ನಿಮ್ಮ ಬದುಕಿನಲ್ಲಿ ಎಷ್ಟು ಗೆಳೆಯರನ್ನು ಕಳೆದುಕೊಂಡಿದ್ದೀರಿ? ಈ ಪ್ರಶ್ನೆಯನ್ನು ಉತ್ತರಿಸುವುದು ಕಷ್ಟ. ಗೆಳೆಯರಾದವರು ದೂರದೂರಿಗೆ ಅಥವಾ ವಿದೇಶಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಿದಾಗ ನಿಮ್ಮಿಂದ ದೂರವಾಗುವುದು ಸಹಜ.

ಆದರೆ, ನಿಮ್ಮ ತಪ್ಪಿನಿಂದಾಗಿ ಎಷ್ಟು ಗೆಳೆತನಗಳು ಅಂತ್ಯವಾದವು ಎಂಬುದನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ವರುಷಗಳಿಂದ ಬೆಳೆದು ಬಂದ ಗೆಳೆತನಕ್ಕೆ ಬೆಂಕಿಯಿಟ್ಟು ನಾಶ ಮಾಡಲು ಒಂದು ಮಾತು ಸಾಕು.

“ನನಗೆ ಹೀಗೆ ಮಾಡಿದಿಯಲ್ಲ, ಹಾಳಾಗಿ ಹೋಗು.” “ನನ್ನ ಬೆನ್ನಿಗೆ ಚೂರಿ ಹಾಕಿದಿಯಲ್ಲ, ನಿನ್ನ ಸಹವಾಸ ಸಾಕು.” “ತಲೆ ಕೆಟ್ಟಿದೆಯಾ ನಿನಗೆ?” “ನಿನ್ನ ಚಾಲಾಕಿತನ ಎಲ್ಲ ಗೊತ್ತು ನನಗೆ. ಇನ್ನು ನಿನ್ನ ಮುಖ ತೋರಿಸಬೇಡ.” “ಹೇಗೆ ಬೇಕಾದರೂ ಮಾತು ಬದಲಾಯಿಸುತ್ತಿಯಾ… ನಾಚಿಕೆ ಆಗೋದಿಲ್ವಾ ನಿನಗೆ?” “ಬುದ್ಧಿಯಲ್ಲದವನೇ ತೊಲಗಾಚೆ.” - ಇಂತಹ ಒಂದೇ ಒಂದು ಮಾತು ಸಾಕು - ನೀವು ವರುಷಗಳಿಂದ ಜತನದಿಂದ ಉಳಿಸಿಕೊಂಡು ಬಂದ ಗೆಳೆತನವನ್ನು ಧ್ವಂಸ ಮಾಡಲು. ಇಂತಹ ಹಲವು ಘಟನೆಗಳನ್ನು ಕಂಡಿದ್ದೇನೆ.

ಸಿಟ್ಟಿನಿಂದ ಅಥವಾ ಆವೇಶದಿಂದ ಇಂತಹ ಮಾತು ಆಡಿ ಬಿಡುತ್ತೀರಿ - ಅದನ್ನು ಕೇಳಿದ ಗೆಳೆಯ (ಅಥವಾ ಗೆಳತಿ) ಎಷ್ಟು ನೊಂದುಕೊಳ್ಳುತ್ತಾನೆಂಬ ಯೋಚನೆ ಮಾಡದೆ. ಹೀಗೆ ಆಡಿದ ಮಾತನ್ನು ಹಿಂದೆ ತೆಗೆದುಕೊಳ್ಳಲಾಗುತ್ತದೆಯೇ? ಸಾಧ್ಯವಿಲ್ಲ.

ಅದಲ್ಲದೆ, ನೀವು ಆಡಿದ ಮಾತು ಸರಿಯಲ್ಲ ಎಂದು ಗೊತ್ತಿದ್ದರೂ, ನಿಮ್ಮ ತಪ್ಪು ಒಪ್ಪಿಕೊಳ್ಳಲು ಅಹಂ ಅಡ್ಡ ಬರುತ್ತದೆ. ತಪ್ಪು ನಿಮ್ಮದಲ್ಲ; ತಪ್ಪೆಲ್ಲಾ ಆ ಗೆಳೆಯನದ್ದೇ ಎಂದು ನೀವು ವಾದ ಶುರು ಮಾಡುತ್ತೀರಿ. ಇದರಿಂದಾಗಿ ಸುಟ್ಟು ಹೋದ ಗೆಳೆತನ ಮತ್ತೆ ಹುಟ್ಟುವ ಸಾಧ್ಯತೆಯೇ ಸತ್ತು ಹೋಗುತ್ತದೆ.

ಆದ್ದರಿಂದ, ಗೆಳೆತನ ಉಳಿಸಿಕೊಳ್ಳಲು ನಿರಂತರ ಎಚ್ಚರ ಅಗತ್ಯ. ಗೆಳೆಯರೊಂದಿಗೆ ಪ್ರತಿಯೊಂದು ಮಾತನ್ನು ತೂಗಿ ನೋಡಿ ಆಡಬೇಕಾಗುತ್ತದೆ. ಪ್ರತಿಯೊಂದು ವರ್ತನೆಯನ್ನು ವಿಮರ್ಶೆಗೆ ಒಡ್ಡಬೇಕಾಗುತ್ತದೆ. ಯಾಕೆಂದರೆ ಒಳ್ಳೆಯ ಗೆಳೆಯರು ವಿರಳ. ಅವರನ್ನು ಕೊನೆಯ ವರೆಗೂ ಉಳಿಸಿಕೊಳ್ಳುವುದು ಜಾಣತನ.

ಸಾಂದರ್ಭಿಕ ಫೋಟೋ: ಹಿರಿಯ ಗೆಳೆಯರ ಭೇಟಿ … ಕೃಪೆ: ಅಡೋಬ್ ವೆಬ್-ಸೈಟ್