ವಿಜ್ಞಾನ, ಪತ್ರಿಕಾ ಮಾಧ್ಯಮ, ಪರಿಸರ ಹೋರಾಟ, ಸೃಜನಶೀಲ ಬರವಣಿಗೆ ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಕಾರ್ಯಕ್ಷೇತ್ರಗಳಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ನಾಗೇಶ ಹೆಗಡೆ ನಮ್ಮ ನಡುವಿನ ಅಪರೂಪದ ಚಿಂತಕ. ಅವರ ಬರಹಗಳನ್ನು ಓದುತ್ತಾ ಬೆಳೆದಿರುವ ನನಗೆ ಅವರು ಕನ್ನಡದ ಸಂದರ್ಭದಲ್ಲಿ ಶಿವರಾಮ ಕಾರಂತ, ಗೌರೀಶ ಕಾಯ್ಕಿಣಿ, ಮೂರ್ತಿರಾಯರ ವೈಚಾರಿಕ ಪರಂಪರೆಯ ಮುಂದುವರಿಕೆಯಾಗಿ ಕಾಣುತ್ತಾರೆ. ಆದರೆ ಈ ಹಿರಿಯರಂತೆ ಕತೆ, ಕಾವ್ಯ, ಕಾದಂಬರಿಗಳನ್ನು ಬರೆಯದ ನಾಗೇಶ ಹೆಗಡೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಸತ್ವವನ್ನು ಹೀರಿ ಭಾಷೆಯ ಸೊಗಡನ್ನೂ ಶಕ್ತಿಯನ್ನೂ ವೈಜ್ಞಾನಿಕ ಬರಹಗಳಲ್ಲಿ ತಂದವರು. ವೈಚಾರಿಕ ಲೇಖನ, ವೈಜ್ಞಾನಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದು ಎಂದು ತೋರಿಸಿದವರು. ಗಂಭೀರ ವಿಷಯಗಳನ್ನು ಸರಳಗೊಳಿಸದೇ ಸರಳವಾಗಿ ಬರೆದವರು.ಅವರ ಪ್ರಬಂಧವೊಂದು ನಮಗೆ ಹನ್ನೆರಡನೇ ತರಗತಿಯಲ್ಲಿ ಕನ್ನಡದ ಪಠ್ಯವಾಗಿತ್ತು. ಅದರಲ್ಲಿ ಚೆರ್ನೋಬಿಲ್ ಅಣು ದುರಂತ, ಭೋಪಾಲ್ ವಿಷಾನಿಲ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಆಧುನಿಕ ಅಭಿವೃದ್ಧಿ ಮಾದರಿಗಳ ಸಾಧಕ ಬಾಧಕಗಳನ್ನು ಚರ್ಚಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ನಿಧಾನವಾಗಿ ಚಳುವಳಿಗಳೆಲ್ಲಾ ಕಾವು ಕಳೆದುಕೊಳ್ಳತೊಡಗಿದ್ದು, ನೋಡನೋಡುತ್ತಲೇ ಗ್ಲೋಬಲ್ ಎಕಾನಮಿ, ಡೆವಲಪ್ಮೆಂಟು ಇತ್ಯಾದಿಗಳು ನಮ್ಮನ್ನು ಆವರಿಸತೊಡಗಿದ್ದು ಶಾಪಿಂಗ್ ಸಂಸ್ಕೃತಿ ಇನ್ನಿಲ್ಲದಂತೆ ಹಬ್ಬುತ್ತಿರುವುದು, ಇವನ್ನೆಲ್ಲಾ ಹೇಗೆ ಅರ್ಥಮಾಡಿಕೊಳ್ಳುವುದು, ಹೇಗೆ ನಿಭಾಯಿಸುವುದು ಎಂದು ಗೊಂದಲಕ್ಕೊಳಗಾದಾಗಲೆಲ್ಲ ನನಗೆ ಅವರ ಅಂಕಣ ಬರಹಗಳು ಒಮ್ಮೊಮ್ಮೆ ಹೊಸದಾರಿಯನ್ನು ತೋರಿವೆ ಕೆಲವೊಮ್ಮೆ ಇನ್ನಷ್ಟು ಬೆಚ್ಚಿಬೀಳಿಸಿವೆ. ಅವರನ್ನು ಹಲವು ವರ್ಷಗಳಿಂದ ತಪ್ಪದೇ ಓದುತ್ತಾ ಬಂದಿರುವ ನಾನು ಬಹಳ ದಿನದಿಂದ ಈ ಎಲ್ಲಾ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸಬೇಕು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಹರಿ ಪಾಡ್ಕಾಸ್ಟಿನ ಐಡಿಯಾ ಮುಂದಿಟ್ಟರು. ಮೂರ್ನಾಲ್ಕು ತಿಂಗಳಿಂದ ಆಗ ಹೋಗೋಣ, ಈಗ ಹೋಗೋಣ ಎನ್ನುತ್ತಾ ಕೊನೆಗೂ ಜನವರಿಯ ಮೊದಲ ಭಾನುವಾರ ಮುಂಜಾನೆ ಅವರ ಹಳ್ಳಿಗೆ ಹೊರಟೇಬಿಟ್ಟೆವು. ಮಧ್ಯಾಹ್ನ ಅವರ ಮನೆ ತಲುಪಿದಾಗ ಸ್ವಾಗತಿಸಿದ್ದು ಹಕ್ಕಿಗಳ ಚಿಲಿಪಿಲಿ, ನಾಯಿಯ ಬೌಬೌ, ತಂಪಾದ ಗಾಳಿ. ನಾವು ಬೆಂಗಳೂರಿನ ಹೊರವಲಯದಲ್ಲೇ ಇದ್ದೇವೆಯೇ ಎಂದು ಆಶ್ಚರ್ಯಪಡುವಂತೆ ಇತ್ತು ಅಲ್ಲಿಯ ವಾತಾವರಣ. ಅವರ “ಮೈತ್ರಿ” ಫಾರಂನಲ್ಲಿ ಕುಳಿತು ನಾವು informal ಆಗಿ ಚರ್ಚಿಸಿದ್ದು ಇದೀಗ ನಿಮ್ಮ ಮುಂದಿದೆ.
~
ನಮ್ಮಲ್ಲಿ ಎಷ್ಟೋ ಜನ ಕಾಲೇಜಿನಲ್ಲಿ ವಿಜ್ಞಾನ ಓದಿಕೊಂಡು ಬಂದೋರು. ಹಾಗೆ ಓದಿದ ನಮಗೆ ದೂರದ ಪಶ್ಚಿಮ ಘಟ್ಟಗಳಲ್ಲಿ ಆಗ್ತಿರೋ ಬದಲಾವಣೆಗಳಿಂದ ಏನೆಲ್ಲಾ ಆದೀತು ಅನ್ನೋ ಕಲ್ಪನೆ ಕೂಡ ಇರ್ತಿರ್ಲಿಲ್ಲ. ಆದರೆ ಶಾಲೆಯಲ್ಲಿ ನಮಗೊಂದು ಪಾಠ ಇತ್ತು. `ಇರುವುದೊಂದೇ ಭೂಮಿ' ಅನ್ನೋ ಸಂಕಲನದಿಂದ ಆಯ್ದುಕೊಂಡಿದ್ದರು. ಪಶ್ಚಿಮ ಘಟ್ಟಗಳ ಪತನ ಅನ್ನೋ ಈ ಪುಟ್ಟ ಪ್ರಬಂಧ ಸರಳವಾಗಿ ನಮ್ಮೆಲ್ಲರಿಗೂ ಮನಸ್ಸಿಗೆ ಚೆನ್ನಾಗಿ ತಟ್ಟೋ ಹಾಗೆ ಪಶ್ಚಿಮ ಘಟ್ಟಗಳು ಕರ್ನಾಟಕ್ಕೆ ಎಷ್ಟು ಮುಖ್ಯ ಅನ್ನೋದನ್ನ ತಿಳಿಸಿತ್ತು. ನಮ್ಮೆಲ್ಲರ ಜೀವನದ ಬಗ್ಗೆ ಅದು ಬೀರಿರೋ ಪ್ರಭಾವದ ಬಗ್ಗೆ ತಿಳಿಸಿತ್ತು. ಈ ಬಾರಿ ಅಂಥ ಪ್ರಬಂಧಗಳ ಮೂಲಕ ಎಷ್ಟೋ ಮನಸ್ಸುಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಬಿತ್ತಿದನಾಗೇಶ್ ಹೆಗಡೆಯವರೊಂದಿಗೆ ಒಂದು ಇನ್ ಫಾರ್ಮಲ್ ಮಾತುಕತೆ. ಇದು ಸಂಪದ ಪಾಡ್ ಕಾಸ್ಟ್ ನ ಹತ್ತನೆಯ ಸಂಚಿಕೆ.
ನಾನು ಬರೆದದ್ದು ಹೇಗೆ ಆಕರ್ಷಕವಾಗುತ್ತೆ ಅನ್ನೋದು ನನಗೆ ಗೊತ್ತಗಲ್ಲ. ನಾನು ಬರೆಯುವ ಹಾಗೆ ಸಹಜವಾಗಿ ಬರೀತಾ ಇರ್ತೀನಿ. ಆದ್ರೆ ತುಂಬಾ ಬೋರ್ ಹೊಡೆಸೋರ ಬಗ್ಗೆ ನನಗೆ ಸಿಟ್ಟು ಬರುತ್ತೆ ಆಗಾಗ. ಯಾಕೆ ಇಷ್ಟೆಲ್ಲ ಸುತ್ತು ಬಳಸಿ ಬರೀತಾರಪ್ಪಾ? ಸ್ಪಷ್ಟವಾಗಿ ಯಾಕೆ ಬರೆಯೋಕೆ ಆಗಲ್ಲ ಇವರಿಗೆ ಅಂತ. ಅಥವಾ ಸಮಸ್ಯೆ ನನ್ನಲ್ಲೇ ಇರಬಹುದು. ತುಂಬಾ ಕ್ಲಿಷ್ಟ ಸೋಶಿಯಾಲಜಿಕಲ್ ಫಿಲಾಸಫಿಗಳನ್ನು ಹೇಳಿದಾಗ ನನಗೆ ಅರ್ಥವಾಗುವುದಿಲ್ಲ. ಕ್ವಾಂಟಂ ಫಿಸಿಕ್ಸಿನಲ್ಲೂ ಸಹ ತುಂಬಾ ಡೀಪಾಗಿ ಹೋದರೆ ನನಗೆ ಅರ್ಥವಾಗೋದಿಲ್ಲ. ಅಥವಾ ಅರ್ಥ ಆಗೋ ಹಾಗೆ ಅವರಿಗೆ ಬರೆಯೋಕೇ ಸಾಧ್ಯವಿಲ್ಲವೇನೋ ಅನ್ನಿಸುತ್ತೆ ಎಷ್ಟೋ ಸಲ. ನನಗೆ ಅರ್ಥವಾದದ್ದನ್ನು ಅಷ್ಟೇ ಸರಳವಾಗಿ ಬೇರೊಬ್ಬರಿಗೆ ಅರ್ಥ ಮಾಡಿಕೊಡಬೇಕೆಂಬುದು ನನ್ನ ಉದ್ದೇಶ. ಅದಕ್ಕೆ ಸಾಕಷ್ಟು ಸರಳವಾಗಿ ಬರೆಯುತ್ತೇನೆ ನಾನು. ಅಷ್ಟೇ! ಮಧ್ಯೆ ಮಧ್ಯೆ ತಮಾಶೆ ಇರಬೇಕಲ್ವಾ? ನಾವು ಚಿಕ್ಕಂದಿನಲ್ಲಿ ಓದುವಾಗ ಸ್ವಲ್ಪ ತಮಾಶೆ, ಸ್ವಲ್ಪ ಹಾಸ್ಯ ಇರಬೇಕು ಅಂತ, ಕೊಂಚ ಲೇವಡಿ ಇರ್ಬೇಕು - ಊಟದ ಜೊತೆ ನಂಚಿಕೊಳ್ಳುವುದಕ್ಕೆ ಉಪ್ಪಿನಕಾಯಿ ಇದ್ದಹಾಗೆ ಇವು ಇದ್ದರೆ ಸ್ವಾರಸ್ಯ ಅನ್ನಿಸುತ್ತಿತ್ತಲ್ಲವಾ? ತೀರಾ ಗಂಜಿ ಥರ ಊಟ ಮಾಡಿದ್ರೆ ಯಾರಿಗೆ ಇಷ್ಟವಾಗುತ್ತೆ? ಅಲ್ವಾ?
ಇನ್ನೊಂದು ಪ್ರಶ್ನೆ ನಾನು ಇದೇ ಸಮಯದಲ್ಲಿ ಕೇಳಬೇಕಾಗಿದ್ದು: ವಿಜ್ಞಾನ ಅಂತಂದ್ರೆ ಹೀಗೇ, ಇಷ್ಟೇ ಎಂದು ಗೆರೆ ಎಳೆದುಕೊಂಡು ಬರೆಯದೆ ಬೇರೆ ಬೇರೆ ಆಯಾಮಗಳನ್ನು ಸ್ಪರ್ಶಿಸುವುದರಿಂದ ನಿಮ್ಮನ್ನು ಸಮಾಜ ವಿಜ್ಞಾನಿ ಎಂದು ಕರೆಯುವುದು ಹೆಚ್ಚು ಸೂಕ್ತ ಎಂದು ನನಗನ್ನಿಸುತ್ತದೆ ಇದರ ಬಗ್ಗೆ ಏನಂತೀರಿ?
ಈಗ ಫ್ಯಾಬ್ರಿಕ್ ತಯಾರು ಮಾಡೋದು ಹ್ಯಾಗೆ ಅಂತಂದ್ರೆ, ಉದಾಹರಣೆಗೆ ನೀವು ಹರಿಹರದ ಪಾಲಿ ಫೈಬರ್ಸ್ ಫ್ಯಾಕ್ಟರಿಯಲ್ಲಿ ಫೈಬರ್ ಹೇಗೆ ತಯಾರಾಗುತ್ತೆ? ಯುಕಲಿಪ್ಟಸ್ ನಿಂದ ಹ್ಯಾಗೆ ತಯಾರು ಮಾಡ್ತಾರೆ ಅಂತ ಹೇಳುವುದು - ಅದು ವಿಜ್ಞಾನ. ಒಕೆ? ಮೊದಲು ಹತ್ತಿಯಿಂದ ಮಾತ್ರ ಬಟ್ಟೆ ತಯಾರು ಮಾಡ್ತಾ ಇದ್ರು. ಈಗ ಹತ್ತಿಯಿಂದ ತಯಾರಾದ ಬಟ್ಟೆ ಸಾಕಾಗದು ಅಂತ ನೈಲಾನ್ ಬಟ್ಟೆ ತಯಾರಾದವು, ನೈಲಾನ್ ಎಲ್ಲಿಂದ ಬರುತ್ತೆ ಅಂತ ಹೇಳುವಾಗ ನಾವು ಪೆಟ್ರೋಲಿಯಂ ಡ್ರಿಲ್ಲಿಂಗ್ ಮಾಡ್ಬೇಕು - ಅದು ವಿಜ್ಞಾನ. ಆದ್ರೆ ಜನಕ್ಕೆ ಹೇಳಬೇಕಲ್ಲ? ನೈಲಾನ್ ಬಹುಶಃ ನಿಮ್ಮನೆ ಅಂಗಳದಿಂದಲೇ ಬರಬಹುದು ಇನ್ನು ಮೇಲೆ. ನಿಮ್ಮ ಅಂಗಳದಲ್ಲಿ ಮುಂಚೆಯೆಲ್ಲ ರಾಗಿ ಬೆಳೀತಿದ್ರಿ, ರಾಗಿ ಬದಲಿಗೆ ಈಗ ನೀವು ಯುಕಲಿಪ್ಟಸ್ ಬೆಳೆಯೋಕೆ ಹೋದ್ರಿ ಅಥವಾ ಅಕೇಶಿಯ ಬೆಳೆಯೋಕೆ ಶುರು ಮಾಡಿದ್ರಿ. ಆ ಯುಕಲಿಪ್ಟಸ್ ಎಲ್ಲಿಗೆ ಹೋಗುತ್ತೆ? ನಿಮಗೆ ಗೊತ್ತಿರೋದು ಅಷ್ಟೇನೇ, ನೀಲಗಿರಿ ನಾವು ಬೆಳೀತೀವಿ, ಯಾರೋ ಗುತ್ತಿಗೆದಾರರು ತಗಂಡು ಹೋಗ್ಬಿಡ್ತಾರೆ ಅಂತ. ನಾನು ಅಲ್ಲಿಂದ ವಿಜ್ಞಾನ ತಗೊಂಡು ಹೋಗ್ತೀನಿ. ಆ ನೀಲಗಿರಿ ಪಾಲಿಫೈಬರ್ ಫ್ಯಾಕ್ಟರಿಯಲ್ಲಿ ಏನಾಗುತ್ತೆ? ಅದಕ್ಕೆ ಏನೇನು ಕೆಮಿಕಲ್ಸ್ ಸೇರ್ಪಡೆಯಾಗುತ್ತೆ? ಕೊನೆಗೆ ಪುನಃ ಇವನತ್ತ ಬರ್ತೀನಿ ನಾನು. ಮೊದ್ಲೆಲ್ಲ ಇವ್ನು ರಾಗಿ ಹೊಲ ಇಟ್ಕೊಂಡು ಅದರಲ್ಲೊಂದು ಬೆರ್ಚಪ್ಪನ್ನ ಇಟ್ಟುಕೊಂಡು ಅದಕ್ಕೆ ಶರ್ಟೆಲ್ಲ ಹಾಕಿ. ರಾಗಿ ಹೊಲವನ್ನು ಕಾಯುವ ಬೆರ್ಚಪ್ಪನಿಗೆ ಹರಕು ಬಟ್ಟೆ ಅಂತ; ಇವನೂ ಹರಕು ಬಟ್ಟೆಯಲ್ಲೇ ಇರ್ತಿದ್ದ. ಈಗ ಅವನು ಬೆಳ್ಳಗೆ, ಎತ್ತರಕ್ಕೆ ಶುಭ್ರವಾಗಿ ಕಾಣುವಂತ ಯುಕಲಿಪ್ಟಸ್ ಮರ ಬೆಳೆದು, ಅದರಿಂದ ದುಡ್ಡಿನ ಬೆಳೆ ತಗಂಡು ಇವ್ನು ಪೇಟೆಗೆ ಹೋಗಿ ಬೆಳ್ಳಗೆ ಶುಭ್ರವಾಗಿರುವಂಥ ಬಟ್ಟೆಯನ್ನ ತೊಟ್ಟುಕೊಂಡು ಬರ್ತಾನೆ. ಅಲ್ಲೀವರೆಗೆ ತಗೊಂಡು ಹೋಗ್ತೀನಿ. ಈ ಮಧ್ಯೆ ಟೆಕ್ನಾಲಜಿ ಹೇಗೆ ಕೆಲಸ ಮಾಡುತ್ತೆ, ಆಮೇಲೆ ಅದರಿಂದ ಯಾರ್ಯಾರ ಬಟ್ಟೆ ಕೊಳೆಯಾಗುತ್ತೆ ಅದನ್ನೂ ನಾನು ಹೇಳ್ತೀನಿ.
ಸೋ ನಾನು ಇದನ್ನು ಒಂದು ಸಿಂಬಲ್ (ಸಂಕೇತ) ಆಗಿ ತೆಗೆದುಕೊಳ್ತೀನಿ. ಬಟ್ಟೆಯನ್ನೇ ಒಂದು ಸಿಂಬಲ್ ಆಗಿ ತೆಗೆದುಕೊಂಡು ಇಡೀ ಟೆಕ್ನಾಲಜಿಯನ್ನು ಹೇಳುವುದು- ಇದು ನನ್ನ ಬರವಣಿಗೆಯ ವಿಧಾನ. ಕೆಲವರಿಗೆ ಇದು ಇಷ್ಟವಾಗೋದಿಲ್ಲ. ವಿಜ್ಞಾನಿಗಳಿಗೆ, ವಿಜ್ಞಾನ ಓದುವಂಥವರಿಗೆ ಇದರಿಂದ ಏನೂ ಪ್ರಯೋಜನವಾಗೋದಿಲ್ಲ ಅನ್ನುತ್ತಾರೆ. ಒಪ್ತೀನಿ, ನನ್ನ ಲೇಖನಗಳನ್ನ ಓದಿ ಯಾರೂ ಲ್ಯಾಬರೇಟರಿಯಲ್ಲಿ ಪ್ರಯೋಗಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಅದು ನನ್ನ ಉದ್ದೇಶವೂ ಅಲ್ಲ. ಯಾಕೆ ಅಂದರೆ ಆ ಸೈನ್ಸ್ ಕಲಿಸುವುದಕ್ಕೆ ಸೈನ್ಸ್ ಟೀಚರ್ ಗಳಿರುತ್ತಾರೆ. ಟೆಕ್ನಾಲಜಿಸ್ಟ್ ಗಳಿರುತ್ತಾರೆ, ಸಂಶೋಧಕರಿರುತ್ತಾರೆ- ಇದು ಅವರ ಕೆಲಸ. ಯಾರಿಗೆ ಬಿ.ಎಸ್ಸಿ, ಎಂ.ಎಸ್ಸಿಯಲ್ಲಿ ವಿಜ್ಞಾನವನ್ನು ಓದಲಿಕ್ಕೆ ಆಗಲಿಲ್ಲವೋ ಅವರಿಗೆ ಆ ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಎಂದು ಹೇಳುವುದು ನನ್ನ ಕೆಲಸ. ಪೂರ್ತಿ ವಿಜ್ಞಾನದ ವಿಷಯವನ್ನು ಹೇಳುವುದಕ್ಕೆ ಹೊರಟರೆ ಅದು ಯಾಂತ್ರಿಕವಾಗುತ್ತದೆ, ನೀರಸವಾಗುತ್ತದೆ. ಸ್ವಲ್ಪ ರಸವತ್ತಾಗಿ ಮಾಡೋದು ನನ್ನ ಕೆಲಸ. ಅದಕ್ಕೆ ನಾನು ಹೇಳಿದ್ದು ನಾನು ಅಧಿಕಪ್ರಸಂಗಿ ಪೋಸ್ಟ್ ಮ್ಯಾನ್ ಅಂತ.
ಇದಕ್ಕೆ ಅಂಟಿಕೊಂಡ ಇನ್ನೊಂದು ಪ್ರಶ್ನೆ: ಕೈಗಾರಿಕ ಕ್ರಾಂತಿಯ ಕಾಲದಿಂದಲೂ ಟೆಕ್ನಾಲಜಿ ಯಾವಾಗಲೂ ಒಂದು ಹೆಜ್ಜೆ ಮುಂದೆ, ವಿಜ್ಞಾನ ಒಂದು ಹೆಜ್ಜೆ ಹಿಂದೆ ಎನ್ನುವಂತಿದೆ. ಇವತ್ತಂತೂ ವಿಜ್ಞಾನ ಎಲ್ಲಿದೆ ಅಂತ ಹುಡುಕಬೇಕಿದೆ. ಟೆಕ್ನಾಲಜಿಯೇ ಸದಾಕಾಲ ಮುಂಚೂಣಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಯೋಚಿಸುವಾಗ ವಿಜ್ಞಾನದ ನೆಲೆ ಏನು ಎನ್ನುವ ಬಗ್ಗೆ ನಿಮಗೇನನ್ನಿಸುತ್ತದೆ?
ಬಹಳಷ್ಟು ಜನರಿಗೆ ಬದುಕಿಗೆ ಯಾವುದು ಬೇಕೋ, ಬದುಕನ್ನು ಸುಗಮಗೊಳಿಸುವುದಕ್ಕೆ, ಐಶಾರಾಮ ಹೆಚ್ಚಿಸುವುದಕ್ಕೆ ಏನೇನು ಬೇಕು ಅದರಲ್ಲಿ ಆಸಕ್ತಿ ಇದ್ದೇ ಇರುತ್ತೆ. ಹ್ಹ, ಆದರೆ ಎಲ್ಲರೂ ಅದನ್ನೇ ಮಾಡ್ತ ಹೋದ್ರೆ ವಿಜ್ಞಾನವನ್ನ ಮುಂದೆ ಕೊಂಡೊಯ್ಯುವವರು ಯಾರು? ಈ ವಿಜ್ಞಾನ ಮುಂದೆ ಎಲ್ಲಿ ಹೋಗುತ್ರೀ? ಇನ್ನೆಷ್ಟು ಮುಂದೆ ಹೋಗಬೇಕು? ಎಂದು ಕೆಲವರು ಕೇಳ್ತಾರೆ. ನೂರು ವರ್ಷಗಳ ಹಿಂದೆಯೇ ಜನರು ಕೇಳುತ್ತಿದ್ದರು. ವಿಜ್ಞಾನಕ್ಕೆ ಜಗತ್ತಿನಲ್ಲಿ ತಿಳಿಯಬೇಕಿರುವುದೆಲ್ಲಾ ಆಗಲೇ ತಿಳಿದುಹೋಗಿದೆ ಅಂತೆಲ್ಲಾ ಘೋಷಿಸಿದವರು ಇದ್ದಾರೆ. ಆದರೆ, frontiers are always there.
ನಮಗಂತೂ ಪ್ರತಿದಿನ ವಿಜ್ಞಾನ ಈ ದಿಕ್ಕಿನಲ್ಲಿ ಹೋಗಬೇಕು, ಆ ದಿಕ್ಕಿನಲ್ಲಿ ಹೋಗಬೇಕು, ನಾವು ಎದುರು ಹಾಕಿಕೊಂಡ ಕಷ್ಟಗಳನ್ನ ಪರಿಹಾರ ಮಾಡುವುದಕ್ಕೆ ಮತ್ತೆ ವಿಜ್ಞಾನವೇ ಬೇಕು ಎನ್ನುವ ಸ್ಥಿತಿಗೆ ಬಂದಿರುವಾಗ ಮೂಲ ವಿಜ್ಞಾನವೇ ಬೇಕು . ಆದರೆ ಅದರಲ್ಲಿ ಹಣ ಇಲ್ಲ. ಎಲ್ಲರಿಗೂ ಇಂಜಿನಿಯರ್ ಆಗಬೇಕು, ಸಾಫ್ಟ್ ವೇರ್ ಇಂಜಿನಿಯರ್ ಆಗ್ಬೇಕು, ನೇವಲ್ ಆರ್ಕಿಟೆಕ್ಟ್ ಆಗಬೇಕು ಅಥವಾ ಇನ್ ಫಾರ್ಮೇಶನ್ ಎಕ್ಸಪರ್ಟ್ ಆಗಬೇಕು ಅಂತಿರುತ್ತೆ. ಇವೆಲ್ಲಕ್ಕೂ ಬೇಕಾಗಿರುವಂತಹ ಮೂಲ ಜ್ಞಾನವನ್ನು ಸೃಷ್ಟಿ ಮಾಡುವ ಕ್ರಿಯೆ ಕಡಿಮೆಯಾಗ್ತಿದೆ. ಹೌದು, ನಾವದನ್ನೆಲ್ಲ ಹೇಳ್ಬೇಕಾಗುತ್ತೆ ಮತ್ತೆ ಮತ್ತೆ. ಸಾಧ್ಯವಾದಷ್ಟೂ ಇನ್ನು ಮೂಲ ವಿಜ್ಞಾನಕ್ಕೆ ಆದ್ಯತೆ ಕೊಡಬೇಕು ಅಂತ ಸಿ.ಎನ್.ಆರ್ ರಾವ್ ರಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರೂ ಹೇಳುತ್ತಿದ್ದಾರಲ್ಲ ಅದನ್ನೇ ನಾವೂ ಹಾಡಲೇಬೇಕಾಗುತ್ತೆ. ಸಹಜಾನೆ ಅದು.
ಈಗ ನಮ್ಮ ಕನ್ನಡದ ಸಂದರ್ಭದಲ್ಲಿ ನೋಡಿದರೆ ಪ್ರಾಥಮಿಕ ಭಾಷೆ , ಇಂಗ್ಲೀಷ್, ಶಿಕ್ಷಣ, ಶಾಸ್ತ್ರೀಯ ಭಾಷೆ ಹೀಗೆ ಏನೆಲ್ಲಾ ಗಲಾಟೆ ನಡೆಯುತ್ತಿರುವಾಗ ಇವನ್ನೆಲ್ಲ ನೋಡಿ ಭಾಷೆಯ ಬಗ್ಗೆ ನೀವೇನು ಹೇಳುತ್ತೀರಿ?
ಭಾಷೆ ಅಂದರೆ ಕೇವಲ ಜ್ಞಾನದ ವಾಹಿನಿ ಒಂದೇ ಅಲ್ಲ. ಅದರಲ್ಲಿ. ಮನರಂಜನೆ ಇರಬೇಕು. ಸೃಜನಶೀಲತೆ ಇರಬೇಕು ಅಂತ ಬಯಸ್ತಾರೆ. ಬೇಂದ್ರೆಯವರು "ಇದು ಬೆಳಗಲ್ಲೋ ಅಣ್ಣ" ಎಂದು ಹಾಡಿದರೆಂದರೆ- ನಮಗೂ ಆ ಬೆಳಗು ಕಂಡಿರುತ್ತೆ ಆದರೆ ಶಬ್ಧಗಳಲ್ಲಿ ಅದನ್ನು ಹಿಡಿದಿಡುವಂಥ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಯಾರೊ ಒಬ್ಬನೆ ಹಿಡಿದಿಟ್ಟಿದ್ದಾನೆ. "ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು..". ಬಹಳ ಮಂದಿ ನಮಗೆ ಆತ್ಮೀಯರಾಗುವುದು ಯಾಕೆಂದರೆ ನಮಗನ್ನಿಸುವುದನ್ನು ಆತ ಬರೆದಿದ್ದಾನಲ್ಲ ಎನ್ನುವ ಕಾರಣಕ್ಕೆ. ಆದರೆ ಎಲ್ಲರೂ ದ.ರಾ.ಬೇಂದ್ರೆ ಆಗುವುದಕ್ಕೆ ಸಾಧ್ಯವಿಲ್ಲ. ಎಲ್ಲರೂ ಮಹಾನ್ ಕವಿ ಆಗಲಿಕ್ಕೆ ಸಾಧ್ಯವಿಲ್ಲ. ಕೆಲವರಿಗೆ ಮಾತ್ರ ಅದು ಸಾಧ್ಯವಾಗುತ್ತೆ. ಸೋ ಕವಿತೆಗೆ ಅದಕ್ಕೆ ಬೇಕಾದ ಸ್ಥಾನ ಇದ್ದೇ ಇದೆ. ಕಾದಂಬರಿಗೆ ಅದಕ್ಕೆ ಬೇಕಾದ ಸ್ಥಾನ ಇದ್ದೇ ಇದೆ. ಆದರೆ ಕವಿತೆ, ಕಾದಂಬರಿಗಳಷ್ಟನ್ನೇ ನೆಚ್ಚಿಕೊಂಡರೆ ನಮ್ಮ ಜ್ಞಾನ ಅಲ್ಲಿಗೇ ಲಿಮಿಟ್ ಆಗಿಬಿಡುತ್ತೆ. ಎಷ್ಟು ದಿವಸ ಅಂತ ನೀವು ಕಾಲ್ಪನಿಕ ಜಗತ್ತಿನಲ್ಲಿ ಇರುತ್ತೀರಿ? ವಾಸ್ತವ ಜಗತ್ತು ಬೇಕೇ ಬೇಕಲ್ಲ? ವಾಸ್ತವ ಜಗತ್ತಿನಲ್ಲಿ ಏನೇನು ಹೇಗ್ ಹೇಗೆ ವಹಿವಾಟುಗಳು ನಡೆಯುತ್ತೆ ಅನ್ನೋದನ್ನ ಹೇಳಲಿಕ್ಕ ಭಾಷೆ ಬೇಕೇ ಬೇಕು.
ಹಾಗೆ ನೋಡಿದರೆ ಇವತ್ತು ವಿಜ್ಞಾನದ ಕುರಿತು ಕನ್ನಡದಲ್ಲಿ ಕೆಲ ಮಟ್ಟಿಗಾದರೂ ಮಾಹಿತಿ ಇದೆ. ಆದರೆ ಈ ಶೇರು ಮಾರುಕಟ್ಟೆ ಬಗ್ಗೆ ಎಲ್ಲಿದೆ? ವಾಣಿಜ್ಯದ ಬಗ್ಗೆ ಇವತ್ತು ಮಾಹಿತಿಯೇ ಇಲ್ಲ ನಮ್ಮಲ್ಲಿ. ಡಿಜಿಟಲ್ ಲೋಕದಲ್ಲಿ ಇಷ್ಟೆಲ್ಲ ಬದಲಾವಣೆಗಳಾಗುತ್ತಿವೆ , ಮಾಹಿತಿ ಬರ್ತಾ ಇಲ್ಲ. ನಮ್ಮ ಕಂಪ್ಯೂಟರ್ ಹುಡುಗರೆಲ್ಲ - ಕೆಲವರನ್ನು ಬಿಟ್ಟರೆ- ಏನಾಗ್ತಿದೆ ಈ ಜಗತ್ತಿನಲ್ಲಿ, ಡಿಜಿಟಲ್ ಡಿವೈಡ್ ಆಗ್ತಿದೆಯಲ್ಲ ಅಂತ ಚಿಂತೆ ಮಾಡುತ್ತಾರೆಯೇ ಹೊರತು ಆ ಡಿವೈಡನ್ನು ಹೇಗೆ ಮುಚ್ಚೋದು ಅನ್ನೋ ಬಗ್ಗೆ ಯಾರೂ ಹೆಚ್ಚು ಮಾತಾಡುತ್ತಿಲ್ಲ. ಡಯಾಸ್ಪೋರ ಅಂತ ಹೇಳ್ತೀವಿ. ಇಡೀ ಜಗತ್ತಿನಲ್ಲೆಲ್ಲಾ ಕನ್ನಡಿಗರಿದ್ದಾರೆ. ಎಲ್ಲೆಲ್ಲೋ ಇರುವ ಕನ್ನಡಿಗರಿಗೆ ಕನ್ನಡದ ಅಕ್ಷರಗಳನ್ನು ನೋಡಿದರೆ ಸಾಕು ಹೃದಯ ಪ್ರಫುಲ್ಲಿತವಾಗುತ್ತೆ. ಸಂಜೆವಾಣಿಯಂಥ ಪತ್ರಿಕೆ ಕೂಡ ಅವರಿಗೆ ಬಹಳ ಸುಂದರವಾಗಿ ಕಾಣುತ್ತಿರುತ್ತೆ. ಅದೆಲ್ಲ ಸರಿ, ಆದರೆ ಇನ್ನಷ್ಟು ಮಂದಿ ಕನ್ನಡದಲ್ಲಿ ಅಷ್ಟೇ ಸುಲಭವಾಗಿ ಲ್ಯಾಪ್ ಟಾಪ್ ಮೂಲಕವೋ, ನಿಮ್ಮ ಪಾಮ್ ಟಾಪ್ ಮೂಲಕವೋ ಕನ್ನಡವನ್ನ ಅಷ್ಟೇ ಯಶಸ್ವಿಯಾಗಿ ಸಂವಹನಕ್ಕೆ ಬಳಸುವುದಕ್ಕೆ ಸಾಧ್ಯವಿದೆ ಅಂತ ಹೇಳುವುದನ್ನ ಯಾರು ಮಾಡಬೇಕು? ಈ ಕೆಲಸ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಇದರಲ್ಲಿ ಕೆಲಸ ಮಾಡುವವರು ಹೆಚ್ಚು ಜನರಿದ್ದಾರೆ. ಇವತ್ತು ಹೆಚ್ ಪಿನಲಿದ್ದಾರೆ, ಇನ್ಫೋಸಿಸ್ ನಲ್ಲಿದ್ದಾರೆ - ಎಲ್ಲಾ ಕಡೆನೂ ಕನ್ನಡದವರಿದ್ದಾರೆ. ಬೆಂಗಳೂರಿಂದ ಹಿಡಿಸು ಕ್ಯಾಲಿಫೋರ್ನಿಯಾವರೆಗೂ ಕನ್ನಡದವರು ಇದ್ದಾರೆ. ಆದರೆ ಕನ್ನಡವನ್ನು ಎಷ್ಟು ಸುಲಭವಾಗಿ ನಾವು ಟ್ರಾನ್ಸ್ ಫರ್ ಮಾಡಲಿಕ್ಕೆ ಸಾಧ್ಯವಿದೆ. ಪ್ರತಿಯೊಬ್ಬರಿಗೂ, ಒಬ್ಬ ಹಳ್ಳಿಯವನ ಕೈಗೂ, ಕ್ಷೌರಿಕನ ಕೈಗೂ, ಕೆಲಸ ಮಾಡುವಂಥ ರೈತರ ಕೈಗೂ ಅಂಗೈ ಗಣಕವನ್ನ ಕೊಡಲಿಕ್ಕೆ ಸಾಧ್ಯವಿದೆ ಅಂತ ಹೇಳುವವರು, ಮಾಡಿ ತೋರಿಸುವವರ ಸಂಖ್ಯೆ ಕಡಿಮೆಯಿದೆ. ಸೋ ಅಲ್ಲಿಗೆ ಕನ್ನಡ ಉಪಯುಕ್ತ ಕನ್ನಡ ಅಂತ ಬೇರೆ ಆಗಬೇಕು. ವಿಜ್ಞಾನದ ಕನ್ನಡ ಬೇರೆ, ಸಾಹಿತ್ಯದ ಕನ್ನಡ ಬೇರೆ, ಉಪಯುಕ್ತ ಕನ್ನಡ ಅಂತ ಒಂದು ಆದ್ರೆ ಅಲ್ಲಿ ನಾವು ಭಾಷೆಯ ಸಂಪೂರ್ಣ ಸಾಧ್ಯತೆಯನ್ನ ನಾವು ಸ್ವೀಕಾರ ಮಾಡಿದ ಹಾಗಾಗುತ್ತೆ.
ಮಾಧ್ಯಮ ಇವತ್ತು ಬಹಳ ವಿಚಿತ್ರ ಸ್ವರೂಪದಲ್ಲಿದೆ. ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಅದು ಹಾಗಾಗಿ ಹೋಗಿದೆ. ಇರಾನಿನ ಚಿತ್ರ ನಿರ್ಮಾಣಕಾರ ಅಬ್ಬಾಸ್ ಕಿರೊಸ್ತಾಮಿ ಅನ್ನುವವನು ತನ್ನ ಒಂದು ಡಾಕ್ಯುಮೆಂಟರಿಯಲ್ಲಿ ಹೇಳ್ತಾನೆ, I don't fear American military, but I fear American media. ಅದು ನಮ್ಮ ಸಂದರ್ಭದಲ್ಲೂ ನಿಜ ಆಗಿದೆ ಅಂತ ಅನ್ನಿಸುತ್ತೆ. ಆ ಒಂದು ಸ್ವರೂಪವನ್ನ ಮಾಧ್ಯಮಗಳು ಪಡೆದುಕೊಂಡಿವೆ. ಬಹುಶಃ ಹಿಂದೆ ಇದ್ದಿರಬಹುದಾದ ಓದುಗ ಹಾಗೂ ಮಾಧ್ಯಮದ ನಡುವಿನ ಸಾವಯವ ಸಂಬಂಧ ಇವತ್ತು ಕಳ್ಕೊಂಡಿದೇವೆ ಅಂತ ಅನ್ನಿಸುತ್ತೆ ಟಿವಿಗಳನ್ನ ನೋಡುವಾಗ, ಪೇಪರುಗಳನ್ನ ಓದುವಾಗ. ನೀವೊಬ್ಬ ಪತ್ರಕರ್ತರು ಆಗಿದ್ದರಿಂದ, ಪತ್ರಿಕೆಗಳನ್ನ ರೂಪಿಸಿ, ಅಂಕಣಗಳನ್ನು ಬರೆದವರಾದ್ದರಿಂದ ನೀವು ಈ ಮಾಧ್ಯಮಗಳ ಇವತ್ತಿನ ಈ ಸ್ವರೂಪವನ್ನ ಯಾವ ರೀತಿ ನೋಡ್ತೀರಿ?
ಮೊದಲಲ್ಲೆಲ್ಲ ಪತ್ರಿಕೋದ್ಯಮದಲ್ಲಿ ಶಿಸ್ತು ಇತ್ತು. ಒಂದು ರಿಪೋರ್ಟ್ ಅಂದರೆ ಹೀಗಿರಬೇಕು, ಸ್ಟೋರಿ ಅಂದರೆ ಹೀಗಿರಬೇಕು, ಕ್ರೈಮ್ ರಿಪೋರ್ಟ್ ಹೀಗಿರಬೇಕು, ಪೊಲಿಟಿಕಲ್ ರಿಪೋರ್ಟ್ ಹೀಗಿರಬೇಕು. ಅದರ ಜೊತೆಗೆ ಫೀಚರ್ ಬರಹ - ನುಡಿಚಿತ್ರ ಬರೆಯುವವರು ಹೀಗೆ ಬರೆಯಬೇಕು ಅಂತ ಇತ್ತು. ಈಗ ಎಲ್ಲಾ ಕಲಸುಮೇಲೋಗರ ಆಗಿಬಿಟ್ಟಿದೆ. ಸೀರಿಯಸ್ ರಿಪೋರ್ಟಿನಲ್ಲೂ ಕೂಡ ರೋಚಕತೆ ಸೇರಿಬಿಡುತ್ತೆ. 'ನಾನೇ ನೋಡ್ಕೊಂಡು ಬಂದೆ, ಅಲ್ಲಿ ಅಷ್ಟು ಅದ್ಭುತವಾಗಿತ್ತು, ಕ್ರೂರವಾಗಿತ್ತು' ಎಂದೆಲ್ಲ ಹೇಳುವುದಕ್ಕೆ ಹೋಗುತ್ತಾರೆ. ಆಗ ಗಾಂಭೀರ್ಯ ಮಾಯವಾಗುತ್ತೆ. ಎಷ್ಟೋ ಸಲ ನಾವೂ ಹೇಳ್ತಿದ್ವಿ (ಕೆಲವು) ಫೀಚರ್ ಬರಹಗಳು ಕೂಡ ರಿಜಿಡ್ ಆಗಿವೆ. ಬಹಳ ನೀರಸವಾಗಿ ಬರೆಯುವುದಕ್ಕೆ ಹೋಗಬೇಡಿ. ಉದಾಹರಣೆಗೆ ಯಾವುದೋ ಊರಿನಲ್ಲಿ ನೀರಿಗೆ ಅಂತ ಡ್ರಿಲ್ ಮಾಡಿದರೆ ಪೆಟ್ರೋಲ್ ಸಿಕ್ಕಿತು ಅಂತ. ಅದಕ್ಕೆ ರೋಚಕತೆಯನ್ನು ಸೇರಿಸಿ, ಅಷ್ಟು ನೀರಸವಾಗಿ ಬರೆಯಬೇಡಿ ಅಂತ ನಾನೇ ಎಷ್ಟೋ ಕಡೆ ಲೆಕ್ಚರಿಗೆ ಹೋದಾಗೆಲ್ಲ ಹೇಳ್ತಿದ್ದೆ. 'ನೋಡ್ರಪ್ಪ ಸಾಹಿತ್ಯದಲ್ಲಿ ಬೇರೆ ಬೇರೆ ವಿಂಗಡಣೆ ಮಾಡಿದ್ದಾರೆ. ಕಾಸಿ ಬಡಿದರೆ ಕಾದಂಬರಿ, ಕರಗಿಸಿ ಸೋಸಿದರೆ ಕಾವ್ಯ, ಕತ್ತರಿಸಿ ಜೋಡಿಸಿದರೆ ಕತೆ, ಕೊಳೆಯಿಸಿ ಭಟ್ಟಿ ಇಳಿಸಿದರೆ ವಿಮರ್ಶೆ ಅಂತೆಲ್ಲ ಹೇಳ್ತಾ ಇದ್ದೆ.
ನಾನು ಹೇಳ್ತಿದ್ದೆ, ನೀವು ನುಡಿಚಿತ್ರ ಬರೆಯುವಾಗ ಎಲ್ಲವನ್ನೂ ಸೇರಿಸಿ. ಅದರಲ್ಲಿ ಕಾದಂಬರಿಯ ಗುಣಮಟ್ಟವೂ ಇರಬೇಕು, ಕತೆಯ ವಾಚಾಳಿತನವೂ ಇರಬೇಕು, ಕಾವ್ಯಮಯ ವಾಕ್ಯಗಳೂ ಅಲ್ಲಲ್ಲಿ ಇರಬೇಕು. ಆಮೇಲೆ, ಇಡೀ ವಿಷಯವನ್ನ ವಿಮರ್ಶೆ ಮಾಡಿ ಯಾವುದನ್ನ ಎಷ್ಟು ಕೊಡಬೇಕು ಅನ್ನೋದನ್ನ ಕೊಳೆಯಿಸಿ ಭಟ್ಟಿ ಇಳಿಸಿ, ಒಮ್ಮೆ ಬರೆದು ಅದನ್ನು ಹಾಗೇ ಇರಿಸಿ, ಒಂದು ವಾರ ಕಳೆದು ಮತ್ತೆ ಓದಿ ನೋಡಿ ಅದು ತೂಕಬದ್ಧವಾಗಿದೆಯೋ ಯಾರಿಗೂ ನಾನು ಅನ್ಯಾಯ ಮಾಡುತ್ತಿಲ್ಲ ತಾನೆ, ಬಯಾಸ್ಡ್ ಆಗಿಲ್ಲ ಅನ್ನೋದನ್ನ ಸ್ಪಷ್ಟ ಮಾಡಿಕೊಂಡ ನಂತರ ಲೇಖನವನ್ನ ಕಳಿಸಿ ಅಂತ ನಾನು ಹೇಳ್ತಿದ್ದೆ. ಈಗ ಅದೂ ಹೊರಟು ಹೋಗಿದೆ. ಬೆಳಿಗ್ಗೆ ಏನೋ ಒಂದು ಸಬ್ಜೆಕ್ಟ್ ನೋಡಿರ್ತಾರೆ ಮಧ್ಯಾನದೊಳಗೆ ಅದು ರಿಪೋರ್ಟ್ ಆಗಿ ನಿಮ್ಮ ಮನೆಯೊಳಗೆ ಬಂದು ಬಿಡಬೇಕು. ಅದರ ವಿಶ್ಯುಯಲ್ಸ್ ಬಂದು ಬಿಡಬೇಕು. ಆ ತ್ವರಿತ ಮತ್ತು ತುರ್ತು ಇದೆಯಲ್ಲ, ವೇಗವಾಗಿ ಮಾಹಿತಿ ಕೊಡಬೇಕು ಅನ್ನುವ ಈ ಹಂತದಲ್ಲಿ ವಿವೇಕ ಅನ್ನೋದು ಕಡಿಮೆಯಾಗಿಬಿಡುತ್ತದೆ.
ಈ ಹಿಂದೆಲ್ಲ ಮಹರ್ಷಿಗಳು ಹಿಮಾಲಯಕ್ಕೆ ಹೋಗಿ ಅಲ್ಲಿ ಕುಳಿತುಕೊಂಡು ಜ್ಞಾನ ಸಂಪಾದನೆ ಮಾಡ್ತೀವಿ ಅಂತಿದ್ರಲ್ಲ, ಆ ನಿಧಾನ ಗತಿಯಲ್ಲಿ ಜ್ಞಾನ ಒಳಗೆ ಹೋದಾಗ ಗ್ರಹಿಸಲ್ಪಡುತ್ತೆ. ಈಗ ಎಲ್ಲರಿಗೂ ತ್ವರಿತವಾಗಿ ಹೋಗಬೇಕು, ಚಕಚಕನೇ ಕೊಡುತ್ತಾ ಹೋಗ್ಬೇಕು... ಬ್ರೇಕಿಂಗ್ ನ್ಯೂಸ್! ಈ ನ್ಯೂಸ್ ಹಿಡಿದುಕೊಳ್ಳಬೇಕಾದರೆ ಎಲ್ಲೆಲ್ಲಿ ಏನೇನು ಬ್ರೇಕ್ ಮಾಡ್ತಾ ಹೋಗ್ತಾರೋ, ವಾಪಸ್ಸು ನಮಗೆ ತಂದು ಕೊಡುವಾಗ ಎಲ್ಲೆಲ್ಲಿ ಸತ್ಯ ಬ್ರೇಕ್ ಆಗುತತ್ತೋ, ಎಲ್ಲೆಲ್ಲಿ ನ್ಯಾಯ ಬ್ರೇಕ್ ಆಗುತ್ತೋ - ಎಲ್ಲಾ ಬ್ರೇಕ್ ಆಗಿ ಕಡೆಗೆ ನಿಮಗೆ ಬ್ರೇಕಿಂಗ್ ನ್ಯೂಸ್ ಅಂತ ಬಂದು ಬಿಡುತ್ತೆ. ಹಾಗಾಗಿ ಈ ತ್ವರಿತ ಯುಗದಲ್ಲಿ ಬರವಣಿಗೆ, ವಿಷಯಕ್ಕೆ ನ್ಯಾಯ ಒದಗಿಸೋದು ಕಷ್ಟ ಆಗುತ್ತೆ.
ನೀವು ಯಾವುದನ್ನು ಅತ್ಯಂತ ಸುಲಭವಾಗಿ ಬರೆಯುತ್ತೀರೋ ಅಷ್ಟೇ ಸತ್ವಹೀನವಾಗುತ್ತೆ ಬರವಣಿಗೆ. ವಿ.ಜಿ. ಭಟ್ ಹೇಳ್ತಿದ್ರು: ನಾವೆಲ್ಲ ಸಾಮಾನ್ಯವಾಗಿ ಬರವಣಿಗೆಯಲ್ಲಿ ನವರಸಗಳು ಇರಬೇಕು ಅಂತೀವಿ. ಯಕ್ಷಗಾನದ ಪಾತ್ರಗಳಲ್ಲೆಲ್ಲ ನವರಸಗಳು ಇರಬೇಕು ಅಂತೀವಿ. ಭೀಭತ್ಸ ಇರಬೇಕು, ಸೌಂದರ್ಯ, ಲಾಲಿತ್ಯ, ಭಯ -ಉದ್ಗಾರ ಇರಬೇಕು ಅಂತ. ಇದೆಲ್ಲರ ಜೊತೆಗೆ ಹತ್ತನೆಯ ರಸ ಇರಬೇಕು ಅದು ಇತ್ತೀಚೆಗೆ ಜಾಸ್ತಿಯಾಗುತ್ತಿದೆ ಅಂತ ಕವಿ ವಿ.ಜಿ.ಭಟ್ಟರು ಹೇಳುತ್ತಿದ್ದರು. ಏನಪ್ಪಾ ಅದು ಅಂದರೆ, ಅದು ಶುಷ್ಕ ರಸ.. ಇತ್ತೀಚೆಗೆ ವರದಿ ಮಾಡುವಾಗ, ತ್ವರಿತ ಮಾಹಿತಿ ವಿನಿಮಯ ಮಾಡುವಾಗ ಈ ಶುಷ್ಕರಸ ಅಧಿಕವಾಗಿಬಿಡುತ್ತೆ. ಅದು ಬರಬಾರದು ಅಂತ ಹೇಳಿ ಇವರು ಅದಕ್ಕೆ ಅನಗತ್ಯವಾಗಿ, ಕೃತಕವಾಗಿ ಭೀಭತ್ಸವನ್ನ, ರೋಷವನ್ನ ಸೇರಿಸುವುದಕ್ಕೆ ಪ್ರಯತ್ನ ಪಡುತ್ತಾರೆ, ಕ್ರೋಧ ಸೇರಿಸ್ತಾರೆ. ಹೀಗೆ ಕೃತಕವಾಗಿ ರಸಗಳನ್ನ ಸೇರ್ಪಡೆ ಮಾಡಿ ನಿಮಗೆ ಉಣಬಡಿಸುತ್ತಾರಲ್ಲ, ಫಾಸ್ಟ್ ಫುಡ್ ಥರ, ಅದು ಜೀರ್ಣವಾಗುವುದಿಲ್ಲ. ಅವೆಲ್ಲ ಇರಬೇಕು ಆದರೆ ಎಲ್ಲ ತೂಕಬದ್ಧವಾಗಿ, ಹಿತಮಿತವಾಗಿ ಇದ್ದಾಗ ಚೆನ್ನಾಗಿರುತ್ತೆ. ಆಮೇಲೆ ಅದನ್ನೆಲ್ಲ ಗ್ರಹಿಸುವುದಕ್ಕೆ ನಮಗೆ ತಾಳ್ಮೆ ಬೇಕು. ಯೋಚನೆ ಮಾಡಿ ಬರೆದದ್ದೆಲ್ಲ ಇನ್ನೊಬ್ಬರನ್ನ ಯೋಚನೆಗೆ ಹಚ್ಚಿದ ಹಾಗಿರುತ್ತೆ. ಅವಸರದಲ್ಲಿ ಬರೆದದ್ದು ಯಾರನ್ನೂ ತಟ್ಟದೆ ಹೊರಟು ಹೋಗುತ್ತೆ. ವಿದ್ಯಮಾನಗಳು ಎಷ್ಟೇ ತ್ವರಿತವಾಗಿದ್ದರೂ ಒಂದು ವಾರದ ನಂತರ ಅದನ್ನು ನೋಡಿ ಏನಾಗುತ್ತಿದೆ ಅಂತ . ಆಗ ನಮ್ಮ ನಾಲ್ಕೂ ದಿಕ್ಕಿನ ವಿದ್ಯಮಾನಗಳನ್ನ ಅವಲೋಕನ ಮಾಡುವುದಕ್ಕೆ ಸಾಧ್ಯವಾಗುತ್ತೆ. ಯಾವುದೇ ಅವಸರದ ಮಾಹಿತಿಯನ್ನು ತಕ್ಷಣದಲ್ಲಿ ಒಪ್ಪಿಕೊಳ್ಳಬೇಡಿ. ಒಂದೆರಡು ದಿನ ಕಾದು ನೋಡಿ, ಅದು ತಣ್ಣಗಾಗಲಿ ಆಮೇಲೆ ಅದನ್ನು ಅನಲೈಸ್ ಮಾಡಲು ಪ್ರಾರಂಭಿಸಿ. ಆ ರೀತಿಯ ಬರವಣಿಗೆಗಳು ಕಡಿಮೆಯಾಗುತ್ತಿವೆ ಈಗ.
ಎಲ್ಲವೂ ತುರ್ತಾಗಿರುವುದರಿಂದ ಇವತ್ತು ಸಂಜೆ ನಡೆದ ಘಟನೆ ಕೂಡ ಕವರ್ ಸ್ಟೋರಿ ಆಗಿಬಿಡಬೇಕು ಈಗ. ಆ ತ್ವರಿತದಲ್ಲಿ ಕೂಲಿಂಗ್ ಎಫೆಕ್ಟ್ ಇರೋದೇ ಇಲ್ಲ. ಈ ಸಕ್ಕರೆ ಪಾಕ ನೋಡಿ ಎಷ್ಟು ತಣ್ಣಗಾಗುತ್ತೋ ಅಷ್ಟು ಹರಳುಗಟ್ಟುತ್ತೆ. ಕ್ರಿಸ್ಟಲೋಗ್ರಫಿ ತತ್ವವೇ ಇದು. ನಿಧಾನವಾಗಿ ಕೂಲ್ ಆದಷ್ಟೂ ಸುಂದರವಾದ ಸ್ಪಟಿಕಗಳು, ಕ್ರಿಸ್ಟಲ್ ಗಳು ರೂಪುಗೊಳ್ತವೆ. ತ್ವರಿತವಾಗಿ ಕೂಲ್ ಆದದ್ದು ಗ್ಲಾಸ್ ಆಗುತ್ತದೆ. ಈ ಜ್ಞಾನದ ವಿಷಯದಲ್ಲಿ ಸಹ ಅದು ತುಂಬಾ ಆಪ್ತವಾಗಿ ಅನ್ವಯವಾಗುತ್ತದೆ. ನಿಧಾನವಾಗಿ ಗ್ರಹಿಸಬೇಕು ಆಗ ನಮಗೆ ಹರಳುಗಟ್ಟುವಂತಹ ಮಾಹಿತಿ ಸಿಕ್ಕುತ್ತದೆ.
ಇನ್ನು ಈ ಮಾಧ್ಯಮಗಳೂ ಬೇಕಾಗುವುದಿಲ್ಲ. ಟಿವಿ ಸ್ಟೂಡಿಯೋಗಳು ಬೇಕಾಗುವುದಿಲ್ಲ, ಬಹುಶಃ ಸುದ್ದಿ ಮನೆಗಳೂ ಬೇಕಾಗುವುದಿಲ್ಲ. ನಿಮ್ಮ ಕೈಯಲ್ಲೇ ಎಲ್ಲಾ ಸುದ್ದಿ ಬರುತ್ತಾ ಇರುತ್ತೆ. ನಿಮ್ ಫೋನಿನಲ್ಲಿ ಆಲ್ ಇಂಡಿಯಾ ರೇಡಿಯೋ ಎನಿ ಟೈಮ್ ಸುದ್ದಿ ಹೇಳ್ತಾ ಇರುತ್ತೆ, ನ್ಯೂಸ್ ಪೇಪರ್ ಸುದ್ದಿ ಹೇಳ್ತಾ ಇರುತ್ತೆ. ಕೈಯಲ್ಲಿ ಇರುವ ಗಣಕದಲ್ಲಿ ಕೂಡ ಬಿ.ಎಸ್.ಎನ್.ಎಲ್ ಈಗ ಟಿವಿಯನ್ನೂ ಕೊಡ್ತಾ ಇದಾರೆ ಅಂತಲ್ಲ... ಸೋ, ನೀವು ಒಂದು ರೀತಿಯ ಮಾಹಿತಿಯ ಮಹಾ ಪ್ರವಾಹದಲ್ಲಿ ತೇಲುತ್ತಾ ಇರುತ್ತೀರಿ. ಅಲ್ಲೂ ಕೂಡ ಎಲ್ಲಾದ್ರೂ ಒಂದು ದ್ವೀಪ ಬೇಕು, ಕೊಂಚ ಕೂತು ಸುಧಾರಿಸಿಕೊಂಡು ಓದುವಂತಿರಬೇಕು ಅನ್ನಿಸಿದಾಗ ಬಹುಶಃ ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳು, ದೇಶಕಾಲದಂತಹ ತ್ರೈಮಾಸಿಕ ಪತ್ರಿಕೆಗಳು - ಹೀಗೆ ಯಾವುದರ ಫ್ರೀಕ್ವೆನ್ಸಿ ಕಡಿಮೆ ಇರುತ್ತೋ ಅವುಗಳು ಗಟ್ಟಿ ಹರಳುಗಳನ್ನು ಕೊಡ್ತವೆ. ಆದರೆ ಪ್ರಶ್ನೆಯೇನೆಂದರೆ, ಅದನ್ನು ಓದುವಷ್ಟು ವ್ಯವಧಾನ ಇದೆಯಾ ನಮಗೆ? ಸುಧಾದಲ್ಲಿ ವಾರವೊಂದಕ್ಕೆ ಎಷ್ಟು ಮಾಹಿತಿ ಬರ್ತಾ ಇತ್ತೋ ಅಷ್ಟು ಮಾಹಿತಿ ದಿನಪತ್ರಿಕೆಯಲ್ಲಿ ಪುರವಣೆಗಳ ಸಹಿತ ಬರುತ್ತಿರುವಾಗ, ಅಷ್ಟೇ ತ್ವರಿತವಾಗಿ ಅದು ಕಸದ ಬುಟ್ಟಿಗೆ ಹೋಗುತ್ತಿರುವಾಗ ನಿಮಗೆ ಗಮನಿಸಲಿಕ್ಕೆ ಆಗುವುದಿಲ್ಲ. ವಾರಾಂತ್ಯದಲ್ಲೋ, ಯಾವುದೋ ಒಂದು ದಿನ ಇದನ್ನು ನಾನು ಕೂತು ಓದಬೇಕು ಎಂದು ಗಟ್ಟಿ ಹರಳುಗಳನ್ನು ಅರಸುವವರಿಗೆ ಅಂಥದ್ದನ್ನು ಕೊಟ್ಟರೆ ಅದು ಮಾಧ್ಯಮದ ಮಹತ್ವದ ಕಾಂಟ್ರಿಬ್ಯೂಶನ್ ಆಗುತ್ತದೆ. ಆದರೆ ಅದು ತುಂಬಾ ಕಷ್ಟ, ಅಲ್ಲಾ?
ಇನ್ನೊಂದು, ಅಸುಖಗಳು. ತಂತ್ರಜ್ಞಾನ ಹೆಚ್ಚಿದೆ ಎಂಬ ಕಾರಣಕ್ಕೆ ಸೌಖ್ಯ ಹೆಚ್ಚಾಗಿದೆ ಎಂದೇನಿಲ್ಲ. ಸೌಖ್ಯ ಎನ್ನುವುದು ಇನ್ನೂ ಮರೀಚಿಕೆಯಾಗಿಯೇ ಇದೆ. ಮಾನಸಿಕ ಸೌಖ್ಯ ಈಗಲೂ ಸಿಕ್ಕುತ್ತಿಲ್ಲ ಜನಕ್ಕೆ. ಆಮೇಲೆ ನಾನಾ ಥರದ ಖಾಯಿಲೆಗಳು: ಮಾನಸಿಕ, ದೈಹಿಕ. ಖಾಯಿಲೆಗಳು ಹೆಚ್ಚಾಗಿರುವುದರಿಂದಲೋ ಇಲ್ಲವೇ ಈ ಖಾಯಿಲೆಗಳಿಗೆ ಔಷಧಗಳು ದುಬಾರಿಯಾಗಿರುವುದರಿಂದಲೋ ಇನ್ನೊಂದು ಶಾರ್ಟ್ ಕಟ್ ಇದೆಯಾ ಒಳದಾರಿ ಇದೆಯೋ? ಯಾರೋ ಒಬ್ಬ ಪುಣ್ಯವಂತ ನಿಮಗೆ ನಿಂಬೆಹಣ್ಣು ಮಂತ್ರಿಸಿಕೊಟ್ಟರೆ ಸರಿಯಾಗುತ್ತೋ? ಅಂತ ಯೋಚಿಸ್ತಾರೆ. ನೋಡಿ, ತಂತ್ರಜ್ಞಾನ ಎಷ್ಟೆಷ್ಟೆಲ್ಲ ಸವಲತ್ತು ಒದಗಿಸುತ್ತಿದ್ದರೂ, ಸ್ಕ್ಯಾನಿಂಗ್ ಸೌಲಭ್ಯಗಳಿದ್ದರೂ ಇನ್ನೆನೋ ನಮಗೆ ತಿಳಿಯದ ಲೋಕದಲ್ಲಿ ಏನಾದರೂ ಹೊಸತು ಇದೆಯೇನೋ ಎಂದು ಹೋಗುತ್ತಾರೆ. ಬೆನ್ನಿ ಹಿನ್ ರಂಥವರು ಬರ್ತಾರೆ, ನಿಮ್ಮನ್ನೆಲ್ಲ ನಾನು ಸರಿ ಮಾಡ್ತೀನಿ ಅನ್ನೋರು ಇರ್ತಾರೆ.
ಬಹುಶಃ ವಿಜ್ಞಾನ ತಂತ್ರಜ್ಞಾನದ ಬಳಕೆ ಹೆಚ್ಚಾಗ್ತಾ ನಮ್ಮದೇ ಒಂದು ಟೆಕ್ನಿಕ್ ಇದೆ. ತಂತ್ರಗಳಿವೆ. ಪಾರಮಾರ್ಥಿಕ ಲೋಕವಿದೆ ಅದರ ಮೂಲಕ ನಿಮಗೆ ಸೌಖ್ಯವನ್ನು ಕೊಡ್ತೀವಿ ಅನ್ನೋರು ಇರ್ತಾರೆ. ನಂಬೋರು ನಂಬೇ ನಂಬ್ತಾರೆ.
ಈ ವಿಜ್ಞಾನ ಅನ್ನೋದೇ ಎಷ್ಟೋ ಮಂದಿಗೆ ಅಲೌಕಿಕವಾದದ್ದೇ ತಾನೆ? ಅದು ನಮ್ಮನ್ನು ಮೀರಿದ್ದು, ಮಾಂತ್ರಿಕವಾದದ್ದು ಅಂತ ಅನ್ನಿಸುತ್ತೆ. ವಿಜ್ಞಾನ, ತಂತ್ರಜ್ಞಾನ ಮಾಂತ್ರಿಕವಾಗಿರುವಾಗ ಪಾರಮಾರ್ಥಿಕ ಯಾಕೆ ಮಾಂತ್ರಿಕವಾಗಿರಬಾರದು? ಮನಸ್ಸಿನಲ್ಲೇ ದೇವರು ಸೃಷ್ಟಿಯಾಗ್ತಾನೆ ಅನ್ನೋವಾಗ ಯಾಕೆ ಅವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಾರದು? ಹಾಗೂ ಇರುತ್ತೆ. ಅದಕ್ಕೇ ಅಪ್ಪಟ ವಿಜ್ಞಾನಿಯಾದವರು ಕೂಡ ಇರಬಹುದೇನೋ ಎನ್ನುವ ನಿಲುವಿಗೆ ಬರುತ್ತಾರೆ. ಐಐಟಿಯಲ್ಲಿ ಓದಿಕೊಂಡು ಅಮೇರಿಕಾಗೆ ಹೋಗಿ ಲೇಸಿಕ್ ಸರ್ಜರಿಯನ್ನು ಕಂಡು ಹಿಡಿದು ಅದರ ಪೇಟೆಂಟ್ ನಿಂದ ಬಿಲಿಯನೇರ್ ಆಗಿ ಇದ್ದಕ್ಕಿದ್ದಂತೆ ತಾನು ಫಿಸಿಸಿಸ್ಟ್, ತನಗೆ ಕ್ವಾಂಟಂ ಜಗತ್ತು ಚೆನ್ನಾಗಿ ಗೊತ್ತಿದೆ, ಕ್ವಾಂಟಂ ಜಗತ್ತು ತುಂಬಾ ಕುತೂಹಲಕಾರಿಯಾದದ್ದು. ಅದರ ಮೂಲಕ ದೇವರನ್ನ ಕಾಣಲಿಕ್ಕೆ ಸಾಧ್ಯವಿದೆ ಎಂದು ಹೇಳಿ 'ಕೋಡ್ ನೇಮ್ ಗಾಡ್' ಎನ್ನುವ ಪುಸ್ತಕ ಬರೆದು, ಆ ಪುಸ್ತಕ ತುಂಬಾ ಜನಪ್ರಿಯವಾಯ್ತು. ಸೋ ವಿಜ್ಞಾನದಲ್ಲೇ ಫಿಸಿಸಿಸ್ಟುಗಳು ವಿಜ್ಞಾನವನ್ನು ಮೀರಿದ ಏನೋ ಒಂದು ಇದೆ ಎನ್ನುವುದನ್ನು ನಂಬುವುದಕ್ಕೆ ಶುರುಮಾಡಿದರು.
ಆ ನಿಗೂಢತೆ ಮೊದಲಿನಿಂದಲೂ ಇದ್ದೇ ಇದೆ. ಬಹಳ ಮಂದಿ ವಿಜ್ಞಾನವನ್ನ ಮೆಚ್ಚಿಕೊಳ್ಳುವುದಿಲ್ಲ. ಬಹುಶಃ ಹೈಸ್ಕೂಲಲ್ಲಿ ಕಠಿಣ ಗಣಿತದ ಸಮೀಕರಣಗಳನ್ನ ನೋಡಿ ಕೋಪಬಂದಿರಬೇಕು ಎಂದು ಕಾಣುತ್ತೆ. ಅಥವಾ ವಿಜ್ಞಾನಿಗಳ ಜೀವನ ವಿಧಾನವನ್ನು ನೋಡಿ ತಿರಸ್ಕಾರ ಬಂದಿದೆಯೋ ಗೊತ್ತಿಲ್ಲ. ಅಮೇಲೆ, ವಿಜ್ಞಾನದಲ್ಲಿ ಸಾಕಷ್ಟು ವಿನಾಶಕಾರಿ ವಸ್ತುಗಳು ಬಂದಿವೆ. ವಿಜ್ಞಾನಿಗಳಿಂದಾಗಿ ಕಲಾಶ್ನಿಕೋವ್ ಬಂದಿದ್ದು, ಅಣು ಬಾಂಬ್ ಬಂದಿದ್ದು ಅಂತೆಲ್ಲ ಹೇಳ್ತಾರೆ.
ವಿಜ್ಞಾನ ನಮಗೆ ಸುಖವನ್ನು ಕೊಟ್ಟಿಲ್ಲ, ಶಾಂತಿಯನ್ನು ಕೊಟ್ಟಿಲ್ಲ. ಹಾಗಾಗಿ ಕಷ್ಟಗಳಿಲ್ಲದೆ ಕೇವಲ ಸುಖವನ್ನೋ ಕೊಡುವಂತಹ ಸೂಪರ್ ಸೈನ್ಸ್ ಇರಬೇಕು ಅಂತ ಹೇಳುವವರು ಇರ್ತಾರೆ, ಕೇಳುವವರಂತೂ ಇದ್ದೇ ಇರ್ತಾರೆ.
ಒಂದು ಮೂಢ ನಂಬಿಕೆ, ಇನ್ನೊಂದು ರೂಢ ನಂಬಿಕೆ. ಮತ್ತೊಂದು, ವಿಜ್ಞಾನಿಗಳೇ ವಿಜ್ಞಾನಕ್ಕೆ ಅತೀತವಾದ ಸೂಪರ್ ಸೈನ್ಸ್ ಇದೆ ಎಂದು ನಂಬುವುದು. ಅದನ್ನ ಕ್ವಾಂಟಮ್ ವೇವ್ಸ್, ವೈಬ್ರೇಷನ್ಸ್ ಅಂತೆಲ್ಲ ವಿವರಿಸ್ತಾರೆ. ವಿಜ್ಞಾನಿ ಅಂದ ಮಾತ್ರಕ್ಕೆ ಎಲ್ಲರೂ ಹೈಸನ್ ಬರ್ಗ್ ಥರದವರೇ ಇರಬೇಕೆಂದಿಲ್ಲ. ಅವನು ರಸಾಯನಶಾಸ್ತ್ರ, ಪಾಲಿಮರ್ ವಿಜ್ಞಾನ, ಜೀವಶಾಸ್ತ್ರದಲ್ಲಿ ಕೆಲಸ ಮಾಡುತ್ತಿರಬಹುದು ಎಲ್ಲರಿಗೂ ಭೌತಶಾಸ್ತ್ರ ತಿಳಿದಿರಬೇಕು ಎಂದಿಲ್ಲ. ಅಲ್ಲಿ ಮೂಢನಂಬಿಕೆಗಳು ಹುಟ್ಟುವುದಕ್ಕೆ ಸಾಧ್ಯವಿದೆ. ನಾನು ಇಷ್ಟರವರೆಗೆ ಹೇಳಿದ್ದು ಈ ಸೋ ಕಾಲ್ಡ್ ಮಾಡರ್ನ್ ಜನರಲ್ಲಿ ಇರುವ ಮೂಢನಂಬಿಕೆಗಳ ಬಗ್ಗೆ.
ಇನ್ನು ಗ್ರಾಮೀಣರು ಇಲ್ಲವೇ ಸಿಟಿಯಲ್ಲೇ ಇರುವ ಹಲವರು, ಬೆಳಿಗ್ಗೆ ಎದ್ದು ಗ್ರಹತತಿಯನ್ನು, ತಾರಾಬಲವನ್ನು ನೋಡುವವರು, ಬೈಕ್ ಹತ್ತುವ ಮುನ್ನ ರಾಹುಕಾಲ ತಪ್ಪಿಸಿ ಹೊರಡುವವರು ಇದ್ದೇ ಇರುತ್ತಾರೆ. ಅವರಿಗೆ ಇವನ್ನೆಲ್ಲ ವಿವರಿಸಬೇಕು. ರಾಹುಕಾಲ ಅನ್ನೋದು ಕಾಲ್ಪನಿಕ ಅಂತೆಲ್ಲ. ಆದರೆ ಅವರಿಗೆ ಸಮಯ ಎಲ್ಲಿರುತ್ತೆ ಕೇಳೋಕೆ?
ನಾನೊಂದು ಸ್ಪಷ್ಟ ಉದಾಹರಣೆ ಕೊಡ್ತೀನಿ. ೧೯೮೦ರಿಂದ ೮೫ ರ ಸಮಯದಲ್ಲಿ ಸಾಕಷ್ಟು ಚಳುವಳಿಗಳಿದ್ದವು. ಆಗ ಪರಿಸರ ಚಳುವಳಿ, ರೈತ ಚಳುವಳಿ, ಕಾರ್ಮಿಕ ಚಳುವಳಿ, ಗ್ರಾಹಕ ಚಳುವಳಿ, ಮಹಿಳಾ ಚಳುವಳಿಗಳಿದ್ದವು. ದಲಿತ ಚಳುವಳಿಯಂತೂ ಇದ್ದೇ ಇತ್ತು. ಒಂದು ಶರವಾತಿ ಹೋರಾಟಕ್ಕೆ ಬನ್ನಿ ಅಂತ ಕರೆದ್ರೆ ಈ ಎಲ್ಲಾ ಚಳುವಳಿಗಳ ನಾಯಕರು ಬರುತ್ತಿದ್ರು. ಸಹಜವಾಗಿ ಅಷ್ಟೊಂದು ಜನ ಸೇರುತ್ತಿದ್ದರು. ನಾವೆಲ್ಲ ಪ್ರತಿ ಮೂರನೆಯ ಭಾನುವಾರ ಕುಮಾರ ಕೃಪಾದಲ್ಲಿ ಸಭೆ ಸೇರ್ತಿದ್ವಿ . ಅದೇ ಸಮಯದಲ್ಲಿ ಮಹಾಭಾರತ ಅಂತ ಧಾರಾವಾಹಿ ಶುರುವಾಯ್ತು. ಯಾವಾಗ ಮಹಾಭಾರತ, ರಾಮಾಯಣ ಶುರುವಾಯ್ತೋ ಆಗ ಸಭೆಗೆ ಸೇರುವವರ ಸಂಖ್ಯೆ ಕಡಿಮೆಯಾಗ್ತಾ ಹೋಯ್ತು. ಇದು ನಮಗೆ ಸ್ಪಷ್ಟವಾಗಿ ಗೋಚರವಾಗ್ತಿತ್ತು. ಟಿವಿಯಲ್ಲಿ ಆಗ 'ಹಮ್ ಲೋಗ್', 'ಬುನಿಯಾ' ಎಲ್ಲಾ ಶುರುವಾಯ್ತು. ಆಗ ಬೇರೆ ರಾಜ್ಯದ ಜನರು ನಮ್ಮೊಂದಿಗೆ ಬರುವುದು ಕಡಿಮೆ. ಅನಂತರ ನಾವು ಸಭೆಯನ್ನು ಸಂಜೆಗೆ ಹಾಕಿಕೊಂಡ್ವಿ. ಆಗಲಾದರೂ ಬರ್ತಾರೆನೋ ಅಂತ. ಆದರೆ ಸಂಜೆ ಮತ್ತ್ಯಾವುದೋ ಧಾರಾವಾಹಿ ಶುರುವಾಯ್ತು. ಕ್ರಮೇಣ ಜನರಿಗೆ ಸಾಮುದಾಯಿಕ ಭಾಗವಹಿಸುವಿಕೆ ಅನ್ನುವುದೇ ಹೊರಟು ಹೋಯ್ತು.
ಮೊದಲೆಲ್ಲ ಮನರಂಜನೆ ಅಂದರೆ ಏನಿತ್ತು? ಸಿನೆಮಾ- ಅದು ಕಷ್ಟದ ಕೆಲಸ. ಕಾದಂಬರಿ ಓದುವುದು ಮತ್ತೂ ಕಷ್ಟದ ಕೆಲಸ. ಹೀಗಾಗಿ ಜನರು ಬರುತ್ತಿದ್ರು. ನಾಲ್ಕಾರು ಮಂದಿ ಕಲೆತು ಹರಟೆ ಹೊಡೆಯುವುದು ಇಷ್ಟ ಪಡುತ್ತಿದ್ದರು. ಈಗ ಹರಟೆಗೂ ಅವಕಾಶವಿಲ್ಲದ ಹಾಗೆ ಭ್ರಮಾಲೋಕವನ್ನು ಟಿವಿ ಕಟ್ಟಿ ಕೊಡುತ್ತಿತ್ತು. ಆದರೆ ಇತ್ತೀಚೆಗೆ ಮತ್ತೆ ಅಂತಹ ಸೆಳೆತ ಕಡಿಮೆ ಆಗಿದೆ ಅನ್ನಿಸುತ್ತೆ. ಸಾಹಿತ್ಯಕ್ಕೆ ಮರಳುತ್ತಿದ್ದಾರೆ, ನಾಟಕಗಳನ್ನ ನೋಡ್ತಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ಮಾಲ್ ಗಳಿಗೆ ಹೋಗುವವರು ಹೆಚ್ಚಾಗಿದ್ದಾರೆ. ಒಟ್ನಲ್ಲಿ ಮನೆಯಲ್ಲಿ ಇರೋಲ್ಲ. ಪಬ್ಲಿಕ್ ಎಂಟರ್ ಟೇನ್ ಮೆಂಟ್ ಗಾಗಿ ತುಡಿಯುತ್ತಿದ್ದಾರೆ.
ಹೌದು ನೀವು ಹೇಳಿದ ಹಾಗೆ ಚಳುವಳಿಗಳು ಕಾವು ಕಳೆದುಕೊಂಡಿವೆ. ಮೊದಲೆಲ್ಲ ಯುವಕರು ಗ್ರಾಜುಯೇಶನ್ ಮುಗಿದು ಕೆಲಸಕ್ಕೆ ಸೇರುವ ಮುನ್ನ ಎರಡು ವರ್ಷಗಳ ಬಿಡುವು ಇರುತ್ತಿತ್ತು. ಅವರು ಹೆಚ್ಚು ಭಾಗವಹಿಸುತ್ತಿದ್ದರು. ಈಗಿನಷ್ಟೂ ತೀಕ್ಷ್ಣ ಸ್ಪರ್ಧೆ ಆಗ ಇರಲಿಲ್ಲ. ಈಗಿನ ಜಾಗತೀಕರಣದ ಬೇಡಿಕೆಗಳು ಆಗ ಇರಲಿಲ್ಲ. ಎಲ್ಲರಿಗೂ ಕರಿಯರ್ ಅನ್ನುವುದೇ ಮುಖ್ಯವಾಗಿ ನಮಗೆ ಯುವಕರು ಸಿಗುವುದು ಕಡಿಮೆಯಾಯ್ತು. ಈಗಿನ ಬದುಕಿನ ಒತ್ತಡಗಳು ಯೌವನದಲ್ಲಿ ಜನರೊಂದಿಗೆ ಬೆರೆಯುವ ಅವಕಾಶವನ್ನೇ ಕಸಿದುಕೊಂಡಿದೆ ಅನ್ನಿಸುತ್ತೆ. ಈಗ ಚಳುವಳಿಗೆ ಕರೆ ಕೊಟ್ಟರೆ ಅರವತ್ತರ ನಂತರದ ಜನರೇ ಬರುತ್ತಾರೆ.
ಮುಖ್ಯವಾಗಿ ಇದು ನನ್ನದು ಅಲ್ಲ ಅನ್ನೋ ಭಾವನೆ. ಈಗ ಹಳ್ಳಿಗೆ ಹೋದರೂ "ಎಷ್ಟು ದಿನ ಇರ್ತೀವಪ್ಪ ನಾವಿಲ್ಲಿ? ನಾವೂ ನಿಮ್ಮಂಗೆ ಸಿಟಿಗೆ ಬರ್ತೀವಿ, ಬರ್ಲಿ ಬಿಡು ನದಿ ಇಲ್ಲಿಗೆ" ಅನ್ನೋವಂಥ ಸಿನಿಕತೆ ಬರ್ತಾ ಇದೆ. ನನ್ನ ಊರು, ನನ್ನ ಕಣಿವೆ, ನನ್ನ ಬೆಟ್ಟ ನನ್ನ ಗುಡ್ಡ ಅನ್ನುವಂಥ ವಿಚಾರ ಕಡಿಮೆ ಆಗಿದೆ. ಇಂಥ ವಿಚಾರಗಳು ಯೌವನದಲ್ಲಿ ಹೆಚ್ಚಾಗಿರ್ತಿದ್ದವು. ಆದರೆ ಈಗ ಆ ಯೌವನವನ್ನ ದಮನಿಸಿಬಿಟ್ಟೀದ್ದೀವಲ್ಲ. ಎಂಥ ಹಳ್ಳಿಯವನಿಗೂ ಈಗ ಕನಸಿನ ಸೋಪಾನಗಳನ್ನ ಕೊಟ್ಟಿದ್ದೇವೆ. ಎಲ್ಲವನ್ನ ದುಡ್ಡಿನಲ್ಲಿ ಅಳೆಯುತ್ತಾ ಹೋದಂತೆ ನೀರು ಅನ್ನೋದು ಮುಖ್ಯವಾಗಲ್ಲ. ದುಡ್ಡಿದ್ರೆ ಸಾಕಲ್ಲ ಬಾಟಲ್ ನೀರು ತಗಂಡು ಬದುಕಬಹುದು ಅನ್ನೋ ರೀತಿ. ಆದರೆ ಅದು ಏಟು ಕೊಡುತ್ತೆ. ಒಳಮನಸ್ಸು ಕೆಣಕಲ್ಪಟ್ಟಾಗ ಜನ ಮತ್ತೆ ಸೇರ್ತಾರೆ. ಹೀಗಾಗಿ ಈಗ ನಾವು ಹೋರಾಟಕ್ಕೆ ಬನ್ನಿ ಅಂದರೆ ಬಹಳಷ್ಟು ಐಟಿ ಮಂದಿ ಬರುತ್ತಾರೆ. ಪ್ರತಿಕ್ರಿಯಾತ್ಮಕ ಭಾವನೆ ಉಳಿದವರಿಗಿಂತ ಈ ಸಾಫ್ಟ್ ವೇರ್ ಮಂದಿಯಲ್ಲಿ ಹೆಚ್ಚಿದೆ ಅನ್ನುವುದು ನನ್ನ ಭಾವನೆ.
ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಅನ್ನೋದು ಅರ್ಥ ಕಳೆದುಕೊಂಡು ಬಿಟ್ಟಿದೆ. ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಕಲವರ ಲೆಕ್ಕಾಚಾರದ ಪ್ರಕಾರ ಇನ್ನು ಹತ್ತು ಹದಿನೈದು ವರ್ಶಗಳಲ್ಲಿ ನಲವತ್ತು ಕೋಟಿ ಜನ ನಗರಗಳಿಗೆ ಬರುತ್ತಾರಂತೆ. ಯೋಜನಾ ತಜ್ಞರೆಲ್ಲ ಇದಕ್ಕೆ ಯೋಜನೆಗಳನ್ನ ಹಾಕ್ತಾ ಇದಾರೆ. ನಮ್ಮ ಪ್ರಧಾನ ಮಂತ್ರಿಗಳು (ಮನಮೋಹನ್ ಸಿಂಗ್) ಹೇಳಿದ್ದಾರಲ್ಲ, ಜನ ಕೆಲಸ ಹುಡುಕಿಕೊಂಡು ನಗರಗಳಿಗೆ ಬರಬಾರದು ಕೆಲಸಗಳು ಜನರನ್ನ ಹುಡುಕಿಕೊಂಡು ಹೋಗ್ಬೇಕು ಅಂತ. ಗಾಂಧೀಜಿ ಅದನ್ನ ಅರವತ್ತೈದು ವರ್ಷಗಳ ಹಿಂದೇ ಹೇಳಿದ್ದರು ಅದನ್ನ ನಾವು ಈಗ ಮನಗಾಣ್ತಾ ಇದೀವಿ. ಅಮೇರಿಕಾದಲ್ಲಿ ಎಲ್ಲಿವೆ ಹಳ್ಳಿಗಳು? ಶೇ ೧ರಷ್ಟು ಅಷ್ಟೇ ಹಳ್ಳಿಗಳು, ಎಲ್ಲರೂ ಸಿಟಿ ಜನ್ಸ್ ಆಗಿದ್ದಾರೆ, ಸಿಟಿ 'ಜನ'ರು. ನಾವು ಇಲ್ಲಿ ಎಪ್ಪತ್ತು ಕೋಟಿ ಜನರನ್ನ ಸಿಟಿಗೆ ತಂದು ಸಾಕೋಕಾಗುತ್ತಾ? ನಗರಗಳು ಅದನ್ನ ತಡೆದುಕೊಳ್ಳಲು ಸಾಧ್ಯವಾಗುತ್ತಾ?
ಸಾಧ್ಯವಾದಷ್ಟು ಮಟ್ಟಿಗೆ ಸಮತೋಲನವನ್ನ ತರೋಣ, ನಗರದಲ್ಲಿ ಸಿಗುವ ಸೌಲಭ್ಯ - ಸವಲತ್ತುಗಳನ್ನ ನಾವು ಗ್ರಾಮೀಣ ಪ್ರದೇಶಗಳಲ್ಲಿ ದೊರೆಯುವಂತೆ ಮಾಣೋಣ. ಉದ್ಯೋಗ ಅಲ್ಲೇ ಸಿಗಬೇಕು, ಮನರಂಜನೆ ಅಲ್ಲೆ ಸಿಗಬೇಕು, ಆರೋಗ್ಯ, ಶಿಕ್ಷಣ ಅಲ್ಲೇ ಸಿಗುವಂತಾದರೆ ನಮಗೆ ಭವಿಷ್ಯವಿದೆ.
ಗ್ರಾಮ ಅನ್ನೋದು ಎಲ್ಲಾ ಸೌಲಭ್ಯಗಳು ಸಿಗುವ ಸಮೃದ್ಧಿಯ ತಾಣವಾಗಿ, ಆಕರ್ಷಕ ಸ್ಥಳವಾಗಿ, ಜನರಿಗೆ ಪ್ರೇರಣೆಯನ್ನು ನೀಡುವಂಥ ಪ್ರದೇಶವಾಗಿ ರೂಪುಗೊಂಡಂತಹ ಉದಾಹರಣೆಗಳು ಕಡಿಮೆ. ಅಂತಹ ಉದಾಹರಣೆಗಳನ್ನು ಸೃಷ್ಟಿ ಮಾಡುವುದಕ್ಕಾದರೂ ಒಂದು ಹತ್ತು ಮಾಡೋಣ ಅನ್ತೀವಿ ಆದರೆ ಆಗ್ತಾ ಇಲ್ಲ.

ಪ್ರತಿಕ್ರಿಯೆ (8)