ವಿವೇಕಾನಂದರೇ ನನ್ನ ಸ್ಪೂರ್ತಿ : ನೇತಾಜಿ ಬೋಸ್

ನೇತಾಜಿ ಸುಭಾಸ ಚಂದ್ರ ಬೋಸ್ ಅವರ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿಯಾದ ಸ್ವಾಮಿ ವಿವೇಕಾನಂದರನ್ನು ಸೊಗಸಾಗಿ ಚಿತ್ರಿಸಿದ್ದಾರೆ ಸ್ವಾಮಿ ವಿದೇಹಾತ್ಮಾನಂದರು. ಇವರ ಬರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಶ್ರೀನಿವಾಸ ಸುಬ್ರಹ್ಮಣ್ಯಂ. ಈ ಕೃತಿಯ ಪ್ರಕಾಶಕರು ವಿವರಿಸಿದಂತೆ..”ಸುಭಾಸ ಚಂದ್ರ ಬೋಸ್ (ನೇತಾಜಿ) ಎಂಬ ಹೆಸರು ಇಂದಿಗೂ, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿಯೂ ಪುಳಕವನ್ನು ಉಂಟುಮಾಡುತ್ತದೆ. ಧಮನಿ-ಧಮನಿಗಳಲ್ಲಿ ರಕ್ತಸಂಚಾರದ ವೇಗವನ್ನು ಹೆಚ್ಚಿಸುತ್ತದೆ. ದೇಶ ಪ್ರೇಮ ಉಕ್ಕುವಂತೆ ಮಾಡುತ್ತದೆ. ಆ ಕಾಲಘಟ್ಟದವರಾಗಿದ್ದ, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸಿದ ಮಹಾ ವ್ಯಕ್ತಿಗಳಲ್ಲಿ ಬಹು ಮುಖ್ಯವಾದವರಲ್ಲಿ ನೇತಾಜಿ ಸಹ ಒಬ್ಬರು. ಇವತ್ತಿಗೂ ಭಾರತಕ್ಕೆ ನೇತಾಜಿ ಯವರಂತಹ ಯುವಕರು ಭಾರಿ ಸಂಖ್ಯೆಯಲ್ಲಿ ಬೇಕಿದ್ದಾರೆ.

ಇಂತಹ ನೇತಾಜಿಯವರಿಗೆ, ಭಾರತ ಮಾತೆಯ ಚರಣಗಳಲ್ಲಿ ತಮ್ಮ ಇಡೀ ಜೀವನವನ್ನು ಅರ್ಪಣೆ ಮಾಡಬೇಕೆಂಬ ಸ್ಫೂರ್ತಿ ಬಂದಿದ್ದು ಸ್ವಾಮಿ ವಿವೇಕಾನಂದರಿಂದ (ಸ್ವಾಮೀಜಿ). ಆಶ್ಚರ್ಯಕರವೆಂದರೆ ನೇತಾಜಿ, ಸ್ವಾಮೀಜಿಯವರನ್ನು ಒಮ್ಮೆಯಾದರೂ ನೋಡಿಯೂ ಇರಲಿಲ್ಲ. ಸ್ವಾಮೀಜಿ ದೇಹತ್ಯಾಗ ಮಾಡಿದಾಗ (೧೯೦೨) ನೇತಾಜಿ ಐದು ವರ್ಷದ ಕೂಸು. ಆದರೆ, ಅದ್ಯಾವ ಶಕ್ತಿ ಅವರನ್ನು ಸ್ವಾಮೀಜಿಯತ್ತ ಸೆಳೆಯಿತೋ! ಕೋಟ್ಯಂತರ ಯುವಕರಿಗೆ ಇಂದಿಗೂ ಆದರ್ಶ ಪ್ರಾಯವಾಗಿರುವ ನೇತಾಜಿಯವರ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸ್ವಾಮೀಜಿಯವರ ಕೊಡುಗೆ ಬಹು ದೊಡ್ಡದಿತ್ತು ಎಂಬುದು ಈ ಕೃತಿಯ ಮೂಲಕ ಸ್ಪಷ್ಟವಾಗುತ್ತದೆ. ಕೃತಿಕಾರರು, ಈ ವಿಷಯದ ಬಗ್ಗೆ ಅನೇಕ ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ.

ನೇತಾಜಿಯವರ ಬಗ್ಗೆ ಅನೇಕ ಲೇಖನಗಳು ಮತ್ತು ಗ್ರಂಥಗಳು ಪ್ರಕಟವಾಗಿದ್ದರೂ ಅವುಗಳಲ್ಲಿ ಬಹುಪಾಲು ಅವರ ಸಾರ್ವಜನಿಕ, ರಾಜಕೀಯ ಜೀವನಗಳ ಬಗ್ಗೆಯೇ ಗಮನ ಹರಿಯಿಸಿದ್ದು ಅವರ ವ್ಯಕ್ತಿತ್ವ ಹಾಗೂ ಚಾರಿತ್ರ್ಯದ ಬಗ್ಗೆ ಹೆಚ್ಚೇನೂ ತಿಳಿಸುವುದಿಲ್ಲ. ಸುದೈವವೆಂದರೆ, ಸ್ವಯಂ ನೇತಾಜಿಯೇ ತಮ್ಮ ಆತ್ಮಕಥನದಲ್ಲಿ ತಮ್ಮ ವ್ಯಕ್ತಿತ್ವ ರೂಪುಗೊಂಡ ಬಗ್ಗೆ ವಿವರಿಸಿದ್ದಾರೆ. ಜೊತೆಗೆ, ಅವರಿನ್ನೂ ಬಾಲಕರಾಗಿದ್ದಾಗ ಬರೆದಿದ್ದ ಪತ್ರಗಳು ಕೂಡ ಒಂದಷ್ಟು ವಿಷಯಗಳನ್ನು ತಿಳಿಸುತ್ತವೆ. ಇವುಗಳ ನೆರವಿನಿಂದ, ಅವರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜೀವನದ ಮೇಲೆ ಶ್ರೀರಾಮಕೃಷ್ಣರು, ಸ್ವಾಮಿ ವಿವೇಕಾನಂದರು ಮತ್ತು ಸೋದರಿ ನಿವೇದಿತಾ ಪ್ರಭಾವ ಬೀರಿದರು ಎಂದು ನಮಗೆ ನಿರ್ಣಾಯಕವಾಗಿ ತಿಳಿದುಬರುತ್ತದೆ.

ನೇತಾಜಿಯವರ ಸಿದ್ಧಾಂತಕ್ಕೆ ಸ್ವಾಮೀಜಿಯವರ ಸಂಚಲನಾತ್ಮಕ, ಪ್ರಾಯೋಗಿಕ ವೇದಾಂತ ಹೇಗೆ ಬುನಾದಿಯಾಯಿತು ಎಂಬುದನ್ನು ಮೂಲ ಕೃತಿಕಾರರಾಗಿರುವ ಸ್ವಾಮಿ ವಿದೇಹಾತ್ಮಾನಂದಜಿಯವರು ಕ್ರಮಬದ್ಧವಾಗಿ ನಿರೂಪಿಸಿದ್ದಾರೆ. ಅಲ್ಲಿ ಇಲ್ಲಿ ಹರಡಿಹೋಗಿದ್ದ ವಿಷಯಗಳನ್ನು ಒಟ್ಟು ಮಾಡಿ ಒಂದು ವ್ಯವಸ್ಥಿತ ರೂಪಕ್ಕೆ ತಂದಿದ್ದಾರೆ. ಮೇಲುನೋಟಕ್ಕೆ, ನೇತಾಜಿ ಹೊರ ಜಗತ್ತಿನ ಹೋರಾಟದಲ್ಲಿ ಸಂಪೂರ್ಣವಾಗಿ ಮುಳುಗಿದ್ದಂತೆ ಕಾಣುತ್ತಿದ್ದರೂ ಅಂತರಂಗದಲ್ಲಿ ಅವರೋರ್ವ ವಿರಕ್ತರಾಗಿದ್ದರು. ಅವರ ಅಂತರಂಗದಲ್ಲಿ ಆಧ್ಯಾತ್ಮಿಕತೆಯ ತೊರೆ ನಿರಂತರವಾಗಿ ಹರಿಯುತ್ತಲೇ ಇತ್ತು. ನೇತಾಜಿಯವರ ಆಕರ್ಷಣ ಶಕ್ತಿಗೆ ಬಹುಶಃ ಇದೇ ಕಾರಣವಿರಬಹುದು.

ಸ್ವಾಮೀಜಿಯವರದ್ದು ಬಹುಮುಖೀ ವ್ಯಕ್ತಿತ್ವ. ಅವರ ಕೆಲವೊಂದು ರಾಷ್ಟ್ರೀಯ ಹಾಗೂ ಸಾಮಾಜಿಕ ವಿಚಾರಗಳನ್ನು ನೇತಾಜಿ ಅಂತರ್ಗತ ಮಾಡಿ ಕೊಂಡು ಕಾರ್ಯರೂಪಕ್ಕೆ ತಂದರು. 'ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ'ಯ ಮುನ್ನುಡಿಯಲ್ಲಿ ಸೋದರಿ ನಿವೇದಿತಾ ಹೇಳುತ್ತಾರೆ: "ಅನೇಕ ಮತ್ತು ಏಕ, ಎರಡೂ ಸತ್ಯವಾದರೆ; ಎಲ್ಲ ರೀತಿಯ ಪೂಜೆ ಮಾತ್ರವಲ್ಲದೆ, ಎಲ್ಲ ಬಗೆಯ ಕೆಲಸವೂ, ಎಲ್ಲ ಬಗೆಯ ಹೋರಾಟವೂ, ಎಲ್ಲ ವಿಧದ ಸೃಷ್ಟಿಯೂ ಸಾಕ್ಷಾತ್ಕಾರಕ್ಕೆ ಮಾರ್ಗಗಳಾಗುತ್ತವೆ. ಲೌಕಿಕ ಮತ್ತು ಪಾರಮಾರ್ಥಿಕ ಎಂಬ ಭೇದ ಇನ್ನಿಲ್ಲ. ದುಡಿಮೆಯೇ ಪ್ರಾರ್ಥನೆ, ಆತ್ಮ ವಿಜಯವೇ ತ್ಯಾಗ, ಜೀವನವೇ ಧರ್ಮ. ವಸ್ತುಗಳನ್ನು ಪಡೆದಿಟ್ಟುಕೊಳ್ಳುವುದು ಅವುಗಳನ್ನು ಬಿಟ್ಟು ಬಿಡುವಷ್ಟೇ ಶ್ಲಾಘನೀಯ.'' ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಮತ್ತು ಜನರ ಸೇವೆ ಮಾಡುವುದು ಕೂಡ 'ಸಾಧನೆ' ಮತ್ತು 'ಕರ್ಮಯೋಗ'ವೇ ಎಂಬುದಕ್ಕೆ ನೇತಾಜಿಯವರ ಜೀವನವೇ ಒಂದು ಅದ್ಭುತವಾದ ನಿದರ್ಶನ.”

ಸ್ವಾಮಿ ವಿವೇಕಾನಂದರ ಬದುಕು, ಆದರ್ಶಗಳು ಮತ್ತು ಅವರ ಪ್ರಬಲ ಸಂದೇಶಗಳು ಒಬ್ಬ ವ್ಯಕ್ತಿಯ ಜೀವನವನ್ನು ಹೇಗೆ ಸಂಪೂರ್ಣವಾಗಿ ಬದಲಾಯಿಸಬಲ್ಲವು ಎಂಬುದನ್ನು ಅತ್ಯಂತ ಆಪ್ತವಾಗಿ ಹಾಗೂ ಪ್ರೇರಕವಾಗಿ ವಿವರಿಸುವ ಕೃತಿ 'ವಿವೇಕಾನಂದರೇ ನನ್ನ ಸ್ಪೂರ್ತಿ'. ಸ್ವಾಮಿ ವಿದೇಹಾತ್ಮಾನಂದಜೀಯವರು ಬರೆದಿರುವ ಈ ಪುಸ್ತಕವು ವಿವೇಕಾನಂದರ ವ್ಯಕ್ತಿತ್ವದ ಮೇಲಿನ ತಮ್ಮ ಆಳವಾದ ಒಡನಾಟ ಮತ್ತು ದೃಷ್ಟಿಕೋನವನ್ನು ಓದುಗರ ಮುಂದೆ ತೆರೆದಿಡುತ್ತದೆ.

ಸ್ವಾಮೀಜಿಯವರ ಧೈರ್ಯ, ಮಾನವೀಯ ಪ್ರೇಮ, ರಾಷ್ಟ್ರಭಕ್ತಿ ಮತ್ತು ಆಧ್ಯಾತ್ಮಿಕ ದೃಢತೆಯು ಇಂದಿನ ಯುವ ಪೀಳಿಗೆಗೆ ಮತ್ತು ಸಾಧನೆ ಮಾಡಲಿಚ್ಛಿಸುವ ಪ್ರತಿಯೊಬ್ಬರಿಗೂ ಹೇಗೆ ದಾರಿದೀಪವಾಗಬಲ್ಲದು ಎಂಬುದನ್ನು ಈ ಕೃತಿಯು ಸ್ಪಷ್ಟಪಡಿಸುತ್ತದೆ. ಜೀವನದ ಸಂಕಷ್ಟಗಳನ್ನು ಎದುರಿಸಿ, ನೈತಿಕತೆಯ ಹಾದಿಯಲ್ಲಿ ನಡೆಯಲು ಸ್ವಾಮಿಜಿಯವರ ವಿಚಾರಗಳು ಹೇಗೆ ಬಲ ತುಂಬುತ್ತವೆ ಎಂಬುದನ್ನು ಲೇಖಕರು ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

‘ಉದ್ಯೋದನ್’ ಮಾಸಪತ್ರಿಕೆಗೆ ನೇತಾಜಿಯವರು ಬರೆದ ಪತ್ರದಲ್ಲಿ “ಶ್ರೀರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದರಿಗೆ ನಾನೆಷ್ಟು ಋಣಿ ಎಂಬುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೆ? ಅವರ ಪವಿತ್ರವಾದ ಪ್ರಭಾವದಿಂದಲೇ ನನ್ನ ಜೀವನದಲ್ಲಿ ಮೊದಲ ಬಾರಿಗೆ ಆಧ್ಯಾತ್ಮಿಕ ಜಾಗ್ರತಿ ಉಂಟಾಯಿತು. ...ರಾಮಕೃಷ್ಣರು ಮತ್ತು ವಿವೇಕಾನಂದರನ್ನು ಒಂದೇ ವ್ಯಕ್ತಿತ್ವದ ಎರಡು ಆಯಾಮಗಳು ಎಂದು ನಾನು ಭಾವಿಸುತ್ತೇನೆ. ಇಂದು ಸ್ವಾಮೀಜಿ (ವಿವೇಕಾನಂದರು) ಇದ್ದಿದ್ದರೆ ನಾನವರ ಶಿಷ್ಯನಾಗಿರುತ್ತಿದ್ದೆ. ನನ್ನ ಉಸಿರಿರುವವರೆಗೂ ರಾಮಕೃಷ್ಣ, ವಿವೇಕಾನಂದರಿಗೆ ಸಂಪೂರ್ಣ ಶರಣಾಗಿರುತ್ತೇನೆ ಮತ್ತು ಅವರನ್ನು ಆರಾಧಿಸುತ್ತೇನೆ.” ಎಂದು ಬರೆದಿದ್ದಾರೆ. 

ಸುಮಾರು ೮೦ ಪುಟಗಳ ಈ ಪುಸ್ತಕ ನೇತಾಜಿಯವರ, ಸ್ವಾಮಿ ವಿವೇಕಾನಂದರ ಬಗ್ಗೆ ನಮಗೆ ತಿಳಿಯದ ಅಪರೂಪದ ವಿಷಯಗಳನ್ನು ತಿಳಿಸುತ್ತದೆ. ಪೂರಕ ಛಾಯಾ ಚಿತ್ರಗಳು ಮತ್ತು ಕೆಲವೊಂದು ಪತ್ರ ವ್ಯವಹಾರದ ವಿಷಯಗಳು ಪುಸ್ತಕವನ್ನು ವಿಶೇಷವನ್ನಾಗಿಸಿವೆ.