ಅಂತೂ ಇಂತೂ, ಹಾಗೂ ಹೀಗೂ ಸ್ವಾತಂತ್ರ್ಯ ಪಡೆದ ನಂತರದ 79 ವರ್ಷಗಳನ್ನು ಪೂರೈಸಿದ್ದೇವೆ. ಬಹುತೇಕ ಒಂದು ಪೀಳಿಗೆ ಅಂತ್ಯವಾಗಿ ಮುಂದಿನ ಪೀಳಿಗೆ ಈ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅವಕಾಶ ಸೃಷ್ಟಿಯಾಗಿದೆ. ಈ 80 ವರ್ಷಗಳಲ್ಲಿ, 80 ವರ್ಷದ ಆಸುಪಾಸಿನ ಹಿರಿಯರು, 60 ವರ್ಷದ ಮಧ್ಯ ವಯಸ್ಕರು,
40 ವರ್ಷ ಆಸುಪಾಸಿನ ಯುವಕರ ನಂತರ, 20 ವರ್ಷ ಆಸುಪಾಸಿನ ಜಂಜೀಗಳ ಹೊಸ ತಲೆಮಾರು ಈ ದೇಶದ ಜನಸಂಖ್ಯೆಯ ಮುಖ್ಯ ಭಾಗವಾಗಿದೆ. 1947 ಆಗಸ್ಟ್ 15ರ ಮಧ್ಯರಾತ್ರಿ ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ಸಹಿ ಮಾಡಿದ ಅಧಿಕಾರ ಹಸ್ತಾಂತರದ ಪತ್ರ ಪಂಡಿತ್ ಜವಹರಲಾಲ್ ನೆಹರು ಅವರ ಕೈ ಸೇರಿ ತ್ರಿವರ್ಣ ಧ್ವಜಾರೋಹಣದ ಮೂಲಕ ಭಾರತ ಅಧಿಕೃತವಾಗಿ ಸ್ವಾತಂತ್ರ್ಯ ಪಡೆಯಿತು. ಅದಾದ ಕೆಲವೇ ತಿಂಗಳುಗಳಲ್ಲಿ ಭಾರತ ಎರಡು ಮುಖ್ಯ ಘಟನೆಗಳಿಗೆ ಸಾಕ್ಷಿಯಾಯಿತು. ಒಂದು ಕಹಿ ಘಟನೆ ಇನ್ನೊಂದು ಸಿಹಿ ಘಟನೆ. ಭಾರತ ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಆದ ಹತ್ಯಾಕಾಂಡ ಮಾನವ ಇತಿಹಾಸದ ಕೆಲವೇ ಅತ್ಯಂತ ಕೆಟ್ಟ ದುರ್ಘಟನೆಗಳಲ್ಲಿ ಒಂದಾಗಿ ಇತಿಹಾಸದಲ್ಲಿ ದಾಖಲಾಯಿತು.
ಅದೇ ರೀತಿ ಸಿಹಿ ಘಟನೆಯೆಂದರೆ, ಭಾರತದ ಭವಿಷ್ಯ ನಿರ್ಧರಿಸುವ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೇಮಕವಾದದ್ದು. ಈ 80 ವರ್ಷಗಳ ನಂತರವೂ ಅಂದಿನ ಹಿಂದೂ ಮುಸ್ಲಿಂ ಸಂಘರ್ಷ ಈ ಕ್ಷಣಕ್ಕೂ ಜ್ವಾಲಾಮುಖಿಯಾಗಿ ಭಾರತ ತನ್ನ ಒಡಲೊಳಗೆ ಇಟ್ಟುಕೊಂಡು ಮುನ್ನಡೆಯುತ್ತಿದ್ದರೆ, ಈ 80 ವರ್ಷಗಳಲ್ಲಿ ಭಾರತ ವಿಶ್ವದ ಪ್ರಮುಖ ದೇಶವಾಗಿ, ಅತ್ಯದ್ಭುತ ಪ್ರಜಾಪ್ರಭುತ್ವದ ಬಹುತ್ವ ದೇಶವಾಗಿ ಮುನ್ನಡೆಯಲು ಬಾಬಾ ಸಾಹೇಬರ ನೀತಿ ನಿರೂಪಣೆಯ ಸಂವಿಧಾನವೇ ಬಹುಮುಖ್ಯ ಕಾರಣವಾಗಿದೆ.
ಈ ನಡುವಿನ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಮರೆಯಲು ಸಾಧ್ಯವೇ ಇಲ್ಲ. ಜಗತ್ತಿಗೆ ಶಾಂತಿ, ಅಹಿಂಸೆಯನ್ನು ಬೋಧಿಸಿದ ಮಹಾತ್ಮ ಗಾಂಧಿ ವ್ಯವಸ್ಥೆಯ ಕ್ರೌರ್ಯಕ್ಕೆ, ದ್ವೇಷಕ್ಕೆ ಬಲಿಯಾದದ್ದು ವಿಶ್ವ ಇತಿಹಾಸದ ಬಹುದೊಡ್ಡ ವಿಪರ್ಯಾಸ. ಈ ಮಧ್ಯೆ ಭಾರತ ಚೀನಾ, ಭಾರತ ಪಾಕಿಸ್ತಾನ ನಡುವಿನ ಯುದ್ಧಗಳು, ಸ್ವಾತಂತ್ರ್ಯ ಭಾರತದಲ್ಲಿ ದಾಖಲಾದ ತುರ್ತು ಪರಿಸ್ಥಿತಿ, ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಹೋರಾಟ, ಇಂದಿರಾಗಾಂಧಿಯವರ ಹತ್ಯೆ, ರಾಜೀವ್ ಗಾಂಧಿಯ ಹತ್ಯೆ, ಅಯೋಧ್ಯೆಯ ಬಾಬರಿಮಸೀದಿ ಧ್ವಂಸ, ಅಣ್ಣ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನ, ಶ್ರೀ ನರೇಂದ್ರ ಮೋದಿ ಅವರ ಅಧಿಕಾರ ಪಟ್ಟ, ಅಯೋಧ್ಯೆ ರಾಮಮಂದಿರದ ಪುನರ್ ನಿರ್ಮಾಣ, ಇದೀಗ ಜಂತರ್ ಮಂಥರ್ ನ ಹೊಸ ತಲೆಮಾರಿನ ಜಂಜೀ ಹೋರಾಟ ಭಾರತದ ಈ ಕೆಲವು ಪ್ರಮುಖ ಐತಿಹಾಸಿಕ ಕ್ಷಣಗಳು.
ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಮುಂದೆ 2047ಕ್ಕೆ ಭಾರತ ನೂರು ವರ್ಷಗಳನ್ನು ಪೂರೈಸಲಿದೆ. ಆ ನೂರು ವರ್ಷಕ್ಕೆ ಭಾರತವನ್ನು ವಿಶ್ವ ಭೂಪಟದಲ್ಲಿ ಅತ್ಯಂತ ಮಹತ್ವದ ಸ್ಥಾನಕೇರಿಸುವ ಜವಾಬ್ದಾರಿ ನಮ್ಮೆಲ್ಲರದು. ಇದು ಕೇವಲ ಆರ್ಥಿಕ ಅಭಿವೃದ್ಧಿಯೋ, ಸಾಮಾಜಿಕ ನ್ಯಾಯವೋ, ಸೈನಿಕ ಶಕ್ತಿಯೋ, ತಾಂತ್ರಿಕ ಪ್ರಗತಿಯೋ ಆಗಬಾರದು. ಇದೆಲ್ಲವನ್ನೂ ಮೀರಿದ ಸುಸ್ಥಿರ ಅಭಿವೃದ್ಧಿ ಬಹಳ ಮಹತ್ವದ್ದು. ದೇಶವೆಂದರೆ ಕೇವಲ ಮಣ್ಣು ಮಾತ್ರವಲ್ಲ ಮನುಷ್ಯರು ಸಹ. ಇದನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಕಟ್ಟಬೇಕಿದೆ.
ಈ ಸಂದರ್ಭದಲ್ಲಿ.... ಏರುತಿಹುದು - ಹಾರುತಿಹುದು, ನೋಡು ನಮ್ಮ ಬಾವುಟ. ಬಡವರ ಒಡಲಾಳದಿಂದ ಹೊರಟ ಕೆಂಬಾವುಟ, ಬ್ರಾಹ್ಮಣ ಅಗ್ರಹಾರಗಳಿಂದ ಹೊರಟ ಕೇಸರಿ ಬಾವುಟ, ದಲಿತ ಕೇರಿಗಳಿಂದ ಹೊರಟ ನೀಲಿ ಬಾವುಟ, ರೈತರ ಹೊಲಗದ್ದೆಗಳಿಂದ ಹೊರಟ ಹಸಿರು ಬಾವುಟ, ಮುಸ್ಲಿಮರ ಮನೆಗಳಿಂದ ಹೊರಟ ಹಸಿರಿನದೇ ಬಾವುಟ, ಎಲ್ಲಾ ಶೋಷಿತರ ಕನಸಿನಾಳದಿಂದ ಹೊರಟ ಕಪ್ಪು ಬಾವುಟ, ಶಾಂತಿಪ್ರಿಯರ ಮನಸ್ಸಿನಾಳದಿಂದ ಹೊರಟ ಹಾಲು ಬಿಳುಪಿನ ಬಾವುಟ, ಕ್ರಿಶ್ಚಿಯನ್ನರ ಹೃದಯದಾಳದಿಂದ ಹೊರಟ ಬಿಳಿಯದೇ ಬಾವುಟ, ಪ್ರಕೃತಿಯ ಮಡಿಲಿನಿಂದ ಹೊರಟ ಭೂ ಬಣ್ಣದ ಬಾವುಟ, ಎಲ್ಲವೂ ಆಕಾಶದಲ್ಲಿ ಕಾಮನಬಿಲ್ಲಿನಂತೆ ಮೂಡಿ, ಅಲೆ ಅಲೆಯಾಗಿ ತೇಲುತ್ತಾ ತೇಲುತ್ತಾ ತೇಲುತ್ತಾ, ಭಾರತ ಮಾತೆಯ ಮೈ ಹೊದಿಕೆಯಂತೆ ಅವರಿಸಿಕೊಂಡಾಗ, ಏನೆಂದು ವರ್ಣಿಸಲಿ ಆ ಸೌಂದರ್ಯವನ್ನು, ವಿಶ್ವ ಸುಂದರಿಯರ ಸುಂದರಿಯಂತೆ, ಮೊನಲಿಸಾಳ ನಗುವೂ ಮಾಸುವಂತೆ, ಸೃಷ್ಟಿಯನ್ನೇ ಮೆಟ್ಟಿನಿಂತ ದೈತ್ಯಳಂತೆ, ಸ್ವಾತಂತ್ರ್ಯ ದೇವರುಗಳ ದೇವತೆಯಂತೆ, ಸಮಾನತೆಯ ಸಾರುವ ಬೆಳಕಿನಂತೆ, ಮಾನವೀಯತೆಯೇ ಪ್ರತ್ಯಕ್ಷಳಾದಂತೆ, ಕಂಗೊಳಿಸುತ್ತದೆ.
ಇದು ಕಲ್ಪನೆಯೂ ಅಲ್ಲ, ಅಸಾಧ್ಯವೂ ಅಲ್ಲ. ನಮ್ಮ ನಿಮ್ಮ ಮನಗಳಲ್ಲಿ, ಪ್ರಬುದ್ಧತೆಯ ಬೀಜಾಂಕುರವಾದಾಗ, ಯೋಚನಾಶಕ್ತಿ ವಿಶಾಲವಾದಾಗ ಇದು ಸಾಧ್ಯವಾಗುತ್ತದೆ. ನಾವು ಉಸಿರಾಡುತ್ತಿರುವಾಗಲೇ ಇದನ್ನು ನಿರೀಕ್ಷಿಸೋಣ. ಇಲ್ಲದಿದ್ದರೆ ನಾವು ಪ್ರತಿನಿತ್ಯ ಹೆಣ ಉರುಳುವ, ಆ ಹೆಣದ ರಕ್ತ ಮಾಂಸಗಳಿಗೆ ಹಾತೊರೆಯುವ ರಕ್ಕಸ ಸಂತತಿಯ ಹದ್ದುಗಳ ನಡುವೆ ಬದುಕುತ್ತಾ, ನಾವೇ ಸರಿ, ನಾವೇ ಶ್ರೇಷ್ಠ, ನಮ್ಮ ಚಿಂತನೆಯೇ ಅತ್ಯುತ್ತಮ ಎಂಬ ಹುಚ್ಚಿಗೆ ಬಲಿಯಾಗಿ, ಇಡೀ ಸಮಾಜ ಹುಚ್ಚರ ಸಂತೆಯಾಗುವುದರಲ್ಲಿ ಸಂದೇಹವಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳೋಣ. ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಾ.... ನಿಮ್ಮೊಂದಿಗೆ.... 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!