ಹಾಗೆ ನೋಡುವುದಾದರೆ ಊರಿನ ಸಂಗತಿಗಳೆಲ್ಲಾ ನನಗೆ ತಿಳಿದು ಬರುವುದು ಎಲ್ಲರಿಗೆ ಗೊತ್ತಾದ ಬಳಿಕವೇ. ಊರಿನ ವಿಷಯಗಳ ಬಗೆಗಿನ ನನ್ನ ಅಸಡ್ಡೆ ಇದಕ್ಕೆ ಕಾರಣ. ಒಂದು ರೀತಿ ಅನಗತ್ಯವಾಗಿ ಎಲ್ಲರೊಂದಿಗೆ ಬೆರೆಯದ ಸಂಕೋಚ ಸ್ವಭಾವ ಕೂಡ! ಜಂತ್ರ ಬಸ್ ಸ್ಟಾಂಡಿನಲ್ಲಿ ಮೊದಲು ಅಂಗಡಿ ಆರಂಭಿಸಿದ ರತಿಯಕ್ಕನಿಂದ ಹಿಡಿದು ನಾನು ಊರು ಬಿಡುವ ಹೊತ್ತಿಗೆ ಪ್ರಾರಂಭವಾದ ಸಂತೋಷನ ಹೋಟೆಲಿನವರೆಗೂ ನನಗೆ ಸಂಬಂಧಿಸಿದ ವಿಷಯವಲ್ಲ ಎಂದು ಉದಾಸೀನ ಭಾವದಿಂದ ಆಚೆಗೆ ಕಣ್ಣೂ ಹಾಯಿಸದೆ ಮನೆಗೆ ಹೋಗುತ್ತಿದ್ದ ನನಗೆ ಸಿಕ್ಕ ಪ್ರಾಫಿಟ್/ಲಾಸ್ ಎಂದರೆ 'ಡಿಸೆಂಟ್ ಹುಡುಗ' ಎಂಬ ಇಮೇಜು! ಈ ಇಮೇಜು ಪ್ರಾರಂಭವಾದಾಗ ಖುಷಿ ಕೊಟ್ಟರೂ ನಂತರ ಕುತ್ತಿಗೆಗೆ ಸಿಕ್ಕಿಕೊಳ್ಳುವುದು ನನಗೆ ಹೊಸದೇನಲ್ಲ.

ಜಂತ್ರ ಎಂಬ ಪಾಳುಗುಡ್ಡೆ ಇರುವ ನಮ್ಮ ಬಸ್ ಸ್ಟಾಂಡಿನಲ್ಲಿ ನಡೆದ ತುಂಬಾ ಚಟುವಟಿಕೆಗಳಲ್ಲಿ ಪ್ರಾರಂಭವಾದ ರಿಕ್ಷಾ ಒಂದು ಮಹತ್ತರ ಬದಲಾವಣೆ. ಅಭಿವೃದ್ಧಿ ಎನ್ನಲಾರೆ. ಏಕೆಂದರೆ ಮೊದಲೇ ಕಲ್ಬಂಡೆ ಬಿಸಿನೆಸ್ಸಿನಿಂದ ಹಾಳಾಗಿದ್ದ ಮನೆ ಕಡೆ ಹೋಗುವ ರಸ್ತೆ ಮೇಲೆ ಅತ್ಯಾಚಾರ ಎಸಗುವ ಅಳಿಲು ಸೇವೆ ಇದಾಗಿತ್ತು. ತಪ್ಪು ಹುಡುಕುವ ಮನಸ್ಸಿಗೆ ನೀರಿನಲ್ಲೂ ಬಣ್ಣ ಕಂಡೀತು ಎಂದಲ್ಲ, ಒಂದು ರೀತಿ ಸತ್ಯವೂ ಹೌದು. ಏಕೆಂದರೆ ಅಭಿವೃದ್ಧಿ ಎನ್ನುವುದು ಏಕಮುಖ. ನಾವು ಮಾಡುವ ಕೆಲಸದಿಂದ ಯಾವುದಾದರೂ ಸೈಡ್ ಎಫೆಕ್ಟ್ ಇದ್ದೆ ಇರುವುದರಿಂದ ಅದು ಅಭಿವೃದ್ಧಿ ಹೇಗಾಗುತ್ತದೆ? ಆ ಸಣ್ಣ ಕಾಲದ ಅವಧಿಯಲ್ಲಿ ಅದು ಅಭಿವೃದ್ಧಿ ಎನಿಸಿದರೂ ದೂರಕ್ಕೆ ಅದು ಮಾರಕವಾದ ಉದಾಹರಣೆಗಳು ಎಷ್ಟೋ ಇವೆ ಅಲ್ಲವೇ? ಆದರೆ ನಡೆಯಲು ತೊಂದರೆಯಿರುವ ಅಮ್ಮನಿಗೆ ಇದೊಂದು ಉತ್ತಮ ವ್ಯವಸ್ಥೆಯಾಗಿ ಪರಿಣಮಿಸಲಿದೆ ಎಂಬುದು ನನಗೆ ಸಮಾಧಾನ ತಂದ ವಿಷಯ!

ಅಮ್ಮ ಮತ್ತು ಅಕ್ಕನವರಿಂದ ಆಗ ತಾನೇ ಬಸ್ ಸ್ಟಾಂಡಿನ ಬಳಿ ರಿಕ್ಷಾ ಪ್ರಾರಂಭಿಸಿದ್ದ ರಾಜನ ಪರಿಚಯ. ಹಾಗೆಯೇ ಸಣ್ಣ ಮಟ್ಟಿನ ಗೆಳೆತನ ಕೂಡ. ಅದೇ ಸಮಯದಲ್ಲಿ ಶಿವಣ್ಣ ಕೂಡ ರಿಕ್ಷಾ ಹಾಕಿದ್ದು ರಿಕ್ಷಾಕ್ಕಾಗಿ ಕಾಯುವವರ ಸಮಯ ಉಳಿಸಲೆಂದು. ಅದರ ನಂತರ ಬಸ್ ಸ್ಟಾಂಡಿನ ಪಕ್ಕದಲ್ಲಿ ರಿಕ್ಷಾಗಳ ಸಂತತಿ ಹೆಚ್ಚಿದ್ದು ಅತಿಶಯೋಕ್ತಿ ಏನೂ ಅಲ್ಲ. ಏಕೆಂದರೆ ಮೊದಲಿನ ಭಾಗಗಳಲ್ಲಿ ಹೇಳಿದಂತೆ ನಮ್ಮೂರಲ್ಲಿ ಕ್ರಿಶ್ಚಿಯನ್ ಸಮುದಾಯದ ಸಂಖ್ಯೆ ಹೆಚ್ಚು ಹಾಗೆಯೇ ಮುದರಂಗಡಿಗೆ ಸೇರುವ ರಸ್ತೆಯಾದರೂ ಬಸ್ ದಿನಕ್ಕೆರಡು. ಈ ಕಾರಣದಿಂದ ಶೀಘ್ರ ವಾಹನ ವ್ಯವಸ್ಥೆ ಎಲ್ಲರ ಕಾಲುಗಳಿಗೆ ಮತ್ತು ಇಳಿಯದ ಕೊಬ್ಬಿಗೆ ವರವಾಗಿ ಪರಿಣಮಿಸಿತ್ತು.

ಆದರೆ ರಿಕ್ಷಾ ಸಂಖ್ಯೆ ಹೆಚ್ಚಿದಕ್ಕೂ ಬಳಕೆಯ ಜನಸಂಖ್ಯೆ ಏರದಿದ್ದಕ್ಕೂ ಆದ ಪರಿಣಾಮ ಆದಾಯದ ಇಳಿತ. ಬೇಡ ಬಿಡಿ, ಇಕನಾಮಿಕ್ಸ್ ಪದಗಳ ಮೊರೆ ಹೋಗುವುದಿಲ್ಲ. ಆದರೂ ಈ ಹೊತ್ತಿನಲ್ಲಿ ಬೇಕಿದ್ದದ್ದು ಬೇರೆ ಸಂಪಾದನೆಯ ಅಗತ್ಯತೆ. ಎಲ್ಲರ ಸಮಾನಾಂತರವಾಗಿ ಬೆಳೆಯುತ್ತಿದ್ದ ರಾಜ ಇದ್ದಕ್ಕಿದ್ದಂತೆ ಎದ್ದು ನಿಂತದ್ದು ಇಲ್ಲೇ. ನಾನು ನನ್ನ ತಲೆಬರಹದಲ್ಲಿ ರಾಜನ ಹೆಸರನ್ನು ಬಳಸಲು ರಾಜ ಮುಂದೆ ಆರಂಭಿಸಿದ ಸಿಡಿ(CD) ಅಂಗಡಿ ಕಾರಣ. ತೆಗೆದುಕೊಳ್ಳಲು ಬೆಳ್ಮಣ್ಣಿನ ಅಗತ್ಯತೆಯಿದ್ದ ಸವಲತ್ತು ಮನೆಯ ಬಳಿ ಆರಂಭವಾದದ್ದು ಊರಿನ ಜನತೆಗೆ ಸಂತಸದ ಸುದ್ದಿಯಾಯಿತು. ಮನೆಯಲ್ಲಿ ಹಗಲೂ ರಾತ್ರಿ ಯಕ್ಷಗಾನದ ಚಂಡೆ ಬಡಿಯತೊಡಗಿದಾಗ ಅದನ್ನು ಕಡಿಮೆ ಮಾಡಲು ಟಾಟಾ ಸ್ಕೈ ಹಾಕಿಸಿದ್ದು ನಿಜಕ್ಕೂ ನನಗೆ ಹೊಳೆದ ಅತ್ಯುತ್ತಮ ಉಪಾಯ. ಇದಕ್ಕಾಗಿ ಈಗಲೂ ಊರಿಗೆ ಹೋದಾಗ ಬೆನ್ನು ತಟ್ಟಿಕೊಳ್ಳುತ್ತೇನೆ.

ಕಳೆದ ಸಾರಿ ಊರಿಗೆ ಹೋದಾಗ ಟೂರಿಸ್ಟ್ ಕಾರೊಂದನ್ನು ತಂದು ನಿಲ್ಲಿಸಿಟ್ಟಿದ್ದನ್ನು ರಾಜ ನನಗೆ ಹೇಳಿದರು. ವ್ಯವಹಾರ ಸರಿಯಾಗಿ ನಡೆಯದೆ ಅದನ್ನು ರಾಜ ವಾಪಾಸು ತೆಗೆದೂ ಆಗಿತ್ತು. ರಾಜ ಎಂಬ ವ್ಯಕ್ತಿಯಲ್ಲಿದ್ದ ಕ್ರಿಯಾಶೀಲತೆ ಇನ್ನೂ ಆರಿರಲಿಲ್ಲ. ಊರಿನಲ್ಲಿ ಇರದಿದ್ದ ನಾನ್-ವೆಜಿಟೇರಿಯನ್ ಹೋಟೆಲಿನ ಶುಭಾರಂಭ ಮಾಡಿದ್ದೂ ಅವರೇ. ಎಷ್ಟು ಬ್ರಾಹ್ಮಣರ ಶಾಪ ಬಿದ್ದಿತ್ತೋ ಏನೋ. ಆದರೆ ಅವರು ಆರಂಭಿಸಿದ ಏರಿಯಾ ಕ್ರಿಶ್ಚಿಯನ್ ಮನೆಗಳ ಹತ್ತಿರವಿದ್ದುದರಿಂದ ಪ್ರತಿ ದಿನ ಮೀನು ಬೇಕೆನ್ನುವವರಿಗೆ ಒಳ್ಳೆಯದೇ ಆಯಿತು ಎನ್ನಿ. ಹೀಗೆ ಏನಾದರೊಂದು ಮಾಡುತ್ತಲೇ ಇರುವ ರಾಜ ಎಷ್ಟು ಹಣ ಮಾಡಿದರೋ ಗೊತ್ತಿಲ್ಲ, ಆದರೆ ಎಲ್ಲೋ ಹೀಗೂ ಆಗಬಹುದೇ ಎಂದು ಯೋಚಿಸದವರಿಗೆಲ್ಲಾ ಇಂತಹ ವಿಕಲ್ಪಗಳೂ ಇರುತ್ತವೆ ಎಂದು ತೋರಿಸಿಕೊಟ್ಟವರು ರಾಜ.

ಕಾಲೇಜು ಸಮಯದಲ್ಲಿ ಸಾಯನ್ಸ್ ವಿದ್ಯಾರ್ಥಿಯಾಗಿದ್ದರೂ ನಡೆಯುತ್ತಿದ್ದ management conference ಗಳಿಗೆ ಹೋಗುತ್ತಿದ್ದುದರಿಂದ ಅಲ್ಪ ಸ್ವಲ್ಪ ಬಿಸಿನೆಸ್ಸು ಶಬ್ದಗಳ ಜ್ಞಾನ. ಆ conferenceನಲ್ಲಿ ನಾವೆಲ್ಲಾ budding entrepreneurಗಳು ಎಂದು ರಾಜಕಾರಣಿಯಂತೆ ಭಾಷಣ ಕುಯ್ದಾಗ ಬಿಸಿನೆಸ್ಸಿನ ಹೆಚ್ಚೇನೂ ಕಲ್ಪನೆಯಿರಲಿಲ್ಲ. ಆದರೆ ಈಗ ಅನಿಸುತ್ತದೆ Entrepreneur ಅಂದ್ರೆ ಪ್ರತಿಯೊಂದಕ್ಕೂ ಟೈಪ್ ಮಾಡಿ ಯಾಕೆ ಬರೆಯಬೇಕು ಕ್ಲಿಕ್ಕಿಸುವ ವಿಧಾನ ಇದ್ದರೆ ಕೆಲಸ ಆರಾಮವಲ್ಲವೇ ಎಂದು ಯೋಚಿಸಿ ಮೈಕ್ರೋಸಾಫ್ಟ್ ವಿಂಡೋಸ್ ತಂದ ಬಿಲ್ ಗೇಟ್ಸ್ ಆಗಬೇಕೆಂದಿಲ್ಲ, ನಮ್ಮ ನಡುವೆ ಇದ್ದು ನಾವು ಊಹಿಸದೆ ಇರುವ ಸವಲತ್ತು ಮನೆ ಬಾಗಿಲಿಗೆ ತರಿಸುವುದು ಕೂಡ ಅಲ್ಲವೇ. ಇದೇ ಕಾರಣಕ್ಕಾಗಿ ರಾಜ, ರತಿಯಕ್ಕ, ಶೆಣೈ ಮಾಸ್ತರು ಮುಖ್ಯವಾಗುತ್ತಾರೆ. ಬದುಕು ಬದಲಿಸಿದ ರೀತಿಗೋ ಅಥವಾ ಊರಿನ ನಕ್ಷೆ ಬದಲಿಸಿದ್ದಕ್ಕೋ. ಒಂದಾನೊಂದು ಕಾಲದಲ್ಲಿ ದೂರ ದೂರವಿದ್ದ ಸೌಲಭ್ಯಗಳು ಹತ್ತಿರವಾಗತೊದಗಿದ್ದು ಇವೇ ಕಾರಣಗಳಿಂದ.

ಈಗ ಇಲ್ಲಿ ಕೈ ಕೆಳಗೆ ಕೀಬೋರ್ಡ್, ಎದುರಿನಲ್ಲಿ ಮಾನೀಟರ್ , ಬದಿಯಲ್ಲಿ ಬುಸ್ಸೆನ್ನುವ ಟೀಮ್ ಲೀಡು ಮತ್ತು ಊರಿನೊಂದಿಗೆ ದಿನದಲ್ಲಿ ಹೆಚ್ಚೆಂದರೆ ಒಂದೆರಡು ಘಂಟೆಗಳ ಒಡನಾಟವನ್ನಿತ್ತುಕೊಂಡರೂ, ಊರಿನ ಬದುಕು ವಿವಿಧ ಆಯಾಮಗಳನ್ನು ತೋರಿಸುವುದು ವಿಚಿತ್ರವೇ ಸರಿ. ಖಾಲಿ ಮೆದುಳು ತುಂಬಾ ಕೆಲಸ ಮಾಡುತ್ತದೆ ಎಂಬುದರ ಜ್ವಲಂತ ಉದಾಹರಣೆ ಕೂಡ! ಎಲ್ಲಿಯೋ entrepreneurship ಎಂಬ ಪದ ಪದಕೋಶದಲ್ಲಿ ಇದೆ ಎಂದು conference ನನಗೆ ಅರ್ಥ ಮಾಡಿಸಿದರೆ ಅದು ನಿಜ ಬದುಕಿನಲ್ಲಿ ನನಗೆ ಅರ್ಥ ಮಾಡಿಸಿದವರು ಇದೆ ರಾಜ, ಶೆಣೈ ಮಾಸ್ತರು ಮುಂತಾದವರು. ತರಗತಿಗಲ್ಲಿ ಕಲಿತ ಥಿಯರಿಗೂ ಹೆಚ್ಚಾಗಿ ಪ್ರಭಾವಿಸುವುದು ಪ್ರಾಕ್ಟಿಕಲ್ಲಾಗಿ ಅರಿತ ವಿಷಯಗಳು ಅಲ್ಲವೇ?