ಅಡ್ಡೂರು ಶಿವಶಂಕರ ರಾಯರ ಮತ್ತು ನನ್ನ ಗೆಳೆತನ ಸುಮಾರು ನಲವತ್ತೈದು ವರುಷಗಳ ದೀರ್ಘ ಅವಧಿಯದ್ದು. ನಮ್ಮ ಸ್ನೇಹ ಸಂಬಂಧ ಅದರದ್ದೇ ಆದ ಸ್ವಂತಿಕೆಯ ಆಧಾರದಲ್ಲಿ ನಿಂತಿದೆ ಎನ್ನಬಹುದು. ಅವರು ನನ್ನಿಂದ ಪ್ರಾಯದಲ್ಲಿ ಸ್ವಲ್ಪ ಹಿರಿಯರು. ಅವರ ತಂದೆ ದಿ.ಕೃಷ್ಣಯ್ಯನವರು ಮತ್ತು ನನ್ನ ತಂದೆ ದಿ.ಇಡ್ಯ ವೆಂಕಟರಾಯರು ಸುಮಾರು ತೊಂಬತ್ತು ವರುಷಗಳ ಹಿಂದೆ, ಮದರಾಸಿನಲ್ಲಿ ವೈದ್ಯಕೀಯ ಶಿಕ್ಷಣದ (ಎಲ್.ಎಂ.ಎಸ್. ಪದವಿ) ವಿದ್ಯಾರ್ಥಿಗಳಾಗಿದ್ದಾಗ ಒಂದೆಡೆ ಊಟ ಮತ್ತು ವಸತಿಗಾಗಿ ಬಿಡಾರ ಮಾಡಿಕೊಂಡಿದ್ದರು. ಹಾಗಾಗಿ ನಮ್ಮ ಎರಡೂ ಕುಟುಂಬಗಳೊಂದಿಗೆ ಅಂದಿನಿಂದಲೇ ಪರಿಚಯ ಹಾಗೂ ಬಾಂಧವ್ಯಗಳಿದ್ದರೂ, ಇವು ನಮ್ಮ ಗೆಳೆತನದ ಮುಖ್ಯ ಬೆಸುಗೆಯಾಗಿರಲಿಲ್ಲ. ನಮ್ಮಿಬ್ಬರಿಗೂ ಒಂದೇ ವೃತ್ತಿಯ (ಕೃಷಿ) ಮೇಲಿರುವ ಆಸಕ್ತಿ ಮತ್ತು ಅಭಿರುಚಿಗಳು ನಮಿಬ್ಬರನ್ನು ಹತ್ತಿರ ತಂದವು ಮತ್ತು ಇದರಿಂದಾಗಿ ನಾವು ಸ್ನೇಹಿತರಾಗಲು ಸಹಾಯವಾಯಿತು.
ನನ್ನನ್ನು ಕೃಷಿಕನನ್ನಾಗಿ ಮಾಡಿದ್ದು ನಿಸರ್ಗದ ಮೇಲಿನ ಪ್ರೀತಿಯಾಗಿದ್ದರೆ, ಶಿವಶಂಕರರಾಯರನ್ನು ಕೃಷಿಕರನ್ನಾಗಿ ಮಾಡಿದ್ದು ರೈತಾಪಿ ವರ್ಗಕ್ಕೆ ಆದಾಯ ಹೆಚ್ಚಿಸುವ ಮತ್ತು ಜ್ಞಾನಪ್ರಸಾರದ ಅವರ ಗೀಳು. ಈ ವಿಚಾರದಲ್ಲಿ ಅವರಿಗೆ ಇಲಾಖೆಗಳ ಮೇಲೆ ಹೆಚ್ಚು ವಿಶ್ವಾಸ ಮತ್ತು ಅವರೊಡನೆ ಒಡನಾಟ ಅತಿ ಹೆಚ್ಚು. ಹಲವು ಇಲಾಖೆಗಳು ಏರ್ಪಡಿಸುತ್ತಿದ್ದ ಸಭೆ ಮತ್ತು ಚರ್ಚಾ ಕೂಟಗಳಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆವು. ಕೆಲವೊಮ್ಮೆ ಅಭಿಪ್ರಾಯ ಭೇದಗಳಿದ್ದರೂ ನಮ್ಮೊಳಗೆ ಬಹುತೇಕ ಒಮ್ಮತವಿತ್ತು. ಹೀಗೆ ನಮ್ಮ ಸ್ನೇಹ ಹೆಚ್ಚಿತು, ಪಕ್ವವಾಯಿತು, ಪ್ರೀತಿ ಆದರಗಳು ಬೆಳೆದವು. ಅಂದರೆ ಭಿನ್ನತೆ ಇದ್ದರೂ ಅದರಿಂದ ತೊಂದರೆ ಬಾರದೆ ನಮ್ಮ ಸ್ನೇಹ ಒಂದು ಶಕ್ತಿಯಾಗಿಯೇ ಮಾರ್ಪಟ್ಟಿದೆ.
ಇಂದು ನಾವಿಬ್ಬರೂ ತಗ್ಗಿದ ಧ್ವನಿಯಲ್ಲಿ ಸಂಭಾಷಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದು ವಯಸ್ಸಿನ ಪ್ರಭಾವ. ನಾವು ಚಿಕ್ಕವರಾಗಿದ್ದಾಗ ಮುದುಕರು ಪರಸ್ಪರ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ನಗುತ್ತಿದ್ದೆವು. ಈಗ ನಮ್ಮ ವಿಚಾರದಲ್ಲಿ ಯುವಕರು ಹೀಗೆ ಭಾವಿಸುತ್ತಿರಬಹುದು ಎಂಬುದನ್ನು ಎಣಿಸಿಕೊಂಡಾಗ ನಮಗೆ ನಗು ಬರುತ್ತದೆ.
ಶಿವಶಂಕರರಾಯರು ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾಗಿನ ಹಾಗೂ ಅನಂತರದ ಜೀವನದ ನೆನಪುಗಳನ್ನು ಅವರ ಮಗ ಕೃಷ್ಣನ ಸಹಾಯದಿಂದ ದಾಖಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಾಗಿ ಬಹಳ ಕುತೂಹಲಕಾರಿ ಅಂಶಗಳು ಹೊರಬರುತ್ತಿವೆ. ನನಗೆ ಇವೆಲ್ಲಾ ಹೊಸತು! ನನಗೆ ‘ಇಸಮ್’ಗಳ ಗೀಳು ಇಲ್ಲ; ಇಲ್ಲದಿದ್ದುದು ಒಳ್ಳೆಯದೇ ಆಯಿತು ಎಂದು ಕಾಣುತ್ತಿದೆ. ಆದರೆ ಅದೇ ಸಮಯದಲ್ಲಿ ಶಿವಶಂಕರರಾಯರ ಪ್ರಾಮಾಣಿಕ ಜೀವನದ ಹೊಸಮುಖದ ಅರಿವಾದಂತೆ ಅವರ ಬಗ್ಗೆ ಹೆಮ್ಮೆಯಿಂದ ಒಂದು ಹೊಸ ಬಾಂಧವ್ಯ ಉಂಟಾಗಿದೆ.
ಅವರು ಒಬ್ಬ ನಿಷ್ಕಪಟ ವ್ಯಕ್ತಿ. ‘ಇದುವೇ ಅವರ ದುರದೃಷ್ಟ’ ಎಂದು ಕೆಲವರು ಹೇಳುವುದುಂಟು. ಒಬ್ಬ ‘ಕಾಮ್ರೇಡ್’ ಶಿವಶಂಕರ ರಾಯರ ಬಗ್ಗೆ ಹೀಗೂ ಹೇಳಿದ್ದಾರಂತೆ, “ನೀವು ನಾಯಕನಾಗದೆ ಸ್ವಯಂಸೇವಕನಾಗಿ ಉಳಿಯಲು ಇದುವೇ ಕಾರಣ, ಹಾಗಾಗಿ ನೀವು ಎಂದೂ ನಾಯಕನಾಗಲಾರಿರಿ” ಇದು ಶಿವಶಂಕರರಾಯರ ಜೀವನಕ್ಕೆ ಸಂದ ಮನ್ನಣೆಯೋ, ಟೀಕೆಯೋ?
ಫೋಟೋ: ವಿಠಲ ರಾವ್ ಮತ್ತು ಆಪ್ತ ಸ್ನೇಹಿತ ಶಿವಶಂಕರ ರಾಯರ ಜೂನ್ 2010ರ ಕೊನೆಯ ಭೇಟಿ
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!