ಈ ಮಳೆಗೇನು ಗೊತ್ತು

ಯಾವ ದಿಕ್ಕಿನಲ್ಲಿ ಅದರ ನೀರು ಹರಿದು

ಎಲ್ಲಿ ಹುಟ್ಟುವುದು ತಲ್ಲಣ,

ಎಲ್ಲಿ ಹುಟ್ಟುವುದು ಸಂತಸ?

ಅರಿವಿದ್ದೀತೇ

ಸೃಷ್ಟಿಯಾದ ಸನ್ನಿವೇಶಗಳಲ್ಲಿ

ಭಾರವಿಳಿಸಿ ಮುನ್ನೆಗೆಯುವ ಮೋಡಗಳಿಗೆ;

ಬಿಸಿಯಾಮಿಷದಲ್ಲಿ ಹರಡುವುದೇನು

ಕಾಫಿಯ ಹಬೆಯೋ

ಸೋಮಾರಿತನದ ಕಾರಣವೋ

ಬೆಚ್ಚನೆ ದೇಹದ ಬಯಕೆಯೋ!

ಈ ಮಳೆಗೆ ನಿಜಕ್ಕೂ ಏನು ಗೊತ್ತು

ಅದರಿಂದಾಗಿ ಚಲಿಸುವ ಕ್ರಿಯೆಗಳ ಕಾರಣ!

ಸುರಿಯುತ್ತಿರುವ ಹನಿಗಳಿಗೆ

ಮನಸ್ಸಿನಲ್ಲಿ ತೊಟ್ಟಿಕ್ಕುವ ಕಣ್ಣೀರು,

ಚಿಗುರಿ ಮೇಳೈಸುವ ಸಿರಿ

ಮೈಮರೆತು ಮಳೆಗೆ ಮೈಯೊಡ್ಡಿದರೂ

ಅದಕ್ಕೆಂದಾದರೂ ಅರ್ಥವಾದೀತೇ

ಯಾವ ಹೃದಯದೊಳಗೆ ಬೇರೂರಿ

ಯಾವ ಹೃದಯದಿಂದ ಮಾಯವಾಗುವುದೆಂದು!