ಕಥೆಗಳೆಂದರೆ ಮಕ್ಕಳು, ವಯಸ್ಕರು, ವೃದ್ಧರು ಎಲ್ಲರಿಗೂ ಖುಷಿ. ಸುಮಾರು 50 ವರುಷಗಳ ಮುಂಚೆ ಭಾರತದ ಮನೆಮನೆಗಳಲ್ಲಿ ಅಜ್ಜಅಜ್ಜಿಯರು ಇರುತ್ತಿದ್ದರು. ಅವರೆಲ್ಲರೂ ಕತೆಗಳ ಖಜಾನೆಗಳು. ದಿನದಿನವೂ ಮಕ್ಕಳು ಮೊಮ್ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುವ ವಾಡಿಕೆ ಅವರದು. ಅವನ್ನು ಕಣ್ಣರಳಿಸಿ ಕೇಳುತ್ತಕೇಳುತ್ತಾ ಮಕ್ಕಳು ಬೆಳೆಯುತ್ತಿದ್ದರು.

ಈಗ ಅಜ್ಜಅಜ್ಜಿಯರು ವೃದ್ಧಾಶ್ರಮಗಳಲ್ಲಿದ್ದಾರೆ. ಅವರು ಮನೆಗಳಲ್ಲಿ ವಾಸವಿದ್ದರೂ ಅವರು ಹೇಳುವ ಕತೆಗಳನ್ನು ಕೇಳುವ ಮೊಮ್ಮಕ್ಕಳು ಮರಿಮಕ್ಕಳು ಆ ಮನೆಗಳಲ್ಲಿಲ್ಲ. ಅವರೆಲ್ಲ ದೂರದ ನಗರಗಳಿಗೆ ಅಥವಾ ದೇಶಗಳಿಗೆ ವಲಸೆ ಹೋಗಿದ್ದಾರೆ.

ಹಾಗಾಗಿ, ಈಗ ಮಕ್ಕಳಿಗೆ ಕತೆ ಹೇಳುವವರೇ ಇಲ್ಲದಂತಾಗಿದೆ. ಶಾಲೆಗಳಲ್ಲಿ ಶಿಕ್ಷಕ-ಶಿಕ್ಷಕಿಯರಿಗೆ ಸಿಲೆಬಸ್-ನ ಪಾಠಗಳನ್ನು ಮುಗಿಸೋದೇ ಕಷ್ಟವಾಗಿದೆ. ಅಂತೂ ಈಗಿನ ಮಕ್ಕಳು ಕತೆಗಳನ್ನು ಕೇಳದೇ ಬೆಳೆಯುತ್ತಿದ್ದಾರೆ.

ಕತೆಗಳನ್ನು ಕೇಳುವುದರಿಂದ ಪ್ರಯೋಜನಗಳು ಹಲವು. ಮಕ್ಕಳ ಕಲ್ಪನಾ ಶಕ್ತಿ ಅರಳುತ್ತದೆ. ಭಾಷೆಯ ಮೇಲಿನ ಹಿಡಿತ ಬೆಳೆಯುತ್ತದೆ. ಶಬ್ದಭಂಡಾರ ಹಿಗ್ಗುತ್ತದೆ. ಭಾಷೆ ಬಳಕೆಯ ಸೂಕ್ಷ್ಮಗಳು ತಿಳಿಯುತ್ತವೆ. ಈಗಿನ ಮಕ್ಕಳು ಇವೆಲ್ಲದರಿಂದ ವಂಚಿತರಾಗುತ್ತಿದ್ದಾರೆ, ಅಲ್ಲವೇ?

ಜೊತೆಗೆ ಮಕ್ಕಳ ವ್ಯಕ್ತಿತ್ವ ರೂಪಿಸಲು ಕತೆಗಳಿಂದ ಸಹಾಯ. ಯಾಕೆಂದರೆ ಕತೆಗಳ ನೀತಿಗಳು ಮನದಾಳಕ್ಕೆ ಇಳಿಯುತ್ತವೆ.

ಕತೆ ಹೇಳಲು ಕಲಿಯಬೇಕೆಂದರೆ ಬಹಳ ಸುಲಭದ ದಾರಿಗಳಿವೆ. ಮಹಾಭಾರತ, ರಾಮಾಯಣ, ಪಂಚತಂತ್ರದ ಕತೆಗಳು, ಕಥಾಸರಿತ್ಸಾಗರ, ಅಮರ ಚಿತ್ರ ಕಥಾ ಮಾಲಿಕೆಯ ಕತೆ ಪುಸ್ತಕಗಳು - ಇವನ್ನು ಖರೀದಿಸಿ ಒಂದೆರಡು ಸಲ ಓದಿದರಾಯಿತು. ಇವಲ್ಲದೆ ಭಾರತದ ವಿವಿಧ ಭಾಷೆಗಳ ಕತೆಗಳು, ಭಾರತದ ಮತ್ತು ವಿದೇಶಗಳ ಜಾನಪದ ಕತೆಗಳ ಪುಸ್ತಕಗಳು ಲಭ್ಯ. ಈಗಂತೂ ಕತೆಗಳ ಧ್ವನಿಸರಣಿಗಳೂ ಆಪ್-ಗಳೂ ಸಿಗುತ್ತವೆ. ಮಾತ್ರವಲ್ಲ, ಕೆಲವು ಮಹಾನಗರಗಳಲ್ಲಿ ಕತೆ ಹೇಳಲು ವಯಸ್ಕರಿಗೆ ತರಬೇತಿ ನೀಡುವ ಸಂಸ್ಥೆಗಳೂ ಇವೆ!

ಅದರ ಜೊತೆಗೆ ಹರಿಕಥೆ ಹೇಳುವ ನೂರಾರು ವಿಡಿಯೋಗಳು ಯು-ಟ್ಯೂಬಿನಲ್ಲಿ ಲಭ್ಯವಿವೆ. ಐದಾರು ವಿಡಿಯೋಗಳನ್ನು ಗಮನವಿಟ್ಟು ಕೇಳುತ್ತಾ ನೋಡಿ. ಹರಿಕಥೆ ಹೇಳುವವರ ಧ್ವನಿಯ ಏರಿಳಿತಗಳು, ಆಗಾಗ ಕೆಲವು ಕ್ಷಣ ಮಾತು ನಿಲ್ಲಿಸುವ ಪರಿ (“ಪಾಸ್” ಕೊಡುವುದು), ನಡುನಡುವೆ ಹಾಡು ಹಾಡುವ ವೈಖರಿ, ಕೈಯ ತಾಳದ ಪರಿಣಾಮಕಾರಿ ಬಳಕೆ, ಕಥೆಗೆ ಹೊಂದಿಕೆಯಾಗುವ ಹಾವಭಾವಗಳು (ಕೈಗಳು, ಮುಂಗೈಗಳು, ಮುಖ, ಕಣ್ಣುಗಳ ಚಲನೆ ಇತ್ಯಾದಿ) - ಇವನ್ನೆಲ್ಲ ಗಮನಿಸಿ. ಗಂಟೆಗಟ್ಟಲೆ ಜಾನಪದ ಕತೆಗಳನ್ನು ಹೇಳುತ್ತಹೇಳುತ್ತಾ, ಹಾಡುಗಳನ್ನು ಹಾಡುತ್ತಹಾಡುತ್ತಾ ದಂತಕತೆಗಳಾದವರ ಅದ್ಭುತ ಕತೆಗಳು ಹಾಗೂ ಹಾಡುಗಳನ್ನು ಓದಿರಿ. ಉದಾಹರಣೆ: ಸಿರಿಯಜ್ಜಿ.

ನಾನು ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ 15 ವರುಷ ಪ್ರಾಧ್ಯಾಪಕನಾಗಿದ್ದೆ. ತರಬೇತಿಗೆ ಬರುತ್ತಿದ್ದ ಸಿಬ್ಬಂದಿಗಳಲ್ಲಿ ಪಾಠದ ಬಗ್ಗೆ ಆಸಕ್ತಿ ಮೂಡಿಸಲು ಕತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡೆ. ಅವುಗಳಲ್ಲಿ ಆಯ್ದ ಕತೆಗಳನ್ನು “ಬದುಕು ಬೆಳಗಿಸುವ ಕತೆಗಳು” ಎಂಬ ಪುಸ್ತಕವಾಗಿ 2025ರಲ್ಲಿ ಪ್ರಕಟಿಸಿದೆ (ಪುಸ್ತಕ ಸಂಪದದಲ್ಲಿ ಲಭ್ಯ). ನಾನು ಹೇಳಿದ ಕತೆಗಳನ್ನು ಕೇಳಿದವರು ಭೇಟಿಯಾದಾಗೆಲ್ಲ “ಸರ್, ನೀವು ಹೇಳಿದ ಆ ಕತೆ ಈಗಲೂ ನೆನಪಿದೆ” ಎಂದಾಗ ಮನಸ್ಸು ಅರಳುತ್ತದೆ.

“ಕತೆ ಹೇಳಲು ಕಲಿಯುವುದು” ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ನಾವು ಮಾಡಬಹುದಾದ ಕೆಲಸಗಳಲ್ಲೊಂದು, ಅಲ್ಲವೇ?

ಫೋಟೋ: ಮಕ್ಕಳಿಗೆ ಕತೆ ಹೇಳುವ ಅಜ್ಜಿ … ಕೃಪೆ: ಅಡೋಬ್ ಸ್ಟಾಕ್