ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಸಂಪದ ತಂಡ ಹೊಸತೇನನ್ನಾದರೂ ಯೋಚಿಸಿದರೆ ಅದನ್ನು ಸಾಧ್ಯವಾಗಿಸುವುದಕ್ಕೆ ವಿಶ್ವವೇ ನಮ್ಮ ಪರವಾಗಿ ಸಂಚು ಹೂಡುತ್ತದೆ ಎನಿಸುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಿ.ಟಿ.ನಾರಾಯಣರಾವ್ ಅವರದ್ದೊಂದು ಪಾಡ್‌ಕ್ಯಾಸ್ಟ್ ಮಾಡಬೇಕು ಎಂಬ ಯೋಜನೆ ಬಹಳ ಹಳೆಯದು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಹರಿಪ್ರಸಾದ್ ನಾಡಿಗರು ಪಾಡ್‌ಕ್ಯಾಸ್ಟ್ ಜತೆ ವಿಡಿಯೋ ಕೂಡಾ ಹಾಕಬಹುದು ಎನ್ನುತ್ತಿದ್ದರು. ಇದಕ್ಕೆ ಅಗತ್ಯವಿರುವ ಕ್ಯಾಮೆರಾ, ಧ್ವನಿಗ್ರಹಣ, ಆಮೇಲೆ ಸಂಕಲನವನ್ನೆಲ್ಲಾ ಯಾರು ಮಾಡುವುದು ಎಂಬುದು ನಮ್ಮೆದುರು ಇದ್ದ ದೊಡ್ಡ ಪ್ರಶ್ನೆಯಾಗಿತ್ತು.
ಗೆಳೆಯ ಅಭಯಸಿಂಹ ವೃತ್ತಿಯ ಕಾರಣಕ್ಕೆ ಬೆಂಗಳೂರಿಗೆ ವಾಸ್ತವ್ಯವನ್ನು ಬದಲಾಯಿಸಿದ್ದೇ ನನ್ನೆದುರು ಇದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತಿಬಿಟ್ಟಿತು. ಅದರ ಪರಿಣಾಮವಾಗಿ ಈ ವಿಡಿಯೋ ಹಾಗೂ ಪಾಡ್‌ಕ್ಯಾಸ್ಟ್ ನಿಮ್ಮ ಮುಂದಿದೆ.
ಜಿ.ಟಿ.ಎನ್. ನನಗೆ ಪುಸ್ತಕಗಳ ಮೂಲಕ ಬಾಲ್ಯದಲ್ಲೇ ಪರಿಚಿತರು. ನಿಮ್ಮಲ್ಲನೇಕರಿಗೂ ಅವರು ಹೀಗೆ ಪರಿಚಿತರಾಗಿರಬಹುದು. ಹತ್ತು ಹನ್ನೆರಡು ವರ್ಷಗಳಿಂದ ಅವರನ್ನು ವೈಯಕ್ತಿಕವಾಗಿ ಪರಿಚಯಿಸಿಕೊಳ್ಳಲೂ ಸಾಧ್ಯವಾಯಿತು. `ನುಡಿದಂತೆ ನಡೆಯುವುದು' ಎಂಬುದಕ್ಕೆ ಸಾಕ್ಷಿಯಾಗುವಂಥ ಬದುಕು ಜಿ.ಟಿ.ಎನ್. ಅವರದ್ದು. ವೈಜ್ಞಾನಿಕ ಮನೋಧರ್ಮ ಎಂಬುದು ಕೇವಲ ಅವರ ಬರೆವಣಿಗೆಗೆ ಸೀಮಿತವಾಗಿರುವ ವಿಷಯವಲ್ಲ. ಅದು ಅವರ ಬದುಕೂ ಕೂಡಾ.
ಮಡಿಕೇರಿಯ ಜಿ.ಟಿ.ನಾರಾಯಣರಾವ್ ಹುಟ್ಟಿದ್ದು 1926ರ ಜನವರಿ 30ರಂದು. ತಂದೆ ಗುಡ್ಡೆಹಿತ್ಲು ತಿಮ್ಮಪ್ಪಯ್ಯ. ತಾಯಿ ವೆಂಕಟಲಕ್ಷ್ಮಿ. ಮದ್ರಾಸು ವಿಶ್ವವಿದ್ಯಾಲಯದಿಂದ 1947ರಲ್ಲಿ ಗಣಿತ ಎಂ.ಎ ಪದವಿ ಪಡೆದರು. ಮಂಗಳೂರು, ಮಡಿಕೇರಿ, ಬೆಂಗಳೂರುಗಳಲ್ಲಿ 1947ರಿಂದ 1969ರವರೆಗೆ ಕಾಲೇಜು ಉಪನ್ಯಾಸಕರಾಗಿದ್ದರು. 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹ್ವಾನ ಮನ್ನಿಸಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ನಿವೃತ್ತರಾದರು. ತರುವಾಯ ಪೂರ್ಣಕಾಲ ವಿಜ್ಞಾನ ವಾಙ್ಮಯ ರಚನೆಯಲ್ಲಿ ಮಗ್ನರಾಗಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದಂತೆಯೂ ಆಳವಾದ ಜ್ಞಾನ ಹೊಂದಿರುವ ಜಿ.ಟಿ.ಎನ್. ಸಂಗೀತದ ಬಗ್ಗೆ ಕನ್ನಡ ಹಾಗೂ ಇಂಗ್ಲಿಷ್‌ಗಳೆರಡರಲ್ಲೂ ಅನೇಕ ಲೇಖನಗಳನ್ನು ಬರೆದಿದ್ದಾರೆ. `ಶ್ರುತಗಾನ' ಕೃತಿ ಇಂಥ ಲೇಖನಗಳಿಗೇ ಮೀಸಲಾಗಿದೆ. ಈಗ ಅದರ ವಿಸ್ತೃತ ಆವೃತ್ತಿ ಸಂಗೀತ ರಸನಿಮಿಷಗಳು ಪ್ರಕಟಣೆಗೆ ಸಿದ್ಧವಾಗಿದೆ.
ಅವರ ಪ್ರಮುಖ ಕೃತಿಗಳು ಈ ಕೆಳಗಿನಂತಿವೆ. ಐನ್‍ಸ್ಟೈನ್ ಬಾಳಿದರಿಲ್ಲಿ (ವೈಜ್ಞಾನಿಕ ಜೀವನಚರಿತ್ರೆ), ಕುವೆಂಪು ದರ್ಶನ ಸಂದರ್ಶನ (ಕುವೆಂಪು ಕುರಿತು), ಕೃಷ್ಣವಿವರಗಳು (Black Holes), ಕೊಪರ್ನಿಕಸ್ ಕ್ರಾಂತಿ (ಖಗೋಳ ವಿಜ್ಞಾನೇತಿಹಾಸ), ಜಾತಕ ಮತ್ತು ಭವಿಷ್ಯ (ನಾಳೆಯನ್ನು ಇಂದು ಅರಿಯಬಹುದೇ?), ಧೂಮಕೇತು (ಅದೃಶ್ಯಲೋಕದ ಅನಾದಿ ಕಾಲದ ಅಪೂರ್ವ ಅತಿಥಿ), ನಕ್ಷತ್ರ ವೀಕ್ಷಣೆ (ಬಾನಿಗೆ ಹಿಡಿದ ನುಡಿ ಚಿತ್ರ ದರ್ಪಣ), ನವಕರ್ನಾಟಕ ಕನ್ನಡ ವಿಜ್ಞಾನ ಪದವಿವರಣ ಕೋಶ (ಪ್ರಧಾನ ಸಂಪಾದನೆ), ವೈಜ್ಞಾನಿಕ ಮನೋಧರ್ಮ, ಸಂಗೀತ ರಸನಿಮಿಷಗಳು (ಕಲಾವಿದರ ಜೊತೆಗಿನ ಒಡನಾಟದ ಅನುಭವ ಕಥನ), ಸಪ್ತಸಾಗರದಾಚೆಯೆಲ್ಲೋ..(ಚಂದ್ರಶೇಖರ್ ದರ್ಶನ, ಸಂವಾದ), ಸುಬ್ರಹ್ಮಣ್ಯನ್ ಚಂದ್ರಶೇಖರ್ (ವೈಜ್ಞಾನಿಕ ಜೀವನ ಚರಿತ್ರೆ), Scientific Temper, With the Great Minds (Ramanujan, Raman, Chandrasekhar, Muralidhara Rao and Suresh)
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (11 MB)
ಅಲ್ಲಿ ಕೆಲವು ಸ್ವಾರಸ್ಯಕರ ವಿಷಯಗಳು ತಮಾಷೆಯಾಗಿವೆ. ಗಣಕದ ಬಗ್ಗೆ ಲೇಖನ ಬರೆಸಬೇಕಾಗಿತ್ತು. ಕಂಪ್ಯೂಟರ್, ಆಗ ಬರ್ತಾ ಇತ್ತು, ೧೯೮೦ ಅಥವಾ ೭೦ರ ದಶಕದ ಕೊನೆಗೆ. ಗಣಕ, ಕ ಖ ಗ ಘ ಅದರಲ್ಲಿ ಬರ್ತದೆ ಅಂತಷ್ಟೇ ಗೊತ್ತು. ಯಾರಿಂದ ಬರೆಸುವುದು? ಯಾರೂ ನೋಡಿದವರಿಲ್ಲ. ಕಂಪ್ಯೂಟರ್ರು ಬಂದಿತ್ತಲ್ಲಾ ಮೈಸೂರಿಗೆ. ಡಾ|ಎನ್.ಶೇಷಗಿರಿ ರಾವ್ ರವರು ಎಲೆಕ್ಟ್ರಾನಿಕ್ಸ್ ಕಮಿಷನ್ ಆಫ್ ಇಂಡಿಯಾದ ಚೀಫ್ ಆಗಿದ್ದರು, ರಿಟೈರ್ ಆಗೋಕು ಮೊದಲು. ಟಿ.ಎ.ಎಫ್ ಆರ್ ನಲ್ಲಿದ್ದರು, ಅವರು ಪತ್ರ ಬರೆದರು. ನಾನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರಯತ್ನ ಪಟ್ಟೆ ಆದರೆ ಆಗ್ಲಿಲ್ಲ ಅಂತ ಹೇಳಿ ಇಂಗ್ಲೀಷಿನಲ್ಲಿ ಬರೆದು ಸುಮಾರು ಎಂಭತ್ತು ಪುಟಗಳ ಲೇಖನ ಕಳುಹಿಸಿಬಿಟ್ಟರು. ಬಹಳ ಸಂತೋಷ ಆಯ್ತು ನನಗೆ. ಹಾಲು ಕುಡಿದಷ್ಟು ಸಂತೋಷ ಆಯ್ತು, ಕನ್ನಡದಲ್ಲಿ ಪ್ರಥಮ ಬಾರಿಗೆ ಬರುತ್ತದಲ್ಲ ಅಂತ. ನಮಗೆ ಕೆಲಸದ ಒತ್ತಡ ಇದ್ದದ್ದರಿಂದ ಅನುವಾದ ಮಾಡಲಿಕ್ಕೆ ಒಬ್ಬ ರಿಟೈರ್ಡ್ ಫಿಸಿಕ್ಸ್ ಪ್ರೊಫೆಸರರಿಗೆ ಕೊಟ್ಟೆ. ನನಗಿಂತ ದೊಡ್ಡವರು. ಕನ್ನಡದಲ್ಲಿ ಲೇಖನ ಬರೆದವರು. ಮೈಸೂರಿನಲ್ಲೆ ಇದ್ದವರು. ಇದಕ್ಕೆಲ್ಲ ದುಡ್ಡು ಕೊಡುತ್ತೇವೆ ನಾವು ವಿಶ್ವಕೋಶದಿಂದ, ಬರೀ ಧರ್ಮದ ಕೆಲಸವಲ್ಲ. ಅವರು ಹತ್ತು ದಿವಸಗಳಲ್ಲಿ ಅನುವಾದ ಮಾಡಿ ಕೊಟ್ಟು ಬಿಟ್ಟರು. ಓದಿದರೆ ಭಯವಾಯ್ತು! ’ರಾಜ್ಯಪಾಲರು ಈ ಯಂತ್ರದಲ್ಲಿ ಅಭಿನಯಿಸುವ ಪಾತ್ರ’ ಕಂಪ್ಯೂಟರ್ ಗೆ ರಾಜ್ಯಪಾಲ ಯಾಕೆ ಬರಬೇಕು! ಮೂಲ ನೋಡಿದೆ, ’the role played by the governor in this machine '. ನಿಜ its a fact. ಅನುವಾದಕರಿಗೆ ದುಡ್ಡುಕೊಡುವುದು ಕೊಟ್ಟು ಬಿಡ್ತೇವೆ, ಲೀಗಲ್. ನಾನೇ ಮನೆಯಲ್ಲಿ ಹಗಲು ರಾತ್ರಿ ಕೂತು ನನಗೆ ತಿಳಿದಂತೆ, ಸಬ್ಜೆಕ್ಟ್ ಗೊತ್ತಿದ್ದರಿಂದ, ಮೂಲ ಲೇಖನದಿಂದ ಟೆಕ್ನಿಕಲ್ ಆಗಿ ಭಾವಾರ್ಥವನ್ನ ಗ್ರಹಿಸಿ ಅನುವಾದಿಸಿದೆ. ಆಗ ಪ್ರೋಗ್ರಾಮ್ ಗೆ ಏನು ಪದ ಮಾಡ್ಬೇಕು? ಪ್ರೋಗ್ರಾಮರ್ ಗೆ ಏನು ಮಾಡಬೇಕು? ಹಾರ್ಡ್ ವೇರ್ ಗೆ ಏನು ಮಾಡ್ಬೇಕು? ಸಾಫ್ಟ್ ವೇರ್ ಗೆ ಏನು ಮಾಡ್ಬೇಕು? ಡಿಸ್ಕಷನ್. ಲಕ್ಷ್ಮಣರಾಯರು ಮೈಸೂರಿನಲ್ಲಿದ್ದಾರೆ. ಫಿಸಿಕ್ಸ್ ಪ್ರೊಫೆಸರ್ ಮೈಸೂರಿನಲ್ಲಿದ್ದಾರೆ, ಎಲ್ಲರ ಜೊತೆ ’ನೋಡಿ this is my problem, ಹೇಳಿ’ ಎಂದೆ. ಅಂದರೆ ನೀವು ಓಪನ್ ಆಗಿ ಇರಬೇಕು. ಎಲ್ಲ ನಾನೇ ಮಾಡ್ತೀನಿ ಅನ್ನೋಕಾಗದು, ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ. ಹೀಗೆ ಹತ್ತು ಜನರ ಜೊತೆ ಡಿಸ್ಕಸ್ ಮಾಡಿದರೆ ಹೊಳಿಯುತ್ತದೆ.
’ಕ್ರಮ ವಿಧಿ’ ಪ್ರೋಗ್ರಾಮ್, ’ಕ್ರಮ ವಿಧಾಯಕ’ ಪ್ರೋಗ್ರಾಮರ್, ಹಾರ್ಡ್ ವೇರ್, ಸಾಫ್ಟ್ ವೇರ್, ’ಯಂತ್ರಾಂಶ ತಂತ್ರಾಂಶ’ ಇವತ್ತಿನ ದಿನ ಚಾಲ್ತಿಗೆ ಬಂದುಬಿಟ್ಟಿದೆ. ಇದು ವಿಶ್ವಕೋಶದವರಿಂದ ಬಂದಿದ್ದು, ನನ್ನಿಂದ ಅಲ್ಲ ತಿಳಿದುಕೊಳ್ಳಿ. ಒಬ್ಬನಿಂದ ಏನೂ ಮಾಡೋಕ್ಕಾಗೋಲ್ಲ. ಹತ್ತು ಜನರು ಸೇರಿ ಆಗ್ಬೇಕು, ಹೀಗೆ ಬೆಳೆದು ಬಂತು. ಇಂತಹದ್ದು ಬೇಕಾದಷ್ಟು ಅನುಭವಗಳಿವೆ.
ಅಚ್ಚು ಸಾಲೆಗಳುಂಟು, ವೆಚ್ಚಕ್ಕೆ ಹೊನ್ನುಂಟು, ಮೆಚ್ಚಿ ಹೊಗಳುವ ವಂಧಿ ಮಾಗಧರುಂಟು, ಕಿಚ್ಚು ಹಚ್ಚೆಂದ ಸ್ವರ್ಗಕ್ಕೆ ಸರ್ವಜ್ಞ, ಸರ್ವಜ್ಞನ ಅಣಕ ಇದು. ಅನೇಕರು ಚೆನ್ನಾಗಿ ಬರೆಯುತ್ತಾರೆ, ನಾಗೇಂದ್ರ ಹೆಗಡೆ, ಬಿ.ಎಸ್. ಶೈಲಜಾ, ಅನಂತ ರಾಮು, ಎಸ್.ವೈ. ಅಂಬೇಕರ್, ಎ.ಪಿ. ರಾಧಾಕೃಷ್ಣ, ಹೀಗೆ ಅನೇಕ ಜನ ಚೆನ್ನಾಗಿ ಬರೀತಾರೆ. ನನ್ನ ಅಂಶ ಇಷ್ಟೇ, ತಾಕತ್ತಿನ ತಾಣದಿಂದ ಬರೆಯಬೇಕು. ಇಂಗ್ಲಿಷ್ ಬಲ್ಲವರು ಆದ್ದರಿಂದ ಬರೆಯೋಕಾಗೊಲ್ಲ. ನೀವು ಫಿಸಿಕ್ಸ್ ನಲ್ಲಿ ಜನಪ್ರಿಯ ಬರೆಯಬೇಕು, ಮ್ಯಾಥಮೆಟಿಕ್ಸ್, ಅಸ್ಟ್ರಾನಮಿ ಬರೆಯಬೇಕೋ ಆ ಸಬ್ಜೆಕ್ಟ್ ನಲ್ಲಿ ನಿಮಗೆ ಟೆಕ್ನಿಕಲ್ ಮಾಸ್ಟರ್ಸ್ ಇರಬೇಕು. ಆಗ ಎಷ್ಟು ಹೇಳಬೇಕು, ಎಷ್ಟು ಹೇಳಬಾರದು ಅಂತ ತಿಳಿಯುತ್ತದೆ. ಒಂದು ನಿದರ್ಶನ ತೆಗೊಳ್ಳಿ, ’earth rotates around itself, and revolves around the sun' ಅಂತ ಇಂಗ್ಲೀಷಿನಲ್ಲಿ ಉಂಟು, ಅಸ್ಟ್ರಾನಮಿ. ಎರಡಕ್ಕೂ ಸುತ್ತೋದು ಸುತ್ತೋದು ಹೇಳಿಬಿಡ್ತೀವಿ. ಭೂಮಿ ತನ್ನ ಸುತ್ತಲೂ ಸುತ್ತುತ್ತದೆ, ಸೂರ್ಯನ ಸುತ್ತಲೂ ಸುತ್ತುತ್ತದೆ. ಯಾರಿಗೆ ಸುತ್ತು ಕಡಿಮೆ ಇಲ್ಲಿ? ನೀವು ಆ ಸಬ್ಜೆಕ್ಟನ್ನು ತಾಂತ್ರಿಕವಾಗಿ ಅಭ್ಯಸಿಸಿದರೆ ಮಾತ್ರ ಈ ಸಂಶಯ ಬರುತ್ತದೆ, ಇಲ್ಲ ಅಂದ್ರೆ ಬರುವುದಿಲ್ಲ. ಹಾಗಿದ್ರೂ ಅರ್ಥ ಆಗತ್ತೆ. ಹಾಗಾದರೆ ಏನು ಮಾಡಬೇಕು? ’ತನ್ನ ಸುತ್ತಲೂ ಸುತ್ತುವುದು, ಬುಗುರಿ ತಿರುಗಿದಂತೆ, ಸೂರ್ಯನ ಸುತ್ತಲೂ ಸುತ್ತುವುದು, ಭಕ್ತ ಅಶ್ವಥ ಕಟ್ಟೆ ಪ್ರದಕ್ಷಿಣೆ ಬಂದಂತೆ’. ಎರೆಡು ವಿಭಿನ್ನವಾದ ಚಲನೆಗಳು. ಕನ್ನಡದಲ್ಲಿ ಏನುಂಟು ಹಾಗಾದರೆ? ಉಂಟು, ’ಆವರ್ತನೆ’ ತನ್ನ ಸುತ್ತಲೂ, ’ಪರಿಭ್ರಮಣೆ’ ಇನ್ನೊಂದರ ಸುತ್ತಲೂ, ಬರತ್ತೆ. necessity is the mother of invention. ಹೀಗೆ ಮಾಡ್ತಾ ಹೋದರೆ, ’ವಿಕಿರಣಪಟುತ್ವ’ radio activity, ’ವಿಕಿರಣ’ radio, ಅಂತ ಬಂದಿದೆ. ಇದೆಲ್ಲ ಬರ್ತಾ ಇರ್ತದೆ.
ವಿಜ್ಞಾನ ಒಂದರಿಂದಲೇ ಜಗತ್ತು ಉದ್ಧಾರ ಆಗುತ್ತದೆಂಬ ಭ್ರಮೆ ಯಾವ ವಿಜ್ಞಾನಿಗೂ ಇಲ್ಲ. ನನಗಂತೂ ಎಂದೂ ಇಲ್ಲ. ನಾನು ಬರೇ ವಿಜ್ಞಾನದ ಒಬ್ಬ ವಿದ್ಯಾರ್ಥಿ ಅಥವಾ ಬರವಣಿಗೆಗಾರ. ಐನ್ ಸ್ಟೈನ್ ತಗೋಳಿ, ಚಂದ್ರಶೇಖರ್ ತಗೋಳಿ, ನ್ಯೂಟನ್ ತಗೋಳಿ, ರಾಮನ್ ತಗೋಳಿ, ವಿಜ್ಞಾನದಿಂದಲೇ ಜಗತ್ತಿನ ಉದ್ಧಾರ ಎನ್ನು ಭ್ರಮೆ ಅವರ್ಯಾರಿಗೂ ಇಲ್ಲ. ವಿಜ್ಞಾನ ಬೇರೆ, ತಂತ್ರವಿದ್ಯೆ ಬೇರೆ ’science and technology, technology is the application of science'. ನಮಗೆ ಸೌಕರ್ಯವಾಗುವಂತೆ ಮಾಡಿಕೊಂಡಿದ್ದೇವೆ, ಆದರೆ ಇಷ್ಟೆಲ್ಲ ಸಾಧ್ಯವಾಗುವಾಗ, ಮನುಷ್ಯನ ಮನಸ್ಸಿನಲ್ಲಿ ವಿವೇಕವಿರಬೇಕು. ಅದೊಂದು ಹೊಸ ವರ ಸಿದ್ದಿಸಿದೆ, ಅದು ಭಸ್ಮಾಸುರ ಹಸ್ತ ಆಗಬಾರದು. ಮೋಹಿನಿ ಹಸ್ತ ಆಗಬೇಕು. ಮೋಹಿನಿ ಏನು ಮಾಡಿದ್ಲು? ಅಮೃತವನ್ನ ಹಂಚಿದಳು. ಭಸ್ಮಾಸುರ ಏನು ಮಾಡಿದ ತನ್ನ ಮೇಲೆ ಕೈ ಇಟ್ಟುಕೊಂಡು ಸುಟ್ಟು ಸತ್ತು ಹೋದ. ಇದನ್ನೆಲ್ಲ ಮೆಟಾಫರ್ಸ್ ಆಗಿ ಇಟ್ಟುಕೊಳ್ಳಬೇಕು. ಅದು ಬರಬೇಕಾದರೆ ನಮ್ಮ ಮನೆ ಮನೆಯಲ್ಲಿ ಚಿಕ್ಕಂದಿನಿಂದ, ಶಾಲೆ ಶಾಲೆಯಲ್ಲಿ, ಸಮಾಜ ಸಮಾಜದಲ್ಲಿ, ಧರ್ಮದ ಒಂದು ಪಾತ್ರದಲ್ಲಿ, ಧರ್ಮವೆಂದರೆ religion ಅರ್ಥದಲ್ಲಿ ಹೇಳ್ತಾ ಇಲ್ಲ, ಯಾವುದು ಮಾಡಬೇಕು ಯಾವುದು ಮಾಡಬಾರದು, ಯಾವುದು ನೀತಿ ಯಾವುದು ಅನೀತಿ ಎಂಬುದರ ಬಗ್ಗೆ, ಕ್ರಿಶ್ಚಿಯನ್ ಧರ್ಮ ಹಿಂದೂ ಧರ್ಮದ ಬಗ್ಗೆ ಹೇಳ್ತಾ ಇಲ್ಲ ನಾನು ಗಮನಿಸಿ. ಇದು ಧರ್ಮ, ’ವಿಜ್ಞಾನ ರಹಿತವಾದಂತಹ ಧರ್ಮ ಕುರುಡು, ಧರ್ಮ ರಹಿತವಾದ ವಿಜ್ಞಾನ ಕುಂಟು’. ಏನರ್ಥ ಇದರದು? ಧರ್ಮ, ಅಮೂರ್ತವಾದ ಗುರಿಯನ್ನ ಕಾಣಿಸುತ್ತದೆ. ಮುಂದೆ ನಡಿ ಚೆನ್ನಾಗಿರುತ್ತದೆ, ಹನುಮಂತನಿಗೆ ತೋರಿಸಿದ್ದದು. ಆದರ್ಶವನ್ನು ಕೊಡುವಂತದ್ದು ಧರ್ಮ. ನೀತಿಸಂಹಿತೆ ಅದರ ಸಂಗಡ, ಆದರ್ಶ ತಲುಪಬೇಕಾದರೆ ನೀವು ನಡಿಯಬೇಕು, ನಡಿಯಬೇಕಾದರೆ ಅಲ್ಲಿ ವಿಜ್ಞಾನ ಬೇಕು, ಇದು ಪರಸ್ಪರ ಪೂರಕ ಪೋಷಕ. ಆದರೆ ಈಗ ಆ ನೀತಿಯನ್ನ ಬಿಟ್ಟಿದ್ದೇವೆ, ನೀತಿ ಎಲ್ಲುಂಟು? ವಿಜ್ಞಾನಿಗಳಿಗೆ ನೀತಿಯುಂಟಾ? ಯಾರಿಗಾದ್ರೂ ಉಂಟ? ರಾಜಕಾರಣಿಗಳಿಗೆ ಉಂಟಾ? ಹೇಗಾದರೂ ಗೆದ್ದರೆ ಆಯಿತು, ದುಡ್ಡು ಮಾಡಿದರಾಯಿತು. ನೀತಿ ಇತ್ತು ಹಿಂದೆ, ನಮ್ಮ ಮಹಾಕಾವ್ಯಗಳು ಹೇಳೋದು ಅದನ್ನೇ, ಅದನ್ನೆಲ್ಲ ಓದ್ತೇವೆ, ರೂಢಿಗೆ ತರುವುದಿಲ್ಲ. ತರಬೇಕು. ಅದಕ್ಕೆ ಒಂದು ಪುಸ್ತಕ ಬರೆದಿದ್ದಾರೆ, ಬರ್ನಾಲ್ ಅನ್ನುವಂತಹ ನೊಬೆಲ್ ಲಾರಿಯೇಟುಗಳ ಗುರುಗಳ ಗುರು. ತಾನು ನೊಬೆಲ್ ಲಾರಿಯೇಟುಗಳಿಗೆ ಹೋಗಲಿಲ್ಲ ಬಂದದ್ದನ್ನೆಲ್ಲಾ ಕೊಟ್ಟು ಬಿಟ್ರು ಅವರು. ೧೯-೨೦ ನೇ ಶತಮಾನದಲ್ಲಿ ಇದ್ದರು. ’the social function of science' ಅಂತಿದೆ ಅದ್ಬುತವಾದಂತಹ ಪುಸ್ತಕ ಓದಿ ಇಂಗ್ಲೀಷಿನಲ್ಲಿದೆ. ’ವಿಜ್ಞಾನದ ಸಾಮಾಜಿಕ ಪಾತ್ರ’ ಖಂಡಿತ ಉಂಟು ಉಂಟು ಉಂಟು, ಅದನ್ನ ಬಿಟ್ಟಿದ್ದೇವೆ, ಲಾಭ ಲಾಭ ಒಂದೇ ಇಟ್ಟುಕೊಂಡಿದ್ದೇವೆ ಹಾಗಾಗಿ ಹಾಳಾಗ್ತಾ ಇದ್ದೇವೆ.
ತಂದೆ ಕೊಳಲು ಊದ್ತಾ ಇದ್ದರು, ಕಲಿತಲ್ಲ, ಸ್ವಯಂ. ನಮ್ಮ ಅಜ್ಜಿ, ಚಿಕ್ಕಜ್ಜಿ, ಶಾಸ್ತ್ರೀಯವಾಗಿ ಪಿಟೀಲು ಕಲಿತು, ಒಳ್ಳೆಯ ಕೋಕಿಲ ಕಂಠಿ, ಅದ್ಬುತವಾಗಿ ಹಾಡ್ತಾ ಇದ್ದರು. ಬಂದ ಮಕ್ಕಳಿಗೆಲ್ಲ ಧರ್ಮಾರ್ಥ ಪಾಠ ಹೇಳಿಕೊಡ್ತಿದ್ದರು, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸುತ್ತಿದ್ದರು. ತಾಯಿ ಪಿಟೀಲು ನುಡಿಸುತ್ತಿದ್ದರು, ಹಾಡ್ತಿದ್ದರು, ಹೀಗೆ ಮನೆಯೇ ಒಂದು ಸಂಗೀತ ಶಾಲೆ. ಮಂಗಳೂರಾಯ್ತು, ಮದರಾಸಿಗೆ ಹೋಗುವಷ್ಟೊತ್ತಿಗೆ, ರೆಕ್ಕೆ ಪುಕ್ಕ ಬಲಿಯಿತು. ಅಲ್ಲಿ ಮನೆ ಮನೆಯಲ್ಲಿ ಸಂಗೀತ. ಅಲ್ಲಿ ಐದು ವರ್ಷ ಇದ್ದೆ ನಾನು. ಮೂರು ವರ್ಷ ಓದ್ತಿದ್ದದ್ದು. ಮತ್ತೆ ಎರೆಡು ವರ್ಷ ಟ್ಯೂಟರ್ ಆಗಿದ್ದದ್ದು. ಮನೆ ಮನೆಯಲ್ಲಿ ಮೂಲೆ ಮೂಲೆಯಲ್ಲಿ ಸಂಗೀತ. ಸಾಯಂಕಾಲದ ಹೊತ್ತಿಗೆ ಏನು ಮಾಡುವುದು, ಸ್ಟೂಡೆಂಟ್ ಆಗಿರುವಾಗಲೂ, ಮುಂದೆ ಟ್ಯೂಟರ್ ಆಗಿದ್ದಾಗಲೂ, ಎಲ್ಲಿ ಹೋಗುವುದು? ಅಲ್ಲಿ ಒಂದು ಕಡೆ ಚಪ್ಪರ ಇರುತ್ತೆ, ತೋರಣ ಇರುತ್ತೆ ಅಲ್ಲೊಂದು ಮದುವೆ, ಅಲ್ಲಿ ಒಂದು ಒಳ್ಳೆ ಸಂಗೀತವಿರುತ್ತದೆ, ಡಿ.ಕೆ.ಪಟ್ಟಮ್ಮಾಳ್ ಇರಬಹುದು, ಸುಬ್ಬಲಕ್ಷ್ಮಿ ಇರಬಹುದು, ಅರೆಯಾಕುಳಿ ರಾಮಾನುಜ ಅಯ್ಯಂಗಾರ್, ಅವರ ಸಂಗೀತಕ್ಕೆಲ್ಲಾ ಒಳ್ಳೆ ನಿಶ್ಯಬ್ಧವಾಗಿ ಶಿಸ್ತಿನಿಂದ ಇರ್ತಾರೆ. ಅಲ್ಲಿ ಹೋಗುವುದು, ’uninvited guest' ಸಂಗೀತ ಕೇಳುವುದು, ಸಂಗೀತ ಕೇಳಿದ್ಮೇಲೆ ಪುಕ್ಕಟೆ ಊಟ ಸಿಕ್ಕತ್ತೆ. ಊಟ ಮಾಡ್ಬಿಟ್ಟು ಬರುವುದು. ಹೀಗೆ ಸಂಗೀತದ ಆಸಕ್ತಿ ಬಂತು, ಅಲ್ಲಿಂದ ಬೆಂಗಳೂರಿಗೆ ಬಂದೆ ಲೆಕ್ಚರರ್ ಆಗಿ ಅರವತ್ತೈದಕ್ಕೆ ಮೊದಲೇ ಹೇಳಿದಂತೆ. ಬೆಂಗಳೂರಲ್ಲಿ ಆರ್ಗನೈಸ್ಡ್ ಸಂಗೀತ ಸಭೆಗಳಿದ್ದುವು. ಮಲ್ಲೇಶ್ವರಂ ೮ನೇ ಕ್ರಾಸಿನಲ್ಲಿ ಶ್ರೀಕಂಠನ್, ಲಾಲ್ ಗುಡಿ ಜಯರಾಮನ್, ಒಮೆಯಾಳಪುರಂ ಶಿವರಾಮನ್ ಇವರದ್ದು ಸಂಗೀತ. ಅಲ್ಲಿ ಶ್ರೀಕಂಠನ್ ಹೆಸರು ಕನ್ನಡಿಗರಾದರೂ ಕೂಡ ಮದರಾಸಿನಲ್ಲಿ ಪ್ರಚಲಿತವಿದ್ದಿಲ್ಲ. ಅವರ ಹೆಸರು ಈ ಮೊದಲು ಕೇಳಿರಲಿಲ್ಲ. ಲಾಲ್ ಗುಡಿ ಜಯರಾಮನ್ ಗೊತ್ತಿತ್ತು. ಲಾಲ್ ಗುಡಿ ಜಯರಾಮನ್, ಶಿವರಾಮನ್ ಕೂತಿದ್ದಾರೆಂದರೆ ಶ್ರೀಕಂಠನ್ ದೊಡ್ಡ ಆರ್ಟಿಸ್ಟ್ ಇರಬೇಕೆಂದುಕೊಂಡು ಹೋದೆ. ಹನುಮಂತನಗರದಿಂದ ಅಲ್ಲಿಗೆ ಹೋದದ್ದು ಮಲ್ಲೇಶ್ವರಂ ೮ನೇ ಕ್ರಾಸಿಗೆ. ಮೂರುವರೆ ಗಂಟೆ ಒಳ್ಳೆಯ ದೈವೀಕ ಸಂಗೀತ. ಬಹಳ ಖುಷಿಯಾಯ್ತು. ಇಂತಹವರು ಕರ್ನಾಟಕದಲ್ಲಿದ್ದಾರಲ್ಲ ಆದರೆ ಮದರಾಸಿಗೆ ಯಾಕೆ ಬರಲಿಲ್ಲ? ಬಹಳ ’liguistic chauvinism' ಇಲ್ಲಿಯವರನ್ನ ಅವರು ಕರೆಸುವುದಿಲ್ಲ ಆದರೆ ಅವರನ್ನೆಲ್ಲ ಇಲ್ಲಿ ಕರೆಸ್ತಾರೆ. ಅದು ಬೇರೆ ವಿಷಯ ಬಿಡಿ. ಇದಾದ ಮೇಲೆ ಒಂದು ರಿವೀವ್ ಬಂತು ಅದರ ಮೇಲೆ, ಯಾರೋ ಬರೆದರು ತಾರಗ್ರಾಹಿ ಅಂತ, ಯಾರು ಅಂತ ಗೊತ್ತಿಲ್ಲ. ಆದರೆ ಬೈದು ಬರೆದಿದ್ರು. ಚೆನ್ನಾಗಿದ್ದಿಲ್ಲ, ಶ್ರೀಕಂಠನ್ ಆ ಮಟ್ಟಕ್ಕೆ ಹಾಡಕ್ಕೆ ಬರಲಿಲ್ಲ ಅಂತ ಒಂಥರಾ ತಿರಸ್ಕಾರಯುತವಾಗಿ ಬರೆದಿದ್ರು. ಎಲಾ! ಇದೇನಾಗಿದೆ. ಇಷ್ಟು ಚೆನ್ನಾಗಿ ಹಾಡಿದ್ದಾರೆ, ಎಲ್ಲಾ ರಾಗಗಳ ಪಟ್ಟಿ ನೆನಪಿತ್ತು ನನಗೆ, ನಾನು ಅದಕ್ಕೆ ಖಂಡಿಸಿ ಒಂದು ಪತ್ರ ಬರೆದೆ. ಮರ್ಯಾದೆಯ ಲಿಮಿಟ್ ನಲ್ಲಿ. ಇಷ್ಟಿಷ್ಟು ಹಾಡಿದ್ದರು ಅದನ್ನವರು ವರದಿ ಮಾಡ್ಲಿಲ್ಲ, ಇಷ್ಟಿಷ್ಟು ಚೆನ್ನಾಗಿತ್ತು, ಅದ್ಬುತವಾಗಿತ್ತು, ಅಂತ ಎಲ್ಲ ಬರೆದು, ನಾನು ಮ್ಯಾಥಮೆಟಿಕ್ಸ್ ಸ್ಟೂಡೆಂಟು, ಕಾರ್ಯಕಾರಣ ಸಂಬಂಧ ಕೊಟ್ಟು ಬರೆದೆ, ಅದು ಪಬ್ಲಿಷ್ ಮಾಡಿಯೂಬಿಟ್ಟರು. ಮಾಡಿದ ಮರುದಿನ ಒಬ್ಬ ಹುಡುಗ ಬಂದ, ನನ್ನ ಸ್ಟೂಡೆಂಟು, ’ಸಾರ್ ನಾನು ಶ್ರೀಕಂಠನ್ ಅವರ ಮಗ, ರಮಾಕಾಂತ್ ಇಲ್ಲಿ ವಿದ್ಯಾರ್ಥಿ, ನೀವು ನಮ್ಮ ಮರ್ಯಾದೆ ಉಳಿಸಿದ್ರಿ’ ಅಂತ ಬಹಳ ಹೇಳಿದ. ಹೀಗೆ ಬಾಂಧವ್ಯ ಅವರಲ್ಲಿ ಬೆಳೀತು, ಸಂಗೀತ ಬಾಂಧವ್ಯ. ಬೆಂಗಳೂರಿನಲ್ಲಿದ್ದಾಗೇನು ಬರೀತಿರಲಿಲ್ಲ, ಮೈಸೂರಿಗೆ ಬಂದೆ, ಬಂದಮೇಲೆ ಗೊತ್ತಾಯಿತು, ಅಲ್ಲಿ ತುಂಬಾ ಸಂಗೀತವಿದೆ, ಸಂಗೀತದ ಜಲಾನಯನವದು. ಆದರೆ ಯಾರೂ ಹೊರಗೆ ಬರುವುದಿಲ್ಲ, ಮಾತಾಡುವುದಿಲ್ಲ ಮತ್ತೆ ಬರೆಯುವುದಿಲ್ಲ. ಇಂತಹ ಮೂಕರು ಯಾಕಾದರು ಇವರು? ನಾನು ಅಲ್ಲಿ ಬೆಳೆದವನು ನೋಡಿ, ಕೊಡಗಿನವನು, ಬೆಟ್ಟಗಳ ಜೊತೆಯಲ್ಲಿ ಓಡಾಡಿದವನು, ಮದ್ರಾಸಿನಲ್ಲಿ ಪಳಗಿದವನು, ಮಂಗಳೂರಲ್ಲಿ ಇದ್ದವನು, ಮೂಕ ಯಾಕಾಗಬೇಕು? ಅಲ್ಲಿಂದ ಸ್ಟಾರ್ ಆಫ್ ಮೈಸೂರು ಯಾವಾಗ ಪಬ್ಲಿಷಿಂಗ್ ಗೆ ಶುರುವಾಯ್ತು ೭೮ನೇ ಇಸವಿ ಅಲ್ಲಿಗೆ ಬರೆಯೋಕೆ ಶುರು ಮಾಡಿದೆ. ಗೊತ್ತಿದ್ದು ಬರೆದದ್ದಲ್ಲ, ಆದರೆ ಯಾರಾದ್ರೂ ಬರೆಯಬೇಕಲ್ಲ ಅಂತ ಬರೆದೆ.
ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನಶನ ಹೀಗೆ ಸಂತೋಷವಾಗಿದ್ದೇನೆ.
ಪ್ರತಿಕ್ರಿಯೆ (6)