ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಸಂಸ್ಥೆ ತನ್ನ ತ್ರೈಮಾಸಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿರುವ ನಮ್ಮ ಖ್ಯಾತ ಕತೆಗಾರ, ದೇಶಕಾಲ ಪತ್ರಿಕೆಯ ಸಂಪಾದಕ ವಿವೇಕ್ ಶಾನಭಾಗರ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ: ದೇಶಕಾಲದ ಸ್ಥೂಲ ಪರಿಚಯ "ದೇಶಕಾಲಕ್ಕೆ ಮೂರುವರ್ಷ" ಎಂಬ ಲೇಖನದಲ್ಲಿ ಲಭ್ಯವಿದೆ.
ಬರಹಗಾರ ಮತ್ತು ದೇಶಕಾಲದ ಸಂಪಾದಕ ವಿವೇಕ್ ಶಾನಭಾಗ್ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಣ್ಣ ಪತ್ರಿಕೆಗಳ ಕೊಡುಗೆ ಮತ್ತು ತನ್ನ ಪತ್ರಿಕೆ ಹೇಗೆ ತನ್ನದೇ ಆದ ಒಂದು ಸ್ಥಾನ ಕಲ್ಪಿಸಿಕೊಂಡಿದೆ ಎಂಬ ಬಗ್ಗೆ ಮಾತನಾಡಿದ್ದಾರೆ:
ಪ್ರಶ್ನೆ: ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪತ್ರಿಕೆಗಳ ಒಂದು ಒಟ್ಟಾರೆ ಚಿತ್ರಣವನ್ನು ನಮ್ಮ ಓದುಗರಿಗೆ ನೀಡಬಹುದೆ?
ಸಾಹಿತ್ಯಿಕ ಪತ್ರಿಕೆಗಳ ಒಂದು ದೊಡ್ಡ ಪರಂಪರೆಯೇ ಕನ್ನಡಕ್ಕಿದೆ. ಮಾಸ್ತಿ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ ಮತ್ತು ಇನ್ನೂ ಹಲವು ಪ್ರಮುಖ ಬರಹಗಾರರು ಸಾಹಿತ್ಯಿಕ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಹೆಚ್ಚಿನವು ದೀರ್ಘಕಾಲ ಉಳಿಯಲಿಲ್ಲ ಎಂಬುದು ನಿಜವಾದರೂ ಹೊಸ ಬರಹಗಾರರನ್ನು ಉತ್ತೇಜಿಸುವ ಮೂಲ ಉದ್ದೇಶವನ್ನು ಅವು ಈಡೇರಿಸಿವೆ. ನಮ್ಮ ಹೆಚ್ಚಿನ ಹೆಚ್ಚಿನ ಸಾಹಿತ್ಯಿಕ ಬೆಳವಣಿಗೆಗಳು, ಬದಲಾವಣೆಗಳು ಈ ವಲಯದಿಂದ ಸ್ಪೂರ್ತಿ ಪಡೆದಿವೆ.
ಇವತ್ತು ಕನ್ನಡದಲ್ಲಿ ಹಲವು ಸಾಹಿತ್ಯಿಕ ಪತ್ರಿಕೆಗಳು ಕ್ರಿಯಾಶೀಲವಾಗಿವೆ. ಉದಾಹರಣೆಗೆ ಸಂಚಯ, ಸಂಕಲನ, ಅಭಿನವ, ಸಂಕ್ರಮಣ, ಸಂವಾದ, ದೇಶಕಾಲ, ಗಾಂಧಿಬಜಾರ್ ಮತ್ತಿನ್ನೂ ಕೆಲವು. ಇವು ಗಂಭೀರವಾದ ಸಾಹಿತ್ಯಿಕ ಚರ್ಚೆಗೆ ಲಭ್ಯವಿರುವ ಒಂದೇ ಒಂದು ವೇದಿಕೆಯಾಗಿವೆ. ಉದಾಹರಣೆಗೆ ಜನಪ್ರಿಯ ವಾಣಿಜ್ಯೋದ್ದೇಶದ ಪತ್ರಿಕೆಗಳು ಮತ್ತು ಭಾನುವಾರದ ಪುರವಣಿಗಳು ಪುಸ್ತಕ ವಿಮರ್ಶೆಗೆ ಕೆಲವೇ ಇಂಚುಗಳ ಸ್ಥಳಾವಕಾಶ ನೀಡುತ್ತವೆ. ಅಲ್ಲದೆ ಇಲ್ಲಿನ ಅವಲೋಕನದ ಮಟ್ಟವೂ ತೀರ ಸಾಧಾರಣ. ಹಾಗಾಗಿ ಸಾಹಿತ್ಯ ವಿಮರ್ಶೆ ಮತ್ತು ಪೂರ್ಣಮಟ್ಟದ ಅವಲೋಕನಗಳು ಸಾಹಿತ್ಯಿಕ ಪತ್ರಿಕೆಗಳಲ್ಲಷ್ಟೇ ಅವಕಾಶ ಪಡೆಯುತ್ತವೆ. ಸುದೀರ್ಘ ಸಂದರ್ಶನಗಳು ಮತ್ತು ಕವನಗಳ ವಿಷಯದಲ್ಲೂ ಇದು ನಿಜ.
ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯ ಲಾಭೋದ್ದೇಶದ ವಾರಪತ್ರಿಕೆಗಳೂ, ಮಾಸ ಪತ್ರಿಕೆಗಳೂ ಇವೆ ಎನ್ನುವುದನ್ನು ಹೇಳಲೇ ಬೇಕು. ಇವುಗಳಲ್ಲಿ ಎಲ್ಲಾ ಬಗೆಯ ಕತೆ-ಕವನ-ಕಾದಂಬರಿಗಳಿಗೆ ಭಾರೀ ಪ್ರಮಾಣದ ಬೇಡಿಕೆಯಿದೆ. ಹಾಗಾಗಿ ಸಾಹಿತ್ಯಿಕ ಪತ್ರಿಕೆಗಳು ನೀಡುವ ಕತೆ-ಕವನಗಳಿಗೂ ಈ ಪತ್ರಿಕೆಗಳು ನೀಡುವ ಕತೆ ಕವನಗಳಿಗೂ ಅಂಥ ವ್ಯತ್ಯಾಸವಿಲ್ಲದಿದ್ದರೂ ಸಾಹಿತ್ಯಿಕ ಪತ್ರಿಕೆಗಳು ಒದಗಿಸುತ್ತಿರುವುದನ್ನು ಇವು ಸರಿಗಟ್ಟಲಾರವು. ಕನ್ನಡದ ಬರಹಗಾರರು ಮತ್ತು ಓದುಗರು ಸಾಹಿತ್ಯಿಕ ಪತ್ರಿಕೆಗಳು ನೀಡುತ್ತಿರುವುದೇನನ್ನು, ಜನಪ್ರಿಯ ಪತ್ರಿಕೆಗಳು ನೀಡುತ್ತಿರುವುದೇನನ್ನು ಎನ್ನುವ ವ್ಯತ್ಯಾಸವನ್ನು ಅರಿಯಬಲ್ಲವರು ಎಂದು ನಂಬಿದ್ದೇನೆ. ಈ ಅರಿವು, ಪ್ರಜ್ಞೆ ಯಾವುದೇ ಸಾಹಿತ್ಯಿಕ ವಾತಾವರಣಕ್ಕೆ ತೀರಾ ಅನಿವಾರ್ಯ ಅಗತ್ಯ. ಯಾಕೆಂದರೆ ಇದುವೇ ಸಾಹಿತ್ಯಿಕ ಪತ್ರಿಕೆಗಳಿಗೆ ಬೇಕಾದ ವಿಶಿಷ್ಟವಾದ ಉತ್ತೇಜನ, ಪ್ರೋತ್ಸಾಹ ಮತ್ತು ಒಂದು ಅವಕಾಶವನ್ನು ಸೃಷ್ಟಿಸುವಂಥದ್ದು. ಅವುಗಳ ಎಲ್ಲ ಪ್ರಯೋಗಶೀಲತೆ, ಸಂವಾದ ಇದನ್ನೇ ನೆಚ್ಚಿಕೊಂಡಿದೆ.
ಪ್ರಶ್ನೆ: ತಮಿಳುನಾಡಿನಲ್ಲಿ ಪ್ರಕಾಶಕ ಎಸ್ ರಾಮಕೃಷ್ಣನ್ ಇತ್ತೀಚೆಗೆ ಸ್ವತಂತ್ರ ಅಭಿವ್ಯಕ್ತಿ ಮತ್ತು ಬರವಣಿಗೆಯನ್ನು ಉತ್ತೇಜಿಸುವ, ಕೇವಲ ವ್ಯಾಪಾರೀ ಉದ್ದೇಶಗಳಿಗೆ ಹೊರತಾದ ಪ್ರಕಟನೆಗಳು- ಸಣ್ಣಪತ್ರಿಕೆಗಳು ಎಂದು ನಾವು ಏನನ್ನು ಗುರುತಿಸುತ್ತೇವೆಯೋ ಅದು- ಬಹುತೇಕ ಕಣ್ಮರೆಯಾಗಿವೆ ಎಂಬ ಬಗ್ಗೆ ಗಮನಸೆಳೆದಿದ್ದರು. ಕರ್ನಾಟಕದಲ್ಲಿ ಹೇಗೆ?
ಸಂಕ್ರಮಣ, ಕನ್ನಡದ ಒಂದು ಸಾಹಿತ್ಯಿಕ ಪತ್ರಿಕೆ, ಕಳೆದ ನಲವತ್ತು ವರ್ಷಗಳಿಂದ ಬರುತ್ತಿದೆ. ಹಾಗೆಯೇ ಸಂವಾದ, ಗಾಂಧಿಬಜಾರ್ ಮತ್ತು ಸಂಚಯ ಎರಡು ದಶಕಗಳಿಗೂ ಮೀರಿ ಕ್ರಿಯಾಶೀಲವಾಗಿವೆ. ಈ ಯಾವ ಪತ್ರಿಕೆಗಳೂ ವ್ಯಾಪಾರೀ ಮನೋಧರ್ಮಕ್ಕೆ ಒಳಗಾಗಿಲ್ಲ. ಇನ್ನೂ ಬಹಳಷ್ಟು ಹೊಸ ಪತ್ರಿಕೆಗಳೂ ಇವೆ. ಕನ್ನಡದಲ್ಲಂತೂ ಸಣ್ಣ ಪತ್ರಿಕೆಗಳ ಕಾಲವೇ ಮುಗಿದು ಹೋಗಿದೆ ಎಂದು ಭಾವಿಸಲು ಯಾವುದೇ ಕಾರಣಗಳಿಲ್ಲ ಅನಿಸುತ್ತದೆ. ಸಾಹಿತ್ಯಿಕ ಪತ್ರಿಕೆಗಳ ಯಶಸ್ಸನ್ನು ಆ ಪತ್ರಿಕೆಗಳ ಪ್ರಭಾವವಲಯದ ಮೂಲಕ ಅಳೆಯಬೇಕೇ ಹೊರತು ಅದರ ಪ್ರಸಾರ ಸಂಖ್ಯೆಯಿಂದಲ್ಲ. ಹಾಗಾಗಿ ವಾಣಿಜ್ಯಿಕ ಅಂಶಗಳು ಯಾವತ್ತೂ ಇಂಥ ಪ್ರಕಟನೆಗಳಿಗೆ ಮುಖ್ಯವಾಗಿಲ್ಲ.
ಪ್ರಶ್ನೆ: ದೇಶಕಾಲದ ಕುರಿತು ನಿಮ್ಮ ಪರಿಕಲ್ಪನೆ ಏನು? ಅದು ಹೇಗೆ ಇತರ ಸಾಂಸ್ಕೃತಿಕ ಪತ್ರಿಕೆಗಳಿಂದ ಭಿನ್ನವಾಗಿದೆ?
ದೇಶಕಾಲ ಸಾಹಿತ್ಯ ಕೇಂದ್ರಿತ. ಪತ್ರಿಕೆಯ ಚಾಲನಶಕ್ತಿ ಅದೇ. ನಾವು ಒಪ್ಪುತ್ತೇವೋ ಇಲ್ಲವೋ, ಇವತ್ತಿನ ಕನ್ನಡ ಸಂವೇದನೆಗಳು ಕನ್ನಡ ಜಗತ್ತಿನ ಎಲ್ಲೆಕಟ್ಟುಗಳನ್ನು ಮೀರಿ ಹೊರಗಿನ ಹಲವಾರು ಅಂಶಗಳಿಂದ ರೂಪುಗೊಳ್ಳುತ್ತ ಇರುವುದಂತೂ ಸತ್ಯ. ಈ ಅಂಶವನ್ನು ನಾವು ಗುರುತಿಸಬೇಕಿದೆ ಮತ್ತು ಅದಕ್ಕೆ ಸ್ಪಂದಿಸಬೇಕಾಗಿದೆ. ಅದು ಇಂಗ್ಲೀಷ್ ಸಾಹಿತ್ಯವಿರಬಹುದು, ಜಾಗತೀಕರಣವಿರಬಹುದು ಅಥವಾ ಆಧುನಿಕೋತ್ತರ ನಿರೀಕ್ಷೆಗಳಿರಬಹುದು, ನಮಗೆ ಆಯ್ಕೆಗಳೇ ಇಲ್ಲ, ನಾವಿದನ್ನು ನಿಭಾಯಿಸಲೇ ಬೇಕಿದೆ. ಹಾಗೆಯೇ ಕಲೆಯ ಜಗತ್ತಿನಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲೂ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇವೆ. ಇವೆಲ್ಲವೂ ಸೇರಿ ನಿಶ್ಚಯವಾಗಿಯೂ ಕನ್ನಡ ಬರವಣಿಗೆಯಲ್ಲಿ ಹೊಸತನ್ನು ಉದ್ದೀಪಿಸುತ್ತಿದೆ.
ದೇಶಕಾಲದ ಪ್ರತೀ ಸಂಚಿಕಯಲ್ಲೂ ನೇರ ಅನುವಾದದ ಮೂಲಕ ಬೇರೊಂದು ಭಾರತೀಯ ಭಾಷೆಯ ಲೇಖಕನನ್ನು ಪರಿಚಯಿಸಲಾಗುತ್ತಿದೆ. ಬೇರೆ ಬೇರೆ ಭಾಷೆಯ ಬರಹಗಾರರು ಸಮಕಾಲೀನ ವಿದ್ಯಮಾನಗಳಿಗೆ ಹೇಗೆ ಪ್ರತಿಸ್ಪಂದಿಸುತ್ತಿದ್ದಾರೆ, ಅವರ ಚಿಂತನೆಗಳೇನು ಎಂಬುದನ್ನು ತಿಳಿದುಕೊಳ್ಳಲು ಇಂಥ ಕೊಡುಕೊಳ್ಳುವಿಕೆ ತೀರಾ ಮುಖ್ಯವಾಗಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಇವತ್ತು ಬೇರೆ ಬೇರೆ ಭಾಷೆಯ ಭಾರತೀಯ ಲೇಖಕರು ಸರ್ವ ಸಮಾನವಾದ ಸಮಸ್ಯೆಗಳನ್ನು, ಸಂಘರ್ಷಗಳನ್ನು ಎದುರಿಸುತ್ತಿದ್ದಾರೆ. ಇದು ಅಂತರ್ಜಾಲದಿಂದ ಅಥವಾ ಜಾಗತೀಕರಣದಿಂದ ಇದ್ದಿರಬಹುದು.
ಇಂಗ್ಲೀಷಿನಲ್ಲಿ ಈಗಾಗಲೇ ಪ್ರಕಟವಾದ ಲೇಖನದ ಅನುವಾದ ದೇಶಕಾಲದಲ್ಲಿ ಸಿಗುವುದಿಲ್ಲ. ಆಧುನಿಕೋತ್ತರವಾದ ಮತ್ತು ಇಸ್ಲಾಂ ಕುರಿತ ಜಿಯಾವುದ್ದೀನ್ ಸರದಾರ್ ಅವರ ಒಂದೇ ಒಂದು ಲೇಖನ ಇದಕ್ಕಿರುವ ಅಪವಾದ. ಇದರರ್ಥ ನಾವು ಅನುವಾದಗಳನ್ನೇ ಹೊಂದಿಲ್ಲ ಅಂತೇನೂ ಅಲ್ಲ. ಬೇರಾವುದೇ ಕನ್ನಡ ಪತ್ರಿಕೆಗಳಂತಲ್ಲದೆ ನಾವು ಶಿವ ವಿಶ್ವನಾಥನ್, ಜೆರೆಮಿ ಸೀಬ್ರೂಕ್, ಡೇನಿಯಲ್ ಅಮಿಟ್, ಸುಂದರ್ ಸಾರುಕ್ಕೈ, ರೊದ್ದಂ ನರಸಿಂಹ, ಫ್ರಿಟ್ಸ್ ಸ್ಟಾಲ್, ಜಾನ್ ಪೆರಿ ಮತ್ತಿತರ ಇಂಥ ಬರಹಗಾರರಿಂದ ದೇಶಕಾಲಕ್ಕಾಗಿಯೇ ಬರೆಯಿಸಿದ್ದೇವೆ ಮತ್ತು ಇವರ ಈ ಬರಹಗಳು ಮೊಟ್ಟಮೊದಲು ಕನ್ನಡ ಅನುವಾದದಲ್ಲಿ ದೇಶಕಾಲದಲ್ಲಿ ಪ್ರಕಟವಾಗಿವೆ.
ಬೇರೆ ಬೇರೆ ವಿಚಾರಗಳ ಕುರಿತ ಸಂಕಿರಣ ಮಾದರಿಯ ಚರ್ಚೆ - ಸಂವಾದವನ್ನು ಪ್ರತಿ ಸಂಚಿಕೆಯಲ್ಲೂ ಪ್ರಕಟಿಸಿದ್ದೇವೆ. ಆಯಾ ರಂಗದಲ್ಲಿ ನುರಿತವರು, ಅನುಭವಿಗಳು, ಬರಹಗಾರರು ಇದರಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದೇವೆ. ಉದಾಹರಣೆಗೆ ಕಳೆದ ಸಂಚಿಕೆಯಲ್ಲಿ ನಾವು ಕರ್ನಾಟಕದಲ್ಲಿ ಪುಸ್ತಕ ಪ್ರಕಟನೆಯ ಕುರಿತು ತಳಸ್ಪರ್ಶಿ ಚರ್ಚೆಯನ್ನು ಸಂಯೋಜಿಸಿದ್ದೆವು.
ದೇಶಕಾಲವನ್ನು ವೃತ್ತಿಪರ ಕಲಾವಿದ ಚನ್ನಕೇಶವ ವಿನ್ಯಾಸಗೊಳಿಸುತ್ತಾರೆ ಮತ್ತು ಇಂದಿನ ತನಕ ಪ್ರತೀ ಸಂಚಿಕೆಯನ್ನೂ ಸಮಯಕ್ಕೆ ಸರಿಯಾಗಿ ಕೊಟ್ಟಿದ್ದೇವೆ. ಇದನ್ನು ಒತ್ತಿ ಹೇಳುತ್ತಿದ್ದೇನೆ ಯಾಕೆಂದರೆ ಸಣ್ಣ ಪತ್ರಿಕೆಗಳು ನಿಯಮಿತವಾಗಿ ನಿಯತಕಾಲಕ್ಕೆ ಸರಿಯಾಗಿ ಪ್ರಕಟವಾಗುವುದಿಲ್ಲ ಎಂಬ ಅಪಖ್ಯಾತಿಗೆ ತುತ್ತಾಗಿವೆ.
ಪ್ರಶ್ನೆ: ವಿತರಣೆ ಮತ್ತು ಪ್ರಸಾರದಂಥ ರಂಗಗಳಲ್ಲಿ ಕರ್ನಾಟಕದ ಸಣ್ಣ ಪತ್ರಿಕೆಗಳೆಲ್ಲ ಸೇರಿ ಯಾವುದಾದರೂ ನಿರ್ವಹಣಾಜಾಲವೊಂದನ್ನು ರೂಪಿಸಿಕೊಂಡಿವೆಯೆ? ಆರ್ಥಿಕ ಅಥವಾ ಬೇರಾವುದೇ ಬಗೆಯ ಹೊರಗಿನ ಬೆಂಬಲ ಇಂಥ ಪತ್ರಿಕೆಗಳಿಗೆ ಸಹಾಯಕವಾಗಬಹುದಾದ ಮಾರ್ಗಗಳು ಇವೆಯೆ?
ಅಂಥ ಯಾವುದೇ ಜಾಲ ಸಣ್ಣಪತ್ರಿಕೆಗಳಲ್ಲಿ ಇಲ್ಲ. ಆದರೆ ಅವು ಪರಸ್ಪರ ಪೂರವಾಗಿರುವಂಥವು, ಸ್ಪರ್ಧಾತ್ಮಕವಾಗಿ ಅಲ್ಲ ಎನ್ನುವ ಅರಿವಿನೊಂದಿಗೇ ಕೆಲಸ ಮಾಡುತ್ತಿವೆ. ಪರಸ್ಪರ ಸಹಕಾರದ ಮಾರಾಟ ಮತ್ತು ವಿತರಣೆಯ ಜಾಲ ಖಂಡಿತವಾಗಿಯೂ ಸಣ್ಣಪತ್ರಿಕೆಗಳಿಗೇ ಯಾಕೆ, ಕನ್ನಡ ಪುಸ್ತಕ ಪ್ರಕಟಣಾ ರಂಗಕ್ಕೂ ಬಹಳ ಸಹಾಯಕವಾಗುತ್ತದೆ.
ಹೆಚ್ಚಿನೆಲ್ಲಾ ಸಣ್ಣಪತ್ರಿಕೆಗಳು ವಾರ್ಷಿಕ ಚಂದಾ ಮೂಲಕ ವಿತರಿಸಲ್ಪಡುವುದರಿಂದ ಹಾಗೆ ಚಂದಾ ಒಗ್ಗೂಡಿಸಬಲ್ಲ, ಯಾವುದೇ ಬಗೆಯ ಒಂದು ಸುವ್ಯವಸ್ಥಿತ ಸೌಕರ್ಯ ನಿರ್ಮಿಸಿದರೆ ನಿಜಕ್ಕೂ ಅದರಿಂದ ಭಾರೀ ಸಹಾಯವಾಗುತ್ತದೆ. ಉದಾಹರಣೆಗೆ ಎಲ್ಲಾ ಸಣ್ಣಪತ್ರಿಕೆಗಳಿಗೂ ಏಕಕಿಂಡಿಯ ಚಂದಾ ಪಾವತಿ, ನವೀಕರಣ ಸವಲತ್ತು ಇರುವ ಒಂದು ವೆಬ್ಸೈಟ್ ಇದ್ದರೆ ಒಳ್ಳೆಯದು.
ಖಂಡಿತವಾಗಿಯೂ ಸೀಮಿತ ಪ್ರಸಾರದೊಂದಿಗೂ ಕನ್ನಡದಲ್ಲಿ ಒಂದು ಸಣ್ಣಪತ್ರಿಕೆಯನ್ನು ಆರ್ಥಿಕ ನಷ್ಟವಿಲ್ಲದೆಯೇ ನಿರ್ವಹಿಸಲು ಸಾಧ್ಯವಿದೆ ಎಂಬುದು ನನ್ನ ನಂಬಿಕೆ. ಆದರೆ ಹೀಗೆ ಒಂದು ಪತ್ರಿಕೆಯನ್ನು ನಡೆಸಲು ಭಾರೀ ಬದ್ಧತೆಯಿರಬೇಕಾಗುತ್ತದೆ. ಸಂಪಾದಕ ಮತ್ತು ಆತನ ಬಳಗ ತಮ್ಮ ಖಾಸಗಿ ವೇಳೆಯನ್ನು ಇದಕ್ಕೆಲ್ಲ ವಿನಿಯೋಗಿಸಲು ಸಿದ್ಧವಾಗಿರಬೇಕಾಗುತ್ತದೆ. ದೀರ್ಘಕಾಲ ಇಂಥ ಬದ್ಧತೆ ಮತ್ತು ತ್ಯಾಗವನ್ನು ಉಳಿಸಿಕೊಂಡು ಬರುವುದು ಕಷ್ಟ.
ಕನ್ನಡ ಸಾಹಿತ್ಯ ಪರಿಸರದಲ್ಲಿ ಸಣ್ಣತನ ಗುಂಪುಗಾರಿಕೆ ಮತ್ತು ಜಾತೀಯತೆ ಹೆಚ್ಚಾಗಿ ಕಾಣುತ್ತಿರುವ ಈ ಅನಾರೋಗ್ಯಕರ ಹಿನ್ನೆಲೆಯಲ್ಲಿ ಉದಯೋನ್ಮುಖ ಬರಹಗಾರರಿಗೆ ಸಾಹಿತ್ಯದ ಬಗ್ಗೆ ಭ್ರಮನಿರಸನ ಹುಟ್ಟುವ ಅಪಾಯವಿದ್ದಂತಿದೆ. ಸಾಹಿತಿಗಳ ನಡುವೆ ಮುಕ್ತಸಂವಾದ ಸಾಧ್ಯವಿಲ್ಲದಂಥ ಸ್ಥಿತಿ ಇರುವ ಈ ವಾತಾವರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ
ಸಾಹಿತ್ಯ ಮತ್ತು ಸಾಹಿತಿಗಳು ಇತರೆ ಕ್ಷೇತ್ರಗಳಿಗಿಂತ ಹೆಚ್ಚು ಉತ್ತಮ ಅಥವಾ ಕಡಿಮೆ ಅಂತ ತಿಳ್ಕೊಳ್ಳೊದ್ರಲ್ಲೇ ನನಗೆ ಭಿನ್ನಾಭಿಪ್ರಾಯವಿದೆ. ಸಾಹಿತ್ಯ ಇತರೆ ಎಲ್ಲಾ ಕ್ಷೇತ್ರಗಳಂತೆ ಒಂದು ಕಲಾ ಕ್ಷೇತ್ರ.. ಸಾಹಿತಿಗಳು ಉತ್ತಮವಾಗಿರಬೇಕು ಎಲ್ಲರಿಗಿಂತ ಹೆಚ್ಚಿನವರಾಗಿರಬೇಕು ಅಂತ ನಾನು ತಿಳ್ಕೊಳ್ಳೊದಿಲ್ಲ.ಎಲ್ಲಾ ಕ್ಷೇತ್ರಗಳಿದ್ದಂತೆ ಇಲ್ಲೂ ಕೂಡ ಕೆಲವು ಸಮಸ್ಯೆಗಳಿವೆ. ಸಾಹಿತ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಇಷ್ಟು ದಿನ ಯಾವುದರಿಂದ ನಮಗೆ ನೆಮ್ಮದಿ ಎಂದು ಭಾವಿಸಿದ್ದವೋ ಆ ಕಲ್ಪನೆ ಬದಲಾಗುತ್ತಿದೆ. ಉಭಯಕುಶಲೋಪರಿಗಳು ವ್ಯಾವಹಾರಿಕ ಮತ್ತು ಆರ್ಥಿಕ ಸ್ಥಿತಿಯನ್ನು ತಿಳಿಸುವ ಮಾತುಗಳಾಗಿಬಿಟ್ಟಿವೆ. ಮಾರುಕಟ್ಟೆಯಿಂದ ಪ್ರಣೀತವಾದ ಭಾಷೆಯಿಂದ ಸೂಕ್ಷ ಸಂವೇದನೆಯನ್ನು ಕಳೆದುಕೊಳ್ಳುತ್ತಿರುವ ವಾತಾವರಣ ಸೃಷ್ಟಿಯಾಗ್ತಾ ಇದೆ. ಎಲ್ಲವನ್ನೂ ಮಾರುಕಟ್ಟೆ ದೃಷ್ಟಿಯಿಂದ ನೋಡುವ, ಉದಾಹರಣೆಗೆ ಆಧ್ಯಾತ್ಮವನ್ನು ಕೆಲವೇ ವಾರಗಳಲ್ಲಿ ತಿಳಿದುಕೊಳ್ಳುವ ಉತ್ಪನ್ನವೊಂದು ಮಾರುಕಟ್ಟೆಗೆ ಬಂದಾಗ ಅದರ ಹಿಂದೆ ಬೀಳುವ ಜನ. ಯಾವುದನ್ನು ನಾವು ಅನುಭವದಿಂದ ಆಸ್ವಾದಿಸಬೇಕೋ ಮತ್ತು ಅದರಿಂದ ಪ್ರಬುದ್ಧರಾಗಬೇಕೋ ಅದನ್ನುಳಿದು ಜಾಹೀರಾತಿನ ಮೋಡಿಗೆ ಒಳಗಾದಂತಾಗಿ ಸಿಕ್ಕದ್ದನ್ನೇ ಅನುಭವವೆನ್ನುವ ಜಾಯಮಾನ ಅನಾರೋಗ್ಯಕರ. ಉದ್ಯೋಗದ ಮೂಲಭೂತ ಉದ್ದೇಶದ ಬದಲಾವಣೆ ಮತ್ತೊಂದು ಕಾರಣವಾಗಿದೆ. ಉದ್ಯೋಗ ಸ್ವಸಂತೋಷಕ್ಕೆ ಮತ್ತು ಉದ್ಯೋಗದಿಂದ ವ್ಯಕ್ತಿತ್ವ ವಿಕಾಸ ಈ ವಿಷಯಗಳಲ್ಲಿನ ನೈಜ ಉದ್ದೇಶ ಕಡಿಮೆಯಾಗುತ್ತಿದೆ. ಉದ್ಯೋಗ ಕೇವಲ ಹಣಗಳಿಕೆಗಾಗಿ ಎಂಬಂಥ ಮನಸ್ಥಿತಿಯಿಂದ ಉದ್ಯೋಗದ ಬಗ್ಗೆ ಇರಬೇಕಾದ ಆಸಕ್ತಿ ಕಳೆದುಹೋಗುತ್ತಿದೆ. ಈ ಎರಡು ಕಾರಣಗಳಿಂದಾಗಿ ಕಲಾ ಕ್ಷೇತ್ರಗಳು ತನ್ನ ಮಹತ್ವವನ್ನ ಕಳೆದುಕೊಳ್ತಾ ಇದೆ. ಬದುಕಿನ ಜಂಜಾಟಗಳಿಂದ ಮನಸ್ಸಿನ ಖಾಲಿಜಾಗ ಅಂದರೆ ಮೌನದಿಂದಿರುವಿಕೆ ಸುಮ್ಮನಿರುವಿಕೆ ಇವುಗಳ ಮೇಲೆ ಒತ್ತಡ ಬೀಳ್ತಾ ಇದೆ. ಇದರಿಂದ ಬರೆಯುವ ಬರವಣಿಗೆ ಮತ್ತು ಕ್ಷೇತ್ರಗಳಲ್ಲಿ ಸಣ್ಣತನಗಳು ಇತ್ಯಾದಿ ಕಾಣಿಸಿಕೊಳ್ತಾ ಇದೆ.
ಪ್ರಶ್ನೆ ೨
ವಿಶ್ವವಿದ್ಯಾಲಯದ ಸಾಹಿತಿಗಳು ಮತ್ತು ಪತ್ರಿಕಾ ಸಾಹಿತಿಗಳು ಗುಂಪಿನಲ್ಲಿ ಶ್ರೇಷ್ಟತೆಯ ಪ್ರಶ್ನೆ ಬಂದಾಗ ಸುಬ್ಬಣ್ಣನವರ ಮಾತು ನೆನಪಾಗುತ್ತೆ ` ಶ್ರೇಷ್ಟತೆಯೊಂದು ವ್ಯಸನ, ಶ್ರೇಷ್ಟತೆ ಬರಹದ ಮಾನದಂಡವಾಗಬಾರದು, ಜನಪ್ರಿಯವಾದದ್ದು ಶ್ರೇಷ್ಟವಲ್ಲ ಅನ್ನೋ ನಿಲುವು ಸರಿಯಲ್ಲ ಮತ್ತು ಬರಹವೊಂದನ್ನು ಶ್ರೇಷ್ಟವೆಂದು ಬಿಂಬಿಸುವ ಯತ್ನ ಇತಾದಿಗಳು ಅಪಾಯಕಾರಿ’, ಈ ಹಿನ್ನೆಲೆಯಲ್ಲಿ ದೇಶಕಾಲದಂಥ ಪತ್ರಿಕೆಯ ಸಂಪಾದಕರಾಗಿ ಶ್ರೇಷ್ಟತೆಯನ್ನ ಹೇಗೆ ಸಮೀಕರಿಸುತ್ತೀರಿ?
ಉತ್ತರ
ಸುಬ್ಬಣ್ಣನವರ ಮಾತುಗಳನ್ನು ಒಪ್ಪುತ್ತೇನೆ. ಶ್ರೇಷ್ಟತೆ ಕೆಟ್ಟದ್ದು ಅಂತ ಸುಬ್ಬಣ್ಣನವರು ಹೇಳಿಲ್ಲ. ಶ್ರೇಷ್ಟತೆ ವ್ಯಸನವಾದಾಗ ಅದು ಮೇಲು ಕೀಳನ್ನ ಸೃಷ್ಟಿ ಮಾಡುತ್ತೆ, ಕೇಂದ್ರೀಕೃತ ವ್ಯವಸ್ಥೆಯನ್ನುಂಟು ಮಾಡುತ್ತೆ. ಯಾವುದೇ ವ್ಯವಸ್ಥೆಗೆ ಒಂದು ನಿಯಮ ಎಂದಾದಾಗ ಅದು ಜಡತ್ವವಾಗಿಬಿಡುವ ಅಪಾಯವಿದೆ. ಸುಬ್ಬಣ್ಣನವರು ಮುಂದುವರೆದು ಶ್ರೇಷ್ಟತೆ ಸಹಜವಾದ ಗುಣವಾಗುವಿಕೆ ಮುಖ್ಯ ಎಂದಿದ್ದಾರೆ ಆದರೆ ಅದನ್ನು ನಾವು ಮರೆತುಬಿಟ್ಟಿದ್ದೇವೆ. ಅವರವರ ಕ್ಷೇತ್ರದಲ್ಲಿ ಪರಿಣಿತಿಯನ್ನ ಹೊಂದಿದ ಜನ ಆ ಕ್ಷೇತ್ರದಲ್ಲಿ ಶ್ರೇಷ್ಟರು. ಜನಪ್ರಿಯ ಸಾಹಿತ್ಯದ ಬಗ್ಗೆ ಹೇಳ್ತಾ ಇದ್ರಿ, ನಾನು ಜನಪ್ರಿಯ ಸಾಹಿತ್ಯದ ವಿರೋಧಿಯಲ್ಲ . ಜನಪ್ರಿಯತೆ ಜನರನ್ನ ಪ್ರತಿಕ್ರಿಯಾತ್ಮಕವಾಗಿ ಸೆಳೆದುಕೊಳ್ಳುತ್ತೆ. ಉದಾಹರಣೆಗೆ ಟಿವಿಯಲ್ಲಿ ಬರುವ ಧಾರಾವಾಹಿಗಳಲ್ಲಿ ನಾವು ನೇರವಾಗಿ ತೊಡಗಿಕೊಳ್ಳಬೇಕಾಗಿಲ್ಲ, ಅದೇ ರೀತಿ ಜನಪ್ರಿಯ ಸಾಹಿತ್ಯ ಓದುಗನಿಂದ ಏನನ್ನೂ ಬೇಡುವುದಿಲ್ಲ ಅದು ಓದುಗನಿಗೆ ಸಂತೋಷವನ್ನು ಕೊಡುತ್ತೆ, ರಂಜನೀಯವಾಗಿರುತ್ತೆ ಒಟ್ಟಾರೆ ಮನರಂಜನೆಯನ್ನು ಕೊಡುತ್ತೆ. ಗಾಢವಾದ ಸಾಹಿತ್ಯ ಪ್ರತಿಕ್ರಿಯೆಗಿಂತ ಪ್ರತಿಸ್ಪಂದನೆಯನ್ನು ಬೇಡುತ್ತೆ. ಓದುಗನಿಗೆ ಚಿಂತನೆಯನ್ನು ಹುಟ್ಟು ಹಾಕುವ ಕೆಲಸ ಗಾಢವಾದ ಸಾಹಿತ್ಯ ಮಾಡುತ್ತೆ. ಈ ಕಾರಣಕ್ಕೆ ಜನಪ್ರಿಯ ಸಾಹಿತ್ಯವನ್ನ ಬರೆಯುವುದು ಬರಹಗಾರನ ಉದ್ದೇಶವಾಗಬಾರದು ಅಂತ ನನ್ನ ಭಾವನೆ. ಬರಹಗಾರನ ಮನಸ್ಸಿನಲ್ಲಿ ಜನಪ್ರಿಯ ಸಾಹಿತ್ಯ ರಚನೆಯ ಉದ್ದೇಶವಿದ್ದರೆ ಆತನ ಬರವಣಿಗೆಯಲ್ಲಿ ಸರಳತೆ ಎದ್ದು ಕಾಣುತ್ತೆ. ಆತ ಸರಳವಾಗಿ ಬರೆಯುವ ಬದಲು ಸರಳಗೊಳಿಸಿ ಬರೆಯಲು ತೊಡಗುತ್ತಾರೆ ಆಗ ನೈಜ ಸಾಹಿತ್ಯ ಅಥವಾ ಗಾಢ ಸಾಹಿತ್ಯ ಸತ್ತು ಹೋಗುತ್ತೆ. ಉದಾಹರಣೆಗೆ ಸುಗಮ ಸಂಗೀತ ಸಂಗೀತದ ಪಾಂಗಿತ ಅಭ್ಯಾಸವಿಲ್ಲದೆ ಹಾಡಿಬಿಟ್ಟರೆ ಯಾರು ಬೇಕಾದರೂ ಹಾಡಬಹುದು ಎಂಬಂತಾಗಿಬಿಡುತ್ತೆ. ಹಾಗಾದಾಗ ಸುಶ್ರಾವ್ಯವಾದ ಸಂಗೀತ ಕೇವ ಶ್ರಾವ್ಯವಾಗುತ್ತೆ ವಿನಃ ಸುಶ್ರಾವ್ಯವಾಗಲ್ಲ. ಸಂಗೀತದ ಚೌಕಟ್ಟಿದ್ದರೆ ಅದು ಹಾಡಿಗೆ ಮೆರುಗನ್ನ ಕೊಡುತ್ತೆ. ಈ ಹಿನ್ನೆಲೆಯಲ್ಲಿ ಜನಪ್ರಿಯತೆ, ಶ್ರೇಷ್ಠತೆ ಅದು ಆ ಮಾಧ್ಯಮದ ಕ್ಷೇತ್ರದ ಪರಿಣಿತಿಗೆ ಸಂಬಂಧಿಸಿದ್ದು. ಅದು ಮೇಲು ಕೀಳನ್ನು ಉಂಟುಮಾಡುವ ವಿಷಯವಾಗಬಾರದು.
ಪ್ರಶ್ನೆ ೩
ಹಿಂದೆ ನೀವು ಹೇಳಿದ ಹಾಗೆ ಮನಸ್ಸಿನ ಖಾಲಿ ಜಾಗವನ್ನು ತುಂಬಬಲ್ಲ ಅಥವಾ ಗಾಢ ಚಿಂತನೆಯನ್ನು ಹಚ್ಚುವ ಸಾಹಿತ್ಯಕ್ಕೆ ಭವಿಷ್ಯವಿದೆಯೇ?
ಉತ್ತರ
ಖಂಡಿತ ಭವಿಷ್ಯವಿದೆ. ನಾವಿಬ್ಬರೂ ಈಗ ಮಾತನಾಡುತ್ತಿರುವುದೇ ಅದಕ್ಕೆ ಉದಾರಹಣೆ. ಇದು ಇಂದಿನ ಅಥವಾ ಹಿಂದಿನ ಸಮಸ್ಯೆಯಲ್ಲ ಗಂಭೀರ ಸಾಹಿತ್ಯ ಯಾವತ್ತೂ ಓದುಗರ ಕೊರತೆಯನ್ನ ಎದುರಿಸಿದೆ. ಗಂಭೀರ ಸಾಹಿತ್ಯವನ್ನ ಜನಪ್ರಿಯಗೊಳಿಸ ಬೇಕೆಂಬ ಅಪೇಕ್ಷೆ ತಪ್ಪಾಗುತ್ತೆ. ಈ ಅಪೇಕ್ಷೆ ಮಾರುಕಟ್ಟೆ ಪ್ರಣೀತಗುಣವೇ ಹೊರತು ಬೇರೆಯದಲ್ಲ. ಪುಸ್ತಕ ಮಾರಾಟವನ್ನ ಇತರೆ ಮಾರಾಟದೊಂದಿಗೆ ಹೋಲಿಸಿಕೊಳ್ಳುವಿಕೆ ತಪ್ಪಾದ ಪ್ರಕ್ರಿಯೆ. ಗಂಭೀರ ಸಾಹಿತ್ಯ ನಿಧಾನಗತಿಯಲ್ಲಿ ಜನಪ್ರಿಯವಾಗುತ್ತೆ ಮತ್ತು ಅದರ ಮೌಲ್ಯ ಕಾಲಾಂತರದಲ್ಲಿ ತಿಳಿಯುತ್ತೆ. ಮತ್ತೊಂದು ಚಿಂತನಾರ್ಹ ವಿಷಯವೆಂದರೆ ನಗರಗಳಲ್ಲಿ ಕನ್ನಡ ಮಾಧ್ಯಮದ ಕೊರತೆಯಿಂದ ಹೊಸ ಓದುಗರು ಕಳೆದುಹೋಗುತ್ತಿರುವಿಕೆ. ಓದುಗರ ಸಂಖ್ಯೆ ಕ್ರಮೇಣ ಕಡಿಮೆ ಅಥವಾ ಏರಿಳಿತವಾಗುತ್ತಿರುವುದಕ್ಕೆ ಕಾರಣ ಶಿಕ್ಷಣ ಮಾಧ್ಯಮದಲ್ಲಿ ಕನ್ನಡದ ಕಡೆಗಣನೆ ಅನ್ಸುತ್ತೆ.
ಪ್ರಶ್ನೆ ೪
ಮಾಹಿತಿಗಳನ್ನ ಮತ್ತು ಸಾಮಾನ್ಯ ಜ್ಞಾನವನ್ನ ಹೆಚ್ಚಿಸುವ ಪುಸ್ತಕಗಳ ಮಾರಾಟ ಹೆಚ್ಚುತ್ತಿರುವ ಪರಿಸ್ಥಿತಿಲ್ಲಿ ಕಾಲ್ಪನಿಕ ಬರಹಗಳ ಸಾಹಿತ್ಯ ಇಲ್ಲವಾಗುತ್ತಿದೆ ಎನಿಸುತ್ತಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ
ಸಾಹಿತ್ಯ ಮತ್ತು ಸಾಕ್ಷರತೆಗೆ ವ್ಯತ್ಯಾಸವಿದೆ. ಮಾಹಿತಿಯನ್ನ ಒದಗಿಸುವ ಮತ್ತು ಸಾಮಾನ್ಯಜ್ಞಾನವನ್ನ ಕೊಡುವ ಪುಸ್ತಕಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರಬೇಕು. ಆದರೆ ಆ ಬಗೆಯ ಪುಸ್ತಕಗಳು ಇತರೆ ಸಾಹಿತ್ಯ ಕೃತಿಗಳಿಗಿಂತ ಭಿನ್ನವಾಗಿವೆ, ಹೇಗೆಂದರೆ ಸಾಹಿತ್ಯ ಮತ್ತು ಸಾಕ್ಷರತೆಗಿರುವಷ್ಟು ವ್ಯತ್ಯಾಸ ಇವೆರಡರ ಮಧ್ಯೆ ಇದೆ. ಅಕ್ಷರ ಬಲ್ಲವರೆಲ್ಲಾ ಸಾಹಿತಿಗಳಲ್ಲ. ಇನ್ನು ಕಾಲ್ಪನಿಕ ಕಥೆಗಳ ಕಾಲ ಮುಗಿದಿದೆ ಎಂಬ ಮಾತು ಒಪ್ಪತಕ್ಕದ್ದಲ್ಲ. ಉದಾಹರಣೆಗೆ ಪ್ರೇಮಕಥೆಗಳಿಗೆ ಸಾವಿಲ್ಲ. ಸಾವಿರಾರು ವರ್ಷದ ಹಿಂದಿನ ಪ್ರೇಮ ಕಥೆಗಳು ಮತ್ತು ಈ ಹೊತ್ತಿಗೆ ಬರೆಯುವ ಪ್ರೇಮ ಕಥೆಗಳು ಎಲ್ಲವೂ ಚಿರನೂತನವಾಗಿಯೇ ಕಂಡುಬರುತ್ತದೆ. ಸಾಹಿತ್ಯ ಒಂದು ಹೇಳಿಕೆಯನ್ನು ಹೇಳುವುದಿಲ್ಲ. ಉದಾಹರಣೆಗೆ ’ಪ್ರೇಮ ಅಮರ’ವೆನ್ನುವ ಮಾತು, ಸಾಹಿತ್ಯ ಪದೇ ಪದೇ ಪ್ರೇಮ ಅಮರವೆಂದು ಹೇಳುತ್ತಿದೆ ಎಂದಾದರೆ ಆಗ ಪ್ರೇಮ ಅಮರ ವೆನ್ನುವ ಕಾಲದ ಕೊನೆಯಾಯ್ತೆಂದು ತಿಳಿಯಬೇಕಾಗುತ್ತದೆ. ಆದರೆ ಅದೇ ಸಾಲನ್ನು ಹೊಸ ರೀತಿಯಲ್ಲಿ ಓದುಗನ ಅನುಭವಕ್ಕೆ ತರುವುದಾದರೆ ಆಗ ಪ್ರೇಮ ಅಮರವೆನ್ನುವ ಸಾಲು ನಿತ್ಯಹರಿದ್ವರ್ಣ. ಒದೇ ರೀತಿಯ ಕಾಲ್ಪನಿಕ ಕಥೆಗಳನ್ನು ಹೊಸ ಹೊಳಹಿನಲ್ಲಿ ಅನುಭವಕ್ಕೆ ತರುವುದಾದರೆ ಕಾಲ್ಪನಿಕ ಕಥೆಗಳಿಗೆ ಕೊನೆಯೆನ್ನುವುದಿಲ್ಲ.
ಪ್ರಶ್ನೆ ೫
ಅನಾಮಿಕರ ಒಳ್ಳೆಯ ಪುಸ್ತಕಗಳು ಕೈಗೆ ಸಿಗದಂತೆ ಮರೆಯಾಗಿಬಿಡುತ್ತದೆ. ಇದು ಪ್ರಕಾಶನದ ಸಮಸ್ಯೆ ಇರಬಹುದು. ಒಳ್ಳೆಯ ಪುಸ್ತಕಗಳ ಜೊತೆಗೆ ಜಳ್ಳು ಸಾಹಿತ್ಯವಿರುವ ಪುಸ್ತಕಗಳು ಹೆಚ್ಚು ಹೆಚ್ಚು ಬರುತ್ತಿರುವುದರಿಂದ ಗಟ್ಟಿ ಕಾಳಿನ ಪುಸ್ತಕಗಳು ಮರೆಯಲ್ಲಿ ನಿಂತುಬಿಡುತ್ತೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ
ಸರಕಾರದ ಕೆಲವು ಯೋಜನೆಯಿಂದ ಹಣದ ಹರಿವು ಸರಿದಾರಿಯಲ್ಲಿ ಇಲ್ಲ. ಸರಕಾರ ಪ್ರಕಟಣಾ ವ್ಯಾಪಾರಕ್ಕೆ ನೇರವಾಗಿ ಕೈ ಹಾಕಿದ್ದರಿಂದ ಕೆಲವೊಂದು ಪುಸ್ತಕಗಳು ಕೇವಲ ಗ್ರಂಥಾಲದ ಮೂಲೆಯಲ್ಲಿ ಸೇರುವಂತಾಗಿಬಿಟ್ಟಿದೆ. ಪ್ರಕಾಶಕರಿಗೆ ಲಾಭದ ಸುಲಭ ಮಾರ್ಗ ಸಿಕ್ಕದ್ದರಿಂದ ಅಂದರೆ ಸರಕಾರವೇ ಒಂದಷ್ಟು ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದ ರಾಜ್ಯದ ಮೂಲೆಗೆ ತಲುಪಿಸುವ ಮತ್ತು ಪುಸ್ತಕದ ಅರಿವನ್ನ ಮೂಡಿಸುವ ಕೆಲಸಕ್ಕೆ ಕೈ ಹಾಕದೆ ಸುಮ್ಮನಿದ್ದುಬಿಡುತ್ತಾರೆ. ಹಾಗಾಗಿ ಪ್ರಕಾಶಕರ ಗಮನ ಕೇವಲ ಸರಕಾರ ಕೊಳ್ಳುವ ಶೇಕಡಾ ದ ಮೇಲಿರುತ್ತದೆ ವಿನಃ ಪುಸ್ತಕದ ಮೇಲಿರುವುದಿಲ್ಲ. ಹಾಗಾಗಿ ಒಳ್ಳೆಯ ಪುಸ್ತಕಗಳು ಕಾಣೆಯಾಗಿಬಿಡುವ ಅಪಾಯವಿದೆ.
ಪ್ರಶ್ನೆ ೬
ಬರಹಗಾರನಿಗೆ ಬರಹದ ಮೇಲಿನ ಬದ್ದತೆಯನ್ನು ಕುರಿತು ನಿಮ್ಮ ಮಾತುಗಳು?
ಉತ್ತರ
ಬದ್ಧತೆ ಎರಡು ಥರದ್ದು. ಒಂದು ಬರೆಯುವಾಗಿನ ಸ್ಥಿತಿ. ಬರಹ, ಬರಹಗಾರನಿಗೆ ಪ್ರಾಮಾಣಿಕವಾಗಿ, ಯಾವ ಯಾರ ಹಂಗಿಲ್ಲದೆ, ಪೂರ್ವಾಗ್ರಹವಿಲ್ಲದೆ ಬರೆಯುವ ಅವಕಾಶವನ್ನು ಕೊಡುತ್ತೆ, ಎರಡನೆಯದು ಏತಕ್ಕಾಗಿ ಬರೆಯಬೇಕೆನ್ನುವ ಪ್ರಶ್ನೆ. ಕಂಡುಕೊಂಡ ಮತ್ತು ಅನುಭಾವಿಸಿದ್ದನ್ನು ಮತ್ತೆ ಮತ್ತೆ ಗ್ರಹಿಸಲಿಕ್ಕೆ ಬರೆಯಬೇಕೆನ್ನುವ ಅದಮ್ಯ ಉತ್ಸಾಹ. ಉದಾಹರಣೆ ನಾವು ಪ್ರವಾಸಕ್ಕೆ ಹೋಗಿ ಬಂದಾದ ಮೇಲೆ ಮನೆಯವರಿಗೆ ನಾವು ಕಂಡದ್ದನ್ನು ನೋಡಿದ್ದನ್ನು ವಿವರಿಸುವಿಕೆಯಲ್ಲಿ ಒಂದು ಕಥನವಿದೆ. ಒಂದು ಕ್ಷಣ ಕಂಡದ್ದನ್ನು ವಿಸ್ತರಿಸಿ ಹೇಳುವಲ್ಲಿ ನಿರೂಪಣಾ ಮತ್ತು ಕಥನಶೈಲಿ ಮಹತ್ವದ್ದಾಗಿರುತ್ತೆ. ಅಲ್ಲಿನ ಸಂಗತಿಗಳನ್ನು ವರದಿಯ ರೂಪದಲ್ಲೂ ಹೇಳಬಹುದು ಆದರೆ ಸಾಹಿತ್ಯವೊಂದು ವರದಿಯಲ್ಲ ಅದು ಗ್ರಹಿಸಿದ್ದನ್ನು ಹೇಳುವ ಕಲೆ. ಗ್ರಹಿಕೆಯ ಕಲೆ ಒಂದು ಸುಖಾನುಭೂತಿ ಈ ಹಂತದಲ್ಲಿ ಪ್ರಮಾಣಿಕತೆಯಿದೆ. ಬದ್ಧತೆಗೆ ಮೊದಲನೆ ಆಧ್ಯತೆ ಕೊಟ್ಟಾಗ ತಾನೇ ತಾನಾಗಿ ಹೊರಹೊಮ್ಮುವ ಸಾಹಿತ್ಯ ಎತ್ತರದ್ದಾಗಿರುತ್ತೆ. ಬರೆಯಲಾರದ್ದಕ್ಕೆ ಕೊಡುವ ನೆಪ ಕೇವಲ ಕುಂಟುನೆಪವಷ್ಟೆ.
ಪ್ರಶ್ನೆ ೭
ನಿಮ್ಮ ಅಂಕುರ ಕಥಾ ಸಂಕಲನ ಪ್ರಕಟವಾಗುವ ಸಮಯದಲ್ಲಿ ನಿಮಗೆ ಚಿತ್ತಾಲರ ಪ್ರಭಾವ ಎಷ್ಟಿತ್ತು? ಮತ್ತು ಅದರಿಂದ ಹೊರಬಂದದ್ದು ಹೇಗೆ?
ಉತ್ತರ
ಸಾಹಿತ್ಯದ ಲೋಕದೊಳಗೆ ನಾನು ಹೆಜ್ಜೆ ಇಟ್ಟಾಗ ಸಾಹಿತ್ಯದ ವಿವಿಧ ಪಂಥಗಳ ನವ್ಯ ನವ್ಯೋತ್ತರ ಪ್ರಗತಿಶೀಲ ಇತ್ಯಾದಿಗಳ ಅರಿವಿರಲಿಲ್ಲ. ಓದು ಒಂದು ರೂಢಿಯಾಗಿತ್ತು ಮತ್ತು ರೂಢಿಸಿಕೊಂಡೆ ಹಾಗೆ ಓದುತ್ತಿದ್ದಾಗ ಸಿಕ್ಕದ್ದು ಯಶವಂತ ಚಿತ್ತಾಲರ ಕೃತಿಗಳು. ಅವರ ಕಥಾ ಸಂಕಲನ ಆಟ ನನ್ನನ್ನು ಚಕಿತಗೊಳಿಸಿತ್ತು. ಕಾರಣವಿಷ್ಟೇ ನಾನು ಮತ್ತು ಅವರು ಬೆಳೆದ ಸ್ಥಳ ಒಂದೇ ಅಗಿತ್ತು. ವ್ಯತ್ಯಾಸವೆಂದರೆ ಬೆಳೆದ ಬೆಳೆಸಿದ ಪರಿಸರ ಭಿನ್ನವಾಗಿತ್ತು. ನಾನು ಕಂಡ ಉತ್ತರ ಕನ್ನಡ ಮತ್ತು ಅವರು ಚಿತ್ರಿಸಿದ ಉತ್ತರ ಕನ್ನಡ ನಮ್ಮ ನಮ್ಮ ಕಾಲಘಟ್ಟಕ್ಕೆ ಬದಲಾವಣೆಯಾಗಿತ್ತು. ಜನಿಸಿದ್ದು ಇಬ್ಬರೂ ಒಂದೇ ಸ್ಥಳದವರಾದರೂ ಇಬ್ಬರ ಜಗತ್ತು ಬೇರೆಯಾಗಿರುತ್ತೆ. ಹಾಗಾಗಿ ನನ್ನೊಳಗಿನ ಉತ್ತರಕನ್ನಡವನ್ನು ನಾನು ಹೊರಗಿಡಬೇಕು ಎನಿಸಿದ್ದು ಹೌದು. ಇನ್ನು ಅವರ ಪ್ರಭಾವ ನನ್ನ ಮೇಲೆ ಇದ್ದದ್ದು ನಿಜ ಅದನ್ನ ಪ್ರಜ್ಞಾಪೂರ್ವಕವಾಗಿ ತಪ್ಪಿಸಿಕೊಂಡೆ. ಅದಾಗಲೇ ಚಿತ್ತಾಲರು ಪ್ರಸಿದ್ಧಿಹೊಂದಿದ ಬರಹಗಾರಾಗಿದ್ದರು ಉತ್ತರಕನ್ನಡವೆಂದರೆ ಚಿತ್ತಾಲರ ಉತ್ತರಕನ್ನಡವೆಂಬಷ್ಟರ ಮಟ್ಟಿಗೆ ಬೆಳೆದಿದ್ದರು. ಹಾಗಾಗಿ ನಾನು ಅವರು ಬಳಸಿದ ನುಡಿಗಟ್ಟುಗಳು ಪದಪ್ರಯೋಗಗಳನ್ನುಪಯೋಗಿಸಲಿಲ್ಲ. ಹೀಗೆ ನಾನು ನನ್ನದೇ ಶೈಲಿಯನ್ನ ರೂಢಿಸಿಕೊಂಡೆ
ಪ್ರಶ್ನೆ ೮
ನೀವು ಒಂದು ಸಂಕಲನದಿಂದ ಮತ್ತೊಂದು ಸಂಕಲನದೊಳಗೆ ಹೆಜ್ಜೆ ಇಡುವಾಗ ಮಹತ್ವದ ಸಂಗತಿಗಳನ್ನು ದಾಖಲಿಸಿದ್ದೀರಿ. ಪ್ರತಿ ಮೂರನೆ ಸಂಕಲನದಲ್ಲಿ ಮೊದಲೆರಡರ ಸಮನ್ವಯತೆ ಹಿಂದಿನ ಸಂಕಲನಗಳ ವಸ್ತುಮುಕ್ತಿಯನ್ನ ಕಾಣಬಹುದು. ಉದಾಹರಣೆಗೆ ’ಅಂಕುರ’ ಸಂಕಲನದಲ್ಲಿ ಕಾಮವು ಮುಂಚೂಣಿಯಲ್ಲಿದ್ದರೂ ಸಹ ಮುಂದೆ ಅದು ತನ್ನ ನೆಲೆಯನ್ನು ಕಂಡುಕೊಂಡಿದೆ. ಅದೇ ರೀತಿಯಲ್ಲಿ ’ಲಂಗರು’ ವಿನಲ್ಲಿ ಮನುಷ್ಯ ಸಂಬಂಧದ ಶೋಧ ಕಂಡುಬರುತ್ತೆ. ಮುನ್ನಡೆದಂತೆ ಮನುಷ್ಯ ಸಂಬಂಧ ಮತ್ತು ಕಾರ್ಪೋರೇಟ್ ಜಗತ್ತಿನ ತಲ್ಲಣಗಳನ್ನು ತಿಳಿಸುವ ’ಹುಲಿಸವಾರಿ’ ಹೀಗೆ ಬದಲಾವಣೆಗೊಂಡ ನಿಮ್ಮ ಕಥಾ ವಸ್ತು ಮತ್ತು ಕಥಾಜಗತ್ತಿಗೆ, ಸಾಹಿತ್ಯ ಸಮಕಾಲೀನವಾಗಬೇಕೆಂಬ ಸಾಹಿತಿಯ ನಿಲುವು ಕಾರಣವೇ ಇಲ್ಲ ಕಾಲಘಟ್ಟದ ಸ್ಥಿತ್ಯಂತರಗಳು ಕಾರಣವೇ?
ಉತ್ತರ
ವಸ್ತು ಮತ್ತು ಸಾಹಿತ್ಯದ ಸಮಕಾಲೀನತೆಗಳು ಬೇರೆ ಬೇರೆಯಾಗಿರುತ್ತೆ. ಬರಹಗಾರನಿಗೆ ತನ್ನ ಸುತ್ತ ನಡೆಯುತ್ತಿರುವ ಘಟನೆಗಳು ಸ್ಥಿತ್ಯಂತರಗಳು ಗಾಢವಾದ ಪರಿಣಾಮವನು ಮಾಡುತ್ತೆ. ಹಾಗಾಗಿ ಇಂದು ಬರೆವ ಯಾವುದೇ ಕೃತಿ ಸಮಕಾಲೀನವೇ ಆಗಿರುತ್ತೆ. ಲೇಖಕನೊಬ್ಬನಿಗೆ ತನ್ನ ಕಾಲವನ್ನು ಬಿಟ್ಟು ಬರೆಯಲಾಗದು. ಈ ಹೊತ್ತು ರಾಮಾಯಣವನ್ನು ಬರೆದರೂ ಅದು ಸಮಕಾಲೀನವೆನಿಸುತ್ತೆ. ಕಾರಣ ಬರಹಗಾರ ಯಾವ ಅಂಶದ ಮೇಲೆ ಹೆಚ್ಚು ಒತ್ತು ಕೊಡುತ್ತಾನೋ ಅದು ಸಮಕಾಲೀನದ ಪ್ರಭಾವವಾಗಿರುತ್ತೆ. ಕೆಲವೊಂದು ವಸ್ತುವನ್ನು ಬೆಳೆಸುವಾಗ, ಬರಹವಾಗಿಸುವಾಗ ಅದು ಸಮಕಾಲೀನವಲ್ಲವೆಂದು ಲೇಖಕನಿಗೆ ಅನ್ನಿಸಿಬಿಡುತ್ತದೆ. ಹಾಗಾಗಿ ಲೇಖಕ ಆ ವಸ್ತುವನ್ನು ಕೈಬಿಡುತ್ತಾನೆ. ಹಾಗಾಗಿ ಲೇಖಕನ ಆಯ್ಕೆಯ ವಸ್ತು ಖಂಡಿತವಾಗಿ ಸಮಕಾಲೀನವಾಗಿರುತ್ತೆ.
ಪ್ರಶ್ನೆ ೯
ನಿಮ್ಮ ಇತ್ತೀಚಿನ ಕಥೆಗಳಾದ ನಿಲುಕು ಇನ್ನೂ ಒಂದು ಮತ್ತೊಬ್ಬನ ಸಂಸಾರ ಕಥೆಗಳಲ್ಲಿ ಒಂದು ಬಗೆಯ ವಿಶಿಷ್ಟವಾದ ಶೋಧವಿದೆ. ಪರಸ್ಪದ ಸಂಬಧವಿಲ್ಲ ವ್ಯಕ್ತಿ ವಸ್ತುಗಳ ನಡುವೆ ಸುಪ್ತವಾದ ಸಂಬಂಧದ ತಂತು ಕಾಣುತ್ತದೆ. ಮತ್ತು ಆ ಅನುಮಾನವೇ ವಿಸ್ತಾರವಾದ ಶೋಧಕ್ಕೆ ಅನುವು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಮಿಕ್ಕ ಕಥೆಗಳ ನಡುವೆ ಈ ಕಥೆಗಳು ನಿಲ್ಲುವ ಸ್ಥಾನ ಮತ್ತು ಅದರ ಆಸಕ್ತಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ
ಅವ್ಯಕ್ತವನ ಮುಟ್ಟುವಂಥ ವಸ್ತುಗಳು ಮತ್ತು ಆ ಬಗೆ ನನಗೆ ಆಸಕ್ತಿದಾಯಕವಾಗಿದೆ. ಕಾಣದುದರ ಕಡೆಗೆ ನಮ್ಮ ಆಸಕ್ತಿ ಇರುವುದು ಸ್ವಾಭಾವಿಕ.ನಮ್ಮ ಐಂದ್ರಿಕ ಜಗತ್ತಿನ ಮೂಲಕ ಅದನ್ನು ಮುಟ್ಟುವ ಯತ್ನವನ್ನು ನಾವು ಮಾಡುತ್ತೇವೆ. ನನ್ಗೆ ತಿಳಿದಿರುವ ಸಂಗತಿಗಳ ಮೂಲಕ ಅವ್ಯಕ್ತವನ್ನು ಮುಟ್ಟಲು ಯತ್ನಿಸಿದ್ದೇನೆ.
ಪ್ರಶ್ನೆ ೧೦
ನಿಮ್ಮ ಕಥೆಗಳಲ್ಲಿನ ಸ್ತ್ರೀ ಪಾತ್ರಗಳು ಒಂದಿಡೀ ಸಂಸಾರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಅಧಿಕ ಮನೋಧೈರ್ಯವಿರುವ ಪಾತ್ರಗಳು. ನೀವು ನೋಡಿದ ಉತ್ತರ ಕನ್ನಡದಲ್ಲಿನ ಸ್ತ್ರೀಯರ ಅಂಶ ಇದಕ್ಕೆ ಕಾರಣವೇ?
ಉತ್ತರ
ನಾನು ಹೆಚ್ಚಾಗಿ ಬೆಳೆದದ್ದು ಅಡುಗೆ ಮನೆಯಲ್ಲಿ. ನಿಮಗೆ ಗೊತ್ತಿಲ್ಲದ ಸಂಗತಿಯೊಂದಿದೆ ಅದು ನಾನು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೇನೆ (ನಗು). ನನಗೆ ಅಡುಗೆಯ ಬಗ್ಗೆ ಆಸಕ್ತಿಯಿದೆ. ಚಿಕ್ಕಂದಿನಿಂದ ಹೆಂಗಸರ ನಡುವೆ ಬೆಳೆದ ನನಗೆ ಅವರ ಲೋಕದ ವಿಸ್ತಾರ ನನಗೆ ಅಚ್ಚರಿಯನ್ನುಂಟುಮಾಡಿವೆ. ಎಷ್ಟೇ ಕಷ್ಟದಲ್ಲಿದ್ದರೂ ಬದುಕುವ ಛಲ ತೋರುವ ಅವರ ಗುಣ ನನ್ನನ್ನು ಪ್ರಭಾವಿತನನ್ನಾಗಿಸಿದೆ. ಒಂದೇ ಕಥೆಯನ್ನು ವಿಭಿನ್ನವಾಗಿ ನಿರೂಪಿಸಿದ ನನ್ನ ಸಂಬಂಧಿ ಹೆಣ್ಮಗಳು ನನಗೆ, ಕಥೆಯೊಂದನ್ನು ಹೀಗೂ ಹೇಳಬಹುದು ಎಂದು ತೋರಿಸಿಕೊಟ್ಟಾಕೆ. ಎಲ್ಲಿ ನಿಂತರೆ ಅಲ್ಲಿಂದ ಆಕೆಯ ಕಥೆ ಶುರುವಾಗುತ್ತಿತ್ತು. ಮತ್ತು ಕಥೆಯ ವಸ್ತು ಒಂದೇ ಆಗಿರುತ್ತಿತ್ತು. ಅಡುಗೆ ಹೊಂಚಲು ಆಕೆ ಬಳಸುತ್ತಿದ್ದ ವಿಧಾನ ಮತ್ತು ಎಲ್ಲೂ ಬೇಸರವೆನಿಸದಂತೆ ಇದ್ದ ಅಕ್ಕಿಯೊಂದರೊಂದಲೇ ಅನೇಕ ಖಾದ್ಯಗಳನ್ನು ಮಾಡುತ್ತಿದ್ದ ಆಕೆಯ ನೈಪುಣ್ಯತೆ ನನ್ನನ್ನು ಆಕರ್ಷಿಸಿದ್ದು. ಹೀಗಿದ್ದ ನನ್ನ ಬಾಲ್ಯ ನನ್ನ ಕಥೆಗಳಲ್ಲಿ ಬೆಳೆದುಬಂತು. ನಾನು ಕಂಡ ಸ್ತ್ರೀ ಮೂರ್ತಿಗಳನ್ನೇ ಕಥೆಗಳಲ್ಲಿ ಚಿತ್ರಿಸಿದ್ದೇನೆ. ಇದನ್ನು ನಾನು ತಂತ್ರವಾಗಿ ಎಲ್ಲೂ ಉಪಯೋಗಿಸಿಲ್ಲ. ಪ್ರಯೋಗಕ್ಕಾಗಿ ಪ್ರಯೋಗಶೀಲತೆಯನ್ನು ಮಾಡಿದರೆ ಅದರಲ್ಲಿನ ಪ್ರಯೋಗವೇ ಎದ್ದು ಕಾಣುತ್ತೆ.
ಪ್ರಶ್ನೆ ೧೧
ನಿಮ್ಮ ಕಥೆಗಳಲ್ಲಿ ಕೆಲವೊಂದು ಪಾತ್ರಗಳು ಅಸಹಾಯಕತೆಯನ್ನು ತೋರಿಸುತ್ತೆ ಮತ್ತು ಇದು ಮುಂದಿನ ಕಥೆಗಳನ್ನು ಬೆಳೆಯುತ್ತಾ ಹೋಗುತ್ತೆ. ಇದರ ಬಗ್ಗೆ ನಿಮ್ಮ ಮಾತುಗಳೇನು?
ಉತ್ತರ
ಪಾತ್ರಗಳ ವ್ಯಕ್ತಿತ್ವದ ವ್ಯಾಪ್ತಿ ನಾವು ಬೆಳೆದಂತೆ ಅದೂ ಬೆಳೆಯುತ್ತದೆ ಮತ್ತು ಅದೇ ರೀತಿಯ ಪಾತ್ರಗಳು ಬೇರೆ ಬೇರೆ ರೂಪವನ್ನು ಹೊದ್ದು ಬರುವುದು ಸಾಮಾನ್ಯ. ಒಂದೇ ರೀತಿಯ ಪಾತ್ರಗಳು ಮತ್ತೆ ಮತ್ತೆ ಕಾಡುತ್ತೆ. ಮತ್ತು ಕಾಲಘಟ್ಟದಲ್ಲಿ ಅದರ ರೂಪಗಳೂ ಬದಲಾಗುತ್ತೆ.
ಪ್ರಶ್ನೆ ೧೨
ನೀವು ’ಅಂಕುರ’ವನ್ನು ನಿಮ್ಮ ಹದಿನೇಳು ಹದಿನೆಂಟನೇ ವಯಸ್ಸಿನಲ್ಲಿ ಬರೆದಿರಿ. ಅಂಥ ಗಾಢವಾದ ಬರಹವನ್ನು ಬರೆದ ನೀವು ’ಒಂದು ಬದಿ ಕಡಲು’ವಿನ ಮೊದಲಲ್ಲಿ ’ಬರೆಯುವ ಹೊತ್ತಿಗೆ ಮಹತ್ವದ್ದೆಂದು ಅನಿಸಿದ ಹಲವು ಸಂಗತಿಗಳು ಕಾಲಾಂತರದಲ್ಲಿ ಅದೇ ತೀವ್ರತೆಯಲ್ಲಿ ಕಾಣಿಸದೇ ಇರುವುದರಿಂದ ದೀರ್ಘ ಬರವಣಿಗೆ ಕೈ ಹಚ್ಚಲು ಅಳುಕಾಗುತ್ತದೆ’ ಎಂದಿದ್ದೀರಿ. ಅಂಥ ಆಳವಾದ ವಸ್ತುವಿರುವ ಕಥೆಗಳು ಇಂದಿಗೂ ನಮಗೆ ಮಸುಕಾಗದೆ ಇರುವಂಥ ಸಂದರ್ಭದಲ್ಲಿ ನಿಮಗೇಕೆ ಆ ವಸ್ತುಗಳ ತೀವ್ರತೆ ಕಡಿಮೆಯಾಗುತ್ತದೆ ಎನಿಸಿದೆ? ಮತ್ತು ಮತ್ತೊಮ್ಮೆ ಕೈ ಹಚ್ಚುವ ಪ್ರಕ್ರಿಯೆ ಎಂದರೆ ಏನು?
ಉತ್ತರ
ತೀವ್ರತೆ ಕಾಣಿಸದು ಎಂದದ್ದು ಒಂದು ಬದಿ ಕಡಲುವಿನ ಪರಿಷ್ಕರಣೆಯನ್ನು ಕುರಿತಾಗಿ. ಐದು ವರ್ಷ ಹಿಂದೆ ಬರೆದ ಕಾದಂಬರಿಯನ್ನು ನಂತರ ಪರಿಷ್ಕರಿಸಲು ಕೈ ಹಚ್ಚಿದಾಗ ಇಂದಿನ ಸಂದರ್ಭ ಸನ್ನಿವೇಶಗಳು ಎದುರು ನಿಲ್ಲುತ್ತವೆ. ಅಂದು ಕಾಡಿದ್ದ ತೀವ್ರತೆ ಇಂದಿನ ಸನ್ನಿವೇಶಕ್ಕೆ ಕಾಡದೆ ಹೋಗುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಆ ಮಾತನ್ನು ಹೇಳಿದ್ದೇನೆ.
ಪ್ರಶ್ನೆ ೧೩
ನಾಟಕ ರಚನೆಯ ಬಗ್ಗೆ ನಿಮಗೆ ಆಸಕ್ತಿ ಹುಟ್ಟಿದ್ದು ಹೇಗೆ?
ಉತ್ತರ
ನಾಟಕ ಮಾಧ್ಯಮದಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿಯಿದೆ. ನಾಟಕಗಳು ಬರಹವೊಂದನ್ನು ಬೇಗನೆ ದೃಷ್ಯರೂಪದಲ್ಲಿ ತೋರಿಸಿಬಿಡುತ್ತೆ. ನಾಟಕದ ಸಾಧ್ಯಾಸಾಧ್ಯತೆಗಳು ತಕ್ಷಣ ರಂಗದ ಮೇಲೆ ಮೂಡುವುದರಿಂದ ಲೇಖಕನು ತನ್ನ ಮನದಲ್ಲಿ ಕಲ್ಪಿಸಿಕೊಂಡ ಪಾತ್ರ ಇತ್ಯಾದಿಗಳು ಅವನಿಗೆ ದೄಶ್ಯಮುಖೇನ ವಿಮರ್ಶೆಗೆ ಒಳಪಟ್ಟು ಅವನ ಬರಹದ ಮೌಲ್ಯವನ್ನು ತಿಳಿಸಿಬಿಡುತ್ತದೆ. ಕಾದಂಬರಿಗಳು ಜನರ ಮನಸ್ಸಿನಲ್ಲಿಳಿದು ಹೊರ ಬಹುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಆದರೆ ನಾಟಕಗಳು ಆ ಕ್ಷಣದಲ್ಲೇ ಅದರ ಸ್ಥಿತಿಯನ್ನು ಹೇಳುತ್ತವೆ. ವಿಶಿಷ್ಟವಾದ ಸೆಳೆತವಿರುವ ನಾಟಕಗಳು ನನಗೆ ಆಕರ್ಷಕವಾಗಿ ಕಂಡುಬಂದಿದೆ ಮತ್ತು ನಾಟಕವನ್ನು ಕೃತಿಯಾಗಿ ಕಾಣುವ ಆಸಕ್ತಿಯನ್ನು ಮೂಡಿಸಿದೆ. ನಾಟಕಗಳ ಇನ್ನೊಂದು ವೈಶಿಷ್ಟ್ಯತೆಯಿರುವುದು ಪ್ರತೀಕಗಳಲ್ಲಿ. ಒಂದಿಷ್ಟನ್ನೇ ಹೇಳಿ ತುಂಬಾ ಆಳವಾದ ಯೋಚನೆಗಿಳಿಸುವುದು, ರಂಗದ ಮೇಲೆ ಸ್ವಲ್ಪವೇ ದೃಶ್ಯ ಮೂಡಿಸಿ ಮನಸ್ಸಿನಾಳಕ್ಕೆ ಅಗಾಧವಾದ ಚಿಂತನೆಯನ್ನು ಹುಟ್ಟು ಹಾಕುವುದು, ರಂಗದ ಮೇಲೆ ಇಡುವ ಇರುವ ಪರಿಕರಗಳು ಪ್ರತಿಯೊಂದೂ ಸಂಕೇತದಂತೆ ಭಾಸವಾಗುವ ಮತ್ತು ಉಪಯೋಗಿಸಲ್ಪಡುವ ರೀತಿ ಎಲ್ಲವೂ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕುತ್ತದೆ. ಹೀಗೆ ನಾಟಕಗಳು ನನ್ನ ಆಸಕ್ತಿಯ ಬಿಂದುವಾಗಿ ನಾನು ಅದರೆಡೆಗೆ ಆಕರ್ಶಿತನಾದೆ.
ಪ್ರಶ್ನೆ ೧೪
ಕಥೆ ಮತ್ತು ಕಾದಂಬರಿಗಳಲ್ಲಿ ನಿಮಗೆ ಹೆಚ್ಚು ಇಷ್ಟವಾದ ಪ್ರಾಕಾರ ಯಾವುದು? ಬರವಣಿಗೆಯ ಪ್ರಕ್ರಿಯೆಯಲ್ಲಿ ಇವೆರಡರ ನಡುವೆ ಇರುವ ವ್ಯತ್ಯಾಸವೇನು?
ಉತ್ತರ
ಶಾಂತಿನಾಥ ದೇಸಾಯಿ ಹೇಳಿದಂತೆ ’ಕಥೆ ಎನ್ನುವುದು ಮರದ ಮೇಲೆ ಹತ್ತಿ ಹಣ್ಣು ತಿಂದಂತೆ ಕಾದಂಬರಿಯೆಂದರೆ ತೋಟದೊಳಗೆ ಓಡಾಡುತ್ತಾ ನಿಮಗಿಷ್ಟದ ಹಣ್ಣು ತಿಂದಂತೆ’ ಹೀಗೆ ಎರಡಕ್ಕೂ ಭಿನ್ನವಾದ ಜೀವನ ದೃಷ್ಟಿಯ ಮನಸ್ಥಿತಿ ಲೋಕದೃಷ್ಟಿ ಅವಶ್ಯಕತೆಯಿದೆ. ಕಥೆಯೊಂದು ಬರೆಯುತ್ತಾ ಹೋದಂತೆ ಕಾದಂಬರಿಯಾಗದು ಮತ್ತು ಉದ್ದವಾದ ಕಥೆ ಕಾದಂಬರಿಯಾಗದು. ಕಾದಂಬರಿ ಒಟ್ಟು ಅನುಭವದ ಸಾರವಾಗಿ ಕಂಡುಬರುತ್ತೆ. ಕಥೆಗಳಲ್ಲು ಚೌಕಟ್ಟು ಚಿಕ್ಕದಾಗಿರುತ್ತದೆ ಹೇಳಬೇಕಾದ ಸಂಗತಿಗಳನ್ನು ಚುರುಕಾಗಿ ಹೇಳಬೇಕಾಗುತ್ತದೆ. ಕಾದಂಬರಿ ಬರೆಯುವಾಗ ವಸ್ತುವನ್ನು ಅರಗಿಸಿಕೊಂಡು ಸಾವಧಾನದಿಂದ ಬರೆಯಲು ತೊಡಗಬೇಕಾಗುತ್ತದೆ.
ಪ್ರಶ್ನೆ ೧೫
ಒಂದು ಪತ್ರಿಕೆಯನ್ನು ದೀರ್ಘಕಾಲ ನಡೆಸಿಕೊಂಡು ಸಮಯಕ್ಕೆ ಸರಿಯಾಗಿ ತಲುಪುವಂತೆ ನೋಡಿಕೊಳ್ಳುವುದು ಕಷ್ಟ ಎನ್ನುವ ಪರಿಸ್ಥಿತಿ ಇರುವಾಗ ದೇಶಕಾಲದಂಥ ಪತ್ರಿಕೆಯನ್ನು ಅದೇ ಗುಣಮಟ್ಟದಲ್ಲಿ ಕಾಯ್ದುಕೊಳ್ಳುತ್ತಾ ನಡೆಸಿಕೊಂಡೂ ಬರುತ್ತಿರುವುದು ಹೇಗೆ? ಮತ್ತು ಅದನ್ನು ಮುಂದಿನ ದಿನಗಳಲ್ಲಿ ಇನ್ನೂ ಭಿನ್ನವಾಗಿ ರೂಪಿಸುವುದಕ್ಕೆ ಹಾಕಿಕೊಂಡಿರುವ ಯೋಜನೆಗಳೇನು?
ಉತ್ತರ
ಪತ್ರಿಕೆ ನಡೆಸುವುದು ಒಬ್ಬನೇ ನಡೆಸುವ ಕೆಲಸವಲ್ಲ ದೇಶಕಾಲದ ಬಳಗದಲ್ಲಿ ಅನೇಕರಿದ್ದಾರೆ ಕೆ ವಿ ಅಕ್ಷರ, ವಿನ್ಯಾಸಕಾರ ಚೆನ್ನಕೇಶವ, ಎಲ್ಲರೂ ಕೈ ಜೋಡಿಸಿದ್ದರಿಂದ ದೇಶಕಾಲವನ್ನ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದೇನೆ. ಪತ್ರಿಕೆಯ ಪ್ರಕಟಣೆಗೆ ಪ್ರಾಮುಖ್ಯತೆ ಕೊಟ್ಟರೆ ಅದು ನಿಗದಿತ ಸಮಯದಲ್ಲಿ ಎಲ್ಲರ ಕೈ ಸೇರುತ್ತೆ. ಚಂದಾದಾರರಿಗೆ ಓದುಗರಿಗೆ ತಿಂಗಳಿಗೆ ಸರಿಯಾಗಿ ತಲುಪಬೇಕೆಂಬ ಬದ್ಧತೆಯೊಂದಿದ್ದರೆ ಸಾಕು. ಲೇಖಕರ ಸಹಕಾರವಿರುವುದರಿಂದ ದೇಶಕಾಲ ಮೌಲ್ಯವನ್ನುಳಿಸಿಕೊಂಡು ಬರುತ್ತಿದೆ.
ಪ್ರಶ್ನೆ ೧೬
ದೇಶಕಾಲದ ನಿಮ್ಮ ಸಂಪಾದಕೀಯವೊಂದರಲ್ಲಿ, ’ಯಶಸ್ಸು ಪ್ರಗತಿ ಜ್ಞಾನ ಕುಟುಂಬ ಸಂಬಂಧಗಳ ಬಗ್ಗೆ ಸಹಜ ಅರ್ಥಗಳನ್ನು ಕಸಿದುಕೊಳ್ಳತೊಡಗಿದ ಸಂಗತಿಗಳ ಬಗ್ಗೆ ತಕ್ಷಣದ ಆಸೆ ದೌರ್ಬಲ್ಯಗಳನ್ನು ಮೀರಿದ ಆಳವಾದ ಆಲೋಚನೆ ಇಂದಿನ ಅಗತ್ಯವಾಗಿದೆ’ ಎಂದಿದ್ದೀರಿ ಇದು ದೇಶಕಾಲದ ನಿಲುವಲ್ಲಲ್ಲದಿದ್ದರೂ ಈ ವರೆಗಿನ ದೇಶಕಾಲ ನಿಮಗೆ ಸಂತೃಪ್ತಿಯನ್ನು ಕೊಟ್ಟಿದೆಯೇ? ಓದುಗರಿಂದ ಪ್ರತಿಸ್ಪಂದನೆ ಸಿಕ್ಕಿದೆಯೇ?
ಉತ್ತರ
ಸಮಾಧಾನವಿದ್ದರೂ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಬೇರೆ ಯಾವ ಪತ್ರಿಕೆಯಗಳಲ್ಲೂ ಪ್ರಕಟಿಸಲು ಸಾಧ್ಯವಿಲ್ಲದಂಥ ಬರಹಗಳನ್ನು ನಾವು ಪ್ರಕಟಿಸಿದ್ದೇವೆ. ದೀರ್ಘವಾದ ಲೇಖನಗಳಾಗಿರಬಹುದು ಕಥೆಗಳಾಗಿರಬಹುದು ಪತ್ರಿಕೆಯ ದೃಷ್ತಿಯಿಂದ ಅಸಾಧ್ಯ ಎನಿಸಿದ್ದನ್ನು ನಾವು ಪ್ರಕಟಿಸಿದ್ದೇವೆ. ಹೊಸ ಬರಹಗಾರರಿಗೆ ದೇಶಕಾಲದಲ್ಲಿ ಜಾಗವಿದೆ ಎನಿಸಿದಾಗ ಪತ್ರಿಕೆಗೆ ಜೀವಕಳೆ ಬರುತ್ತದೆ. ಅದು ಇನ್ನೂ ಹೆಚ್ಚಾಗಬೇಕಿದೆ ಹೊಸ ಬರಹಗಾರರು ದೇಶಕಾಲಕ್ಕೆ ಬರಬೇಕಿದೆ. ಸಾಹಿತ್ಯ ಪತ್ರಿಕೆಗಳಿಗೆ ಆಯಸ್ಸು ಕಮ್ಮಿಯಿರುತ್ತೆ ಕಾರಣ ಅದನ್ನು ನಡೆಸುವ ಚಿಕ್ಕ ಗುಂಪು ಅದೇ ಮೌಲ್ಯವನ್ನು ಉಳಿಸಿಕೊಂಡು ಹೋಗಲು ಹೆಣಗಬೇಕಾಗುತ್ತೆ. ಬರೆಯುವ ಲೇಖಕರಿಗೆ ಪತ್ರಿಕೆಗೆ ಒಂದು ಉಚ್ಛ್ರಾಯವಿರುತ್ತೆ ಅದಾದ ನಂತರ ಓಡುವಿಕೆ ನಡೆಯುವಿಕೆಯಾಗಿಬಿಡುತ್ತದೆ. ಅದೇ ರೀತಿ ಪತ್ರಿಕೆಗಳೂ ಸಹ ಹಾಗೆ ಹುಟ್ಟಿಕೊಂಡ ಋಜುವಾತು ಸಾಕ್ಷಿಗಳು ಉಚ್ಛ್ರಾಯವನ್ನು ತಲುಪಿದಾಗ ಹೊಸ ಲೇಖಕರನ್ನು ಹುಟ್ಟು ಹಾಕಿತು ಮತ್ತು ನಿಧಾನವಾಗಿ ಕರಗಿತು ಕೂಡ ಅದೇ ರೀತಿ ಲಂಕೇಶ್ ಪತ್ರಿಕೆ ಕೂಡ ಇನ್ನೂ ಈ ಎಲ್ಲಾ ಪತ್ರಿಕೆಗಳನ್ನು ನೆನಪಿಸಿಕೊಳ್ಳುತ್ತೇವೆ. ಅದೇ ರೀತಿ ದೇಶಕಾಲಕ್ಕೂ ಒಂದು ಉಚ್ಛ್ರಾಯವಿದೆ ಅಂದುಕೊಂಡಿದ್ದೇನೆ ಎಲ್ಲ ಕಾಲಕ್ಕೂ ದೇಶಕಾಲ ನಿಲ್ಲುತ್ತೆ ಎಂಬ ಭ್ರಮೆ ನನಗಿಲ್ಲ.
ಪ್ರಶ್ನೆ ೧೭
ಧನ್ಯವಾದಗಳು ವಿವೇಕ್ ಇಷ್ಟು ಹೊತ್ತು ನಿಮ್ಮ ವಿಚಾರಗಳನ್ನು ಹಂಚಿಕೊಂಡದ್ದಕ್ಕೆ.
ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್ನಿಂದ ಯಾವಾಗ ಬೇಕಾದರೂ ಬದಲಿಸಬಹುದು.Articles and books stay in their original language. Change this any time with the ಕನ್ನಡ | English switch at the top of the page.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!