೆಂದೇ ಭಾವಿಸಲಾಗುತ್ತಿತ್ತು. ಈ ಪದ್ಧತಿಯು ʻನಿಯೋಗ ಪದ್ಧತಿʼ ಎನ್ನುವ ಹೆಸರಿನಲ್ಲಿ ಪ್ರಚಲಿತವಿತ್ತು. ಇದಕ್ಕೆ ತಾಯಿಯಾಗಬೇಕಿದ್ದ ಹೆಣ್ಣಿನ ಒಪ್ಪಿಗೆ ಕಡ್ಡಾಯವಾಗಿತ್ತು. ಹಸ್ತಿನಾಪುರದ ಅಂತಃಪುರಕ್ಕೆ ವ್ಯಾಸರ ಆಗಮನವಾಯಿತು. ಅವರು ಸಾಕಷ್ಟು ವರ್ಷಗಳ ಕಾಲ ಕಾಡಿನಲ್ಲಿ ವಾಸವಾಗಿದ್ದರಿಂದ ಜಟೆಗಳು ಬೆಳೆದು ಅವರ ಚಹರೆಯು ಒಬ್ಬ ಕಾಡುಮನುಷ್ಯನಂತೆಯೇ ಇತ್ತು. ನಿಯೋಗಕ್ಕೆ ತನ್ನ ಬಳಿ ಬಂದ ಅವರನ್ನು ಕಂಡ ಅಂಬಿಕೆಯು ಅವರನ್ನು ನೋಡಲಾಗದೆ ಕಣ್ಣು ಮುಚ್ಚಿಕೊಂಡಳು. ಆದ್ದರಿಂದ ಅವಳಿಗೆ ಹುಟ್ಟು ಕುರುಡನಾದ ಧೃತರಾಷ್ಟ್ರನು ಹುಟ್ಟಿದನು. ಅಂಬಾಲಿಕೆಯು ಅವರನ್ನು ನೋಡಿ ಭಯದಿಂದ ಬಿಳಿಚಿಕೊಂಡಳು. ಆದ್ದರಿಂದ ಅವಳಿಗೆ ಬಿಳಿಚಿಕೊಂಡ ಚರ್ಮದ ಮಗ ಪಾಂಡುವು ಹುಟ್ಟಿದನು. ಈ ಮಕ್ಕಳನ್ನು ನೋಡಿ ಚಿಂತಾಕ್ರಾಂತಳಾದ ಸತ್ಯವತಿಯು ಅಂಬಿಕೆಯನ್ನು ಮತ್ತೊಮ್ಮೆ ವ್ಯಾಸರ ಬಳಿ ಸೇರುವಂತೆ ಕಳಿಸಿದಳು. ಹೆದರಿದ್ದ ಅಂಬಿಕೆಯು ಯಾರಿಗೂ ತಿಳಿಯದಂತೆ ತನ್ನ ದಾಸಿ ಪರಿಶ್ರಮಿಯನ್ನು ವ್ಯಾಸರ ಬಳಿಗೆ ಕಳಿಸಿದಳು. ಆ ದಾಸಿಗೆ ಹುಟ್ಟಿದ ಮಗನೇ ವಿದುರ. ಹೀಗೆ ವ್ಯಾಸರು ಹಸ್ತಿನಾಪುರದ ರಾಜವಂಶ ಬೆಳೆಯಲು ನಿಯೋಗದ ಮೂಲಕ ತಮ್ಮ ಯೋಗದಾನವನ್ನು ನೀಡಿದ್ದಾರೆ.

       ಹಲವಾರು ವರ್ಷಗಳನಂತರ ಧೃತರಾಷ್ಟ್ರನು ಬೆಳೆದು ಗಾಂಧಾರಿಯನ್ನು ವರಿಸಿದನು. ಹಾಗೆಯೇ ಪಾಂಡುವು ಕುಂತಿ ಮತ್ತು ಮಾದ್ರಿಯರನ್ನು ವರಿಸಿದನು. ಒಮ್ಮೆ ಕಾರ್ಯನಿಮಿತ್ತ ವೇದವ್ಯಾಸರು ಅರಮನೆಗೆ ಬಂದಾಗ ಗಾಂಧಾರಿಯು ಅವರ ಸೇವೆಯನ್ನು ಶ್ರದ್ಧಾಭಕ್ತಿಗಳಿಂದ ಮಾಡಿದಳು. ಅದನ್ನು ಮೆಚ್ಚಿದ ವ್ಯಾಸರು ಅವಳಿಗೆ ನೂರು ಪುತ್ರರು ಹುಟ್ಟಲಿ ಎಂದು ಹರಸಿದರು. ಕೆಲಕಾಲದಲ್ಲಿ ಗಾಂಧಾರಿ ಗರ್ಭವತಿಯಾದಳು. ಗರ್ಭವತಿಯಾದ ಗಾಂಧಾರಿಗೆ ನವಮಾಸಗಳು ಕಳೆದರೂ ಪ್ರಸವದ ಸೂಚನೆಗಳು ಕಾಣಲಿಲ್ಲ. ಇಷ್ಟರಲ್ಲಿ ಕುಂತಿಯು ಕೂಡ ಯುಧಿಷ್ಠಿರನಿಗೆ ಜನ್ಮನೀಡುತ್ತಾಳೆ. ಅಲ್ಲಿಯವರೆಗೂ ಗಾಂಧಾರಿಗೆ ಪ್ರಸವವಾಗುವುದೇ ಇಲ್ಲ! ಯುಧಿಷ್ಠಿರನ ಜನನದ ವಿಷಯ ತಿಳಿದ ಗಾಂಧಾರಿಯು ತನಗೆ ಹುಟ್ಟುವ ಮಕ್ಕಳಿಗೆ ಸಿಂಹಾಸನದ ಹಕ್ಕು ತಪ್ಪಿಹೋಯಿತಲ್ಲಾ, ತನಗಿನ್ನೂ ಪ್ರಸವವಾಗಲಿಲ್ಲವಲ್ಲಾ ಎನ್ನುವ ದುಃಖದಲ್ಲಿ ಹೊಟ್ಟೆಯನ್ನು ಹಿಂಡಿಕೊಂಡಳು. ಆಗ ಆಕೆ ಒಂದು ಮಾಂಸದ ಮುದ್ದೆಗೆ ಜನ್ಮನೀಡಿದಳು. ಈ ವಿಷಯವನ್ನು ತಿಳಿದ ವ್ಯಾಸರು ಅರಮನೆಗೆ ಆಗಮಿಸಿದರು. ಗಾಂಧಾರಿಯು ಅವರ ಬಳಿ ತನ್ನ ದುಃಖವನ್ನು ತೋಡಿಕೊಳ್ಳುತ್ತಾ ನೀವು ನೀಡಿದ ನೂರು ಪುತ್ರರ ವರವು ಸುಳ್ಳೇ ಎಂದು ಪ್ರಶ್ನಿಸುತ್ತಾಳೆ. ಆಗ ಅಪಾರ ಜ್ಞಾನಿಗಳಾಗಿದ್ದ ವ್ಯಾಸರು ಅವಳನ್ನು ಸಂತೈಸಿ, ಆ ಮಾಂಸದ ಮುದ್ದೆಯನ್ನು ನೂರು ಭಾಗಗಳನ್ನಾಗಿ ಮಾಡಿ, ಅವನ್ನು ನೂರು ಭ್ರೂಣಗಳನ್ನಾಗಿ ಬೆಳೆಸಿ, ನೂರು ಜನ ಪುತ್ರರು ಜನ್ಮತಳೆಯುವಂತೆ ಮಾಡುತ್ತೇನೆ ಎಂದು ಅಭಯವನ್ನು ನೀಡಿದರು. ಆಗ ಗಾಂಧಾರಿಯು ತನಗೆ ಒಂದು ಹೆಣ್ಣು ಮಗುವು ಕೂಡ ಬೇಕೆನ್ನುವ ಮನದಾಸೆಯನ್ನು ತಿಳಿಸಿದಳು. ಅದಕ್ಕೆ ಒಪ್ಪಿದ ವ್ಯಾಸರು ಆ ಮಾಂಸದ ಮುದ್ದೆಯನ್ನು ಮಂತ್ರಿಸಿ ನೀರಿನ ಮಡಿಕೆಯಲ್ಲಿ ಹಾಕಿದಾಗ ಅದು ಒಂದು ಬೆರಳು ಗಾತ್ರದ ೧೦೧ ಭಾಗಗಳಾಗಿ ವಿಭಜನೆಗೊಳ್ಳುತ್ತದೆ. ಒಂದೊಂದು ಭಾಗವನ್ನೂ ತುಪ್ಪ ಹಾಗೂ ಇನ್ನಿತರ ವಸ್ತುಗಳು ತುಂಬಿದ ಮಡಕೆಯಲ್ಲಿ ಇಟ್ಟು, ನೂರೊಂದು ಮಡಕೆಗಳ ಬಾಯಿಗಳನ್ನು ಕಟ್ಟುತ್ತಾರೆ. ಒಂದೊಂದು ಮಡಕೆಯನ್ನೂ ಒಂದೊಂದು ಕೃತಕ ಗರ್ಭಾಶಯದಂತೆ ರೂಪುಗೊಳಿಸಿದರು. ಆ ಮಡಕೆಗಳಲ್ಲಿ ಸ್ವಲ್ಪ ಕಾಲದನಂತರ ಮಕ್ಕಳು ಬೆಳೆದು ಮಡಕೆಯನ್ನು ಒಡೆದುಕೊಂಡು ಬಂದು ಜನ್ಮತಾಳುತ್ತಾರೆ ಎಂದು ತಿಳಿಸಿ ಹೊರಡುತ್ತಾರೆ. ಕೆಲವು ತಿಂಗಳುಗಳಲ್ಲಿ ಆ ಮಡಕೆಗಳಿಂದ ನೂರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನ ಜನನವಾಗುತ್ತದೆ. ಮೊದಲಿಗೆ ಹುಟ್ಟಿದವನೇ ದುರ್ಯೋಧನ ಮತ್ತು ಆ ಹೆಣ್ಣುಮಗುವೇ ದುಶ್ಶಲೆ. ವ್ಯಾಸರ ಈ ಕಾರ್ಯವು ಇಂದಿನ ವಿಜ್ಞಾನಕ್ಕೂ ಒಂದು ದೊಡ್ಡ ಸವಾಲಿನಂತಿದೆ!

       ಕಾಡಿನಲ್ಲಿ ವಾಸಿಸುತ್ತಿದ್ದ ಪಾಂಡುವಿನ ಮರಣವಾಗಿ ಮಾದ್ರಿಯು ಆತನ ಜೊತೆ ಸಹಗಮನ ಮಾಡಿದಳು. ಆಗ ಕುಂತಿಯು ಪಂಚಪಾಂಡವರನ್ನು ಕರೆದುಕೊಂಡು ಹಸ್ತಿನಾಪುರದ ಅರಮನೆಗೆ ಬಂದಳು. ಅಲ್ಲಿ ಧೃತರಾಷ್ಟ್ರನು ಪಾಂಡುವಿಗೆ ಮತ್ತು ಮಾದ್ರಿಗೆ ರಾಜರಿಗೆ ತಕ್ಕ ಕಾರ್ಯಗಳನ್ನು ನಡೆಸುವಂತೆ ವಿದುರನಿಗೆ ಆಜ್ಞಾಪಿಸಿದನು. ಇದರಲ್ಲಿ ಭಾಗವಹಿಸಲು ವ್ಯಾಸರು ಅರಮನೆಗೆ ಬಂದರು. ಕಾರ್ಯಗಳೆಲ್ಲವೂ ಮುಗಿದ ಮೇಲೆ ತಮ್ಮ ತಾಯಿ ಸತ್ಯವತಿಗೆ ಮುಂಬರುವ ದಿನಗಳ ಸೂಚನೆಯನ್ನು ಕೊಟ್ಟರು – “ಸುಖದ ಸಮಯ ಕಳೆದುಹೋಯಿತು. ದಾರುಣ ಸಮಯವು ಮುಂದೆ ಬರಲಿದೆ. ಯೌವ್ವನವನ್ನು ಕಳೆದುಕೊಳ್ಳುತ್ತಿರುವ ಈ ಪೃಥ್ವಿಯಲ್ಲಿ ಮುಂದಿನ ಒಂದೊಂದು ದಿನವೂ ಹಿಂದಿನ ದಿನಕ್ಕಿಂತಲೂ ಪಾಪಪೂರ್ಣವಾಗಿರುತ್ತದೆ. ಬಹುಮಾಯೆಯಿಂದ ಸಂಕೀರ್ಣಗೊಂಡು ವಿಧವಿಧದ ದೋಷಗಳನ್ನೊಡಗೂಡಿ ಧರ್ಮಕ್ರಿಯಾಚಾರಗಳನ್ನು ಕಳೆದುಕೊಂಡ ಘೋರ ಕಾಲವು ಬರುತ್ತದೆ. ಇವೆಲ್ಲವನ್ನೂ ತ್ಯಜಿಸಿ ಹೊರಟುಹೋಗು, ತಪೋವನದಲ್ಲಿ ವಾಸಿಸು. ಈ ಕುಲದ ಘೋರ ಸಂಕ್ಷಯವನ್ನು ನೀನು ನೋಡುವುದು ಸರಿಯಲ್ಲ” ಎಂದರು. ತನ್ನ ಪುತ್ರನ ಮಾತಿಗೆ ಬೆಲೆ ಕೊಟ್ಟು ಸತ್ಯವತಿಯು ತನ್ನ ಸೊಸೆಯರನ್ನು ಜೊತೆಗೆ ಕರೆದುಕೊಂಡು ಕಾಡಿಗೆ ಕರೆದೊಯ್ಯುತ್ತಾಳೆ. ಅಲ್ಲಿ ತಪಸ್ಸಿನಲ್ಲಿ ನಿರತರಾಗಿರುವ ಸಮಯದಲ್ಲಿ ಮೂವರೂ ದೇಹತ್ಯಾಗ ಮಾಡುತ್ತಾರೆ. ಹೀಗೆ ವೇದವ್ಯಾಸರು ತಮ್ಮ ತಾಯಿಯನ್ನು ಮುಂದೆ ಒದಗಬಹುದಾದ ಮಾನಸಿಕ ಸಂಕಷ್ಟದಿಂದ ಪಾರುಮಾಡಿದರು.

       ಮತ್ತೆ ವ್ಯಾಸರು ಮಹಾಭಾರತದ ಕಥೆಯಲ್ಲಿ ಮುನ್ನೆಲೆಗೆ ಬಂದದ್ದು ಪಾಂಡವರು ಏಕಚಕ್ರ ನಗರದಿಂದ ಪಾಂಚಾಲದೆಡೆಗೆ ಪ್ರಯಾಣಿಸುತ್ತಿದ್ದಾಗ. ಆಗ ವ್ಯಾಸರು ಪಾಂಡವರಿಗೆ ಪಾಂಚಾಲಿಯ ಬಗ್ಗೆ ತಿಳಿಸಿ, ನೀವು ಆಕೆಯನ್ನು ವಿವಾಹವಾದರೆ ನಿಮಗೆ ಕಲ್ಯಾಣವಾಗುವುದು ಎಂದು ತಿಳಿಸಿ ಹೊರಟರು. ಅರ್ಜುನನು ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದು ತಂದ ಮೇಲೆ, ಮತ್ತು ಅದನ್ನು ತಿಳಿಯದೆ ಕುಂತಿಯು ನೀವು ತಂದಿರುವುದನ್ನು ಸಮನಾಗಿ ಹಂಚಿಕೊಳ್ಳಿ ಎಂದು ಹೇಳಿ ಧರ್ಮಸಂಕಟವನ್ನು ಹುಟ್ಟುಹಾಕಿದನಂತರ, ಮತ್ತೆ ಅವರು ಕಾಣಿಸಿಕೊಂಡರು. ಈ ವಿಷಯದ ಬಗ್ಗೆ ಪಾಂಚಾಲ ರಾಜನಾದ ದ್ರುಪದನಿಗೂ ಪಾಂಡವಪ್ರಥಮನಾದ ಯುಧಿಷ್ಠಿರನಿಗೂ ಚರ್ಚೆಯಾಗುತ್ತಿರುತ್ತದೆ. ಯುಧಿಷ್ಠಿರನು ತಮ್ಮ ತಾಯಿಯು ನುಡಿದ ವಾಕ್ಯವನ್ನು ನೆರವೇರಿಸಿದರೆ ಅದು ಅಧರ್ಮವಾಗುವುದಿಲ್ಲ, ಆದ್ದರಿಂದ ಆಕೆ ನುಡಿದುದನ್ನು ಪಾಲಿಸಲು ಪಂಚಪಾಂಡವರೂ ದ್ರೌಪದಿಯನ್ನು ವರಿಸುತ್ತೇವೆ ಎನ್ನುವ ಅಭಿಪ್ರಾಯವನ್ನು ಮುಂದಿಡುತ್ತಾನೆ. ಆದರೆ ದ್ರುಪದನಿಗೆ ಈ ಮಾತು ರುಚಿಸುವುದಿಲ್ಲ. ಆತ ಇದು ಅಧರ್ಮ, ಇದಕ್ಕೆ ಹೇಗೆ ಒಪ್ಪಲಿ ಎನ್ನುವ ಮಾತುಗಳನ್ನಾಡುತ್ತಾನೆ. ಆಗ ಈ ಕಗ್ಗಂಟನ್ನು ಬಿಡಿಸಲು ವ್ಯಾಸರು ಅಲ್ಲಿಗೆ ಆಗಮಿಸಿದರು. ತಾವು ದ್ರುಪದನ ಬಳಿ ಪ್ರತ್ಯೇಕವಾಗಿ ಮಾತನಾಡಬೇಕು ಎಂದು ತಿಳಿಸಿ ರಾಜನನ್ನು ಬೇರೊಂದು ಕೋಣೆಗೆ ಕರೆದೊಯ್ದರು. ಅಲ್ಲಿ ವ್ಯಾಸರು ರಾಜನಿಗೆ ದಿವ್ಯಚಕ್ಷುಗಳನ್ನು ನೀಡಿ, ಪಾಂಡವರ ಹಿಂದಿನ ಜನ್ಮದ ವೃತ್ತಾಂತವನ್ನು ಮತ್ತು ದ್ರೌಪದಿಯ ಹಿಂದಿನ ಜನ್ಮದ ವೃತ್ತಾಂತವನ್ನು ನೋಡುವಂತೆ ಮಾಡಿ, ಈಗ ಶಿವನ ಇಚ್ಛೆಯಂತೆ ಆ ಐವರನ್ನು ದ್ರೌಪದಿಯು ವರಿಸಬೇಕಿದೆ ಎಂಬುದನ್ನು ಅರ್ಥಮಾಡಿಸಿದರು. ಆಗ ದ್ರುಪದನು “ವಿಧಿಯ ಬರೆಹ ಈ ರೀತಿ ಇದ್ದರೆ ಅದರ ವಿರುದ್ಧವಾಗಿ ನಾನೇನು ಮಾಡಬಲ್ಲೆ? ನಾನು ಇದಕ್ಕೆ ಒಪ್ಪಿದರೆ ನನಗೆ ಯಾವ ಅಪರಾಧವೂ ತಟ್ಟುವುದಿಲ್ಲ ಎಂದು ಈಗ ತಿಳಿಯಿತು” ಎಂದು ಹೇಳಿ ಪಾಂಚಾಲಿಯು ಐದು ಜನ ಪತಿಯರ ಜೊತೆ ಪಾಣಿಗ್ರಹಣ ಮಾಡಲು ಒಪ್ಪಿಗೆ ನೀಡಿದನು. ಈ ರೀತಿ ವ್ಯಾಸರು ದ್ರುಪದನ ಮನಸ್ಸನ್ನು ಬದಲಾಯಿಸಿ ನಡೆಯಬೇಕಿದ್ದ ಕಾರ್ಯಗಳಿಗೆ ಚಾಲನೆಯನ್ನು ನೀಡಿದರು.

       ಕರ್ಣನ ಜನ್ಮರಹಸ್ಯವನ್ನು ಅರಿತಿದ್ದ ವ್ಯಾಸರು ಮಹಾಭಾರತದ ಯುದ್ಧಕ್ಕೆ ಮುನ್ನ ಆ ರಹಸ್ಯವನ್ನು ಭೀಷ್ಮರಿಗೆ ತಿಳಿಸಿದರು. ಇದರಿಂದ ಮಹಾಭಾರತ ಯುದ್ಧದ ದಿಕ್ಕೇ ಬದಲಾಯಿತು. ಸತ್ಯವನ್ನು ಅರಿತ ಭೀಷ್ಮರು, ಕುಂತಿಯ ಹಿರಿಯ ಮಗನಾದ ಕರ್ಣನು ಅಧರ್ಮದ ಪರ ನಿಂತು ಯುದ್ಧಮಾಡುವುದನ್ನು, ಹಾಗೂ ಸ್ವಂತ ತಮ್ಮಂದಿರ ವಿರುದ್ಧ ಯುದ್ಧಮಾಡುವುದನ್ನು ತಪ್ಪಿಸಬೇಕು ಎಂದು ಯೋಚಿಸಿ, ಮೊದಲಿಗೆ ಕರ್ಣನು ಕೌರವರ ಸೇನಾಧಿಪತಿಯಾಗುವುದನ್ನು ತಪ್ಪಿಸಿದರು. ಅವನನ್ನು ʻಅರ್ಧರಥಿʼ ಎಂದು ಮೂದಲಿಸಿ ಕೋಪ ಬರುವಂತೆ ಮಾಡಿ ಕರ್ಣನು ತಮ್ಮ ಸೇನಾಧಿಪತ್ಯದ ನಾಯಕತ್ವದಲ್ಲಿ ಯುದ್ಧಮಾಡಲು ನಿರಾಕರಿಸುವಂತೆ ಮಾಡಿದರು. ಹೀಗಾಗಿ ಕರ್ಣನು ೧೮ ದಿನಗಳ ಯುದ್ಧದಲ್ಲಿ ಕೇವಲ ಕೊನೆಯ ಎಂಟು ದಿನಗಳಲ್ಲಿ ಮಾತ್ರ ಯುದ್ಧಮಾಡಿದನು ಹಾಗೂ ಕೇವಲ ಕೊನೆಯ ಎರಡು ದಿನಗಳಿಗೆ ಮಾತ್ರ ಕೌರವ ಸೈನ್ಯದ ಸೇನಾಧಿಪತಿಯಾಗಿದ್ದನು. ಆದರೆ ಅಷ್ಟುಹೊತ್ತಿಗೆ ಕೌರವ ಸೇನೆಯು ಸಾಕಷ್ಟು ಮಹಾವೀರರನ್ನು ಕಳೆದುಕೊಂಡು ಸೋಲಿನ ಅಂಚಿನಲ್ಲಿರುತ್ತದೆ. ಹೀಗೆ ವ್ಯಾಸರು ತಿಳಿದೋ ತಿಳಿಯದೆಯೋ ಕರ್ಣನಿಗೆ ಅನ್ಯಾಯ ಮಾಡಿದ್ದು ಸತ್ಯ.

       ಮಹಾಭಾರತದ ಯುದ್ಧವು ಪ್ರಾರಂಭವಾಗುವ ಸಮಯದಲ್ಲಿ ಧೃತರಾಷ್ಟ್ರನು ತನ್ನ ಮಕ್ಕಳು ಈ ಯುದ್ಧದಲ್ಲಿ ಪಾಂಡವರನ್ನು ಎದುರಿಸಿ ಗೆಲ್ಲುವರೇ? ಅವರ ಗತಿ ಏನಾಗಬಹುದು? ಯುದ್ಧಭೂಮಿಯಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಆ ಕೂಡಲೇ ತಿಳಿಯುವುದು ಹೇಗೆ? ಮುಂತಾಗಿ ಚಡಪಡಿಸುತ್ತಿರುತ್ತಾನೆ. ಅವನ ಚಡಪಡಿಕೆಯನ್ನು ಅರಿತ ವ್ಯಾಸರು ಧೃತರಾಷ್ಟ್ರನಿಗೆ ತಾವು ದಿವ್ಯದೃಷ್ಟಿಯನ್ನು ನೀಡುವುದಾಗಿ ತಿಳಿಸಿದರು, ಎಷ್ಟಾದರೂ ಅವರ ಪುತ್ರನಲ್ಲವೇ ಧೃತರಾಷ್ಟ್ರ! ಇದರಿಂದ ಕುರುಡ ಧೃತರಾಷ್ಟ್ರನು ತಾನೇ ತನ್ನ ಕಣ್ಣುಗಳಿಂದಲೇ ರಣರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕುಳಿತಲ್ಲಿಯಿಂದಲೇ ನೋಡಬಹುದಾಗಿತ್ತು. ಆದರೆ ಧೃತರಾಷ್ಟ್ರನಿಗೆ ತನ್ನ ಮಕ್ಕಳ ಅವಸಾನವನ್ನು ತನ್ನ ಕಣ್ಣುಗಳಿಂದಲೇ ನೋಡುವ ಧೈರ್ಯವಿರಲಿಲ್ಲ. ತನ್ನ ಮಕ್ಕಳು ಪಾಂಡವರ ಕೈಯಲ್ಲಿ ಸೋಲುತ್ತಾರೆ ಎಂದು ಅವನಿಗೆ ತಿಳಿದಿತ್ತು. ಆದರೂ ಆಗುಹೋಗುಗಳನ್ನು ತಿಳಿಯುವ ಕಾತುರವಿತ್ತು. ಆದ್ದರಿಂದ ಆತನು ದಿವ್ಯದೃಷ್ಟಿಯನ್ನು ತನ್ನ ಬದಲು ತನ್ನ ಸಾರಥಿಯಾದ ಸಂಜಯನಿಗೆ ನೀಡುವಂತೆ ವ್ಯಾಸರನ್ನು ಪ್ರಾರ್ಥಿಸಿದನು. ಅದಕ್ಕೆ ಒಪ್ಪಿದ ವ್ಯಾಸರು ಸಂಜಯನಿಗೆ ದಿವ್ಯದೃಷ್ಟಿಯ ವರವನ್ನು ನೀಡಿದರು. ಹಾಗಾಗಿ ಸಂಜಯನು ಯುದ್ಧದ ಕ್ಷಣಕ್ಷಣದ ವರದಿಯನ್ನು ಕುಳಿತಲ್ಲಿಂದಲೇ ತನ್ನ ರಾಜನಿಗೆ ನೀಡಲು ಸಾಧ್ಯವಾಗುತ್ತದೆ. ಅದಲ್ಲದೆ ಶ್ರೀಕೃಷ್ಣನ ವಿಶ್ವರೂಪ ದರ್ಶನದ ಭಾಗ್ಯವೂ ದೊರೆಯುತ್ತದೆ. ಈ ಭಾಗ್ಯ ಯುದ್ಧಭೂಮಿಯಲ್ಲಿ ಕೇವಲ ಅರ್ಜುನನಿಗೆ ಮಾತ್ರ ದೊರೆತರೆ ಆ ಭಾಗ್ಯಕ್ಕೆ ಸಂಜಯನು ಕೂಡ ಪಾತ್ರನಾದದ್ದು ಅವನ ಅದೃಷ್ಟವೇ ಸರಿ! ಇದು ವ್ಯಾಸರು ಅವನಿಗೆ ನೀಡಿದ ಕೃಪೆ! ಅದು ವ್ಯಾಸರಿಗಿದ್ದ ಅದ್ಭುತ ಶಕ್ತಿಯ ಒಂದು ನಿದರ್ಶನವು ಮಾತ್ರ!

       ಯುದ್ಧ ಮುಗಿದ ಮೇಲೆ, ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿಯರು ಅರಣ್ಯವಾಸದಲ್ಲಿರುತ್ತಾರೆ. ಆಗ ಅವರನ್ನು ನೋಡಿ ಬರಲು ಯುಧಿಷ್ಠಿರನು ವ್ಯಾಸರನ್ನು ಜೊತೆ ಮಾಡಿಕೊಂಡು ಕಾಡಿಗೆ ಹೋಗಿ ತನ್ನ ತಾಯಿ, ದೊಡ್ಡಪ್ಪ, ದೊಡ್ಡಮ್ಮ ಇವರೆಲ್ಲರ ಕುಶಲವನ್ನು ವಿಚಾರಿಸುತ್ತಾನೆ. ಆದರೆ ಧೃತರಾಷ್ಟ್ರನು ಇನ್ನೂ ಪುತ್ರವಿಯೋಗದ ದುಃಖದಿಂದ ಬಳಲುತ್ತಿರುತ್ತಾನೆ. ಅವನು ವ್ಯಾಸರನ್ನು ಕುರಿತು “ಹೇಗಾದರೂ ಮಾಡಿ ನಾನು ನನ್ನ ಎಲ್ಲ ಮಕ್ಕಳನ್ನೂ, ಯುದ್ಧದಲ್ಲಿ ಮರಣಿಸಿದ ಆತ್ಮೀಯರನ್ನೂ ಒಮ್ಮೆಯಾದರೂ ನೋಡುವ ಅದೃಷ್ಟ ಕಲ್ಪಿಸಿ” ಎಂದು ಕೇಳಿಕೊಂಡನು. ಆಗ ವ್ಯಾಸರು ಅದಕ್ಕೆ ಸಮ್ಮತಿಸಿ, ಎಲ್ಲರನ್ನೂ ಗಂಗೆಯ ತಟಕ್ಕೆ ಬರುವಂತೆ ತಿಳಿಸಿದರು. ಎಲ್ಲರೂ ಬಂದು ಸೇರಿದಮೇಲೆ ವ್ಯಾಸರು ಗಂಗೆಯ ಜಲದಲ್ಲಿ ಪ್ರವೇಶಿಸಿ, ಭೀಷ್ಮರಾದಿಯಾಗಿ ಯುದ್ಧದಲ್ಲಿ ಮರಣಿಸಿದ ಎಲ್ಲ ವೀರರನ್ನೂ ಪ್ರಕಟಗೊಳ್ಳುವಂತೆ ಆಹ್ವಾನಿಸಿದರು. ಕೂಡಲೇ ನೀರಿನಲ್ಲಿ ದೊಡ್ಡ ಕಲರವವುಂಟಾಗುತ್ತದೆ. ಎರಡೂ ಕಡೆಯ ವೀರರು ತಮ್ಮ ಯುದ್ಧ ಪೋಷಾಕು, ರಥ, ಪತಾಕೆ, ಶಸ್ತ್ರಗಳೊಂದಿಗೆ ನೀರಿನಲ್ಲಿ ಪ್ರಕಟಗೊಂಡರು. ಯಾರ ಮುಖದಲ್ಲೂ ರಾಗದ್ವೇಷದ ಭಾವನೆ ಇರುವುದಿಲ್ಲ. ಇದನ್ನು ನೋಡಲು ವ್ಯಾಸರು ಧೃತರಾಷ್ಟ್ರನಿಗೆ ದಿವ್ಯದೃಷ್ಟಿಯನ್ನು ನೀಡಿದರು. ಧೃತರಾಷ್ಟ್ರನು ತನ್ನ ನೂರು ಪುತ್ರರನ್ನು ನೋಡಿ ಆನಂದಿಸುವಾಗ ಅವನ ಕಣ್ಣಂಚಿನಲ್ಲಿ ನೀರು ಒಸರುತ್ತದೆ. ಭೀಷ್ಮರನ್ನು ಮತ್ತು ದ್ರೋಣರನ್ನು ನೋಡಿ ವಂದನೆ ಸಲ್ಲಿಸುತ್ತಾನೆ. ಹೀಗೆ ತನ್ನ ಮನದ ಆಸೆಯನ್ನು ತೀರಿಸಿಕೊಂಡನು. ಕರ್ಣನನ್ನು ನೋಡಿದ ಕುಂತಿಯ ಕರುಳು ಕಿವುಚಿದಂತಾಗುತ್ತದೆ. ಯೌವನದ ಒಂದು ತಪ್ಪಿನಿಂದ ಆಕೆಯು ಜೀವನವಿಡೀ ನೋವಿನ ಬೇಗೆಯನ್ನು ಅನುಭವಿಸಬೇಕಾಗುತ್ತದೆ. ಕೆಲವು ನಿಮಿಷಗಳ ಅನಂತರ ಎಲ್ಲ ಯೋಧರೂ ಮಾಯವಾಗಿಬಿಡುತ್ತಾರೆ, ಧೃತರಾಷ್ಟ್ರನ ದಿವ್ಯದೃಷ್ಟಿ ಮರೆಯಾಗುತ್ತದೆ. ಧೃತರಾಷ್ಟ್ರನು ತನ್ನ ಕೋರಿಕೆಯನ್ನು ನೆರವೇರಿಸಿದಕ್ಕಾಗಿ ವ್ಯಾಸರ ಗುಣಗಾನ ಮಾಡಿ ಅವರಿಗೆ ನಮಸ್ಕರಿಸಿದನು.

       ಹೀಗೆ ವೇದವ್ಯಾಸರು ಮಹಾಭಾರತದಲ್ಲಿ ಒಬ್ಬ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ಜ್ಞಾನಿಯು ಮಾಡಬಹುದಾದ ಕೆಲಸಗಳನ್ನು ಮಾಡಿದ್ದಾರೆ. ಆಗಾಗ ಯುಧಿಷ್ಠಿರನಿಗೆ ಹಾಗೂ ಅರ್ಜುನನಿಗೆ ಧರ್ಮಬೋಧನೆಯನ್ನು ಮಾಡಿ ದಾರಿತೋರಿಸಿದ್ದಾರೆ. ಆದರೆ ಅವರು ಮಾಡಿದ ಯಾವ ಕಾರ್ಯವೂ ಪೂರ್ವಾಗ್ರಹ ಪೀಡಿತವಾಗಿರಲಿಲ್ಲ. ಅವರು ಯಾರ ಪಕ್ಷಪಾತಿಯೂ ಆಗಿರಲಿಲ್ಲ. ಒಬ್ಬ ನಿಜವಾದ ಯೋಗಿ ಅಥವಾ ಸನ್ಯಾಸಿಯು ನಡೆದುಕೊಳ್ಳಬೇಕಾದ ರೀತಿಯಲ್ಲೇ ನಡೆದುಕೊಂಡರು. ಚಿರಂಜೀವಿಯಾದ ಇವರು ಕಲ್ಕಿಯ ಕರೆಗೆ ಪ್ರಕಟಗೊಳ್ಳುವ ಸಮಯದಲ್ಲಿ ನಾವು ಇರದಿರಬಹುದು ಆದರೆ ಅವರ ಕರ್ತವ್ಯದ ಕರೆಗಾಗಿ ಅವರು ಕಾಯುತ್ತಿದ್ದಾರೆ ಎನ್ನುವುದು ಎಲ್ಲ ಆಸ್ತಿಕರ ನಂಬಿಕೆ.

       ವ್ಯಾಸರು ೧೮ ಪುರಾಣಗಳನ್ನು ಸಂಪಾದಿಸಿದ್ದಾರೆ. ಈ ೧೮ ಪುರಾಣಗಳಲ್ಲಿ ಆರು ಪುರಾಣಗಳು ಬ್ರಹ್ಮತತ್ತ್ವದ ಬಗ್ಗೆ, ಆರು ಪುರಾಣಗಳು ವಿಷ್ಣುತತ್ತ್ವದ ಬಗ್ಗೆ ಮತ್ತು ಉಳಿದ ಆರು ಪುರಾಣಗಳು ಶಿವತತ್ತ್ವದ ಬಗ್ಗೆ ತಿಳಿಸಿಕೊಡುತ್ತವೆ. ಎಲ್ಲ ಪುರಾಣಗಳ ಒಟ್ಟು ಶ್ಲೋಕಗಳ ಸಂಖ್ಯೆ ನಾಲ್ಕು ಲಕ್ಷ! ಒಟ್ಟು ೮೧,೧೦೦ ಶ್ಲೋಕಗಳನ್ನೊಳಗೊಂಡ ಸ್ಕಾಂದಪುರಾಣವು ಅತಿದೊಡ್ಡ ಪುರಾಣವೆನಿಸಿದೆ. ವ್ಯಾಸರು ೧೮ ಪುರಾಣಗಳ ಸಂಪಾದಕರಾದರೂ ಅವರಿಗೆ ಖ್ಯಾತಿ ತಂದುಕೊಟ್ಟದ್ದು ಮಹಾಪುರಾಣವೆನಿಸಿದ ʻಭಾಗವತʼ ಪುರಾಣದ ರಚನೆ. ಭಾಗವತದ ೧೨ ಸ್ಕಂಧಗಳಲ್ಲಿ ಒಟ್ಟು ೧೮,೦೦೦ ಶ್ಲೋಕಗಳಿವೆ.  ಈ ವಿಶ್ವದ ಸೃಷ್ಟಿಯಿಂದ ಪ್ರಾರಂಭವಾಗುವ ಈ ಪುರಾಣದಲ್ಲಿ ಪರಮಾತ್ಮನ ಎಲ್ಲ ಅವತಾರಗಳ ಬಗ್ಗೆ ವಿವರಣೆ ನೀಡಲಾಗಿದೆ. ಅಂದರೆ ಕೃತಯುಗ, ತ್ರೇತಾಯುಗ, ದ್ವಾಪರಯುಗಳಲ್ಲಿ ನಡೆದ ಸಂಗತಿಗಳ ಬಗ್ಗೆ ಹಾಗೂ ಕಲಿಯುಗದಲ್ಲಿ ನಡೆಯಬಹುದಾದ ಸಂಗತಿಗಳ ಬಗ್ಗೆ ಹಾಗೂ ಎಲ್ಲ ಯುಗಗಳಲ್ಲಿ ಬಂದುಹೋದ ಮಹಾಪುರುಷರ ಬಗ್ಗೆ ತಿಳಿಸಲಾಗಿದೆ. ಇವರೊಬ್ಬ ತ್ರಿಕಾಲಜ್ಞಾನಿಯಾದ್ದರಿಂದಲೇ ಇವರಿಗೆ ಹಿಂದೆ ನಡೆದಿರುವ ಹಾಗೂ ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ಕರಾರುವಾಕ್ಕಾಗಿ ಬರೆಯಲು ಸಾಧ್ಯವಾಗಿದೆ. ಮಹಾಭಾರತದ ರಚನೆಯ ಸಂದರ್ಭದಲ್ಲಿ ಸ್ವತಃ ಗಣೇಶನನ್ನೇ ತಮ್ಮ ಲಿಪಿಕಾರನಾಗಿ ನಿಯೋಜಿಸಿಕೊಂಡಿದ್ದವರು ವೇದವ್ಯಾಸರು! ಇಂತಹ ಮಹಾಮಹಿಮರನ್ನು ನೆನಪಿಸಿಕೊಳ್ಳುವುದೇ ನಮ್ಮ ಸೌಭಾಗ್ಯ!

       ಮಹಾಭಾರತದ ಕಥೆಯಲ್ಲಿ ವೇದವ್ಯಾಸರದು ಮಹತ್ವದ ಪಾತ್ರ. ಆದರೆ ಮಹಾಭಾರತದ ಮುಖ್ಯ ಕಥೆಯಲ್ಲಿ ಗೋಚರಿಸದ ಕೆಲವು ಅದ್ಭುತ ಘಟನೆಗಳು ಇವರ ಜೀವನದಲ್ಲಿ ನಡೆದಿವೆ. ಅವುಗಳಲ್ಲಿ ಮುಖ್ಯವಾದದ್ದು ಇವರ ಪುತ್ರ ಶುಕಮುನಿಯ ಜನನ. ವೇದವ್ಯಾಸರು ಹುಟ್ಟು ಸನ್ಯಾಸಿ, ಇವರಿಗೆ ಪುತ್ರಜನನವೆಂದರೇನು ಎನ್ನುವ ಸಂದೇಹ ಮೂಡಬಹುದು. ಆದರೆ ಇವರು ಯಾವ ಹೆಣ್ಣಿನ ಸಂಪರ್ಕವನ್ನೂ ಮಾಡದೆಯೇ ಒಬ್ಬ ಪುತ್ರನನ್ನು ಪಡೆದರು. ಪುರಾಣಗಳಲ್ಲಿ ಬರುವ ಅನೇಕ ಪಾತ್ರಗಳಂತೆ ಇವರ ಪುತ್ರ ಶುಕಮುನಿಯದು ಸಹ ʻಅಯೋನಿ ಜನ್ಮʼ!

       ಹಿಂದೆ ವ್ಯಾಸರು ಸರಸ್ವತಿ ನದಿಯ ದಂಡೆಯ ಮೇಲೆ ಒಂದು ಆಶ್ರಮವನ್ನು ಕಟ್ಟಿಕೊಂಡು ತಪೋವಿಧಿಗಳಲ್ಲಿ ತೊಡಗಿದ್ದರು. ಆಶ್ರಮದ ಹತ್ತಿರವಿರುವ ಒಂದು ಮರದ ಮೇಲೆ ಎರಡು ಗುಬ್ಬಚ್ಚಿಗಳು ತಮ್ಮ ನವಜಾತ ಮರಿಗಳ ಪಾಲನೆ, ಪೋಷಣೆಯಲ್ಲಿ ತೊಡಗಿರುವುದನ್ನು ಕಂಡರು. ಅಲ್ಲಿ ಆ ಮರಿಗಳಿಗೆ ಸಿಗುತ್ತಿದ್ದ ಪ್ರೀತಿ, ಲಾಲನೆ, ಪೋಷಣೆ ಮತ್ತು ಮರಿಗಳಿಗೆ ಹಾರಲು ಕಲಿಸುತ್ತಿದ್ದ ತಂದೆಯ ಶ್ರಮ ಎಲ್ಲವನ್ನೂ ಗಮನಿಸುತ್ತಿದ್ದ ಅವರಿಗೆ ಪಕ್ಷಿಗಳೇ ತಮ್ಮ ಸಂತಾನದ ಬಗ್ಗೆ ಇಷ್ಟು ಕಾಳಜಿ, ಪ್ರೀತಿ ತೋರಿಸುವಾಗ ಇನ್ನು ಮಾನವರು ತಮ್ಮದೇ ಆದ ಸಂಸಾರವನ್ನು ಕಟ್ಟಿಕೊಳ್ಳಲು ತೋರುವ ಉತ್ಸುಕತೆಯು ಅತಿಶಯೋಕ್ತಿಯೇನಲ್ಲ ಎಂದೆನಿಸಿತು. ಆಗ ಅವರು ತಮಗೇ ಅರಿವಿಲ್ಲದಂತೆ ಮನದಲ್ಲಿ “ಅಪುತ್ರಸ್ಯ ಗತಿರ್ನಾಸ್ತಿ ಸ್ವರ್ಗೋ ನೈವಚ ನೈವಚ...” ಎನ್ನುವ ಶ್ಲೋಕವನ್ನು ಗುನುಗಲಾರಂಭಿಸಿದರು. ಅದರ ಅರ್ಥ ಪುತ್ರರಿಲ್ಲದವರಿಗೆ ಸ್ವರ್ಗದ ಪ್ರಾಪ್ತಿ ಇಲ್ಲ ಎಂದು. ಮಕ್ಕಳಿಲ್ಲದವರು ಕೂಡ ಅವರ ಸಕರ್ಮಗಳಿಂದ ಸ್ವರ್ಗವನ್ನು ಸೇರಬಹುದು ಎನ್ನುವ ಇತರ ಶ್ಲೋಕಗಳೂ ಇವೆ. ಆದರೆ ವ್ಯಾಸರಿಗೆ ಆ ಸಮಯದಲ್ಲಿ ಮೊದಲ ಶ್ಲೋಕವು ಮಾತ್ರ ನೆನಪಾಗಿ ತಮಗೂ ಒಬ್ಬ ಪುತ್ರನಿರಬೇಕು ಎನ್ನುವ ನಿರ್ಧಾರಕ್ಕೆ ಬಂದರು. ಪುತ್ರನನ್ನು ಪಡೆಯಲು ಮೇರು ಪರ್ವತದ ಮೇಲೆ ಕುಳಿತು ತಪಸ್ಸನಾರಂಭಿಸಿದರು. ಸುಮಾರು ನೂರು ವರ್ಷಗಳ ತಪಸ್ಸಿನ ನಂತರ ಶಿವನು ಅವರಿಗೆ ಪ್ರತ್ಯಕ್ಷನಾಗಿ “ನಿನಗೆ ಪಂಚಭೂತಗಳ ಶಕ್ತಿಗೆ ಸಮನಾದ ಒಬ್ಬ ಮಹಾತ್ಮನೆನ್ನಿಸಿಕೊಳ್ಳುವ ಮಗ ಹುಟ್ಟುತ್ತಾನೆ” ಎನ್ನುವ ವರವನ್ನು ನೀಡಿದನು. ವ್ಯಾಸರು ತಮ್ಮ ಆಶ್ರಮಕ್ಕೆ ಹಿಂದಿರುಗಿ ಪುತ್ರಪ್ರಾಪ್ತಿಗಾಗಿ ಪುತ್ರಕಾಮೇಷ್ಠಿ ಯಾಗದ ಸಿದ್ಧತೆಗೆ ತೊಡಗಿದರು. ಯಜ್ಞಕುಂಡದಲ್ಲಿ ಬೆಂಕಿ ಹಚ್ಚಲು ಎರಡು ಅರಣಿ ತುಂಡುಗಳನ್ನು ಉಜ್ಜಲಾರಂಭಿಸಿದರು. ಅದೇ ಸಮಯಕ್ಕೆ ಅತಿ ಸೌಂದರ್ಯವತಿಯಾದ ಘೃತಾಚಿ ಎನ್ನುವ ದೇವಲೋಕದ ಅಪ್ಸರೆ ಅವರ ಕಣ್ಣಿಗೆ ಬಿದ್ದಳು. ಅವಳ ಸೌಂದರ್ಯವನ್ನು ನೋಡಿದ ವ್ಯಾಸರ ಮನಸ್ಸು ವಿಚಲಿತವಾಯಿತು. ಅವರ ಸ್ಥಿತಿಯನ್ನು ನೋಡಿದ ಅಪ್ಸರೆಯು ನಾನು ಮುನಿಗಳಿಗೆ ಅಪಚಾರವೆಸಗಬಾರದು ಎಂದು ತಕ್ಷಣ ಒಂದು ಗಿಳಿಯ ರೂಪವನ್ನು ಪಡೆದಳು. ಆದರೆ ಅಷ್ಟರಲ್ಲಿ ಅವರಿಗರಿವಿಲ್ಲದಂತೆಯೇ ಅವರ ವೀರ್ಯ ಹಾರಿ ಉಜ್ಜುತ್ತಿದ್ದ ಅರಣಿಗಳ ಮೇಲೆ ಬಿದ್ದಿತು.  ಇದು ಅವರ ಗಮನಕ್ಕೆ ಬರದೆ ಅರಣಿಗಳನ್ನು ಹಾಗೆಯೇ ಉಜ್ಜುತ್ತಿರುವಾಗ ಅಗ್ನಿಯ ಬದಲು ಅಗ್ನಿಯಷ್ಟೇ ತೇಜೋಮಯವಾದ ಒಂದು ಮಗುವು ಹುಟ್ಟಿತು. ಗಿಳಿಯಾದ ಅಪ್ಸರೆಯ ಕಾರಣದಿಂದ ಹುಟ್ಟಿದ ಮಗುವಿಗೆ ವ್ಯಾಸರು ʻಶುಕʼ ಎಂದು ನಾಮಕರಣ ಮಾಡಿದರು. ಮುಂದೆ ಈ ಮುಗುವು ಸರ್ವವಿದ್ಯಾಪಾರಂಗತನಾಗಿ ಶುಕಮುನಿ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಹೊಂದುತ್ತದೆ. ತಮ್ಮ ಮಗನಿಗೆ ಸಾಕಷ್ಟು ವಿದ್ಯೆಯನ್ನು ಧಾರೆ ಎರೆಯುತ್ತಾರೆ ವ್ಯಾಸರು. ಇವರ ಜೊತೆಗೆ ನಾರದರು ಮತ್ತು ದೇವಗುರು ಬೃಹಸ್ಪತಿಗಳಿಂದ ಕೂಡ ಜ್ಞಾನಾರ್ಜನೆಯನ್ನು ಪಡೆದು ತಂದೆಯಂತೆಯೇ ಪ್ರಖ್ಯಾತನಾದನು. ವ್ಯಾಸರಿಗೆ ಶುಕನ ಮೇಲೆ ಅಪಾರವಾದ ವ್ಯಾಮೋಹ, ಅವನು ತಮ್ಮನ್ನು ಅಗಲಬಾರದು ಎಂದು ಹಪಹಪಿಸುತ್ತಿದ್ದರು. ಅವನು ಹೋದ ಕಡೆಯೆಲ್ಲ ʻಶುಕʼ ʻಶುಕʼ ಎಂದು ಕೂಗುತ್ತ ಅವನನ್ನು ಹಿಂಬಾಲಿಸುತ್ತಿದ್ದರು. ಒಮ್ಮೆ ಶುಕಮುನಿಗಳು ಹೋಗುತ್ತಿದ್ದ ದಾರಿಯ ಪಕ್ಕದ ಸರೋವರದಲ್ಲಿ ಕೆಲವು ಅಪ್ಸರೆಯರು ನಗ್ನರಾಗಿ ಸ್ನಾನ ಮಾಡುತ್ತಿದ್ದರು. ಶುಕಮುನಿಗಳು ತಮ್ಮ ಮುಂದೆಯೇ ನಡೆದು ಹೋಗುವುದನ್ನು ನೋಡಿದರೂ ಅವರು ತಮ್ಮ ಸ್ನಾನದಲ್ಲಿ ಮಗ್ನರಾಗಿರುತ್ತಾರೆ. ಆದರೆ ಅವರ ಹಿಂದೆ ಬಂದ ವ್ಯಾಸರನ್ನು ನೋಡಿದ ಕೂಡಲೇ ಅವರು ವಸ್ತ್ರಗಳಿಂದ ತಮ್ಮ ಮೈಯನ್ನು ಮುಚ್ಚಿಕೊಳ್ಳುತ್ತಾರೆ. ಆಗ ವ್ಯಾಸರಿಗೆ ಯಾವುದೇ ಪ್ರಲೋಭನೆಗೆ ಒಳಗಾಗದ ವೈರಾಗಿ ತನ್ನ ಮಗ, ಆದರೆ ತಾನು ಹಾಗಲ್ಲ ಎನ್ನುವ ಅರಿವಾಯಿತು. ಇದನ್ನು ಗಮನಿಸಿದ ಶುಕಮುನಿಗಳು ತಂದೆಗೆ ಸರಿಯಾದ ದಾರಿಯನ್ನು ತೋರಿಸಿದರು. ತಮ್ಮ ತಂದೆಯು ವೈರಾಗ್ಯದ ಕಡೆ ಮುಖಮಾಡುವಂತೆ ಮಾಡಿದರು.

       ಇಂತಹ ಮಹಿಮಾನ್ವಿತರನ್ನು ಎಲ್ಲರೂ ತಪ್ಪದೆ ಸದಾ ಸ್ಮರಿಸಬೇಕು. ಗುರುಪೂರ್ಣಿಮೆಯ ದಿನ ಅವರವರ ಗುರುಗಳನ್ನು ಸ್ಮರಿಸುವ ಮೊದಲು ವೇದವ್ಯಾಸರನ್ನು ಸ್ಮರಿಸಿ ಮನುಕುಲಕ್ಕೆ ಅವರು ನೀಡಿದ ಅಪಾರವಾದ ಜ್ಞಾನಕ್ಕಾಗಿ ಅವರಿಗೆ ವಂದಿಸಬೇಕು.

(ಈಲೇಖನವನ್ನು ಎಸ್.‌ ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)