ಪ್ರಿಯ ಸಂಪದಿಗರೇ,

ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ ನಡೆಸಿದ ಸಂದರ್ಶನ ಪಾಡ್ ಕಾಸ್ಟ್ ರೂಪದಲ್ಲಿ ನಿಮ್ಮ ಮುಂದಿದೆ. ತುಂಬ ದಿನಗಳ ಹಿಂದೆಯೇ ಸಂದರ್ಶನ ನಡೆಸಿದ್ದೆವಾದರೂ ಕಾರಣಾಂತರಗಳಿಂದ ಪ್ರಕಟಣೆ ತೀರ ತಡವಾಯಿತು.

ಕೆಳಗೆ ನೀಡಿರುವ ಲಿಂಕು ಬಳಸಿ ಪಾಡ್ ಕಾಸ್ಟನ್ನು ಡೌನ್ ಲೋಡ್ ಮಾಡಿಕೊಂಡು ಕೇಳಬಹುದು ಇಲ್ಲವೇ ಸಂಪದದಲ್ಲೇ ಕೇಳಬಹುದು.

- ಸಂಪದ ನಿರ್ವಹಣೆ ತಂಡ

ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರು ನವ್ಯೋತ್ತರ ಕನ್ನಡ ಕಾವ್ಯದ ಪ್ರಮುಖ ವಾಹಿನಿಗಳಲ್ಲಿ ಒಂದು ಪ್ರಮುಖ ಧಾರೆಯಾಗಿದ್ದಾರೆ. ಅವರ ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’  ಪ್ರಕಟಿಸಿದ ಅವರು ೨೦೦೮ರಲ್ಲಿ ಉತ್ತರಾಯಣ ಸಂಕಲನ ಪ್ರಕಟವಾದಾಗ ಅದು ಅವರ ೬೪ನೇ ಕೃತಿಯಾಗಿತ್ತು ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸಿದ್ದಾರೆ. ನಾಟಕಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ಆ ಮುಖೇನ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಚಿನ್ನಾರಿ ಮುತ್ತ ಚನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಸಂಕಲನಗಳ ಮೂಲಕ ಹುಡುಕುತ್ತಿರುವ ಹೊಸಹಾದಿಯನ್ನು ಗಮನಿಸುವುದೇ ಒಂದು ಸೊಗಸು.ಅವರ ಇತ್ತೀಚಿನ ಸಂಕಲನ ಉತ್ತರಾಯಣದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿದ್ದಾರೆ. ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸುವ ಅವರು, ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ
ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.

ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಒಂದು ನಮಸ್ಕಾರ. 

- ಡಿ ಎಸ್ ರಾಮಸ್ವಾಮಿ

ಸಂದರ್ಶಕರು: ಇಸ್ಮಾಯಿಲ್

ಕವಿ ಪರಿಚಯ : ಡಿ ಎಸ್ ರಾಮಸ್ವಾಮಿ

ಚಿತ್ರಗಳು : ಹರಿಪ್ರಸಾದ್ ನಾಡಿಗ್

ಕವಿತಾ ವಾಚನ

ಸಂಪದ ಪಾಡ್ ಕಾಸ್ಟಿಂಗ್ ನ ಹನ್ನೊಂದನೇ ಸಂಚಿಕೆಗೆ ನಾನು ಡಾ. ಹೆಚ್. ಎಸ್. ವೆಂಕಟೇಶಮೂರ್ತಿಯವರನ್ನು ನಾನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಡಾ. ಹೆಚ್. ಎಸ್. ವಿ. ಯವರು ತಮಗೆಲ್ಲರಿಗೂ ಪರಿಚಿತರು. ಬೇರೆ ಬೇರೆ ರೀತಿಯಲ್ಲಿ,ಕ್ಯಾಸೆಟ್ ಗಳ ಮೂಲಕ , ಅವರ ಗಂಭೀರವಾದ ಕಾವ್ಯಗಳ ಮೂಲಕ , ಪ್ರಬಂಧಗಳ ಮೂಲಕ , ನಾಟಕಗಳ ಮೂಲಕ , ಹೀಗೆ ವಿವಿಧ ರೀತಿಯಲ್ಲಿ ಅವರು ನಮಗೆಲ್ಲ ಪರಿಚಿತರಾಗಿದ್ದರೂ ನಾವೆಲ್ಲರೂ ಅವರನ್ನು ಗುರುತಿಸೋದು ಅವರನ್ನು ಕವಿ ಅಂತ. ಅವರ ಕವಿತ್ವದ ಪ್ರಶ್ನೆಯ ಜತೆಗೇನೇ ನಾವು ಅವರ ಜತೆಗಿನ ಸಂದರ್ಶನ ಆರಂಭಿಸೋಣ ಅಂತ ಅನ್ನಿಸತ್ತೆ.

ಪ್ರಶ್ನೆ ೧
ಸರ್ ತಮಗೆ ಮತ್ತು ಕಾವ್ಯದ ಜತೆಗೆ ಇರೋ ಸಂಬಂಧ ಯಾವ ಹಂತದಲ್ಲಿ ಆರಂಭ ಆಯಿತು?
ಉತ್ತರ
ನಾನಿನ್ನೂ ಹೈಸ್ಕೂಲುವಿದ್ಯಾರ್ಥಿಯಾಗಿದ್ದಾಗ್ಲೇನೆ ಈ ಕವಿತೆಯ ಹುಚ್ಚು ನನಗೆ ಹಿಡೀತು ಅಂತ ಹೇಳಬಹುದು. ಅಂತಹ ಹುಚ್ಚನ್ನ ಹಿಡಿಸಿದೋರು ನನಗೆ ಆಗ ಪ್ರಾಧ್ಯಾಪಕರಾಗಿದ್ದಂತಹ ನರಸಿಂಹಶಾಸ್ತ್ರಿಗಳು ಅಂತ ಹೇಳಿ. ಅವರು ಸಾಮಾನ್ಯವಾಗಿ ಕ್ಲಾಸುಗಳಲ್ಲಿ ಅನೇಕ ಸಾರಿ, ಟೆಕ್ಸ್ಟುಗಳನ್ನ ಮಾತ್ರ ಅಲ್ಲ , ಆ ಕಾಲದ ಮುಖ್ಯ ಕೃತಿಗಳನ್ನ ತಗೊಂಡು ಬಂದು ನಮಗೆ ಓದಿ ಹೇಳ್ತಾ ಇದ್ರು. ಹೀಗೆ ನಂಗೆ ಬೇಂದ್ರೆಯವರ ಪದ್ಯಗಳು, ಕುವೆಂಪು ಅವರ ಪದ್ಯಗಳು, ಬೇಂದ್ರೆಯವರ ವಿಮರ್ಶಾಬರಹಗಳು, ಕುವೆಂಪು ಅವರು ಬರೆದಿರುವಂಥಾ ಪ್ರಬಂಧಗಳು ಹೀಗೆಲ್ಲ ಪರಿಚಯ ಆಗ್ಲಿಕ್ಕೆ ಶುರುವಾಯಿತು. ಸಾಮಾನ್ಯವಾಗಿ ನಾನು ಹೈಸ್ಕೂಲುವಿದ್ಯಾರ್ಥಿಯಾಗಿದ್ದಾಗ್ಲೇನೆ ಕಾರಂತರನ್ನ ಓದಿದ್ದೆ. ತರಾಸು, ಅನಕೃ ಅಂಥವರು ನಮಗೆಲ್ಲ ಬಹಳ ಪ್ರಿಯರಾದ ಲೇಖಕರಾಗಿದ್ದರು. ಅರಳು-ಮರಳು, ಬೇಂದ್ರೆಯವರದ್ದು , ಸಂಗ್ರಹ ಆ ಕಾಲದಲ್ಲೆ ಓದಿದ್ದೆ . ಎಷ್ಟು ಅರ್ಥವಾಗಿತ್ತೋ ಅದು ಬೇರೆ ವಿಷಯ. ಆದರೆ ಓದುವ ಹುಚ್ಚಿತ್ತು. ಹಾಗಾಗಿ ಏನು ಸಿಕ್ರೂ, ಕೈಗೆ ಏನು ಸಿಕ್ರೂ, ಅದನ್ನ ಓದುವಂತಹದ್ದು ಒಂದು ಚಟ, ಅಭ್ಯಾಸ. ಹಾಗಾಗಿ ನಮ್ಮ ಪುಟ್ಟ ಹೈಸ್ಕೂಲಿನ ಎಲ್ಲ ಪುಸ್ತಕಗಳನ್ನ ನಾನು ಆಗ ಓದಿಬಿಟ್ಟಿದ್ದೆ. ಟೆಕ್ಸ್ಟ್ ಬುಕ್ಕಿಗಿಂತ ಹೆಚ್ಚಾಗಿ ಲೈಬ್ರರಿಪುಸ್ತಕಗಳನ್ನೇ ನಾನು ಓದ್ತಾ ಇದ್ದೆ. ಇಷ್ಟೆಲ್ಲ ಓದಿದ ಮೇಲೆ ನಾನೂ ಹೀಗೆ ಬರೆಯಬಹುದಾ ಅಂತ ಒಂದು ಪ್ರಯತ್ನ ಮಾಡಬೇಕೂಂತ ಅನಿಸಿ ಕೆಲವು ಪದ್ಯಗಳನ್ನ , ಅನುಕರಣೆರೂಪದ ಪದ್ಯಗಳನ್ನ , ಬರೆದೆ ನಾನು. ನನಗೆ ನೆನಪಿರುವ ಹಾಗೆ ನಾನು ಬರೆದ ಮೊಟ್ಟ ಮೊದಲ ಪದ್ಯ ಅಂದರೆ ಪಂಜೆ ಮಂಗೇಶರಾಯರ ತೆಂಕಣಗಾಳಿಯಾಟಾನ ಅನುಕರಣೆಮಾಡಿ , ಅಲ್ಲಿ ಗಾಳಿ ಬದಲಿಗೆ ಇಲ್ಲಿ ಮಳೆ ಬಂತು. so, ಮಳೆ ಹೀಗೆ ನಮ್ಮೂರಲ್ಲಿ ಬರುತ್ತೆ ಅಂತ ಹೇಳಿ ಅದನ್ನ ಅದೇ ರಿದಮ್ ನಲ್ಲಿ ಅದೇ ಲಯ ಇಟ್ಕೊಂಡು , ಆ ಸ್ವರೂಪ ಕೂಡ ಹಾಗೇನೇ , ಅದನ್ನು ಬರೆದು ನಮ್ಮ ಮೇಷ್ಟ್ರಿಗೆ ತೋರಿಸಿದೆ. ಅವರು ಅದಕ್ಕೆ ಗುರುಲಘು ಎಲ್ಲ ಹಾಕಿಬಿಟ್ಟು ಭಾಳ ಕರೆಕ್ಟಾಗಿದೆ ಛಂದಸ್ಸು ಅಂತ ಹೇಳಿದ್ರು. ಅವರ ವಿಮರ್ಶೆ ಅಂದರೆ ಪದ್ಯದಲ್ಲಿ ಮಾತ್ರಾಗಣಗಳು ಸರಿಯಾಗಿದೆ ಅನ್ನೋದಷ್ಟೆ ಆಗಿತ್ತು. ಹೀಗೆ ನನ್ನ ಬರವಣಿಗೆ ಪ್ರಾರಂಭ ಆಯ್ತು. ಆಮೇಲೆ ನಾನು ಕಾಲೇಜ್ನಲ್ಲಿ , ನಮಗೆ ನಿಸ್ಸಾರ್ ಅಹ್ಮದ್ರು ಮೇಷ್ಟ್ರಾದ್ರು , ದುರ್ಗದಲ್ಲಿ ನಾನು ಓದ್ತಿರೋವಾಗ. ನಾನು ನೋಡಿದ ಮೊಟ್ಟ ಮೊದಲ ಕನ್ನಡಕವಿ ಅವರು. ಅವರು ನನ್ನ ಪದ್ಯಗಳನ್ನೆಲ್ಲ ತರಿಸ್ಕೊಂಡು ಓದಿ ತಿದ್ದಿ ಬೆನ್ನು ತಟ್ಟಿ ಪ್ರೋತ್ಸಾಹಮಾಡ್ತಾ ಇದ್ರು, ಆ ಕಾಲದಲ್ಲಿ . ನಿಧಾನವಾಗಿ ಈ ಕವಿತೆಯ ಹುಚ್ಚು ನನ್ನನ್ನ ಆಕ್ರಮಿಸಕೊಳ್ಳತೊಡಗಿತು. ಆಮೇಲೆ ನಾನು ಡಿಪ್ಲೋಮಕ್ಕೆ ಅಂತ ಭದ್ರಾವತಿಗೆ ಹೋದೆ. ನನ್ನ ಆಸೆ ಇದ್ದದ್ದು ಕನ್ನಡದಲ್ಲಿ ಬಿ. ಎ. ಮಾಡಬೇಕು. ಎಂ. ಎ. ಮಾಡಬೇಕು ಅಂತ. ಆದರೆ ಬೇರೆ ಬೇರೆ ಕಾರಣಗಳು, ಒತ್ತಡಗಳ ಕಾರಣ ಡಿಪ್ಲೋಮ ಮಾಡಲು ಅಂತ ಭದ್ರಾವತಿಗೆ ಹೋದೆ. ಅಲ್ಲಿ ನನ್ನ ಗೆಳೆಯ ಈಶ್ವರಚಂದ್ರ, ಪ್ರಸಿದ್ಧಕತೆಗಾರ, ನಾನೂ ಅವನೂ ಒಟ್ಟಿಗೆ ಓದ್ತಾ ಇದ್ವಿ. ನಮ್ಮೂರಿನೋನೆ ಈಶ್ವರಚಂದ್ರ. ಅಲ್ಲಿ ನಾನು ಇಂಜನೀರಿಂಗ್ ಪುಸ್ತಕಗಳಿಗಿಂತ ಹೆಚ್ಚಾಗಿ ಸಾಹಿತ್ಯಾನೇ ಓದ್ತಾ ಇದ್ದೆ. ಆ ಕಾಲದಲ್ಲಿ ಕೂಡ ನಾನು ಪದ್ಯ ಬರೀತಾ ಇದ್ದೆ. ಅವನು ಕತೆ ಬರೀತಾ ಇದ್ದ. ಇಬ್ಬರೂ ಪರಸ್ಪರ ಬರೆದದ್ದನ್ನ ಓದ್ತ ಚರ್ಚೆ ಮಾಡ್ತಾ ಆಗ ಬರವಣಿಗೆ ಹುಚ್ಚನ್ನ ಸಮವಾಗಿ ಹಂಚಿಕೊಳ್ತಾ ಇದ್ವಿ. ಡಿಪ್ಲೋಮಾ ಮುಗಿಸಿದ ಮೇಲೆ ನಾನು ಮಲ್ಲಾಡಿಹಳ್ಳಿ ಹೈಸ್ಕೂಲಿನಲ್ಲಿ ಕ್ರಾಫ್ಟ್ ಟೀಚರಾಗಿ ನನ್ನ ಕೆಲಸ ಶುರು ಮಾಡಿದೆ. ಆಗ ಮೂರು ವರ್ಷಗಳಲ್ಲಿ ನಾನು ಎಕ್ಸ್ ಟರ್ನಲ್ ಕ್ಯಾಂಡಿಡೇಟಾಗಿ ಬಿ. ಎ. ಮಾಡ್ದೆ , ಧಾರವಾಡ ಯೂನಿವರ್ಸಿಟಿಯಿಂದ. ಬಿ. ಎ. ಆದ್ಮೇಲೆ ಎಂ. ಎ. ಮಾಡಬೇಕು ಅನ್ನೋ ಹುಚ್ಚು ಹತ್ತಿತು. ಅಷ್ಟರಲ್ಲಿ ಮದುವೆ ಆಗಿತ್ತು ನನಗೆ , ಸಂಸಾರ ಇತ್ತು , ಮಕ್ಕಳಿದ್ರು. ರಿಸೈನ್ ಮಾಡಿ ಇಲ್ಲಿ ಸೆಂಟ್ರಲ್ ಕಾಲೇಜ್ನಲ್ಲಿ ಎಂ.ಎ. ಮಾಡ್ಲಿಕ್ಕೆ ಬಂದೆ. ಇಲ್ಲಿ ಬಂದಾಗ ನನ್ನ ದೃಷ್ಟಿಕೋನಾನೇ ಬದಲಾಗಿ ಹೋಯ್ತು. ಬೆಂಗಳೂರಿನಲ್ಲಿ ಏಕೇಂದ್ರೆ ಕನ್ನಡದ ಭಾಳ ಮುಖ್ಯ ಲೇಖಕರನ್ನ ನಾನು ಆಗ ಭೇಟಿ ಮಾಡ್ದೆ. ಶಿವರುದ್ರಪ್ಪನೋರು ಆಗ ನಮ್ಮ ಅಧ್ಯಯನಕೇಂದ್ರದ ನಿರ್ದೇಶಕರಾಗಿದ್ದರು. ಲಕ್ಷ್ಮಿನಾರಾಯಣಭಟ್ಟರು, ಚಂದ್ರಶೇಖರ ಕಂಬಾರರು, ಇಂಥ ಕವಿಗಳ ಪರಿಚಯ, ಅತ್ಮೀಯತೆಯ ಲಾಭ ನನಗೆ ಸಿಕ್ತು. ಪು.ತಿ.ನ. ಅವರು ತುಂಬ ಹತ್ರ ಆದ್ರು, ಆ ದಿನಗಳಲ್ಲಿ. ಹೀಗೆ ನನ್ನ ಸಾಹಿತ್ಯದ ಬಳಗ ಬೆಳೀತು. ಬರವಣಿಗೆ ಬಗ್ಗೆ ಒಂದು ಗಾಂಭೀರ್ಯ, ನಿರೀಕ್ಷೆಗಳು ಶುರುವಾಯಿತು. ತನ್ಮೂಲಕ ನಾನು ಕೂಡ ಈ ಮಹಾಪ್ರವಾಹದಲ್ಲಿ ನಂದೊಂದು ಪುಟ್ಟ ಅಲೆಯನ್ನು ಹುಟ್ಟಿಸೋ ಯತ್ನವನ್ನು ಶುರುಮಾಡಿದೆ ಅಂತ ಹೇಳಬಹುದು. ಆನಂತರ ನಿರಂತರವಾಗಿ ಇವತ್ತಿನವರೆಗೆ ನಾನು ಬರಕೊಂಡು ಬರ್ತಾ ಇದ್ದೀನಿ. ಸುಮಾರು ಹದಿನೈದು ಕವಿತಾಸಂಗ್ರಹಗಳು, ನಾನು ಈವರೆಗೆ ಪ್ರಕಟಮಾಡಿದ್ದೇನೆ. ಇದಿಷ್ಟು ಸ್ಥೂಲವಾಗಿ ನನ್ನ ಕಾವ್ಯಜೀವನದ ಚರಿತ್ರೆ ಅಂತ ಹೇಳಬಹುದು.

ಪ್ರಶ್ನೆ ೨
ತಮ್ಮ ಎಲ್ಲಾ ಕೃತಿಗಳನ್ನ ಒಟ್ಟಾಗಿ ನೋಡಿದಾಗ, ಇಂಗ್ಲೀಷಿನಲ್ಲಿ ಅದನ್ನು ಮ್ಯಾಕ್ರೋಟೆಕ್ಸ್ಟ್ ಅಂತ ಕರೀತಾರೆ, ಅದನ್ನ ನೋಡಿದಾಗ ತಾವು ನಾಟಕಗಳನ್ನು ಬರೆದಿದ್ದೀರಿ, ಪ್ರಬಂಧಗಳನ್ನು ಬರೆದಿದ್ದೀರಿ, ವಿಮರ್ಶಾಲೇಖನಗಳನ್ನು ಬರೆದಿದ್ದೀರಿ ಮತ್ತು ಕವಿತೆಗಳನ್ನೂ , ಅದರ ಅವಿಭಾಜ್ಯ ಅಂಗ, ಆದರೆ ಇವೆಲ್ಲವನ್ನು ಒಟ್ಟಾಗಿ ನೋಡಿದಾಗ ಎಲ್ಲದರಲ್ಲೂ ಒಂದು ಕವಿತ್ವ ಧ್ವನಿಸ್ತಾ ಇರ್ತದೆ. so ನಿಮ್ಮ ಬಾಲ್ಯದಲ್ಲಿ ನಿಮಗಿದ್ದ ಕಾವ್ಯದ ಜತೆಗಿನ ನಿಮ್ಮ ಒಂದು ಸಂಬಂಧ ನಿಮ್ಮ ಎಲ್ಲ ಬರಹಗಳ ಮೇಲೂ ಆ ಕವಿತ್ವದ ಒಂದು ಪ್ರಭಾವವನ್ನು ಬೀರಿದೆ, ಕವಿತ್ವ ಇರೋ ಹಂಗೆ ನೋಡಿಕೊಂಡಿದೆ ಅಂದರೆ ತಪ್ಪಾಗಬಹುದಾ?
ಉತ್ತರ
ಪ್ರಾಯಶ ಅದನ್ನ ಹಿಂಗೆ ಹೇಳಬಹುದು ಅಂತ ಕಾಣತ್ತೆ, ಕವಿತ್ವ ಅನ್ನೋದೇ ಒಂದು ಮನೋಧರ್ಮ ಅಂತ. ನಾವು ಏನು ಬರೆದ್ರೂ ಕೂಡ ಮನೋಧರ್ಮ ಕಾವ್ಯದ್ದಾಗಿದ್ರೆ ಆ ಟ್ರೀಟ್ ಮೆಂಟ್ ಬೇರೆ ಥರಾನೇ ಇರುತ್ತೆ ಸಾಮಾನ್ಯವಾಗಿ. ಅದಕ್ಕೇ ನಾನು ಕಾವ್ಯದಲ್ಲಿ ಪೂರ್ತಿ ಮುಳುಗಬಾರದು ಅಂತಲೇನೇ ಅನೇಕ ಸರಿ ಸ್ವಂತಮನೆಯಿಂದ ಪ್ರವಾಸಕ್ಕೆ ಹೋಗೋ ಹಾಗೆ ಗದ್ಯಕ್ಕೆ ಹೋಗ್ತಾ ಇರ್ತೀನಿ.ಬೇರೆ ಬೇರೆ ಸಾಹಿತ್ಯದ formಗಳಲ್ಲಿ ಕೆಲಸ ಮಾಡ್ತೇನೆ. ಭಾಳಾ ಅಗತ್ಯ ಅದು. ನಮ್ಮ ಬಗ್ಗೆ , ನಮ್ಮ ಮನೆಯ ಬಗ್ಗೆ , ನಮ್ಮ ತವರು ಬಗ್ಗೆ ಸ್ವಲ್ಪ ನೀರಸವಾದ ಮನಸ್ಥಿತಿ ಉಂಟಾದ್ರೆ ನಾವು ಹೊರಗಡೆ ಹೋಗಿ ಬಂದಾಗ ಮತ್ತೆ ಪುನಃ ಮನೆಯ ಆಕರ್ಷಣೆ ಜಾಸ್ತಿಯಾಗುತ್ತಲ್ಲ, ಹಾಗೆ ಕಾವ್ಯದ ಕೇಂದ್ರಕ್ಕೆ ಮತ್ತೆ ಮತ್ತೆ ತಿರುಗಿ ತಿರುಗಿ ನಾನು ಬಂದು ನಿಂತಿದೀನಿ. ಅದರಿಂದ ಈಗ ನನಗೆ ಅನೇಕ ಸರೆ ಅನಿಸುತ್ತೆ, ಈ ಕವಿತೆ,ಕಾದಂಬರಿ, ಕಥೆ, ನಾಟಕ ಅನ್ನೋ ಅಂತಹ ಮಾಧ್ಯಮಗಳು ಬೇರೆ ಬೇರೆ ಫಾರ್ಮ್ ಅಂತ ಅನ್ನೋ ಗ್ರಹಿಕೆ ಇದೆಯಲ್ಲ ಇದೇನೇ ಅಷ್ಟು ಸರಿ ಅಲ್ವೇನೋ ಹಾಗೆ ಅಂತ. ಅನೇಕ ಸಾರಿ ನಾವು ಪ್ರಬಂಧ ಬರೀಬೇಕಾದ್ರೂ ಕೂಡ ಅಲ್ಲಿ ಕವಿತೆಯ ಅಂಶ ಇರುತ್ತೆ, ನಾಟಕ ಬರೀಬೇಕಾದ್ರೂ ಇರುತ್ತೆ, ಕಾದಂಬರಿ ಬರೀಯೋವಾಗ್ಲೂ ಇರುತ್ತೆ, ಇದು ನಮ್ಮ ಮುಖ್ಯ ಕಾದಂಬರಿಕಾರರು ಕತೆಗಾರರನ್ನು ನೋಡಿದರೆ ಅವರು ಕಥೆ ಅಂತ ಬರೀತ ಇರ್ತಾರೆ ಅದು ಕವಿತೆ ಆಗುತ್ತದೆ, ಕಾದಂಬರಿ ಅಂತ ಬರೀತ ಇರ್ತಾರೆ ಅದು ಪ್ರಬಂಧ ಆಗ್ತಿರತ್ತೆ, ಹಾಗಾಗಿ ಎಲ್ಲ ರೀತಿಯ ಫಾರ್ಮ್ ಗಳು ಕೂಡ ಬೆರೆತುಹೋಗಿ ಒಂದು ಸಂಕೀರ್ಣವಾದ ಹದ ಹೊಸಗನ್ನಡ ಸಾಹಿತ್ಯದಲ್ಲಿ ಉಂಟಾಗ್ತಿದೆ ಅಂತ ನನ್ನ ಅನಿಸಿಕೆ. ಹಾಗಾಗಿ ನನ್ನ ನಾಟಕ ಆಗ್ಲಿ, ಪ್ರಬಂಧ ಆಗ್ಲಿ, ವಿಮರ್ಶೆ ಆಗ್ಲಿ, even ವಿಮರ್ಶೆ ಆಗ್ಲಿ, ಕವಿತೆ ಅಂತೂ ಸರಿಯೇ ಸರಿಯೇ, ಎಲ್ಲದರಲ್ಲೂ ಕೂಡ ಇರುವ ಮನೋಧರ್ಮ ಒಂದೇನೆ. ಆ ಮನೋಧರ್ಮ ಯಾವುದು ಅನ್ನೋದರ ಮೇಲೆ ಅದರ ಪ್ರಧಾನ ಲಕ್ಷಣ ಮತ್ತು ಕೇಂದ್ರ ಸ್ಥಾಪಿತವಾಗ್ತದೆ.

ಪ್ರಶ್ನೆ ೩
ತಾವು ಬರಿಯಕ್ಕೆ ಆರಂಭಿಸಿದ ಹೊತ್ತಲ್ಲಿ ಎರಡು ಮುಖ್ಯ ಚಳುವಳಿಗಳು ನಿಮ್ಮ ಮುಂದೆ ಇದ್ವು. ಮೊದಲನೇದು ನವ್ಯಕಾವ್ಯದ ಒಂದು ಉತ್ತುಂಗ ಸ್ಥಿತಿ, ಆ ಹೊತ್ನಲ್ಲಿ. ಅದೇ ರೀತಿಯಲ್ಲಿ ಬಂಡಾಯ ಕಾವ್ಯ ಕೂಡ ಆವಾಗ ಬಹಳ ಪ್ರಬಲವಾಗಿ ಇತ್ತು. ನೀವು ಒಂದು ತರ ನವ್ಯರ ತರ ಆರಂಭಿಸಿದ್ರೂ ಬಂಡಾಯದ ಕಡೆ ಹೋಗ್ಲಿಲ್ಲ. ಆದರೆ ಮತ್ತೆ ನವ್ಯವನ್ನೂ ನೀವು ಉಳಿಸಿಕೊಳ್ಳಲಿಲ್ಲ. ಮತ್ತೆ ಮಧ್ಯೆ ಇನ್ನೇನೋ ಒಂದು ದಾರಿಯನ್ನು ಕಂಡ್ಕೊಬೇಕಂತ ಪ್ರಯತ್ನಿಸಿದ್ರಿ. ಹೀಗೆ ಪ್ರಯತ್ನಿಸಿದವರಲ್ಲಿ ನಿಮ್ಮನ್ನು, ಬಿ. ಆರ್. ಲಕ್ಷ್ಮಣರಾಯರನ್ನು, ಲಕ್ಷ್ಮಿನಾರಾಯಣಭಟ್ಟರನ್ನು ಎಲ್ಲ ಒಟ್ಟೊಟ್ಟಿಗೆ ಗುರುತಿಸ್ತಾರೆ. ಆದರೆ ನೀವು ಅವರಿಗಿಂತನೂ ಭಿನ್ನವಾಗಿ ಬೇರೆ ಒಂದು ಹಂತದಲ್ಲಿ ತಮ್ಮನ್ನ ಗುರುತಿಸಿಕೊಳ್ಳೋದಿಕ್ಕೆ ಟ್ರೈ ಮಾಡಿದ್ರಿ ಅಂತ ಕಾಣಿಸತ್ತೆ.ಯಾಕಂದ್ರೆ ನೀವು ಒಂದು ಹಾಡಲಿಕ್ಕೆ ಬೇಕಾದಂಥ ಪದ್ಯಗಳನ್ನ ಬರೆದಾಗಲೂ ಕೂಡ ಅದನ್ನು ಬಿಟ್ಟು ಮತ್ತೆ ನೀವು ಮೊದಲೇ ಹೇಳಿದ ತರಹ ತವರ್ಮನೆ ಬಿಟ್ಟು ಹೊರಗಡೆ ಬಂದು, ಮತ್ತಿನ್ನೇನೋ ಟ್ರೈ ಮಾಡ್ತೀನಿ ಅನ್ನೋ ಹಾಗೆ ಅದಕ್ಕೆ ಹೋಗಿದ್ರೇ ಹೊರತು ಗಂಭೀರವಾದ ಕಾವ್ಯದ ಬಗ್ಗೆನೇ ನಿಮ್ಮ ಎಲ್ಲ ಹೊತ್ತಿನಲ್ಲೂ ಗಮನ ಕೇಂದ್ರೀಕರಿಸಿತ್ತು ಅಂತ ಅನಿಸತ್ತೆ. ಈ ರೀತಿ ಅಂದ್ರೆ ನೀವು ಆ ಅರ್ಥದಲ್ಲಿಯೇ ಒಂದು ಕಾವ್ಯವನ್ನು ಹುಟ್ಟಿಸುವ ಒಂದು ಕ್ರಿಯೆ ನಿಮ್ಮ ಮುಖ್ಯ ಧೋರಣೆಯಾಗಿ ಕಾಣಿಸತ್ತೆ. ಅದರ ಮಧ್ಯೆ ನೀವು ಒಂದಿಷ್ಟು ಹಾಡುವಂಥ ಪದ್ಯಗಳನ್ನು ಕೂಡ ಬರೆದ್ರಿ. so ಅದೊಂದು ಬರೀ ಒಂದು ಭಾಷೆಯ ಎಕ್ಸರ್ಸೈಜ್ ಆಗಿತ್ತಾ? ಅಂದ್ರೆ ನೀವು ಒಂದು ಆ ಭಾಷೆಯ ಬಳಕೆ ಒಂದು ವ್ಯಾಯಾಮದ ತರಾ ಅಷ್ಟೇ ನೀವು ಆ ಹಾಡುಗಳನ್ನು ಬರೆದ್ರೇನೋ ಅಂತ ಅನ್ನಿಸತ್ತೆ.
ಉತ್ತರ
ನನಗೆ ಕೇವಲ ನನ್ನ ಹಿಂದೆ ನವ್ಯಮಾದರಿ ಇರಲಿಲ್ಲ. ನವೋದಯ ಕಾವ್ಯದ ಪರಂಪರೆ ಇತ್ತು. ಬೇಂದ್ರೆ, ಕುವೆಂಪು ಅಂತಹ, ನರಸಿಂಹಾಚಾರ್ಯರಂತಹ, ನರಸಿಂಹಸ್ವಾಮಿಯಂತಹ ಕವಿಗಳಿದ್ರು. ಆ ಮೇಲೆ ಹಾಗೇನೆ ಅಡಿಗರು,ಶರ್ಮ, ರಾಮಾನುಜರಂತಹ ಕವಿಗಳಿದ್ರು. ಅಷ್ಟೇ ಅಲ್ಲ , ನನಗೆ ಒಂದು ಪರಂಪರೆಯ ಬಗೆಗೆ ಯಾವತ್ತಿನಿಂದಲೂ ಕಾಳಜಿ. ಕುಮಾರವ್ಯಾಸ ಅಂತೂ ನಮ್ಮ ಸಂಪ್ರದಾಯದಲ್ಲಿ ಬಹಳ ಹತ್ತಿರದ ಕವಿ ಅವನು . ನಮಗೆ ನಿತ್ಯಪಾರಾಯಣ ಎಲ್ಲಾ ಆಗ್ತಾ ಇತ್ತು ನಮ್ಮ ಮನೆಯಲ್ಲಿ. ಹಾಗಾಗಿ ಮತ್ತೇ ಈ ಪುರಂದರದಾಸರ ಹಾಡುಗಳು, ಕನ್ನಡದ ಎಲ್ಲ ಬಗೆಯ ಲಯಗಳನ್ನೂ ನಾನು ಒಳಗೊಳ್ಳಬೇಕು ಅನ್ನೋ ಅಂತಹ ಅಪೇಕ್ಷೆ, ಒಂದು ಅದಮ್ಯವಾದ ಅಪೇಕ್ಷೆ ನಂದು. ಹಾಗಾಗಿಯೇ ನಾನು ಬರೆಯುವ ಹಾಡುಗಳಲ್ಲಿ ಪುರಂದರರ ಲಯಗಳನ್ನ ಗುರುತಿಸಲು ಸಾಧ್ಯ. ಇದೆಲ್ಲ ಕೇವಲ ಇವತ್ತಿನ ತುರ್ತಿನಲ್ಲಿ ಹುಟ್ಟಿದ್ದಲ್ಲ. ಬಹಳ ಕಾಲದ ಒತ್ತಡದ ಪರಿಣಾಮವಾಗಿ ಈವತ್ತು ಹುಟ್ಟುತಾ ಇರುವ ಅಲೆಗಳು ಇವೆಲ್ಲ. ಹಾಗೆ ಕುಮಾರವ್ಯಾಸನ ಪ್ರಯೋಗಗಳು. ಅವನು ದ್ರೌಪದಿಯನ್ನು ಚಿತ್ರಿಸಿದ ಕ್ರಮ, ಮತ್ತೆ ಅವನು ದೈವದ ಪರಾಕಾಷ್ಠೆಯನ್ನು ಹೇಳುತ್ತಿರುವಾಗಲೂ ಕೂಡ ಮನು ಷ್ಯನ ಪ್ರಯತ್ನಗಳನ್ನ ಹೇಗೆ ಒತ್ತು ಕೊಟ್ಟು ನಿಲ್ಲಿಸ್ತಾನೆ ಅಂತ್ಹೇಳಿ, ಇಂಥ ಸಂಗತಿಗಳೆಲ್ಲ ನನ್ನ ಮನಸ್ಸಿನ ಮೇಲೆ ಪರಿಣಾಮ ಮಾಡ್ತಿದ್ವು. ಕೇವಲ ಇನ್ನೊಂದು ಯಾವುದೋ ಶಕ್ತಿಗೆ ನಮ್ಮನ್ನ ವಶಮಾಡಿಕೊಳ್ಳೋದು ಮಾತ್ರ ಅಲ್ಲ, ನಮ್ಮನ್ನ ನಾವು ಸ್ಥಾಪಿಸಿಕೊಳ್ಳೋಕೆ ಹೋರಾಡಬೇಕು ಅನ್ನುವಂಥಾದ್ದು. ಹಾಗಾಗಿ ನಾನು ಈ ನವ್ಯದ ಪ್ರಾಬಲ್ಯದ ಕಾಲದಲ್ಲೂ ಕೂಡ ನನ್ನ ಸ್ವಂತದ ಧ್ವನಿಯೊಂದನ್ನು ಹೊರಡಿಸಬೇಕು ಅಂತ ಯತ್ನ ಮಾಡ್ತಾ ಇದ್ದೆ. ನನ್ನನ್ನ ಉಳಿಸ್ಕೋಬೇಕು, ಎಲ್ಲೋ ಒಂದ್ಕಡೆ ನನ್ನನ್ನು ಸ್ಥಾಪಿಸಿಕೊಳ್ಳಬೇಕು ಅಂತ ಒಂದು ಹಠ ಇತ್ತು. ಈ ದೀರ್ಘವಾದ ಕಾವ್ಯಪರಂಪರೆಯ ಹಿನ್ನೆಲೆ ನನಗೆ ಅದೃಷ್ಟವಶಾತ್ ಇದ್ದದ್ದರಿಂದಲೂ ಯಾವುದೇ ಒಂದು ಸೀಮಿತವಾದ ಕಾವ್ಯದ ಚಳುವಳಿ ನನ್ನ ಮೇಲೆ ತನ್ನನ್ನ ಸಂಪೂರ್ಣವಾಗಿ ನನ್ನನ್ನ ಹಿಡಕೊಳ್ಳೋಕೆ ಸಾಧ್ಯವಾಗಲಿಲ್ಲ. ಅಡಿಗರನ್ನ ಓದ್ತಿರಬೇಕಾದ್ರೆ ನಾನು, ಕುಮಾರವ್ಯಾಸನೂ ಪಕ್ಕದಲ್ಲಿರ್ತಿದ್ದ, ಪಂಪನೂ ಇರ್ತಾ ಇದ್ದ. ಬಸವಣ್ಣಾದಿ ವಚನಕಾರರು, ನನಗೆ ಬಹಳ ಪ್ರಿಯರಾದ ಬಸವಣ್ಣನೋರು, ಅಲ್ಲಮನಿಗಿಂತ, ನಿಮಗೆ ಆಶ್ಚರ್ಯ ಅನಿಸಬಹುದು, ಇವತ್ತು ಎಲ್ಲರೂ ಅಲ್ಲಮನನ್ನ ಕೀರ್ತಿಸ್ತಿದಾರೆ, ಅವನ ವಚನಗಳನ್ನ ಕುರಿತು ಮಾತಾಡುವಂಥದ್ದು ಭಾಳ ಜಾಸ್ತಿಯಾಗಿದೆ, ಆದರೆ ವಾಸ್ತವವಾಗಿ ನನಗನಿಸಿದ್ದು-ಅತ್ಯಂತ ಪ್ರಾಮಾಣಿಕವಾದ ಮತ್ತು ಅಂತರಂಗದ ಧ್ವನಿ ಅಂದರೆ ಬಸವಣ್ಣಂದು ಅಂತ್ಹೇಳಿ. ಒಬ್ಬ ಮನುಷ್ಯನಾಗಿ ಅವನು ತನ್ನ ಹೋರಾಟವನ್ನು ಕಂಡುಕೊಳ್ತಾನೆ ಅಂತ. ಹಾಗೇ ಪುರಂದರದಾಸರು. ದಾಸರು ಅಂತ ಹೇಳಿ ಒಂದು ನಿಕೃಷ್ಟ ಭಾವನೆ ಎಲ್ಲರಿಗೂ. ಆದರೆ ನಿಜವಾದ ಕವಿ ಪುರಂದರದಾಸರು. ಕನ್ನಡದ ಆಡುಮಾತನ್ನ ಮೊಟ್ಟಮೊದಲು ಅದರ ಎಲ್ಲ ನುಡಿಗಟ್ಟಿನ ಸಂಪತ್ತಿನೊಂದಿಗೆ ಕನ್ನಡಕ್ಕೆ ತಂದವರು ಪುರಂದರದಾಸರು. ಆಚಾರವಿಲ್ಲದ ನಾಲಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವಂಥ (ನಾಲಿಗೆ) ಎಷ್ಟು ಚೆನ್ನಾಗಿ ಅವರು ಇವತ್ತಿನ ಮಾತುಗಳನ್ನ ಹಾಗ್ಹಾಗೇ ನೀಡ್ತಾರೆ . ಮಕ್ಳ ಮಾತುಗಳಮಾತುಗಳನ್ನ ತಗೊಂಬರ್ತಾರೆ ಅಮ್ಮಾ ನೀನು ಗುಮ್ಮನ ಕರೆಯದಿರೆ. ಸುಮ್ಮನೆ ಇರುವೆನು ಅಮ್ಮಿಯ ಬೇಡೆನು, ದೇವರಂತೆ ಒಂದು ಠಾವಲಿ ಕೂಡುವೆ,ಅಮ್ಮಾ ಗುಮ್ಮನ ಕರೆಯದಿರೆ" ಮಕ್ಕಳ ಮಾತುಗಳನ್ನು ಯಾರೂ ಕೂಡ ನಮ್ಮ ಕನ್ನಡದಲ್ಲಿ ಬಳಸಿಯೇ ಇರಲಿಲ್ಲ, ಎಲ್ಲೋ ಕ್ವಚಿತ್ತಾಗಿ ರತ್ನಾಕರವರ್ಣಿ ಬಿಟ್ಟರೆ. ಹೀಗೆ ಈ ಭಾಷಾದೃಷ್ಟಿಯಿಂದ ದಾಸರು ವಚನಕಾರರು ಮಾಡಿದ ಪ್ರಯೋಗಗಳು, ಪಂಪನಂಥೋರು ಮಾಡಿದಂಥ ಒಂದು ಅತ್ಯಂತ ಅಚ್ಚುಕಟ್ಟಾಗಿ ನಿಷ್ಠುರವಾಗಿ ಭಾಷೆಯನ್ನ ಅದರ ಎಲ್ಲ ಅರ್ಥಸಂಪತ್ತು ಹಾಳಾಗದ ಹಾಗೆ ಬಳಸಿಕೊಳ್ಳೋದು ಪಂಪನ ಹತ್ರ ನಾನು (ಕಲಿತೆ). ಇವೆಲ್ಲ ನನ್ನ ಮೇಲೆ ಪ್ರಭಾವ ಬೀರ್ತಿದ್ವು. ಹಾಗಾಗಿ ಬೇರೆಯವರ ಹಾಗೆ, ಇಲ್ಲಾ ಬೇಂದ್ರೇಪ್ರಭಾವ, ಇಲ್ಲಾ, ಅಡಿಗರ ಪ್ರಭಾವದಲ್ಲಿ ನಾನು ಮುಳುಗಿಹೋಗ್ಲೇಇಲ್ಲ. ನನಗೆ ಬಹಳ ಪ್ರಿಯರಾಗಿದರೂ ಕೂಡ, ಬೇಂದ್ರೆ ಹಾಗೂ ಅಡಿಗ ನನಗೆ ಬಹಳ ಪ್ರಿಯರಾಗಿದ್ದರೂ ಕೂಡ,ನಾನು ಅವರಿಬ್ಬರಲ್ಲೇನೆ ಸಂಪೂರ್ಣ ಮುಳುಗಿಹೋಗ್ಲಿಲ್ಲ ಅನ್ನೋದು ಈ ಪರಂಪರೆ ಹಿನ್ನೆಲೆ ನನಗಿದ್ದದ್ರಿಂದ . ಅದಕ್ಕೆ ಹೊಸ ಲೇಖಕರಿಗೆ ನಾನು ಯಾವಾಗ್ಲೂ ಹೇಳ್ತಾ ಇರ್ತೀನಿ, ನೀವು ಒಬ್ಬ ಕವಿಯ ಪ್ರಭಾವಕ್ಕೆ ನೀವು ಸಿಕ್ಕದೇ ಇರಬೇಕಾದರೆ ಇನ್ನೊಬ್ಬ ಕವಿಯ ಪ್ರಭಾವವನ್ನ ನಿಮ್ಮ ಮೇಲೆ ಆರೋಪಿಸಿಕೊಳ್ಳಿ ಅಂತ್ಹೇಳಿ. so, ಅದು ಕೌಂಟರ್ ಆಗ್ತ ಆಗ್ತ ನಿಮ್ಮದು ಒಂದು ಸ್ವಂತ ಧ್ವನಿಯನ್ನ ಹುಟ್ಟಿಸೋದು ಸಾಧ್ಯ ಆಗೋದು, ಈ ನೆಲೆಯಲ್ಲಿ. ಹಾಗಾಗಿ ನನಗೆ ನವ್ಯದ ಕಾಲದಲ್ಲಿ ಬರೀತಿದ್ರೂ ಕೂಡ, ನಾನು ಅದರಲ್ಲೇ ಯಾಕೆ ಕಳಕೊಂಡು ಹೋಗ್ಲಿಲ್ಲ ಅಂದ್ರೆ ನನ್ಹಿಂದೆ ನವೋದಯ ಇತ್ತು, ಮತ್ತೆ ಕುಮಾರವ್ಯಾಸಾದಿ ಕವಿಗಳಿದ್ರು, ವಚನಕಾರರು, ದಾಸರು ಇದ್ರು, ಮತ್ತೆ ಪಂಪಾದಿಗಳು ಇದ್ರು. ಹೀಗೆ ಇದ್ದದ್ರಿಂದಲೇ ನನಗೆ ಬೇರೆ ಒಂದು ಕಾವ್ಯದ ಪಾಕಾನ ಸಾಧಿಸುವಂಥ ಹಠ ಮತ್ತು ಛಲ, ಮತ್ತೆ ಅದಕ್ಕೆ ಬೇಕಾದಂಥ ಒಂದು ಕ್ವಚಿತ್ ಶಕ್ತಿ ಬಂತೂಂತ ನಾನು ಭಾವಿಸ್ತೇನೆ.

ಪ್ರಶ್ನೆ ೪
ನಿಮ್ಮ ಸಿಂದಬಾದ್ ನಿಂದ ಹಿಡಿದು ನಿಮ್ಮ ಆರಂಭಘಟ್ಟದ ಹಲವು ಕವನಸಂಕಲನಗಳಲ್ಲಿ ಭಾವನಾಲೋಕದಿಂದ ಪ್ರತಿಮೆಗಳನ್ನು ತರ್ತಿದ್ರಿ. ಆದರೆ ನೀವು ಉತ್ತರಾಯಣಕ್ಕೆ ಬರುವಷ್ಟು ಹೊತ್ತಿಗೆ ನೀವು ಕತೆಗಳಿಂದ (ಪ್ರತಿಮೆಗಳನ್ನ ) ಹುಟ್ಟಿಸಲಿಕ್ಕೆ ಬೇರೆ ತರದ ಒಂದು ಪ್ರಯತ್ನ ಮಾಡ್ತೀರಿ. ಅಂದ್ರೆ ನಿಮ್ಮ ಮೆಟಾಫರ್ ಗಳು ಹುಟ್ಟುವ ಪರಿ ಬದಲಾಗಿದೆ ಅಂತ ಅನ್ನಿಸುತ್ತೆ ನಮಗೆ. ಉತ್ತರಾಯಣಕ್ಕೆ ಬರ್ತೀರಲ್ಲ, ಅಲ್ಲಿಗೆ ಬರುವಷ್ಟು ಹೊತ್ತಿಗೆ ಆ ಬದಲಾವಣೆಗಳಿವೆ. ಈ ಬದಲಾವಣೆಯನ್ನ ನೀವು ಹೇಗೆ ಗುರುತಿಸ್ತೀರಿ ಸರ್? ಅದರೆ ಬೇರೆ ಬೇರೆ ವಿಮರ್ಶಕರು, ಎಸ್ ಆರ್ ವಿಜಯಶಂಕರ್ ಹೇಳ್ತಾ ರೆ-ಅದೊಂದು ಅವರು ಮತ್ತೆ ಹಿಂತಿರುಗಿ ಬಂದು ಭಾರತೀಯ ಕಾವ್ಯಪರಂಪರೆಯಲ್ಲೇ ತಮ್ಮ ಒಂದು ಐಡೆಂಟಿಟಿ ಕಂಡುಕೊಳ್ಳಲಿಕ್ಕೆ ಹೆಚ್ಚೆಸ್ವಿಯವರು ಪ್ರಯತ್ನಿಸ್ತಿದಾರೆ ಅಂತ ವಿಜಯಶಂಕರ್ ಅಭಿಪ್ರಾಯಪಡ್ತಾರೆ. ಹಾಗೇ ಅನಂತಮೂರ್ತಿಯವರಂತೂ 'ಅವರು ಇನ್ನಷ್ಟು ಗಂಭೀರವಾದ ಕವಿಯಾಗಿದಾರೆ ಇವಾಗ. ಇವಾಗ ಅವರು ಒಂತರಾ ಅಧ್ಯಾತ್ಮ ಅನ್ನು ವ ಕಡೆಗೆ ವೆಂಕಟೇಶಮೂರ್ತಿಯವರು ಚಲಿಸ್ತಿದಾರೆ' ಅಂತ ಅಭಿಪ್ರಾಯಪಟ್ಟಿದಾರೆ. ಇದಕ್ಕೆ ನೀವು ಏನು ರೆಸ್ಪಾಂಡ್ ಮಾಡ್ತೀರಿ ?
ಉತ್ತರ
ಈಗ ಪ್ರಾರಂಭದಲ್ಲಿ ಏನಿತ್ತು ನನ್ನ ಭಾವನೆ ಅಂತಂದ್ರೆ ಒಂದು ಕಾವ್ಯದ ನಿರ್ಮಾಣಕ್ಕೆ ಹೊರಗಿನ ಜಗತ್ತು ಸಾಕು ಅನ್ನು ವಷ್ಟು ಒಂದು ಮನಸ್ಥಿತಿ ಇತ್ತು. so, ಅದರ ಮೂಲಕ ನನ್ನ ಅಂತರಂಗದ ತುಡಿತವನ್ನ ನಾನು ಹೊರಗೆ ಹಾಕಲು ಪ್ರಯತ್ನ ಮಾಡ್ತಿದ್ದೆ. ಸಿಂದಬಾದ್ ಆಗಲಿ, ಸೌಗಂಧಿಕಾ ಆಗಲಿ, ಕ್ರಿಯಾಪರ್ವ ಆಗಲಿ, ಕಂಚಿನ ತೇರು ಅಂಥ ಪದ್ಯ, ಶಿಶಿರದ ಪಾಡು ಅಂಥ ಪದ್ಯ, ಇವೆಲ್ಲ ಹೊರಗಿನ ಜಗತ್ತನ್ನು ಅವಲಂಬಿಸಿ ಅದರ ಮೂಲಕ ಅಂತರಂಗದ ತುಡಿತಗಳನ್ನ ಹೊರಗೆ ಹಾಕುವ ಯತ್ನಗಳು. ಅಂದ್ರೆ ಎಲ್ಲವನ್ನೂ ನಾನು ಹೊರಗೆ ನೆಮ್ಮುತಾ ಇದ್ದೆ. 'ನದೀತೀರ'ದಲ್ಲಿ, ನಂತರದ 'ಉತ್ತರಾಯಣ' ಮತ್ತು ಇತ್ತೀಚಿನ ಪದ್ಯಗಳಲ್ಲಿ ಏನಾಯಿತು ಅಂದರೆ ನನಗೆ ಈ ಹೊರಗಿನ ಜಗತ್ತು ಸಾಲದು, ಇದರ ಮೂಲಕ ನಾನು ನನ್ನ ನಿಜವಾದ ಧ್ವನಿಯನ್ನ ಬಹಳ ಖಚಿತವಾದ ರೀತಿನಲ್ಲಿ, ನಿಖರವಾದ ರೀತಿಯಲ್ಲಿ ಹೇಳಲಿಕ್ಕೆ ಆಗೋಲ್ಲ, ಅದಕ್ಕೆ ನನ್ನ ಜಗತ್ತನ್ನು ನಾನು ಒಳಗಿಂದ ಎತ್ಕೋಬೇಕು ಅಂತ ಶುರು ಆಯ್ತು. ಅದರ ಫಲ ಅಂತ ಅನಿಸ್ತಾ ಇದೆ ಇವತ್ತು-ಉತ್ತರಾಯಣದಂಥ ಪದ್ಯಗಳು ನೇರವಾಗಿ ನನ್ನ ಆಂತರಂಗಿಕ ಪ್ರಪಂಚದಿಂದಲೇ ಎತ್ಕೊಂಡಂಥವು, ಅಲ್ಲಿಂದಲೇ ರೂಪಕಗಳು ಹುಟ್ಟಿವೆ, ಪ್ರತಿಮೆಗಳು ಹುಟ್ಟಿವೆ, ಮೆಟಾಫರ್ಸ್ ಗಳು ಬಂದಿವೆ, ಅಂದ್ರೆ ಒಂದು ಕವಿತೆಗೆ ಕವಿಯ ಅಂತರಂಗದ ದ್ರವ್ಯ ಇದೆಯಲ್ಲ ಅದು ಬಹಳ ಪ್ರಧಾನವಾದದ್ದು. ಅದು ಮುಖ್ಯ ಸ್ತೋತ್ರ ಅದು, ಅದೇ ಕೇಂದ್ರ, ಅದು ಪ್ರೈಮರಿ ಸೋರ್ಸ್ ಅಂತ ಅನಿಸ್ಲಿಕ್ಕೆ ಶುರುವಾಯಿತು, ನಂಬಿಕೆ ಬಂತು. ಇದರಿಂದಲೇ 'ನಾನು' ಇಲ್ಲದೇ ನಾನು ಬರಿಲಾರೆ, ನನ್ನನ್ನು ಹೊರತುಪಡಿಸಿ ನಾನು ಏನನ್ನೂ ಬರೆಯಲಾರೆ, ಅನ್ನೋವಂಥ ನಿಲುವು ಬಂತು ನನಗೆ. ಅನಿವಾರ್ಯ ಆಗ್ಹೋಯ್ತು ನನಗೆ. ಹಾಗಾಗಿ ಇವತ್ತು ನಾನು ಏನು ಬರೆದ್ರೂ ಕೂಡ 'ನಾನು' ಅನ್ನೋದು, ಇದನ್ನ ಅಸ್ಮಿತೆ ಅಂತೀರೋ, ನೀವು ಕಾವ್ಯದ ಪರಿಭಾಷೆಯಲ್ಲಿ ಏನು ಹೇಳ್ತೀರೋ ಗೊತ್ತಿಲ್ಲ, ಆದರೆ ನನ್ನ ನೋವುಗಳು, ನನ್ನ ದುಃಖ, ಹೀಗೆ ಕೊಟ್ಟವರು ಬೇಂದ್ರೆಯವರು ಕನ್ನಡದಲ್ಲಿ. ಮೊಟ್ಟಮೊದಲು ತಮ್ಮ ಒಳಬಾಳನ್ನೇ, ತಮ್ಮ ಸಾಂಸಾರಿಕ ಕುಟುಂಬವನ್ನೇ, ತಾನು ಪಟ್ಟಂಥ ಪಡಿಪಾಟಲನ್ನೇ, ಕವಿತೆಯಾಗಿ ಮಾಡಿದವರು ಬೇಂದ್ರೆಯವರು. ನಂತರ ನನಗೆ ಈಚಿನ ದಿನಗಳಲ್ಲಿ ನನಗೆ ಒಂಥರ ಬೇಂದ್ರೆ ಆದರ್ಶರಾದರು ಅಂತ ಅನಿಸುತ್ತೆ ನನಗೆ. ಮೊದಲಿನ ಹಾಗಲ್ಲ. ಅಂದರೆ ಬೇಂದ್ರೆ ಆದರ್ಶ ಅಂತ ಅನ್ನೋದು ನಾನು ಬೇರೆ ತರಹ ತಗೊ ಳ್ತೀನಿ. ಅದರೆ ನನ್ನ ಒಳಗಿನ ನೋವು, ದುಃಖ, ಸಂಕಟ, ಒದ್ದಾಟಗಳು ಇವೆಲ್ಲ ಸಾಮಾಜಿಕ ಒತ್ತಡದಿಂದ ಉಂಟಾಗಿರುವಂಥಾದ್ದು . ಇದೇನೂ ದ್ವೀಪ ಅಲ್ಲ ಇದು. ಇದಕ್ಕೆಲ್ಲ ಕಾರಣ ಅಂದ್ರೆ ಹೊರಗಿನ ಒತ್ತಡಗಳೇ. ಹೊರಗಿನ ಒತ್ತಡಗಳಿಂದ ಒಳಗಿನಲ್ಲಿ ಉಂಟಾಗುವಂಥ ಚಡಪಡಿಕೆಗಳು,ನೋವುಗಳು, ದುಃಖಗಳು , ಅದನ್ನು ಪರಿಹಾರ ಮಾಡಲಿಕ್ಕೆ ಕಂಡುಕೊಳ್ಳೋವಂಥ ಸಾಂತ್ವನದ ಮಾರ್ಗಗಳು, ಅದರ ವೈಫಲ್ಯ, ಅದರಲ್ಲಿ ಉಂಟಾಗುವಂಥ ಹತಾಶೆ, ಇವೆಲ್ಲವನ್ನೂ ನಾನು ಒಳಗಿಂದ ನೋಡಲಿಕ್ಕೆ ಶುರುಮಾಡಿದೆ. so, ಇದು ಪ್ರಧಾನವಾದ ವ್ಯತ್ಯಾಸ ಅಂತ ನನಗನ್ನಿಸತ್ತೆ

ಪ್ರಶ್ನೆ ೫
ಮೊದಲ ಹಂತದ ತಮ್ಮ ಕವಿತೆಗಳಲ್ಲಿ ರಾಜಕೀಯ ಇಲ್ಲ ಅಂತಲ್ಲ, ರಾಜಕೀಯ ನಿಲುವುಗಳು ಇರಲಿಲ್ಲ ಅಂತಲ್ಲ, ಅದು ಈಗ ಕಾಣಿಸ್ತಾ ಇರುವ ರೀತಿಯಲ್ಲಿ ಅದು ಕಾಣಿಸ್ತ ಇರಲಿಲ್ಲ ಅಂತ ಅನ್ನಿಸತ್ತೆ. ಅದು ಇನ್ನೂ subtle ಆಗಿತ್ತು. ಇವತ್ತು ನೀವು ಇಡೀ ಸಾಮಾಜಿಕ ಸಂದರ್ಭವನ್ನು ಅದರ ರಾಜಕೀಯ ಆಯಾಮಗಳ ಜತೆಗೆ ಗ್ರಹಿಸಿ ಅದಕ್ಕೆ ಪ್ರತಿಕ್ರಿಯಿಸ್ತಾ ಇದ್ದೀರೇನೋ ಅಂತ ಅನ್ನಿಸತ್ತೆ ನನಗೆ. ಯಾಕೇಂದ್ರೆ ನೀವು ಕೃಷ್ಣನನ್ನು ನೋಡುವ ಬಗೆ, ರಾಮನನ್ನು ನೋಡುವ ಬಗೆ, ಇವತ್ತು ಮೇನ್ ಸ್ಟ್ರೀಂ ಪಾಲಿಟಿಕಲ್ ಫೀಲ್ಡ್ ನಲ್ಲಿ ನೋಡ್ತ ಇರೋ ಒಂದು ರಾಮ,ಕೃಷ್ಣರನ್ನು ನೋಡುವ ಬಗೆಯನ್ನು ಸಂಪೂರ್ಣವಾಗಿ ವಿರೋಧಿಸುವ ಒಂದು ಕ್ರಿಯೇಟಿವ್ ಆದ ರಿಸ್ಪಾನ್ಸ್ ಅಂತ ನನಗನ್ನಿಸತ್ತೆ. ಅದು ತಮ್ಮ ಅಳಿಲುರಾಮಾಯಣದಲ್ಲಿ ಇರಬಹುದು, ಅಥವಾ ರಾಮನ ಬಗ್ಗೆ ಉದಯವಾಣಿಗಾಗಿ ನೀವು ಬರೆದ ಒಂದು ಸಣ್ಣ ಪ್ರಬಂಧದಲ್ಲಿರಬಹುದು, ಅಥವಾ ಕವಿತೆಗಳಲ್ಲಿರಬಹುದು. ಇದು ಬಹಳ ಸ್ಪಷ್ಟವಾಗಿ ಕಾಣಿಸ್ತದೆ. ಅದ್ರೆ ನಿಮ್ಮ ಪ್ರತಿಭಟನೆ ಅಂತ ಹೇಳೋದು ಭಾಳ ಬೇರೆ ಭಿನ್ನವಾದ ರೀತಿಯಲ್ಲಿ ಕಾಣಿಸ್ತಾ ಇದೆ. ಇದು ನೀವು ಪ್ರಜ್ಞಾಪೂರ್ವಕವಾಗಿ ಆಗಿದೆ ಅಂತ ನಾನೇನೂ ಅಂದ್ಕೊಳಲ್ಲ, ಆದರೆ ನೀವು ಈಗಾಗಲೇ ಹೇಳಿದ ತರಾ ಒಂದು ನಿಮ್ಮ ಪ್ರತಿಕ್ರಿಯೆ ಮಾರ್ಗ ಬದಲಾಗಿದೆಯೋ?
ಉತ್ತರ
ನಾನು ಮೊದಲು ಒಂದು ಅನುಭವವನ್ನು ನೋಡ್ತಿದ್ದ ಕ್ರಮಕ್ಕಿಂತ ಈಗ ನೋಡ್ತಿರೋ ಕ್ರಮ ಬದಲಾಗಿದೆ. ಬದಲಾಗೋದು ಸಹಜ ಕೂಡ. ಅಂದ್ರೆ ಈಗ ನಾನು ಯಾವುದೇ ಸಂಗತಿಯನ್ನು ಇಡಿಯಾಗಿ ನೋಡುವ ಒಂದು ಮನಸ್ಥಿತಿ ನನಗೆ ಬಂದಿದೆ. ಹಾಗೆ ನೋಡದಿದ್ರೆ ಕವಿತೆ ಪೂರ್ಣ ಅರ್ಥವನ್ನು ಕಟ್ಟಿಕೊಳ್ಳಲಾರದು ಅಂತ. ಯಾವುದೋ ಒಂದು ಭಾವಸ್ಥಿತಿಯನ್ನ ತೀವ್ರವಾದ ರೀತಿಯಲ್ಲಿ ವ್ಯಕ್ತಪಡಿಸೋದು ಮಾತ್ರನೇ ಸಾಲದು. ಇದನ್ನ ಕುವೆಂಪು ಅವರು ಪೂರ್ಣದೃಷ್ಟಿ ಅಂತ ಹೇಳ್ತಾರೆ. ಭಾಳ ದೊಡ್ಡ ಮಾತು ಅದು. ಅಂದರೇ, ಟೋಟಲ್ ಆಗಿ ನೋಡುವಂಥದ್ದು, ಬೇರೆ ಬೇರೆ ದಿಕ್ಕುಗಳಿಂದ ನೋಡುವಂಥದ್ದು . ಹೀಗೆ ನಾವು ಅನುಭವವನ್ನ ನೋಡಕ್ಕೆ ಶುರು ಮಾಡಿದಾಗ ಅದಕ್ಕೆ ರಾಜಕೀಯ ಛಾಯೆಗಳು ಬರುತ್ತೆ, ಸಾಮಾಜಿಕ ಛಾಯೆಗಳು ಬರುತ್ತೆ, ಆಧ್ಯಾತ್ಮಿಕ ಛಾಯೆಗಳು ಬರುತ್ತೆ, ಒಟ್ಟಾರೆ ಬೇರೆ ಬೇರೆ ಬೇರೆ ನೆರಳುಬೆಳಕಿನ ಲೋಕಾಲೋಕದ ಪ್ರಜ್ಞೆಯನ್ನು ಪಡೆದುಕೊಳ್ಳುತ್ತೆ. ಇದು ಕಾಳಿದಾಸನ ಮಾತಿದು. ಲೋಕಾಲೋಕ-ನಾವೇನು ನೋಡಿದರೂ ಅರ್ಧ ಕಾಣುತ್ತೆ, ಅರ್ಧ ಕಾಣೋದೇ ಇಲ್ಲ. ಈ ಕಾಣುವ ಮತ್ತು ಕಾಣದಿರುವ ಸಂಗತಿಗಳನ್ನು ಒಟ್ಟಾಗಿ ನೋಡುವ ತುಡಿತ ನಿಮ್ಮ ಮನಸ್ಸಿನಲ್ಲಿ ಬಂದಾಗ, so, ಅದು ಒಂದು ಬೇರೆ ತರಹದ ಇದನ್ನ ಪಡೆಯುತ್ತೆ. ಇದು ಕೇವಲ ರಾಜಕೀಯ ಪದ್ಯ ಆಗಿರಲ್ಲ. ಪಾಲಿಟಿಕಲ್ ರೀಡಿಂಗ್ ಮಾತ್ರ ಅಲ್ಲ ಇದು. ಅಥವಾ ಇದು ಕೇವಲ ಸಾಮಾಜಿಕ ಪದ್ಯ ಅಂತ ಹೇಳಲಿಕ್ಕೆ ಬರೋದಿಲ್ಲ. ಕೇವಲ ಖಾಸಗಿ ಪದ್ಯ ಅಂತ ಹೇಳಲಿಕ್ಕೂ ಬರೋಲ್ಲ. ಅಂದ್ರೆ ಏನಾಗುತ್ತೆ, ಇದೆಲ್ಲವೂ ಸೇರಿಕೊಂಡು ಒಂದು ಅನುಭವದ್ರವ್ಯ ತಯಾರಾಗತ್ತೆ. so, ಒಟ್ಟು ನೋಡುವದು ಅಂತ. ಇದರ ಸೂಚನೆ ನನಗೆ ಮೊಟ್ಟಮೊದಲು ನಾನು ಪಡೆದುಕೊಂಡಿದ್ದು ಅಂದ್ರೆ ಸಾನೆಟ್ ನಲ್ಲಿ . ದನುರ್ವಿದ್ಯಾಪರೀಕ್ಷೆಯಲ್ಲಿ ಯುಧಿಷ್ಟಿರ ಹೇಳಿದ್ದು ಅಂತ ಒಂದು ಬರುತ್ತೆ. ನಮ್ಮಲ್ಲಿ ಏನು ಮಹಾಭಾರತಕತೆಯಲ್ಲಿ ಕುಮಾರವ್ಯಾಸನ ಕತೆಯಲ್ಲಿ ಏನು ಬರುತ್ತೆ ಅಂದ್ರೆ ಅರ್ಜುನ ಅಲ್ಲಿ ಹೀರೋ.ದ್ರೋಣಾಚಾರ್ಯರು ನಿನಗೆ ಹಕ್ಕಿ ಕಾಣತ್ತಾ ಅಂದರೆ, ಮರ ಕಾಣತ್ತಾ ಅಂದರೆ, ಕಾಣಲ್ಲ. ಹಕ್ಕಿ ಕಾಣುತ್ತಾ? ಕಾಣಲ್ಲ. ಬರೀ ಹಕ್ಕಿ ಕಣ್ಣು ಮಾತ್ರಾ ಕಾಣತ್ತೆ ಅಂದ. ಬಾಣ ಬಿಡು ಅಂತ ಹೇಳ್ತಾನೆ. ಹಕ್ಕಿಯನ್ನ ಕೊಲ್ತಾನೆ. ಇವನು ಭಾಳ ಗುರಿಕಾರ ಅಂತ ಹೇಳ್ತಾನೆ. so, ಧರ್ಮರಾಜನ್ನ ಕೇಳಿದಾಗ ಅವನು ಹಕ್ಕಿ ಕಾಣತ್ತೆ, ಅದರ ಕಣ್ಣು ಕಾಣತ್ತೆ, ಮರ ಕಾಣತ್ತೆ, ಹಕ್ಕಿ ಕಟ್ತಿರೋ ಗೂಡು ಕಾಣತ್ತೆ, ಹಿಂದೆ ಆಕಾಶ ಕಾಣತ್ತೆ, ನಿನ್ಕೈಲಿ ಆಗೋದಿಲ್ಲ ಹೊಡಿಯೋದಿಕ್ಕೆ , ಹೋಗು ಅಂತ. ಆದರೆ ನನಗೆ ಧರ್ಮರಾಯ ಹೀರೋ. ಯಾಕಂದ್ರೆ ಅವನು ಹಕ್ಕಿಯನ್ನು ಒಂದು ಇಡೀ ಸಂದರ್ಭದಲ್ಲಿಟ್ಟು ನೋಡ್ತಾನೆ. ಪ್ರತ್ಯೇಕಿಸೋದಿಲ್ಲ. ಪ್ರತ್ಯೇಕಿಸಿಬಿಟ್ಟರೆ ಏನಾಗತ್ತೆ ಅಂದರೆ, ಅದು ಕೇವಲ ಬಾಣದ ಗುರಿಯಾಗತ್ತೆ ಅಷ್ಟೇ. ಆಗ ಕೊಲೆ ಅಂತನ್ನೋದು ಸುಲಭ ಆಗತ್ತೆ. ಹಿಂಸೆ ಅನ್ನೋದು ಸುಲಭ ಆಗತ್ತೆ. ನೀವು ಯಾವಾಗ ಹಕ್ಕಿಯನ್ನ ಅದರ ಮರಿಗಳ ಜತೆಗೆ ನೋಡ್ತೀರೋ, ಮರದ ಜತೆಯಲ್ಲಿ ನೋಡ್ತೀರೋ, ಆಕಾಶ ನಕ್ಷತ್ರದ ಜತೆಯಲ್ಲಿ ನೋಡ್ತೀರೋ, ಅಖಂಡವಾಗಿ ಅದನ್ನ ನೋಡಿದಾಗ, ಇಡಿಯಾಗಿ ನೋಡಿದಾಗ, ಯುಧಿಷ್ಟಿರ ಹಾಗೆ ನೋಡಿದ್ರಿಂದಲೇ ಅವನ ಕಣ್ಣಲ್ಲಿ ನೀರು ತುಂಬಿತ್ತು. ನಾನು ಇದನ್ನ, ಈ ವ್ಯವಸ್ಥೆಯನ್ನ ಕೆಡಿಸೋ ಹಾಗಿಲ್ಲ. ಇದರಲ್ಲಿ ಏನೋ ಒಂದು ಹೊಂದಾಣಿಕೆ ಇದೆ, ಪರಸ್ಪರ, ಪರಸ್ಪರ ಹೊಂದಾಣಿಕೆ ಇದೆ. ಅದಕ್ಕೆ ಅವನು ಹೇಳ್ತಾನೆ, ದಯವಿಟ್ಟು ನನ್ನನ್ನು ಕ್ಷಮಿಸಿ, ನಾನು ಹಕ್ಕಿನೋಡೋದಿಕ್ಕೆ ಸಾಧ್ಯ ಆಗ್ತಾ ಇಲ್ಲ. ಅಂದ್ರೇ ಹೀಗೆ ನೋಡೋದು ಇದೆಯಲ್ಲ, ನಾವು ಯಾರನ್ನ ನಾಯಕರು ಅಂತ ತಿಳಕೊಂಡಿದ್ವೋ ಅವರು ನಾಯಕರಲ್ಲ; ನಾವು ಯಾರನ್ನ ನಾಯಕರಲ್ಲ ಅಂತ ತಿಳಕೊಂಡಿದ್ವೋ ಅವರು ನಿಜವಾದ ನಾಯಕರು. ಇವತ್ತು ಗಾಂಧಿಗೆ ಹತ್ರ ಬರೋ ಪಾತ್ರ ಯುಧಿಷ್ಟಿರ ಹೊರತು ಅರ್ಜುನ ಅಲ್ಲ.ಅರ್ಜುನ ನನ್ನ, ಯಾವತ್ತೂ ನನ್ನ ನಾಯಕನಾಗಿಲ್ಲ. ಇಂಥ ಇನ್ನೂ ಒಂದು ಪದ್ಯ ಬರೆದೆ ಈಚೆಗೆ ನಾನು . ಒಂದು ಮರದಲ್ಲಿ ಒಂದೇ ಒಂದು ಹಣ್ಣಿದ್ರೆ ಅದನ್ನ ಕೀಳಬೇಡ ಅಂತ ಹೇಳಿ ಕೃಷ್ಣ ಹೇಳ್ತಾನೆ. ಅಂದ್ರೆ ಪಾಂಡವರು ವನವಾಸದಲ್ಲಿದ್ದಾಗ, ಕಾಮ್ಯಕವನದಲ್ಲಿದ್ದಾಗ, ಒಂದು ನೇರಳೆ ಮರದ ಕೆಳಗೆ ಒಬ್ಬ ಋಷಿ ತಪಸ್ಸು ಮಾಡ್ತಾ ಇದ್ದ. ಅವನು ಪ್ರತಿವರ್ಷ ಒಂದುಸಾರಿ ಮಾತ್ರ ಕಣ್ತೆರೆದು ಆ ಮರದಲ್ಲಿ ಬಿಡುವ ಒಂದೇ ಒಂದು ಹಣ್ಣನನ್ನು ತಿಂದು ಬದುಕ್ತಾ ಇದ್ದ. ಮತ್ತೆ ಧ್ಯಾನ ಮಾಡ್ತಾ ಇದ್ದ. ಭೀಮ ಸ್ವಲ್ಪ ದುಡುಕಿನ ಸ್ವಭಾವದವನು. ಆ ಹಣ್ಣನ್ನ ತಿಂದುಬಿಡ್ತಾನೆ. ಹಾಗೆ ಕಿತ್ತಾಗ ಕೃಷ್ಣ ಹೇಳ್ತಾನೆ, ಹೀಗೆ ಕೀಳಬಾರದಿತ್ತು ನೀನು. ಒಂದು ಪಕ್ಷ ಋಷಿ ಕಣ್ಬಿಟ್ಟರೆ ಅವನಿಗೆ ತಿನ್ನಲಿಕ್ಕೆ ಹಣ್ಣಿರೋದಿಲ್ಲ. ಅವನು ಸತ್ತೇ ಹೋಗ್ಬಿಡ್ತಾನೆ. ಅದರಿಂದ ಎಂಥ ಪಾಪದ ಫಲ ನಿನಗೆ ಸಿಗುತ್ತೆ. ಆದ್ದರಿಂದ ಒಂದೇ ಮರದಲ್ಲಿ ಒಂದೇ ಹಣ್ಣಿದ್ದಾಗ ಅದನ್ನ ಕೀಳಬಾರದು. ತಿನ್ನೋದಂತೂ ಬಿಲ್ಕುಲ್ ನಿಷಿದ್ಧ. ಏಕೆಂದರೆ ಅದರಲ್ಲಿ ನೀನು ಬರೀ ಕಣ್ಣಿಟ್ಟು ನೋಡು, ಅದರ ಮೇಲೆ ಮೋಡಿಲಿಪಿಯಲ್ಲಿ ಯಾರ್ದೋ ಹೆಸರಿರುತ್ತೆ. ಅಂದರೆ ಇಂಥವನಿಗೆ ಸೇರತಕ್ಕದ್ದು ಈ ಹಣ್ಣು ಅಂತಿರುತ್ತೆ. ಆದ್ದರಿಂದ ನೀನು ಅದನ್ನ ತಿನ್ನಬಾರದು ಅಂತ. ಈ ಫಾರ್ಬಿಡ್ಡನ್ ಪ್ರುಟ್ ಅಂತ ಹೇಳ್ತಾರಲ್ಲ ಬೈಬಲ್ನಲ್ಲಿ , ಅದೇ ಕಥೆಯನ್ನ ನನಮ್ಮ ಜನ ಯಾವ ತರಹ ಹೊಸ ರೀತಿಯಲ್ಲಿ ಒಂದು ದರ್ಶನ ಅಲ್ಲಿ ಮಾಡಿದಾರೆ ಅಂತ ನೋಡಿ. so, ನಾನಿದನ್ನು ಪದ್ಯ ಬರೆದೆ. ಒಂದೇ ಮರದಲ್ಲಿರೋ ಒಂದೇ ಹಣ್ಣನ್ನ ನೀನು ತಿನ್ನಬೇಡ, ಕೀಳಬೇಡ. ಅಂದ್ರೆ ಈ ಜಗತ್ತಿನಲ್ಲಿ ಒಂದು ವಿಚಿತ್ರವಾದ ಒಂದು ವ್ಯವಸ್ಥೆ ಇದೆ ಅಂತ . ಇದು ಅಬ್ಸರ್ಡ್ ಅಲ್ಲ. ಅಬ್ಸರ್ಡ್ ಇದು ಒಂದಕ್ಕೊಂದು ಅಸಂಗತ ಅನ್ನೋದು ದೊಡ್ಡ ತತ್ವ ಆಗಿತ್ತು ಹಾಗೆ ಅಸಂಗತವಾಗಿಲ್ಲ ಇದು. ಇದು ಒಂದಕ್ಕೊಂದು ಸಂಗತವಾಗಿರೋವಂಥಾದ್ದು . ಆದ್ದರಿಂದ ಒಂದನ್ನು ನೀನು ಕೊಂಡಿ ತಪ್ಪಿಸಿದ್ರೂ ಅದರಿಂದ ಅನೇಕ ಅನಾಹುತಗಳಾಗಬಹುದು. so, ಇಡಿಯಾಗಿ ನೋಡು, ಒಟ್ಟಾಗಿ ನೋಡು. ಈವತ್ತು ನಾನು ಬರೀತಿರೋ ಪದ್ಯಗಳು ಹೀಗೆ ಒಂದು ಸಂಗತಿಯನ್ನ ಒಟ್ಟಾಗಿ ನೋಡಲಿಕ್ಕೆ ಪ್ರಯತ್ನ ಮಾಡತ್ವೆ.

ಪ್ರಶ್ನೆ ೬
ಬಹುಶ ನವ್ಯದಿಂದ ಇದು ಆರಂಭ ಆಯಿತು ಅಂತ ಅನ್ಸತ್ತೆ, ನವೋದಯದ ಲೇಖಕರೆಲ್ಲರೂ ಮಕ್ಕಳಿಗಾಗಿ ಒಂದಷ್ಟನ್ನ ಬರಿಯಲಿಕ್ಕೆ ಬಹಳ ಒಂದು ಮಿಶನ್ ಥರಾ ಅದನ್ನ ಮಾಡ್ ತಿದ್ರು. ಆದರೆ ನವ್ಯದ ನಂತರದ ಲೇಖಕರು ಮಕ್ಕಳಿಗಾಗಿ ತಾವೇನಾದರೂ ಬರೆಯುವದನ್ನ ಕೀಳು ಅಂದ್ಕೊಂಡ್ರು. ಅಥವಾ ತಮಗೆ ಸಾಧ್ಯ ಇಲ್ಲ ಅನ್ನೋ ಭಯದಿಂದ ಬಿಟ್ರೋ ಗೊತ್ತಾಗಲಿಲ್ಲ. ಆದ್ರೆ ನೀವು ಆ ತರ ಮಾಡ್ಲಿಲ್ಲ. ನೀವು ಅದನ್ನು ಬಹಳ ಭಿನ್ನವಾದ ಪ್ರಯೋಗಗಳನ್ನು ಮಕ್ಕಳಿಗಾಗಿಯೇ ಸೀಮಿತವಾಗಿ ಇಟ್ಕೊಂಡು ಮಾಡಿದ್ರಿ, ನಾಟಕವನ್ನೂ ಬರೆದ್ರಿ , ಪದ್ಯಗಳನ್ನೂ ಬರೆದ್ರಿ, ಇದು ಸ್ವಲ್ಪ ಕಾನ್ಶಿಯಸ್ ಆದ ಕ್ರಿಯೆ ಅನಿಸತ್ತೆ. ನಿಮ್ಮ ಇತರೇ ಕಾವ್ಯಕ್ಕೆ ಬೇರೆ ತರದ ಒಂದು ಕ್ರಿಯೆ. ಅದರ ಬಗ್ಗೆ ಸ್ವಲ್ಪ ಹೇಳ್ತೀರಾ? ಯಾಕಂದ್ರೇ ನೀವು ಆ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ರಿ.
ಉತ್ತರ
ನಮ್ಮ ಮುಖ್ಯ ದೃಷ್ಟಿ ಏನಂತಂದ್ರೆ ನಂದು ನವೋದಯದ ಸಂಪ್ರದಾಯದಲ್ಲಿ ನಮ್ಮ ಮುಖ್ಯ ಕವಿಗಳು ಕೂಡ ಕನ್ನಡದಲ್ಲಿ ಮಕ್ಕಳಿಗೋಸ್ಕರ ಬರೆದ್ರು. ಈಗ ಪುಟ್ಟಪ್ಪನೋರು, ರಾಮಾಯಣ ಬರೆದಂಥ ಪುಟ್ಟಪ್ನೋರು, ಕಿಂದರಜೋಗಿ ಪದ್ಯವನ್ನೂ ಬರೀತಾಇದ್ರು. ಪಂಜೆ ಮಂಗೇಶರಾಯರು ಬಹಳ ಸೊಗಸಾದ ಮಕ್ಕಳ ಪದ್ಯಗಳನ್ನು ಬರೆದ್ರು. ರಾಜರತ್ನಂ ಅಂತೂ, ಕನ್ನಡದ ರಾಜ ಮತ್ತು ರತ್ನ ಅಂತ ಹೇಳತಾರೆ ಬೊಳುವಾರು. ಮಕ್ಕಳ ಸಾಹಿತ್ಯದಲ್ಲಿ ಅವರು ರಾಜನೂ ಹೌದು, ರತ್ನನೂ ಹೌದು ಅಂತ ಹೇಳಿ. ಎಲ್ ಗುಂಡಪ್ಪನವರು, ಎಂ ಸೀತಾರಾಮಯ್ಯನವರು, ಸಿದ್ಧಯ್ಯ ಪುರಾಣಿಕರು, ಹೀಗೆ ಅನೇಕ ಜನ ನಮ್ಮ ಕವಿಗಳು ಬಹಳ ಮುಖ್ಯವಾದ ಮಕ್ಕಳ ಕವಿತೆಗಳನ್ನು, ಮಕ್ಕಳ ಕತೆಗಳನ್ನು ರಚನೆ ಮಾಡಿದ್ರು. ಕಾರಂತರೂ ಕೂಡ. ಆದರೆ ನವ್ಯ ಬಂದ ಮೇಲೆ ಮಕ್ಕಳಿಗೋಸ್ಕರ ಬರೆಯೋದು ಒಂದು ಅನಿವಾರ್ಯವಾದ ಅಗತ್ಯ ಅಂತ ಯಾಕೋ ಏನೋ ಲೇಖಕರಿಗೆ, ಹಿರಿಯರಿಗೆ ಅನಿಸ್ಲಿಲ್ಲ. so, ಅವರು ಒಂದು ರೀತಿ ಅತ್ಯಂತ ಗಂಭೀರವಾದ ರೀತಿಯ ಬರವಣಿಗೆಗೆ ತಮ್ಮನ್ನ ಕೊಟ್ಟುಕೊಂಡಿದ್ದರಿಂದ ಮಕ್ಕಳಿಗೋಸ್ಕರ ಬರೆಯೋವಂತದ್ದು ಬೇರೆ ಒಂದು ಡಿಪಾರ್ಟುಮೆಂಟು ಸೃಷ್ಟಿಸಿಕೊಳ್ಳಬಹುದು ತಮ್ಮ ತಮ್ಮಲ್ಲಿ ಅಂತನ್ನೋದು ಒಪ್ತಿಲ್ಲ ಅಂತ ಕಾಣತ್ತೆ, ಅವರ ವೈಚಾರಿಕ ದೃಷ್ಟಿಗೆ. ಅದನ್ನ ಪ್ಪ್ರಶ್ನೆ ಮಾಡ್ತಾ ಇಲ್ಲ. ಆದರೆ ಅನ್ಯಾಯ ಏನಾಯ್ತು ಅಂದ್ರೆ ಮಕ್ಕಳ ಸಾಹಿತ್ಯ ಅಂತನ್ನೋದು ಹರಿಗಡಿದು ಹೋಯ್ತು. ಅದೃಷ್ಟವಶಾತ್ ಆಗ ಮಕ್ಕಳಿಗೆ ಬೇಕಾದದ್ದನ್ನ ತಮ್ಮತಮ್ಮ ಪ್ರತಿಭೆಗೆ ಶಕ್ತಿಗೆ ತಕ್ಕಂತೆ ಬರೀತಾ ಅದು ತೀರಾ ಹರಿಗಡಿಯದ ಹಾಗೆ ನೋಡ್ಕೊಂಡೋರು ಸಾಮಾನ್ಯ ಪ್ರೈಮರಿ ಸ್ಕೂಲ್ ಅಧ್ಯಾಪಕರು. ಅದರಲ್ಲೂ ಉತ್ತರ ಕನ್ನಡದಲ್ಲಿ ಎಷ್ಟೋ ಪದ್ಯಗಳನ್ನು ಬರೆದ್ರು. ಅಲ್ಲಿ ರಾಜರತ್ನಂ ಪಂಜೆಯವರ ಪ್ರತಿಭಾ ವಿಶೇಷ ಕಾಣದೇ ಇರಬಹುದು, ಆದರೆ ಮಕ್ಕಳ ಸಾಹಿತ್ಯ ಬರ್ತಾ ಇತ್ತು. ನವ್ಯ ಒಂದು ತ್ರುಟಿತವಾದ ಕಾಲದಲ್ಲಿ ಐವತ್ತರ ನಂತರ ಪುನಃ ಮಕ್ಕಳಿಗೆ ಗಂಭೀರವಾದ ರೀತಿಯಲ್ಲಿ ಬರೆಯುವುದು ಅಗತ್ಯ ಅಂತ ಕೆಲವರಿಗೆ ಅನ್ನಿಸಿ ಬರಿಯೋಕೆ ಶುರುಮಾಡಿದ್ರು. ಅದರಲ್ಲಿ ನಾನೂ ಒಬ್ಬ. ನನ್ನ 'ಹಕ್ಕಿಸಾಲು' ಆಗ ಬಂತು. ನಾನು ಹೀಗೆ ಬರಿಯೋವಾಗ ಇದು ಕೇವಲ ಮಕ್ಕಳಿಗೆ ಅಂತಲೂ ಇಲ್ಲ, 'ಹಕ್ಕಿಸಾಲು' ಪದ್ಯಗಳನ್ನ ಮಕ್ಕಳೂ ಓದಬಹುದು, ದೊಡ್ಡವರಿಗೂ ಸಲ್ಲುವ ಮಕ್ಕಳ ಕವಿತೆಗಳು ಅಂತ ಶರ್ಮ ಬರೆದರು,ಅದರ ಬಗ್ಗೆ ಬರಿಯೋವಾಗ. ಅಂದರೆ, ಅರ್ಥ ಏನಂದ್ರೆ ಮಕ್ಕಳು ಅನ್ನೋದು ಕೇವಲ ಒಂದು ವಯಸ್ಸಿನ ಲೆಕ್ಕದಲ್ಲಿ ನಾವು ಹೇಳುವ ಮಾತಲ್ಲ ಅದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ, ಬೆಳೆದ ವ್ಯಕ್ತಿಯಲ್ಲೂ ಒಂದು ಮಗು ಇದ್ದೇ ಇರುತ್ತಲ್ಲ, ಆ ಮಗುವಿಗೆ ಬೇಕಾದ್ದನ್ನ ನಾವು ಕೊಡ್ತಾನೇ ಇರಬೇಕಾಗತ್ತೆ. so, ಆ ಇನ್ನೊಸೆನ್ಸ್, ಮುಗ್ದತೆ, ಅದು ನೋಡುವಂಥ ಅದ್ಭುತ ದರ್ಶನಗಳಿರುತ್ವೆ. ಮಕ್ಕಳೂ ಮತ್ತು ಪ್ರೌಢರೂ ಓದಬಹುದಾದಂಥ ಪದ್ಯಗಳನ್ನು ಬರಿಯಬೇಕು. ಕೇವಲ ಮಕ್ಕಳಿಗೆ ಬರೆದ್ರೆ ಅವುಗಳಿಂದ ಉಪಯೋಗ ಏನಾಗಲ್ಲ. ಈಗ ಗುಬ್ಬಿಪದ್ಯಗಳು ಮಕ್ಕಳೂ ಓದಬಹುದು, ದೊಡ್ಡವರಿಗೂ ಅದರಲ್ಲಿ ಕೆಲವು ಪಾಠಗಳಿರ್ತದೆ. ಅಂದರೆ, ಈ ಥರದ್ದು ಒಂದು ಸಂಕೀರ್ಣವಾದ ರಚನಾಕ್ರಮವನ್ನು ನಾನು ಇಟ್ಕೊಳಬೇಕು ಅಂತ ಪ್ರಯತ್ನ ಮಾಡಿದೆ. ಅಳಿಲುರಾಮಾಯಣ ನಂದು ಕೇವಲ ಮಕ್ಕಳು ಮಾತ್ರವಲ್ಲ, ದೊಡ್ಡವರೂ ಕೂಡ ಅದನ್ನು ಅಷ್ಟೇ ಇಷ್ಟಪಡ್ತಾರೆ. ಹಾಗೆ ನೋಡ್ತ ಅಂದರೆ, ಎಲ್ಲಾ ವಯೋಮಾನದ ಜನರಿಗೂ ಎಲ್ಲೋ ಒಂದು ಕಡೆ ಹೃದಯಕ್ಕೆ ತಾಗುವಂತೆ ಬರಿಯುವಂಥ ಒಂದು ಕ್ರಮ ಹುಟ್ಟಿಸಬೇಕು ಅಂತ. so, ಈ ಪ್ರಯತ್ನ ಮಾಡಿದ್ದು ನಾನು ಶುದ್ಧಾಂಗ ಮಕ್ಕಳ ಪದ್ಯಗಳಲ್ಲ ನಾನು ಬರ್ದಿರೋದು, ಅವು ದೊಡ್ಡವರೂ ಮತ್ತು ಮಕ್ಕಳೂ ಓದಬೇಕಾದ ಕವಿತೆಗಳಾಗಿದ್ವು ಮತ್ತು ಒಂದು ಪುಟ್ಟ ಮಗು ಕೂಡ ತನ್ನ ಮಗುವನ್ನ ಮತ್ತಷ್ಟು ಚೆನ್ನಾಗಿ ಉಳಿಸಿಕೊಳ್ಳೋದಿಕ್ಕೆ ಮತ್ತು ಈ early ಮೆಚೂರಿಟಿ ಇದೆಯಲ್ಲ ಅಂದರೆ, ಶೀಘ್ರವಾಗಿ ಪ್ರೌಢತ್ವವನ್ನು ಪಡೆಯುವಂತಹ ಇವತ್ತಿನ ಆಧುನಿಕ ಕಾಲದ ಒತ್ತಡಗಳು, ಬಹಳ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಇದ್ದಕ್ಕಿದ್ದಂಗೇನೆ ವಯಸ್ಸಿಗೆ ಮೀರಿ ಬೆಳೆದ್ಬಿಡುತ್ವೆ. ಅದು ಬಹಳ ಅಪಾಯಕಾರಿ. ಅದನ್ನ ತಪ್ಪಿಸಬೇಕಾದರೆ ಆ ಮಗುವನ್ನ ಮಗುವಾಗಿ ಉಳಿಸುವ ಯತ್ನವನ್ನು ನಾವು ಮಾಡಬೇಕಾಗತ್ತೆ. ಮಗು ನಿಧಾನವಾಗಿ ಅರಳಬೇಕಾಗತ್ತೆ. ಒತ್ತು ಹಾಕಿ ಹಣ್ಣು ಮಾಡೋದು ಇದೆಯಲ್ಲ. ಈಗ ಟೀವಿಯಲ್ಲಿ ನಾವು ತೋರಿಸ್ತಿರೋ ದೃಶ್ಯಗಳು, ಇವೆಲ್ಲ ಮಗು ಬಹಳ ಬೇಗ ಜಾಗೃತಗೊಂಡುಬಿಡುತ್ತೆ. ತನಗೆ ಅಗತ್ಯವಿಲ್ಲದ ಪ್ರಪಂಚದ ಕಡೆ ಕೂಡ ಅದರ ನೋಟ ಹೊರಟುಹೋಗತ್ತೆ. ಹಾಗೆ ಮಾಡದೆ ಮಗೂನ ಸಹಜವಾಗಿ ಹೂವಿನಂತೆ ಅರಳಿಸೋದಕ್ಕೆ ಬೇಕಾಗುವಂಥ ಪದ್ಯಗಳನ್ನ ಕೊಡಬೇಕು, ಅದು ಒಂದು. ದೊಡ್ಡವರಲ್ಲಿರುವಂಥ ಮಗು ಕೂಡ ತಮ್ಮ ಬಾಲ್ಯವನ್ನ, ಮಗುತನವನ್ನ ಮತ್ತೆ ಪಡೆಯೋ ಹಾಗೆ ಎಲ್ಲೋ ಒಂದು ಕಡೆ ಅವರ ಕ್ರೌರ್ಯವನ್ನು ಕಡಿಮೆ ಮಾಡೋ ಹಾಗೆ, ಅವರ ಮುಗ್ಧತೆಯನ್ನು ಹೆಚ್ಚು ಮಾಡೋ ಹಾಗೆ ಈ ಪದ್ಯಗಳು ಕೆಲಸ ಮಾಡಬೇಕು. ಅದಕ್ಕೆ ನಾನು ಮಕ್ಕಳ ಪದ್ಯ, ನಾಟಕ ಬರಿಯೋಕೆ ಶುರುಮಾಡ್ದೆ.

ಪ್ರಶ್ನೆ ೭
ದೊಡ್ಡವರೊಳಗಿರುವ ಮಗುವನ್ನು ಎಚ್ಚರಿಸುವ ಕೆಲಸವನ್ನು ನೀವು ಮಕ್ಕಳ ಪದ್ಯ ಮತ್ತು ನಾಟಕಗಳ ಮೂಲಕ ಮಾಡಿದೆ ಅಂತ ಹೇಳಿದ್ರಿ. ಈ ಅಳಿಲುರಾಮಾಯಣವನ್ನು ಸೃಷ್ಟಿಸಿದ ನಿಮ್ಮ ಒಳಗಿನ ಮಗು ಇದೆಯಲ್ಲ ಅದರ ಬಗ್ಗೆ ಸ್ವಲ್ಪ ಹೇಳಿ.
ಉತ್ತರ
ಪ್ರತಿಯೊಬ್ಬ ಲೇಖಕನ ಒಳಗೂ ಒಂದು ಮಗು ಇದ್ದೇ ಇರುತ್ತೆ. ಮಗು ಇಲ್ಲದಂಥ ಲೇಖಕ ಯಾರೂ ಇಲ್ಲ ವೇ ಇಲ್ಲ. ನೀವು ಯಾರನ್ನೇ ತಗೊಳ್ಳಿ, ಪ್ರತಿಯೊಬ್ಬ ಲೇಖಕನಲ್ಲೂ ಕೂಡ ಈ ಅಮಾಯಕವಾದ ಒಂದು ಮುಗ್ಧತೆಯ ಮಗು ಇಲ್ಲದಿದ್ರೆ ಈ ಮಗು ಮಾದರಿಯ ಕ್ಯಾಮರಾ ಕಣ್ಣು ಅಂತ ಅಡಿಗರು ಏನು ಹೇಳ್ತಾರಲ್ಲ, ಆ ಮಗು ಮಾದರಿಯ ಕ್ಯಾಮರಾ ಕಣ್ಣು ಇಲ್ಲದೆ ಹೋದರೆ ಗ್ರಹಣ ಶಕ್ತಿಯೇ ಕಡಿಮೆ ಆಗಿಬಿಡುತ್ತೆ. ನಾವು ಎಲ್ಲಿ ಮಗುತನ ಕಳ್ಕೊಳ್ತೀವೋ, ಇಂದ್ರಿಯಪಾಟವನ್ನ ಕಳ್ಕೊಳ್ತೀವೋ, ಆಗ ನಮ್ಮ ನೋಡುವದೃಷ್ಟಿ ಕೂಡ ಸ್ವಲ್ಪ ಮಂಕಾಗತ್ತೆ. ಭಾಳ ಮುಖ್ಯವಾಗಿ ನಾವು ಈ ಇಂದ್ರಿಯಪಾಟವ ಶಕ್ತಿಯನ್ನ ಉಳಿಸಿಕೊಳ್ಳಲೇಬೇಕು. ಮಗುವಿಗೆ ಇರುವಂಥ ಈ ಗ್ರಹಿಕೆಯ ಚುರುಕು ಇದೆಯಲ್ಲ, ಲೇಖಕ ಕಳಕೊಳ್ಳೋ ಹಾಗೇ ಇಲ್ಲ. ಯಾರು ಕಳಕೊಳ್ಳರೋ ಅಂಥವರು ಎಂಭತ್ತು ವರ್ಷ ಇದ್ರೂ ಒಳ್ಳೇಪದ್ಯ ಬರೀತಾನೇ ಇರ್ತಾರೆ. ಪುತಿನ ತರಹ, ನರಸಿಂಹಸ್ವಾಮಿ ತರಹ, ಅವರು ಕೊನೆಕೊನೆಯ ದಿನಗಳಲ್ಲೂ ಕೂಡ ಅದ್ಭುತವಾದ ಪದ್ಯವನ್ನ, ನರಸಿಂಹಸ್ವಾಮಿಯವರು ಯಾಕೆ ಬರಿಯಕ್ಕೆ ಆಯ್ತು ಅದರೆ ಎಲ್ಲೋ ಒಂದು ಕಡೆ ಅವರು ತಮ್ಮ ಮಗುತನವನ್ನ ಕಾಪಾಡಿಕೊಂಡಿದ್ರು ಮನಸ್ಸಿನಲ್ಲಿ . ಆದ್ದರಿಂದ ನನ್ನ ಮಗುವನ್ನ ನಾನು ನನ್ನ ಮನಸ್ನಲ್ಲಿ ಕಾಪಾಡಿಕೊಳ್ಳಲಿಕ್ಕೆ ಯಾವಾಗೂ ಇಷ್ಟ ಪಡ್ತಾನೇ ಇರತೀವಿ. ಅದರಫಲಾನೇ ಇವತ್ತು ನನ್ನಪದ್ಯಗಳು, ಮತ್ತೆ ಮಕ್ಕಳ ಪದ್ಯಗಳು ಮಾತ್ರ ಅಲ್ಲ. ನನ್ನ ಸೀರಿಯಸ್ ಪೋಯೆಮ್ಸ್ ನಲ್ಲೂ ಕೂಡ ಕಾಣುವ ನೋಡುವ ಚುರುಕಿದೆಯಲ್ಲ, ಕೇಳುವ ಚುರುಕಿದೆಯಲ್ಲ, ಇದಕ್ಕೆ ಕಾರಣ ಅಂದರೆ, ನನ್ನ ಮಗು ಜಾಗೃತವಾಗಿರೋದು . ಆ ಮಗು ಕಣ್ಣು ಮಂದ ಆದರೆ, ಅಥವಾ ಕನ್ನಡಕ ಬಂದು ಬಿಟ್ಟರೆ ಚಿಕ್ಕ ವಯಸ್ಸಿನಲ್ಲಿ, (ಈಗೇನು ಏಳು-ಎಂಟು ವರ್ಷದ ಮಕ್ಕಳೆಲ್ಲ ಕನ್ನಡಕ ಹಾಕ್ಕೊಂಡುಬಿಡ್ತವೆ, ನನಗೆ ಗಾಬರಿ ಆಗುತ್ತೆ. ಅರವತ್ತು -ಎಪ್ಪತ್ತು ವ್ಷದವರು ಹಾಕ್ಕೊಂಡ್ರೆ ಸರಿಯಪ್ಪ, ಸಹಜ ಅದು. ) ಚಿಕ್ಕ ಮಕ್ಕಳೆಲ್ಲ ಕನ್ನಡಕ ಹಾಕ್ಕೊಳ್ತಾ ಇದ್ರೆ, ಎಲ್ಲೋ ಒಂದು ಕಡೆ ತನ್ನ ಶಕ್ತಿಯನ್ನ ಕಳ್ಕೊಳ್ತಾ ಇದೆ.ಹಾಗೆ ಕಳ್ಕೊಳ್ದೆ ಇದ್ದಾಗ ಮಾತ್ರನೇ ನಿರಂತರವಾದ ಬರವಣಿಗೆ ಸಾಹಿತ್ಯಸೃಷ್ಟಿ ಸಾಧ್ಯ ಆಗತ್ತೆ.

ಪ್ರಶ್ನೆ ೮
ಅಳಿಲುರಾಮಾಯಣದ ಹಿನ್ನೆಲೆಯನ್ನು ಸ್ವಲ್ಪ ವಿವರಿಸಿ. ಅದು ಹೇಗೆ ಹುಟ್ಕೊಳ್ತು, ಯಾವಾಗ, ಯಾವ ಸಂದರ್ಭದಲ್ಲಿ ಅದನ್ನ ಬರೆದ್ರಿ, ಯಾಕಂದ್ರೆ ಅದೊಂತರಾ ಒಂದು ಪುನರಾಖ್ಯಾನ ತರದ ಕೃತಿ.
ಉತ್ತರ
ವಾಸ್ತವವಾಗಿ ಬಿ. ವಿ. ಕಾರಂತರು ಮತ್ತು ನನ್ನ ಸಂಪರ್ಕ ನಿಕಟವಾದ ಮೇಲೆ, ಅವರದೊಂದು ಕಥೆ ಇತ್ತು. ಹಿಂದಿಯಲ್ಲಿ ಪ್ರಯೋಗ ಮಾಡಿದ್ರು, ಅಳಿಲುರಾಮಾಯಣವನ್ನ,.ಅಂದ್ರೆ ಅವರು ಬರೆದಿರ್ಲಿಲ್ಲ. ಅವರಿಗೇನು ಅಂದ್ರೆ ರಿಹರ್ಸಲ್ ನಲ್ಲೇನೆ ಆ ತೆ ಹೇಳೋದು, ಮತ್ತೆ ಮಕ್ಕಳಿಗೆ ಅದೇ ಡೈಲಾಗನ್ನ ಮಕ್ಕಳೇ ಹೇಳೋದು, ಹೀಗೆ ಒಂದು ಪ್ರಯೋಗ ಮಾಡ್ ತಾ ಇದ್ರು ಕಾರಂತರು. ಅವರಿಗೆ ಕನ್ನಡದಲ್ಲಿ ಈ ನಾಟಕ ಮಾಡಬೇಕಂತ ಆಸೆ ಆಯಿತು. ಆಮೇಲೆ ವೈದೇ ಹಿ ಅವರಿಗೆ ಹೇಳಿದ್ರಂತೆ. ಅವರು ಒಂದು ಪುಟ್ಟ ನಾಟಕ ಬರೆದ್ರು. ಅದು ಒಂದು ಮೂರ್ನಾಲ್ಕು ಪುಟದ ನಾಟಕ ಅಷ್ಟೇ. ಅದು ಪ್ರಯೋಗ ಆಯಿತೋ ಇಲ್ಲವೋ ಗೊತ್ತಿಲ್ಲ ನನಗೆ. ಆಮೇಲೆ ಕಾರಂತರು ಬೆಂಗಳೂರಿನಲ್ಲಿ ನನಗೆ ಭೇಟಿ ಮಾಡಿದಾಗ ಪೂರ್ಣಪ್ರಮಾಣದ ಒಂದು ನಾಟಕ ನೀವು ಮಾಡಿಕೊಡಿ, ಒಂದೂವರೆ ಗಂಟೆ ನಾಟಕ, ಮಕ್ಕಳೆಲ್ಲ ಅದರಲ್ಲಿ ಇನ್ವಾಲ್ವ್ ಆಗೋವಂಥಾದ್ದು , ತಮಾಷೆ, ತನ್ನ ನೀವು ಪೂರ್ತಿ ನಿಮಗೆ, ನನ್ನ ಮೂಲಕತೆ ಹೀಗೆ, ಅಳಿಲು ರಾಮನಿಗೆ ಸಹಾಯ ಮಾಡತ್ತೆ. ಅದಕ್ಕೊಂದು ತಾಯಿ, ಮತ್ತೆ ರಾಮ ಮತ್ತು ಅಳಿಲು ಸಂಬಂಧ, ರಾಮ ಹೇಗೆ ಅಳಿಲಿಗೂ ತನ್ನ ಪ್ರೀತಿಯನ್ನ ತೋರಿಸ್ದ ಅಂತನ್ನೋದು , so, ಅಳಿಲು ಕೂಡ ಹೇಳಗೆ ಒಂದು ಸಾಮಾಜಿಕ ಕ್ರಿಯಾಶೀಲತೆಯಲ್ಲಿ ತೋಡಗಿಸಿಕೊಳ್ಳೋದು ತನ್ನ ಹಕ್ಕು ಅಂತ ಸ್ಥಾಪಿಸಿತು ಅಂತ. ಎಲ್ಲ ಸಂಗತಿ ಬರೋ ಹಾಗೆ ನಾನು ಬರೆದೆ ಅದನ್ನ,. ನನಗೆ ನೆನಪಿದೆ. ಅದರಲ್ಲಿ ಒಂದು ದ್ರಶ್ಯದಲ್ಲಿ ಏನು? ಸಮುದ್ರವನ್ನ ದಾಟಿಬಂದ್ರಾ ವಾನರರು? ಅಂತ ರಾವಣ ಕೇಳ್ತಾನೆ. ಅದಕ್ಕೆ ಅವರು ಹಿಂದಿಯಲ್ಲಿ ಸಮುದ್ರ ಅನ್ನೋದನ್ನ ಮೂರ್ನಾಲ್ಕು ಪದಗಳನ್ನು ಹೇಳಿಬಿಟ್ಟು ಸಮುದ್ರವನ್ನ, ಶರಧಿಯನ್ನ, ಸಾಗರವನ್ನ, ದಾಟಿಬಂದ ಅಂತ ಹೇಳ್ಬೇಕು, ಆವಾಗ ಅದು ಚೆನ್ನಾಗಿರುತ್ತೆ ಅಂತ. ನನಗೂ ಹೇಳಿದ್ರು ನೀವು ಒಂದು ಹತ್ತು ಪದ ನನಗೆ ಕೊಡಬೇಕು ಅಂತ . ನನಗೆ ಅದೂ ನೆನಪಿದೆ. ಕಾರಂತರು ಹೀಗೆ ಬೇರೆ ತರನೇ, ಅವರಿಗೆ ಬಾಕಿ ಎಲ್ಲ ಏನೂ ಮಾತಾಡ್ಲಿಲ್ಲ. ಈ ಸಮುದ್ರ ಅನ್ನೋಕೆ ಹತ್ತು ಪದ ಬೇಕಲ್ಲ, ನಿರಧಿಯನ್ನ, ಶರಧಿಯನ್ನ, ಜಲಧಿಯನ್ನ, ಜಡಧಿಯನ್ನ ದಾಟಿಬಂದ್ರು ಆ ವಾನರರು ಅಂತ ಹೇಳಬೇಕೂಂತ. ಅದೆಲ್ಲ ನೆನಪಿದೆ ನನಗೆ ಈಗ್ಲೂನೂ. ಆಮೇಲೆ ನಾಟಕ ಅದು ಪ್ರಯೋಗ ಆದಾಗ ತುಂಬಾ ಜನ ಇಷ್ಟಪಟ್ರು. ಅದು ಈ ದೃಷ್ಟಿಕೋನ ಎಲ್ಲ. ಅದರಲ್ಲಿ ಕಾರಂತರ ಮೂಲಕತೆಗೆ ನಾನು ಅನೇಕ ಹೊಸ ಸಂಗತಿಗಳನ್ನ, ಕಲ್ಪನೆಗಳನ್ನ ಸೇರಿಸಿದ್ದು ಭಾಳ ಮುಖ್ಯ. ವಾದದ್ದು ಅಂತಂದ್ರೆ ಅಳಿಲು ನಿನಗೆ ಏನು ಬೇಕು ಅಂತ ಕೇಳಿದಾಗ ರಾಮ ನಾನು ನೀನು ಕಬಡ್ಡಿ ಆಡೋಣ ಅನ್ನತ್ತೆ. ಅದೇ ನನ್ನ ಆಸೆ ಅನ್ನತ್ತೆ. ನನ್ನ ಜತೇಲಿ ಕಬಡ್ಡಿ ಆಡಬೇಕು ನೀನು ಅಂತ. ರಾಮ ಅಷ್ಟು ಖುಷ್ ಆಗ್ತದೆ ಅವನಿಗೆ ಅಂದ್ರೆ, ತಕ್ಷಣ ತನ್ನ ಕೋದಂಡವನ್ನ ಲಕ್ಷ್ಮಣನಿಗೆ ಕೊಟ್ಟು ಅಯ್ಯೋ ಸದ್ಯ ನನ್ನ ಮೈಯೆಲ್ಲ ಹಗುರ ಆಗೋಯ್ತಪ್ಪ, ಈ ಬಿಲ್ಲನ್ನ ಕೆಳಗಿಳಿಸಿದ ಮೇಲೆ. ನೋಡಿ, ವಿಶ್ವಸಂಸಾರಿ ಪದ್ಯದ ಸೂಚನೆ ಎಲ್ಲಿರುತ್ತೆ ಅಂತ. ಆಮೇಲೆ ತಕ್ಷಣ ಕಬಡ್ಡಿ ಆಡೋಕೆ ಶುರುಮಾಡ್ ತಾನೆ. ಅಳಿಲು ಮತ್ತೆ ರಾಮ. ಕಬಡ್ಡಿ ಆಡೋವಾಗ ಅಳಿಲು ಹಿಡ್ಕೊಳ್ತಾನೆ. ಜಾರಿಕೊಂಡು ಹೋಗ್ಬಿಡುತ್ತೆ. ಆಗ ಅವನ ಕೈಗುರುತು ಬಿತ್ತು ಅಂತ. ಕತೆಯ ಹಿಂದಿನ ಕತೆ ಅಂತಂದ್ರೆ ಅವನು ಆಶೀರ್ವಾದ ಮಾಡ್ ತಿದ್ದ, ಅದಕ್ಕೆ ಮೂರು ಗೆರೆ ಬಿತ್ತು ಅಂತ. ನಾನು ಏನು ಮಾಡಿದೆ, ಅವನು ಕಬಡ್ಡಿ ಆಡುವಾಗ ಅವನು ಹಿಡಕೊಳ್ಳೋಕೆ ಹೋದಾಗ ಜಾರಿಕೊಂಡಿದ್ರಿಂದ ಮೂರು ಬೆರಳ ಗುರುತು ರಾಮಂದು ಬಿತ್ತು ಅಂತ ಹೇಳಿ ಅದನ್ನು ಚೇಂಜ್ ಮಾಡ್ದೆ. ಹೀಗೆ ಅನೇಕ ಬದಲಾವಣಿಗಳನ್ನ ಮಾಡ್ದೆ. ಮತ್ತು ಯುದ್ಧವಿರೋಧಿ ಒಂದು ನಿಲುವನ್ನ ಅದರಲ್ಲಿ ತರೋಕೆ ಪ್ರಯತ್ನ ಮಾಡ್ದೆ. ಮತ್ತೆ ಭಾಳಾ ನನಗೆ ಅಲ್ಲ ಸಮಾಧಾನ ಕೊಟ್ಟದ್ದು ಅಲ್ಲಿ ಬಂದಿರೋವಂಥ ಹಾಡುಗಳು, ಸಾಂಗ್ಸ್. ಕಾರಂತರಿಗೆ ಭಾಳಾ ಖುಷಿ ಆಯಿತು. ಅವರು ಹೇಳ್ತಾ ಇದ್ರು, ನೋಡಿ, ನನಗೆ ಹಿಡು ನೋಡಿದ ಕೂಡಲೇ ಇನ್ ಸ್ಪೈರ್ ಆಗಬೇಕು ಕಂಪೋಸ್ ಮಾಡಲಿಕ್ಕೆ . ಹಾಗಾಗೋದು ಇಬ್ಬರಲ್ಲಿ, ಒಂದು ಕಂಬಾರರ ಹಾಡುಗಳನ್ನ ನೋಡಿದಾಗ, ಇನ್ನೊಂದು ನಿಮ್ಮ ಹಾಡುಗಳನ್ನು ನೋಡಿದಾಗ. ಹಾಗೆ ನೋಡಿದ ಕೂಡಲೇ ನನಗೆ ತಕ್ಷಣ ರಾಗ ಬಂದು ಬಿಡುತ್ತೆ. ಇದನ್ನ ಕಾರಂತರು ಹೇಳ್ತಾ ಇದ್ರು. ಮತ್ತೆ ಅವರು ನನಗೆ ಬ್ಲರ್ಬ್ ನಲ್ಲಿ ಕೂಡ ಬರೆದಿದ್ದಾರೆ ಆಸಂಗತಿ. ಹೀಗೆ ಅಳಿಲುರಾಮಾಯಣ ಮೂಲಕಥೆ ಕಾರಂತರನ್ನಿಟ್ಟುಕೊಂಡು ಅದನ್ನ ಪೂರ್ಣಪ್ರಮಾಣದಲ್ಲಿ ಅರಳಿಸಿದಾಗ ಉಂಟಾಗದಂಥ ಒಂದು ನಾಟಕ. ಪ್ರಶ್ನೆ ಅದೇ ರೀತಿ ಮಂಥರೆ, ಊರ್ಮಿಳೆ ತರದ ಪಾತ್ರಗಳು ಕೂಡ ರಾಮಾಯಣದಲ್ಲಿ ನಿಮ್ಮನ್ನು ತುಂಬಾ ಕಾಡಿವೆ. ಅವುಗಳು ಕೂಡ ನಾಟಕಗಳಾಗಿದಾವೆ. ಹೀಗೆ ಒಂದು ರೀತಿಯ ಸ್ತ್ರೀಪಾತ್ರಗಳನ್ನ ಭಿನ್ನದೃಷ್ಟಿಕೋನದಿಂದ ನೋಡುವುದು ಭಾರತೀಯ ಸಾಹಿತ್ಯದಲ್ಲಿ ಹೊಸದೇನಲ್ಲ. ಮಲೆಯಾಳಂನಲ್ಲಿ ಟ್ರೈಮಾಡಿದಾರೆ ಅದನ್ನು, ಕನ್ನಡದಲ್ಲಿ ಕೂಡ ಪ್ರಯತ್ನಗಳಾಗಿದಾವೆ, ಯುಗಾಂತರದ ಮೂಲಕ ಲೀಲಾವತಿ, ಕರ್ವೆ ಅವರು ಟ್ರೈಮಾಡಿದಾರೆ. ಈ ತರ ಬೇರೆ ಬೇರೆ ತರದ (ಪ್ರಯತ್ನ) ಆಗಿವೆ. ಆದರೆ ಮಂಥರೆಯನ್ನ ನೀವು ನೋಡಿದ ಒಂದು ಅದೇ ಹೆಚ್ಚೂಕಡಿಮೆ ದೃಷ್ಟಿಕೋನದಲ್ಲಿ ಕುವೆಂಪು ಕೂಡ ನೋಡ್ತಾರೆ. ಆದರೆ ಊರ್ಮಿಳೆ ವಿಷಯದಲ್ಲಿ ನೀವದನ್ನ ಬಹಳ ಭಿನ್ನವಾದ ದೃಷ್ಟಿಯಲ್ಲಿ, ಅದನ್ನ ಇಡೀ ರಾಮಾಯಣವನ್ನ ಊರ್ಮಿಳೆ ದೃಷ್ಟಿಯಲ್ಲಿ ನೋಡಿದ ಹಂಗೇನೆ ಆ ಊರ್ಮಿಳಾ ನಾಟಕದಲ್ಲಿ ಹೆಚ್ಚೂಕಡಿಮೆ ನೋಡ್ತೀರಿ. ಊರ್ಮಿಳೆ ನಿಮಗೆ ಅಷ್ಟೊಂದು ಕಾಡಲಿಕ್ಕೆ ಏನು ಕಾರಣ?

ಪ್ರಶ್ನೆ ೯
ಭರತನ್ನ ಕುರಿತ ತಮ್ಮ ಪದ್ಯದಲ್ಲೂ ಈ ರೀತಿಯ ಸೂಚನೆಗಳಿದಾವೆ. ಅಂದರೆ, ನೀವು ಒಂದು ಸಂಸಾರಿಯ ಆಯ್ಕೆ ಅಂತ ಕೆ. ವಿ. ಸುಬ್ಬಣ್ಣನವರು ಹೇಳ್ತಾರೆ, ಆ ರೀತಿಯ ಒಂದು ಆಯ್ಕೆಯನ್ನು ನಿಮ್ಮ ಒಂದು ರಾಜಕೀಯ ನಿಲುವನ್ನಾಗಿ ಪರಿಗಣಿಸ್ತೀರಿ ಅಂತ ಅಂದ್ಕೊಳಬಹುದಾ?
ಉತ್ತರ
ಅದಕ್ಕೇ ಶ್ರೀಸಾಮಾನ್ಯ ಅನ್ನುವಂಥ ಕಲ್ಪನೆಯನ್ನ ಕುವೆಂಪು ಅವರು ಕೊಟ್ರು. ಸಾಮಾನ್ಯವ್ಯಕ್ತಿ ಕೂಡ ಅವನು ಶ್ರೀ, ಅವನಿಗೆ ಶ್ರೀ ಅಂತ ಹೇಳಬೇಕಾಗುತ್ತೆ. ಕೇವಲ ಮೇಲುವರ್ಗದವರು, ಅಧಿಕಾರಿ, ರಾಜರು, ಅವರು ಮಾತ್ರನೇ ಶ್ರೀ ಅಲ್ಲ. ಮಠಾಧಿಪತಿಗಳಂತೂ ಶ್ರೀ ಶ್ರೀ ಶ್ರೀಗಳು. ಅವರಿಗೆ ಮೂರುನಾಲ್ಕು ಶ್ರೀ

ಇದ್ರೂ ತೃಪ್ತಿಯಿಲ್ಲ. so, ನಾನಂದ್ಕೊಂಡೆ-ಶ್ರೀಸಾಮಾನ್ಯ ಅಂತ ಎಷ್ಟು ಚೆನ್ನಾಗಿ ನಮ್ಮ ಕವಿಗಳು ಕೊಟ್ಟಿದಾರಲ್ಲ. ನಾನು ಶ್ರೀ ಸಂಸಾರಿ ಅಂತ ಕರೆಯೋಣ ರಾಮನನ್ನು . ಸಂಸಾರಿ ಕೂಡ ಅವನು ಮಹಾ, ಅವನಿಗೆ ಶ್ರೀ ಸೇರಲೇಬೇಕಾಗತ್ತೆ. ಆದರೆ ಸಂಸಾರ ಎಷ್ಟು ಇದೆ ಅನ್ನೋದು ಇಂಪಾರ್ಟೆಂಟು. ಈಗ ನಾನು, ನನ್ನ ಹೆಂಡ್ತಿ, ನನ್ನ ಮಗು, ಇಷ್ಟೇ ಸಂಸಾರ ಅಂತನ್ನೋದು ಸ್ವಾರ್ಥದ ದೃಷ್ಟಿಯಾಗುತ್ತೆ. ಈ ಸಂಸಾರ ಯಾವಾಗ ತನ್ನ ಹೊರಚಾಚುಗಳನ್ನ ಪಡೀತಾ ಹೋಗುತ್ತೋ, ಪಕ್ಕದ ಮನೆಯನ್ನ ಒಳಗೊಳ್ಳಬೇಕು, ತನ್ನ ಹಳ್ಳಿಯನ್ನ ಒಳಗೊಳ್ಳಬೇಕು, ನಿಧಾನವಾಗಿ ತಾಲ್ಲೂಕನ್ನ, ತನ್ನ ಜಿಲ್ಲೆಯನ್ನ, ತನ್ನ ದೇಶವನ್ನ, ಆಮೇಲೆ ಸಾಧ್ಯವಾದರೆ ಇಡೀ ಜಗತ್ತನ್ನ, ಹೀಗೆ ಸಂಸಾರ ಬೆಳೆದರೆ ಆಗ ಅವನು ಶ್ರೀಸಂಸಾರಿ ಆಗ್ತಾನೆ. ಶ್ರೀವನಿತೆಯರಸ ಇದ್ದಾನಲ್ಲ ಅವನು ಹೀಗೆ ಸಂಸಾರಿ ಆಗೋದು. ಕುಮಾರವ್ಯಾಸನಲ್ಲಿ ಬರೋದು

ಶ್ರೀವನಿತೆಯರಸನೆ, ವಿಮಲ ರಾ ಜೀವಪೀಠನ ಪಿತನೆ, ಜಗಕತಿ ಪಾವನನೆ, ಸನಕಾದಿ ಸಜ್ಜನನಿಕರದಾತಾರ| ರಾವಣಾಸುರಮಥನಶ್ರವಣಸು ಧಾವಿನೂತನ ಕಥನಕಾರಣ ಕಾವುದಾನುತ ಜನವ ಗದುಗಿನ ವೀರನಾರಾಯಣ||

ಇದು ಸಾಮಾನ್ಯಪದ್ಯ ಅಲ್ಲ. ಇತ್ತೀಚೆಗೆ ಯಾರೋ ಸ್ನೇಹಿತರು ಬರೆದದ್ದನ್ನ ನೋಡಿದೆ. ಇವೆಲ್ಲ ಕುಮಾರವ್ಯಾಸನ ಪ್ರತಿಭೆಗೆ ತಕ್ಕ ಪದ್ಯಗಳೇ ಅಲ್ಲ, ಹಾಗೆ ಅಂತ. ಇಲ್ಲ, ಇಲ್ಲ. ಮೊದಲನೇ ಪದ್ಯದಲ್ಲಿ ಎಂಥ ದರ್ಶನ ಇದೆ ಅದರೆ, ಶ್ರೀವನಿತೆಯರಸ, ಗಂಡನಾಗಿ ಅವನು ಮುಖ್ಯ ಅಷ್ಟೇ., ಸ್ವತಃವಿಷ್ಣು ಆಗಿ ಅಲ್ಲ. ಲಕ್ಷ್ಮಿಯ ಗಂಡನೇ, ಬ್ರಹ್ಮನ ತಂದೆಯೇ., ಭಕ್ತರ ಗುರುವೇ, ನೋಡಿ ಹ್ಯಾಗೆ ಹೇಳ್ತಾ ಹೋಗ್ತಾನೆ ಕುಮಾರವ್ಯಾಸ. ಅಂದರೆ, ಅವನು ಸಂಬಂಧ ಇಟ್ಕೊಳ್ಳೋದರಿಂದ ನಮಗೆ ಮುಖ್ಯ ಆಗ್ತಾನೆ. ಈ ಗದುಗಿನ ವೀರನಾರಾಯಣ ಜಗತ್ಕುಟುಂಬಿ, ವಿಶ್ವಕುಟುಂಬಿ ಅನ್ನೋದನ್ನ ತನ್ನ ಪದ್ಯಗಳಲ್ಲಿ, ಮೊದಲನೇ ಪ್ರಾರ್ಥನಾಪದ್ಯದಲ್ಲಿ ಕುಮಾರವ್ಯಾಸ ಹೇಳ್ತಾನೆ. ಅವನ ದರ್ಶನ ಭಾಳಾ ದೊಡ್ಡದು. ಅಂದರೆ ವಿಷ್ಣು ಕೂಡ ಶ್ರೀಕುಟುಂಬಿಯಾಗಿದಾನೆ, ಶ್ರೀಸಂಸಾರಿಯಾಗಿದಾನೆ. ಇಲ್ಲಿಂದ ಇನ್ಸ್ಪಿರೇಶನ್ ಪಡೆದ ನಾನು ಶ್ರೀಸಂಸಾರಿ ಪದ್ಯ ಬರೆದೆ. ರಾಮ ಇದಾನಲ್ಲ ಅವನು ಯಾವತ್ತೂ ಒಬ್ಬನೇ ಪೂಜೆಗೊಳ್ಳೋದಿಲ್ಲ. ಬೇರೆ ದೇವತೆಗಳೆಲ್ಲ ಒಬ್ರೇ ಪೂಜೆಗೆ ಬರ್ತಾರೆ. ಆದರೆ ರಾಮ ಮಾತ್ರ ಹೆಂಡತಿಯನ್ನ, ತಮ್ಮಂದಿರನ್ನ, ಸ್ನೇಹಿತರನ್ನ, ಮಕ್ಕಳನ್ನ, ಆಮೇಲೆ ತಾನು ಯಾರನ್ನ, ಅವನ ದಾಸನ ವೃತ್ತಿಯನ್ನ ಮಾಡ್ ತಾ ಇದ್ದನಲ್ಲ, ಆಂಜನೇಯ, ಅವನನ್ನ, ಸುಗ್ರೀವ ಮೊದಲಾದಂಥ ಬೇರೆ ಬೇರೆ ಟ್ರೈಬಲ್ ಪೀಪಲ್, ಕಿಷ್ಕಿಂಧೆಯವರನ್ನ, ಲಂಕೆಯವರನ್ನ-ವಿಭೀಷಣ, ಎಲ್ಲ ಸೇರ್ಕೊಂಡು ಪೂಜೆಗೊಳ್ತಾನೆ. ಅಂದ್ರೆ ರಾಮನ ಪೂಜೆಯಲ್ಲ, ಸಂಸಾರದ ಪೂಜೆ, ಕುಟುಂಬದ ಪೂಜೆ. ಇದು ರಾಮನ ವಿಸ್ತೃತ ಕುಟುಂಬ ಇದೆಯಲ್ಲ, ಇದು ಜಗದ್ವ್ಯಾಪಿಯಾದದ್ದು . ಹಾಗಾಗದಾಗ ಎಲ್ಲರೂ ಅಣ್ಣತಮ್ಮಂದಿರಾದಾಗ, ನೆಂಟರಾದಾಗ, ಬಂಧುಗಳಾದಾಗ ಪರಸ್ಪರ ತಿಕ್ಕಾಟ ಎಲ್ಲಿದೆ? ಅಲ್ವ? ಈ ನೆಲೆ, ಇದು ರಾಜಕೀಯ ನಿಲುವೂ ಹೌದು. ಇದು ಪಾಲಿಟಿಕಲ್ , ಹೌದು.

ಪ್ರಶ್ನೆ ೧೦
ಪುರಾಣದ ಪಾತ್ರಗಳ ಬಗ್ಗೆ ತಮ್ಮ ಈ ಹೋಲಿಸ್ಟಿಕ್ ಅನ್ನಿಸುವಂಥ ಈ ನಿಲುವಿದೆಯಲ್ಲ, ಇದರ ಹಿಂದೆ ಒಂದಿಷ್ಟು ಪುತಿನ ಅವರ ಪ್ರಭಾವವೂ ತಮ್ಮ ಮೇಲೆ ಇರಬಹುದು. ತಾವು ತುಂಬಾ ಹತ್ರ ಇದ್ದೋರೂ ಕೂಡ ಅವರಿಗೆ. ಅವರು ಕೂಡ ಹೆಚ್ಚು ಕಡಿಮೆ ಬಹಳಷ್ಟು ಸಂದರ್ಭಗಳಲ್ಲಿ ಈ ರೀತಿಯ ಕೃತಿಗಳನ್ನು ರಚಿಸಿದ್ದಾರೆ. ಆದರೆ ನಿಮ್ಮ ತರ ಅಲ್ಲ. ಅವರ ನಿಲುವು ಒಂದು ಬೇರೆ. ಅದೊಂತರಾ ಆಧ್ಯಾತ್ಮದ ಒಂದು ಭಕ್ತಿಯ ನಿಲುವು ಅದು. ನೀವು ಒಂದು ವೈಚಾರಿಕವಾಗಿ ಮಂಡಿಸಿದರೆ, ಅವರು ಭಕ್ತಿಯ ಮೂಲಕ ಇದನ್ನು ಮಂಡಿಸುತ್ತಾರೆ.
ಉತ್ತರ
ಪುತಿನ ಒಂದು ಮಾತು ಹೇಳ್ತಾ ಇದ್ರು. ನೀನು ತುಂಬಾ ಚೆನ್ನಾಗಿ ಬರೀತೀಯ ಪದ್ಯಗಳನ್ನ, ಹಳೆಯ ಸಂಗತಿಗಳನ್ನ ತಕ್ಕೊಂಡು . ಅದರೆ ಹಳೆಯದಿಂದ ಏನು ಬಂದಿದೆಯೋ ಅದನ್ನ ಮುರಿಯಲಿಕ್ಕೆ ಹೋಗಬೇಡ. ನನ್ನ ನಿಸರ್ಗ ಪದ್ಯ ಬಂದಾಗ, so, ಅರ್ಜುನ ಮತ್ತು ಕೃಷ್ಣ. ಕೃಷ್ಣನ ಸಾವನ್ನು ಕುರಿತು ವರ್ಣನೆ ಮಾಡುವಂಥ ಒಂದು ಲಾಂಗ್ ಪೋಯೆಮ್, ನಿಸರ್ಗ ಅಂತ. ಆವಾಗ ಅವನು , ಅರ್ಜುನ ಹೋಗ್ತಾನೆ. ಕೃಷ್ಣನ ಸಾವನ್ನ ನೋಡ್ತಾನೆ. ಆಮೇಲೆ ಅವನ ಸಂಸ್ಕಾರ ಮಾಡಿ ವಾಪಸ್ ಬರ್ಬೇಕಾದ್ರೆ ಅವನ ರಾಣಿಯರನ್ನೆಲ್ಲ ಕರಕೊಂಡು ವಾಪಸ್ ಹಸ್ತಿನಾವತಿಗೆ ಬರಬೇಕಾದರೆ ಕಳ್ಳರು, ದರೋಡೆಕಾರರು ಅವನ ಮೇಲೆ ಬಿದ್ದು , ಹೊಡೆದು, ಹೆಣ್ಮಕ್ಕಳನೆಲ್ಲ ಹೊತ್ಕೊಂಡು ಹೋಗಿಬಿಡ್ತಾರೆ. ಒಡವೆ ವಸ್ತು ಎಲ್ಲ ಕಿತ್ಕೊಂಡು ಹೋಗಿಬಿಡ್ತಾರೆ. ಬಟ್ಟೆಗಳನ್ನೆಲ್ಲ ಎತ್ಕೊಂಡು ಹೋಗಿಬಿಡ್ತಾರೆ. ನಮಗೆ ಉಟ್ಟ್ಕೊಳ್ಳೋಕೆ ಬಟ್ಟೆ ಇಲ್ಲ, ನೀವೆಲ್ಲ ರಥದ ಮೇಲೆ ಬಟ್ಟೆ ಹಾಕ್ಕೊಂಡಿದ್ದೀರಲ್ಲ ಅಂತ. ಆಗ ಅರ್ಜುನ ತನ್ನ ನಿಷಿಕ್ರಿಯತೆಯನ್ನ ಅರ್ಥ ಮಾಡ್ಕೊಳ್ತಾನೆ. ಆಗ ಅವನು ಗಾಂಡೀವವನ್ನು ನೀರಿನಲ್ಲಿ ಒಂದು ಬೆಳಿಗ್ಗೆ ಬಿಟ್ಟುಬಿಡ್ತಾನೆ. ಆ ನೀರಿನಲ್ಲಿ ಬಿಟ್ಟು ಅವನು ಹೊರಗೆ ಬರ್ತಿರಬೇಕಾದರೆ ಬೆಂಕಿಯ ಹೊಳೆಯಿಂದ ಸುಡುಸುಡುವ ಹೆಣ ಬರ್ತಿರುವ ಹಾಗೆ ಕಾಣಿಸುತ್ತಾ ಇದ್ದ ಅವನು ಅಂತ ಎಂಡ್ ಆಗುತ್ತೆ ಪದ್ಯ. ಈ ಪದ್ಯ ಓದಿದಾಗ ನರಸಿಂಹಾಚಾರ್ ರಿಗೆ ಬಹಳ ಬೇಜಾರು ಆಗ್ಹೋಯ್ತು!ಅವರು ನನಗೆ ಹೇಳಿದ್ರು-ನೋಡಪ್ಪಾ, ಈ ಸೃಷ್ಟಿಯ, ಈ ನಮ್ಮ ಹಳಬರು ಬರೆದಿರುವಂಥ ಅದ್ಭುತವಾದ ಒಂದು ಸೃಷ್ಟಿ ಇದೆಯಲ್ಲ, ಅದನ್ನು ನೀವು ಯಾರೂ, ಹೊಸಬರು ಭಗ್ನಗೊಳಿಸಬಾರದು. ನೀವು ಕೃಷ್ಣನ ಬಗ್ಗೆ ಈ ಥರ ಬರೆಯೋಹ ಯೋಚನೆ ಮಾಡಬೇಡಿ. ಅಂದರೆ, ಪುತಿನ ಅವರದು ಒಂದು ರೀತಿನಲ್ಲಿ ಅದೆಲ್ಲವನ್ನ ಹಾಗೆಯೇ ಉಳಿಸಿಕೊಳ್ಳಬೇಕು, ಅನ್ನುವಂಥ ದೃಷ್ಟಿಕೋನ ಇತ್ತು ಅವರಿಗೆ. ಅದಕ್ಕೊಂದು ವೈಚಾರಿಕತೆಯ ಸ್ಪರ್ಶ ಕೊಡಬಹುದು, ಆದರೆ ಅದನ್ನ ಸಮೂಲವಾಗಿ ಭಗ್ನಗೊಳಿಸುವ ಯತ್ನವನ್ನ ಮಾಡಬೇಡ, ಪ್ರತಿಮೆಯನ್ನ ಒಡೆಯಬೇಡ ಅಂತ. ಕರೆಕ್ಟ್, ಇದೇ ಮಾತನ್ನ ಹೇಳ್ತಿದ್ರು. ಪ್ರತಿಮೆಯನ್ನ ನೀನು ಒಡೆಯಬಾರದು. ನಾನು ಹೇಳ್ದೆ, ಪ್ರತಿಮೆಯನ್ನ, ಇನ್ನೊಂದನ್ನ ನಾನು ಕಟ್ಟಲಿಕ್ಕೆ ಶಕ್ತಿ ಇದ್ರೆ, ಯಾಕೆ ಒಡೆಯಬಾರದು? ಒಂದು ಪ್ರತಿಮೆಯನ್ನ ಒಡೆಯದೇ ಮತ್ತೊಂದು ಪ್ರತಿಮೆಯನ್ನ ನಿರ್ಮಾಣ ಮಾಡಲಿಕ್ಕೆ ಆಗೋದಿಲ್ಲ. ಏಕೆಂದರೆ ಪ್ರತಿಮೆಗೆ ಜೀರ್ಣೋದ್ಧಾರ ಇಲ್ಲ. ಟೆಂಪಲ್ಲಿಗೆ ಜೀರ್ಣೋದ್ಧಾರ ಉಂಟು ನಮ್ಮಲ್ಲಿ ಅಷ್ಟೇ. ಪ್ರತಿಮೆ ಭಗ್ನಗೊಂಡರೆ ಅದನ್ನ ತೆಗೆದು ಹಾಕಲೇಬೇಕು. ಇನ್ನೊಂದು ಪ್ರತಿಮೆ ತಂದಿಡಬೇಕು ಅಲ್ಲಿ. ಅಂದ್ರೆ ಹೊಸಕಾಲಕ್ಕೆ ತಕ್ಕ ಹೊಸ ಪ್ರತಿಮೆಯನ್ನ ನಾವು ತಂದಿಡಬೇಕು. ಹಳೇ ಪ್ರತಿಮೆಯನ್ನ ನೀವು ಇಟ್ಟುಕೊಂಡು ಇರಕ್ಕಾಗಲ್ಲ, ಬಹಳ ಕಾಲ. ನಮ್ಮ ಹೊಸ ಯುಗ ಹೊಸ ದೇವತೆಗಳನ್ನ ಅಪೇಕ್ಷೆಪಡತಾ ಇದೆ. ಹೊಸ ಪ್ರತಿಮೆಗಳನ್ನ ಅದು ನಿರೀಕ್ಷೆ ಮಾಡತಾ ಇದೆ. ಹೊಸ ಇಮೇಜಸ್ ಬೇಕಾಗಿದೆ ನಮಗೆ. ಹಳೆಯ ಪ್ರತಿಮೆಗಳನ್ನ ನೀವು ಏನು ಮಾಡಿದರೂ ಅದನ್ನ ಹೊಂದಾಣಿಕೆ ಮಾಡೋದು ಕಷ್ಟ ಆಗುತ್ತೆ, ಕಿತ್ತು ಹಾಕಲೇಬೇಕು. ಚಕ್ರಗಳನ್ನ ಗದೆಗಳನ್ನ, ಮರಕಾಸ್ತ್ಗಳನ್ನ ನಮ್ಮ ದೇವತೆಗಳ ಹಸ್ತಗಳಿಂದ ಕಿತ್ಹಾಕಲೇಬೇಕು. ಯಾವ ದೇವರು ಬರಿಗೈಲಿ ಇರತಾರೋ ಅವರೇ ನಮಗೆ ಪ್ರಿಯರಾದವರು. ಪಾಪ, ಕೈಕೊಟ್ಟು ನಿಂತ್ಕೊಂಡು ಮೊಳೆ ಹೊಡಿಸ್ಕೊಂಡಿದಾನಲ್ಲ, ಏಸುಕ್ರಿಸ್ತ, ಎಲ್ಲವನ್ನೂ ಬಿಟ್ಟು ನಿಂತ್ಕೊಂಡಿದಾನಲ್ಲ, ಗೊಮಟೇಶ್ವರ, ಅಥವಾ ಕಡೆಗೋಲು ಹಿಡಕೊಂಡು ನಿಂತಿದಾನಲ್ಲ, ಕೃಷ್ಣ, ಗದೆಯಲ್ಲ-ಕಡೆಗೋಲನ್ನು. ಇದು ಕ್ರಿಯಾಶೀಲತೆ. ದೇವತೆಗಳಲ್ಲಿ ಈ ತರಹ ಪರಿವರ್ತನೆ ಆದರೆ ನಿಮ್ಮ ಮನಸ್ಸಿನಲ್ಲಿ ಪರಿವರ್ತನೆ ಬರುತ್ತದೆ ಅದು. ನೀವು ಹೆಂಡತಿ ಜತೆ ಮಲಗಬೇಕಾದರೂ ಕೂಡ ಬಿಲ್ಲುಬಾಣ ಹಿಡಕೊಂಡು ಮಲಗ್ತೀನಿ ಅಂತಂದ್ರೆ ಅವನೆಂಥಾ ದೇವರು ಅಂತ. ಕರುಣಾಕರ ನೀನೆಂಬುವದೇತಕೋ ಭರವಸೆ ಇಲ್ಲೆನಗೆ. ಬಾಣಬಿಲ್ಲು ನೀನು ಹಿಡಕೊಂಡರೆ ಎಂಥಾ ಕರುಣಾಕರ ನೀನು? ಅಂದರೆ, ಪ್ರತಿಮೆಯನ್ನ ಒಡೀಬೇಕಾಗತ್ತೆ. ಅದು ಇವತ್ತಿನ ಅಗತ್ಯ. ಈ ಕಾಲಕ್ಕೆ ಬೇಕಾದ ಪ್ರತಿಮೆಗಳನ್ನ ನಾವು ನಿರ್ಮಿಸಿಕೊಳ್ಳಲೇಬೇಕು.

ಪ್ರಶ್ನೆ ೧೧
ತಮ್ಮ ಇತ್ತೀಚಿನ ಉತ್ತರಾಯಣ ಪದ್ಯಗಳಿಂದ ಆರಂಭಿಸಿ, ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಬರ್ತಾ ಇರುವ ಕಾವ್ಯ ಅಥವಾ ಏನು ನಮ್ಮ ಒಂದು ಇಕಾನಾಮಿಕ್ ಲಿಬರಲೈಸೇಷನ್ ನಂತರದ ಒಂದು ಪ್ರತಿಕ್ರಿಯೆ ಕಾವ್ಯದ ಅಥವಾ ಸೃಜನಾತ್ಮಕ ಪ್ರತಿಕ್ರಿಯೆ ಏನಿದೆ ಕನ್ನಡದ, ಅದನ್ನು ಅರ್ಥ ಮಾಡಿಕೊಳ್ಳೋ ಒಂದು ವಿಮರ್ಶೆಯಈಡಿಯಂ ಅಥವಾ ವಿಮರ್ಶೆಯ ಪರಿಭಾಷೆ ಕನ್ನಡದಲ್ಲಿ ಇಲ್ಲ ಅಂತ ಹೇಳೋ ಹೊಸ ಆರೋಪ ಹೊಸ ಕಾಲದ ಲೇಖಕರಿಂದ ಕೇಳಿ ಬರ್ತಾ ಇದೆ. ವಸುಧೇಂದ್ರ ತರದವರಾಗಲೀ, ಅಥವಾ ಕೇಶವ ಮಳಗಿ ತರದವರಾಗಲೀ, ಇಂಥ ಅನೇಕ ಲೇಖಕರು ನಮ್ಮನ್ನು ಹೊಸಕಾಲದ ವಿಮರ್ಶಕರು, ನಮ್ಮ ಕಾಲದ ವಿಮರ್ಶೆ ಇಲ್ಲ ಅನ್ನುವ ಕೊರಗಿನಲ್ಲಿದಾರೆ. ಅದನ್ನ ಅವರು, ಅವರೊಂಥರ ಕ್ರಿಯೇಟಿವ್ ಆಗಿ ಅದನ್ನ ತೋಡಿಕೊಳ್ತಾರೆ. ಇದನ್ನ ವಿವೇಕ ಶಾನಭಾಗ ಅವರು ನಡೆಸ್ತಿರೋ ದೇಶಕಾಲದ ಲೇಖನಗಳಲ್ಲಿ ಕಾಣಬಹುದು. ಅಥವಾ ಅಕ್ಷರ ಅವರು ನಡೆಸ್ತಾ ಇರೋ ಸಮಯಪರೀಕ್ಷೆಯಲ್ಲಿ ಕೂಡ ಇಂಥ ಹೊಸ ಈಡಿಯಂ ಹುಡುಕೋ ಪ್ರಯತ್ನ ಕೂಡ ಕಾಣಬಹುದು. ಅಥವಾ ಆಧುನಿಕ ಕನ್ನಡ ಸಾಹಿತ್ಯಮೀಮಾಂಸೆಯಲ್ಲಿ ರಹಮತ್ ತರೀಕೆರೆ ಅರು ಇಂಥದ್ದೇ ಒಂದು ಕನ್ನಡದ್ದೇ ಆದ ಒಂದು ಈ ಡಿಯಂ ಅನ್ನ ಹುಡುಕೋ ಪ್ರಯತ್ನ ಮಾಡ್ ತಾ ಇದ್ದಾರೆ. ಅದನ್ನು ನಾನು ವು ನೋಡಬಹುದು. ತಾವು ಸ್ವತಃವಿಮರ್ಶಕರೂ ಆಗಿರೋದ್ರಿಂದ ಈ ಪ್ರಯತ್ನಗಳ ಬಗ್ಗೆ ಅಂದ್ರೆ ಹೊಸಕಾಲದ ಬರಹಗಳಿಗೆ ಬೇಕಾದ ಒಂದು ವಿಮರ್ಶೆಯ ಈಡಿಯಂನ ಅಗತ್ಯ ಇದೆ. ಆ ಹಳೆಯ ಈಡಿಯಂಗಳ ಮೂಲಕ ಇದನ್ನ ಅರ್ಥ ಮಾಡಿದಕೊಳ್ಳೋಕೆ ಸಾಧ್ಯ ಇಲ್ಲ ಅನ್ನಿಸುತ್ತೆ. ಯಾಕಂದ್ರೆ ನೀವು ಈಗಾಗಲೇ ಪ್ರತಿಮೆಯನ್ನು ಒಡೆದರೆ ಒಂದು ಹೊಸತೇ ತಂದಿಡಬೇಕು ಅಂತ ಹೇಳ್ತೀರಿ. ಯಾಕಂದ್ರೆ ಈಗಿನ ಬರಹಗಾರರು ಹಳೆಯ ಪ್ರತಿಮೆಗಳನ್ನು ಒಡೀತಿದಾರೆ. ಹೊಸ ಪ್ರತಿಮೆಗಳನ್ನು ಅರ್ಥ ಮಾಡಿಕೊಳ್ಳೋಕೆ ಹೊಸ ಈಡಿಯಂ ಬೇಕು ಅಂತ ತಮಗೆ ಅನಿಸ್ತಾ ಇದೆಯಾ?
ಉತ್ತರ
ಬೇಕಾಗತ್ತೆ, ಬೇಕಾಗತ್ತೆ. ಪ್ರತಾಯಶಃ ಬಹಳ ಮುಖ್ಯವಾಗಿ ಇವತ್ತಿನ ಸಮಸ್ಯೆ ಏನೆಂದರೆ ನಮ್ಮನ್ನು ಓದ್ತಿರೋರೆಲ್ಲ ನಮ್ಮ ಓದುಗರಾಗಿಲ್ಲ. ಅಡಿಗರ ಓದುಗರೂ ನಮ್ಮನ್ನ ಓದ್ತಿದಾರೆ ,ಬೇಂದ್ರೆ ಓದುಗರೂ ನಮ್ಮನ್ನ ಓದ್ತಿದಾರೆ, ಕುಮಾರವ್ಯಾಸನ ಓದುಗರೂ (ನಮ್ಮನ್ನ ಓದ್ತಿದಾರೆ) , ಹೀಗೆ ಪ್ರತಿಯೊಬ್ಬ ಲೇಖಕ ತನ್ನ ಓದುಗರ ಬಳಗವನ್ನ ಸೃಷ್ಟಿಸಿಕೊಳ್ಳಬೇಕಾಗುತ್ತೆ. ಆಗ ಮಾತ್ರನೇ ಸ್ಪಂದನಕ್ಕೆ ಬೇಕಾದ ಒಂದು ಹೊಸ ಈಡಿಯಂ. ಈಗ ಅಡಿಗರನ್ನ ಓದಿಕೊಂಡು ಬಂದಿರೋವಂಥಾವರು, ಆಳವಾಗಿ ಅಧ್ಯನ ಮಾಡಿಕೊಂಡು ಬಂದವರು, ಅಕಸ್ಮಾತ್ತಾಗಿ ಶಿವಪ್ರಕಾಶನ್ನೋ, ಎಚ್ಚೆಸ್ವಿಯನ್ನೋ, ತಿರುಮಲೇಶನ್ನೋ ಓದ್ತಾ ಇದಾರೆ. ಅಂದರೆ ಇವರನ್ನೇ ಓದುವಂಥಾ ಬಳಗ ಇನ್ನೂ ಸೃಷ್ಟಿಯಾಗಿಲ್ಲ. ಬೇಂದ್ರೆಯನ್ನು ಓದುವಂಥಾ ಕುರ್ತಕೋಟಿ, ನಮ್ಮನ್ನ ಓದಿದರು, ಅಡಿಗರನ್ನ ಓದುವಂಥಾ ಅನಂತಮೂರ್ತಿ ನಮ್ಮನ್ನ ಓದಿದರು, ಅಥವಾ ಪಂಪಾದಿಗಳನ್ನು ಓದುವಂಥ ಶಿವರುದ್ರಪ್ಪನವರು ನಮ್ಮನ್ನ ಓದಿದರು. ಆದರೆ ಹೊಸಲೇಖಕರನ್ನ ಓದುವಂಥಾ, ಈ ಓದಿನ ಮೂಲಕನೇ ಇವರನ್ನ ಕಂಡುಕೊಳ್ಳಬೇಕು ಅನ್ನುವಂಥಾ, ಯಾವುದೇ ಪೂರ್ವಾಗ್ರಹವಿಲ್ಲದಂಥಾ ಒಂದು ವಿಮರ್ಶಾಲೋಕ ಇನ್ನೂ ಹುಟ್ಟಿಲ್ಲ. ನಾವಿನ್ನೂ, ನಾವು ಯಾವಾಗಲೂ ಕೂಡ, ನಮ್ಮ ಹಳೆಯ ಭಾರಗಳು ಇದ್ದೇ ಇರುತ್ತವೆ. ಪ್ರತಿಯೊಬ್ಬರ ಬೆನ್ನಮೇಲೂ ಕೂಡ ಒಂದು ಹೊರೆ ಇದೆ ಅಂತ ಅನ್ನೋವಂಥಾದ್ದು . ಒಂದು ಪದ್ಯದಲ್ಲಿ ಹೇಳ್ತೀನಿ ನಾನು- ಪ್ರತಿಯೊಬ್ಬರೂ, ಯಾರ ಬೆನ್ನೂ ಖಾಲಿ ಇಲ್ಲ, ಅನ್-ಫಾರ್ಚುನೇಟ್ಲಿ. ಪ್ರತಿಯೊಬ್ಬರ ಬೆನ್ನಮೇಲೂ ಒಂದೊಂದು ಹೊರೆ ಇಟ್ಟುಕೊಂಡು ಓಡಾಡ್ತ ಇದ್ದೀವಿ. ನಾವು ಹಲ್ಲಣ, ಹಲ್ಲಣ ಇದೆ ಪ್ರತಿಯೊಬ್ಬರ ಬೆನ್ನಮೇಲೂ. ಹಾಗಾಗಿ ಅಡಿಗರಿದ್ದಾರೆ ಕೆಲವರ ಬೆನ್ನಮೇಲೆ, ಬೇಂದ್ರೆ ಕೆಲವರ ಬೆನ್ನಮೇಲೆ ಇದಾರೆ. ಕುಮಾರವ್ಯಾಸ, ಕುಮಾರವ್ಯಾಸನ್ನ ಇಟ್ಕೊಂಡು ಓಡಾಡ್ತಾ ಇದಾರೆ ಇನ್ನೂ. ಪಂಪನ್ನ ಇಟ್ಕೊಂಡು ಓಡಾಡೋರಿದಾರೆ. ವಚನಕಾರರನ್ನ, ಬಸವಣ್ಣನ್ನ, ಪ್ರಭುದೇವರನ್ನ ಇಟ್ಕೊಂಡು ಓಡಾಡೋರಿದಾರೆ. ಅಂದರೆ, ಹೊಸ ಲೇಖಕರನ್ನ ಓದುವಂಥ ಒಂದು ಓದುಗಬಳಗ ಇದೆಯಲ್ಲ, ಅದು ನಿಧಾನವಾಗಿ ಸೃಷ್ಟಿಯಾಗ್ತಾ ಹೋಗುತ್ತೆ. ಇವರೇನ್ ಮಾಡ್ತಾರೆ ಅಂದ್ರೆ ಇವರನ್ನ ಓದೋದರ ಮೂಲಕ ಅವರನ್ನ ಓದೋದಿಕ್ಕೆ ಶುರುಮಾಡ್ತಾರೆ. ಇವತ್ತು ಬರ್ತಿರೋವಂಥ ಲೇಖಕರನ್ನ ಓದಿಬಿಟ್ಟು ಕುಮಾರವ್ಯಾಸನ್ನ ಓದ್ತಾರೆ. ಓದಿ ಬೆಲೆ ಕಟ್ತಾರೆ. ಕುಮಾರವ್ಯಾಸನ್ನ ಓದಿ ಇವರನ್ನ ಓದೋದಿಲ್ಲ. so, ಇಲ್ಲಿಂದ ಶುರು ಮಾಡೋದು, so, ಈ ಓದುಗಬಳಗ ಇದೆಯಲ್ಲ, ಅಂಥ ಒಂದು ಓದುಗಬಳಗ ನಿರ್ಮಾಣ ಆಗಬೇಕು. ಅದಕ್ಕೆ ತನ್ನ ರೀಡರ್ಸನ್ನ ಒಬ್ಬ ಕವಿ ತಾನು ನಿರ್ಮಿಸಿಕೊಳ್ಳಬೇಕಾಗತ್ತೆ. ಒಂದು-ಎರಡು ದಿದಲ್ಲಿ ಆಗುತ್ವಂಥದ್ದಲ್ಲ. ಇವತ್ತು ಬೆಳಗಾಗುವದರಲ್ಲಿ ಒಬ್ಬ ಓದುಗ ನಿರ್ಮಾಣ ಆಗೋದಿಲ್ಲ. ನಿರಂತರವಾದ ಕಾವ್ಯವ್ಯವಸಾಯ ಇದು. ನಲವತ್ತು-ಐವತ್ತು ವರ್ಷ ನೀವು ಬರೆದಾಗ ಒಂದು ಸಣ್ಣ ಓದುಗರ ಗುಂಪೊಂದು ಸೃಷ್ಟಿಯಾಗತ್ತೆ. ಅವರು ನಿಮ್ಮನ್ನ ಓದ್ತಾರೆ, ಜತೇನಲ್ಲಿ ಬೇರೆಯವರನ್ನು ಓದ್ತಾರೆ. ಹಿಂದೆ ಹೇಗಿದ್ರೋ ಹಾಗೆ. ಇವತ್ತು ಇನ್ನೂ ನಮ್ಮ ಭಾಳ ದೊಡ್ಡ ಓದುಗರೂ ಕೂಡ, ನಮ್ಮ ಅತ್ಯಂತ ಸೂಕ್ಷ್ಮಸಂವೆದಿಗಳೂ ಕೂಡ, ನಮ್ಮನ್ನ ಹೆಗಲಿನಿಂದ ನೋಡುವಂಥವರೇ. ಇನ್ನೊಬ್ಬರ ಹೆಗಲಿನಿಂದ ನೋಡುವಂಥವರು ಅಡಿಗರ ಹೆಗಲಿನಿಂದ ಇನ್ನೊಬ್ಬ ಕಾಣಿಸ್ತಾನೆ. ಇನ್ನೊಂದು ಮುಖ ಅಂತ ಅಲ್ಲಿ ನೋಡ್ತಾ ಇದ್ದಾರೆ. ನಿಮ್ಮನ್ನ ನೋಡಿ ಅಡಿಗರನ್ನ ನೋಡೋವಂಥವರಲ್ಲ. ನಿಮ್ಮನ್ನ ನೋಡಿ ಬೇಂದ್ರೆಯವರನ್ನ ನೋಡೋವಂಥವರು ಇವತ್ತಿನ ತುರ್ತು ಅಗತ್ಯ. ಅದರೆ ಶಿವಪ್ರಕಾಶನ ಓದುಗರು ಯಾರು? ತಿರುಮಲೇಶನ ಓದುಗರು ಯಾರು? ವೈದೇಹಿ ಓದುಗರು ಯಾರು? ಮಂಜುನಾಥನ ಓದುಗರು ಯಾರು? ಈ ಪ್ರಶ್ನೆ ಬಹಳ ಮುಖ್ಯವಾದದ್ದು . ಅಂಥ ಒಂದು ಓದುಗಸಮುದಾಯ ಸೃಷ್ಟಿಯಾಗಬೇಕಾಗಿದೆ. ಅದಕ್ಕೆ ಟೈಂ ಬೇಕಾಗತ್ತೆ. ಈ ಎಲ್ಲದರ ಹಿಂದಿನ ದೊಡ್ಡ ದುರಂತ ಅಂದರೆ ಹೊಸ ಸಮುದಾಯ ಸೃಷ್ಟಿ ಆಗಬೇಕು ಅನ್ನಬೇಕಾದರೇನೆ ಇಡೀ ಕನ್ನಡದಿಂದಲೇ ನಮ್ಮ ಓದುಗರು ಎಲ್ಲ ದೂರವಾಗ್ತಿರೋವಂಥ ಟ್ರಾಜೆಡಿ. ಇವತ್ತು ಯಾರೋ ಇದಾನೆ, ಇವನು ನಮ್ಮ ಓದುಗ ಆಗ್ತಾನೆ, ಅಂತಿದ್ರೆ ಅವನು ಇದ್ದಕ್ಕಿದ್ದ ಹಾಗೇನೆ ಇಂಗ್ಲೀಷನ್ನ ಓದೋದಿಕ್ಕೆ ಶುರುಮಾಡಿರ್ತಾನೆ. ಮತ್ತೆ, ನಮ್ಮ ಕನ್ನಡದ ಎಲ್ಲ ಲೇಖಕರ ಮಕ್ಕಳು ಇಂಗ್ಲೀಷಿನಲ್ಲಿ ಪದ್ಯ ಬರೀತಾರೆ.

ಹೊಸ ಕವನ-ಭಾಷೆಯನ್ನು ಹೇಗೂ ಬಳಸಬಹುದು

ಭಾಷೆಯನ್ನು ಹೇಗೂ ಬಳಸಬಹುದುಃ ತೆಂಗಿನ ನಾಟಿಗೆ ರೈತ

ಪಿಕಾಸಿಯೆತ್ತಿ ಗಮಗುಡುವ ನೆಲವ ಧಸ ಧಸ ಬಗಿವಂತೆ;

ಅಡ್ಡಕಸುಬಿಯ ಮೆತ್ತಿಗೆಯ ಹುಳುಕ ಮುಚ್ಚಲಿಕೆ ಪೇಂಟರ್

ರಬಡ್ಡಾಗಿ ಅತ್ಯುಜ್ವಲ ಬಣ್ಣ ಬಡಿವಂತೆ ಗೋಡೆಯ ಮೇಲೆ;

ಯಾಕೋ ಜೂಗರಿಸುವ ದೇವ ಮೂರ್ತಿಯ ಮೇಲೆ ರಪ ರಪ ಭಕ್ತ

ರೆರಚುವ ಮಂತ್ರಕ್ಷತೆಯಂತೆ; ಒಂದು ತುಟಿ ತೆರೆದರೆ,

ಉಳಿದ ಮೂರೂ ಗುಮ್ಮಗೆ ತುಟಿಬಿಗಿವ ಚೌಕಾಬಾರದ ಕವಡೆ

ಬೀಸಂತೆ; ಭಾಷೆಯನ್ನು ಹೇಗೂ ಬಳಸಬಹುದು...

ಹೇಗೂ ಬಳಸಬಹುದು ಭಾಷೆಯನ್ನುಃ ಮೊದಲ ರಾತ್ರಿಯ ವಧು

ಎಲ್ಲ ಬಿಚ್ಚುವ ಮೊದಲು ಮುಚ್ಚುವಂತೆ ಸೆರಗಿಂದ ಅರೆಬರೆ

ಮುಖವ; ಅಧ್ಯಾಪಕರು ತರಗತಿಯುದ್ದಕ್ಕು ಒತ್ತಿಯೊತ್ತಿ ಬರೆದ

ಬೀಜವಾಕ್ಯಗಳನ್ನ ತೆರಳುವ ಮುನ್ನ, ಡಸ್ಟರಲ್ಲೊರಸಿ ಗಡಿ

ಬಿಡಿಯಿಂದ, ಬರೆದದ್ದ ಅಸ್ಪಷ್ಟ ಉಳಿಸಿ ಬೋರ್ಡಿನ ಮೇಲೆ,

ನಿರ್ಗಮಿಸುವಂತೆ ತಣ್ಣಗೆ; ಭೂಗತವಾದಾಕಾರವಿಶೇಷವನ್ನೆತ್ತಲು

ಕಿರುಗುದ್ದಲಿಯಲ್ಲಿ ಕೆದಕುತ್ತ ಮಣ್ಣ, ಎಲ್ಲಿ ಮುಕ್ಕಾಗುವುದೋ ಪ್ರಾಚೀನ

ಪನ್ನತಿಕೆಯೆಂದು, ಮೆಲ್ಲಗೂದಿಯೂದಿ ಮೇಲೆತ್ತುವ ಪ್ರಾಕ್ತನ ಕುತೂಹಲಿಯಂತೆ...

2 ಏನೋ ಹೇಳಬೇಕೆಂದುಕೊಳ್ಳುತ್ತಾನೆ ರಾಮ, ಅಯೋಧ್ಯೆಯಿಂದ

ತನ್ನಾಕೆ ಮತ್ತು ತಮ್ಮನ ಸಮೇತ ಹೊರಹೊಂಟಾಗ. ಕಾತರದಿಂದ

ಕಾಯುತ್ತಾ ನಿಲ್ಲುತ್ತಾನೆ ಸುಮಂತ್ರ. ರಾಮ ಸಮೀಪಿಸುತ್ತಾನೆ

ಸುಮಂತ್ರನನ್ನು ಹಿರಿಯರನ್ನು ಸಮೀಪಿಸುವಾಗ ಇಡಲೇ ಬೇಕಾದ

ಮೆಲು ಹೆಜ್ಜೆಯೊಂದಿಗೆ. ಗಟ್ಟಿಯಾಗಿ ಪಾದ ಒತ್ತಿ ನಡೆದಿದ್ದರೆ

ಕೆಂಧೂಳಿ ಹಾರಬಹುದಿತ್ತು ಮೇಲಕ್ಕೆ. ಬೀಸು ಹೆಜ್ಜೆ ಯೋಚನೆಯ

ತೀವ್ರತೆ ಸೂಚಿಸಬಹುದಿತ್ತು. ವಿಲಂಬಿತ ನಿಧಾನ ಗತಿ

ಸೂಚಿಸಬಹುದಿತ್ತು ಅಸಲು ಮನದೊಳಗೇ ಇರದಿದ್ದ ಬೇಸರವನ್ನ!

ಎಷ್ಟು ಎತ್ತಬೇಕು ಪಾದ? ಯಾವ ಘಾತದಲ್ಲೂರಬೇಕು ನೆಲಕ್ಕದನ್ನ?

ಎಷ್ಟಿರಬೇಕು ಪದಪದದ ನಡುವಿನಂತರ? ಪದ ವಿನ್ಯಾಸವೆಂದರೆ

ಬರೆಯುವುದಲ್ಲದೆ ಮತ್ತೇನು? ಆಡಬೇಕಾಗಲಿಲ್ಲ ಒಂದೂ ಪದ ಶ್ರೀರಾಮ

ಬಾಯಿಂದ. ಬಂದವ ಸುಮ್ಮನೆ ನಿಂತು ಒಂದು ಅರೆಕ್ಷಣ ಮತ್ತೆ ಹಾಗೇ ಹಿಂದಕ್ಕೆ

ಹೋಗಿಬಿಟ್ಟ, ನಿವೇದಿಸಬೇಕಾದ್ದೆಲ್ಲ ನಿವೇದಿಸಿ ಆರ್ಯ ಸುಮಂತ್ರಗೆ.

3 ಗೋಗ್ರಹಣದ ಯುದ್ಧದ ಮುನ್ನ ಅರ್ಜುನ ತಾನು ತೊಟ್ಟಿದ್ದ ಬಳೆಗಳ

ವೈರಿಗಳ ಗೋಣು ಮುರಿವಂತೆ ಮುರಿದ. ಅಶೋಕವನದಲ್ಲಿ ಕೋಪಗ್ರಸ್ತ

ಮಾರುತಿ ನೋಡಿದ್ದು ಬಿಳಿಯ ಹೂಗಳನ್ನ; ಆದರವು ಅವನಿಗೆ ಕಂಡದ್ದು

ಕೆಂಪಾಗಿ. ನಿರ್ಲಜ್ಜ ದುಸ್ಯಾಸನ ದ್ರೌಪದಿಯ ಉಡಿಗೆ ಕೈ ಹಾಕಿ

ಜಗ್ಗಿದಾಗ, ಸೀದು ಕಪ್ಪಾದದ್ದು ಭೀಮನ ಕೊರಳ ಏಕಾವಳಿ ಮುತ್ತಿನ

ಸರ. ವೈಶಂಪಾಯನದ ತಂಗೊಳದಲ್ಲಿ ತಣ್ಣಗೆ ಮುಳುಗಿದ್ದ ಕುರುಪತಿ

ಕೋಪೋನ್ಮತ್ತ ವೃಕೋದರ ಉಗುಳಿದಾಗ ಬಾಯ್ತುಂಬ, ಜಲ ಜಲ ಜಲ

ಬೆವತೇಹೋದ. ಹಿಟ್ಲರ್ ಸಾಯುವುದಕ್ಕೇ ಎಷ್ಟೋ ತಿಂಗಳು ಮೊದಲೇ ಮಣ್ಣಾಗಿದ್ದ

ಮಣ್ಣಲ್ಲಿ...

4 ಕೊಳಲ ಕಣ್ಣೊರೆಸುತಿವೆ ಬೆರಳು. ಮಣ್ಣಿನ ಮಗಳ ತೂಗುವನು

ಬಾಗು ಮೈ ಮುದುಕ, ಮಕಮಲ್ಲ ಜೋಲಿಯನು ಚಂದ್ರಕೊಕ್ಕೆಗೆ

ಸಿಗಿಸಿ. ಒಂದೊಂದೆ ಒಂದೊಂದೆ ನಕ್ಷತ್ರ ಕರಗಿದವು ದಾರಿ ದೀಪ

ಸಮೇತ. ಬೆಚ್ಚಿಬೀಳುತ್ತಾಳೆ ನಿದ್ದೆಯಲಿ. ಎಲ್ಲೆಂದರಲ್ಲಿ ಉರುಳಿ

ಬಿದ್ದಿವೆ ಅವಳ ಹಕ್ಕಿ ಚಿಲಿಪಿಲಿ ಪೀಪಿ. ಮಲಗು ಬೆಚ್ಚಗೆ ಮಗಳೆ,

ಪೂರ್ವ, ಕಿರಣದ ರೆಪ್ಪೆ ತೆರೆವ ತನಕ...

ಪ್ರಶ್ನೆ ೧೨
ಇಷ್ಟು ಹೊತ್ತು ನಮ್ಮ ಜತೆ ನಮ್ಮ ಬಹಳ ಪ್ರಾಥಮಿಕ ಮಟ್ಟದ ಪ್ರಶ್ನೆಗಳಿಗೆ ಉತ್ತರಿಸಿ ನಮ್ಮ ಕಾವ್ಯದಜ್ಞಾನವನ್ನು ಮತ್ತು ಕೇಳುಗರ ಕಾವ್ಯವನ್ನು ಗ್ರಹಿಸುವ ಜ್ಞಾನವನ್ನು ಹೆಚ್ಚಿಸಿಕೊಟ್ಟ ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ ಧನ್ಯವಾದಗಳು. ಕೊನೆಯದಾಗಿ ತಮ್ಮ ಹತ್ರ ಒಂದು ರಿಕ್ವೆಸ್ಟ್ ಏನಂದ್ರೆ ನಮ್ಮ ಅಂತರ್ಜಾಲದ, ಅನೇಕ ಕವಿಗಳಿದ್ದಾರೆ, ಅವರಿಗೆ ತಮ್ಮ ಸಂದೇಶ.
ಉತ್ತರ
ಸಂದೇಶ ಕೊಡುವಷ್ಟು ನಾನು ದೊಡ್ಡ ಕವಿಯಲ್ಲ. ಆದರೆ ಚಿಕ್ಕವರು, ಕಿರಿಯರು ಆಗಿದ್ರೆ ಒಂದು ಹಿತವಚನ ಅಂತ ಹೇಳಬಹುದು, ಅದೆಂದರೆ, ಈ ಕಾವ್ಯಮಾದ್ಯಮ ಅಂತನ್ನೋದು ಸವತಿಯರನ್ನ ಸಹಿಸೋದಿಲ್ಲ. ಅದ್ದರಿಂದ ಸಂಪೂರ್ಣ ನಿಷ್ಠೆಯನ್ನ ಅದು ಬಯಸುತ್ತೆ. ಒಂದು ವೇಳೆ ಒಬ್ಬ ಕವಿ ತನ್ನ ಪೂರ್ಣ ನಿಷ್ಠೆಯನ್ನ, ನೂರಕ್ಕೆ ನೂರು ಕವಿತೆಗೆ ಕೊಟ್ಟಲ್ಲಿ, ಒಳ್ಳೆಯ ಗರತಿಯಂತೆ ಅದು ಸಫಲತೆಯನ್ನ ಕವಿಗೆ ನೀಡತ್ತೆ ಅಂತ ಮಾತ್ಹೇಳಲಿಕ್ಕೆ ಬಯಸ್ತೀನಿ. ಇಲ್ಲಿ ಬೇಕಾದದ್ದು ನಿತಾಂತವಾದ ನಿಷ್ಠೆ ಮಾತ್ರ..