ಬಹುದೇಶವಾಸಿ

ಬಹು ವರ್ಷಗಳಿಂದ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರ ಬೆಹರೈನ್ ನಲ್ಲಿ ನೆಲೆಸಿದ್ದರೂ ಕಿರಣ್ ಉಪಾಧ್ಯಾಯರ ಹೃದಯ ಮಿಡಿಯುವುದು ಕನ್ನಡಕ್ಕಾಗಿ ಎಂದರೆ ತಪ್ಪಾಗಲಾರದು. ಕಳೆದ ಸುಮಾರು ಐದು ವರ್ಷಗಳಿಂದ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರತೀ ಸೋಮವಾರ ‘ವಿದೇಶವಾಸಿ’ ಅಂಕಣವನ್ನು ತಪ್ಪದೇ ಬರೆಯುವ ಕಿರಣ್ ಉಪಾಧ್ಯಾಯರು ಮುಟ್ಟದ ವಿಷಯವೇ ಇಲ್ಲ ಎನ್ನಬಹುದು. ಪ್ರವಾಸ, ಮರುಭೂಮಿ, ರಾಜಕೀಯ, ಕ್ರೀಡೆ, ಸಿನೆಮಾ, ಯಕ್ಷಗಾನ, ಸಂಗೀತ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬರೆದಿದ್ದಾರೆ. ಇವರ ಬರವಣಿಗೆಯ ಸೊಬಗು ಓದಿದವರಿಗೇ ಗೊತ್ತು. ಎಲ್ಲರಿಗೂ ಅರ್ಥವಾಗುವ ಸರಳ ಭಾಷೆ, ಆದರೆ ಪರಿಪೂರ್ಣ ಅಂಕಿ ಅಂಶಗಳನ್ನು ಒಳಗೊಂಡ ಅಧ್ಯಯನ ಪೂರ್ಣ ಮಾಹಿತಿ. ಇದು ‘ವಿದೇಶವಾಸಿ’ ಸರಣಿಯ ಆರನೇ ಪುಸ್ತಕ. ಅಪರೂಪದ ಸಂಗತಿಗಳನ್ನು ಒಳಗೊಂಡ ೩೪ ಅಧ್ಯಾಯಗಳಿವೆ. 

ಕಿರಣ್ ಬಗ್ಗೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ ಬರೆಯುತ್ತಾರೆ…”ದೂರದ ಬೆಹರೈನ್ ದೇಶದಲ್ಲಿ ನೆಲೆಸಿದ್ದರೂ, ತಮ್ಮ ಅಕ್ಷರಗಳ ಮೂಲಕ ಜಗತ್ತನ್ನೇ ಕನ್ನಡಿಗರ ಕೈಗಿಟ್ಟಿರುವ ಕಿರಣ್ ಉಪಾಧ್ಯಾಯ, ಇತ್ತೀಚಿನ ದಿನಗಳಲ್ಲಿ ಹೊಸ ಭರವಸೆ ಮೂಡಿಸಿರುವ, ಪ್ರತಿಭಾವಂತ ಬರಹಗಾರ. 'ವಿಶ್ವವಾಣಿ' ದಿನಪತ್ರಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿ ಮೂಡಿಬರುತ್ತಿರುವ ಅವರ 'ವಿದೇಶವಾಸಿ' ಅಂಕಣ ಇದೀಗ 'ಬಹುದೇಶವಾಸಿ' ಎಂಬ ವಿಶಿಷ್ಟ ಕೃತಿಯಾಗಿ ನಿಮ್ಮ ಕೈಸೇರುತ್ತಿದೆ. ಸ್ಥಳೀಯ ಮಣ್ಣಿನ ವಾಸನೆಯಿಂದ ಹಿಡಿದು ಜಾಗತಿಕ ವಿದ್ಯಮಾನಗಳ ವಿಸ್ತಾರದವರೆಗೆ-ಲೋಕಲ್ ನಿಂದ ಗ್ಲೋಬಲ್ ನವರೆಗಿನ- ಬಹುವ್ಯಾಪಿ ವಿಷಯಗಳು ಈ ಕೃತಿಯಲ್ಲಿ ಸಾಂದ್ರವಾಗಿವೆ. ತಮಗೆ ಒಲಿದಿರುವ ಅನನ್ಯ ಕಥನ ಶೈಲಿಯ ಮೂಲಕ, ಅತ್ಯಂತ ಸಂಕೀರ್ಣವಾದ ವಿಷಯವನ್ನಾದರೂ ಓದುಗರ ಮನ ಮುಟ್ಟುವಂತೆ ಸ್ವಾರಸ್ಯವಾಗಿ ಉಣಬಡಿಸುವ ಕಲೆ ಕಿರಣ್ ಅವರಿಗೆ ಸಿದ್ಧಿಸಿದೆ. ಪ್ರತಿ ಅಂಕಣದ ಹಿಂದಿರುವ ಆಳವಾದ ಅಧ್ಯಯನಶೀಲ ಗುಣ, ನಿರಂತರ ಶೋಧನೆ ಹಾಗೂ ಬಹು ಆಯಾಮದ ಮುಕ್ತ ಚಿಂತನೆಗಳು ಇಲ್ಲಿ ಹರಳುಗಟ್ಟಿವೆ. ರಾಜಕೀಯ, ಸಂಸ್ಕೃತಿ, ಇತಿಹಾಸ, ಮಾನವ ಆಸಕ್ತ ಸಂಗತಿ ಮತ್ತು ಮಾನವೀಯ ಸಂಬಂಧಗಳ ವಿಭಿನ್ನ ನೆಲೆಗಳನ್ನು ಶೋಧಿಸುವ ಈ ಕೃತಿ, ಓದುಗರನ್ನು ಚಿಂತನೆಗೆ ಹಚ್ಚುವುದರ ಜತೆಗೆ ಜ್ಞಾನದ ಹರವನ್ನು ವಿಸ್ತರಿಸುತ್ತದೆ. ವಿಶ್ವದ ನಾನಾ ಮುಖಗಳನ್ನು ಅರಿಯಬಯಸುವ ಪ್ರತಿಯೊಬ್ಬ ಜಿಜ್ಞಾಸು ಓದುಗನೂ ಅಕ್ಷರಶಃ ಓದಬೇಕಾದ, ಸಂಗ್ರಹಿಸಬೇಕಾದ ಅಪರೂಪದ ಕೃತಿ 'ಬಹುದೇಶವಾಸಿ'.” ಎನ್ನುತ್ತಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಖ್ಯಾತ ಸಾಹಿತಿ ಡಾ. ನಾ. ಸೋಮೇಶ್ವರ ಇವರು ‘ಬಹುದೇಶವಾಸಿ’ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ. “ಕಿರಣ್ ಅವರ ಅಂಕಣ ಬರಹಗಳು ವೈವಿಧ್ಯಮಯವಾಗಿರುತ್ತವೆ. ನಮ್ಮ ಬದುಕಿಗೆ ಹತ್ತಿರವಾಗಿರುತ್ತವೆ. ಸಾಮಾಜಿಕ ಕಳಕಳಿಯಿರುತ್ತದೆ. ಭಾಷೆಯು, ತಿಳಿಗನ್ನಡವು ಹೇಗಿರಬೇಕು ಅನ್ನುವುದಕ್ಕೆ ಉದಾಹರಣೆಯಾಗಿದೆ. ಕಥನ ಶೈಲಿಯು ಆಕರ್ಷಕವಾಗಿದೆ. ಅವರ ಲೇಖನಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. 'ಅಂಕಣ ಬರಹವು ಆ ದಿನದ ಪತ್ರಿಕೆಯೊಂದಿಗೆ ಮರೆತುಹೋಗಬಹುದಾದ ತಾತ್ಕಾಲಿಕ ಬರಹವೂ ಆಗಬಹುದು; ಕಾಲವನ್ನು ಮೀರಿ ಉಳಿಯುವ ಸಾಹಿತ್ಯವೂ ಅದಕ್ಕಿರಬಹುದು' ಎಂದು ಪ್ರಾರಂಭದಲ್ಲಿ ಬರೆದಿದ್ದೇನೆ. ಕಿರಣ್‌ ಅವರ ಎಲ್ಲ ಲೇಖನಗಳು ಅಲ್ಲವಾದರೂ ಕೆಲವು ಬರಹಗಳಂತೂ ದೀರ್ಘಾವಧಿಯ ಕಾಲ ನಮ್ಮನ್ನು ಕಾಡುತ್ತವೆ. ಕಾಲವನ್ನು ಮೀರಿ ಉಳಿಯುವ ಬರಹಗಳಾಗಿವೆ. ಕಿರಣ್ ಉಪಾಧ್ಯಾಯ ಅವರ ಅಂಕಣ ಬರಹಗಳು ನಿರಂತರವಾಗಿ ಮುಂದುವರಿಯಲಿ ಎಂದು ನಾನು ಹೃತ್ತೂರ್ವಕವಾಗಿ ಆಶಿಸುತ್ತೇನೆ.” ಎನ್ನುತ್ತಾ ಶುಭ ಹಾರೈಸಿದ್ದಾರೆ. ಕಿರಣ್ ಉಪಾಧ್ಯಾಯರು ತಮ್ಮ ಮಾತಿನಲ್ಲಿ ಈ ಬರಹಗಳನ್ನು ಬರೆಯಲು ಸ್ಪೂರ್ತಿಯಾದವರಿಗೆ ಮತ್ತು ಬರಹಗಳು ಮುದ್ರಿತವಾಗಲು, ಪುಸ್ತಕ ರೂಪದಲ್ಲಿ ಹೊರಬರಲು ಸಹಾಯ ಮಾಡಿದವರಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದ್ದಾರೆ. 

ಈ ಕೃತಿಯಲ್ಲಿರುವ ಎಲ್ಲಾ ಬರಹಗಳು ಉತ್ತಮವೇ. ಆದರೆ ಇಲ್ಲಿನ ಬರಹಗಳಲ್ಲಿ ಮನತಟ್ಟುವುದು, ಕಣ್ಣಂಚಿನಿಂದ ನೀರು ಹರಿಯುವುದು ಅರುಣಾ ಶಾನುಭಾಗ ಎಂಬ ದಾದಿ (ನರ್ಸ್)ಯ ಬಗ್ಗೆ ಬರೆದ ಬರಹ ಓದಿದ ಬಳಿಕ. ನಿರ್ಭಯಾ, ಅಭಯಾ… ಮೊದಲಾದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಕಥೆಯನ್ನು ಬರೆಯುತ್ತಾ ಕಿರಣ್ ಕೊನೆಗೆ ಅರುಣಾ ಶಾನುಭಾಗರ ವಿಷಯಕ್ಕೆ ಬರುತ್ತಾರೆ. ಈ ಘಟನೆ ನಡೆದು ಐದು ದಶಕಗಳೇ ಕಳೆದರೂ ಬಹುತೇಕರಿಗೆ ಗೊತ್ತಿರುವಂತದ್ದೇ. ಸೋಹನ್ ಲಾಲ್ ಬತಾರ್ ಎಂಬಾತ ಅರುಣಾಳ ಮೇಲೆ ಆಕೆ ಕೆಲಸ ಮಾಡುವ ಆಸ್ಪತ್ರೆಯಲ್ಲಿ ನಡೆಸಿದ ದೌರ್ಜನ್ಯ, ಇದರಿಂದಾಗಿ ಆಕೆ ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರಿದ್ದು, ನಂತರ ತನ್ನ ಜೀವನದ ನಲವತ್ತೆರಡು ಅಮೂಲ್ಯ ವರ್ಷಗಳನ್ನು ಆಸ್ಪತ್ರೆಯ ಹಾಸಿಗೆಯ ಮೇಲೆಯೇ ಕಳೆದು ನಿಧನ ಹೊಂದಿದ ಅರುಣಾಳ ಕರುಣಾ ಜನಕ ಕಥೆ ಓದುತ್ತಿದ್ದಂತೆ ಎಲ್ಲರಿಗೂ ನೋವಾಗುತ್ತದೆ. ಅರುಣಾಳ ಕಥೆಯಿಂದಾಗಿ ಪಿಂಕಿ ವಿರಾನಿ ಎಂಬ ಸಾಮಾಜಿಕ ಸೇವಾಕರ್ತೆ ‘ದಯಾ ಮರಣ’ ದ ವಿಷಯವನ್ನು ನ್ಯಾಯಾಲಯದಲ್ಲಿ ಎತ್ತುತ್ತಾರೆ. ಆದರೆ ಅಂದು ಅರುಣಾಳನ್ನು ಸಣ್ಣ ಮಗುವಿನಂತೆ ನಾಲ್ಕು ದಶಕಗಳ ಕಾಲ ನೋಡಿಕೊಂಡ ದಾದಿಯರು ಅದನ್ನು ಬಲವಾಗಿ ವಿರೋಧ ಮಾಡುತ್ತಾರೆ. ಅರುಣಾಳಿಗೆ ‘ದಯಾ ಮರಣ’ ನಿರಾಕರಿಸಿದರೂ ನ್ಯಾಯಾಲಯ ಭವಿಷ್ಯದ ‘ದಯಾ ಮರಣ’ಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿಕೊಡುತ್ತದೆ. ಆದರೆ ಆರೋಪಿಗೆ ಕೇವಲ ೭ ವರ್ಷಗಳ ಸಜೆಯಾಗುತ್ತದೆ.

ಕಿರಣ್ ಕಥೆಯನ್ನು ಇಲ್ಲಿಗೇ ಬಿಡುವುದಿಲ್ಲ. ಸಜೆಯನ್ನು ಕಳೆದು ಹೊರಬಂದ ಸೋಹನ್ ಲಾಲ್ ಏನಾದ? ಎನ್ನುವುದರ ಬಗ್ಗೆಯೂ ಬರೆಯುತ್ತಾರೆ. ಈ ಸಂಗತಿ ಅರುಣಾಳ ಕರುಣಾಜನಕ ಕಥೆಯನ್ನು ಓದಿ, ಕೇಳಿ ದುಃಖಿತರಾದ ಬಹುತೇಕರಿಗೆ ಗೊತ್ತಿಲ್ಲ. ಆದರೆ ಕಿರಣ್ ಅವರ ಬರಹದ ಗಟ್ಟಿತನ ಇದುವುದೇ ಇಲ್ಲಿ. ಸೋಹನ್ ಲಾಲ್ ಬಗ್ಗೆ, ಆತನ ಮಕ್ಕಳ ಬಗ್ಗೆ ಎಲ್ಲವನ್ನೂ ಬರೆಯುತ್ತಾರೆ. ಇದು ಈ ಅಂಕಣ ಬರಹದ ಬಗ್ಗೆ ವಿಶ್ವಾಸಾರ್ಹತೆಯನ್ನು ಮೂಡಿಸುತ್ತದೆ. ಅರುಣಾ, ನಿರ್ಭಯಾ, ಅಭಯಾರ ಬಗ್ಗೆ ಬರೆದು ಕೊನೆಯಲ್ಲಿ ಕಿರಣ್ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಒಂದು ವಾಕ್ಯ ಬರೆಯುತ್ತಾರೆ - “ ಬಲತ್ಕಾರವಾದಾಗ ಪ್ರತಿ ಬಾರಿ ಮೇಣದ ಬತ್ತಿಯನ್ನೇ ಯಾಕೆ ಸುಡಬೇಕು? ಒಮ್ಮೆಯಾದರೂ ಬಲತ್ಕಾರಿಯನ್ನು ಸುಟ್ಟುಬಿಡಿ!” ಇದು ಸಾಧ್ಯವೇ ? ಎನ್ನುತ್ತಾ ನಿಟ್ಟುಸಿರು ಬಿಡುತ್ತಾರೆ.

ಇಲ್ಲಿರುವ ಬಹುತೇಕ ಬರಹಗಳು ಪ್ರೇರಣಾದಾಯಕವಾಗಿವೆ. ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಟೆನಿಸ್ ಆಟಗಾರ ರೋಜರ್ ಫೆಡರರ್, ಹ್ಯುಂಡೈ ಕಂಪೆನಿಯ ಸ್ಥಾಪಕ ಚುಂಗ್ ಜು-ಯುಂಗ್, ‘ನಿರ್ಮಾ’ ದ ಕರ್ಸನ್ ಭಾಯಿ ಪಟೇಲ್, ಮಹಾವೀರ ತ್ಯಾಗಿ, ಖ್ಯಾತ ನಟ ರಾಜ್ ಕಪೂರ್ ಮೊದಲಾದವರ ಬಗ್ಗೆ ಬರೆದ ಬರಹವನ್ನು ಓದಲೇ ಬೇಕು. ಇವೆಲ್ಲವೂ ನಿಮಗೆ ಗೊತ್ತೇ ಇಲ್ಲದ ಹಲವಾರು ಮಾಹಿತಿಗಳನ್ನು ಒಳಗೊಂಡಿದೆ. ‘ಪ್ರವಾಸೋದ್ಯಮ : ಬಾಯಿ ಪಟಾಕಿಯಲ್ಲ’ ಎನ್ನುವ ಅಧ್ಯಾಯದಲ್ಲಿ ತಮ್ಮ ಹಾಗೂ ಕರ್ನಾಟಕದ ಪ್ರವಾಸೋದ್ಯಮ ಮಂತ್ರಿಯೊಂದಿಗಿನ ಮಾತುಕತೆಯನ್ನು ಹೇಳುವ ಕಿರಣ್, ವಿಫುಲ ಅವಕಾಶಗಳಿರುವ ಕರ್ನಾಟಕದಲ್ಲಿ ಇನ್ನೂ ಪ್ರವಾಸೋದ್ಯಮ ಶೈವಾವಸ್ಥೆಯಲ್ಲೇ ಏಕೆ ಇದೆ ಎನ್ನುವುದನ್ನು ವಿವರಿಸುತ್ತಾರೆ. ಸರ್ದಾರ್ ಪಟೇಲರ ಪ್ರತಿಮೆ ಇರುವ ಗುಜರಾತ್ ನ ಕೇವಡಿಯಾ ಎನ್ನುವ ಗ್ರಾಮ ‘ಏಕತಾ ನಗರ’ವಾಗಿ ಅಲ್ಲಿ ಪ್ರವಾಸೋದ್ಯಮ ಹೇಗೆ ಬೆಳೆಯಿತು ಎನ್ನುವ ಮಾಹಿತಿಯನ್ನೂ ನೀಡುತ್ತಾರೆ ಕಿರಣ್.   

ಸುಮಾರು ೨೦೦ ಪುಟಗಳ ‘ಬಹುದೇಶವಾಸಿ’ ಕೃತಿಯನ್ನು ಕಿರಣ್ ಉಪಾಧ್ಯಾಯರು “ಸ್ನೇಹದಲ್ಲಿ ಸಹೋದರತ್ವ ಸ್ಫುರಿಸುವ ಸಂಗಡಿಗ ಪ್ರದೀಪ್ ಮುತ್ತಯ್ಯ ಶೆಟ್ಟಿ ಮತ್ತು ಸಕುಟುಂಬಕ್ಕೆ..” ಅರ್ಪಣೆ ಮಾಡಿದ್ದಾರೆ.