ರಘು ಹಾಸನವನ್ನು ತಲುಪಿದಾಗ ಸಮಯ  ಸಂಜೆ ಏಳು ಘಂಟೆ.ಅವನು ಹಾಸನವನ್ನು ತಲುಪಿದ ಕೂಡಲೇ ಸುಜಾತಳ ಮನೆಯ ಹತ್ತಿರ ಹೋದನು.ಅವಳ ಮನೆಯ ಹತ್ತಿರ ತುಂಬಾ ಜನರು ಸೇರಿಕೊಂಡಿದ್ದರು.ಆ ಜನ ಪರಸ್ಪರ ಏನೇನೋ ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರು.ರಘು ಹಾಗೆಯೇ ಆ ಜನರ ಮಧ್ಯ ದಾರಿ ಮಾಡಿಕೊಳ್ಳುತ್ತಿರುವಾಗ ಯಾರೋ ಒಬ್ಬರು "ಪಾಪ! ಆ ಹುಡುಗಿಗೆ ಹೀಗಾಗಬಾರದಿತ್ತು....ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂಥ ಸಾವು ಬರಬಾರದಾಗಿತ್ತು",ಎಂದು ಹೇಳಿದ್ದು ಕೇಳಿಸಿತು.ಅದನ್ನು ಕೇಳಿ ರಘುವಿಗೆ ಏನೋ ಒಂದು ದುರ್ಘಟನೆ ನಡೆದಿರಬಹುದೆಂಬ ಅನುಮಾನ ಉಂಟಾಯಿತು.ಅವನು ತಕ್ಷಣ ಅಲ್ಲಿ ನೆರೆದಿದ್ದವರಲ್ಲೊಬ್ಬರಿಗೆ ಏನು ನಡೆಯಿತೆಂದು ಕೇಳಿದಾಗ ಅವರ ಉತ್ತರ ಕೇಳಿ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಯಿತು!!!! ಹೌದು...ಯಾರೋ ಅಂದು ಮದ್ಯಾಹ್ನ ಸುಜಾತಳನ್ನು ಬರ್ಬರವಾಗಿ ಕೊಲೆ ಮಾಡಿದ್ದರು.ಅಂದರೆ ತಾನು ತಪ್ಪಿಸಿಕೊಂಡು ಸೀದಾ ಸುಜಾತಳನ್ನು ಭೇಟಿ ಮಾಡುತ್ತೇನೆ ಎಂಬುದನ್ನು ಸ್ಪಷ್ಟವಾಗಿ ಗ್ರಹಿಸಿದ ಕೊಲೆಗಾರ,ತಾನು ಹಾಸನವನ್ನು ತಲುಪುವದರೊಳಗಾಗಿ ಸುಜಾತಳ ಕಥೆ ಮುಗಿಸಿದ್ದಾನೆ ಎಂಬುದು ರಘುವಿಗೆ ಸ್ಪಷ್ಟವಾಯಿತು.ಕೊಲೆಗಾರ ರಘುವಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡುತ್ತಿರುವದರಿಂದ ಈ ಕೇಸಿನ ಗತಿಯನ್ನು ನೆನೆದು ರಘುವಿಗೆ ದಿಗಿಲಾಯಿತು.

ರಘು ಹಾಗೆಯೇ ಮುಂದೆ ಹೋಗಿ ಸುಜಾತಳ ಶವವನ್ನು ನೋಡಿದನು.ಕೊಲೆಗಾರ ಸುಜಾತಳ ತಲೆಯ ಮೇಲೆ ಒಂದು ದೊಡ್ಡ ಕಲ್ಲನ್ನು ಎತ್ತಿ ಹಾಕಿದ್ದರಿಂದ ಅವಳ ತಲೆ ಸಂಪೂರ್ಣವಾಗಿ ಜಜ್ಜಿ ಹೋಗಿತ್ತು.ತಲೆ ಮತ್ತು ಮುಖದ ಭಾಗವನ್ನು ಬಿಟ್ಟು ಸುಜಾತಳ ದೇಹಕ್ಕೆ ಏನೂ ಆಗಿರಲಿಲ್ಲ.ಪೋಸ್ಟ್ ಮಾರ್ಟಂ ಮಾಡಿದ ವೈದ್ಯರು ತಲೆಯ ಭಾಗಕ್ಕೆ ಬ್ಯಾಂಡೇಜ ಸುತ್ತಿ ಮುಖ ಕಾಣದ ಹಾಗೆ ಮಾಡಿದ್ದರು.ಸುಜಾತಳ ತಂದೆ ತಾಯಿ ಅವಳ ಶವದ ಮುಂದೆ ಕುಳಿತು ಮೌನವಾಗಿ ರೋಧಿಸುತ್ತಿದ್ದರು.ಎದೆ ಎತ್ತರಕ್ಕೆ ಬೆಳೆದಿದ್ದ ಮಗಳು ಹೀಗೆ ದುರ್ಮರಣ ಹೊಂದಿದ್ದರಿಂದ ಅವರು ಒಂದು ತರಹದ ಶಾಕ್ ಸ್ಥಿತಿ ಯನ್ನು ತಲುಪಿದ್ದರು.ರಘು ಶವವಿದ್ದ ಸ್ಥಳದಿಂದ ಹಿಂದಕ್ಕೆ ಬಂದು ಕೊಲೆ ಹೇಗೆ ನಡೆಯಿತೆಂದು ಅಲ್ಲಿದ್ದ ಜನರನ್ನು ಕೇಳಿದನು.ಆ ಜನರಿಂದ ರಘುವಿಗೆ ತಿಳಿದು ಬಂದಿದ್ದೇನೆಂದರೆ "ಸುಜಾತ ಮದ್ಯಾಹ್ನ ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿಯಿಂದ ಅವಳ ಮೊಬೈಲ್ ಗೆ ಕಾಲ್ ಬಂದಿತು.ಆ ವ್ಯಕ್ತಿ ಅವಳನ್ನು ಅರ್ಜೆಂಟ್ ಆಗಿ ನೋಡಲು ಬಯಸಿದ್ದರಿಂದ ಅವಳು ತನ್ನ ತಾಯಿಗೆ ತಿಳಿಸಿ ಆ ವ್ಯಕ್ತಿಯನ್ನು ನೋಡಲು ಹೋದಳು.ಹಾಗೆ ಹೋದ ಹುಡುಗಿ ಮನೆಗೆ ಬಂದದ್ದು ಶವವಾಗಿ".ಇದನ್ನು ಕೇಳಿದ ರಘು "ಆ ವ್ಯಕ್ತಿ ಯಾರೆಂದು ಗೊತ್ತ ?" ಎಂದು ಅಲ್ಲಿದ್ದವರಿಗೆ ಕೇಳಿದನು.ಆ ಜನ ಅದರ ಬಗ್ಗೆ ತಮಗೇನೂ ಗೊತ್ತಿಲ್ಲವೆಂದೂ,ಅಲ್ಲಿನ ಪೋಲಿಸ್ ಅಧಿಕಾರಿಯೊಬ್ಬರು ಆ ಮೊಬೈಲ್ ನಂಬರಿಗೆ ಕಾಲ್ ಮಾಡಿದರೆಂದು ತಿಳಿಸಿದರು.

ಇದನ್ನು ಕೇಳಿದ ರಘು ತಡ ಮಾಡದೆ ಅಲ್ಲಿನ ಪೋಲಿಸ್ ಅಧಿಕಾರಿಯನ್ನು ಭೇಟಿ ಮಾಡಿ ತನ್ನ ಗುರುತಿನ ಚೀಟಿ ತೋರಿಸಿದನು.ಆ ಪೋಲಿಸ್ ಅಧಿಕಾರಿ ರಘುವಿನ ಮೈ ಮೇಲೆ ಆದಂತಹ ಗಾಯಗಳನ್ನು ನೋಡಿ ಅವುಗಳ ಬಗ್ಗೆ ಕೇಳಿದಾಗ ರಘು ನಡೆದ ಎಲ್ಲ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಆ ಮೊಬೈಲ್ ನಂಬರಿಗೆ ಕಾಲ್ ಮಾಡಿದ ವಿವರಗಳನ್ನು ಕೇಳಿದನು.ಆಗ ಅಲ್ಲಿನ ಅಧಿಕಾರಿ "ಆ ವ್ಯಕ್ತಿಗೆ ಕಾಲ್ ಮಾಡಿದಾಗ ಆ ನಂಬರ್ ಸ್ವಿಚ್ ಆಫ್ ಆಗಿತ್ತು.ಈಗ ಆ ನಂಬರ್ ಗಳ ವಿವರಗಳನ್ನು ಪಡೆಯಲು ತಂತ್ರಜ್ಞರನ್ನು ಸಂಪರ್ಕಿಸಲಾಗಿದೆ.ನಮಗೆ ಇನ್ನೆರಡು ಘಂಟೆಗಳಲ್ಲಿ ಆ ನಂಬರಿನ ಬಗ್ಗೆ ವಿವರಗಳು ದೊರೆಯುತ್ತವೆ.ಆಗ ನಿಮಗೆ ನಾವು ಆ ವಿವರಗಳನ್ನು ತಿಳಿಸುತ್ತೇವೆ.ಈಗ ಮೊದಲು ನೀವು ನನ್ನ ಜೊತೆ ಆಸ್ಪತ್ರೆಗೆ ನಡೆಯಿರಿ.ಅಲ್ಲಿ ನಿಮ್ಮ ಗಾಯಗಳಿಗೆ ಚಿಕಿತ್ಸೆ ತೆಗೆದುಕೊಳ್ಳುವಿರಂತೆ" ಎಂದು ಹೇಳಿದನು.ರಘುವಿಗೆ ಆ ಅಧಿಕಾರಿಯ ಆತ್ಮೀಯತೆಯನ್ನು ಕಂಡು ತುಂಬಾ ಸಂತೋಷವಾಯಿತು.ಅದಕ್ಕೆ ಆ ಅಧಿಕಾರಿಯ ಮಾತಿಗೆ ಒಪ್ಪಿ ಮೊದಲು ಅಲ್ಲಿಯೇ ಇದ್ದ ಒಂದು ಸರಕಾರೀ ಆಸ್ಪತ್ರೆಯಲ್ಲಿ ತನ್ನ ಗಾಯಗಳಿಗೆ ಬ್ಯಾಂಡೇಜ್ ಹಾಕಿಸಿಕೊಂಡು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡನು.ಹೀಗೆ ವಿಶ್ರಾಂತಿ ತೆಗೆದುಕೊಳ್ಳುವಾಗ ರಘುವಿಗೆ ಫಕ್ಕನೆ ತನ್ನನ್ನು ಅಪಹರಿಸಿ ಕೂಡಿ ಹಾಕಿದ್ದ ವ್ಯಕ್ತಿಯ ನೆನಪಾಯಿತು.ಕೂಡಲೇ ಅಲ್ಲೇ ಆಸ್ಪತ್ರೆಯಲ್ಲಿದ್ದ ದೂರವಾಣಿಯಿಂದ ಮಲ್ಲೇಶ್ವರಂ ಪೋಲಿಸ್ ಸ್ಟೇಶನ್ ಗೆ ಕರೆ ಮಾಡಿ ತನ್ನನ್ನು ಕೂಡಿ ಹಾಕಿದ ಸ್ಥಳದ ವಿವರಗಳನ್ನು ಕೊಟ್ಟು ಕೂಡಲೇ ಹೋಗಿ ಅಲ್ಲಿರುವ ಮನುಷ್ಯನನ್ನು ಬಂಧಿಸಬೇಕೆಂದು ಆಜ್ಞೆ ನೀಡಿದನು.ಸ್ವಲ್ಪ ಸಮಯದ ನಂತರ ಮಲ್ಲೇಶ್ವರಂ ಪೋಲಿಸ್ ಸ್ಟೇಶನ್ ನಲ್ಲಿದ್ದ ಪೇದೆಯೊಬ್ಬರು ಕರೆ ಮಾಡಿ,ಆ ಸ್ಥಳದಲ್ಲಿದ್ದ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿದ್ದಾರೆಂಬ ವಿಷಯ ತಿಳಿಸಿದನು.ಇದನ್ನು ಕೇಳಿದ ರಘುವಿಗೆ ಮೈಯೆಲ್ಲಾ ಉರಿದುಹೋಯಿತು.ಕೊಲೆಗಾರ ಮುಂಜಾಗ್ರತೆಯಿಂದ ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸುತ್ತಿದ್ದಾನೆ.ಇರಲಿ ಏನಾದರೂ ಒಂದು ಚಿಕ್ಕ ಸುಳಿವು ದೊರೆತೇ ದೊರೆಯುತ್ತದೆ.ಆ ಕೊಲೆಗಾರನನ್ನು ಮಾತ್ರ ಸುಮ್ಮನೆ ಬಿಡಬಾರದೆಂದು ನಿರ್ಧರಿಸಿ ರಘು ಹಾಗೆಯೇ ಹಾಸಿಗೆಯ ಮೇಲೆ ಒರಗಿಕೊಂಡನು.

ಸ್ವಲ್ಪ ಸಮಯದ ನಂತರ ಅಲ್ಲಿನ ಪೋಲಿಸ್ ಅಧಿಕಾರಿ ಆ ಮೊಬೈಲ್ ನಂಬರಿನ ಎಲ್ಲ ವಿವರಗಳನ್ನು ತೆಗೆದುಕೊಂಡು,ಅವುಗಳನ್ನು ರಘುವಿಗೆ ತೋರಿಸಲು ಆಸ್ಪತ್ರೆಗೆ ಬಂದನು.ಆ ವಿವರಗಳಲ್ಲಿ ಆ ನಂಬರ್ ಬೆಂಗಳೂರಿಗೆ ಸಂಬಂಧಿಸಿದ್ದೆಂದು ತಿಳಿಸಲಾಗಿತ್ತು.ಆ ನಂಬರ್ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾದ ರಾಯಪ್ಪ ಎಂಬ ವ್ಯಕ್ತಿಯದಾಗಿತ್ತು.ರಘು ರಾಯಪ್ಪ ಎಂಬ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ,ಆ ವ್ಯಕ್ತಿ ಸತ್ತು ಅದಾಗಲೇ ಎರಡು ವರ್ಷಗಳು ಆಗಿವೆ ಎಂದೂ ಮತ್ತು ಆ ವ್ಯಕ್ತಿಗೆ ಯಾವ ಸಂಬಂಧಿಕರೂ ಇಲ್ಲವೆಂದೂ ತಿಳಿಯಿತು.ಕೊಲೆಗಾರ ತುಂಬಾ ಚಾಣಾಕ್ಷತೆಯಿಂದ ಆ ಸತ್ತು ಹೋದ ವ್ಯಕ್ತಿಯ ಸಿಮ್ ಕಾರ್ಡ್ ಬಳಸಿ ಕರೆ ಮಾಡಿದ್ದನು.ಆ ನಂಬರಿಗೆ ಯಾರಾದರೂ ತೀರ ಇತ್ತೀಚಿಗೆ ರಿಚಾರ್ಜ್ ಮಾಡಿಸಿದ್ದಾರೆಯೇ ಎಂದು ವಿಚಾರಿಸಿದಾಗ ಯಾರೋ ಒಬ್ಬರು ಆನಲೈನ್ ಅಕೌಂಟ್ ಬಳಸಿ ರಿಚಾರ್ಜ್ ಮಾಡಿದ್ದರೆಂದು ತಿಳಿಯಿತು.ಆ ಆನಲೈನ್ ಅಕೌಂಟಿನ ವಿವರಗಳನ್ನೂ ಕೂಡ ಅಳಿಸಿ ಹಾಕಲಾಗಿತ್ತು.ಈಗ ರಘುವಿನ ಪಾಲಿಗೆ ಈ ಕೇಸಿನ ಎಲ್ಲ ಬಾಗಿಲುಗಳು ಮುಚ್ಚಿ ಹೋಗಿದ್ದವು.ಆ ಅಧಿಕಾರಿಯಿಂದ ಆ ನಂಬರ್ ಅನ್ನು ಪಡೆದು ಬೆಂಗಳೂರಿಗೆ ಹಿಂತಿರುಗಿ ಏನಾದರೂ ಸುಳುಹು ಸಿಗಬಹುದೇ ಎಂದು ಪ್ರಯತ್ನಿಸಲು ರಘು ನಿರ್ಧರಿಸಿದನು.

ರಘು ಮರುದಿನ ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಿ ತನ್ನ ಸ್ಟೇಶನ್ ಗೆ ಹೋದನು.ಸ್ಟೇಶನ್ ಗೆ ಹೋದಾಗ ಅಲ್ಲಿ ಯಾರೋ ಇಬ್ಬರು ಕಾಲೇಜ್ ಯುವತಿಯರು ಕುಳಿತಿದ್ದರು.ಅವರು ಯಾರೆಂದು ವಿಚಾರಿಸಿದಾಗ,ಅಲ್ಲಿದ್ದ ಪೇದೆಯೊಬ್ಬ,"ಸರ್.....ಈ ಹೆಣ್ಣು ಮಕ್ಕಳು ಇಲ್ಲೇ ಮಹಾರಾಣಿ ಕಾಲೇಜಿನಲ್ಲಿ ಓದ್ತಾ ಇದಾರಂತೆ.ಇವರಿಗೆ ಮೂರು ದಿನಗಳ ಹಿಂದೆ ಯಾರೋ ಒಬ್ಬ ವ್ಯಕ್ತಿ ಕರೆ ಮಾಡಿ ಭೇಟಿ ಆಗುವಂತೆ ತಿಳಿಸಿದನಂತೆ.ಇವರು ಹಾಗೆಯೇ ಅವನನ್ನು ಭೇಟಿ ಆಗಲು ಹೋಗಿದ್ದಾರೆ.ಆ ವ್ಯಕ್ತಿ ಹಾಗೆ ಹೀಗೆ ಕಾಲೇಜಿನ ಬಗ್ಗೆ ಮಾತನಾಡುತ್ತ ನಿಂತಿದ್ದಾಗ ಯಾರೋ ಇಬ್ಬರು ಹಿಂದಿನಿಂದ ಈ ಯುವತಿಯರ ಬಾಯಿ ಮುಚ್ಚಿ ಗಾಡಿಯಲ್ಲಿ ಎಳೆಯಲು ಪ್ರಯತ್ನಿಸಿದರಂತೆ.ಈ ಹುಡುಗಿಯರು ಅವರಿಂದ ತಪ್ಪಿಸಿಕೊಂಡು ಎರಡು ದಿನ ತಲೆ ಮರೆಸಿಕೊಂಡಿದ್ದರಂತೆ.ಈವತ್ತು ಸ್ವಲ್ಪ ಧೈರ್ಯ ತೆಗೆದುಕೊಂಡು ಕಂಪ್ಲೇಂಟು ಕೊಡಲು ಬಂದಿದ್ದಾರೆ" ಎಂದು ಹೇಳಿದನು.ಇದನ್ನು ಕೇಳಿದ ರಘು "ಯಾವ ನಂಬರ್ ನಿಂದ ಕರೆ ಬಂದಿತ್ತು ?" ಎಂದು ಆ ಹುಡುಗಿಯರನ್ನು ಕೇಳಿದನು.ಆ ಹುಡುಗಿಯರು ಆ ನಂಬರ್ ಅನ್ನು ತೋರಿಸಿದಾಗ ರಘುವಿನ ಕಣ್ಣುಗಳು ಸಂತೋಷದಿಂದ ಅಗಲವಾದವು.

****************************************
ಅಧ್ಯಾಯ-7-ಮುಗಿಯಿತು
ಅಧ್ಯಾಯ-8-ಮುಂದಿನ ವಾರ
ಅಧ್ಯಾಯ-6- ಕ್ಕೆ ಲಿಂಕ್

http://sampada.net/%E0%B2%B5%E0%B3%8D%E0%B2%AF%E0%B3%82%E0%B2%B9%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%AD%E0%B2%BE%E0%B2%97-6