ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮುನ್ನುಡಿ: ಒಮ್ಮೆ ಅನಂತಮೂರ್ತಿಯವರು "ಇಸ್ಮಾಯಿಲ್ ನಂತೆ ಸಂದರ್ಶನ ಬೇರೊಬ್ಬರು ಮಾಡಿದ್ದಿಲ್ಲ" ಎಂದಿದ್ದರು. ನಾವುಗಳು ನಸುನಕ್ಕು ಸುಮ್ಮನಾಗಿದ್ದೆವು. ಈಗ ಸಂಪದದ ೭ನೇ podcast ಹೊರತರುತ್ತಿರುವ ಸಮಯದಲ್ಲಿ ಪ್ರತಿ ಬಾರಿಯೂ "ಬಹಳ ಒಳ್ಳೆಯ ಪ್ರಶ್ನೆ" ಎಂದು ಶಹಬ್ಬಾಸ್ ಎನಿಸಿಕೊಳ್ಳುವ ಇಸ್ಮಾಯಿಲ್ ಬಗ್ಗೆ ಅನಂತಮೂರ್ತಿಯವರ ಆ ಮಾತು ಉತ್ಪ್ರೇಕ್ಷೆಯೆಂದನಿಸದು. ೭ನೇ ಕಂತು ಸಂಪದವನ್ನು ಸಂಪದವಾಗಿಸಿದ ಇಸ್ಮಾಯಿಲ್, ಓ ಎಲ್ ಎನ್, ಹಾಗೂ ಉಳಿದೆಲ್ಲ ಸ್ನೇಹಿತರಿಗೆ ಮುಡುಪು.
ಗಮನಿಸಿ: ಈ ಸಂಚಿಕೆಯಿಂದ ಪ್ರಾರಂಭಿಸಿ ಸಂದರ್ಶನದ ಆಡಿಯೋ ___LINK_OPEN_href="http://en.wikipedia.org/wiki/Ogg_Vorbis"___ogg vorbis ಫಾರ್ಮ್ಯಾಟಿನಲ್ಲಿ ಕೂಡ ಲಭ್ಯ. ಈ ಸಂದರ್ಶನದ ___LINK_OPEN_href="http://sampada.net/article/nisar_interview"___ಲಿಖಿತ ರೂಪ ಕೂಡ ಲಭ್ಯವಿದೆ. ಬರೆಹ ರೂಪಕ್ಕೆ ಇಳಿಸಿದ್ದು. ___LINK_OPEN_href="http://sampada.net/user/suresh_k"___ಸುರೇಶ್ ಕೆ - ಹರಿ ಪ್ರಸಾದ್ ನಾಡಿಗ್
ಹರಿಪ್ರಸಾದ್ ಮತ್ತೊಂದು ಪಾಡ್ ಕ್ಯಾಸ್ಟಿಂಗ್ ಕೂಡಾ ನನ್ನಿಂದಲೇ ಮಾಡಿಸಿಬಿಟ್ಟರು! ಈ ಬಾರಿ ಅವರು ನನ್ನನ್ನು ಸ್ವಾವಲಂಬಿಯಾಗಲು ಪ್ರೇರಪಿಸಿದರು. ಈ ಬಾರಿ ಸಂದರ್ಶಕನೂ ನಾನೇ, ಧ್ವನಿಮುದ್ರಣ ತಂತ್ರಜ್ಞನೂ ನಾನೇ. ದೇವರು ದೊಡ್ಡವನನು (ಅವನಿದ್ದರೆ!). ಜತೆಗೆ ನನ್ನ ಗೆಳೆಯ ಹಾಗೂ ಉದಯವಾಣಿಯಲ್ಲಿ ನನ್ನ ಸಹೋದ್ಯೋಗಿ ಸುರೇಶ್ ಕೆ. ಇದ್ದರು. ನಮ್ಮ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇದ್ದರು. ಇಷ್ಟು ಸಾಲದು ಎಂಬಂತೆ ಈ ಟಿವಿ ಕನ್ನಡದಲ್ಲಿ ದುಡಿಯುತ್ತಿರುವ ನಮ್ಮ ಗೆಳೆಯರ ಬಳಗದ ಸದಸ್ಯೆ ಜ್ಯೋತಿ ಇರ್ವತ್ತೂರು ಕೂಡಾ ಜತೆಗೂಡಿದ್ದರು. ಈ ಪಾಡ್ ಕ್ಯಾಸ್ಟಿಂಗ್ ನ ಬಗ್ಗೆ ನಾವ್ಯಾರೂ ಯೋಚಿಸಿರಲಿಲ್ಲ. ಶನಿವಾರ ಬೆಳಿಗ್ಗೆ (16-12-2006) 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಎಸ್. ನಿಸಾರ್ ಅಹಮದ್ ಅವರನ್ನು "ಉದಯವಾಣಿ"ಗಾಗಿ ಸಂದರ್ಶಿಸುವ ಉದ್ದೇಶದಿಂದ ನಾನು ಮತ್ತು ಸುರೇಶ್ ಅವರ ಮನೆಗೆ ಹೊರಟೆವು. ಪದ್ಮನಾಭ ನಗರದಲ್ಲಿರುವ ನಿಸಾರ್ ಅವರ ಮನೆಗೆ ಹೋಗುವ ಮುನ್ನ ದಾರಿ ಕೇಳಲು ಛಾಯಾಗ್ರಾಹಕ ಡಿ.ಸಿ ನಾಗೇಶ್ ಅವರಿಗೆ ಫೋನಾಯಿಸಿದರೆ ಅವರು ಇಲ್ಲೇ ಹತ್ತಿರ ಮೊದಲು ನಮ್ಮ ಮನೆಗೆ ಬನ್ನಿ ಎಂದರು. ನ್ಯಾಷನಲ್ ಕಾಲೇಜು ಫ್ಲೈ ಓವರ್ ಕೆಳಗಿರುವ ಅವನ ಮನೆಯಲ್ಲಿ ಒಳ್ಳೆಯ ಕಾಫೀ ಸಮಾರಾಧನೆಯ ಬಳಿಕೆ ಹೊಸ ಹೊಸ ಐಡಿಯಾಗಳು ಹೊಳೆಯತೊಡಗಿದವು. ಮೊದಲನೆಯದ್ದು ನಿಸಾರ್ ಅವರ ಹೊಸ ಭಂಗಿಯ ಫೋಟೋಗಳನ್ನು ತೆಗೆಸುವುದು. ಈ ಕುರಿತು ಚರ್ಚಿಸುತ್ತಿರುವಾಗಲೇ ಸಂಪದಕ್ಕೊಂದು ಪಾಡ್ ಕ್ಯಾಸ್ಟಿಂಗ್ ಯಾಕಾಗಬಾರದು ಎನಿಸಿತು. ತಕ್ಷಣ ಹರಿಪ್ರಸಾದ್ ಅವರಿಗೆ ಫೋನಾಯಿಸಿದರೆ ಅವರು ಪ್ರಸ್ತಾಪವನ್ನು ಒಪ್ಪಿದರು. ಆದರೆ "ನಾನು ನಿಮಗೆ ಲ್ಯಾಪ್ ಟಾಪ್ ಮತ್ತು ಮೈಕ್ ಕೊಡುತ್ತೇನೆ. ನನಗೆ ಸಂದರ್ಶನಕ್ಕೆ ಬರಲು ಸಾಧ್ಯವಿಲ್ಲ" ಎಂದರು.
ಈವರೆಗಿನ ಎಲ್ಲಾ ಪಾಡ್ ಕ್ಯಾಸ್ಟಿಂಗ್ ಗಳ ಅವಿಭಾಜ್ಯ ಅಂಗವಾಗಿದ್ದ ಹರಿಪ್ರಸಾದ್ ಅವರನ್ನು ಬಿಟ್ಟು ಹೋಗುವುದಕ್ಕೆ ನಮಗೆ ಮನಸ್ಸಿರಲಿಲ್ಲ. ಆದರೆ ಅವರಿಗೆ ಸಮಯವಿರಲಿಲ್ಲ. ನರಸಿಂಹರಾಜ ಕಾಲೋನಿಯಿಂದ ಪದ್ಮನಾಭ ನಗರಕ್ಕೆ ಲ್ಯಾಪ್ ಟಾಪ್ ಹೊತ್ತು ತಂದ ಹರಿ ತಕ್ಷಣ ಹಿಂದಿರುಗಿದರು. ಸುರೇಶ್ ಮತ್ತು ಜ್ಯೋತಿ ನನಗೆ ಬೆಂಬಲವಾಗಿ ನಿಂತು ಯಾವ ಪ್ರಶ್ನೆಗಳನ್ನು ಕೇಳಬಹುದೆಂಬುದನ್ನು ಸೂಚಿಸಿದರು. ಪಾಡ್ ಕ್ಯಾಸ್ಟಿಂಗ್ ಗೆ ಮಾನಸಿಕವಾಗಿ ಸಿದ್ಧನಾಗಿ ಇರದಿದ್ದ ನಾನು ಹಲವು ಪ್ರಶ್ನೆಗಳನ್ನು ತಡವರಿಸುತ್ತಾ ತಪ್ಪು ತಪ್ಪಾಗಿಯೇ ಕೇಳಿದ. ಹರಿಪ್ರಸಾದ್ ಅವರ ಸಂಪಾದನಾ ಕೌಶಲ್ಯದಲ್ಲಿ ಈ ತಪ್ಪುಗಳು ಕೆಲಮಟ್ಟಿಗೆ ಮುಚ್ಚಿ ಹೋಗಿವೆ. ನಿಸಾರ್ ರಲ್ಲಿ ಒಂದು ಕವನ ವಾಚಿಸುವಂತೆ ಕೇಳಿಕೊಳ್ಳಬಹುದಿತ್ತು ಎಂಬುದು ಈಗ ನೆನಪಾಗುತ್ತಿದೆ. ಕೆಲವೊಮ್ಮೆ ಇತಿಹಾಸವೂ ಪಾಠ ಕಲಿಸುವುದಿಲ್ಲ ಎಂಬುದಕ್ಕೆ ಇದೂ ಒಂದು ನಿದರ್ಶನವೇನೋ? ಕನ್ನಡ-ಇಂಗ್ಲಿಷ್ ಮಾಧ್ಯಮ ವಿವಾದಕ್ಕೆ ಸಂಬಂಧಿಸಿದಂತೆ ಈ ಸಂದರ್ಶನದಲ್ಲಿ ಬಹಳ ಚೆನ್ನಾಗಿ ಮಾತನಾಡಿದ್ದಾರೆ ಎಂಬುದು ನನ್ನ ಸ್ವಂತ ಅನಿಸಿಕೆ. ಹಾಗೆಯೇ ವಿಜ್ಞಾನ ಬರೆವಣಿಗೆ, ಮುಸ್ಲಿಂ ಸಂವೇದನೆಯಂಥ ವಿಷಯಗಳ ಬಗ್ಗೆಯೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಸಂಪದ' ಬಳದ ಪ್ರಯತ್ನಕ್ಕೆ ಅವರು ವಿಶೇಷಾಭಿನಂದನೆಗಳನ್ನು ತಿಳಿಸಿದ್ದಾರೆ. ಪಾಡ್ ಕ್ಯಾಸ್ಟಿಂಗ್ ಕೇಳಿ ನಿಮಗಿಷ್ಟವಾಯಿತೆ ಇಲ್ಲವೇ ಎಂದು ತಿಳಿಸಿ. ಎಲ್ಲದಕ್ಕಿಂತ ಮುಖ್ಯವಾಗಿ ನಿಸಾರ್ ಅವರ ವ್ಯಕ್ತಪಡಿಸಿರುವ ಹಲವು ವಿಷಯಗಳು ಕನ್ನಡದ ಬಗ್ಗೆ ಕಾಳಜಿಯುಳ್ಳ ಎಲ್ಲರನ್ನೂ ಚಿಂತನೆಗೆ ಹಚ್ಚುವಂಥವು. ನಿಮ್ಮ ನಿಮ್ಮ ಚಿಂತನೆಗಳನ್ನು ಸಂಪದದಲ್ಲಿ ದಾಖಲಿಸಿ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೆ ದೊರಕಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಉತ್ತರ
ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು. ಇದಕ್ಕೆ ಮೂರ್ನಾಲ್ಕು ಕಾರಣಗಳಿವೆ. ನಾಲ್ಕು ವರ್ಷಗಳ ಹಿಂದೆಯೇ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಅಂತ ವದಂತಿಯಾಗಿತ್ತು. ತುಂಬಾ ಜನ ದೂರವಾಣಿ ಮೂಲಕ ಶುಭ ಕೋರಿದ್ದರು ಕೂಡ. ಸಹಜವಾಗಿ ತುಂಬಾ ಖುಷಿಯಾಗಿತ್ತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ನಾನು ಆಯ್ಕೆಯಾಗಿಲ್ಲ ಅಂತ ಗೊತ್ತಾಗಿ ನಿರಾಸೆ ಆಯ್ತು. ಆಸೆ ಹುಟ್ಟಿಸಿ ಆಮೇಲೆ ಹೀಗಾದರೆ ಎಲ್ಲೋ ಎಂಥಾ ಮನುಷ್ಯನಿಗಾದ್ರೂ, ಎಂಥಾ ಸ್ಥಿತಪ್ರಜ್ಞನಿಗಾದ್ರೂ ಸ್ವಲ್ಪ ಬೇಸರ ಆಗುತ್ತೆ. ಆದ್ರೂ ಸಾವರಿಸಿಕೊಂಡೆ. ಹಾಗೆ ನೋಡಿದ್ರೆ ಇಷ್ಟರವರೆಗೆ ನನಗೆ ಬಂದಿರುವಂಥ ಪ್ರಶಸ್ತಿಗಳೆಲ್ಲ ಆಯಾಚಿತವಾಗಿ ಬಂದಂಥವು. ಯಾರ ಕೈಕಾಲು ಹಿಡಿದು ಪಡೆದುಕೊಂಡದ್ದೇನಲ್ಲ. ಹಾಗಾಗಿ ಬರಬೇಕಾಗಿದ್ದು ಬಂದೇ ಬರುತ್ತೆ ಅನ್ನೋ ನಂಬಿಕೆ ಇತ್ತು. ದೈವ ಕೃಪೆಯಿಂದ ಎಂಥಾ ಹೊತ್ತಲ್ಲಿ ಬಂದಿದೆ ಅಂದರೆ, ಕರ್ನಾಟಕ ಸುವರ್ಣ ರಾಜ್ಯೋತ್ಸವದ ಹೊನ್ನಸಗೆ ಆಚರಿಸುತ್ತಿದೆ. ಶಿವಮೊಗ್ಗದಲ್ಲಿ- ನಾನು ಎಲ್ಲಿ ಅತ್ಯಂತ ಮಹತ್ವದ, ಪುಷ್ಕಳವಾದ, ಧಾರಾಳವಾದ ಕವಿತೆಗಳನ್ನು ಬರೆದನೋ ಅಲ್ಲಿ ಸಮ್ಮೇಳನ ನಡೆಯುತ್ತಿದೆ. ಶಿವಮೊಗ್ಗ ನನ್ನ ಎರಡನೇ ಸೃಜನಶೀಲತೆಯ ತವರು ಅಂತ ಹೇಳಿಕೊಂಡಿದ್ದೇನೆ. ಬೆಂಗಳೂರು ಬಿಟ್ಟರೆ ಶಿವಮೊಗ್ಗ ನನಗೆ ಅತ್ಯಂತ ಪ್ರಿಯವಾದ ಊರು. ಏಕೆಂದರೆ ನನಗೆ ಅಲ್ಲಿ ಏಕಾಂತ ಸಿಕ್ತು. 1967ರ ಹೊತ್ತಲ್ಲಿ ಆಟೋಗಳು ಇರ್ಲಿಲ್ಲ, ಬರೀ ಜಟಕಾ ಗಾಡಿಗಳಿದ್ವು. ಶಿವಮೊಗ್ಗ ತನ್ನ ಹಳ್ಳಿ ಸೊಗಡಿನ ಮುಗ್ಧತೆ ಕಾಪಾಡಿಕೊಂಡು ಬಂದಿತ್ತು. ಇವತ್ತು ಹಿರಿಯಕ್ಕನ ಚಾಳಿ ಅಂತ ಬೆಂಗಳೂರಿನ ಚಾಳಿ ಬಡಿದಿದೆ ಅದಕ್ಕೆ. ಆ ಕಾಲದಲ್ಲಿ ತುಂಬಾ ನಿರಾಳವಾಗಿತ್ತು. ಕೈಚಾಚಿದಲ್ಲಿ ಗದ್ದೆ, ತೋಟ, ಹೊಳೆ, ಕಾಲುವೆ, ಪಕ್ಷಿಗಳು.... ಅತ್ಯಂತ ಆನಂದ ನೀಡುವ, ಪ್ರಶಾಂತ ವಾತಾವರಣ. ಹಾಗಾಗಿ ಶಿವಮೊಗ್ಗದಲ್ಲಿ ಈ ಸ್ಥಾನ ಸಿಕ್ಕಿದ್ದಂತೂ ನನಗೆ ಉಡುಗೊರೆ ಕೊಟ್ಟ ಹಾಗಿದೆ. ಇನ್ನೊಂದು ವಿಚಾರವೆಂದರೆ, ಶಿವಮೊಗ್ಗದಲ್ಲಿ ನಾನು ಯಾವ ಕೋಣೆಯಲ್ಲಿ ಕುಳಿತು ಸಾಮಾನ್ಯ ಶಿಷ್ಟ ಜನ, ವಿಮರ್ಶಕರು ಇವತ್ತಿಗೂ ಒಳ್ಳೆಯ ಪದ್ಯಗಳು ಅಂತ ಮೆಚ್ಚಿಕೊಂಡಿರುವ ಕವಿತೆಗಳನ್ನು ಬರೆದೆನೋ ಆ ಕೋಣೆಗೂ ಈಗ ಸಮ್ಮೇಳನ ನಡೆಯುತ್ತಿರುವ ವೇದಿಕೆಗೂ ಒಂದೇ ರಸ್ತೆ ಅಡ್ಡ. ಇದು ಕಾಕತಾಳೀಯವೋ, ಯೋಗಾಯೋಗವೋ ಗೊತ್ತಿಲ್ಲ. ಯಾವುದೋ ಅಲೌಕಿಕ ಶಕ್ತಿಯ ಕೃಪೆ ಇರುವುದಂತೂ ನಿಜ. ಆ ಶಕ್ತಿಗೆ ನನ್ನ ನಮಸ್ಕಾರ.
ಪ್ರಶ್ನೆ ೨
ಶಿವಮೊಗ್ಗದ ಜಯನಗರದಲ್ಲಿ ವಾಸವಾಗಿದ್ದಾಗ ನೀವು ಪ್ರತೀದಿನ ವಾಕಿಂಗ್ಗೆ ಅಂತ ನವುಲೆ ದಾರಿಯಲ್ಲಿ ಹೋಗ್ತಿದ್ರಿ. ಹನುಮ ಸಿಕ್ಕ ದಾರಿ ಬಗ್ಗೆ ಸ್ವಲ್ಪ ಹೇಳಿ. ನಿಜವಾಗಿಯೂ ಹನುಮ ಸಿಕ್ಕಿದ್ನಾ ಅಥವಾ ಅದು ನಿಮ್ಮ ಕಲ್ಪನೆಯಾ ಹೇಳಿ.
ಉತ್ತರ
ಕಲ್ಪನೆಯಲ್ಲ. ಹಾಗೊಬ್ಬ ವ್ಯಕ್ತಿ ಇದ್ದ. ಅವನ ಹೆಸರು ನೆನಪಿಲ್ಲ. ಒಂದೂವರೆ-ಎರಡು ವರ್ಷ ಪ್ರತೀದಿನ ಆ ದಾರಿಯಲ್ಲಿ ಅವನು ಸಿಗ್ತಿದ್ದ. ಗದ್ದೆಯಲ್ಲಿ ಕೆಲಸ ಮಾಡ್ತಿದ್ದ. ತುಂಬಾ ಕೊಳಕ. ಮಾತಲ್ಲಿ ಮಾತ್ರ ಮಹಾ ಚಾಲಾಕಿ. ಆವತ್ತು ಸಿ.ವಿ. ರಾಮನ್ ತೀರಿಕೊಂಡ್ರು ಅಂತ ಪೇಪರಲ್ಲಿ ಓದಿ ಮನೆಯಿಂದ ಆಚೆ ಬಂದು ನೋಡಿದ್ರೆ ಯಾರಿಗೂ ಆ ಬಗ್ಗೆ ದುಃಖ ಇದ್ದಂತಿರಲಿಲ್ಲ. ಇಷ್ಟಕ್ಕೂ ಯಾವ ವ್ಯಕ್ತಿ ತೀರಿಕೊಂಡ್ರೇನು, ಜನರಿಗೆ ಅವರದೇ ಆದ ಚಿಂತೆಗಳಿರುತ್ತವೆ. ಸಾವು ಮತ್ತು ಬದುಕಿನ ನಡುವಿನ ಅಸಾಂಗತ್ಯದ ತಾತ್ವಿಕ ವಿಚಾರ ಇಲ್ಲಿ ಗೋಚರವಾಗುತ್ತೆ. ನಾನು ಸಾವು ಮತ್ತು ಬದುಕಿನ ನಡುವೆ ನಡೆಸಿದ ಜಿಜ್ಞಾಸೆಗಳಿವೆಯಲ್ಲ, ಅವೆಲ್ಲ ಸಾಂಕೇತಿಕವಾಗಿ ಆ ಪದ್ಯದಲ್ಲಿ ಮೂಡಿವೆ. ಹಾಗಾಗಿ ಈಗ ಆ ಪದ್ಯವನ್ನು ಎಲ್ಲೇ ಓದಲಿ ಬಹಳ ಮೌನವಾಗಿ ಜನ ಕೇಳ್ತಾರೆ. ಆ ಪದ್ಯಕ್ಕೆ ನಾಟಕೀಯತೆಯೂ ಇದೆ, ಅತ್ಯಂತ ಸರಳವೂ ಆಗಿದೆ. ಆದರೆ ತತ್ವ ಉದಾತ್ತವಾಗಿದೆ. ಜಿಜ್ಞಾಸೆ, ಮನನ, ಶಾಂತ ಚಿತ್ತದಲ್ಲಿ ಆಲೋಚನೆ ಮಾಡುವಂಥ ಭಾವನೆಗಳು, ತಾತ್ವಿಕ ಸತ್ವ ಇವೆಲ್ಲ ಅದರಲ್ಲಿ ಅಡಗಿದೆ. ಹಾಗೆ ಹನುಮ ಎಂದು ಕರೆಯುವ ಆ ವ್ಯಕ್ತಿ ಬರೀ ಲೌಕಿಕ. ತನ್ನ ಸೀಮಿತ ಜಗತ್ತು ಬಿಟ್ರೆ, ತನ್ನ ಗದ್ದೆ, ಧಣಿ, ಪುಢಾರಿ, ಹೆಂಡ್ತಿ, ಮಕ್ಕಳು ಬಿಟ್ರೆ ಬೇರೆ ಜಗತ್ತಿನ ಬಗ್ಗೆ ಯಾವುದೇ ಆಸೆ ಅವನಿಗೆ ಇದ್ದಂತಿಲ್ಲ. ಹೀಗಿದ್ರೂ ಕೂಡ ಬದುಕಿಗೆ ಇಂಥವರೂ ಬೇಕಾಗ್ತಾರೆ. ಬದುಕಿಗೆ ಮೂಲವಾಗಿ ವಿದ್ಯೆ ಮತ್ತು ಅವಿದ್ಯೆ ಎರಡೂ ಬೇಕಾಗುತ್ತೆ. ಬರೀ ವಿದ್ಯಾವಂತರೇ ಸೇರಿಬಿಟ್ರೆ ಜಗತ್ತು ನಡೆಯೊಲ್ಲ. ಶ್ರಮಜೀವಿಗಳೂ ಬೇಕು. ಇವರಿಂದಲೂ ಜಗತ್ತು ನಡೆಯುತ್ತೆ. ಹೀಗಾಗಿ ಬದುಕಿನ ಎರಡು ಸತ್ವಗಳ ಬಗ್ಗೆ ಸಾತ್ವಿಕ ಆಲೋಚನೆ ಮಾಡಿದೆ. ಭವ್ಯವಾದ ಸಾವಾದ್ರೂ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರದೇ ಇರುವುದೆಲ್ಲ ಬಹಳ ವಿಚಿತ್ರವಾಗಿ ಕಾಣುತ್ತೆ. ನನ್ನ ಇನ್ನೊಂದು ಕವಿತೆ `ಮೃಗಾಯಣ'ದಲ್ಲಿ ಇದನ್ನು ಬೇರೆ ರೀತಿಯಲ್ಲಿ ಹೇಳಿದ್ದೇನೆ. ಒಬ್ಬ ದೊಡ್ಡ ಶಿಕಾರಿ ಹುಲಿಯನ್ನು ಪಾಯಿಂಟ್ ಬ್ಲಾಂಕ್ ರೇಂಜ್ನಲ್ಲಿ ಹೊಡೆದಿರುತ್ತಾನೆ. ಅಂಥ ಅಸೀಮ ಸಾಹಸಿ ಅವನು. ಆದರೆ ಅವನ ಸಾವು ಅತ್ಯಂತ ಹೀನಾಯ ಸ್ಥಿತಿಯಲ್ಲಾಗುತ್ತೆ. ಆ ಸಾಹಸಮಯ ಬದುಕಿಗೂ ನಗೆಪಾಟಲಿನ ಸಾವಿಗೂ ಯಾವುದೇ ಸಂಬಂಧವಿಲ್ಲ. ಹೀಗೆ ಅದರ ಒಂದು ಎಳೆ ಇಲ್ಲಿದೆ. ಹನುಮನಂಥವನು ಮತ್ತು ರಾಮನ್ರಂಥವರನ್ನು ಹೋಲಿಕೆ ಮಾಡಿ ನೋಡಿದ್ದೇನೆ. ರಾಮನ್ ಬಗ್ಗೆ ಇವನಿಗೆ ಗೊತ್ತಿಲ್ಲ, ಈ ಅಜ್ಞಾನಿ ಬಗ್ಗೆ ರಾಮನ್ಗೆ ಗೊತ್ತಿಲ್ಲ. ಇದೇ ನಮ್ಮ ಬದುಕಿನ ದುರಂತ ಅಂತ ಹೇಳಿದ್ದೇನೆ.
ರಾಮನ್ರನ್ನು ಅವಜ್ಞೆ ಮಾಡಿದ್ದನ್ನು ಕಂಡು ಆ ಸಂದರ್ಭದಲ್ಲಿ ನನಗೆ ತುಂಬಾ ದುಃಖವಾಗಿತ್ತು. ಬದುಕು ಅಂದ್ರೆ ಇಷ್ಟೆನಾ? ನಾನೂ ನಾಳೆ ಹೋಗ್ತೀನಿ, ನಾನೂ ಹೀಗೇನಾ? ನನ್ನ ಪದ್ಯಗಳೆಲ್ಲಾ ಅನಾಥವಾಗುತ್ತವೆಯಾ ಎಂಬಿತ್ಯಾದಿ ಯೋಚನೆ ಬಂದು ಇಷ್ಟೇ ಜಗತ್ತು ಅನ್ನೋ ನಿರಾಶಾ ಭಾವನೆಯೂ ಮೂಡಿತು. ಆ ಸ್ಥಿತಿಯಲ್ಲಿ ಕೂತು ಮುಕ್ಕಾಲು ಗಂಟೆಯಲ್ಲಿ ಬರೆದ ಪದ್ಯ ಅದು. ಅದೇನೋ ಏನೋ, ಈ ಪದ್ಯ, ನಿತ್ಯೋತ್ಸವ, ಕುರಿಗಳು- ಇಂಥ ಪದ್ಯಗಳೆಲ್ಲ ಹುಟ್ಟುವಾಗಲೇ ತಮ್ಮ ಜಾತಕ ಮುಗಿಸಿಕೊಂಡು ಬಂದಂತೆ ಪ್ರಖ್ಯಾತಿ ಪಡೆದುಬಿಟ್ಟವು.
ಪ್ರಶ್ನೆ ೩
ಕನ್ನಡ ಕಾವ್ಯ ಜಗತ್ತಿನಲ್ಲಿ ನಿಮ್ಮ ಸಮಕಾಲೀನರಿಗಿಂತ ನೀವು ಭಿನ್ನ ಹಾದಿ ತುಳಿದವರು. ರಾಜಕೀಯ, ತಾತ್ವಿಕ ಪದ್ಯಗಳ ಜೊತೆಗೇ ಹಾಡೋ ಪದ್ಯಗಳನ್ನೂ ಬರೆದಿರಿ. ಹಾಡೋ ಪದ್ಯ ಬರೆಯುವುದು ಅವಮಾನಕಾರಿ ಅಂತ ನಿಮ್ಮ ಸಮಕಾಲೀನರು ತಿಳಿದಕೊಂಡಿದ್ದಾಗ್ಲೂ ಧೈರ್ಯವಾಗಿ ತಾತ್ವಿಕವಾಗಿದ್ದನ್ನು, ಗಟ್ಟಿಯಾಗಿದ್ದನ್ನು ಹೇಳಲು ಸಾಧ್ಯ ಅಂತ ತೋರಿಸಿದ್ರಿ. ಆ ಒತ್ತಡಗಳ ಮಧ್ಯೆ ಇದು ಹೇಗೆ ಸಾಧ್ಯವಾಯಿತು?
ಉತ್ತರ
ಬಹಳ ಒಳ್ಳೇ ಪ್ರಶ್ನೆ. ಇದು ನನ್ನ ಸೃಜನಶೀಲತೆಯ ಆರಂಭದ ದಿನಗಳತ್ತ ಕರೆದುಕೊಂಡು ಹೋಗುತ್ತೆ. ಹಾಗೆ ನೋಡಿದ್ರೆ ನಾನು ಗಂಭೀರ ಪದ್ಯ ಬರೆಯೋಕೆ ಶುರುಮಾಡಿದ್ದು 1954ರಿಂದ. ಗಂಭೀರ ಅಂದ್ರೆ ಪ್ರಕಟಿಸಲು ಅರ್ಹ ಪದ್ಯಗಳು. ಆ ಹೊತ್ತಿಗೆ ನವ್ಯ ಕಾವ್ಯ ಬಂದಿತ್ತು. ಆದ್ರೂ ನವೋದಯದ ಜಾಡು ಬಿಟ್ಟಿರ್ಲಿಲ್ಲ. ನವ್ಯದ ಗಾಳಿ ಬೀಸುತ್ತಿದ್ದರಿಂದ ನಾನೂ ಅದರ ಒಂದು ಭಾಗವಾಗಿ ಹೋದೆ. ಹಾಗೆ ಬರೆದಾಗ ಅನಿಸ್ತು- ನನ್ನ ಮನಸ್ಸಿನ ವಿಚಾರಗಳಿಗೆ ನವ್ಯ ಕಾವ್ಯ ಪ್ರಮುಖ ಮಾಧ್ಯಮವಾದ ಹಾಗೆ, ನನ್ನ ಭಾವನೆಗಳಿಗೆ ನವೋದಯ ಕಾವ್ಯದ ಗುಣವೇ ಇರಬೇಕು. ಒಂದು ರೀತಿಯ ಸಂಗೀತತೆ, ಗೇಯತೆ, ಶಬ್ದಗಳ ಕುರಿತ ಛಂದೋಬದ್ಧ ಲಯ ಇರಬೇಕು ಅನಿಸ್ತು. ಆದ್ರೆ ಬರೀತಾ ಬರೀತಾ 50-60ನೇ ಇಸ್ವಿಗಳಲ್ಲಿ ಒಂದು ಬಗೆಯ ಯಾಂತ್ರಿಕ ಪುನರಾವರ್ತನೆ ಶುರುವಾಯ್ತು- ನವ್ಯ ಕಾವ್ಯದಲ್ಲಿ. ನವೋದಯ ಕಾವ್ಯಕ್ಕೆ ಚುಚ್ಚುಮದ್ದು ಕೊಟ್ಟು ವಾಸ್ತವದ ನೆಲೆಗಿಳಿಸಬೇಕು, ಅದು ಆಕಾಶ ಹಕ್ಕಿ ಆಗ್ಬಿಟ್ಟಿದೆ. ಅದು ಆಕಾಶದಲ್ಲಿ ಹಾರಾಡ್ತಿದೆ, ಸತ್ಯಂ ಶಿವಂ ಸುಂದರಂ ಅನ್ನೋದು ಬಿಟ್ಟು ಎಲ್ಲ ಅಮೂರ್ತ ತತ್ವ ಹೇಳ್ತಿದೆ. ಹಾಗಾಗಿ ಇದು ನಮ್ಮ ಬದುಕಿಗೆ ಸಂಗತವಾಗಿಲ್ಲ, ಹತ್ತಿರವಾಗಿಲ್ಲ, ಬದುಕಿಗೆ ಹತ್ತಿರ ತರ್ಬೇಕು. ನಮ್ಮ ಕಷ್ಟ-ನಷ್ಟ, ಹತಾಶೆ, ನಿರಾಸೆಗಳನ್ನು, ಸ್ವಾತಂತ್ರ್ಯ ನಂತರದ ಭಗ್ನ ಮನೋರಥಗಳನ್ನು ತೋಡಿಕೊಳ್ಳಬೇಕು ಎಂಬ ಆಶಯಗಳೊಂದಿಗೆ ನವ್ಯ ಕಾವ್ಯದ ಉದಯವಾಯಿತು. ಇದು ಒಳ್ಳೇ ಆಶಯವೇ. ಆದರೆ ಎಲ್ಲರೂ ಒಂದೇ ಅಚ್ಚಿನಲ್ಲಿ ಬರೆಯತೊಡಗಿದ್ರು. ಇವತ್ತು ಹೇಗೆ ಶೋಷಣೆ, ಪ್ರಸ್ತುತತೆ ಇತ್ಯಾದಿಗಳೇ ಮುಖ್ಯವಾಗಿ ಎಲ್ಲರೂ ಅದೇ ಬರೀತಿದ್ದಾರೋ ಹಾಗೆ. ಯಾವತ್ತೂ ಒಂದು ಆಶಯ ಇಟ್ಟುಕೊಂಡು ಬರೆದರೆ ಕವಿ ಸಂಕುಚಿತನಾಗುತ್ತಾನೆ. ಜಗತ್ತಿನ ಅನುಭವಗಳನ್ನು ಅವನು ಗ್ರಹಿಸಬೇಕು. ವಿವಿಧ ಮೂಲಗಳಿಂದ ಅನುಭವ ಆಪೋಶಿಸಿಕೊಂಡು ಸಮೃದ್ಧನಾಗಬೇಕು, ಸಂಪನ್ನನಾಗಬೇಕು. ತನ್ನ ಮೇಲೆ ಯಾವುದು ಪ್ರಭಾವ ಬೀರಿರುತ್ತೆ, ಕಾಡಿರುತ್ತೆ, ಒತ್ತಾಯಿಸುತ್ತೆ ಅವುಗಳ ಮೇಲೆಲ್ಲಾ ಬರೀಬೇಕು. ಅವುಗಳಲ್ಲಿ ಇಂಥ ಸಂವೇದನೆಗಳೂ ಒಂದು. ನವ್ಯ ಅನ್ನೋದಾಗಲೀ, ನವೋದಯ ಮಾರ್ಗದ ರೀತಿಯಾಗಲೀ ಅಥವಾ ಮುಸ್ಲಿಂ, ದಲಿತ ಸಂವೇದನೆಗಳೇ ಆಗಲಿ, ಇವೆಲ್ಲ ಭಾಗವಾಗಿ ಹೋಗಬೇಕು ವಿನಃ ಅದೇ ಪ್ರಮುಖವಾಗಬಾರದು. ಹಾಗಾದ್ರೆ ಸಾಹಿತ್ಯ ಬೆಳೆಯೊಲ್ಲ. ಉದ್ದ, ಅಗಲ ಆಗುತ್ತೇ ಹೊರತು ಆಳ ಸಿಗೊಲ್ಲ. ಹಾಗಾಗಿ ಎಲ್ಲ ಜನರಿಗೂ ಸಾಮಾನ್ಯವಾದ, ಸಾಧಾರಣೀಕರಣವಾದ, ಸಾರ್ವತ್ರಿಕ ಅನುಭವಗಳನ್ನು ಕೂಡ ಕವಿ ಬರೆಯಬೇಕಾಗುತ್ತೆ. ಆಗಲೇ ಸಂಪೂರ್ಣ, ಸಮಗ್ರ ವ್ಯಕ್ತಿತ್ವ ಹೊರತರಲಾಗುವುದು.
ನಾನು ಯೋಚನೆ ಮಾಡಿದೆ. ಎಲ್ಲರೂ ಒಂದೇ ಥರ ಬರೀತಾರೆ. ಅವು ಚಹರೆ ಇಲ್ಲದ ಕವಾಯತ್ತು. ಮುಖಹೀನ ಕವಾಯತ್ತು. ಅಡಿಗರಂಥ ಕವಿಗಳನ್ನು ಬಿಟ್ಟರೆ ನಮ್ಮ ಸಮಕಾಲೀನರಲ್ಲಿ ಎಲ್ಲರೂ ಹಾಗೇ ಬರೀತಿದ್ರು. ಹಾಗಾಗಿ ಈ ವೈಚಾರಿಕತೆಯ ಬೊಜ್ಜನ್ನು ಇಳಿಸಲಿಕ್ಕೆ ಭಾವಾತ್ಮಕತೆಯ ಸಂಪರ್ಕ ಸಿಗಬೇಕಾಗಿದೆ ಅಂತ ಯೋಚಿಸಿದ ನಾನು ಭಾವಗೀತೆಗಳನ್ನು ಬರೆದೆ. ಆ ಹೊತ್ತಿಗೆ ಈ ಮಾರ್ಗದ ಬಗ್ಗೆ ಯಾರೂ ಧೈರ್ಯ ಮಾಡಿರಲಿಲ್ಲ. ನಾನು ಬರೆದಾಗ ತಮಾಷೆ ಮಾಡಿದ್ರು. ಜನಪ್ರಿಯತೆಗೆ ಹಾತೊರೆದು ಬರೀತಾನೆ ಅಂದ್ರು. ಯಾವುದಕ್ಕೂ ಕೇರ್ ಮಾಡಿಲ್ಲ. ಅದಕ್ಕೆ ತಕ್ಕಂತೆ ಮೈಸೂರು ಅನಂತಸ್ವಾಮಿ ಎಂಬ ಹಾಡುಗಾರ ನನಗೆ ಸಿಕ್ಕಿದ. ನನ್ನ ಹಾಡುಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ರೇಡಿಯೋದಲ್ಲಿ ಹಾಡಿ ಪ್ರಚಾರ ಮಾಡಿದ. ಇವತ್ತು ಅದರ ಫಲ ಕೊಡ್ತಿದೆ. ಆ ಟ್ರೆಂಡ್ ಬೆಳೀತಿದೆ. ತಮಾಷೆ ಅಂದ್ರೆ, ಯಾರ್ಯಾರು ಆಗ ಆಡಿಕೊಳ್ತಿದ್ರೋ ಅವರೂ ಇದರಲ್ಲಿ ಗಲಾಟೆ, ಗದ್ದಲ ಇಲ್ದೆ ಸೇರಿಕೊಂಡ್ರು. ಆದರೆ ನಾನು ಮಾತ್ರ ಅವರನ್ನು ಆಡಿಕೊಂಡಿಲ್ಲ!
ಒಟ್ಟಾರೆ ನಾವು ಸಾಹಿತಿಗಳು ಯಾರೋ ದೊಡ್ಡ ಶಿಲ್ಪಿ ಕೈಯಲ್ಲಿ ಕೆಲಸ ಮಾಡ್ತಿರೋ ರೂವಾರಿಗಳು ಅಂದುಕೊಳ್ಳಬೇಕು. ನಾವೇ ದೊಡ್ಡವರು ಅಂದುಕೊಳ್ಳಬಾರದು. ಅದು ನಾವು ಬರೀತಿರೋದಲ್ಲ, ಕಾವ್ಯದ ಆಂತರಿಕ ಅವಶ್ಯಕತೆ ನಮ್ಮಿಂದ ಬರೆಸುತ್ತಿದೆ. ಕನ್ನಡ ಸಾಹಿತ್ಯವೇ ಇಂಥ ಆಂತರಿಕ ಅವಶ್ಯಕತೆ ಸೃಷ್ಟಿಸಿಕೊಂಡಿರುತ್ತೆ- ಇದರ ಕಾಲ ಮುಗೀತು, ಹೊಸದನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತ. ಆ ಅಲೌಕಿಕ ಶಕ್ತಿಯ ನೇತೃತ್ವದಲ್ಲಿ ನಾವು ಬರೀತೀವಿ. ಇದು ಟೀಂ ವರ್ಕ್. ಒಬ್ನೇ ಆಡುವ ಇಸ್ಟೀಟ್ ಆಟವಲ್ಲ, ಕಾಲ್ಚೆಂಡಿನ ಆಟ. ಇಲ್ಲಿ ಎಲ್ಲರೂ ಮುಖ್ಯ. ಫುಲ್ಬ್ಯಾಕ್, ಸೆಂಟರ್ ಫಾರ್ವರ್ಡ್, ಗೋಲ್ಕೀಪರ್- ಎಲ್ಲರೂ ಸಮಾನರು ಅಂತ ಭಾವಿಸಬೇಕು. ಇವತ್ತು ನಾವು ಗುಂಪಲ್ಲಿ ಬರೀತಿದೀವಿ. ಈ ಗುಂಪಿನ ಚಹರೆ ಹೋದ್ರೆ ಮಾತ್ರ ಕಾವ್ಯಕ್ಕೆ ಗಾಂಭೀರ್ಯ, ಆಳ ಬರುತ್ತೆ. ಈಗ ಉದ್ದ-ಅಗಲ ಆಗ್ತಿದೆ. ಬಹಳ ಸಂಭ್ರಮಯುತ ದೃಶ್ಯ ಇದು. ಬೇರೆ ಬೇರೆ ವರ್ಗಗಳವರು ತಮ್ಮ ಆಶೋತ್ತರ,ಆಶಯ, ಸಂಕಟಗಳನ್ನು ತೋಡಿಕೊಳ್ಳುತ್ತಿದ್ದಾರೆ. ಶತ ಶತಮಾನಗಳಿಂದ ಆಗಿರಬಹುದಾದ ನೋವುಗಳನ್ನು ಬಿಚ್ಚಿಡುತ್ತಿದ್ದಾರೆ. ಸಂತೋಷ. ಅವರು ಪಟ್ಟಿರೋ ಪಾಡಿಗೆ ಅಭಿವ್ಯಕ್ತಿ ಸಿಕ್ಕಿದೆ. ಆದರೆ ಎಲ್ಲರೂ ಒಂದೇ ಆಶಯ ಇಟ್ಟುಕೊಂಡು ಬರೀಬಾರ್ದು. ನೋವಿನ ಜೊತೆ ಸಂತೋಷನೂ ಇರುವ ಹಾಗೆ ಬೇರೆ ಅನುಭವಗಳ ಜೊತೆ ಇದೂ ಬರಬೇಕು ಅನ್ನೋದು ನನ್ನ ಆಶಯ.
ಹೀಗಾಗಿ ಕನ್ನಡ ಕಾವ್ಯ ಬಹಳ ಮುಂದುವರಿದಿದೆ. ಭಾರತೀಯ ಕಾವ್ಯಗಳಲ್ಲೇ ವಿಶಿಷ್ಟ ಸ್ಥಾನ ಕನ್ನಡ ಕಾವ್ಯಕ್ಕಿದೆ. ಏಳು ಜ್ಞಾನಪೀಠ ಸಿಕ್ಕಿದೆ. ನಮಗಿಂತ ಹೆಚ್ಚು ಭಾಷೆ ಮಾತಾಡುವವರಿಗೆ, ಇಂಗ್ಲಿಷಿನ ಪತ್ರಿಕೆ ಮೂಲಕ ಆ ಭಾಷೆಯನ್ನು ಹೊಗಳುತ್ತಿದ್ದವರಿಗೆ ಇದು ಒಂದು ರೀತಿಯ ಸೂಚನೆ. ಅಂಥ ಉತ್ಕೃಷ್ಟ ಸಾಹಿತ್ಯ ನಮ್ಮದು. ಆದರೆ ಈಚಿನ ಕೆಲವು ವೈವಿಧ್ಯದಲ್ಲಿ ಕಾವ್ಯತ್ವ ಸ್ವಲ್ಪ ಕಡಿಮೆಯಾಗುತ್ತಿದೆ. ಸರ್ವಾಂಗೀಣ ಸಾಹಿತ್ಯದಲ್ಲಿ ಅಭ್ಯುದಯ ಸಾಸಿದ್ದೀವಿ.
ಪ್ರಶ್ನೆ ೪
ಮುಸ್ಲಿಂ ಸಂವೇದನೆಗಳು ಅನ್ನೋ ಪರಿಕಲ್ಪನೆಯನ್ನು ನೀವು ತಾತ್ವಿಕವಾಗಿ ವಿರೋದಿಸ್ತೀರಿ ಅಂತಲ್ಲ . ಅದಕ್ಕೊಂದು ಪ್ರತಿ ಸವಾಲು ನಿಮ್ಮ ಬಳಿ ಇದ್ದೇ ಇರುತ್ತೆ. ಆದರೂ ನಿಮ್ಮ `ರಂಗೋಲಿ ಮತ್ತು ಮಗ' ಕವಿತೆ ಮುಸ್ಲಿಂ ಸಂವೇದನೆಯಲ್ಲಿ ಹೊಸ ಸಾಧ್ಯತೆಯೊಂದನ್ನು ತೆರೆದಿಟ್ಟಿತು. ಈ ಪದ್ಯದ ಹಿನ್ನೆಲೆ ಬಗ್ಗೆ ಸ್ವಲ್ಪ ಹೇಳಿ.
ಹಾಗಾಗಿ ನಮ್ಮ ಯುವ ಪೀಳಿಗೆಗೆ ನನ್ನ ಕಿವಿಮಾತೆಂದರೆ, ನಮ್ಮ ಸಂವೇದನೆಗಳೆಲ್ಲ ನಮ್ಮ ಒಟ್ಟಾರೆ ಸಾರ್ವತ್ರಿಕ ಸಂವೇದನೆಗಳು, ಮಾನವೀಯ ಸಂವೇದನೆಗಳ ಒಂದು ಅಂಗವಾಗಿ ಬರಬೇಕು ವಿನಃ ಸ್ವತಂತ್ರವಾಗಬಾರದು. ಹಾಗೆ ಅಂಗವಾಗಿ ಬಂದಾಗಲೂ ತಮ್ಮ ವೈಶಿಷ್ಟ್ಯ, ಖಾರ, ರೋಷ, ಆಕ್ರೋಶಗಳನ್ನು ಉಳಿಸಿಕೊಂಡು ಬಂದೇ ಬರುತ್ತೆ. ಆ ಥರ ಬರೆಯೋದು ವಾಸಿ. ಮೊದಲು ನಾವು ಬೆಳೆಯಬೇಕು. ನಾನು ಬೆಳೆಯದೇ ಕಾವ್ಯವನ್ನು ಬೆಳೆಸುತ್ತೇನೆ ಅನ್ನೋದು ಮೂರ್ಖತನ.
ಪ್ರಶ್ನೆ ೫
ನೀವು ಭೂವಿಜ್ಞಾನದ ಅಧ್ಯಾಪಕರಾಗಿದ್ದವರು. ವಿಜ್ಞಾನ ನಿಮ್ಮ ಕಲಿಕೆಯ ಮತ್ತು ಕಲಿಸುವ ಕ್ಷೇತ್ರವಾಗಿತ್ತು. ಹಾಗಿದ್ದರೂ ಕಾವ್ಯವನ್ನು ಅಷ್ಟೇ ಗಂಭೀರವಾಗಿ ತಗೊಂಡ್ರಿ. ವಿಜ್ಞಾನ ಮತ್ತು ಕಾವ್ಯ ಅಷ್ಟೇನೂ ಹತ್ತಿರವಲ್ಲ. ನಿಮ್ಮ ಕಾಲದಲ್ಲಿ ಲಿಟರೇಚರ್ ಅಧ್ಯಾಪಕರೇ ಪದ್ಯ, ಸಾಹಿತ್ಯ, ಕತೆ ಬರೆಯುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ನೀವು ಭೂವಿಜ್ಞಾನದ ಅಧ್ಯಾಪಕರಾಗಿದ್ದೂ ಕನ್ನಡ ಕಾವ್ಯದೆಡೆ ಹೊರಳಿದ್ರಿ. ಅದರಲ್ಲೂ ಸೈನ್ಸ್ ಎನ್ನುವುದು ಸಂಪೂರ್ಣ ಇಂಗ್ಲಿಷ್ನಲ್ಲೇ ಇದ್ದ ಆ ಕಾಲದಲ್ಲಿ. ಈ ಹಿಂದಿನ ಪ್ರೇರಣೆ ಏನು?
ಉತ್ತರ
ಬಹುಶಃ ನನಗೆ ಪ್ರಾಕೃತಿಕವಾಗಿ ಏನೋ ಕಿಡಿ ಇದ್ದಿರಬೇಕು. ಆಗೆಲ್ಲ ಗೋವಿನ ಹಾಡು, ಕಿಂದರಿ ಜೋಗಿ, ಅರೇಬಿಯನ್ ನೈಟ್ಸ್ ಕತೆ ಕೇಳ್ದಾಗಲೆಲ್ಲ ಮುಗ್ಧನಾಗಿ ಭಾವನಾ ಲೋಕಕ್ಕೆ ಹೋಗ್ತಿದ್ದೆ. ನಾನು ಸ್ವಭಾವತಃ ಭಾವಜೀವಿ. ಮೂಡಿತನ, ಅಂತರ್ಮುಖತೆ ನನ್ನಲ್ಲಿ ಇದ್ದಿದ್ರಿಂದ ನನಗೆ ದೊಡ್ಡ ದೊಡ್ಡ ಕಾದಂಬರಿಗಳನ್ನು ಬರೆಯಲಿಕ್ಕಾಗಲಿಲ್ಲ. ಏಕೆಂದರೆ ನನಗೆ ವಿಶ್ಲೇಷಣೆ, ವಿವರಣೆ ಮಾಡಲಿಕ್ಕಾಗೊಲ್ಲ. ಏನಿದ್ದರೂ, ತಕ್ಷಣಕ್ಕೆ ಏನು ಹೇಳಬಹುದೋ ಅದನ್ನು ಉದ್ಗರಿಸುವುದಷ್ಟೇ. ಅದನ್ನು ತಿಂಗಾನುಗಟ್ಟಲೆ ಕೂತು ಬರೆಯುವ ಶಕ್ತಿ ನನಗಿಲ್ಲ. ಹಾಗೆ ವಿಶ್ಲೇಷಣಾತ್ಮಕವಾಗಿ ಬರೆಯುವುದು ಅಂಥವರು ಪಡೆದಿರೋ ವರ. ಆದ್ರೆ ಅವರಿಗೆ ನನ್ನ ಹಾಗೆ ಚಿಕ್ಕದಾಗಿ ಪದ್ಯದಲ್ಲಿ ಹೇಳುವುದು ಸಿದ್ಧಿಸಿರೊಲ್ಲ. ಮೇಲೆ ಹೇಳಿದ ಹಾಡುಗಳು, ಕತೆಗಳ ಜೊತೆಗೆ ಮೊದಲಿಂದಲೂ ಪಂಜೆ ಮಂಗೇಶರಾಯರ ತೆಂಕಣಗಾಳಿಯಾಟ, ಹುತ್ತರಿಹಾಡು, ಗೋವಿಂದ ಪೈ ಅವರ ತಾಯೆ ಬಾರೆ ಮೊಗವ ತೋರೆ- ಎಲ್ಲ ಪದ್ಯಗಳು ನನ್ನ ಮೇಲೆ ಪರಿಣಾಮ ಬೀರಿದ್ವು. ಹಾಗಾಗಿ ಮೊದಲಿಂದಲೂ ಪದ್ಯ ಬರೀತಿದ್ದೆ. ಇಂಟರ್ಮೀಡಿಯೆಟ್ಗೆ ಬಂದಾಗ ವಿಧಿ ಇಲ್ಲದೆ ಸೈನ್ಸ್ ತಗೊಂಡೆ. ಏಕೆಂದರೆ, ಕನ್ನಡ ಓದೋ ಹಾಗಿರಲಿಲ್ಲ. ಬೆಂಗಳೂರಿನಲ್ಲಿ ಕನ್ನಡ ಇರ್ಲಿಲ್ಲ. ಮೈಸೂರಲ್ಲಿ ಇದ್ದರೂ ಹಾಸ್ಟೆಲ್ನಲ್ಲಿ ಓದೋ ಚೈತನ್ಯ ಇರ್ಲಿಲ್ಲ. ಹಾಗಾಗಿ ಬೆಂಗಳೂರೇ ಗತಿಯಾಯ್ತು. ನನಗೆ ಜಿಯಾಲಜಿ, ಬಾಟ್ನಿಯಲ್ಲಿ ಒಳ್ಳೇ ಮಾರ್ಕ್ಸ್ ಬಂದಿತ್ತು. ಚಿಕ್ಕಪ್ಪ ಇದು ಹೊಸ ಸಬ್ಜೆಕ್ಟ್, ಗಣಿ-ಗಿಣಿಯಲ್ಲಿ ಕೆಲಸ ಸಿಗುತ್ತೆ ಅಂದ್ರು. ಹಾಗಾಗಿ ಸೇರಿಕೊಂಡೆ. ಹಾಗೆ ಸೇರಿಕೊಂಡದ್ದು ಬಹಳ ಒಳ್ಳೆಯದೇ ಆಯ್ತು. ಅದು ಪ್ರಕೃತಿ ವಿಜ್ಞಾನ. ಬರೀ ಕಲ್ಲು, ಖನಿಜ, ಮಣ್ಣು ಇಷ್ಟೇ ಅಲ್ಲ. ಅವುಗಳ ಹಿಂದಿನ ವೈಭವಗಳಿವೆ; ರತ್ನಗಳು, ಜ್ವಾಲಾಮುಖಿ, ಭೂಕಂಪ, ಪ್ರಾಕೃತಿಕ ವೈಲಕ್ಷಣಗಳು- ಹೀಗೆ ಅದ್ಭುತಗಳ ಲೋಕವೊಂದು ನನ್ನ ಮುಂದೆ ತೆರೆದುಕೊಂಡಿತು. ಇದು ನನ್ನ ಕಾವ್ಯಕ್ಕೆ ತುಂಬಾ ಒತ್ತಾಸೆಯಾಗಿ ನಿಂತಿತು. ಎಷ್ಟೋ ವೈಜ್ಞಾನಿಕ ಹೋಲಿಕೆಗಳನ್ನು, ರೂಪಕಗಳನ್ನು ಕಾವ್ಯದಲ್ಲಿ ಬಳಸಿಕೊಂಡಿದ್ದೀನಿ. `ನಿತ್ಯೋತ್ಸವ'ದ ಕವಿತೆಯಲ್ಲಿ `ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ....' ಎಂಬ ಕಲ್ಪನೆ ಬಹುಶಃ ಜಿಯಾಲಜಿ ಓದದೇ ಇರುತ್ತಿದ್ದರೆ ನನಗೆ ಹೊಳೆಯುತ್ತಿರಲಿಲ್ಲವೇನೋ. ಕಣ್ಣಾರೆ ಕಂಡ, ಅನುಭವಿಸಿದ ವಿಷಯಗಳು ಅವು.
ಪ್ರಶ್ನೆ ೬
ಇಂಗ್ಲಿಷ್ ಪ್ರಾಬಲ್ಯ ಹೆಚ್ಚಿದ್ದರಿಂದ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ನುಡಿಗಟ್ಟು ರೂಪಿಸುವ ಕೆಲಸ ಈಗ ನಿಂತುಹೋಗಿದೆ. ಜನಪ್ರಿಯ ಬರೆಹಗಳು ಬಿಟ್ಟರೆ ಗಂಭೀರ ಬರೆಹಗಳು ಕೆಲವರಿಗಷ್ಟೇ ಸೀಮಿತವಾಗಿವೆ. ಈ ಬಗ್ಗೆ ನೀವೇನು ಹೇಳ್ತೀರಿ?
ಉತ್ತರ
ವಿಜ್ಞಾನದ ಜೊತೆ ಹೆಜ್ಜೆ ಹಾಕದಿದ್ರೆ ನಾವು ಮುಂದುವರೆಯೊಲ್ಲ. ಅದು ಅಕ್ಷರಶಃ ಸತ್ಯ. ಜೀವನದ ಪ್ರತಿಯೊಂದರಲ್ಲೂ ವಿಜ್ಞಾನವಿದೆ. ಮೈಕ್ಗೆ ಧ್ವನಿವರ್ಧಕ ಅನ್ನೊಲ್ಲ. ಕಾರಿಗೆ ಚತುಷ್ಚಕ್ರ ವಾಹನ, ದ್ವಿಚಕ್ರವಾಹನ- ಇಂಥ ದೊಡ್ಡ ದೊಡ್ಡ ಘೇಂಡಾ ಮೃಗದಂಥ ಸಂಸ್ಕೃತ ಪದಗಳನ್ನು ತಂದು ಇಲ್ಲಿ ಹೇರಬಾರದು. ಇಂಗ್ಲಿಷ್ನಲ್ಲಿ ಅತ್ಯಂತ ಕ್ಲಿಷ್ಟ ವಿಚಾರಗಳನ್ನೂ ತಿಳಿಯಾದ ಭಾಷೆಯಲ್ಲಿ ಹೇಳಬಹುದು. ಕನ್ನಡದಲ್ಲೂ ಈ ಪ್ರಯೋಗವನ್ನು ಆ ಕಾಲದಲ್ಲಿ ಮೊಟ್ಟಮೊದಲು ತಂದವರು ಕುವೆಂಪು. ನಂತರ ದೇಜಗೌ, ಡಾ. ಹಾಮಾನಾ ಕೂಡಾ ಬರ್ತಾರೆ. ಹಾಮಾನಾ ವಿಜ್ಞಾನದ ಕಮ್ಮಟಗಳನ್ನ ಕನ್ನಡದಲ್ಲಿ ನಡೆಸೋರು- ಪಠ್ಯಪುಸ್ತಕಗಳನ್ನು ಬರೆಯೋದು ಹೇಗೆ ಅಂತ. ಎರಡು ಕಮ್ಮಟಗಳಿಗೆ ನಾನು ಹೋಗಿದ್ದೆ. 10 ದಿವಸಗಳ ಕಮ್ಮಟ. ಕಾರಂತರು, ಎಎನ್ ಮೂರ್ತಿರಾಯರು, ಕುವೆಂಪು ಎಲ್ಲರೂ ಭಾಷಣ ಮಾಡ್ತಿದ್ರು. ಆ 10 ದಿವಸಗಳಲ್ಲಿ ನಾವು ವಿಜ್ಞಾನದಲ್ಲಿ ಸಾಧಿಸೋದು ಎಷ್ಟೆಲ್ಲಾ ಇದೆ ಅನಿಸಿತು. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ವಿಜ್ಞಾನಕ್ಕೆ ಬಳಸುವ ಪದಗಳಿವೆ. ಅವುಗಳನ್ನು ಆರಿಸಿಕೊಂಡು ನಾವು ಬಳಸಬೇಕು. `ಕಿಣ್ವನ' ಅಂತ ಒಂದು ವೈದ್ಯಕೀಯ ಪದವಿದೆ. ಕಿಣ್ವ ಅಂದರೆ ಎನ್ಜೈಮ್. ಅದಕ್ಕೆ `ನ' ಸೇರಿಸಿದರೆ ಒಂದು ಪ್ರಕ್ರಿಯೆ ಆಯ್ತು. ಹಾಗೇ ಬ್ಲೀಚಿಂಗ್ ಪೌಡರ್- ಬಿಳುಚುಪುಡಿ ಎರಡೂ ಹತ್ತಿರವಿದೆ. ಹಾಗೆಯೇ ಸಾರಿಗೆ ಪದ. ಕೆಲವನ್ನು ಹಾಗಾಗೇ ಬಳಸೋದು ಸೂಕ್ತ. ಕೃತಕ ಅನುವಾದ ಬೇಕಿಲ್ಲ.
ಆ ಕಾಲದಲ್ಲಿ ಉತ್ಸಾಹದಲ್ಲಿ ಕುವೆಂಪು, ಜವರೇಗೌಡ, ಹಾಮಾನಾ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಬರೀಬೇಕು ಅಂತ ಕೆಲವು ಬೋಧಕರಿಗೆ, ತಜ್ಞರಿಗೆ ಕೊಟ್ರು. ಅವರೆಲ್ಲ ಆತುರಾತುರವಾಗಿ ಬರೆದದ್ದು ಇವತ್ತೂ ಇವೆ. ಅವು ಬರೀ ಕೃತಕ. ಇಂಗ್ಲಿಷ್ನಲ್ಲಿ ಅರ್ಥವಾಗಿದ್ದು ಕನ್ನಡದಲ್ಲಿ ಅರ್ಥವಾಗೊಲ್ಲ. ತುಂಬಾ ಗೊಂದಲ. ಇದು ಯಾಕೆ ಆಯ್ತೆಂದರೆ ಅವರೆಲ್ಲ ಇಂಗ್ಲಿಷ್ನಲ್ಲಿ ಆಲೋಚನೆ ಮಾಡಿ ಕನ್ನಡದಲ್ಲಿ ಬರೆದರು. ಕನ್ನಡದಲ್ಲೇ ಗ್ರಹಿಸಿ-ಕಾರಂತರ ಥರ- ಬರೆದರೆ ಆತ್ಮೀಯವಾಗಿರುತ್ತೆ. ಇಂಗ್ಲಿಷ್ನಲ್ಲಿ ಆಲೋಚನೆ ಮಾಡಿ ಬರೆದ್ರೆ ಕೃತಕವಾಗುತ್ತೆ. ಏನೋ ಸದುದ್ದೇಶದಿಂದ ಅವರು ಶುರು ಮಾಡಿದ್ದು ಬರ್ತಾ ಬರ್ತಾ ಕೀರ್ತಿ, ಹಣ ಸಂಪಾದನೆಯತ್ತ ಹೊರಳಿತು. ಇವತ್ತು ಹಾಗಿಲ್ಲ. ಕೆಲವರು ಒಳ್ಳೆಯವರು ಬರೀತಿದ್ದಾರೆ; ಜಿ.ಟಿ.ನಾರಾಯಣರಾವ್, ಜಿ.ಆರ್.ಲಕ್ಷ್ಮಣರಾವ್, ನಾಗೇಶ ಹೆಗಡೆ, ಎಚ್.ಆರ್. ಕೃಷ್ಣಮೂರ್ತಿ, ಟಿ.ಆರ್. ಅನಂತರಾಮು, ತೇಜಸ್ವಿ, ಸಿ.ಆರ್. ಜಂದ್ರಶೇಖರ್, ಸ.ಜ.ನಾ., ಬಿಜಿಎಲ್ ಸ್ವಾಮಿ.... (ಯಾರಾದ್ದಾದರೂ ಹೆಸರು ಬಿಟ್ಟು ಹೋಗಿದ್ದರೆ ಕ್ಷಮಿಸಬೇಕು) ಇವೆಲ್ಲ ಪಾಪ್ಯುಲರ್ ಸೈನ್ಸ್ ಥರ ಬರ್ತಿವೆ. ಅಂದರೆ ಸಾಮಾನ್ಯರಿಗೆ ಅರ್ಥವಾಗುವಂಥ ಪುಸ್ತಕಗಳಾಗಿ. ಆದ್ರೆ ಪಠ್ಯಪುಸ್ತಕಕ್ಕಾಗುವ ಶಾಸ್ತ್ರೀಯತೆ ಅವುಗಳಿಗೆ ಕಡಿಮೆ. ಆದರೂ ಎಲ್ಲೋ ಈ ಕೆಲಸ ಆಗ್ತಿದೆ.
ಸುಮಾರು 20 ವರ್ಷಗಳವರೆಗಿನ ಪಾರಿಭಾಷಿಕ ಪದಗಳ ಕೊರತೆ ಈಗ ನೀಗಿದೆ-ಡಿಗ್ರಿವರೆಗೆ ಸರಾಗವಾಗಿ ಪಾಠ ಮಾಡಬಹುದು. ಆನಂತರ ಸ್ವಲ್ಪ ಕಷ್ಟ. ವೈದ್ಯಕೀಯ, ತಂತ್ರಜ್ಞಾನ, ಹೊಸದಾಗಿ ಸೇರಿಕೊಂಡ ಐಟಿಬಿಟಿ ಇವಕ್ಕೆಲ್ಲ ಕಷ್ಟವಾಗುತ್ತಿದೆ. ಅವಕ್ಕೆಲ್ಲ ಪಾರಿಭಾಷಿಕ ಪದಗಳು ಸಿದ್ಧವಾಗಲು ಇನ್ನೂ ಕಾಲ ಹಿಡಿಯುತ್ತೆ.
ಇಂಗ್ಲಿಷ್ ಪದಗಳು ಅಲ್ಲಿ ಇಲ್ಲಿ ಬಂದರೆ ತಪ್ಪಿಲ್ಲ. ಆದರೆ ಅಗತ್ಯ ಇದ್ದಲ್ಲಿ ಮಾತ್ರ ಬಳಸಬೇಕು. ಪ್ರತಿಷ್ಠೆ ತೋರಿಸಲು ಬಳಸಬಾರದು. ಪಾರಿಭಾಷಿಕ ಪದಗಳ ಸಮೃದ್ಧಿ ಕನ್ನಡದಲ್ಲಿ ಸಾಕಷ್ಟಿದೆ. ಅಭಾವದ ಅರಿವು ತಪ್ಪು. ಒಳ್ಳೆಯದನ್ನು ಇರೋದನ್ನು ಹೊರತೆಗೆಯಬೇಕು. ಶಾಸ್ತ್ರೀಯವಾಗಿ ಪಠ್ಯಪುಸ್ತಕದಲ್ಲಿ ಸೇರಿಸಿ ಸುಲಭ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹೇಳಬೇಕು. ಸೈನ್ಸ್ನಲ್ಲಿ ಬಣ್ಣನೆ ಬೇಕಾಗಿಲ್ಲ. ವಾಸ್ತವ ಎಷ್ಟೋ ಅಷ್ಟು ಮಾತ್ರ ಹೇಳಬೇಕು. ಪಾರಿಭಾಷಿಕ ಪದಗಳಲ್ಲೂ ಸಮಾನತೆ ಇರಬೇಕು. ಇಲ್ಲೂ ಧಾರವಾಡದಲ್ಲೂ ಅಮೆರಿಕದಲ್ಲೂ ಒಂದೇ ಪದ ಬಳಸುವಂತಾಗಬೇಕು. ಕೃತಕ ಅನುವಾದ ಹೇಗಿರುತ್ತೆ ಅಂದರೆ, ಉದಾಹರಣೆಗೆ `ಆಂಟ್ ಈಟರ್' ಎಂಬ ಶಬ್ದ. ಇದಕ್ಕೆ ಕನ್ನಡದಲ್ಲಿ `ಇರುತಿನಿ' ಅನ್ನಬಹುದು. ಆದರೆ ಅನುವಾದಕ ಅದನ್ನು `ಪಿಪೀಲಿಕಾ ಭಕ್ಷಕ' ಅನ್ನುತ್ತಾನೆ. `ಆರಕ್ಷಕ ಮಹಾ ನಿರೀಕ್ಷಕ ಅಥವಾ ಮಹಾ ಪ್ರಬಂಧಕ' ಯಾಕೆ ಬೇಕು? ಐಜಿ ಅಂದ್ರೆ ಸಾಕು. ಹೈಹೀಲ್ಡ್ ಚಪ್ಪಲಿಗೆ `ಎತ್ತು ಹಿಮ್ಮಡಿ ಎಕ್ಕಡ' ಅಂದ್ರೆ? ಬ್ಯಾಟ್ಗೆ ದಾಂಡು ಸರಿ. ಆದರೆ ಬ್ಯಾಟ್ಸ್ಮನ್ಗೆ ದಾಂಡಿಗ ಸರಿಯಲ್ಲ. ದಾಂಡಿಗ ಅಂದರೆ ಕೊಬ್ಬಿದವನು ಅಂತರ್ಥ. ಹಾಗೇ ವಿಕೆಟ್ಗೆ ಗೂಟ, ವಿಕೆಟ್ ಕೀಪರ್ಗೆ ಗೂಟರಕ್ಷಕ... ಥೂ! ಕೆಟ್ಟ ಅನುವಾದಗಳಿವು. ಇಂಗ್ಲಿಷ್ನಲ್ಲಿ ಶೇ. 75ರಷ್ಟು ಅನ್ಯ ಭಾಷಾ ಪದಗಳಿವೆ. ಮೂಲ ಇಂಗ್ಲಿಷ್ ಪದಗಳಿರುವುದು ಶೇ. 20-25ರಷ್ಟು ಮಾತ್ರ. ಉಳಿದೆಲ್ಲವೂ ಇಂಡಿಯಾ, ಮಲೆಯಾ ಮುಂತಾದವುಗಳಿಂದ ಸ್ವೀಕರಿಸಿದಂಥವು. ಪಾರ್ಸಿ , ಉರ್ದು, ಅರೆಬಿಕ್ನ ಎಷ್ಟೋ ಪದಗಳು ನಮ್ಮ ಪದಗಳ ಹಾಗೆ ಇಲ್ಲಿ ಸೇರಿಕೊಂಡಿವೆ. ಹೀಗೆ ಬೇರೆ ಭಾಷೆಯ ಪದಗಳು ಸರಳ, ಉಚ್ಚಾರಣೆಗೆ ಸುಲಲಿತವಾಗಿದ್ದರೆ, ಕಲ್ಪನೆಯನ್ನು ಸರಿಯಾಗಿ ಪ್ರತಿಬಿಂಬಿಸುವಂತಿದ್ದರೆ, ಸತ್ಯಕ್ಕೆ ಹತ್ತಿರವಾಗಿದ್ದರೆ ಖಂಡಿತ ಸ್ವೀಕರಿಸಬಹುದು.
ವಿಜ್ಞಾನದಲ್ಲಿ ಬೇಸಿಕ್ಸ್ ಸರಳವಾಗಿ ಹೇಳಬಹುದು. ಜಿಯಾಲಜಿ ಅಧ್ಯಾಪಕನಾಗಿ 35 ವರ್ಷ ಪಾಠ ಮಾಡಿದ್ದೀನಿ. ಡಿಗ್ರಿ ಕ್ಲಾಸ್ನಲ್ಲಿ ಬರೀ ಇಂಗ್ಲಿಷ್ನಲ್ಲೇ ಪಾಠ ಮಾಡ್ತಿದ್ದೆ. ಒಮ್ಮೆ ಪಾಠ ಮಾಡಿದ ನಂತರ 10 ನಿಮಿಷ ಕನ್ನಡದಲ್ಲಿ ನನ್ನದೇ ಆದ ರೀತಿಯಲ್ಲಿ ಉಪಮೆ, ರೂಪಕಗಳ ಜೊತೆ ಹೇಳಿದರೆ ಹೇಗೆ ಎಂಬ ಯೋಚನೆ ಬಂತು. ಹಾಗೆ ಮಾಡಿದಾಗ ಮಕ್ಕಳು ಏನು ಆನಂದ ಪಟ್ಟವು, ಏನ್ ಕಳೆ ಅವರ ಮುಖದಲ್ಲಿ! ಇಂಗ್ಲಿಷ್ನಲ್ಲಿ ಹೇಳಿದ್ರೆ ಹರಳೆಣ್ಣೆ ತಿಂದವರ ಥರ ಕೂತಿರ್ತಾರೆ. ಏಕೆಂದರೆ ಇಂಗ್ಲಿಷ್ನಲ್ಲಿ ಹೇಳುವಾಗ ನಾನು ನನ್ನ ಪದ ಸಂಪತ್ತನ್ನು ಪ್ರದರ್ಶಿಸಲು ಶುರು ಮಾಡ್ತೀನಿ. ದೊಡ್ಡ ದೊಡ್ಡ ಘೇಂಡಾ ಮೃಗ, ಆನೆಯಂಥ ಪದಗಳನ್ನು ಬಳಸ್ತೀನಿ. ನನಗೆ ಬರುತ್ತೆ, ನಾನು ಕಲಿತಿದ್ದೇನೆ ಅಂತ ತೋರಿಸ್ಕೋಬೇಕಲ್ಲ! ಇದಕ್ಕೆ ಪೂರಕವಾಗಿ ನಮ್ಮ ಪ್ರೊಫೆಸರ್ಗಳು ತಯಾರಿಸಿದ ನೋಟ್ಸ್ ಕೂಡ ಓಬೀರಾಯನ ಕಾಲದವು. ನಮ್ಮ ಪಠ್ಯಪುಸ್ತಕಗಳ ರೀತಿ ಬದಲಾಗಬೇಕು. ಇಂದು ಶುದ್ಧ ವಿಜ್ಞಾನಕ್ಕೆ ಪ್ರಾಶಸ್ತ್ಯವಿಲ್ಲ. ಆನ್ವಯಿಕ ವಿಜ್ಞಾನದ್ದೇ ಮೇಲುಗೈ. ಇದರ ಬೋಧನೆಗೆ ಬಹಳ ದೊಡ್ಡ ಪದ ಶಕ್ತಿ, ಭಾಷೆ ಬೇಕಾಗುತ್ತೆ. ನಮ್ಮ ಯುವ ಪೀಳಿಗೆ ಬುದ್ಧಿವಂತ ಪೀಳಿಗೆ. ಅವರು ಇದನ್ನು ಖಂಡಿತ ಮಾಡುತ್ತಾರೆ. ಯಾವುದೇ ಭಾಷೆ ಸತ್ವ ಕಳೆದುಕೊಂಡು ಸಾಯೊಲ್ಲ. ಜನಸಾಮಾನ್ಯರು ಬಳಸುವುದನ್ನು ನಿಲ್ಲಿಸಿದಾಗಲಷ್ಟೇ ನಿರ್ನಾಮ. ಬಾಹ್ಯ ಒತ್ತಡದಿಂದ ಅದೆಲ್ಲ ಸಾಧ್ಯವಿಲ್ಲ. ವಿಜ್ಞಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಕಲೆಗಳು ಇತ್ಯಾದಿಗಳಿಗೆ ಒತ್ತು ಕಡಿಮೆ ಮಾಡಿದ್ರೂ ಬೇಕಾದ್ದು ವಿಜ್ಞಾನದ ಮುನ್ನಡೆ.
ಸಂದರ್ಶನ ಚೆನ್ನಾಗಿ ಮೂಡಿಬಂದಿದೆ..ನಾನು ಅವರ ಸಂದರ್ಶನವನ್ನು ಟೀವಿಗಳಲ್ಲಿ ನೋಡಿದ್ದೇನೆ..ಆದರೆ ಅವರನ್ನು ಈ ಸಂದರ್ಶನದಲ್ಲಿ ತಿಳ್ಕೋಂಡಷ್ಟು, ಬೇರೆ ಯಾವುದೇ ಸಂದರ್ಶನಲ್ಲಿ ತಿಳ್ಕೊಳ್ಳಿಕ್ಕೆ ಸಾಧ್ಯವಾಗಲಿಲ್ಲ..ಅವರ ಕಾವ್ಯದ ಬಗ್ಗೆಗಿನ ಮಾತು, ಮುಸ್ಲೀಮ್ ಸಂವೇದನಶೀಲತೆಯ ಬಗ್ಗೆ ಹೇಳಿದ್ದು,ಕನ್ನಡದಲ್ಲಿ ವಿಜ್ಝಾನ ಸಾಹಿತ್ಯ ಮತ್ತು ಕನ್ನಡದ ಬಗ್ಗೆಗಿನ ಕಾಳಜಿ- ಇವೆಲ್ಲವುಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ..ಧನ್ಯವಾದಗಳು..
ಭೀಮೇಶ್ ಚಿನ್ನಸ್ವಾಮಿಡಿಸೆಂಬರ್ ೧೮, ೨೦೦೬ · ೧೯ ವರ್ಷಗಳ ಹಿಂದೆ
ತುಂಬ ಚನ್ನಾಗಿದೆ. ನಿತ್ಯೊತ್ಸವ ಕವಿತೆ ಅಷ್ಟೆ ಮದುರವಾಗಿದೆ, ಹಾಗು ನಮ್ಮ ಕಣ್ಣು ತೆರೆಸುತ್ತದೆ.
ಈ ಸಂದರ್ಶನ ನಮಗೆ ತಲುಪಿಸಿದಕ್ಕೆ ಸಂಪದ ಬಳಗಕ್ಕೆ ತುಂಬ ಧನ್ಯವಾದಗಳು.
ಈ ರೀತಿ ಸಂದರ್ಶನಗಳು ಹೆಚ್ಚು ಬರಲಿ ಎಂದು ಆಶಿಸುತ್ತೆನೆ.
-ನಿಮ್ಮ ಬೆಂಬಿಡದ ಬೇತಾಳ .....
Dhruvaಡಿಸೆಂಬರ್ ೧೮, ೨೦೦೬ · ೧೯ ವರ್ಷಗಳ ಹಿಂದೆ
ನಾನು ಸಂಪದದ ಬಗ್ಗೆ ತಿಳಿದುಕೊಳ್ಳುತ್ತಿರುವುದು ೩-೪ ದಿನದಿಂದಷ್ಟೆ. ಒಂದು ಕಡೆಯಿಂದ ಗಮನಿಸುತ್ತಿದ್ದೇನೆ ನನಗೆ ಏನೇನೋ ವಿಷೇಶಗಳು ಕಾಣಿಸುತ್ತಿವೆ. ಸಧ್ಯಕ್ಕೆ ನಮ್ಮ ನಿಸಾರ್ ಅಹ್ಮದ್ ರವರ ಸಂದರ್ಶನ ಕೇಳಿ ಮನಸ್ಸು ಪ್ರಫುಲ್ಲ. ನನ್ನ ಊರಿನಲ್ಲಿ ಸ್ಪೀಡ್ ಇಂಟರ್ನೆಟ್ ಸೌಲಭ್ಯ ಇಲ್ಲ. ಆ ಕಾರಣಕ್ಕೋ ಏನೋ ನಾನು ಸಂದರ್ಶನ ಕೇಳಲು ಶುರು ಮಾಡಿದಾಗ ನಿಂತು ನಿಂತು ಬರ್ತಿತ್ತು ಮತ್ತು ಏನೂ ಸರಿಯಾಗಿ ಅರ್ಥ ಆಗ್ತಿರಲಿಲ್ಲ. ಅಮೇಲೆ ಅದರ ಲಿಂಕ್ ಕಾಪಿ ಮಾಡಿಕೊಂಡು ಪೂರ್ತಿ ಸಂದರ್ಶನವನ್ನ ನನ್ನ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಂಡು ಕೇಳಿದೆ. ನೀವೆಲ್ಲರೂ ಕೇಳೇ ಇರ್ತೀರಿ. ಏನು ಹೇಳಲಿ ಮನಸ್ಸು ಮೂಕ ಮೂಕ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವು ಆಸೆ ಅತಿಯಾಯ್ತು ಅಂದರೂ ಪರವಾಗಿಲ್ಲ ಹೇಳುಬಿಡ್ತೇನೆ ಸಂದರ್ಶನ ಇನ್ನೂ ದೊಡ್ಡದಾಗಿರಬೇಕಿತ್ತು(ಸುಮಾರು ಒಂದೂವರೆ ಗಂಟೆ). ಈ ಸಂದರ್ಶನವನ್ನ ಇನ್ನೂ ಕೇಳದೆ ಇರುವವರು ದಯವಿಟ್ಟು ಕೇಳಿ.
-ಧ್ರುವ
gvnirmalaಡಿಸೆಂಬರ್ ೨೫, ೨೦೦೬ · ೧೯ ವರ್ಷಗಳ ಹಿಂದೆ
ಈಗ ತಾನೆ ಶ್ರೀ ನಿಸ್ಸಾರ್ ರವರ ಜೊತೆಗಿನ ಸಂದರ್ಶನ ಕೇಳಿದೆ. ಮೊಟ್ಟಮೊದಲು ಈ ಮಾಧ್ಯಮವನ್ನು ಇಷ್ಟು ಸುಂದರವಾಗಿ ಬಳಸಿಕೊಂಡು ನಮಗೆ. ನಾವೇ ನಿಸ್ಸಾರ್ ಜೊತೆಗಿದ್ದಂತೆ ಭಾವನೆ ಮೂಡಿಸುವಂತೆ ನೀಡಿರುವ ಸಂದರ್ಶನಕ್ಕೆ ಧನ್ಯವಾದಗಳು. ಅಂತೆಯೇ ಕನ್ನಡವನ್ನು ಉಳಿಸುವ ಬೆಳಸುವ ಬಗ್ಗೆ ಅವರ ನಿಖರವಾದ ಅಭಿಪ್ರಾಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಆ ಮಾರ್ಗದಲ್ಲಿ ನಮ್ಮ ಯುವಜನರು ಮುಂದುವರಿದರೆ ಕನ್ನಡದ ಏಳಿಗೆ ಹಾಗೂ ಕನ್ನಡಿಗರ ಏಳಿಗೆಯಾಗುವುದರಲ್ಲಿ ಸಂದೇಹವಿಲ್ಲ.
ಸಿರಿಗನ್ನಂಡಂ ಗೆಲ್ಗೆ
ನಿರ್ಮಲ
nptಡಿಸೆಂಬರ್ ೨೮, ೨೦೦೬ · ೧೯ ವರ್ಷಗಳ ಹಿಂದೆ
ಮಾನ್ಯರೇ,
ನಾನು ಇತ್ತೀಚಿಗಷ್ಟೆ 'ಸ೦ಪದ' ದ ಸದಸ್ಯನಾಗಿದ್ದು, podcasting ನ ಎಲ್ಲ ಏಳೂ ಸ೦ದರ್ಶನಗಳನ್ನು download ಮಾಡಿಕೊ೦ಡು ಕೇಳಿದ್ದೇನೆ, ಎಲ್ಲವೂ ಚೆನ್ನಾಗಿ ಮೂಡಿ ಬ೦ದಿವೆ.
ಸ೦ದರ್ಶನದ ಜೊತೆಗೆ, ಸ೦ದರ್ಶಕರ ಕಿರುಪರಿಚಯ, ಅವರ ಸ೦ಪರ್ಕ ವಿವರ(ಅವರ ಒಪ್ಪಿಗೆ ಇದ್ದಲ್ಲಿ) ಇತ್ಯಾದಿಗಳನ್ನೂ ಕೊಟ್ಟರೆ ಒಳ್ಳೆಯದು. ಅಲ್ಲದೆ, ನೀವು photo ಗಳನ್ನು ಕೊಡುವಾಗ, ಫೊಟೊದಲ್ಲಿಯ ವ್ಯಕ್ತಿಗಳ ಅನುಕ್ರಮ ಹೆಸರುಗಳನ್ನು ಫೊಟೊದಡಿ ನಮೂದಿಸಿದರೆ ಹೆಚ್ಚು ಅನುಕೂಲ.
ಧನ್ಯವಾದಗಳೊ೦ದಿಗೆ,
-ಪಿಟಿ
ಹರಿ ಪ್ರಸಾದ್ ನಾಡಿಗ್ಡಿಸೆಂಬರ್ ೨೮, ೨೦೦೬ · ೧೯ ವರ್ಷಗಳ ಹಿಂದೆ
ತಪ್ಪು ಪದಕ್ಕಾಗಿ ಕ್ಷಮಿಸಿ. ಸರಿಯಾದ ಪದ 'ಸ೦ದರ್ಶನಾರ್ಥಿ'(interviewee).
ಕೃಷ್ಣಪ್ರಕಾಶ ಬೊಳುಂಬುಜುಲೈ ೦೫, ೨೦೦೭ · ೧೯ ವರ್ಷಗಳ ಹಿಂದೆ
mp3 file (೪೫ MB)
Ogg Vorbis file (೨೫ MB)
ಹೀಗೆ ಅಪಾರ ಗಾತ್ರದ ಕಡತಗಳನ್ನು ನೋಡಿದರೆ 3gp/amr formatನಲ್ಲಿ ಪ್ರಕಟಿಸಿದ್ದರೆ ಅನುಕೂಲವಿತ್ತೇನೊ ಅನಿಸಿತು. ಸಮಯ ಹಾಗೂ ಸಂಗ್ರಹಣೋಪಾಧಿಯ ಗಾತ್ರವನ್ನು ಕಡಿಮೆಗೊಳಿಸಬಹುದಾಗಿತ್ತು.
ಕೃಷ್ಣಪ್ರಕಾಶ ಬೊಳುಂಬುಜುಲೈ ೧೪, ೨೦೦೭ · ೧೯ ವರ್ಷಗಳ ಹಿಂದೆ
ಕವನ - ನಿಮ್ಮೊಡನಿದ್ದೂ ನಿಮ್ಮಂತಾಗದೆ
ಕವಿ - ಕೆ. ಎಸ್. ನಿಸಾರ್ ಅಹಮದ್
http://www.dhaatri.com/Triveni/?p=126
RAVIKIRAN Kಮಾರ್ಚ್ ೨೫, ೨೦೦೯ · ೧೭ ವರ್ಷಗಳ ಹಿಂದೆ
ನಮಸ್ಕಾರಗಳು ನಾನು ’ಸಂಪದ’ವನ್ನು ತಿಳಿಯುತ್ತಿರುವುದು ಇತ್ತೀಚೆಗಶ್ಟೆ. ಈಗ ತಾನೆ ಕವಿ ಪ್ರೊ|| ನಿಸ್ಸಾರ್ ಅಹ್ಮದ್ ರವರ ಚೆನ್ನುಡಿಗಳನ್ನು ಕೇಳಿ ಪುಳಕಾಂಕಿತನಾದೆ. ಸಂದರ್ಶನ ಬಹಳ ಅರ್ಥಪೂರ್ಣವಾಗಿ ಒಡಮೂಡಿದೆ. ಕೇಳುತ್ತಿದ್ದ ಪ್ರಶ್ನೆಗಳೂ, ನೀಡುತ್ತಿದ್ದ ಪ್ರತಿಕ್ರಿಯೆಗಳೂ ಸಾಂದರ್ಭಿಕವಾಗಿದ್ದವು ಮತ್ತು ವಿಚಾರವಂತಿಕೆಯಿಂದ ಕೂಡಿದ್ದವು. ಇಂತಹ ಸುವರ್ಣಾವಕಾಶ ಒದಗಿಸಿದ್ದಕ್ಕಾಗಿ ಧನ್ಯವಾದಗಳು.
ಡಾ: ಮೀನಾ ಸುಬ್ಬರಾವ್ಡಿಸೆಂಬರ್ ೦೮, ೨೦೦೯ · ೧೬ ವರ್ಷಗಳ ಹಿಂದೆ
ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಿಸ್ಸಾರ್ ಅಹಮದ್ ಅವರ ಮಾತುಗಳು ಬಹಳ ಸ್ವಾರಸ್ಯಕರವಾಗಿ ಮೆಚ್ಚುಗೆಯಾಯಿತು. ಸಂದರ್ಶನ ನಡೆಸಿಕೊಟ್ಟವರು ತೂರಿದ ಪ್ರಶ್ನೆಗಳು ಅಮೂಲ್ಯವಾಗಿತ್ತು. ಸಂಪದ ಮತ್ತು ಈ ಸಂದರ್ಶನಕ್ಕೆ ಕಾರಣರಾದ ಎಲ್ಲರಿಗೂ ಅಬಿನಂದನೆಗಳು !
ನಿಸ್ಸಾರ್ ಅವರು, ಈ ವಯಸ್ಸಿನಲ್ಲೂ ಎಷ್ಟು ಹೆಮ್ಮೆ , ಹುಮ್ಮಸ್ಸಿನಿಂದ ಕನ್ನಡ ಭಾಷೆಯ ಸತ್ವ, ಸತ್ಯಗಳನ್ನು ಇಲ್ಲಿ ಹಂಚ್ಕೊಂಡಿದ್ದಾರೆ, ಎನ್ನುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯವಾಗಿದೆ.
~ಮೀನಾ
ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್ನಿಂದ ಯಾವಾಗ ಬೇಕಾದರೂ ಬದಲಿಸಬಹುದು.Articles and books stay in their original language. Change this any time with the ಕನ್ನಡ | English switch at the top of the page.
ಪ್ರತಿಕ್ರಿಯೆ (7)