ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ?
ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! || ಒಲಿದೆ ಯಾತಕಮ್ಮಾ ಲಕುಮಿ?||
ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ || ಒಲಿದೆ ಯಾತಕಮ್ಮಾ ಲಕುಮಿ?||
ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ || ಒಲಿದೆ ಯಾತಕಮ್ಮಾ ಲಕುಮಿ?||
ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||ಒಲಿದೆ ಯಾತಕಮ್ಮಾ ಲಕುಮಿ||
(ಗುರುಗೋಪಾಲವಿಟ್ಠಲ ಅನ್ನುವುದು ದಾಸಪ್ಪ ದಾಸರ ಅಂಕಿತ. ಶೈಲಾಸ್ವಾಮಿಯವರು ಗೋಪಾಲದಾಸರ ಬಗ್ಗೆ ಬರೆದಿರುವ ಬರಹದಲ್ಲಿ ಈ ಮಾಹಿತಿ ನನಗೆ ಸಿಕ್ಕಿತು)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!