ಮನೆಗೆ ಯಾರಾದರೂ ಅತಿಥಿಗಳು, ಹಿರಿಯರು ಬಂದಾಗ ಎದ್ದು ನಿಂತು ವಿಚಾರಿಸುವುದು ರೂಢಿ. ಹಾಗೆಯೆ ನಾವು ಕರ್ತವ್ಯ ನಿರ್ವಹಿಸುವಲ್ಲಿ ಸಹ ಕಛೇರಿಯೊಳಗೆ ಹಿರಿಯರೋ, ಇಲಾಖೆಯ ಅಧಿಕಾರಿಗಳೋ ಬಂದಾಗ ಗೌರವ ಸೂಚಕವಾಗಿ ಎದ್ದು ನಿಲ್ಲುತ್ತೇವೆ. ನಮ್ಮ ಹಿರಿಯರು ಕಲಿಸಿದ ಸಂಸ್ಕಾರವಿದು. ಮನುಸ್ಮೃತಿಯಲ್ಲೂ ಈ ಬಗ್ಗೆ ಉಲ್ಲೇಖವಿದೆ.

ಉರ್ಧ್ವಂ ಪ್ರಾಣಾ ಉತ್ಕ್ರಾ ಮಂತಿ,ಯೂನ:ಸ್ಥವಿರ ಆಯತಿ,

ಪ್ರತ್ಯುಫ್ಥಾನನಾಭಿವಾದಾಭ್ಯಾಂ ,ಪುನಸ್ತಾನ್ ಪ್ರತಿಪದ್ಯತೇ

ತನಗಿಂತ ದೊಡ್ಡವರನ್ನು ಜ್ಞಾನಿಗಳನ್ನು ಆದರಿಸುವುದು ನಮ್ಮ ಕರ್ತವ್ಯ. ಮಾಡದಿದ್ದರೆ ಏನಾಗುತ್ತದೆ? ಎಂಬ ಜಿಜ್ಞಾಸೆ ಇರುವುದು ಸಹಜ. ನಮ್ಮ ಕರ್ಮಶಕ್ತಿ ಲುಪ್ತವಾಗುತ್ತದೆ, ಮತ್ತೇನೂ ಆಗದು. ಹಿರಿಯರು ಬಂದಾಗ ಎದ್ದು ನಿಲ್ಲದಷ್ಟೂ ಸೋಮಾರಿಗಳೇ ನಾವು? ಆಲಸಿ ಯಾವತ್ತಿದ್ದರೂ ಕ್ರಿಯಾಶಕ್ತಿ ಶೂನ್ಯನಂತೆ.

ಆದರೆ ಈ ಸಂಸ್ಕೃತಿ ಕೆಲವೆಡೆ, ಕೆಲವರಲ್ಲಿ ಮಾಯವಾದ್ದನ್ನು ನೋಡುತ್ತಿದ್ದೇವೆ. ನಾವೆಷ್ಟೇ ದೊಡ್ಡವರಾಗಲಿ, ಹಣವಿರಲಿ, ಹಲವಾರು ಪ್ರಶಸ್ತಿ ಪುರಸ್ಕಾರ ಪಡೆದಿರಲಿ, ನಮ್ಮ ಆಚಾರ-ವಿಚಾರ, ನಡೆನುಡಿ ಮರೆಯದಿರೋಣ.

ನಮ್ಮ ಹಳ್ಳಿಕಡೆ ಒಂದು ನಾಣ್ನುಡಿ ಇದೆ 'ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು'. ಒಂದು ರೀತಿಯಲ್ಲಿ ಒಬ್ಬರ ಆಸ್ತಿ, ಅಂತಸ್ತು, ಆತನ ಗುಣಾವಗುಣಗಳು, ನಡೆನುಡಿ, ಜೀವನದ ರೀತಿ-ನೀತಿ ಅವಲೋಕಿಸಿ ಮಾಡುವ ನಿರ್ಧಾರ ಎನ್ನಬಹುದು. ಏನೂ ಇಲ್ಲದವ 'ಎಲ್ಲವೂ ಇದೆ' ಎಂದು ತೋರ್ಪಡಿಸುವುದು ಸಲ್ಲದು. ಎಷ್ಟಿದೆಯೋ ಅಷ್ಟೇ ಸಾಕು. ಪ್ರದರ್ಶನ ಯಾಕೆ? ನಾವು ಡಿಗ್ರಿ ಸಂಪಾದನೆ, ಕೈತುಂಬಾ ಸಂಬಳ, ಬಂಗ್ಲೆ,ಐಷಾರಾಮಿ ಬದುಕು ಹೊಂದಿದವರಾಗಿ, ಆಂತರಿಕವಾದ ಯಾವುದೇ ಉತ್ತಮ ಗುಣವಿಲ್ಲದಿದ್ದರೆ ಇದಕ್ಕೆಲ್ಲ ಬೆಲೆಯಿಲ್ಲ. ಬಾಹ್ಯದಂತೆ ಆಂತರಿಕವಾಗಿಯೂ ಶ್ರೀಮಂತರೆನಿಸೋಣ, ಹೃದಯ ಶ್ರೀಮಂತಿಕೆಯಿರಲಿ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ