ನಿತ್ಯ ಶಾಖೆಗೆ ನಾಂದಿ

   ೧೯೨೬ ರ ಮೇ ೧೮ ರಿಂದ ನಿತ್ಯ ಸೇರಿ ಕಾರ್ಯಕ್ರಮಗಳನ್ನು ನಡೆಸುವ ಪದ್ಧತಿ ಬೆಳಕಿಗೆ ಬಂದಿತು. ಶಾರೀರಿಕ ಶಿಕ್ಷಣಕ್ಕಾಗಿ ಶ್ರೀ ಅಣ್ಣಾ ಸೋಹನಿ ಅವರು ಆಂಗ್ಲ ಆಜ್ನೆಗಳಲ್ಲದೇ ಸಂಸ್ಕೃತ, ಹಿಂದಿ, ಮರಾಠಿ ಭಾಷೆಗಳನ್ನು ಉಪಯೋಗಿಸಿ "ಸಾವಧಾನ್", "ದಕ್ಷ", "ಆರಮ" ಇತ್ಯಾದಿ ಹೊಸ ಆಜ್ನೆಗಳನ್ನು ಪ್ರಯೋಗಿಸತೊಡಗಿದರು.

ಶಾರೀರಿಕ ಕಾರ್ಯಕ್ರಮಗಳಜೊತೆ ಬುದ್ಧಿ, ಹೃದಯ, ಮನಸ್ಸುಗಳ ಸಂಸ್ಕಾರಕ್ಕಾಗಿ ಮೊದಲು ಭಗವಾ ಧ್ವಜಕ್ಕೆ ಪ್ರಣಾಮ್ ಮಾಡಿ ನಂತರ ಮಿಕ್ಕ ಶಿಕ್ಷಣ ನಡೆಸುವ ರೂಢಿ ಜಾರಿಗೆ ಬಂತು. ನಿತ್ಯ ಧ್ಯೇಯದ ಚಿಂತನೆ ಮಾಡುವ ಸಲುವಾಗಿ ಕೊನೆಯಲ್ಲಿ ಎಲ್ಲರೂ ಸೇರಿ ಪ್ರಾರ್ಥನೆ ಮಾಡುವುದು ಆರಂಭವಾಯಿತು. ಆ ದಿನಗಳಲ್ಲಿ ಸಂಘದ ಪ್ರಾರ್ಥನೆ ಹೀಗಿತ್ತು...

    ನಮೋ ಮಾತೃಭೂಮೀ ಜಿಥೇ ಜನ್ಮಲೋ ಮೀ

    ನಮೋ ಹಿಂದುಭೂಮೀ ಜಿಥೇ ವಾಢಲೋ ಮೀ

    ನಮೋ ಧರ್ಮ ಭೂಮೀ ಜಿಯೇ ಚ್ಯಾಚಕಾಮಿ

    ಪಡೋ ದೇಹ ಮಾಝಾ ಸದಾ ತೀ ನಮೀ ಮೀ

  

    ಹೇ ಗುರೋ ಶ್ರೀ ರಾಮದೂತಾ, ಶೀಲ ಹಮಕೋ ದೀಜಿಯೇ

    ಶೀಘ್ರ ಸಾರೆ ಸದ್ಗುಣೋಂಸೆ ಪೂರ್ಣ ಹಿಂದೂ ಕೀಜಿಯೆ

    ಲೀಜಿಯೇ ಹಮಕೋ ಶರಣಮೇ ರಾಮ ಪಂಥೀ ಹಮಬನೇ

    ಬ್ರಹ್ಮಚಾರೀ ಧರ್ಮ ರಕ್ಷಕ ವೀವ್ರತಧಾರೀ ಬನೇ

 

    ಶ್ರೀ ಅಣ್ಣಾ ಸೋಹನಿ ಅವರು ಕಲಿಸುತ್ತಿದ್ದ ದಂಡದ ಶಿಕ್ಷಣ ಮತ್ತು ಅದಕ್ಕಾಗಿಯೇ ವಿಕಾಸಗೊಳಿಸಿದ ೨ ಕಾಲುಗಳಮೇಲೆ ಸಮಭಾರ ಹಾಕಿ ಬಗ್ಗಿನಿಲ್ಲುವ "ಸಿದ್ಧ ಸ್ಥಿತಿ" ತುಂಬ ವೈಶಿಷ್ಠ್ಯಪೂರ್ಣವಾಗಿದ್ದವು. ಅದಕ್ಕೂ ಮಿಗಿಲಾಗಿ "ಯುದ್ಧ ಯೋಗ"ವು ತನ್ನ ಆಕ್ರಮಣಶೀಲತೆ, ಆವೇಶ ಮತ್ತು ಸಂರಕ್ಷಣ ಕ್ಷಮತೆಗಳಿಂದ ಅಪೂರ್ವವೆನಿಸಿ ಹೆಚ್ಚಿನ ತರುಣರನ್ನು ಸಂಘಕ್ಕೆ ಆಕರ್ಷಿಸತೊಡಗಿತು.

 

ಶಾರೀರಿಕ ಮತ್ತು ಬೌದ್ಧಿಕ ವರ್ಗಗಳು

 

   ಇತವಾರ ದರವಾಜ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರತಿಭಾನುವಾರ ಬೆಳಗ್ಗೆ ೫ ಗಂಟೆಗೆ ಏಕತ್ರೀಕರಣ ನಡೆಯುತ್ತಿತ್ತು. ಡಾಕ್ಟರ್ ಜೀ ಅವರ ಸ್ನೇಹಿತರಾದ ಶ್ರೀ ಮಾರ್ತಾಂಡ ರಾವ್ ಜೋಗ್ ಅವರು ಅಂದು ಸಯಂಸೇವಕರಿಗೆ ಸೈನಿಕ ಶಿಕ್ಷಣ ನೀಡುತ್ತಿದ್ದರು.

 

   ಇದೇರೀತಿ ಪ್ರತಿ ಭಾನುವಾರ ಮತ್ತು ಗುರುವಾರ ಸಯಂಸೇವಕರಿಗೆ ದೇಶದ ಪರಿಸ್ಥಿತಿ, ತಮ್ಮ ಕರ್ತವ್ಯ ಹಾಗು ಸಂಘಟನೆಯನ್ನು ಬಲಗೊಳಿಸುವ ವಿಚಾರ ತಿಳಿಸುವ ಸಲುವಾಗಿ "ರಾಜಕೀಯ ವರ್ಗ"ಗಳು ನಡೆಯುತ್ತಿದ್ದವು. ಈ ವರ್ಗಗಳು ಮೊದಲು "ಅನಾಥ ವಿದ್ಯಾರ್ಥಿಗೃಹ" ದಲ್ಲಿ ಆರಂಭವಾದವು. ಕೆಲವು ದಿನಗಳನಂತರ ಶ್ರೀ ಬಡಕಸ್, ಶ್ರೀ ಟಲಾಟೂಲೆ, ಶ್ರೀ ಮಾರ್ತಾಂಡ ರಾವ್ ಜೋಗ್ ಹಾಗು ಡಾಕ್ಟರ್ ಜೀ ಅವರ ಮನೆಯಲ್ಲಿ ಸರದಿಯಂತೆ ನಡೆಯುತ್ತಿದ್ದವು. ಈ ವರ್ಗದಲ್ಲಿ ಡಾಕ್ಟರ್ ಜೀ ಮತ್ತು ಶ್ರೀ ವಿಶನಾಥರಾವ್ ಕೇಳ್ಕರ್ ಅವರಲ್ಲದೇ ತರುಣರ ಪೈಕಿ ಶೀ ಬಾಳಾಜಿ ಹುದ್ದಾರ್, ಶ್ರೀ ದಾದಾ ಪರಮಾರ್ಥ ಹಾಗು ಶ್ರೀ ಭೈಯ್ಯಾಜಿ ದಾಣಿ ಅವರನ್ನು ಮಾತಾಡುವಂತೆ ಪ್ರೋತ್ಸಾಹಿಸಲಾಗುತ್ತಿತ್ತು. ೧೯೨೭ ರ ನಂತರ "ರಾಜಕೀಯ ವರ್ಗ" ಗಳಿಗೆ "ಬೌದ್ಧಿಕ ವರ್ಗ" ಎಂಬ ಹೆಸರು ಬಳಕೆಗೆ ಬಂತು.

 

   ಡಾಕ್ಟರ್ ಜೀ ಸಂಘದಲ್ಲಿ ರಕ್ಷಬಂಧನ ಉತ್ಸವವನ್ನು ಆಚರಿಸುವ ಯೋಚನೆ ಮಾಡಿದರು. ಸಮಾಜದಲ್ಲಿ ರಾಷ್ಟ್ರೀಯತೆ ಮತ್ತು ಬಂಧುತ್ವದ ಭಾವನೆಗಳ ಸಂಸ್ಕಾರ ನೀಡಲು ಯೋಗ್ಯ ಸಾಧನವಾಗಿ ಅವರು ರಕ್ಷಾಬಂಧನ ಉತ್ಸವವನ್ನು ಕಂಡರು. ಮೊಟ್ಟಮೊದಲಿನ ರಕ್ಷಾಬಂಧನ ೧೯೨೬ ರಲ್ಲಿ ತುಲಸೀಬಾಗ್ ನಲ್ಲಿ ಮದ್ಯಾನ್ಹ ೨ ಗಂಟೆಗೆ ಬೈಠಕ್ ರೂಪದಲ್ಲಿ ಆಚರಿಸಲಾಯಿತು.