ನಮ್ಮ ಸಮಾಜದಲ್ಲಿ ಸುಮಾರು 81 ವರ್ಷ ದಾಟಿದ ಹಿರಿಯರು ʻಸಹಸ್ರ ಚಂದ್ರದರ್ಶನʼ ಎನ್ನುವ ಸಂದರ್ಭವನ್ನು ಆಚರಿಸಿಕೊಳ್ಳುವುದನ್ನು ಕಂಡಿದ್ದೇವೆ ಅಥವಾ ಕೇಳಿದ್ದೇವೆ. ಸಹಸ್ರ ಚಂದ್ರದರ್ಶನ ಎಂದರೆ ಸಾವಿರ ಹುಣ್ಣಿಮೆಗಳನ್ನು ಕಾಣುವುದು ಎನ್ನುವ ಸ್ಥೂಲವಾದ ಅರ್ಥವಿದೆ. ಆದರೆ ಸಹಸ್ರ ಹುಣ್ಣಿಮೆಗಳನ್ನು ನೋಡಿದರೆ ನಮಗೆ ಸಿಗುವ ಲಾಭವೇನು ಅಥವಾ ಈ ಆಚರಣೆಯ ಹಿಂದಿನ ಉದ್ದೇಶವೇನು ಎಂದು ಬಹುಶಃ ಬಹಳಷ್ಟು ಜನರಿಗೆ ತಿಳಿದಿಲ್ಲ. ಹಾಗೆಯೇ ಯಾವ ವಯಸ್ಸಿನಲ್ಲಿ ಸಹಸ್ರ ಚಂದ್ರದರ್ಶನವು ಪೂರ್ಣವಾಗುತ್ತದೆ ಎನ್ನುವ ಲೆಕ್ಕಾಚಾರದ ಬಗ್ಗೆಯೂ ಸ್ವಲ್ಪ ಗೊಂದಲಗಳಿವೆ. ಈ ಎರಡು ವಿಷಯಗಳಲ್ಲಿರುವ ಗೊಂದಲವನ್ನು ನಿವಾರಿಸುವುದೇ ಈ ಲೇಖನದ ಮೂಲ ಉದ್ದೇಶ.

ಸದ್ಗುರು ಜಗ್ಗಿ ವಾಸುದೇವ್‌ ಅವರು ತಮ್ಮ ಒಂದು ವಿಡಿಯೋದಲ್ಲಿ ಸಹಸ್ರ ಚಂದ್ರದರ್ಶನದ ಮಹತ್ವವನ್ನು ವಿವರಿಸಿದ್ದಾರೆ. ಅವರ ಪ್ರಕಾರ ನಮ್ಮ ದೇಹವು ಈ ಭೂಮಿಯ ಒಂದು ತುಂಡು. ಈ ಭೂಮಿಯು ಸೂರ್ಯ ಮತ್ತು ಚಂದ್ರರಿಂದ ಅತ್ಯಧಿಕವಾಗಿ ಪ್ರಭಾವಿತಗೊಂಡಿದೆ. ಹಾಗಾಗಿ ನಮ್ಮ ದೇಹವು ಕೂಡ ಸೂರ್ಯ ಮತ್ತು ಚಂದ್ರರಿಂದ ಅಷ್ಟೇ ಪ್ರಭಾವಿತಗೊಳ್ಳುತ್ತದೆ. ನಾವು ಗಡಿಯಾರವನ್ನು ನೋಡಿ ಸಮಯದ ಅರಿವನ್ನು ಪಡೆದರೂ ನಮ್ಮ ದೇಹಕ್ಕೆ ಸೂರ್ಯ ಮತ್ತು ಚಂದ್ರರ ಚಲನೆಯೇ ಗಡಿಯಾರ! ಈ ಚಲನೆಗನುಸಾರವಾಗಿಯೇ ನಮ್ಮ ದೇಹವು ಸಮಯದ ಅರಿವನ್ನು ಪಡೆಯುತ್ತದೆ, ಅದಕ್ಕನುಸಾರವಾಗಿ ಬೆಳೆಯುತ್ತದೆ. ನಾವು ಸೂರ್ಯ ಚಂದ್ರರ ಪೂರ್ಣ ಪ್ರಭಾವದಲ್ಲಿದ್ದರೂ ಕೂಡ, ಸಹಸ್ರ ಚಂದ್ರದರ್ಶನವನ್ನು ಮುಗಿಸಿದಾಗ ಸೂರ್ಯ ಚಂದ್ರರ ಬಂಧನಗಳು ನಮ್ಮ ಮೇಲೆ ಸಡಿಲಗೊಳ್ಳುತ್ತವೆ, ನಾವು ಈ ನಮ್ಮ ಕರ್ಮ ಬಂಧನದಿಂದ ಮುಕ್ತರಾಗುತ್ತೇವೆ ಮತ್ತು ಕೆಲವರ ಸ್ವಭಾವದಲ್ಲೂ ಬದಲಾವಣೆಗಳು ಉಂಟಾಗುತ್ತವೆ ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್‌ ಅವರು. ಹೀಗಾಗುವುದರಿಂದ, ಇಂತಹವರು ತೀರಿಕೊಂಡ ನಂತರ ಮತ್ತೆ ಜನ್ಮ ಪಡೆಯುವ ಸಾಧ್ಯತೆಗಳು ಬಹಳ ಕಡಿಮೆ. ಯಾವುದೇ ಗರ್ಭವು ಇಂತಹ ಆತ್ಮವನ್ನು ಸುಲಭವಾಗಿ ಸ್ವೀಕರಿಸಲಾರದು. ಗರ್ಭವು ಹೆಚ್ಚಾಗಿ ಚಂದ್ರನ ಪ್ರಭಾವದಲ್ಲಿರುತ್ತದೆ, ಚಂದ್ರನ ಪ್ರಭಾವದಿಂದ ಮುಕ್ತವಾದ ಆತ್ಮವನ್ನು ಅದು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು. ಇದನ್ನು ಆ ಆತ್ಮಕ್ಕೆ ದೊರೆತ ಮುಕ್ತಿ ಅಥವಾ ಪರಮಾತ್ಮನಲ್ಲಿ ಒಂದಾಗುವುದು ಎಂದು ಭಾವಿಸಲಾಗದಿದ್ದರೂ ಪುನರ್ಜನ್ಮವಿಲ್ಲ ಎಂದು ತಿಳಿಯಬಹುದು. ಈ ಕಾರಣಕ್ಕಾಗಿಯೇ ಈ ಒಂದು ಮೈಲಿಗಲ್ಲನ್ನು ಒಂದು ಸಂತೋಷದ ಸಮಾರಂಭವಾಗಿ ಆಚರಿಸುವುದು ರೂಢಿಯಲ್ಲಿದೆ. ʼದರ್ಶನʼ ಎಂದರೆ ಪ್ರತಿಯೊಂದು ಹುಣ್ಣಿಮೆಯನ್ನೂ ನಾವು ಕಣ್ಣಿನಿಂದ ನೋಡಿರಬೇಕಾದ ಅಗತ್ಯವಿಲ್ಲ. ಆ ಹುಣ್ಣಿಮೆಯ ದಿನವನ್ನು ನಮ್ಮ ದೇಹವು ಅನುಭವಿಸಿದ್ದರೆ ಸಾಕು.

         ಇನ್ನು ಸಹಸ್ರ ಚಂದ್ರದರ್ಶನದ ಲೆಕ್ಕಾಚಾರದ ಕಡೆ ಗಮನ ಕೊಡೋಣ. ಸಹಸ್ರ ಚಂದ್ರದರ್ಶನ ಎಂದರೆ 1008 ಹುಣ್ಣಿಮೆಗಳು ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್‌ ಅವರು. ನಮ್ಮ ಹಿರಿಯರು ಹಿಂದಿನಿಂದಲೂ 1008 ಮತ್ತು 108 ಈ ಸಂಖ್ಯೆಗಳಿಗೆ ಬಹಳ ಮಹತ್ವವನ್ನು ಕೊಟ್ಟಿದ್ದಾರೆ. ಇದಕ್ಕೂ ಸೂರ್ಯ ಮತ್ತು ಚಂದ್ರರೇ ಕಾರಣ! ಈ ಕೆಳಗಿನ ಸಮೀಕರಣಗಳನ್ನು ಗಮನಿಸಿ, ಇದರಲ್ಲಿ 108 ಕಾಣಿಸಿಕೊಳ್ಳುವುದನ್ನು ನೋಡಿ:

ಭೂಮಿ ಮತ್ತು ಚಂದ್ರನ ನಡುವಿನ ದೂರ = 108 X ಚಂದ್ರನ ವ್ಯಾಸ

ಭೂಮಿ ಮತ್ತು ಸೂರ್ಯನ ನಡುವಿನ ದೂರ = 108 X ಸೂರ್ಯನ ವ್ಯಾಸ

ಸೂರ್ಯನ ವ್ಯಾಸ = 108 X ಭೂಮಿಯ ವ್ಯಾಸ

ಭೂಮಿ, ಸೂರ್ಯ, ಚಂದ್ರರ ಗಾತ್ರ ಮತ್ತು ದೂರಗಳಲ್ಲಿ ಇಂತಹ ನಿಖರವಾದ ಅನುಪಾತವಿರುವುದರಿಂದಲೇ ನಾವು ಸಂಪೂರ್ಣ ಸೂರ್ಯಗ್ರಹಣ ಮತ್ತು ಸಂಪೂರ್ಣ ಚಂದ್ರಗ್ರಹಣವನ್ನು ಭೂಮಿಯ ಮೇಲೆ ವೀಕ್ಷಿಸಲು ಸಾಧ್ಯ! ಇದೆಲ್ಲ ಕಾಕತಾಳೀಯ ಎಂದು ನಂಬಲು ಸಾಧ್ಯವೇ? ಯಾರೋ ನಿಖರವಾಗಿ ಜೋಡಿಸಿದಂತೆ ಕಂಡರೆ ಆಶ್ಚರ್ಯವೇನಿಲ್ಲ.

ಜ್ಯೋತಿಷದ ಪ್ರಕಾರ 27 ನಕ್ಷತ್ರಗಳಿವೆ ಮತ್ತು ಪ್ರತಿಯೊಂದು ನಕ್ಷತ್ರಕ್ಕೂ 4 ಪಾದಗಳಿವೆ, ಅಂದರೆ ಒಟ್ಟು 27x4 = 108 ಪಾದಗಳು. ಚಂದ್ರನು ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ 108 ನಕ್ಷತ್ರ ಪಾದಗಳನ್ನು ಕ್ರಮಿಸುತ್ತಾನೆ. ಇಲ್ಲಿ ಮತ್ತೊಮ್ಮೆ 108ರ ಮಹತ್ವವನ್ನು ಕಾಣುತ್ತೇವೆ. 1008 ಹುಣ್ಣಿಮೆಗಳು ಇನ್ನೂ ಒಂದು ಲೆಕ್ಕವನ್ನು ಪರಿಪೂರ್ಣಗೊಳಿಸುತ್ತವೆ:

ಹನ್ನೆರಡು ವರ್ಷಗಳಿಗೆ ಒಂದು ಸೂರ್ಯನ ಆವರ್ತನ ಎನ್ನುತ್ತೇವೆ. ಒಂದು ವರ್ಷದಲ್ಲಿ 12 ಹುಣ್ಣಿಮೆಗಳಾದರೆ, 12 ವರ್ಷಗಳಲ್ಲಿ 144 ಹುಣ್ಣಿಮೆಗಳು. ಇಂತಹ 7 ಸೂರ್ಯ ಆವರ್ತನಗಳು ಪೂರ್ಣಗೊಳ್ಳಬೇಕಾದರೆ 7 X 144 = 1008 ಹುಣ್ಣಿಮೆಗಳು ಕಳೆಯಬೇಕು. ಈ ಕಾರಣದಿಂದಲೂ 1008 ಪ್ರಾಮುಖ್ಯತೆಯನ್ನು ಪಡೆಯುತ್ತದೆ. 1008 ಹುಣ್ಣಿಮೆಗಳು ಎಂದರೆ 1008/12 = 84 ಚಾಂದ್ರಮಾನ ವರ್ಷಗಳು. ಆದರೆ ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಚಾಂದ್ರಮಾನ ವರ್ಷಗಳನ್ನು ಬಳಸುತ್ತಿಲ್ಲ. ಆದ ಕಾರಣ 84 ಚಾಂದ್ರಮಾನ ವರ್ಷಗಳನ್ನು ನಮ್ಮ ಕ್ಯಾಲೆಂಡರ್‌ ವರ್ಷಗಳಿಗೆ ಬದಲಿಸಿದರೆ ಎಷ್ಟು ಕ್ಯಾಲೆಂಡರ್‌ ವರ್ಷಗಳಿಗೆ ಸಹಸ್ರ ಚಂದ್ರ ದರ್ಶನಗಳು ಪೂರ್ಣಗೊಳ್ಳುತ್ತವೆ ಎನ್ನುವ ಲೆಕ್ಕಾಚಾರವನ್ನು ಹಾಕಬೇಕಾಗುತ್ತದೆ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ 29.53059 ದಿನಗಳಾಗುತ್ತವೆ. ಆ ಲೆಕ್ಕದಲ್ಲಿ

1008 ಹುಣ್ಣಿಮೆಗೆಳು = 1008 X 29.53059 = 29766.83472 ದಿನಗಳು

29766.83472 ದಿನಗಳು = 29766.83472 / 365.25 (ನಾಲ್ಕು ವರ್ಷಗಳಿಗೆ ಬರುವ ಲೀಪ್‌ ವರ್ಷ ಸೇರಿಸಿ)

= 81.4971 ವರ್ಷಗಳು. ಅಂದರೆ ಸುಮಾರು 81.5 ವರ್ಷಗಳು.

ಅಂದರೆ ಸಹಸ್ರ ಚಂದ್ರದರ್ಶನವನ್ನು ಮುಗಿಸಲು ನಮಗೆ ಸುಮಾರು ಎಂಬತ್ತೊಂದೂವರೆ ವರ್ಷಗಳು ಹಿಡಿಯುತ್ತವೆ. ಆದರೆ ಲೆಕ್ಕಾಚಾರವು ಇಲ್ಲಿಗೇ ಮುಗಿಯುವುದಿಲ್ಲ. ಮೇಲಿನ ನಿಖರವಾದ ದಿನಗಳ ಸಂಖ್ಯೆಯು ಹುಣ್ಣಿಮೆಯ ಮಾರನೆಯ ದಿನ ಹುಟ್ಟಿದವರಿಗೆ ಮಾತ್ರ ಸರಿಹೋಗುತ್ತದೆ. ಅಂದರೆ ಇವರು ಹುಟ್ಟಿದ 29 ದಿನಗಳ ನಂತರ ತಮ್ಮ ಮೊದಲ ಹುಣ್ಣಿಮೆಯನ್ನು ಅನುಭವಿಸುತ್ತಾರೆ. ಬೇರೆಯವರಿಗೆ ಅವರು ಹುಟ್ಟಿದ ದಿನವನ್ನು ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಬೇಕಾಗುತ್ತದೆ. ಉದಾಹರಣೆಗೆ, ನಾನು ಕೃಷ್ಣಪಕ್ಷದ ನವಮಿಯಂದು ಹುಟ್ಟಿದ್ದರಿಂದ ನನ್ನ ಮೊದಲನೆಯ ಹುಣ್ಣಿಮೆಯನ್ನು ನಾನು ಹುಟ್ಟಿದ 20 ದಿನಗಳಿಗೆ (ಅಂದರೆ ಮೇಲಿನ ಲೆಕ್ಕಾಚಾರದ ಪ್ರಕಾರ ಇನ್ನೂ 9 ದಿನ ಮೊದಲೇ) ನೋಡಿದ್ದೇನೆ. ನನ್ನ ಸಹಸ್ರ ಚಂದ್ರದರ್ಶನಕ್ಕೆ, ನಾನು ಹುಟ್ಟಿದಾರಭ್ಯ

         29767 - 9 = 29758 ದಿನಗಳು ಕಾಯಬೇಕು.

ನಾನು ಹುಟ್ಟಿದ ದಿನಾಂಕಕ್ಕೆ ಇಷ್ಟು ದಿನಗಳನ್ನು ಸೇರಿಸಿದರೆ ಬರುವ ದಿನವೇ ನಾನು ಸಹಸ್ರ ಚಂದ್ರದರ್ಶನ ಮುಗಿಸುವ ದಿನ

7/09/1958 + 29758 ದಿನಗಳು = 27/02/2040

2040 ವರ್ಷದ ಕ್ಯಾಲೆಂಡರ್‌ ನಲ್ಲಿ 27/02/2040ರಂದು ಹುಣ್ಣಿಮೆ ಎಂದು ತೋರಿಸಲಾಗಿದೆ! ಆದಿನ ನಾನು ಸಹಸ್ರ ಚಂದ್ರದರ್ಶನವನ್ನು ಪೂರ್ಣಗೊಳಿಸುತ್ತೇನೆ, ಅಲ್ಲಿಯವರೆಗೂ ಜೀವಂತವಿದ್ದರೆ!