ಪುಸ್ತಕದ ಸಾರಾಂಶ – ಪ್ರಜ್ವಲಿತ ಮನಸ್ಸುಗಳು (Ignited Minds)
ನನ್ನ ಆಸಾಮಿನ ಭೇಟಿಯಲ್ಲಿ ನಾನು ತೇಜ್ಪುರಕ್ಕೆ ಭೇಟಿಕೊಟ್ಟೆ. ಅಲ್ಲಿಗೆ, ನಾನು ತೇಜ್ಪುರ್ ವಿಶ್ವವಿದ್ಯಾಲಯದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಮತ್ತು ನನಗೆ ಅವರು ಪ್ರದಾನ ಮಾಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಸ್ವೀಕರಿಸಲು ಹೋಗಿದ್ದೆ. ಸಮಾರೋಪ ಸಮಾರಂಭದ ನಂತರ ನಾನು ಶಾಲಾ ಮಕ್ಕಳನ್ನು ಮಾತನಾಡಿಸುವ ಕಾರ್ಯಕ್ರಮಕ್ಕೆ ಹೊರಟೆ. ಅದೊಂದು ಎಳೆಯರ ಬೃಹತ್ ಸಮಾವೇಶವಾಗಿತ್ತು. ನನ್ನ ಭಾಷಣದ ಮುಖ್ಯ ವಿಷಯ "ಅದಮ್ಯ ಚೇತನ" (Indomitable Spirit). ನಾನು ನನ್ನ ಮಾತುಗಳನ್ನು ಮುಗಿಸುತ್ತಿದ್ದಂತೆ, ಹಲವಾರು ಮಕ್ಕಳು ನನ್ನ ಹಸ್ತಾಕ್ಷರಕ್ಕಾಗಿ ಗುಂಪಾಗಿ ಮುಗಿಬಿದ್ದರು. ನಾನು ಅವರೆಲ್ಲರಿಗೂ ನನ್ನ ಹಸ್ತಾಕ್ಷರವನ್ನು ಹಾಕಿ ಮುಗಿಸಿದ ನಂತರ ನಾನು ಎರಡು ಆಸಕ್ತಿಕರ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಅದರಲ್ಲಿ ಒಂದು, " ಬಹಳಷ್ಟು ಸಾರಿ. ಪ್ರವಾಹ ಭೀತಿಯುಂಟು ಮಾಡುವ ಬ್ರಹ್ಮಪುತ್ರ ನದಿ ನೀರನ್ನು ನಾವೇಕೆ ನೀರಿನ ಬರೆವೆನ್ನುದುರಿಸುತ್ತಿರುವ ರಾಜಸ್ಥಾನ ಅಥವಾ ತಮಿಳುನಾಡಿಗೆ ಮರಳಿಸಬಾರದು?"
ಕೇವಲ ಮಕ್ಕಳಿಗೆ ಮಾತ್ರ ಈ ರೀತಿಯ ಅನ್ವೇಷಣಾತ್ಮಕ ಆಲೋಚನೆಗಳಿರುತ್ತವೆ. ದೊಡ್ಡವರಾದಂತೆಲ್ಲಾ ಅವರಿಗೆ ಅಸಾಧ್ಯತೆಗಳೇ ಹೆಚ್ಚು ಕಂಡು ಬರುತ್ತವೆ. ಅದು ಬಹಳ ಶಕ್ತಿಯುತವಾದ ಪ್ರಶ್ನೆಯಾಗಿದ್ದರಿಂದ ನಾನು ಸಂಪೂರ್ಣವಾಗಿ ನಿತ್ರಾಣನಾದೆ. ನಾನು ಖಂಡಿತವಾಗಿ ಹೇಳುತ್ತೇನೆ, ಈ ಪ್ರಶ್ನೆಗೆ ಪ್ರಧಾನ ಮಂತ್ರಿಗಳೂ ಕೂಡಾ ಉತ್ತರಿಸುವ ಪರಿಸ್ಥಿತಿಯಲ್ಲಿಲ್ಲ. ನಾನು ಅವನಿಗೆ ಹೇಗೆ ತಿಳಿಸಿ ಹೇಳಲಿ ನದಿಗಳು ರಾಜ್ಯಗಳ ಪರಿಧಿಗೆ ಒಳಪಟ್ಟದ್ದು ಮತ್ತು ಪ್ರತಿಯೊಂದು ರಾಜ್ಯವೂ ತನ್ನ ಪಾಲಿನ ನೀರಿಗಾಗಿ ಹೊಡೆದಾಡುತ್ತಿದೆಯೆಂದು? ನಿಜ ಈ ಸಂಪನ್ಮೂಲಗಳು ಒಂದಲ್ಲಾ ಒಂದು ದಿವಸ ಆ ರಾಜ್ಯಗಳಿಗೆ ವರದಾನಗಳಾಗಲಿವೆ; ಆದರೆ ಅಲ್ಲಿಯವರೆಗೆ ಪ್ರತಿವರ್ಷ ಎಷ್ಟೊಂದು ನೀರು ವೃಥಾ ಸಮುದ್ರವನ್ನು ಸೇರುತ್ತದಲ್ಲ! ಇದನ್ನು ಹೇಗೆ ಉತ್ತರಿಸುವುದು.
ಆಗ ನಾನು ಈ ರೀತಿ ಉತ್ತರಿಸಿದೆ, ಭಾರತ ಯೋಜನೆ ೨೦೨೦ (India Vision 2020) ಕಾರ್ಯಕ್ರಮದ ಅಡಿಯಲ್ಲಿ ಎಳೆಯರಿಂದ ಮಹೋನ್ನತ ಉದ್ದೇಶ ಹೊಂದಿದ ಎಲ್ಲಾ ರಾಜ್ಯಗಳ ಗಡಿಗಳಿಗನ್ನು ಸೀಳಿ ನದಿಗಳನ್ನು ಜೋಡಿಸುವ ಯೋಜನೆಯು ಪ್ರಾರಂಭವಾಗಲಿದೆ. ನನಗೆ ತಿಳಿದ ಹಾಗೆ ಎಳೆಯರಿಗೆ ಪ್ರಬಲವಾದ ಇಚ್ಛಾಶಕ್ತಿಯಿದೆ. ಅವರು ಅಧಿಕಾರ ವರ್ಗದ ಎಲ್ಲಾ ವಿಧವಾದ ಋಣಾತ್ಮಕ ಅಡಚಣೆಗಳನ್ನು ತೊಲಗಿಸಿ, ಸ್ವಾರ್ಥದಿಂದ ಕೂಡಿದ ರಾಜ್ಯ ಸರ್ಕಾರಗಳ ಆಯೋಜನೆಗಳನ್ನು ಬದಿಗೆ ತಳ್ಳಿ ದೇಶದ ಬಹು ಜನರ ಹಿತಕ್ಕಾಗಿ ಕಾರ್ಯ ತತ್ಪರರಾಗಲಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಉತ್ತಮ ಭಾಂದವ್ಯವನ್ನೂ ಕೂಡಾ ಏರ್ಪಡಿಸಬಲ್ಲರು. ಮತ್ತು ಖಂಡಿತವಾಗಿಯೂ ಅವರು ಈ ಕಾರ್ಯವನ್ನು ಮಾಡಲಿದ್ದಾರೆ!"
ಮತ್ತೊಬ್ಬ ವಿದ್ಯಾರ್ಥಿಯೂ ಒಂದು ಪ್ರಶ್ನೆಯನ್ನು ಕೇಳಿದ, ಅದಕ್ಕೂ ನನ್ನ ಬಳಿ ಸಿದ್ಧವಾದ ಉತ್ತರವಿರಲಿಲ್ಲ. ಅವನು ಕೇಳಿದ, "ಮಾನ್ಯರೇ, ಯಾವುದೇ ರಂಗದಲ್ಲಿರುವ ಪ್ರಮುಖ ನಾಯಕರು ನಮ್ಮ ಬಳಿಗೆ ಬಂದು ಮಾತನಾಡುವುದಿಲ್ಲ. ನಾವು ನಮ್ಮ ಪ್ರಧಾನಿಗಳು ಬಹಳಷ್ಟು ಸಾರಿ ಚನ್ನೈಗೆ ಹೋಗುವುದನ್ನು ನೋಡುತ್ತೇವೆ, ಅದೇ ರೀತಿ ಲಕ್ನೋ ಮುಂತಾದ ಸ್ಥಳಗಳಿಗೆ ಭೇಟಿ ಕೊಡುತ್ತಾರೆ. ಆದರೆ ಅವರು ನಮ್ಮಲ್ಲಿಗೆ ಯಾವಾಗಲೂ ಬಂದದ್ದೇ ಇಲ್ಲ. ನಮಗೆ ಅವರು ಬೇಕು, ನಾವು ಅವರೊಂದಿಗೆ ಮಾತನಾಡಬೇಕು." ನಮ್ಮ ದೇಶದ ನೇತಾರರೊಂದಿಗೆ ಮಾತನಾಡಬೇಕೆಂಬ ಹಂಬಲವಿರುವ ಆ ಹುಡುಗನ ಕುತೂಹಲಕ್ಕೆ ನಾನು ಮಾರುಹೋದೆ. ನಾನು ಹೇಳಿದೆ, "ನಾನು ದೆಹಲಿಯನ್ನು ಸೇರಿದ ನಂತರ, ನಾನು ನಿನ್ನ ಕನಸನ್ನು ನಮ್ಮ ನಾಯಕರ ಮುಂದಿಡುತ್ತೇನೆ ಮತ್ತು ನಿನ್ನ ಆ ಕನಸು ನನಸಾಗುವುದು."
ಸ್ವಲ್ಪ ಕಾಲದ ನಂತರ, ಈ ಪ್ರಸಂಗವನ್ನು ನಾನು ನಮ್ಮ ಪ್ರಧಾನಿಗಳಿಗೆ ತಿಳಿಸಿದೆ. ಅವರು ಆ ಅಂಶವನ್ನು ಗ್ರಹಿಸಿಕೊಂಡು, "ಮಕ್ಕಳು ಇನ್ನು ಮುಂದೆ ನನ್ನೊಂದಿಗೆ ಮಾತನಾಡಲಾರರು, ಏಕೆಂದರೆ ಅದಕ್ಕೆ ಭದ್ರತೆಯ ಅಂಶ ತಳುಕು ಹಾಕಿಕೊಂಡಿದೆ. ನಾನು ವಿವಿಧ ರಂಗಗಳಲ್ಲಿರುವ ನಮ್ಮ ನಾಯಕರನ್ನು ಮಕ್ಕಳೊಂದಿಗೆ ಸಮಾಲೋಚನೆ ಮಾಡಲು ತಿಳಿಸುತ್ತೇನೆ. ಆ ನಾಯಕರುಗಳು ತಮ್ಮ ಜೀವಿತ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲ ನಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ರೂವಾರಿಗಳೂ ಆಗುತ್ತಾರೆ.
ಝಾರ್ಕಂಡ್ ಸ್ಥಾಪನೆಯಾದ ನಂತರ ನಾನು ಹಲವಾರು ಬಾರಿ ಅಲ್ಲಿಗೆ ಭೇಟಿಯಿತ್ತಿದ್ದೇನೆ. ನಾನು ಪ್ರತಿಬಾರಿ ಅಲ್ಲಿಗೆ ಭೇಟಿಯಿತ್ತಾಗಲೂ ಕೂಡಾ ಮುಂದೆ ಬಳಸಬಹುದಾದ ಅಲ್ಲಿರುವ ಅಗಾಧ ಸಂಪನ್ಮೂಲಗಳು ಮತ್ತು ಅದರ ಉಪಯೋಗದಿಂದಾಗಿ ಹಲಪಟ್ಟು ಗುಣಿತವಾಗುವ ಆ ರಾಜ್ಯದ ಸಂಪತ್ತನ್ನೂ ಕುರಿತು ಆಲೋಚಿಸುತ್ತಾ ಇರುತ್ತೇನೆ. ಬೋಕಾರೋದ ಶ್ರೀ ರಾಮಕೃಷ್ಣ ಹೈಸ್ಕೂಲಿನ ಸುಮಾರು ೩,೦೦೦ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ನಾನು ಮಾತನಾಡಿದ್ದಲ್ಲದೆ ನಾನು ಅವರ ಸೃಜನಶೀಲತೆಯನ್ನು ಬಿಂಬಿಸುವ ಪ್ರದರ್ಶನಾಲಯದಲ್ಲಿರುವ ವರ್ಣಚಿತ್ರಗಳು, ಬೊಂಬೆಗಳು ಮತ್ತು ಅವರು ತಯಾರಿಸಿದ ಇನ್ನಿತರ ವಸ್ತುಗಳನ್ನು ನೋಡಿದೆ. ಅವರೊಂದಿಗಿನ ನನ್ನ ಸಂಭಾಷಣೆಯಲ್ಲಿ, ಒಬ್ಬ ವಿದ್ಯಾರ್ಥಿಯು ನನ್ನನ್ನು ಕೇಳಿದ, " ಝಾರ್ಕಂಡ್ ರಾಜ್ಯದಲ್ಲಿ ಎತ್ತ ನೋಡಿದರತ್ತ ನಮಗೆ ಹಸಿರು ಕಾಣಸಿಗುತ್ತದೆ. ನಮಗೆ ಅಡವಿಗಳಿವೆ, ಝರಿಗಳಿವೆ ಮತ್ತು ಗುಡ್ದಗಳಿವೆ, ಆದರೆ ರಾಜಸ್ಥಾನದಲ್ಲಿ ಕೇವಲ ಮರುಭೂಮಿ ಏಕಿದೆ?"
ಈ ಪ್ರಶ್ನೆಯು ನಾನು ಆಸ್ಸಾಮಿನಲ್ಲಿ ಎದುರಿಸಿದ ಇದೇ ರೀತಿಯ ಪ್ರಶ್ನೆಯನ್ನು ನೆನಪಿಗೆ ತಂದಿತು; ಬ್ರಹ್ಮಪುತ್ರಾ ನದಿಯ ನೀರನ್ನು ನಾವೇಕೆ ರಾಜಸ್ಥಾನ ಅಥವಾ ತಮಿಳುನಾಡಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ನಿಮಗೆ ಗೊತ್ತಿದೆಯೇ, ೨೦ ವರ್ಷಗಳ ಕೆಳಗೆ ರಾಜಸ್ಥಾನದಲ್ಲಿ ಇಷ್ಟೊಂದು ಭೂ ಸಾಗುವಳಿಯನ್ನು ನೀವು ಕಾಣಲಾಗುತ್ತಿರಲಿಲ್ಲ. ಆದರೆ ಒಮ್ಮೆ ಇಂದಿರಾ ಗಾಂಧಿ ನಾಲೆಯ ನಿರ್ಮಾಣವಾಗುತ್ತಿದ್ದಂತೆ, ವ್ಯವಸಾಯವು ಅನೇಕ ಸ್ಥಳಗಳಲ್ಲಿ ಕಂಡು ಬಂತು. ಮನುಷ್ಯನಿಗೆ ಮರಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಮಾರ್ಪಡಿಸಲು ಸಾಧ್ಯವಿದೆ. ನಾನು ಅಸ್ಸಾಮಿನಲ್ಲಿ ಅ ವಿದ್ಯಾರ್ಥಿಗೆ ಏನು ಹೇಳಿದ್ದೆನೋ ಅದನ್ನೇ ಮತ್ತೆ ಇಲ್ಲಿ ಉಲ್ಲೇಖಿಸಿದೆ. "ಭಾರತದ ನದಿ ಜೋಡಣಾ ಯೋಜನೆಯು ದೇಶದ ಮಹತ್ತರವಾದ ಯೋಜನೆಯಾಗಬೇಕು ಮತ್ತು ಅದರಿಂದ ನೀರಿನ ಬರ ಎದುರಿಸುತ್ತಿರುವ ರಾಜ್ಯಗಳು ಅದರಿಂದ ಮುಕ್ತವಾಗಬೇಕು. ಇದಕ್ಕೆ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಕಾರ್ಯ ಪ್ರಣಾಳಿಕೆಯು ಸಿದ್ಧಗೊಳ್ಳಬೇಕು. ಬಹುಶಃ ನೀನು ಬೆಳೆದು ದೊಡ್ಡವನಾದ ಮೇಲೆ ಈ ಕಾರ್ಯಯೋಜನೆಯನ್ನು ಕೈಗೊಳ್ಳುವಲ್ಲಿ ಭಾಗವಹಿಸುತ್ತೀ ಮತ್ತು ಭಾರತದ ಪುನರ್ನಿಮಾಣ ಕಾರ್ಯದಲ್ಲಿ ಈ ಆಲೋಚನೆಯು ರೂಪುರೇಷೆಗಳನ್ನು ಪಡೆದುಕೊಳ್ಳಲಿದೆ."
ಒಬ್ಬ ಹುಡುಗನು ಬಹಳ ಗಂಭೀರ ಮುಖದೊಂದಿಗೆ ನನ್ನ ಬಳಿ ಬಂದು ಕೇಳಿದ, "ಮಾನ್ಯರೇ, ನಿಮ್ಮ ಅಗ್ನಿ ಕ್ಷಿಪಣಿಯು ಸಾಗರವನ್ನು ದಾಟಿ ಅಮೇರಿಕವನ್ನು ತಲುಪುವುದೇ?" ಈ ಆಲೋಚನೆಯನ್ನು ಕೇಳಿ ನಾನು ಆಶ್ಚರ್ಯ ಚಕಿತನಾದೆ. "ನಮಗೆ ಯಾವುದೇ ದೇಶವು ಶತ್ರು ರಾಷ್ಟ್ರವಲ್ಲ, ’ಅಗ್ನಿ’ಯನ್ನು ಅಲ್ಲಿಗೆ ಕಳುಹಿಸಲು. ಹಾಗೆ ನೋಡಿದರೆ, ಅಮೇರಿಕಾ ನಮ್ಮ ಮಿತ್ರ ದೇಶ. ’ಅಗ್ನಿ’ಯು ನಮ್ಮ ಶಕ್ತಿಯ ಸಂಕೇತ. ಇದು ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ."
ನಾನು ಕಟಕ್ಗೆ ಭೇಟಿಯಿತ್ತಾಗ ನಾನು ದಿವಂಗತ ನ್ಯಾಯಮೂರ್ತಿ ಹರಿಹರ ಮಹಾಪಾತ್ರ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ನಾನು ಅಲ್ಲಿಗೆ ನ್ಯಾಯಮೂರ್ತಿ ರಂಗನಾಥ್ ಮಿಶ್ರ ಇವರ ಆಹ್ವಾನದ ಮೇರೆಗೆ ಹೋಗಿದ್ದೆ. ನನಗಾದರೋ ಆ ಸಂದರ್ಭ ನಮ್ಮ ಸ್ವಾತಂತ್ರ್ಯ ಹೋರಾಟದ ಅನಾವರಣವಾಗಿ ಕಂಡಿತು, ಆ ದಿನಗಳಲ್ಲಿ ಸ್ವಾತಂತ್ರ್ಯವು ನಮ್ಮ ಪ್ರಥಮ ಗುರಿಯಾಗಿತ್ತು, ಅದರಲ್ಲಿ ಪಾಲ್ಗೊಂಡ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಹರಿಹರ ಮಹಾಪಾತ್ರ ಅವರ ಆಳೆತ್ತರಕ್ಕಿಂತ ದೊಡ್ಡದಾದ ಮೂರ್ತಿಯನ್ನು ಅಲ್ಲಿ ಸ್ಥಾಪಿಸಲಾಗಿತ್ತು. ೯೨ ವರ್ಷಗಳ ತುಂಬು ಜೀವನ ನಡೆಸಿದ ಮಹಾಪಾತ್ರರು, ಕಟಕ್ ಕಣ್ಣಿನ ಆಸ್ಪತ್ರೆ, ಉತ್ಕಲ್ ವಿಶ್ವವಿದ್ಯಾಲಯ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರು ಬಡತನವನ್ನು ನಿರ್ಮೂಲನೆ ಮಾಡಲು ಕೈಗೊಂಡ ಹಲವಾರು ಸ್ತರದ ಯೋಜನೆಗಳ ಸ್ಥಾಪಕರಾಗಿದ್ದರು. ಒರಿಯಾ ಭಾಷೆಯಲ್ಲಿ ನನ್ನ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಲಾಯಿತು. ನನ್ನ ಭಾಷಣದ ಕೊನೆಯಲ್ಲಿ ಹಲವಾರು ಯುವಕರು ನನ್ನ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಒಡ್ಡಿದರು.
ಅದರಲ್ಲಿ ಮೊದಲನೆಯ ಪ್ರಶ್ನೆಯು, "ಮಾನ್ಯರೇ, ನಿಮ್ಮ ಅತ್ಯಂತ ನೆಚ್ಚಿನ ಪುಸ್ತಕವಾವುದು ಮತ್ತು ನಿಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಯಾವ ಪುಸ್ತಕಗಳು ನಿಮ್ಮ ಮೇಲೆ ಪ್ರಭಾವ ಬೀರಿದವು?"
ನಾನು ಹೇಳಿದೆ, "ನನ್ನ ಜೀವನದಲ್ಲಿ ನನ್ನ ಹೃದಯಕ್ಕೆ ಹತ್ತಿರವಾದ ನಾಲ್ಕು ಪುಸ್ತಕಗಳಿವೆ. ಅದರಲ್ಲಿ ಮೊದಲನೆಯದು, 'Man the unknown' - Alexis Carrel (ಅಲೆಕ್ಸಿಸ್ ಕಾರೈಲ್ ಬರೆದ ನಿಗೂಢ ಮನುಷ್ಯ), ಅವನು ಮೊದಲು ವೈದ್ಯನಾಗಿದ್ದವನು ತದನಂತರ ತತ್ವಶಾಸ್ತ್ರಜ್ಞನಾಗಿ ನೊಬೆಲ್ ಪಾರಿತೋಷಕವನ್ನು ಪಡೆದವನು. ಇದರಲ್ಲಿ ರೋಗ ಕಾಣಿಸಿಕೊಂಡಾಗ, ಮನಸ್ಸು ಮತ್ತು ದೇಹ ಎರಡನ್ನೂ ಚಿಕಿತ್ಸೆಗೊಳಪಡಿಸಬೇಕಾಗುತ್ತದೆ ಎಂದು ಪ್ರಮುಖವಾಗಿ ತಿಳಿಸುತ್ತದೆ; ಏಕೆಂದರೆ ಒಂದರೊಂದಿಗೆ ಮತ್ತೊಂದಕ್ಕೆ ಅವಿನಾಭಾವ ಸಂಭಂದವಿದೆ. ನೀವು ಒಂದನ್ನು ಚಿಕಿತ್ಸೆಗೆ ಒಳಪಡಿಸಿ ಇನ್ನೊಂದನ್ನು ತಾತ್ಸಾರ ಮಾಡಬಾರದು. ವಿಶೇಷವಾಗಿ ವೈದ್ಯರಾಗುವ ಕನಸು ಕಾಣುತ್ತಿರುವ ಮಕ್ಕಳು ಈ ಪುಸ್ತಕವನ್ನು ಖಂಡಿತವಾಗಿ ಓದಬೇಕು. ಇದರಲ್ಲಿ ಅವರು ಮನುಷ್ಯ ದೇಹವು ಕೇವಲ ಯಾಂತ್ರಿಕವಾದ ರಚನೆಯಲ್ಲ ಆದರೆ ಈ ಮನುಷ್ಯ ಪ್ರಾಣಿಯ ಅಂಗರಚೆನೆಯು ಬಹಳ ಬುದ್ಧಿವಂತಿಕೆಯಿಂದ ಕೂಡಿದ ಮತ್ತು ಸೂಕ್ಷ್ಮಾತಿಸೂಕ್ಷ್ಮ ಹಾಗೂ ಜಟಿಲವಾದ ಪ್ರತಿಸ್ಪಂದನವನ್ನು ಹೊಂದಿರುವ ವ್ಯವಸ್ಥೆಯೆಂದು ಅರ್ಥವಾಗುತ್ತದೆ. ನಾನು ಅಗಾಧವಾದ ಪೂಜ್ಯಭಾವನೆಯಿಂದ ನೋಡುವ ಎರಡನೇ ಪುಸ್ತಕವೆಂದರೆ ಅದು ತಿರುವಳ್ಳುವರ್ ಅವರ ’ತಿರುಕ್ಕುರಳ್’, ಇದರಲ್ಲಿ ಜೀವನದಲ್ಲಿ ಪಾಲಿಸಬೇಕಾದ ಉನ್ನತವಾದ ಸದಾಚಾರ ಸಂಹಿತೆಯಡಗಿದೆ. ಮೂರನೆಯದು, ಲಿಲಿಯನ್ ಐಲ್ಹರ್ ವಾಟ್ಸನ್ ಬರೆದ ಹಲವು ದೀಪಗಳ ಬೆಳಕು (Light from many lamps by Lillian Eichler Watson). ಅದು ನಾವು ಹೇಗೆ ಜೀವಿಸಬೇಕೆನ್ನುವುದರ ಬಗ್ಗೆ ಮನಸ್ಸನ್ನು ಪ್ರಜ್ವಲಿಸುತ್ತದೆ ಮತ್ತು ಈ ಪುಸ್ತಕವು ನನಗೆ ಐವತ್ತು ವರ್ಷಗಳಿಂದಲೂ ಮಾರ್ಗದರ್ಶಿಯಾಗಿದೆ. ಮತ್ತು ಸಹಜವಾಗಿಯೇ, ಪವಿತ್ರ ಖುರಾನ್ ಕೂಡ ನನ್ನ ನಿರಂತರ ಒಡನಾಡಿ.
ನಾನೊಮ್ಮೆ, ಗುಜರಾತ್ ರಾಜ್ಯದ ಆನಂದ್ನಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಒಬ್ಬ ಚುರುಕು ಬಾಲಕ ನನಗೆ ಒಂದು ಜಾಣತನದ ಪ್ರಶ್ನೆಯನ್ನು ಕೇಳಿದ. "ನಮ್ಮ ಶತ್ರು ಯಾರು?" ನಾನು ಈ ಪ್ರಶ್ನೆಯನ್ನು ಇತರೇ ವಿದ್ಯಾರ್ಥಿಗಳಿಗೆ ವರ್ಗಾಯಿಸಿ ಅವರ ಕೋನದಿಂದ ಅದಕ್ಕೆ ಉತ್ತರವನ್ನು ಸೂಚಿಸಲು ಪ್ರೋತ್ಸಾಹಿಸಿದೆ. ಆಗ ಒಂದು ಉತ್ತರ ಬಂತು, ಅದೇನೆಂದರೆ “ಬಡತನ”. ಅದು ಎಂತಹ ಜಾಣತನದಿಂದ ಕೂಡಿದ ಪ್ರತಿಕ್ರಿಯೆ, ಅದೂ ಒಬ್ಬ ಪುಟ್ಟು ಬಾಲಕನಿಂದ ಹಾಗಾಗಿ ಈ ಪುಸ್ತಕವನ್ನು ಅವನಿಗೆ ಅರ್ಪಿಸಿದ್ದೇನೆ.
ಇಲ್ಲಿ ನಾನು ಸೇರಿಸಿರುವ ಕಡೆಯ ಪ್ರಶ್ನೆಯು ಮತ್ತೊಬ್ಬ ವಿದ್ಯಾರ್ಥಿಯ ಪ್ರಬಲ ಮನಸ್ಸಿನಿಂದ ಹೊಮ್ಮಿದ್ದು. "ಮಹನೀಯರೇ, ಹೇಳಿ ಪಾಕಿಸ್ಥಾನದ ಯುದ್ದಾಸ್ತ್ರಗಳು ಭಾರತದ ಯುದ್ಧಾಸ್ತ್ರಗಳಿಗಿಂತ ಪ್ರಬಲವಾಗಿವೆಯೇ?" ನಾನು ಅ ಹುಡುಗನನ್ನು ಈ ಅನುಮಾನವೇಕೆ ಬಂತು ಎಂದು ಪ್ರಶ್ನಿಸಿದ್ದಕ್ಕೆ ಅವನು ತಾನು ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಗಳನ್ನು ನೋಡಿ ಈ ನಿರ್ಣಯಕ್ಕೆ ಬಂದಿದ್ದೇನೆಂದು ತಿಳಿಸಿದ.
"ಇದೇ ನಮ್ಮ ದೇಶದ ಅದ್ವಿತೀಯ ಗುಣ, ಅದೇನೆಂದರೆ ನಮ್ಮಷ್ಟಕ್ಕೆ ನಾವೇ ನಮ್ಮ ಸಾಮರ್ಥ್ಯದ ಬಗ್ಗೆ ಕೀಳುಭಾವನೆಯನ್ನು ಹೊಂದಿರುವುದು. ಇದು ನಮಗೆ ಅನುವಂಶೀಯವಾಗಿ ಕೂಡಾ ಬಂದಿರಬಹುದು." ನಾನು ಹೇಳಿದೆ, "ಭಾರತವು ಯಾವುದೇ ರೀತಿಯ ಅಸ್ತ್ರದ ಯೋಜನೆಯನ್ನು ರೂಪುಗೊಳಿಸಬಲ್ಲುದು, ಅದನ್ನು ಅಭಿವೃದ್ಧಿ ಪಡಿಸಬಲ್ಲುದು ಮತ್ತಷ್ಟೇ ಅಲ್ಲ ಅದನ್ನು ತಯಾರು ಕೂಡಾ ಮಾಡಬಲ್ಲದು. ಪ್ರಪಂಚದಲ್ಲಿ ಕೇವಲ ನಾಲ್ಕು ದೇಶಗಳು ಮಾತ್ರ ಈ ರೀತಿಯ ಸಾಮರ್ಥ್ಯವನ್ನು ಹೊಂದಿರುವುದು. ನಿನ್ನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಅನುಮಾನಗಳನ್ನು ಹೊರದೂಡು." ಈ ಉತ್ತರವನ್ನು ಕೇಳಿದ ಬಾಲಕ ನನ್ನೆಡೆಗೆ ಸಂತೃಪ್ತತೆಯ ನೋಟವನ್ನು ಬೀರಿದ.
ನಾನು ಭೇಟಿಯಾದ ೪೦,೦೦೦ಕ್ಕೂ ಅಧಿಕ ಹೈಸ್ಕೂಲು ವಿದ್ಯಾರ್ಥಿಗಳು ಕೇಳಿದ ಸಾವಿರಾರು ಪ್ರಶ್ನೆಗಳಲ್ಲಿ ನಾನು ಇಲ್ಲಿ ಕೇವಲ ಹನ್ನೊಂದೇ ಪ್ರಶ್ನೆಗಳನ್ನು ಆರಿಸಿಕೊಂಡಿದ್ದೇನೆ. ಈ ಪ್ರಶ್ನೆಗಳು ಆ ಹುಡುಗರ ಅಮಾಯಕತ್ವವನ್ನು ಬಿಂಬಿಸಿದರೂ ಕೂಡಾ ಅವರಲ್ಲಿರುವ ನಾವು ಬಲಶಾಲಿಯಾದ ಮತ್ತು ಸಂಪದ್ಭರಿತ ದೇಶದಲ್ಲಿ ವಾಸಿಸಬೇಕೆಂಬ ಸುಪ್ತ ಬಯಕೆಯನ್ನೂ ಕೂಡಾ ಹೊರಹಾಕುತ್ತವೆ. ಈ ಎಲ್ಲಾ ಸಂಭಾಷಣಾ ಸಭೆಗಳಿಂದ ನಾನು ತಿಳಿದುಕೊಂಡಿದ್ದೇನೆಂದರೆ ನಮಗೆ ಅದು ವಿಜ್ಞಾನವಿರಲಿ, ಉದ್ಯಮ ರಂಗವಿರಲಿ, ಕ್ರೀಡೆ ಅಥವಾ ಮನೋರಂಜನೆ ಹೀಗೆ ಯಾವುದೇ ಕ್ಷೇತ್ರವಿರಲಿ ಅದರಲ್ಲಿ ನಮಗೆ ಆದರ್ಶ ವ್ಯಕ್ತಿಗಳ ಅವಶ್ಯಕತೆಯಿದೆ. ನನ್ನ ಪ್ರಶ್ನೆ ಏನೆಂದರೆ, ನಾವು ನಮ್ಮ ಮಕ್ಕಳಿಗೆ ಒಂದು ಆದರ್ಶ ವ್ಯಕ್ತಿತ್ವವನ್ನು ಕೊಡಬಲ್ಲೆವೇ? ಮತ್ತು ಅದು ಹೇಗೆ?
ಈ ಬರಹವು, "ಪ್ರಜ್ವಲಿತ ಮನಸ್ಸುಗಳು" ಪುಸ್ತಕದ 'ಭಾರತದಲ್ಲಿ ಸುಪ್ತವಾಗಿರುವ ಶಕ್ತಿಯ ಅನಾವರಣ' ಭಾಗದಿಂದ ಆಯ್ದುಕೊಳ್ಳಲಾಗಿದೆ. ಲೇಖಕರು - ಎ.ಪಿ.ಜೆ. ಅಬ್ದುಲ್ ಕಲಾಮ್ (From Ignited Minds - Unleashing the Power Within India, By A.P.J. Abdul Kalam)
*****
ಕನಸಿರಿ, ಕನಸಿರಿ, ಕನಸಿರಿ
“ಸ್ನೇಹಿತರೆ, ಕನಸುಗಳಿಲ್ಲದಿದ್ದರೆ, ಯಾವುದೇ ರೀತಿಯ ಕ್ರಾಂತಿಕಾರಕ ಆಲೋಚನೆಗಳು ಉದ್ಭವವಾಗುವುದಿಲ್ಲ, ಯಾವುದೇ ರೀತಿಯ ಆಲೋಚನೆಗಳಿಲ್ಲದ ಮೇಲೆ ಯಾವುದೇ ರೀತಿಯ ಕಾರ್ಯವು ಹೊರಹೊಮ್ಮದು.”
ವಿ.ಸೂ.: ಈ ಲೇಖನವು,ಡಾll ಅಬ್ದುಲ್ ಕಲಾಂ ಅವರು ನಿಮ್ಮೊಂದಿಗೆ ಮಾತನಾಡುತ್ತಾರೆ – ಒಂದು ಸಂಗ್ರಹ ಗ್ರಂಥ (Dr. Abdul Kalam Speaks to you – A Compilation), ಪ್ರಕಟಣೆ: ಶ್ರೀಸಂತ್ಗಜಾನನ್ಮಹರಾಜ್ತಾಂತ್ರಿಕಮಹಾವಿದ್ಯಾಲಯ, ಶೇಗಾಂವ್ – ೪೪೪೨೦೩, ಬುಲ್ಡಾನಾಜಿಲ್ಲೆ, ಮಹರಾಷ್ಟ್ರರಾಜ್ಯ; ಆಂಗ್ಲಭಾಷೆಯಪುಸ್ತಕದ೨೩.೬ರಿಂದ ೩೨ನೇ ಪುಟಗಳಅನುವಾದದಭಾಗ.
ಚಿತ್ರಕೃಪೆ:
http://www.google.co.in/imgres?hl=kn&sa=X&biw=1821&bih=797&tbm=isch&prmd=imvns&tbnid=Tp3tKq-pdu978M:&imgrefurl=http://gmjag-radhakrishna.blogspot.com/2011/08/missile-man-of-india.html&imgurl=http://2.bp.blogspot.com/-IjV2lLJR-B8/TkY0KPMqbEI/AAAAAAAAAkY/XD31KR3Tw6o/s1600/abdul%252Bkalam.jpg&w=500&h=700&ei=qKtIUJT8JOWeiAfrvoH4Cg&zoom=1&iact=hc&vpx=660&vpy=121&dur=4021&hovh=266&hovw=190&tx=125&ty=188&sig=110207964646523070807&page=1&tbnh=148&tbnw=110&start=0&ndsp=40&ved=1t:429,r:3,s:0,i:80
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!