ಒಂದು ವಾರದ ಅವಧಿಯ ತರಬೇತಿಗೆ ಹೋಗಿದ್ದೆ. ನಾವು 30 ಜನರು ತರಬೇತಿಗೆ ಬಂದಿದ್ದೆವು. ಅಲ್ಲಿ ಏರುಹಗಲು 11 ಗಂಟೆಗೆ ಮತ್ತು ಇಳಿಹಗಲು 3.30 ಗಂಟೆಗೆ ಟೀ/ ಕಾಫಿ ಸೇವನೆಗಾಗಿ ಬಿಡುವು. ತರಬೇತಿಗೆ ಬಂದಿದ್ದ ಒಬ್ಬನ ವರ್ತನೆ ಈಗಲೂ ಚೆನ್ನಾಗಿ ನೆನಪಿದೆ.
ಅವನು ಟೀ-ರೂಂಗೆ ಧಾವಿಸಿ ಬರುತ್ತಿದ್ದ. ಅಲ್ಲಿ 4-5 ಟೇಬಲುಗಳಲ್ಲಿ ಒಂದೊಂದು ತಟ್ಟೆಯಲ್ಲಿ ತಲಾ 20 ಬಿಸ್ಕಿಟ್ ಇಟ್ಟಿರುತ್ತಿದ್ದರು. ಆತ ಒಂದು ಟೇಬಲಿನ ಪಕ್ಕದ ಕುರ್ಚಿಯೊಂದರಲ್ಲಿ ಕುಳಿತುಕೊಳ್ಳುತ್ತಿದ್ದ. ಆ ಟೇಬಲಿನ ತಟ್ಟೆಯಲ್ಲಿದ್ದ 10-12 ಬಿಸ್ಕಿಟ್ ಬಾಚಿಕೊಂಡು ಮುಕ್ಕುತ್ತಿದ್ದ. ಇದರಿಂದಾಗಿ, ಆ ಟೇಬಲಿನ ಸುತ್ತಲಿನ 3-4 ಕುರ್ಚಿಗಳಲ್ಲಿ ಕುಳಿತ ಕೆಲವರಿಗೆ ತಿನ್ನಲು ಬಿಸ್ಕಿಟ್ ಸಿಗುತ್ತಿರಲಿಲ್ಲ. ಆಗ ಈ ಆಸಾಮಿ ವಿಚಿತ್ರವಾಗಿ ನಗುತ್ತಿದ್ದ. ತನ್ನಿಂದಾಗಿ ಕೆಲವರಿಗೆ ತಿನ್ನಲು ಬಿಸ್ಕಿಟ್ ಸಿಗುತ್ತಿಲ್ಲ ಎಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೂ ತನ್ನ ಅಸಭ್ಯ ವರ್ತನೆ ಮುಂದುವರಿಸಿದ್ದ!
ಇನ್ನೊಂದು ಉದಾಹರಣೆ: ಹಲವು ಸಂಸ್ಥೆಗಳಲ್ಲಿ ಕಾರ್ಯಕ್ರಮಗಳ ಕೊನೆಗೆ ಅಥವಾ ಆರಂಭದಲ್ಲಿ ಉಪಾಹಾರದ ವ್ಯವಸ್ಥೆ ಇರುತ್ತದೆ. ಅಲ್ಲಿ ತಿನಿಸು ಉಳಿದರೆ ಕೊನೆಗೆ ಒಯ್ಯುವುದು ಬೇರೆ ಮಾತು. ಆದರೆ ಕೆಲವರಿರುತ್ತಾರೆ. ಎಲ್ಲ ಅತಿಥಿಗಳೂ ಉಪಾಹಾರ ಸೇವಿಸಿ ಆಯಿತೇ ಎಂಬುದನ್ನು ಗಮನಿಸದೆ, ಅಲ್ಲಿರುವ ತಿನಿಸನ್ನು ಮನೆಗೆ ಒಯ್ಯಲಿಕ್ಕಾಗಿ ತಾವು ತಂದ ಕವರಿಗೆ ತುಂಬಿಕೊಳ್ಳುತ್ತಾರೆ!
ಹಲವು ವಾಹನ ಚಾಲಕರೂ ಇಂತಹ ದುರ್ವತನೆ ತೋರುತ್ತಾರೆ. ಫುಟ್-ಪಾತ್ ಇರೋದು ಪಾದಚಾರಿಗಳು ನಡೆದುಕೊಂಡು ಹೋಗಲಿಕ್ಕಾಗಿ. ಆ ಫುಟ್-ಪಾತುಗಳಲ್ಲಿಯೇ ಬೈಕ್, ಸ್ಕೂಟರ್ ಅಥವಾ ಕಾರು ನುಗ್ಗಿಸುವವರಿಗೆ ಇದು ಖಂಡಿತ ತಿಳಿದಿದೆ. ಆದರೂ ಅವರ ಉಡಾಫೆ. ಅವರಿಂದಾಗಿ ತೊಂದರೆ ಮಾತ್ರವಲ್ಲ ಅಪಾಯ ಇತರರಿಗೆ!
ರಸ್ತೆಗಳಲ್ಲಿ ವಾಹನ ದಟ್ಟಣೆ ಆದಾಗಲೂ ಕೆಲವರ ಇಂತಹ ತಲೆಕೆಟ್ಟ ವರ್ತನೆಯಿಂದ ನೂರಾರು ಚಾಲಕರಿಗೆ ತೊಂದರೆಯಾಗುತ್ತದೆ. ವಾಹನದಟ್ಟಣೆ ಆದಾಗ ಎಲ್ಲ ವಾಹನ ಚಾಲಕರು ಸರತಿ ಸಾಲಿನಲ್ಲಿ ತಮ್ಮತಮ್ಮ ವಾಹನ ಮುಂದಕ್ಕೆ ಚಲಾಯಿಸಬೇಕು. ಆಗ ಎಲ್ಲ ವಾಹನಗಳೂ ಸರಾಗವಾಗಿ ಮುಂದಕ್ಕೆ ಸಾಗಿ, ಕೆಲವೇ ನಿಮಿಷಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಆದರೆ ಕೆಲವರು ಅಪಾಯಕಾರಿಯಾಗಿ ತಮ್ಮ ವಾಹನ ಮುಂದಕ್ಕೆ ನುಗ್ಗಿಸುತ್ತಾರೆ. ಅದರಿಂದಾಗಿ ಎದುರಿನಿಂದ ಬರುವ ಅಥವಾ ಅಕ್ಕಪಕ್ಕದ ವಾಹನಗಳಿಗೆ ಮುಂದಕ್ಕೆ ಚಲಿಸಲು ಸಾಧ್ಯವಾಗದೆ ಅಲ್ಲಿ 15-30 ನಿಮಿಷ ವಾಹನಗಳು ಕಾಯಬೇಕಾಗುತ್ತದೆ. ಇದಕ್ಕೆ ಕಾರಣನಾದವನನ್ನು ಪ್ರಶ್ನಿಸಿದರೆ, ಆತ/ ಆಕೆ ಜಗಳ ಶುರು ಮಾಡುತ್ತಾರೆ. ಗೊತ್ತಿದ್ದೂ ಗೊತ್ತಿದ್ದೂ ಇತರರಿಗೆ ತೊಂದರೆ ಮಾಡುವ ಇಂತಹ ಜನರಿಂದಾಗಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ, ಅಲ್ಲವೇ?
ಫೋಟೋ: ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆಯಿಂದ ವಾಹನದಟ್ಟಣೆ ... ಕೃಪೆ: ಐಸ್ಟಾಕ್ ವೆಬ್-ಸೈಟ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!