ಚೈತ್ರ ವೈಶಾಖ ವಸಂತ

ಖ್ಯಾತ ಬರಹಗಾರ, ಪತ್ರಕರ್ತ ಜೋಗಿ ಬರೆದ ‘ಚೈತ್ರ ವೈಶಾಖ ವಸಂತ’ ಎನ್ನುವ ಕಾದಂಬರಿಯಲ್ಲಿ ಬೆಂಗಳೂರಿನ ಕಥೆಯನ್ನು ತಮ್ಮದೇ ವಿನೂತನ ಶೈಲಿಯಲ್ಲಿ ಹೇಳಲು ಹೊರಟಿದ್ದಾರೆ. ಅದಕ್ಕೂ ಮೊದಲು ಒಂದು ಪೀಠಿಕೆಯನ್ನೂ ಹಾಕಿದ್ದಾರೆ. ಓದುತ್ತಾ ಹೋದಂತೆ ನಿಮಗೂ ಬೆಂಗಳೂರು ಆವರಿಸುತ್ತಾ ಹೋಗುತ್ತದೆ.

“ತೊಂಬತ್ತೆರಡು ತುಂಬಿದ ಆ ಅಜ್ಜ ಹೇಳುತ್ತಾ ಹೋಗುತ್ತಾನೆ: ನನಗೆ ಚರಿತ್ರೆಯಲ್ಲಿ ನಂಬಿಕೆಯಿಲ್ಲ. ಭರವಸೆಯೂ ಇಲ್ಲ. ಚರಿತ್ರೆ ಎನ್ನುವುದು ಯಾರೋ ಬರೆದ ಕತೆ. ಅದನ್ನು ಬರೆದಾತ ತನ್ನ ಮೂಗಿನ ನೇರಕ್ಕೆ ತಕ್ಕಂತೆ ಬರೆದಿರಬಹುದು. ತನಗೆ ಬೇಕಾದ ಹಾಗೆ ತಿರುಚಿರಬಹುದು. ತನ್ನ ಗಾಯಗಳನ್ನು ಮುಚ್ಚಿಕೊಳ್ಳಲು ಚರಿತ್ರೆಯೆಂಬ ನಿಲುವಂಗಿಯನ್ನು ಬಳಸಿಕೊಂಡಿರಬಹುದು. ಷಂಡನಾದ ರಾಜನ ಉದ್ಧಂಡ ಪರಾಕ್ರಮದ ಕತೆಯನ್ನು, ಕ್ರೂರಿಯೊಬ್ಬನ ಕರುಣೆಯ ಕಥನಗಳನ್ನು, ದೊರೆಸಾನಿಯೊಬ್ಬಳ ಪಾತಿವ್ರತ್ಯದ ಚರಿತೆಯನ್ನು ಕೇಳಿ ಏನು ಮಾಡುವುದಕ್ಕಿದೆ? ಅವುಗಳಿಂದ ನಿನ್ನ ವರ್ತಮಾನಕ್ಕೆ ಕಿಲುಬುಗಾಸಿನ ಪ್ರಯೋಜನವೂ ಇಲ್ಲ. ಅಪ್ಪನನ್ನು ಸುಟ್ಟು ಬಂದ ಮಕ್ಕಳು ಮಾರನೇ ದಿನ ಹೋಗಿ ಬೂದಿಯಲ್ಲಿ ಅಳಿದುಳಿದ ಮೂಳೆಚೂರುಗಳನ್ನು ಹೆಕ್ಕುವ ಹಾಗೆ ಇತಿಹಾಸದ ಪುಟಗಳಿಂದ ಪಳೆಯುಳಿಕೆಗಳನ್ನು ಹೆಕ್ಕಿ ನಿನ್ನ ಮುಂದಿಡುವಂತೆ ಮಾತ್ರ ಹೇಳಬೇಡ.

ನನಗೊಬ್ಬನಿಗೇ ಅಲ್ಲ, ಬೆಂಗಳೂರಿಗೂ ಚರಿತ್ರೆಯ ಬಗ್ಗೆ ಆಸಕ್ತಿಯಿಲ್ಲ. ನಿಜ ಹೇಳಬೇಕೆಂದರೆ ಚಾರಿತ್ರ್ಯದ ಮೇಲೂ ಅದಕ್ಕೆ ನಂಬಿಕೆಯಿಲ್ಲ. ತನ್ನ ಮೈಮೇಲಾದ ಗಾಯಗಳನ್ನು ಅದು ಯಾವತ್ತೂ ತೋರಿಸಿಕೊಂಡಿಲ್ಲ. ಅದರ ಮೈಗೆ ಕಾಲಕಾಲಕ್ಕೆ ಚಾದರವನ್ನೋ ಕೌದಿಯನ್ನೋ ನಿಲುವಂಗಿಯನ್ನೋ, ಕೋಟನ್ನೋ ಹೊದಿಸುತ್ತಲೇ ಬಂದಿದ್ದಾರೆ, ಒಬ್ಬರಲ್ಲದೇ ಹೋದರೆ ಒಬ್ಬರು. ನೀನು ಆಕಾಶದಿಂದ ನೋಡಿದಾಗ ಎಂಥಾ ಕಲ್ಲುಬಂಡೆಗಳಿಂದ ಕೂಡಿದ ಬರಡು ನೆಲವೂ ಸುಂದರವಾಗಿ ಕಾಣುವ ಹಾಗೆ ಬೆಂಗಳೂರು ಸುಂದರ ವಾಗಿಯೇ ಕಾಣಿಸುತ್ತದೆ. ಆ ಸೌಂದರ್ಯಕ್ಕೆ ಮರುಳಾಗಿ ಇಲ್ಲಿಗೆ ಬರಲು ಹಂಬಲಿಸಿ ಸತ್ತವರು, ಬಂದು ನೆಲೆಸಿ ಪ್ರಾಣ ಕಳಕೊಂಡವರು, ಬಂದು ಮರಳಾಗದೇ ಮಣ್ಣಾದವರು, ಬದುಕಿ ತೋರಿಸುತ್ತೇನೆ ಎಂಬ ಛಲದಿಂದ ಹೊರಟು ಕೊನೆಗೆ ಬದುಕಿದೆವೋ ಇಲ್ಲವೋ ಅನ್ನುವುದೂ ಗೊತ್ತಾಗದೇ ಕಂಗಾಲಾದವರು- ಅವರೆಲ್ಲರ ಕತೆಯೂ ನನಗೆ ಗೊತ್ತು. ನಾನದನ್ನು ನಿಮಗೆ ಹೇಳಬೇಕಾದರೆ ಕೇಳುವ ವ್ಯವಧಾನ ನಿಮಗೆ ಇರಬೇಕು.

ಇಲ್ಲಿ ಯಾರಿಗೂ ಕಿವಿಯಿಲ್ಲ, ಕೇವಲ ಬಾಯಿ ಮಾತ್ರ. ಎಲ್ಲರೂ ಗಂಟೆ ಗಟ್ಟಲೇ ಮಾತಾಡುತ್ತಲೇ ಇರುತ್ತಾರೆ. ಎದುರುಬದುರು ಕೂತು, ಕಿವಿಗೆ ಹೆಡ್ ಫೋನು ಸಿಕ್ಕಿಸಿಕೊಂಡು, ಸುತ್ತಿಯಂಥ ರಿಸೀವರ್ ಹಿಡಕೊಂಡು, ಅಂಗೈಯಲ್ಲಿ ಅಡಗುವ ಪುಟ್ಟ ಫೋನನ್ನು ಮುಷ್ಠಿಯೊಳಗೆ ಬಚ್ಚಿಟ್ಟುಕೊಂಡು ಮಾತಾಡುತ್ತಲೇ ಇರುತ್ತಾರೆ. ಹೇಳಬೇಕಾದ್ದು, ಹೇಳಬಾರದ್ದನ್ನೆಲ್ಲ ಹೇಳುತ್ತಲೇ ಹೋಗುತ್ತಾರೆ.

ನಡುನಡುವೆ ತಮ್ಮ ಮಾತನ್ನು ತಾವೇ ಮರೆಯುತ್ತಾರೆ. ನಾನು ಎಲ್ಲಿಗೆ ನಿಲ್ಲಿಸಿದ್ದೆ ಹೇಳಿ ಅಂತ ಮಾತಾಡುತ್ತಿದ್ದವರು ಒಮ್ಮೊಮ್ಮೆ ಕೇಳಿ, ಕೇಳುತ್ತಿದ್ದವರನ್ನು ಗಾಬರಿ ಮಾಡುವುದುಂಟು. ಹೇಳುತ್ತಿದ್ದವರಿಗೂ ಕೇಳುತ್ತಿದ್ದವರಿಗೂ ಮಾತು ಎಲ್ಲಿಗೆ ನಿಂತಿತು ಅನ್ನೋದು ಗೊತ್ತೇ ಇರುವುದಿಲ್ಲ. ಇಲ್ಲಿ ಮಾತು ಜ್ಯೋತಿರ್ಲಿಂಗ ಅಲ್ಲ. ಮನೆಯ ಮುಂದೆ ದಿನಾ ಬೆಳಗ್ಗೆ ಹೆಂಗಸರು ಕಸದ ಬುಟ್ಟಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ತುಂಬಿಡುವ ಕಸದಷ್ಟೇ ಬೆಲೆ ಅದಕ್ಕೆ. ಅದನ್ನು ಯಾರೋ ಎತ್ತಿಕೊಂಡು ಹೋಗಿ ಲಾರಿಗಳಲ್ಲಿ ತುಂಬಿ ಮತ್ಯಾವುದೋ ಊರಲ್ಲಿ ಗುಡ್ಡೆ ಹಾಕುತ್ತಾರೆ. ಮಾತನ್ನೂ ಹಾಗೆ ಗುಡ್ಡೆ ಹಾಕುವ ಹಾಗಿದ್ದರೆ ಆ ಪದಕಸಗಳನ್ನು ತುಂಬುವುದಕ್ಕೆ ಜಾಗವೇ ಇರುತ್ತಿರಲಿಲ್ಲವೋ ಏನೋ? ನಾನೂ ಕೊಂಚ ಜಾಸ್ತಿ ಮಾತಾಡ್ತೀನಿ. ಬೆಂಗಳೂರಿನ ನೀರು ಕುಡಿಯಲು ಶುರುಮಾಡಿ ಎಪ್ಪತ್ತು ವರುಷ ಆಯಿತು. ನಾನಿಲ್ಲಿಗೆ ಬಂದಾಗ ನನಗೆ ಹದಿನಾಲ್ಕು ವರುಷ, ಏನು, ತೊಂಬತ್ತೆರಡು ವರುಷದವನ ಥರ ಕಾಣಿಸೋದಿಲ್ಲವಾ? ಬೆಂಗಳೂರೂ ಅಷ್ಟೇ. ಮೊನ್ನೆ ಮೊನ್ನೆ ಹುಟ್ಟಿದ ಹಾಗೆ ಕಂಗೊಳಿಸುತ್ತದೆ. ದಿನಾ ಇಲ್ಲಿ ಕಟ್ಟಡಗಳು ಏಳುತ್ತಲೇ ಇರುತ್ತವೆ. ಹಳೆಯ ಕಟ್ಟಡಗಳಿಗೆ ಯಾರೋ ಬಣ್ಣ ಬಳಿಯುತ್ತಲೇ ಇರುತ್ತಾರೆ. ಊರು ಕೂಡ ಮೇಕಪ್ಪು, ಮ್ಯಾನಿಕ್ಯೂರ್ ಮಾಡಿಸಿಕೊಂಡು ಬಿಳಿ ಗೂದಲಿಗೆ ಕೆಂಚೋ ಕಂದೋ ಕಷ್ಟೋ ಬಣ್ಣ ಬಳಕೊಂಡು ವಯಸ್ಸನ್ನು ಮರೆಮಾಚುತ್ತದೆ.

ನಿಜ, ನಂಗೆ ವಯಸ್ಸಾಗಿದೆ. ನಿಮ್ಮ ಥರ ನಾನು ಯೋಚನೆ ಮಾಡಕ್ಕಾಗಲ್ಲ. ನಡುನಡುವೆ ಒಂಚೂರು ಸಿಟ್ಟಲ್ಲಿ ಮಾತಾಡಿದರೆ ನೀವೇ ತಿದ್ಯೋಬೇಕು. ಹೋಗಿ ಹೋಗಿ, ನನ್ನ ಹತ್ರ ಬೆಂಗಳೂರಿನ ಕತೆ ಕೇಳೋದಕ್ಕೆ ಬಂದಿದ್ದೀರಲ್ಲ. ಅದೇ ತಮಾಷೆ. ಈ ಕಲ್ಲು ಬೆಂಚಿನ ಮೇಲೆ ನಾನು ನಲವತ್ತು ವರ್ಷದಿಂದ ಬಂದು ಕೂತ್ಕತಾ ಇದ್ದೇನೆ. ಈ ಪಾರ್ಕಲ್ಲಿ ಅಡ್ಡಾಡೋರನ್ನೆಲ್ಲ ಕರೆದು ಮಾತಾಡಿಸೋದಕ್ಕೆ ನೋಡಿದ್ದೇನೆ. ಒಬ್ಬನಾದರೂ ಕೈಗೆ ಸಿಕ್ಕರೆ ಕೇಳಿ. ಕ್ರಮೇಣ ನನ್ನನ್ನು ನೋಡ್ತಿದ್ದ ಹಾಗೆ ಕಣ್ಣು ತಪ್ಪಿಸಿಕೊಂಡು ತಲೆ ತಪ್ಪಿಸಿಕೊಂಡು ಓಡಾಡೋದಕ್ಕೂ ಶುರು ಮಾಡಿದ್ರು. ಅಲ್ಲಿಗೆ ನನಗೂ ಅರ್ಥ ಆಗಿ ಹೋಯ್ತು. ಈ ಊರಿಗೆ ನಾನು ಬೇಕಾಗಿಲ್ಲ ಅಂತ ಗೊತ್ತಾಯ್ತು. ಹಾಗೆ ನೋಡಿದರೆ ಮುದುಕರು ಯಾವ ಊರಿಗೂ ಬೇಡ. ಅವರೊಂಥರ ವ್ಯಾಜ್ಯ ನಡೀತಿರೋ ಹಳೇ ಕಟ್ಟಡಗಳಿದ್ದ ಹಾಗೆ. ವ್ಯಾಜ್ಯ ಮುಗೀತಿದ್ದ ಹಾಗೆ ಕಟ್ಟಡ ಒಡೆಸಿ ಹೊಸ ಕಾಂಪ್ಲೆಕ್ಸು ಕಟ್ಟಿಸಬಹುದು ಅಂಡ್ಕೊಂಡಿರ್ತಾರೆ. ಕೆಲವೊಂದು ಸಲ ಮೂರು ತಲೆಮಾರು ಆದ್ರೂ ವ್ಯಾಜ್ಯ ಮುಗಿಯೋದೇ ಇಲ್ಲ. ಏನು ಮಾಡ್ತೀರಿ. ಬೆಂಗಳೂರಿಗೆ ವ್ಯಾಜ್ಯದಲ್ಲಿರೋ ಭೂಮಿಯೆಲ್ಲ ಬಳಕೆಗೆ ಸಿಕ್ಕಿಬಿಟ್ಟರೆ ಇನ್ನೂ ಒಂದು ಲಕ್ಷ ಮನೆ ಕಟ್ಟಬಹುದು. ಅದು ಮುಗಿಯೋದಿಲ್ಲ ಬಿಡು.

ವಯಸ್ಸಾಯ್ತು. ನಿನ್ನನ್ನು ಏಕವಚನದಲ್ಲಿ ಮಾತಾಡಿಸ್ಕೋ ಬಹುವಚನದಲ್ಲಿ ಕರೀಬೇಕೋ ಗೊತ್ತಾಗಲ್ಲ. ಒಂದೊಂದು ಸಲ ನಿನ್ನ ಠೀವಿ ನೋಡಿದ್ರೆ ಗೌರವ ದಿಂದ ಮಾತಾಡಿಸೋದೇ ವಾಸಿ ಅನ್ಸುತ್ತೆ. ನಿನ್ನ ವಯಸ್ಸಿನೋರು ಯಾವಾಗ ರೇಗ್ತಾರೆ, ಯಾವಾಗ ನಗ್ತಾರೆ ಒಂದೂ ಗೊತ್ತಾಗಲ್ಲ. ಇವತ್ತು ಸರಿಯಿದ್ದೋನು ನಾಳೆ ಸರಿಯಿರಲ್ಲ. ನಾನೂ ಅವರ ಹಂಗೇ ಅಂತಿಟ್ರೋ, ಎಷ್ಟಾದರೂ ನಾನೂ ಬೋರ್‌ವೆಲ್‌ ನೀರೇ ಕುಡಿದು ಬೆಳೆದೋನು. ಕಾವೇರಿ ನೀರೆಲ್ಲ ಆಮೇಲೆ ಶುರು ಆಗಿದ್ದು, ಕಾವೇರಿ ನೀರಿನ ಜೊತೆ ರೋಗಾನೂ ಬರೋದಕ್ಕೆ ಶುರು ಆಯ್ತು. ಈ ಊರಲ್ಲಿ ಮಾತ್ರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಒಂದಾಗಿಬಿಟ್ಟಿದೆ ಮಾರಾಯ. ಹಹ್ಹಹ್ಹ .. ಒಂದೇ ಲೈನಲ್ಲಿ ಇನ್ ಕಮಿಂಗೂ ಔಟ್ ಗೋಯಿಂಗೂ ಇರೋ ಥರ. ಹೆದರ್ಕೋಬೇಡ, ಎಂಥಾ ನೀರು ಕುಡಿದ್ರೂ ಅರಗಿಸಿಕೊಳ್ಳೋ ಶಕ್ತಿನ ಬೆಂಗಳೂರೇ ನಿಂಗೆ ಕೊಡತ್ತೆ. ಕಂಪ್ಯೂಟರ್ ಹಾರ್ಡ್ ಡಿಸ್ಕ್ ಥರ ಮಡಿ ಮೈಲಿಗೆ ಇಲ್ಲದಿರೋ ಜಾಗ ಇದು. ಹಾರ್ಡ್ ಡಿಸ್ಕಲ್ಲಿ ಪೋಲಿ ಫೋಟೋ, ಅಶ್ಲೀಲ ವಿಡಿಯೋ, ಯಂಕಟರಮಣ ಸ್ವಾಮಿ ಫೋಟೋ, ನಿಮ್ಮಪ್ಪನ ಮದುವೆ ವಿಡಿಯೋ ಇಟ್ಟೋಬಹುದು ನೋಡು, ಹಂಗೇ ಇಲ್ಲೂ. ಅದೂ ಇರತ್ತೆ ಇದೂ ಇರತ್ತೆ. ಬೇಕಾದ್ದು ತಗೋಬಹುದು.

ಕೇಳಿಸ್ತಾ.. ಅದು ಏಳು ಗಂಟೆಗೆ ನಮಾಜು ಮಾಡೋರಿಗೆ ಗಂಟೆ. ಇಲ್ಲೇ ಕೆಳಗೊಂದು ಮಸೀದಿ ಇದೆ. ಯಾವುದೋ ಕಾಲದಲ್ಲಿ ಕಟ್ಟಿರೋದು. ಈ ಇಡೀ ಏರಿಯಾದಲ್ಲಿ ಮುಸ್ಲಿಮರೇ ಇಲ್ಲ. ಮುಸ್ಲಿಮರ ಮನೆ ಇದೆ. ಅವರೆಲ್ಲ ಫಾರಿನ್ನಲ್ಲಿದ್ದಾರೆ. ಆದ್ರೂ ಕಾಲಕಾಲಕ್ಕೆ ನಮಾಜು ಗಂಟೆ ಮಾತ್ರ ಹೊಡ್ಕೊಳ್ಳತಾ ಇರತ್ತೆ. ಮೊದಲು ಕಿರಿಕಿರಿ ಆಗೋದು. ಈಗ ಅದಿಲ್ಲದೇ ಹೋದರೆ ಏನೋ ಕಳಕೊಂಡ ಹಂಗಾಗತ್ತೆ. ಕೂತ್ಕ, ಕಾಲು ಮೇಲಿಟ್ಟು ಚಕ್ಕಳ ಮಕ್ಕಳ ಹಾಕಿ ಕೂತ್ಕ. ಈ ಮುದ್ಯನ ಕೈಗೆ ಯಾಕಾದ್ರೂ ಸಿಕ್ಕಿ ಹಾಕ್ಕೊಂಡೋ ಅನ್ನಿಸಬೇಕು, ಅಷ್ಟೊಂದು ಕತೆ ಹೇಳೀನಿ. ಕೇಳು. ನಿಂಗೇನು ಅನುಮಾನ ಇದ್ರೂ ಬರೆದಿಟ್ರೋ.. ಆಮೇಲೆ ಕೇಳು.. ಮಾತಿನ ಮಧ್ಯೆ ಬಾಯಿ ಹಾಕೋದಕ್ಕೆ ಬರಬೇಡ. ಮರೆತು ಹೋಗುತ್ತೆ. ಹೇಳು, ಎಲ್ಲಿಂದ ಶುರು ಮಾಡ್ಲಿ.

ನನ್ನ ಹೆಸರಿನಿಂದಲೇ ಶುರು ಮಾಡ್ಲಾ. ನನ್ನಮ್ಮ ಅಪ್ಪ ನಂಗಿಟ್ಟಿರೋ ಹೆಸರು ಶೇಖರ ಗೌಡ, ಚಂದ್ರಶೇಖರನೋ ನಾಗಶೇಖರನೋ ಇರಬೇಕು. ಯಾರಿಗೂ ಹಿಂದೆ ಮುಂದೆ ಏನಿತ್ತು ಅಂತ ಗೊತ್ತಿಲ್ಲ. ಈ ಶೇಖರ ಗೌಡ ಹುಟ್ಟಿದ್ದು ಇಲ್ಲಲ್ಲ, ಅಲ್ನೋಡು, ದೂರದಲ್ಲೊಂದು ಬೆಟ್ಟ ಕಾಣಿಸ್ತಿದ್ಯಾ... ಅದರ ಬುಡದಲ್ಲಿರೋ ಒಂದು ಪುಟ್ಟ ಹಳ್ಳಿಲಿ. ಅದರ ಕತೆ ಬೇಡ ಬಿಡು.. ನೀನು ತಿಳ್ಕೊಬೇಕಾಗಿರೋದು ಬೆಂಗಳೂರು ಕತೆ ಅಲ್ವಾ, ಹೇಳೀನಿ ತಗೋ.”

ಕುತೂಹಲ ಭರಿತ ಸುಮಾರು ೧೪೦ ಪುಟಗಳ ಈ ಕಾದಂಬರಿಯನ್ನು ಜೋಗಿ “ದಿಕ್ಕು ತೋಚದೇ ಕಂಗಾಲಾದಾಗೆಲ್ಲ ಸೂರ್ಯನ ಕುದುರೆ ತೋರಿಸಿ ಧ್ಯಾನಸ್ಥವಾಗಿಸುವ ಶ್ರೀ ಯು ಆರ್ ಅನಂತಮೂರ್ತಿ ಅವರ ಪ್ರೀತಿಗೆ” ಅರ್ಪಣೆ ಮಾಡಿದ್ದಾರೆ.