ಆಯಸ್ಕಾಂತೀಯ ವ್ಯಕ್ತಿತ್ವ
ಆ ದಿನಗಳಲ್ಲಿ, ಯಾರೆಂದವರಿಗೆ ಸಂಘದಲ್ಲಿ ಪ್ರವೇಶ ಸಿಗುತ್ತಿರಲಿಲ್ಲ. ಇಬ್ಬರು ಹಳೇ ಸ್ವಯಂಸೇವಕರ ಮೂಲಕ ಮಾತ್ರ ಹೊಸಬನಿಗೆ ಪ್ರವೇಶ ಸಿಗುತ್ತಿತ್ತು. ಅಂತಹವರನ್ನು ೨-೩ ಬಾರಿ ಸ್ವತ: ಡಾಕ್ಟರ್ ಜೀ ಮಾತಾಡಿಸುತ್ತಿದ್ದರು. ಮಾತುಕತೆಯಲ್ಲಿ ಅವರ ಹೆಸರು, ಊರು, ವಯಸ್ಸು, ಶಿಕ್ಷಣ, ಹಿರಿಯರು ಇತ್ಯಾದಿ ವಿಚಾರಿಸುವುದರೊಂದಿಗೆ ಅವರ ಸ್ವಭಾವ ಗುಣ ಇತ್ಯಾದಿಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು. "ಸಂಘಕ್ಕೆ ಸೇರಲು ಏಕೆ ಇಷ್ಟಪಡುವೆ?" "ಸಂಘದೊಂದಿಗೆ ಭಿನಾಭಿಪ್ರಾಯ ಬಂದರೆ ಏನು ಮಾಡುವೆ?" "ಸ್ವಯಂಸೇವಕನಾದಮೇಲೆ ಪೋಲೀಸರು ಬೆನ್ನುಹತ್ತಿದರೆ ಏನು ಮಾಡುವಿ?" ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದರಿಂದ ಅಭ್ಯರ್ಥಿಯ ಮನೋಭಾವ ತಿಳಿಯುವುದರೊಂದಿಗೆ, ಅಂದಿನ ಸಮಾಜದ ಸ್ಥಿತಿ ಮತ್ತು ತನ್ನ ಕರ್ತವ್ಯದ ಅರಿವು ಅಭ್ಯರ್ಥಿಯಲ್ಲಿ ಉಂಟಾಗುವಂತೆ ಅವರು ಮಾಡುತ್ತಿದ್ದರು. "ದಂಡದ ಶಿಕ್ಷಣ ಏಕೆ ಬೇಕು?", "ಇನ್ನೆಷ್ಟು ಹೊಸಬರನ್ನು ನೀನು ತರಬಲ್ಲೆ?" ಇತ್ಯಾದಿ ಪ್ರಶ್ನೆಗಳಿಂದ ಎಲ್ಲರ ತಿಳಿವಳಿಕೆಯ ಆಳವನ್ನು ಅಳೆಯುತ್ತಿದ್ದರು. ಹೆಚ್ಚಿನ ತಿಳಿವಳಿಕೆಯುಳ್ಳವರನ್ನು "ಸ್ವರಾಜ್ಯದ ಅರ್ಥವೇನು?" "ಸ್ವರಾಜ್ಯ ಬೇಕೆನ್ನುವವರೆಷ್ಟು?, ಪ್ರತ್ಯಕ್ಷ ಪ್ರಯತ್ನ ಮಾಡುವವರೆಷ್ಟು?" ಇಂತಹ ಪ್ರಷ್ನೆಗಳಿಗೆ ಉತ್ತರಿಸಬೇಕಾಗುತ್ತಿತ್ತು. ಭೇಟಿಯ ನಂತರ ೩-೪ ದಿನಗಳು ಕಳೆದು ಬರಲು ತಿಳಿಒಸಲಾಗುತ್ತಿತ್ತು.
ಒಮ್ಮೆ ಭೇಟಿಯಾದವರಿಗೆಲ್ಲ ಅವರನ್ನು ಪುನ: ಪುನ: ಕಾಣಬೇಕೆನಿಸುವಂತಹ ವ್ಯಕ್ತಿತ್ವ ಡಾಕ್ಟರ್ ಜೀ ಅವರದು. ಅವರ ಮಾತುಗಳು ತುಟಿಗಳಿಂದ ಅಲ್ಲ, ಹೃದಯದಿಂದಲೇ ಹೊಮ್ಮಿಬರುತ್ತಿದ್ದವು. ಹೂವಿನೊಂದಿಗೆ ಸುಗಂಧ ಅಭಿನ್ನವಾಗಿರುವಂತೆ ಅವರ ತ್ಯಾಗಪೂರ್ಣ ಹಾಗೂ ಧ್ಯೇಯನಿಷ್ಠ ಜೀವನದಲ್ಲಿ ಕೃತಿ ಮತ್ತು ಮಾತುಗಳು ಒಂದಾಗಿರುತ್ತಿದ್ದವು. ಕಾಣಲು ಬಂದವರನ್ನು ಮನೆ ಬಾಗಿಲವರೆಗೆ ಬಂದು ಬೀಳ್ಕೊಡುವಾಗ "ಪುನ: ಭೇಟಿ ಯಾವಾಗ?" ಎಂಬ ಪ್ರಶ್ನೆ ಕೇಳುತ್ತಿದ್ದರು. ಹೊರಟು ನಿಂತವರೂ ಸಹ ಒಂದು ಕ್ಷಣ ತಡೆದು ನಂತರ ಹೆಜ್ಜೆಕೀಳುವಂತೆ ಅವರ ಸಹವಾಸ ಮೋಡಿ ಇರುತ್ತಿತ್ತು.

ಚಿತ್ರದಲ್ಲಿ, ಡಾಕ್ಟರ್ ಜೀ, ಗುರೂಜಿ ಮತ್ತು ಸ್ವಯಂಸೇವಕರು
ಮೋಹಿತೆವಾಡ - ಮೊದಲ ಸಂಚಲನ - ಮೊದಲ ಶಂಖ
ನಿತ್ಯ ಬೆಳೆಯುತ್ತಿರುವ ಸಂಘದ ಚಟುವಟುಕೆಗಳಿಗೆ ಇತವಾರ ದರವಾಜಾ ಶಾಲೆಯ ಮೈದಾನ ಸಾಲದೆನಿಸಿದಾಗ, ಹಾಳುಬಿದ್ದ ಮೊಹಿತೆವಾಡದ ಮೈದಾನವನ್ನು ಸರಿಗೊಳಿಸಿ ಉಪಯೋಗಿಸಬೇಕೆಂದು ನಿರ್ಧರಿಸಲಾಯಿತು. ನಿತ್ಯ ಸಂಘ ಆರಂಭವಾಗುವಮೊದಲು ಹಾಗು ರಜಾ ದಿನಗಳಲ್ಲಿ ಸ್ವತ: ಡಾಕ್ಟರ್ ಜೀ ಅವರು ಹಾರೆ, ಗುದ್ದಲಿ, ಬುಟ್ಟಿಗಳನ್ನು ತಂದು ಇತರ ಸ್ವಯಂಸೇವಕರೊಡನೆ ಮೈದಾನವನ್ನು ಸ್ವಚ್ಛಗೊಳಿಸಿ ಸಂಘಸ್ಥಾನಕ್ಕೆ ಯೋಗ್ಯವಾಗಿ ರೂಪಿಸಿದರು.
ಸಂಘದ ಮೊಟ್ಟಮೊದಲ ವಾರ್ಷಿಕೋತ್ಸವ ಡಾಕ್ಟರ್ ಜೀ ಅವರ ಮನೆಯಲ್ಲಿಯೇ ಶ್ರೀ ಬಾಪೂರಾವ್ ಅಂಬಾರ್ಡೇಕರ್ ಅವರ ಧ್ಯಕ್ಷತೆಯಲ್ಲಿ ನಡೆಯಿತು. ಅಂದು ಸ್ವಯಂಸೇವಕರ ಸಲುವಾಗಿ ಒಂದು ಗ್ರಂಥಾಲಯವನ್ನು ಡಾಕ್ಟರ್ ಜೀ ಆರಂಭಿಸಿದರು. ಉತ್ಸವದ ನಂತರ ಎಲ್ಲ ಸ್ವಯಂಸೇವಕರು ರಾಜಾಬಕ್ಷಾದ ಪ್ರಸಿದ್ಧ ಮಾರುತಿ ಗುಡಿಯತನಕ ಸೀಮೋಲ್ಲಂಘನ ಮಾಡಿದರು.
ಸಂಘದ ಮೊಟ್ಟಮೊದಲ ಗಣವೇಶಧಾರಿ ಸ್ವಯಂಸೇವಕರ ಸಂಚಲನದಲ್ಲಿ ಇದ್ದವರು ೩೦ ಮಂದಿ. ಸೀಟಿಯ ಅಂಕತಾಲದೊಂದಿಗೆ ನಡೆದ ಕಾರ್ಯಕ್ರಮ ನೋಡಿದ ನಾಗಪುರದ ಹಿಂದೂಗಳಲ್ಲಿ ತುಂಬ ಆಶ್ಚರ್ಯ, ಸಂತೋಷ, ಅಭಿಮಾನ ಅದೊಂದು ಅಪೂರ್ವ ಅನುಭವ. ಸಂಘದ ಕಾರ್ಯಕ್ರಮಕ್ಕೆ ಇನ್ನಷ್ಟು ತರುಣರು ಆಕರ್ಷಿತರಾದರು.
ಗ್ವಾಲಿಯರದ ಓರ್ವ ಸೈನಿಕ ಅಧಿಕಾರಿ ಶ್ರೀ ಉಪಾಸನಿ ಎಂಬುವವರು ರಜೆಯಲ್ಲಿ ಊರಿಗೆ ಬಂದಾಗ ಸಂಘದ ಸ್ವಯಂಸೇವಕರಿಗೆ ತಮ್ಮ ಕೋಣೆಯಲ್ಲಿ ವಿವಿಧ ವ್ಯೂಹರಚನೆಗಳನ್ನು ಕಲಿಸಿ ಅವರನ್ನು ಪರಿಣಿತಗೊಳಿಸುತ್ತಿದ್ದರು.
ಸೈನಿಕ ಶಿಕ್ಷಣದೊಂದಿಗೆ ಘೋಷವೂ ಬೇಕೆಂದು ಸ್ವಯಂಸೇವಕರಿಗೆನಿಸಿತು. ಆದರೆ ಹಣವೆಲ್ಲಿಂದ ಬರಬೇಕು? ಬಹುಬೇಗನೆ ಯೋಜನೆಯೊಂದು ತಯಾರಾಯಿತು. ಗೋಕುಲಾಷ್ಠಮಿಯ ನಿಮಿತ್ತ ಶ್ರೀಮಂತ ಬುಟಿ ಎಂಬುವವರ ಮನೆಯಲ್ಲಿ ನಡೆಯಲಿದ್ದ ಬ್ರಾಹ್ಮಣ ಭೋಜನಕ್ಕೆ ಕೆಲವು ತರುಣ ಸ್ವಯಂಸೇವಕರನ್ನು ಆರಿಸಿ ಕಳಿಸುವ ವಿಚಾರ ಮಾಡಲಾಯಿತು. ನಿತ್ಯ ಸುಮಾರು ೩ ಗಂಟೆಗಳಕಾಲ ಕೊಟ್ಟು ನಾಲ್ಕುಮೈಲು ನಡೆದು ಊಟ ಪೂರೈಸಿ ದಕ್ಷಿಣೆ ಸಂಗ್ರಹಿಸಿ ತರುತ್ತಿದ್ದವರು ಶ್ರೀಗಳಾದ ಬಾಳಾಸಾಹೇಬ್ ಆಪ್ಟೆ, ದಾದಾ ಪರಮಾರ್ಥ, ಬಾಳಾಸಾಹೇಬ ದೇವರಸ ಹಾಗು ಕೃಷ್ಣರಾವ್ ಮೊಹರೀರ ಮೊದಲಾದವರು. ಈ ಹಣದಿಂದಲೇ ಸಂಘದ ಮೊದಲ ಶಂಖವನ್ನು ಖರೀದಿಸಲಾಯಿತು.
___LINK_OPEN_title="ಚಿತ್ರ ಕೃಪೆ ಅಂತರ್ಜಾಲ" href="http://www.flickr.com/photos/30910161@N07/3548458565/" target="_blank"___ಚಿತ್ರ ಕೃಪೆ ಅಂತರ್ಜಾಲ
ಪ್ರತಿಕ್ರಿಯೆ (2)