ಶ್ರೀ ಶಾಲಿವಾಹನ ಶಕ ೧೮೪೭, ಕ್ರೋಧನ ಸಂವತ್ಸರದ ವಿಜಯದಶಮಿಯಂದು (ಕ್ರಿ.ಶ. 1925 ಸಪ್ಟೆಂಬರ 27) ಡಾ|| ಕೇಶವ ಬಲಿರಾಮ ಹೆಡಗೇವಾರ (ಡಾಕ್ಟರ್ ಜೀ) ಅವರ ಮನೆಯಲ್ಲಿಯೇ ಸಂಘ ಪ್ರಾರಂಭವಾಯಿತು. ಅಂದು ಅಲ್ಲಿ ಹಾಜರಿದ್ದವರು ಸುಮಾರು ೧೫-೨೦ ಮಂದಿ ಮಾತ್ರ. ಅವರಲ್ಲಿ ಶ್ರೀಗಳಾದ ಭಾವೂಜಿ ಕಾವರೆ, ಅಣ್ಣಾ ಸೋಹನಿ, ವಿಶ್ವನಾಥರಾವ ಕೇಳ್ಕರ್, ಬಾಳಾಜಿ ಹುದ್ದಾರ್ ಹಾಗು ಬಾಪುರಾವ್ ಭೇದಿ ಪ್ರಮುಖರು. ಸ್ವಲ್ಪವೂ ಔಪಚಾರಿಕತೆ ಇಲ್ಲದೇ, "ಇಂದಿನಿಂದ ನಾವು ಸಂಘವನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ಪ್ರಾರಂಭಿಸಿದ ಡಾಕ್ಟರ್ ಜೀ ಸಂಘದ ಪ್ರತ್ಯಕ್ಷ ಕಾರ್ಯಕ್ರಮಗಳ ಸ್ವರೂಪದ ಬಗ್ಗೆ ಎಲ್ಲರ ಸಲಹೆ ಪಡೆದ ನಂತರ "ನಾವೆಲ್ಲರೂ ಶಾರೀರಿಕ ಮತ್ತು ರಾಜಕೀಯ ಶಿಕ್ಷಣವನ್ನು ಪಡೆಯಬೇಕು ಮತ್ತು ಬೇರೆಯವರಿಗೂ ಈ ಶಿಕ್ಷಣವನ್ನು ಕೊಡಬೇಕು" ಎಂದು ತಿಳಿಸಿದರು.
ಯಾವುದೇಹೆಸರು, ಸಂವಿಧಾನ, ಕಾರ್ಯಾಲಯ, ನಿಧಿ ಸಂಗ್ರಹದ ವ್ಯವಸ್ಥೆಗಳಿಲ್ಲದೇ, ಪತ್ರಿಕೆಯಲ್ಲಿ ಪ್ರಚಾರವಿಲ್ಲದೇ ಶಾಂತ ವಾಗಿ ಆರಂಭವಾದ ಸಂಘದ ಸಸಿಗೆ ಆದಿನಗಳಲ್ಲಿ ಡಾಕ್ಟರ್ ಜೀ ಅವರ ನಿರ್ಮಲ ಧ್ಯೇಯವಾದಿ ವ್ಯಕ್ತಿತ್ವ ಹಾಗು ಅವರ ಅಂತ: ಕರಣದ ತಳಮಳಗಳೇ ನೀರು ಗೊಬ್ಬರಗಳಾಗಿದ್ದವು.
ಮುಂದೆ ಕೆಲವು ವರ್ಷಗಳ ನಂತರ ಸ್ವಾತಂತ್ರ್ಯವೀರ ಸಾವರ್ಕರರಿಗೆ, ಸಂಘದ ಪರಿಚಯವಾದಾಗ ೧೯೨೫ರ ವಿಜಯದಶಮಿಯಂದು ಅತೀ ಚಿಕ್ಕದಾಗಿ, ಜಗತ್ತಿನ ಕಣ್ಣಿಗೆ ಅಗೋಚರವಾಗಿ ಆರಂಭವಾದ ಈ ಹಿಂದೂ ಸಂಘಟನೆಯ ಕಾರ್ಯವನ್ನು ಅವರು "ಮನುವಿನ ಮೀನು" ಎಂದು ಅರ್ಥಪೂರ್ಣವಾಗಿ ಕರೆದಿದ್ದರು.
ಪ್ರತಿಕ್ರಿಯೆ (3)