ನುಡಿವ ಮಾತಿನಲಿ
ಸುಳಿವ ಗಾಳಿಯಲಿ
ಪ್ರಾಣವಾಯುವೇ ನೀನು
ಸೊಕ್ಕ ಸಾಗರಕೆ
ಉಕ್ಕುವ ಯೌವನಕೆ
ನಿತ್ಯ ನಿರ್ಣಯವು ನೀನು
ಬಿಕ್ಕಿ ಅಳುವಾಗ
ಸುತ್ತಿ ಬೀಳುವಾಗ
ಹೊತ್ತ ಚೇತನ ನೀನು
ನಿಲ್ಲಲಾರದ ಭವದ
ಕಾಣಲಾರದ ಪರದ
ಪಂಕ್ತಿಯಲಿ ಪಕ್ಕದಲೇ ನಿಲುವೆನೆಂಬ ನೀನು
ಹುಟ್ಟಿ ಹುಟ್ಟಿಸಿ ಸಾಯ್ವ
ನಾಲ್ಕು ದಿನದಲು ಕುಸುರಿ
ಮದವಿಳಿಸುವ ಮುದ್ದು ಮುದ್ದು ನೀನು
ನಾನು ನಾನಲ್ಲ
ನಾನು ನೀನಲ್ಲ
ಕಾಲನ ಕೈಯ ಗೊಂಬೆ ನಾನು
ಕಾಲನನೆ ಕಾಡುವ ಶಕ್ತಿ ನೀನು...
ಪ್ರತಿಕ್ರಿಯೆ (1)