(ರಾಗ ಭೈರವಿ ಆದಿತಾಳ)
ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ
ಹೊಂತಕಾರಿ ಕಾಣಿರೋ ||ಪ||
ಸಂತತ ಸುರರಿಗೆ ಅಮೃತವನುಣಿಸಿದ
ಪಂಕ್ತಿಯೊಳಗೆ ಪರವಂಚನೆ ಮಾಡಿದ ||ಅ||
ಮಂದರಗಿರಿ ತಂದು ಸಿಂಧುವಿನೊಳಗಿಟ್ಟು
ಚಂದದಿ ಕಡೆದು ಅಮೃತವ ತೆಗೆದು
ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ
ದಂಧನಗಳ ಮಾಡಿ ದೈತ್ಯರ ವಂಚಿಸಿದ ||
ವಿಶ್ವಾಸದಿಂದಲಿ ಅಸುರಗೆ ವರವಿತ್ತು
ತ್ರಿಶೂಲಧರ ಓಡಿ ಬಳಲುತಿರೆ
ನಸುನಗುತಲಿ ಬಂದು ಭಸ್ಮಾಸುರನಿಗೆ ಭೋಗ-
ದಾಸೆಯ ತೋರಿ ಭಸ್ಮವ ಮಾಡಿದ ||
ವಸುಧೆಯೊಳು ಹೆಣ್ಣು ಒಸಗೆಯಾಗದ ಮುನ್ನ
ಬಸಿರೊಳು ಬ್ರಹ್ಮನ ಪಡೆದವಳಿವಳು
ಕುಸುಮನಾಭ ಶ್ರೀಪುರಂದರವಿಠಲನ
ಪೆಸರು ಪೊತ್ತಿಹಳು ಈ ಪೊಸಕನ್ನಿಕೆಯು ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!