ಶೀರ್ಷಿಕೆ ನೋಡಿ ಬೆರಗಾಗದಿರಿ...
ಇಂತಹ ಉಪಾಯಗಳನ್ನು ನಮ್ಮ ಹಿರಿಯವರು ಅಳವಡಿಸಿಕೊಂಡಿದ್ದರ ಪರಿಣಾಮವಾಗಿಯೇ ನಮಗಿನ್ನೂ ಅಲ್ಲಲ್ಲಿ ನೀರ ಸೆಲೆಗಳು ಇನ್ನೂ ಜೀವಂತವಾಗಿವೆ.
ಅತಿ ಕಡಿಮೆ ನೀರು ಇದ್ದಾಗ ಇದರ ಉಪಯೋಗ ಜಾಸ್ತಿ.ಬೆಳೆಗಳ ನಿರ್ಣಾಯಕ ಹಂತದಲ್ಲಿ ನೀರೇನಾದರೂ ಕಡಿಮೆ ಬಿದ್ದಲ್ಲಿ,ಕೆರೆಯಲ್ಲಿ ತೂಬಿನ ಮಟ್ಟಕ್ಕಿಂತ ಕೆಳಗೆ ನೀರು ಹೋಗಿದ್ದಲ್ಲಿ ,ಈ ದೇಸಿ ಪದ್ದತಿಯಲ್ಲಿ ನೀರನ್ನು ಬಳಸಿಕೊಂಡು ಬೆಳೆ ಬೆಳೆಯುವ ಪರಿಪಾಟ ಇನ್ನೂ ಬಯಲು ಸೀಮೆಯ ಹಲವಾರು ಕಡೆ ಬಳಕೆಯಲ್ಲಿದೆ.
ಪಾರಂಪರಿಕ ನೀರೆತ್ತುವ ವಿಧಾನಗಳಲ್ಲಿ ಗೂಡೆ ಎತ್ತುವುದೂ ಒಂದು.ಇದರಲ್ಲಿ ಎರಡಾಳು ಕೆಲಸ ಮಾಡಲೇಬೇಕು.ನೀರು ತುಂಬಿದ ಗುಣಿಯ (ಗುದ್ದರ ಎಂದೂ ನಮ್ಮ ಕಡೆ ಬಳಸುತ್ತಾರೆ) ಎರಡೂ ಕಡೆ ಒಬ್ಬೊಬ್ಬರು ನಿಂತುಕೊಂಡು ಹಗ್ಗಗಳ ಸಹಾಯದಿಂದ ತಗಡಿನ ಡಬ್ಬದ ಮೂಲಕ ನೀರನ್ನು ಬಗ್ಗಿ ಬಗ್ಗಿ ಎತ್ತಿ,ಮುಂದಿನ ಕಾಲುವೆಗೆ ಉಗ್ಗುತ್ತಾರೆ.ಮೊದಲಿಗೆ ಡಬ್ಬಗಳ ಬದಲಾಗಿ ಭದ್ರವಾಗಿ ಹೆಣೆದ ಬಿದಿರಿನ ತಟ್ಟಿಗಳನ್ನು(ಗೂಡೆ) ಕೂಡಾ ಇದಕ್ಕೆ ಉಪಯೋಗಿಸುತ್ತಿದ್ದರು.
ಬೆಳೆಗಳ ಸಂಧಿಗ್ಧ ಸಮಯದಲ್ಲಿ (ಭತ್ತದ ವಡೆ,ಶೇಂಗಾದಲ್ಲಿ ಊಡು ಇಳಿಯುವ ಕಾಲ,ಇತ್ಯಾದಿ) ಈ ವಿಧಾನವನ್ನು ಬಳಸಿ ಬೆಳೆ ಉಳಿಸಿಕೊಳ್ಳುತ್ತಿದ್ದುದು ನನಗೆ ಈಗಲೂ ನೆನಪಿದೆ.ಸಾಮಾನ್ಯವಾಗಿ ಎಲ್ಲರ ಹೊಲಗಳಲ್ಲಿಯೂ ನೀರು ತುಂಬಿಕೊಳ್ಳಲೆಂದೇ ಒಂದು ಗುದ್ರವನ್ನು ಮಾಡಿಕೊಂಡಿರುತ್ತಾರೆ.ಇದು ರೈತರಿಗಿರುವ ನೀರ ಬಗೆಗಿನ ಎಚ್ಹರ,ಹಾಗೂ ಜಾಣ್ಮೆ ಕೂಡಾ ಹೌದು.
ನೆನಪಿನಾಳದಿಂದ ಮಾಸಿಹೋಗುತ್ತಿದ್ದ ಪಾರಂಪರಿಕ ದೇಸಿ ಪದ್ದತಿಯಾದ ಇದನ್ನು ಇತ್ತೀಚೆಗೆ ಪಾವಗಡ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಕೆರೆಯಲ್ಲಿ ಕಂಡು ಚಿತ್ರವನ್ನು ಕ್ಲಿಕ್ಕಿಸಿದೆ.ಬರದ ನಾಡಾದ ಪಾವಗಡದಲ್ಲಿ ನೀರಿನ ಲಭ್ಯತೆ ಕಡಿಮೆಯಿರುವುದರಿಂದಲೋ ಏನೋ ಇನ್ನೂ ಇಂತಹ ಪದ್ದತಿಗಳು ಜೀವಂತವಾಗಿವೆ.