ಓದುಗರೆ, ಸಂಪದ ಸಂದರ್ಶನಗಳ ಸರಣಿಯ ೧೨ನೇ ಸಂ‌ಚಿಕೆ ಇಗೋ ನಿಮ್ಮ ಮುಂದಿದೆ.

ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುವ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಕರ್ನಾಟಕದ ಭಾಗವಾಗಿದ್ದ ಕಾಲದಿಂದಲೂ ತಮ್ಮ ಸಾಹಿತ್ಯ, ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡವರು. ಇಂತಹ ಕಯ್ಯಾರರಿಗೆ ತುಳು ಭಾಷೆ ಹೆತ್ತ ತಾಯಿಯಾದರೆ, ಕನ್ನಡ ಭಾಷೆ ಸಾಕುತಾಯಿ. ಕಯ್ಯಾರರು ತಮ್ಮನ್ನು ಬೆಳೆಸಿದ ಈ ಇಬ್ಬರು ತಾಯಂದಿರನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಲೇ ಮಾತನ್ನು ಆರಂಭಿಸುತ್ತಾರೆ.

ಕಯ್ಯಾರ ಕಿಞ್ಞಣ್ಣ ರೈ - Kayyara-Kinyanna-Rai

ಬದಿಯಡ್ಕ ಸಮೀಪದ ಪೆರಡಾಲ ಎಂಬ ಗ್ರಾಮದಲ್ಲಿರುವ ಕವಿತಾ ಕುಟೀರದಲ್ಲಿ ಇವರ ವಾಸ. ೯೬ ರ ಪ್ರಾಯದಲ್ಲೂ ಜಿಗಿಯುವ ಜೀವನ ಉತ್ಸಾಹ. ಕಿಞ್ಞಣ್ಣ ಎಂದರೆ  ತುಳುವಿನಲ್ಲಿ ಕಿರಿಯವನು ಎಂದರ್ಥ. ಹೆಸರಿಗೆ ತಕ್ಕಂತೆ ಕಯ್ಯಾರರು ಬಹು ವಿಧೇಯ ವ್ಯಕ್ತಿತ್ವವುಳ್ಳ ಚೇತನ.

ಕನ್ನಡನಾಡಿನ ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿದಾಗ ಕನ್ನಡಿಗರನ್ನು ಸಂಘಟಿಸಿ ಹೋರಾಟ ಮಾಡಿದರೂ ಸಿಗದ ಯಶಸ್ಸು, ಅದರ ಹಿಂದಿನ ಹಲವು ಕಾರಣಗಳು, ಕರ್ನಾಟಕ ಸರ್ಕಾರ ಇದಕ್ಕಾಗಿ ಮಾಡಬೇಕಾದ ಕಾರ್ಯಗಳ ಕುರಿತ ಹಾಗೆ ಸಂಪದದೊಂದಿಗೆ ಮಾತನಾಡಿದ್ದಾರೆ. ಬನ್ನಿ ಈ ಹಿರಿಯರ ಅನುಭವ, ಹೋರಾಟದ ಬದುಕಿನ ಕುರಿತು ಅವರಿಂದಲೇ ಕೇಳಿ ತಿಳಿಯೋಣ. 

 

with Kayyara Kinyanna Rai

ಕಯ್ಯಾರರ ಸಂದರ್ಶನಕ್ಕಾಗಿ ಕಾಸರಗೋಡು ಜಿಲ್ಲೆ ಬದಿಯಡ್ಕ ಸಮೀಪದ ಪೆರಡಾಲ ಗ್ರಾಮದ ಅವರ ಮನೆ ಕವಿತಾ ಕುಟೀರದಲ್ಲಿ ಭೇಟಿಯಾದ ತಂಡದ ಭಾವಚಿತ್ರ. (ಎಡದಿಂದ)  ಹರಿಪ್ರಸಾದ್ ನಾಡಿಗ್, ಕಯ್ಯಾರರು, ಸಾತ್ವಿಕ್ ಎನ್ ವಿ  ಮತ್ತು ಪ್ರತಾಪಚಂದ್ರಶೆಟ್ಟಿ ಹಳ್ನಾಡು

ಕವಿತೆ

ಪ್ರಶ್ನೆ ೧
ವಿದ್ಯಾಭ್ಯಾಸ ಹಾಗೂ ಪತ್ರಿಕೋದ್ಯಮ ಅನುಭವ
ಉತ್ತರ
ಮಾನ್ಯರೇ ನಿಮ್ಮ ಜೊತೆಯಲ್ಲಿ ಒಬ್ಬರು ಮಹಿಳೆಯರು ಕೂಡ ಇದ್ದಾರೆ. ಅವರನ್ನೂ ನಾನು ಹೆಚ್ಚು ಅಬಿನಂದಿಸುತ್ತೇನೆ....

ಈ ಕಾಸರಗೋಡು ಪ್ರದೇಶದಲ್ಲಿ ನಾನು ಹುಟ್ಟಿದ್ದು ಮಾತ್ರವಲ್ಲ, ನನ್ನ ತಂದೆ ಮನೆಯೂ ಇಲ್ಲಿಯೇ. ನಮ್ಮ ಅಳಿಯಕಟ್ಟಿನಪ್ರಕಾರ ಹುಟ್ಟಿದ ಮನೆ (ತಂದೆ ಮನೆ), ನಮ್ಮ ಶಾಶ್ವತ ಮನೆ ಅಲ್ಲ.ಹಾಗಾಗಿ ತಂದೆ ತೀರಿ ಹೋದರೂ ಕೂಡ ನನಗೆ ಇಲ್ಲಿಮನೆ ಬೇಕಾದೀತೋ ಎನ್ನುವಅಭಿಪ್ರಾಯ ಬಂದು ನಾನು ಕವಿತಾಕುಟೀರ ಎಂಬ ಈ ಮನೆ ಮಾಡಿದ್ದೇನೆ. ನನ್ನ ತಂದೆ ಮನೆ ಅಲ್ಲಿಆಚೆ ಕಡೆ ಉಂಟು. ತೋಟದ ಮಧ್ಯದಲ್ಲಿದೊಡ್ಡಮನೆ, ಪಿತ್ರಾರ್ಜಿತಮನೆ- ತಂದೆಯದ್ದು.

ನಾನು ಸಂಸ್ಕೃತ ಮತ್ತುಕನ್ನಡದಲ್ಲಿನೀರ್ಚಾಲಿನಲ್ಲಿ ಡಿಗ್ರಿ ಪಡೆದನಂತರ ಮಂಗಳೂರಿಗೆಹೋಗಿ,ಆ ಕಾಲದಲ್ಲಿ ಬ್ರಿಟಿಷರು ರಾಜ್ಯವಾಳುತ್ತಿದ್ದುದರಿಂದ ಇಂಗ್ಲಿಶ್ಕಲಿಬೇಕಾಗಿ ಬಂದೀತು ಎಂಬ ಅಭಿಪ್ರಾಯಬಂತು ನನಗೆ. ಬ್ರಿಟಿಷರು ಹೊರಟುಹೋಗಲಿಕ್ಕೆ ಸಾಧಾರಣಸಿದ್ಧತೆ ಆಗಿದೆ, ಅವರನ್ನುಹೊರಗೆ ಕಳಿಸಲಿಕ್ಕೆ. ಆದರೂ ಇದ್ದರುಅವರು. ಆ ಕಾಲಕ್ಕೆಅವರು ಇರುವಾಗ ಇಂಗ್ಲಿಷ್ ಕಲಿಯದೇ ಅವರೊಂದಿಗೆಮಾತಾಡುವುದು ಹೇಗೆ ಅಂತೇಳಿ ನನಗೆ ಕನ್ನಡ,ಸಂಸ್ಕೃತ ಉಭಯಭಾಷೆಗಳಲ್ಲಿ ಒಳ್ಳೆಯ ಅಂಕ ಸಿಕ್ಕಿಪದವಿಪಡೆದರು ಕೂಡ ನಾನು ಮಂಗಳೂರಿಗೆ ಹೋಗಿ ಕಲಿತೆ. ಮಂಗಳೂರಿಗೆ ಹೋಗಿ ಕಲಿತ ನಂತರ ಸಾಮಾನ್ಯವಾಗಿ ಈ ಸಂಸ್ಕೃತ, ಕನ್ನಡ ಡಿಗ್ರಿ ಪಡೆದವರು ಉಪಾಧ್ಯಾಯರಾಗುವುದೇ ಹೆಚ್ಚಿನ ಒಂದು ವಿಷಯ. ನಾನು ಅದಕ್ಕೆ ಹೋಗಲಿಲ್ಲ. ನಾನು ಮಂಗಳೂರಲ್ಲಿ ಪತ್ರಿಕೋದ್ಯಮಿಯಾದೆ. ಶಾರದಾ ಪ್ರೆಸ್ ಅಂತ ಒಂದು ಪ್ರೆಸ್ ಉಂಟಲ್ಲ ಅಲ್ಲಿ ಸ್ವದೇಶಾಭಿಮಾನಿ ಅಂತೊಂದು ಪತ್ರಿಕೆ ಇತ್ತು. ಆ ಸ್ವದೇಶಾಭಿಮಾನಿ ಪತ್ರಿಕೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಪತ್ರಿಕೆ. ನನ್ನನ್ನು ಅದರಲ್ಲಿ ಉಪ ಸಂಪಾದಕನನ್ನಾಗಿ ಸೇರಿಸಿಕೊಂಡರು. ನನಗೆ ಒಳ್ಳೆ ಬಹುಮಾನ, ಮರ್ಯಾದೆ, ಗೌರವ ಸಹ ಕೊಟ್ರು ಅವರು. ಯಾಕಂದ್ರೆ ಅವರ ಗ್ರಹಿಕೆಯಲ್ಲಿ ನಾನು ಅಷ್ಟು ತಿಳುವಳಿಕೆ ಇದ್ದವನು ಅಂತ.... ಹಾಗಾಗಿ ಸ್ವಲ್ಪ ಕಾಲದಲ್ಲಿಯೇ, ನಾನು ಬರೆದದ್ದುಪ್ರಕಟ ಮಾಡಬೇಕಾದರೆ ಓದಿ ನೋಡುತ್ತಿದ್ದವರು, (ನಾನು ಉಪಸಂಪಾದಕ. ಸಂಪಾದಕರು ಬೇರೆ ಅವರಲ್ಲೇ ಇದ್ದರು ಕಾಮತ್ ಅಂತ) ಆಮೇಲೆ ಅವರು ನಾನು ಬರೆದದ್ದು ನೋಡಲೇ ಇಲ್ಲ. ಯಾಕಂದ್ರೆ ಬರೆದದ್ದೆಲ್ಲ ಅತ್ಯಂತ ಉತ್ತಮವಾದ ಲೇಖನ ಎಂಬ ಅಭಿಮಾನದಿಂದ ಅವರು ನಾನು ಬರೆದದ್ದನ್ನು ನೋಡದೆ ಪ್ರೆಸ್ಸಿನ ಮುಖ್ಯಸ್ಥರಿಗೆ ಹೇಳಿದ್ರು 'ನೀನು ಪ್ರಿಂಟು ಮಾಡು' ಅಂತ , ಹಾಗೆ ನಾನು ಪ್ರಿಂಟು ಮಾಡಿಸಿದೆ.

ಪ್ರಶ್ನೆ ೨
ಮಂಗಳೂರಿನಿಂದ ಕಾಸರಗೋಡಿಗೆ ಹಿಂದುರಿಗಿದ್ದು, ಗ್ರಾಮ ಸ್ವರಾಜ್ಯದ ಕನಸು ಸಾಕಾರ.
ಉತ್ತರ
ಸ್ವದೇಶಾಭಿಮಾನಿ ಪತ್ರಿಕೆ ಪ್ರಾರಂಭದ ಕನ್ನಡ ಪತ್ರಿಕೆ ಮಂಗಳೂರಲ್ಲಿ. ಅದು ಬಹಳ ಪ್ರಸಾರ ಆಯಿತು, ಬಹಳ ಒಳ್ಳೆಯ ರೀತಿಯ ಪ್ರಸಾರ ಆಯಿತು. ಕಾರಂತರೇ ಮೊದಲಾದಂಥವರು ಅದನ್ನು ಬಹಳ ಗಣನೀಯವಾಗಿ ಹೊಗಳಿದರು.. ಅದು ಪೇಪರಲ್ಲಿ ಬಂತು. ಆಮೇಲೆ ಸ್ವಾತಂತ್ರ್ಯ ಸಿಗುತ್ತದೆ ಅನ್ನುವ ವಿಷಯ ಬಂತು. ಅದು ೧೯೪೭ನೇ ಇಸವಿಯಲ್ಲಿ. ಸ್ವಾತಂತ್ರ್ಯ ನಮಗೆ ಸಿಕ್ಕಿತಲ್ಲ, ಆಗ ನನಗೆ ಬೇಕಾದ ಎಲ್ಲಾ ಸೌಕರ್ಯಗಳು, ನನಗೆ ಬೇಕಾದ ಎಲ್ಲಾ ಅನುಕೂಲಗಳು ಮಂಗಳೂರಲ್ಲಿ ಇದ್ದರು ಕೂಡ.... ನಾನು ಕನ್ನಡ ಸಮ್ಮೇಳನ ಮಾಡಿಸಿದ್ದೇನೆ ಮಂಗಳೂರಲ್ಲಿ; ಉಡುಪಿಯಿಂದ, ಕುಂದಾಪುರದಿಂದ, ಬೆಂಗಳೂರಿಂದ, ಮೈಸೂರಿಂದ, ಧಾರವಾಡದಿಂದ ಎಲ್ಲ ಕನ್ನಡದ ಧುರೀಣರನ್ನು ಬರಮಾಡಿಕೊಂಡು ದೊಡ್ಡ ಕನ್ನಡ ಸಮ್ಮೇಳನ ಮಾಡಿಸಿದ್ದೇನೆ , ತುಳು ಸಮ್ಮೇಳನ ಮಾಡಿಸಿದ್ದೇನೆ , ಭಾರೀ ದೊಡ್ಡದು, ಮಂಗಳೂರು ಪೇಟೆಯಲ್ಲಿ ಅಷ್ಟು ದೊಡ್ಡ ಸಮ್ಮೇಳನವೇ ಆಗಲಿಲ್ಲ, ಹಾಗೆ ಮಾಡಿಸಿದ ಮೇಲೆ... ಸ್ವಾತಂತ್ರ್ಯ ಬಂತು ೪೭ಕ್ಕೆ. ಆಗ ನಾನು ಪ್ರೆಸ್ಸಿನವರತ್ರ ಹೇಳಿದೆ, ನನಗೆ ಇನ್ನು ಈ ಮಂಗಳೂರಲ್ಲಿ ಇರಲಿಕ್ಕೆ ಮನಸಿಲ್ಲ. ಗಾಂಧೀಜಿ ಒಂದು ಸಂದೇಶ ಕಳಿಸಿದ್ದಾರೆ, "ಯಾರು ದೇಶಕ್ಕಾಗಿ ಹೋರಾಟ ಮಾಡಲಿಕ್ಕೆ ಪೇಟೆ, ಪಟ್ಟಣಗಳಲ್ಲಿ ಬೇಕಾದಷ್ಟು ಕೆಲಸ ಮಾಡಿದ್ದಾರೋ ಅವರು ಅವರ ಗ್ರಾಮಗಳಿಗೆ ಹೋಗಬೇಕು. ನಾನು ಸ್ವಾತಂತ್ರ್ಯ ಸಿಗಲಿಕ್ಕೆ ಒಳ್ಳೆ ಪ್ರಯತ್ನ ಮಾಡಿದ್ದೇನೆ, ಅದೇ ರೀತಿ ಸ್ವಾತಂತ್ರ್ಯ ಸಿಕ್ಕಿತು, ನಾನು ಎಮ್ಮೆಲ್ಲೆ, ಎಂಪಿ ಆಗಬೇಕು ಅಂತ ಯಾರೂ ಗ್ರಹಿಸಲಿಕ್ಕೆ ಕೂಡದು, ಅವರು ಅದನ್ನು ಬಿಟ್ಟು ಅವರ ಹಳ್ಳಿಗೆ ಹೋಗಿ , ಹಳ್ಳಿಯ ಉದ್ಧಾರದ ಕೆಲಸ ಆಗಬೇಕಾದ್ದು ಮುಖ್ಯ, ಯಾಕಂದ್ರೆ , ಹಳ್ಳಿ ಎನ್ನುವಂಥದ್ದು ನಮ್ಮ ರಾಷ್ಟ್ರದ ಪಂಚಾಗ, ಫೌಂಡೇಶನ್. ಹಳ್ಳಿಯ ಪಂಚಾಂಗದ ಮೇಲೆ ನಮ್ಮ ರಾಷ್ಟ್ರವೆನ್ನುವ ಮಹಾ ಕಟ್ಟಡ ಆಗುತ್ತದೆ. ಇಂತಿರುವ ಫೌಂಡೆಶನ್ ಗಟ್ಟಿ ಇಲ್ಲದಿದ್ರೆ ಮೇಲಿರುವ ಮನೆ ಕೂಡ ಕುಸಿದು ಬಿದ್ದೀತು. ಹೀಗಾಗಿ ದೇಶದ ಸ್ವಾತಂತ್ರ್ಯಕ್ಕೆ ಪ್ರಯತ್ನ ಮಾಡಿದಂಥವರು 'ನಮಗೆ ಸಂಪೂರ್ಣ ಒಳ್ಳೆಯದಾಗಬೇಕಾದರೆ ಅವರು ನಮಗೆ ಪವರ್ ಸಿಗಬೇಕು ಸ್ವಾತಂತ್ರ್ಯ ಬಂದ ನಂತರ, ಅಂತ (ಯೋಚಿಸಿ) ಪೇಟೆಯಲ್ಲಿರದೆ, ಹಳ್ಳಿಗೆ ಹೋಗಿ ಅಲ್ಲಿ ದುಡಿಯಬೇಕು. "

ನನಗೆ ಅದು ಒಳ್ಳೆಯ ಪ್ರೇರಣೆಯಾಯಿತು. ನಾನು ೪೭ನೆ ಇಸವಿ ಆ ಪ್ರಾರಂಭದ ದಿವಸವೇ ಇಲ್ಲಿ ಹೊರಟು ಬಂದೆ. ಇಲ್ಲಿ ಬಂದು, ನೀವು ಬಂದಂಥ ರಸ್ತೆ ಉಂಟಲ್ಲ ಅದು ಕಾಲಲ್ಲಿ ನಡಿಲಿಕ್ಕೆ ಕಷ್ಟವಾಗುವ ರೀತಿಯ ಒಂದು ಹಳ್ಳಿಯ ದಾರಿ. ಕಾಲಲ್ಲಿ ನಡಿಯುವಾಗ್ಲೂ ಕಾಲಿಗೆ ಇದು (ಮುಳ್ಳು?) ತಾಗ್ತದೆ ಅಂಥಾದ್ದು. ಅದನ್ನು ಒಳ್ಳೆ ರೀತಿಯಲ್ಲಿ ಮಾರ್ಗ ಮಾಡಿಸಿದೆ. ಅದಕ್ಕೆ ಬೇಕಾದ --ಆಚೆಗೆ ಒಂದು ಹೊಳೆ ಉಂಟು. ಆ ಹೊಳೆಗೆ ಸಂಕ ಹಾಕದಿದ್ರೆ ತೊಂದರೆ ಅಂತೇಳಿ ಸರ್ಕಾರಕ್ಕೆ ಹೋಗಿ ಅಲ್ಲಿನ ಮುಖ್ಯಸ್ಥರತ್ರ ಮಾತಾಡಿ ಅದಕ್ಕೆ ಸಂಕ ಹಾಕಿಸಿದೆ. ಹಾಗೆ ಕುಂಡಾಜೆವರೆಗೆ ಎಲ್ಲ ದಾರಿಗಳಿಗೂ ಉತ್ತಮ ರೀತಿಯ ಮಾರ್ಗಗಳನ್ನು ನಾನು ಮಾಡಿಸಿದೆ. ಅದಕ್ಕೆ ಸರ್ಕಾರದ ಹಣವನ್ನು ಆಗಾಗ ನಾನು ಕೇಳಿದಾಗ ಕೊಡ್ತಾ ಇದ್ರು. ನನ್ನನ್ನು ಪಂಚಾಯತ್ ಪ್ರೆಸಿಡೆಂಟ್ ಮಾಡಿ ೧೨ ವರುಷ ನಾನು ಎಡೆಬಿಡದೆ ಈ ಗ್ರಾಮೋದ್ಧಾರದ ಕೆಲಸ ಮಾಡಿದೆ. ಅದರಲ್ಲಿ ಒಂದು ಶಾಲೆ, ಒಂದು ಶಾಲೆ ಅಂದ್ರೆ ನಮ್ಮ ಮನೆ ಎದುರುಗಡೆ ದೊಡ್ಡ ಒಂದು ವಿದ್ಯಾಗಿರಿ ಅಂತ ಒಂದು ಶಾಲೆ ಉಂಟು. ಅದಕ್ಕೆ ಆರು ಗಂಟೆ ನಂತರ ಯಾರಾದ್ರೂ ಆ ಕಡೆ ಹೋದ್ರೆ "ಉಳಿಗವನು(?) " ಹೊಡೆದು ಕೊಲ್ಲುತ್ತಾನೆ. ೬ ಗಂಟೆವರೆಗೆ ಆಚೀಚೆ ಹೋಗಬಹುದು. ಆ ಗುಡ್ಡೆ ಖಾಲಿ ಇತ್ತು. ನನಗೆ ವಿಶ್ವಾಸವನ್ನು ಬಂಧ ಮಾಡ್ಲಿಕ್ಕೆ ಏನು ಮಾಡಬೇಕು ಅಂತೇಳಿ ನಾನು ಅಲ್ಲಿ ಒಂದು ಶಾಲೆ ತೆಗೆದೆ.. ಆ ಶಾಲೆಗೆ ನನ್ನ ಪ್ರಾರಂಭದ ಅಧ್ಯಾಪಕರು ಪಂದಿರಿಕೆಯ ಅನಂತಭಟ್ರು ಅಂತ. ಅವರು ಕೊನೆವರೆಗೂ ನನ್ನ ಮೇಲೆ ಭಾಳ ಪ್ರೀತಿ ಇದ್ದವರು. ಅವರ ಹೆಸರಿಟ್ಟು ಅದನ್ನು ಹಿರಿಯ ಪ್ರಾಥಮಿಕ ಶಾಲೆ ಮಾಡಿದೆ. ಅಲ್ಲಿ ತುಂಬ ಜನ ಸೇರಿದ್ರು. ಅಲ್ಲೀಗ ಪೇಟೆಯೇ ಆಗಿದೆ. ಉಳಿಗವನೂ ಇಲ್ಲ ಯಾರೂ ಇಲ್ಲ. ಆಮೇಲೆ ನಮ್ಮಲ್ಲಿ ಹತ್ತಿರ ದೇವಸ್ಥಾನ ಉಂಟು ಕುಂಟಿಕಾನ ದೇವಸ್ಥಾನ ಅಂತ. ಆ ದೇವಸ್ಥಾನದ ಹತ್ತಿರ ದೇವಸ್ಥಾನದವರೇ ಒಂದು ಶಾಲೆ ಮಾಡಿದ್ದಾರೆ. ಅಲ್ಲಿಗೆ ಹರಿಜನರನ್ನು ಬಿಟ್ಟು ಬಾಕಿಯವರನ್ನು ಸೇರಿಸ್ತಿದ್ರು, ಅದು ಪ್ರಾಚೀನ ದೇವಸ್ಥಾನ ಆಗಿತ್ತು. ಅಲ್ಲಿಯೇ ಒಂದು ಹರಿಜನರ ಶಾಲೆ ಮಾಡಿಸಿದೆ. ೨ ಹರಿಜನ ಶಾಲೆಗಳನ್ನು ಮಾಡಿಸಿದೆ. ಆಮೇಲೆ ಹರಿಜನರಿಗೆ ಬೇಕಾದ ಉದ್ಯೋಗ ಕೊಟ್ಟೆ, ಇಲ್ಲಿ ಈ ಊರಲ್ಲಿ ಒಳ್ಳೆಯ ಡಾಕ್ಟ್ರು ಇರ್ಲಿಲ್ಲ. ಡಾಕ್ಟ್ರು ಇದ್ರೂ ಕೂಡ ಅವರಿಗೆ ದುಡ್ಡು ಕೊಡಬೇಕು ಬೇಕಾದಷ್ಟು. ಹಾಗಾಗಿ ಧರ್ಮಾರ್ಥವಾಗಿ ಮದ್ದು ಮಾಡುವಂಥ ಡಾಕ್ಟ್ರು ಸಿಗಬೇಕು ಅಂತ ಪಂಚಾಯತಿನ ಮೂಲಕ ಉಚಿತ ಚಿಕಿತ್ಸೆ ಮಾಡತಕ್ಕಂಥ ಡಾಕ್ಟರನ್ನು ನೇಮಕ ಮಾಡಿಕೊಂಡು ಕಣ್ಣಿನ ಮತ್ತು ಮೆದುಳು ಈ ಎಲ್ಲ ವಿಷಯಗಳಲ್ಲಿ ಪರಿಶ್ರಮ ಇದ್ದವರನ್ನು ನೇಮಿಸಿದೆ , ಈಗಲೂ ಅವರು ಅಲ್ಲಿ ಇದ್ದಾರೆ , ಅವರಿಗೆ ಒಳ್ಳೊಳ್ಳೆ ಕಟ್ಟಡ ಕೂಡ ತಯಾರಾಯಿತು. ಏಳು ವರ್ಷವೋ ಅಂತ ಕಾಣ್ತದೆ ಅಥವಾ ಹನ್ನೆರಡು ವರ್ಷವೋ, ನಾನು ಪಂಚಾಯತ್ ಪ್ರೆಸಿಡೆಂಟ್ ಆಗಿದ್ದು ಹಳ್ಳಿಯ ಉದ್ಧಾರದ ಕೆಲಸ ಮಾಡಿ , ಹಳ್ಳಿಯನ್ನು ಚಂದ ಮಾಡ್ಲಿಕ್ಕೆ ಪ್ರಯತ್ನ ಪಟ್ಟೆ, ಹಳ್ಳಿ ಚಂದ ಆಯಿತು ಕೂಡ. ಆಮೇಲೆ ನಾನು ಬಿಟ್ಟೆ. ನಾನು ನಿವೃತ್ತನಾದ ಮೇಲೆ ಇಲ್ಲಿ ಮನೆಯಲ್ಲಿ ಕೂತೆ, ನಿಜವಾಗಿ ಪ್ರಾಯದಲ್ಲೂ ನಿವೃತ್ತನಾನು , ಹಾಗೆ ನಾನು ಮುಂದೆ ಸ್ಪರ್ಧಿಸಲೇ ಇಲ್ಲ.

ಪ್ರಶ್ನೆ ೩
ಕವಿತಾಕುಟೀರ, ಕಾವ್ಯ ಜೀವನ ಕುರಿತು.
ಉತ್ತರ
ಪೆರಡಾಲ ಅನ್ನುವಂಥ ಗ್ರಾಮ, ನನ್ನ ಹುಟ್ಟಿದ ಊರಿನ ಗ್ರಾಮ. ಅಳಿಯಕಟ್ಟಿನ ಪ್ರಕಾರ ನನ್ನ ತಲವಾಡು ಮನೆ ಮಂಜೇಶ್ವರ ಮಾಗಣೆಯಲ್ಲಿ ಉಂಟು , ಕಯ್ಯಾರು. ಕಯ್ಯಾರಿನಲ್ಲಿಯೂ ಅದರ ಈಚೆಗಿನ ಗ್ರಾಮ ಕುಂಡೇರಿಯಲ್ಲಿಯೂ ೨ ಮನೆಗಳಿದ್ದವು ಈಗ ಪಾಲು ಮಾಡಿ ಯಾರಾರಿಗೆ ಕೊಟ್ಟಿದ್ದಾರೆ. ೨ ಮನೆಗಳು ಪ್ರಾರಂಭದಲ್ಲಿ ಇದ್ದವು. ಪಸರಿಗೊಂಪೆಯ (?) ಬಲಕ್ಕೆ ಕಯ್ಯಾರು , ಎಡದಿಕ್ಕಿಗೆ ಕುಂಡೇರಿ ಮನೆ , ಅವು ೨ ಮನೆಗಳು ನಮಗೆ ಪ್ರಾರಂಭದಲ್ಲಿ ಇದ್ದವು. ಈಗ ಕಯ್ಯಾರು ಮನೆ ಉಂಟು. ಇದ್ರೂ ಕೂಡ ಅದರ ಮೇಲೆ ಕೆಳಗೆ ಎಲ್ಲ ಯಾರ್ಯಾರಿಗೆ ಮಾರಾಟ ಮಾಡಿದ್ದಾರೆ. ನಾನು ಈಗ ಅಲ್ಲಿ ಹೋಗುದಿಲ್ಲ, ಕಯ್ಯಾರು ಮನೆಗೆ ಹೋಗುದೇ ಇಲ್ಲ. ನನಗೆ ಬೇಕಾಗಿ ಇಲ್ಲಿ ಕವಿತಾ ಕುಟೀರ ಎಂಬ ಮನೆಯನ್ನು ಕಟ್ಟಿಸಿದೆ. ಕುಟೀರ ಅಂದರೆ ಸಂಸ್ಕೃತದಲ್ಲಿ ಗುಡಿಸಲಿಗೆ ಹೆಸರು. ಗುಡಿಸಲು ಅಂತ ಹೇಳಿದ್ರೆ ಯಾರಾದ್ರು ತಮಾಷೆ ಮಾಡಿಯಾರು. ಸಂಸ್ಕೃತ ಗೊತ್ತಿಲ್ಲದವರು ಕುಟೀರ ಅಂದರೆ ಮನೆ ಅಂತ ಇರಬಹುದೇನೋ ಎಂದು ತಿಳಿದುಕೊಳ್ಳುತ್ತಾರೆ ! ಕವಿತಾ ಕುಟೀರದಲ್ಲಿ ಇದ್ದೇನೆ ಈಗ. ಇಲ್ಲಿಗೆ ಅಖಿಲ ಕರ್ನಾಟಕದಿಂದಲೂ ಭಾರತದೇಶದಿಂದಲೂ ಅನೇಕರು ಬರ್ತಾರೆ ಆಗಾಗ. ನಾನು ಕವಿ ಎಂದು, ನಾನು ಕನ್ನಡದ ಅಭಿಮಾನಿ ಎನ್ನುವಂಥದ್ದು, ಕನ್ನಡದಲ್ಲಿ ನನಗೆ ಬೇಕಾದ ಹಿಡಿತ ಉಂಟು , ಸ್ವಾಧೀನತೆ ಉಂಟು , ಅಭ್ಯಾಸ ಉಂಟು ಎನ್ನುವುದು ಗೊತ್ತಾಗಿ ಕನ್ನಡಿಗರು ಬಹಳ ನನ್ನನ್ನು ಮೆಚ್ಚಿದ್ದಾರೆ. ನಾನು ತುಳುವಿನಲ್ಲಿಯೂ ಕೂಡ ಅನೇಕ ಪುಸ್ತಕ ಬರೆದಿದ್ದೇನೆ. 'ಎನ್ನಪ್ಪೆ ತುಳುವಪ್ಪೆ' ಎಂದು ನಾನು ತುಳುವಿನಲ್ಲಿ ಬರೆದ ಪುಸ್ತಕ , ಅಂದರೆ "ನನ್ನ ತಾಯಿ ತುಳುತಾಯಿ" ಎನ್ನುವಂಥದ್ದು. ಹಾಗೆ ನಾನು ತುಳು ಕನ್ನಡ ೨ ಭಾಷೆಗಳಲ್ಲಿ ಕವಿತೆ ಬರಲಿಕ್ಕೆ ಸಾಧ್ಯ ಇದ್ದರೂ ಕೂಡ ಜನಕ್ಕೆ ಹೆಚ್ಚು ಕನ್ನಡದ ಅಭಿಮಾನ ಇರುವುದರಿಂದ ಕನ್ನಡದಲ್ಲೇ ಸುಮಾರು ೫೦ಕ್ಕಿಂತ ಹೆಚ್ಚು ಪುಸ್ತಕ ಬರೆದಿದ್ದೇನೆ. ಆ ಪುಸ್ತಕಗಳನ್ನು ಪ್ರಿಂಟು ಮಾಡಿದವರು ಶಾರದಾ ಪ್ರೆಸ್ಸಿನವರು. ಆ ಶಾರದಾ ಪ್ರೆಸ್ ಭಾಳ ಪ್ರಸಿದ್ಧ ಪ್ರೆಸ್. ನಾನು ಇಲ್ಲಿ ಬಂದಾಗ ನನಗೆ ಸ್ವಲ್ಪ ಅಸೌಖ್ಯ ಆಯಿತು. ಆ ಅಸೌಖ್ಯ ಅದಾಗ ನಾವು ಪುನಃ ಮಂಗಳೂರಿಗೆ ಕ್ರಿಶ್ಚಿಯನ್ ಸಂಸ್ಥೆಯವರ ಆಸ್ಪತ್ರೆ ಉಂಟು ನೋಡಿ, ಆ ಆಸ್ಪತ್ರೆಗೆ ನಾನು ಚಿಕಿತ್ಸೆಗೆ ಹೋದೆ. ಅಲ್ಲಿ ಸ್ವಲ್ಪ ದಿವಸ ಮಲ್ಕೊಳ್ಬೇಕು ಅಂತೇಳಿದ್ರು. ನನ್ನ ತಾಯಿ ಕೂಡ ನನ್ನೊಟ್ಟಿಗೆ ಬಂದಿದ್ರೆ. ನಾನು ಅಲ್ಲಿ ರೂಂ ಮಾಡಿ ಅಲ್ಲಿ ಒಂದು ತಿಂಗಳವರೆಗೆ ಇದ್ದೇನೋ, ಸ್ವಲ್ಪ ಕಡಿಮೆ ಇದ್ದೇನೋ ಗೊತ್ತಿಲ್ಲ, ಅಲ್ಲಿ ಇದ್ದೆ. ಅಲ್ಲಿದ್ದಾಗ ನನಗೆ ಒಳ್ಳೆ ಚಿಕಿತ್ಸೆ ಅವರು ಮಾಡಿದ್ರು. ಯಾಕಂದ್ರೆ ನಾನು ಕವಿ ಎನ್ನುದು ಆಗಲೇ ಪ್ರಸಿದ್ಧ ಆಗಿತ್ತು, ನಾನು ಒಳ್ಳೆಯ ಪ್ರಸಿದ್ಧ ಕವಿ ಅಂತ, ಲೇಖಕ ಅಂತ ಅವರಿಗೆಲ್ಲ ಗೊತ್ತಿತ್ತು. ನನಗೆ ಚಿಕಿತ್ಸೆ ಮಾಡಿದವರು ಒಬ್ಬ ಗೌಡ ಸಾರಸ್ವತರು. ಅವರು ಏನಿದ್ರೂನಮ್ಮ ಊರಿನವರೇ ಅಲ್ವಾ, ಕಾರ್ಕಳದವರು. ನನಗೆ ಚಿಕಿತ್ಸೆ ಮಾಡಿ ಅವರು ನಾನು ಹೋಗುವವರೆಗೆ ನಿಂತು ನಂತರ ಅವರು ಅಲ್ಲಿ ಬಿಟ್ಟು ಅವರ ಊರಿಗೆ ಹೋದರು. ನನಗೆ ಗುಣವಾಯಿತು. ನನಗೆ ಗುಣವಾಗಿ ನಾನು ಊರಿಗೆ ಬಂದೆ , ಆಮೇಲೆ ಅಂತ ವಿಶೇಷ ಏನೂ ಆಗಲಿಲ್ಲ. ಇವತ್ತು ಕೂಡ ನನಗೆ ಶರೀರದಲ್ಲಿ ರೋಗ ಎನ್ನುವುದೇ ಇಲ್ಲ. ಅದು ಆ ಚಿಕಿತ್ಸೆಯದ್ದು. ನನಗೆ ಚಿಕಿತ್ಸೆ ಆಗುವಾಗ ಶಾರದಾ ಪ್ರೆಸ್ಸಿನ ಕಾಮತ್ ಅಂತ ಮ್ಯಾನೇಜರ್, ಅವರು ಸಂಚಾಲಕರು ಕೂಡ. ಅವರು ಆಸ್ಪತ್ರೆಗೆ ಬಂದು - ಆಗನಾನು ಉದ್ಯೋಗ ಬಿಟ್ಟಿದ್ದೇನೆ - ನನಗೆ ೨೦೦೦ ರುಪಾಯಿ ಕೊಟ್ಟರು ಚಿಕಿತ್ಸೆಗೆ. ಅಷ್ಟು ಕೂಡ ಪ್ರೀತಿ ನನ್ನ ಮೇಲೆ ಅವರಿಗೆ. ನಾನು ಆಮೇಲೆ ಇಲ್ಲಿಯೇ ಇದ್ದೆ. ಇಲ್ಲಿ ಇದ್ದರೂ ಹಳ್ಳಿಯ ಉದ್ಧಾರದ ಕೆಲಸ ಮಾಡುತ್ತಿದ್ದೆ. ಸುಮಾರು ೧೨ ವರ್ಷ ರಸ್ತೆ ಇಲ್ಲದಲ್ಲಿ ರಸ್ತೆಗಳನ್ನು, ಶಾಲೆಗಳಿಲ್ಲದಲ್ಲಿ ಶಾಲೆಗಳನ್ನು ಮಾರ್ಗಗಳಿಲ್ಲದಲ್ಲಿ ಮಾರ್ಗಗಳನ್ನು ಎಲ್ಲ ಮಾಡಿಸಿ ೧೨ ವರುಷ ಇದ್ದು- ನಾನು ಪಂಚಾಯತ್ ಅಧ್ಯಕ್ಷ ಆಗಬೇಕು ಅಂತ ಊರವರು ಹೇಳಿದ್ರು - ನಾನು ಪಂಚಾಯತ್ ಪ್ರೆಸಿಡೆಂಟ್ ಆಗಿ ೧೨ ವರ್ಷ ನಂತರ ನಿವೃತ್ತ ಆದೆ. ಆಗ ನನ್ನ ಪಂಚಾಯತಿಗೂ, ನನಗೂ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಬಂತು. ಬದಿಯಡ್ಕ ಪಂಚಾಯತು ಇಡೀ ರಾಷ್ಟ್ರದಲ್ಲೇ ಅತ್ಯುತ್ತಮ ಪಂಚಾಯತ್ ಅಂತ ದಾಖಲೆ, ಪ್ರಮಾಣ ಪತ್ರ ಬಂತು ನನಗೆ. ಅದು ನನಗೆ ಸಂತೋಷದ ವಿಷಯ. ನಾನು ಹಳ್ಳಿಗೆ ಹೋಗಿ ಹಳ್ಳಿಯ ಪಂಚಾಯತಿನಲ್ಲಿ ಕೆಲಸ ಮಾಡಿ , ಭಾರತ ಸರ್ಕಾರವೇ ನನ್ನ ಆಡಳಿತ ಒಳ್ಳೇದು ಅಂತ ಗುರುತಿಸಿದ್ದು ನನಗೆ ಒಂದು ಅಭಿಮಾನ. ಅದನ್ನು ನಾನು ಎಲ್ಲೂ ಪ್ರಕಟ ಮಾಡಲಿಲ್ಲ ಯಾರ ಹತ್ರ ಕೂಡ, ಬಂದವರ ಹತ್ರ ಮಾತ್ರ ಹೇಳಿದೆ. ನನಗೆ ಪ್ರಶಸ್ತಿ ನಾನು ನಿವೃತ್ತನಾಗುವಾಗ ಬಂದಿದೆ. ನಿವೃತ್ತ ಆಗಲಿಕ್ಕೆ ಒಂದು ಪ್ರಾಯ ಉಂಟು ನೋಡಿ , ಆ ಪ್ರಾಯಕ್ಕಿಂತ ಹೆಚ್ಚು ಪಂಚಾಯತ್ ಅಧ್ಯಕ್ಷ ಅಥವಾ ಸದಸ್ಯ ಸಹಿತಾ ಆಗಲಿಕ್ಕೆ ಸಾಧ್ಯ ಇಲ್ಲ. ಹಾಗೆ ನಿವೃತ್ತ ಆದ ದಿವಸವೇ ಪ್ರಶಸ್ತಿ ಬಂದಿದೆ ನನಗೆ - ಅತ್ಯುತ್ತಮ ಅಧ್ಯಕ್ಷ ಅಂತ ರಾಷ್ಟ್ರ ಪ್ರಶಸ್ತಿ ಬಂತು.

ಪ್ರಶ್ನೆ ೪
ಕಾಸರಗೋಡು ಹೋರಾಟ.
ಉತ್ತರ
ಹೀಗೆ ನಾನು ಹೋದಲ್ಲೆಲ್ಲ ಆದಷ್ಟು ದುಡಿಮೆ ಮಾಡಿದೆ. ಕಾಸರಗೋಡು ಪ್ರಾಚೀನ ಕಾಲದಲ್ಲಿ ಕರ್ನಾಟಕದ್ದು. ಅಲ್ಲಿ ಕನ್ನಡಿಗರು , ತುಳುವರು ಹೆಚ್ಚು ಮಂದಿ ಇದ್ರು. ಮಲಯಾಳಿಗಳು ಅಷ್ಟು ಇರಲಿಲ್ಲ, ಬಹಳ ಕಡಿಮೆ. ಮಲಯಾಳಿಗಳು ಅಂದರೆ 'ಮಣಿಯಾಣಿಗಳು' ಅಂತ ಇದ್ದಾರಲ್ಲ ಒಂದು ಜನಾಂಗ, ಅವರು ಇಲ್ಲಿ ಕೇರಳಕ್ಕೆ ಹತ್ರ ಅದ್ದರಿಂದ ಮಲಯಾಳ ಮಾತಾಡ್ತಾ ಇದ್ರು, ಮಂಗಳೂರಿಗೆ ಹೋದ್ರೆ ತುಳು ಮಾತಾಡುದು. ಅಂಥದ್ದು. ಹಾಗೆ ಕಾಸರಗೋಡು ಎನ್ನುವುದೇ ಒಂದು ಕನ್ನಡ ಜಿಲ್ಲೆ ಆಗಿತ್ತು ಪ್ರಾರಂಭದಲ್ಲಿ. ಕಾಸರಗೋಡು ಕನ್ನಡ ಜಿಲ್ಲೆ. ಅದಕ್ಕೆ ಮಲಯಾಳದ ಸಂಪರ್ಕವೇ ಇಲ್ಲ. ರಾಷ್ಟ್ರದ ಭಾಷಾವಾರು ವಿಭಜನೆ ಆಗಬೇಕು ಅಂತ ನಿರ್ಧಾರ ಆಯಿತು ಸರ್ಕಾರದಿಂದ. ಆಗ ಒಂದು ಸಮಿತಿ ಆಯಿತು , ಆ ಸಮಿತಿಯ ಹೆಸರು ಮರೆತು ಹೋಗಿದೆ ನನಗೆ. ಅದರಲ್ಲಿ ಒಬ್ಬ ಬ್ಯಾರಿಶ್ (?) ಮಲಯಾಳಿ ಕೂಡ ಇದ್ರೂ. ಅವರು ಏನೋ ಒಂದು ತನಿಖೆ ಆಗುವಾಗ ಕಾಸರಗೋಡು ಕರ್ನಾಟಕದ್ದೇ ಅಂತ ಎಲ್ಲರತ್ರ ಹೇಳಿದ್ರು. ಇದರ ಮುಖ್ಯಸ್ಥರಾದಂಥ ದೊಡ್ಡ ರಾಷ್ಟ್ರವಾದಿ, ಹೋರಾಟದಲ್ಲಿ ಸೆರೆಮನೆಗೆಲ್ಲ ಹೋದಂತಹ ಉಮೆಶರಾಯರು, ಆಮೇಲೆ … (ವರದಿಯಲ್ಲಿ)ನೀವು ಅದನ್ನೇ ಹೇಳಿ ಅಂದರು. ಆದರೆ ಕೇಂದ್ರ ಸರ್ಕಾರದ ವರದಿ ಬರುವಾಗ ಕಾಸರಗೋಡು ಕರ್ನಾಟಕದ್ದಲ್ಲ, ಮಲಯಾಳಕ್ಕೆ ಸೇರಬೇಕು ಅಂತ ಅವರು ಹೇಳಿದ್ರು , ಮಲಯಾಳಿ ಅವರು. ಅದಕ್ಕೆ ಬಹಳ ದೊಡ್ಡ ಹೋರಾಟ ಆಯಿತು. ಶಾಲೆ ವಿದ್ಯಾರ್ಥಿಗಳು ಶಾಲೆ ಬಿಟ್ಟು ಮೆರವಣಿಗೆ ಮಾಡಿದ್ರು. ನಾವು ಪೇಪರ್ ನಲ್ಲೆಲ್ಲ ಹೆಸರು ಹಾಕಿ ಹೇಳಿಕೆ ಕೊಟ್ಟೆವು. ಆಗ ಪುನಃ ಅದಕ್ಕೆ ತನಿಖೆಗೆ ಒಬ್ಬ ನಿವೃತ್ತ ಮುಖ್ಯ ನ್ಯಾಯಾಧೀಶರನ್ನು ಕಳಿಸಿದರು. ಅವರು ಕಾಸರಗೋಡು ಸಂಪೂರ್ಣ ಕರ್ನಾಟಕಕ್ಕೆ ಸೇರಬೇಕು ಅಂತ ದಾಖಲೆ ಮಾಡಿದ್ದಾರೆ. ಆ ದಾಖಲೆ ಕೇಂದ್ರ ಸರ್ಕಾರದ ದಾಖಲೆಯಲ್ಲಿ ಉಂಟು. ಅವರು ರಾಜ್ಯ ಸರ್ಕಾರಕ್ಕೆ ಅದನ್ನು ಕಳಿಸಬೇಕು, ಅಥವಾ ರಾಜ್ಯಸರ್ಕಾರದವರು ಅವರತ್ರ ಕೇಳಬೇಕು. ರಾಜ್ಯಸರ್ಕಾರದವರು ಅವರತ್ರ ಇದುವರೆಗೆ ಕೇಳಲೇ ಇಲ್ಲ. ಯಾಕೆ ಕೇಳಲಿಲ್ಲ ಅಂದ್ರೆ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚು ಜನ , ಆಮೇಲೆ ಸ್ವಲ್ಪ ಗೌಡರು ಇದ್ದಾರೆ. ಅವರಿಗೆ ಇಲ್ಲಿ ಯಾರು ಇಲ್ಲ (ನಗು). ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಂತ ದಾಖಲೆ ಆಗಿದೆ. ಅದನ್ನು ಕೊಡಿ ಅಂತ ಕೇಳಬೇಕಾದವರು ಕರ್ನಾಟಕ ಸರ್ಕಾರ. ಅವರು ಸುಮ್ಮನೆ ಕೂತಿದ್ದಾರೆ ಇದುವರೆಗೆ, ಮಾತಾಡುದಿಲ್ಲ. ಒಬ್ಬನಾದರೂ ಇಲ್ಲ್ಲಿಂದ ಬರುವವನು ಲಿಂಗಾಯತನಾಗಲೀ , ಅಥವಾಗೌಡನಾಗಲೀ ಇರುವುದಿಲ್ಲ. ಅವರಿಗೆ ಇದನ್ನು ಕೇಳಿ ಏನು ಪ್ರಯೋಜನ?

ಆದರೆ ಇದನ್ನು ನಿಜಲಿಂಗಪ್ಪನವರು ಬಹಳ ಸಂತೋಷದಿಂದ ಅದನ್ನು ಒಪ್ಪಿದ್ದರು. ಪ್ರತಿ ವಾರಕ್ಕೆ ಒಂದು ಕಾಗದ ಬರಿತಿದ್ರು, ಅದು ಹಾಗೆ ಉಂಟು ಇನ್ನೂ. ನಿಜವಾಗಿ ಸರ್ಕಾರದ ಲೆಕ್ಕದಲ್ಲಿ ಸೇರಬೇಕು ಅಂತ ರೆಕಾರ್ಡ್ ಆಗಿದೆ, ಆದರೆ ಕರ್ನಾಟಕಕ್ಕೆ ಸೇರಿಸುವ ಕೆಲಸ ಮಾತ್ರ ಆಗಲಿಲ್ಲ. ಯಾಕಂದ್ರೆ ಕರ್ನಾಟಕ ಸರ್ಕಾರದ ಮುಖ್ಯಸ್ಥರು ಕೇಳಲಿಲ್ಲ, ಆದರೆ ನಿಜಲಿಂಗಪ್ಪನವರು ಮಾತ್ರ ಕೇಳಿದ್ದಾರೆ, ಒಪ್ಪಿದ್ದಾರೆ. ನಿಜಲಿಂಗಪ್ಪನವರು ಅಧ್ಯಕ್ಷರಾಗಿದ್ದಾಗ ನಾವು ವಿಧಾನಸೌಧದ ಮುಂಭಾಗದಲ್ಲಿ ಸಭೆ ಸಹ ಮಾಡಿದ್ದೇವೆ. ನಿಜಲಿಂಗಪ್ಪನವರು ತೀರಿ ಹೋದರಲ್ಲ ಪ್ರಾಯ ಆಗಿ , ಆಮೇಲೆಇನ್ನೂ ಅದು ಹಾಗೆಯೇ ಉಂಟು. ಇದನ್ನು ನಮಗೆ ಕೊಡಿ ಅಂತ ಕರ್ನಾಟಕದ ಒಬ್ಬ ಮಂತ್ರಿ ಕೂಡ ಕೆಳುದಿಲ್ಲ. ಹೀಗೆ ಜಡ್ಜಿ(?) ಯಲ್ಲಿ ಕರ್ನಾಟಕ್ಕೆ ಸೇರಬೇಕು ಕಾಸರಗೋಡು ಅಂತ ರೆಕಾರ್ಡ್ ಅದರೂ ಕೂಡ ಸೇರಿಸಬೇಕು ಅಂತ ಒಪ್ಪದೇ ಅದು ಹಾಗೆಯೇ ಉಂಟು. ನಾವು ಅದಕ್ಕೆ ಬೇಕಾಗಿ ಬೇಕಾದಷ್ಟು ಚಳುವಳಿ ಮಾಡಿದ್ದೇವೆ , ಜನರಿಗೆ ಗೊತ್ತಾಗಿದೆ, ಸರ್ಕಾರಕ್ಕೆ ಗೊತ್ತಾಗಿದೆ , ಮತ್ತೆ ಎಲ್ಲ ಮುಖಂಡರಿಗೆ ಗೊತ್ತಾಗಿದೆ , ಆದ್ರೆ ಅವರು ಮಾತಾಡುದಿಲ್ಲ ಅವರು ಸೇರಿಸುವ ಕೆಲಸ ಮಾಡುದಿಲ್ಲ. ಭಾಗ ಆಗುವ ರೆಕಾರ್ಡ್ ಇರುವುದು ಕೇಂದ್ರ ಸರ್ಕಾರದಲ್ಲಿ. ಆ ರೆಕಾರ್ಡನ್ನು ಸ್ಟೇಟ್ ಗವರ್ಮೆಂಟ್ ಜಾರಿ ಮಾಡಬೇಕು, ಹಾಗೆ ಮಾಡಲಿಲ್ಲ ಇದುವರೆಗೆ. ಮಾಡದಿದ್ದರೂ ಕೂಡ ಈ ಕಾಸರಗೋಡು ಕರ್ನಾಟಕದ್ದೇ, ಕರ್ನಾಟಕದ ಪ್ರತ್ಯೇಕ ಒಂದು ಜಿಲ್ಲೆಯೇ ಆಗಿತ್ತು.

ಪ್ರಶ್ನೆ ೫
ನಿಮ್ಮ ಜೊತೆಯಲ್ಲಿ ಕರ್ನಾಟಕಕ್ಕೆ ಸೇರಬೇಕು ಅನ್ನುವ ಹೋರಾಟದಲ್ಲಿ ಯಾರೆಲ್ಲ ಭಾಗವಹಿಸಿದರು?

ಕಯ್ಯಾರ ಕಿಞ್ಞಣ್ಣ ರೈ -ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟದಲ್ಲಿ ಇಲ್ಲಿನ ಬ್ರಾಹ್ಮಣರೆಲ್ಲರೂ ಹೆಚ್ಚಿನವರು, ಯಾರೂ ವ್ಯತ್ಯಾಸ ಮಾಡದೇ ಸೇರಿದ್ದರು. ಇಲ್ಲಿ ಬ್ರಾಹ್ಮಣ ಸಮುದಾಯ ಹೆಚ್ಚು, ಅದರಲ್ಲೂ ಹವೀಕರು ಹೆಚ್ಚು , ಅವರು ಎಲ್ಲರು, ಕಾಸರಗೋಡು ಕರ್ನಾಟಕಕ್ಕೇ ಸೇರಬೇಕು ಅಂತ ಹೇಳಿದ್ದಾರೆ, ಮಧ್ಯದಲ್ಲಿ ಈ ಬಂಟರು ಕೂಡ ಸೇರಬೇಕು ಅಂತ ಹೇಳಿದ್ದಾರೆ , ಅವರು ಮಲಯಾಳಕ್ಕೆ ಸೇರಬೇಕು ಅಂತ ಅಪೇಕ್ಷೆ ಪಡಲಿಲ್ಲ. ಅವರು ಏನು ಅಪೇಕ್ಷೆ ಪಟ್ಟಿದ್ದಾರೆ ಅಂತ ಕೇಳಿ ಅದನ್ನು ಕಾನೂನು ಪ್ರಕಾರ ತಕೊಂಡು ಬರುವಂಥ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಹೀಗಾಗಿ ತೊಂದರೆ ಆಯಿತು.

ಪ್ರಶ್ನೆ ೬
ಈಗ ಹೇಗಿದೆ ಕನ್ನಡದ ಪರಿಸ್ಥಿತಿ?

ಕಯ್ಯಾರಕಿಞ್ಞಣ್ಣರೈ -ಈಗ , ಕನ್ನಡದ ಪರಿಸ್ಥಿತಿ ಅಂದರೆ ಕನ್ನಡಿಗರು ಇದ್ದಾರೆ, ಕನ್ನಡ ಶಾಲೆಗಳು ಉಂಟು. ಕನ್ನಡಕ್ಕೆ ಸೇರ್ತದೆ ಅನ್ನುವುದು, ರೆಕಾರ್ಡ್ ಆಗಿದೆ ಅನ್ನುವುದು ಕನ್ನಡಿಗರಿಗೆ ಗೊತ್ತುಂಟು, ಸೇರಲಿಲ್ಲ ಅದು ಹಾಗೆಯೇ ಉಂಟು , ಅದು ಕನ್ನಡಕ್ಕೆ ಸೇರದೆ ಇರುವುದಿಲ್ಲ ಎನ್ನುವ ಭಾವನೆಯೇ ಕನ್ನಡಿಗರಿಗೆ ಉಂಟು.

ಕನ್ನಡಿಗರಿಗೆ ನಾನುಹೆಚ್ಚು ಪರಿಚಯ ಆದದ್ದು ಒಳ್ಳೆಯ ಕವಿ ಅಂತಲೇ. ನನ್ನ ಕವಿತೆಗಳು ಸುಮಾರು ೩೫ ಕವಿತಾ ಪುಸ್ತಕಗಳು ಉಂಟು. ಎಲ್ಲವು ಅತ್ಯಂತ ಒಳ್ಳೆಯ ಪ್ರಸಾರದವು. ಆ ಪುಸ್ತಕಗಳು ಪ್ರಕಟ ಮಾಡಿದ ಕೂಡಲೆ ವಿಶ್ವವಿದ್ಯಾಲಯದ ಪಠ್ಯ ಆಗ್ತಿತ್ತು.

ಅವುಗಳನ್ನು ಎಲ್ಲ ಪಡೆದುಕೊಂಡು ಓದುವುದು ಯಾರಿಗಾದ್ರೂ ಕಷ್ಟ ಆದರೆ ಅದನ್ನು ಚೆನ್ನಾಗಿ ಸಂಗ್ರಹಿಸಬೇಕು ಅಂತೇಳಿ "ಶತಮಾನದ ಗಾನ" ಅಂತ ಪುಸ್ತಕ ನಾನೆ ಸಂಪಾದನೆ ಮಾಡಿದೆ. ಸಂಪಾದಿಸಿ ಒಂದೊಂದು ವಿಷಯಕ್ಕೆ - ಅಂದರೆ ರಾಷ್ಟ್ರ, ದೇಶ, ಗ್ರಾಮದ ಅಭಿವೃದ್ಧಿ ಇದನ್ನೆಲ್ಲ ಸೇರಿಸಿಕೊಂಡು ಒಂದೊಂದು ವಿಭಾಗವನ್ನು ಬೇರೆ ಬೇರೆ ಮಾಡಿ ಪುಸ್ತಕ ಮಾಡಿದೆ. ಆ ಪುಸ್ತಕ ತುಂಬಾ ಜನರಿಗೆ ಪ್ರಿಯವಾಗಿದೆ. ಯಾಕಂದ್ರೆ ನನ್ನ ಎಲ್ಲ ಕವನ ಸಂಗ್ರಹಗಳು - ಸುಮಾರು ೫೦ ಪುಸ್ತಕಗಳ ಸಂಗ್ರಹ ಅದರಲ್ಲಿ ಉಂಟು. ಹಾಗಾಗಿ ಅದಕ್ಕೆ ಕರ್ನಾಟಕ ಸರ್ಕಾರ ಐವತ್ತಾರು ಸಾವಿರ ರೂಪಾಯಿ ಬಹುಮಾನ ಕೊಟ್ಟಿದೆ ನನಗೆ ಆ ಪುಸ್ತಕಕ್ಕೆ. ಅಲ್ಲಿ ನಾಕು ಜನ ಕನ್ನಡಿಗ ಲೇಖಕರಿಗೂ, ನನಗೂ ೫೬೦೦೦ ರೂಪಾಯಿ ಬಹುಮಾನ ಕೊಟ್ಟಿದೆ. ಆ ಪುಸ್ತಕ ಬಹಳ ಜನಪ್ರಿಯ ಪುಸ್ತಕ. ಅದು ಪ್ರತ್ಯೇಕ ಅಲ್ಲ. ಅದು ನನ್ನ ಎಲ್ಲ ಕವನ ಸಂಗ್ರಹಗಳಿಂದ ಸಂಗ್ರಹ ಮಾಡಿದ ಪುಸ್ತಕ. ಅದರ ಪ್ರಾರಂಭದ ಒಂದು ಪದ್ಯ "ಲಹರಿ" ಎನ್ನುವಂಥದ್ದನ್ನು ಮಾತ್ರ ನಾನು ಅದಕ್ಕಾಗಿಯೇ ಬರೆದಿದ್ದೇನೆ. ಬಾಕಿ ಎಲ್ಲ ಉಳಿದ ಕೃತಿಗಳಿಂದ ಸಂಗ್ರಹಿಸಿದ್ದು.

ಕೊನೆಗೆ ನನ್ನ ಪ್ರಾರ್ಥನೆ ಉಂಟು , ಅದನ್ನು ಹೇಳುತ್ತೇನೆ.

ಪ್ರಾರ್ಥನೆ,

ಬಾನಿನಲಿ ಬಯಲಲ್ಲಿ ಕಡಲಿನಲಿ ಸಿಡಿಲಲ್ಲಿ ಎಲ್ಲೆಲ್ಲು ನೀನಿರುವೆ ದೇವದೇವ

ಕಲ್ಲಿನಲಿ (ಕೆಸರಿನಲಿ?) ಕಾಡಿನಲಿ ಬೀಡಿನಲಿ ಸರ್ವತ್ರ ನೆಲೆಸಿರುವೆ ದೇವದೇವ

ಪುಷ್ಪ ಪರಿಮಳದಲ್ಲಿ ಸಂಗೀತ ನಾದದಲಿ ನಿನ್ನ ಸನ್ನಿಧಿಯುಂಟು ದೇವದೇವ

ಹೆತ್ತವರ ಪ್ರೀತಿಯಲಿ ಮತ್ತೆ ಗುಣನೀತಿಯಲಿ ನಿತ್ಯ ನೀ ನೆಲೆಸಿರುವೆ ದೇವದೇವ

ದುಡಿಯುವರ ದುಃಖದಲಿ ದುಡಿಸುವರ ಸುಖದಲ್ಲಿ ನಿನ್ನ ಪ್ರೇರಣೆ ಯುಂಟು ದೇವದೇವ

ಹಗಲಲ್ಲಿ ರಾತ್ರಿಯಲಿ ಸ್ವಪ್ನ ಜಾಗೃತಿಯಲ್ಲಿ ____ (?) ಸಲಹುತಿರು ದೇವದೇವ

ಸೂರ್ಯ ಚಂದ್ರರ ಗಡಣ ನಕ್ಷತ್ರ ಗ್ರಹ ಗಡಣ ಎಲ್ಲವೂ ನಿನ್ನ ಗುಣ ದೇವದೇವ

ವೇದ ಪೌರಾಣಗಳು ಬೈಬಲ್ ಕುರಾನಗಳು ನಿನನೇ ಹೊಗಳುತಿವೆ ದೇವದೇವ

ರಾಮ ಜಿನ ಗೌತಮರು ಯೇಸು ಪೈಗಂಬರರು ಎಲ್ಲರೂ ನಿನ್ನವರು ದೇವದೇವ

ಸಕಲಮತ ಧರ್ಮಗಳು ನಿಖಿಲ ಜಗಜೀವಿಗಳು ನಿನ್ನಮಲ ಲೀಲೆಗಳು ದೇವದೇವ

ಮೃಷ್ಟಾನ್ನ ಉಣುವವರ ಉಪವಾಸವಿರುವವರ ನೀ ನಿತ್ಯ ನೋಡುತಿಹೆ ದೇವದೇವ

ಸಿರಿತನವ ಬಡತನವ ಗೆಳೆತನವ ಹಗೆತನವ ನೀ ಪರೀಕ್ಷಿಸುತಿರುವೆ ದೇವದೇವ

ಮಗುಗೆ ಮೊಲೆಯೂಡುತಿರೆ ನಗುತ ಶಿಶು ಆಡುತಿರೆ ನೀನದರ ಬಳಿಯಿರುವೆ ದೇವದೇವ

ಮಗುತನವು(?) ಮುದಿತನವು ಹಗೆತನವು ಮರಣವೂ ಎಲ್ಲ ನಿನ್ನಯ ಬಯಕೆ ದೇವದೇವ

ಎಲ್ಲೆಲ್ಲು ನೀನಿರುವೆ ಎಲ್ಲ ಕಾಲದೊಳಿರುವೆ ಸಕಲರಿಗು ಸದ್ಗುರುವೆ ದೇವದೇವ

ಸನ್ಮಾರ್ಗದಲಿ ನಡೆಸು ಸದ್ಗತಿಯ ನೀ ಕೊಡಿಸು ಸರ್ವಾತ್ಮ ನೀ ಹರಸು ದೇವದೇವ