೫. "ವ್ರತಂ ಕೃಣುತ"||
(ಯಜು.೪.೧೧.)

"ವ್ರತವನ್ನು ಪಾಲಿಸು".

ಪಾಲಿಸುತ್ತಲೇ ಇದ್ದೇವಲ್ಲ, ಸತ್ಯನಾರಾಯಣ ವ್ರತ, ಲಕ್ಷ್ಮೀ ವ್ರತ ಇತ್ಯಾದಿ. ಇವು ವ್ರತಗಳೇ ಅಲ್ಲ|| ನಿರಂತರವಾಗಿ, ಎಡೆಬಿಡದೆ ಯಾವುದನ್ನು ಪಾಲಿಸುತ್ತೇವೋ ಅವು ವ್ರತಗಳು. (ವೃತು ವರ್ತನೇ) ಅಹಿಂಸೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪಸ್ಸು (ಏಳು-ಬೀಳುಗಳನ್ನು ಒಂದೇ ರೀತಿ ಸ್ವೀಕರಿಸುವುದು), ಸ್ವಾಧ್ಯಾಯ (ಆತ್ಮಪರಿಶೀಲನೆ, ವೇದಾನುಕೂಲ ಗ್ರಂಥಗಳ ಅಧ್ಯಯನ), ಈಶ್ವರಪ್ರಣಿಧಾನ (ಭಗವಂತನಿಗೆ ಅರ್ಪಣೆ). ಇವು ವ್ರತಗಳಷ್ಟೇ ಅಲ್ಲ, ಮಹಾವ್ರತಗಳು. ಪ್ರಾರಂಭಿಸಿದಂದಿನಿಂದ, ನಿರಂತರವಾಗಿ ಪಾಲಿಸುತ್ತಾ, ನಮ್ಮ ಕೊನೆಯ ಉಸಿರಿನೊಂದಿಗೆ ಮುಗಿಯುವವು.

೬. "ಮರ್ಯಾದೇ ಪುತ್ರಮಾಧೇಹಿ"||
(ಅಥರ್ವ.೬.೮೧.೨.)

"ಮಿತಿಯಲ್ಲಿ ಸಂತಾನವನ್ನು ಹೊಂದಿರಿ".

ಫ್ಯಾಮಿಲೀ ಪ್ಲಾನಿಂಗ್ ಎಂಬುದು ಇಂದಿನ ಚಿಂತನೆಯಲ್ಲ. ವೇದಗಳಷ್ಟೇ ಪ್ರಾಚೀನವಾದುದು. ಪ್ರಾಣಿಗಳಂತೆ ಮಕ್ಕಳನ್ನು ಹೆರುವುದಷ್ಟೇ ಆದರೆ, ಮನುಷ್ಯನಿಗೂ ಪ್ರಾಣಿಗಳಿಗೂ ಭೇದವೆಲ್ಲಿಂದ ಬಂತು? ಮನುಷ್ಯನಾದವನು ತನ್ನ ಸಂತಾನವನ್ನು ಸರಿಯಾದ ರೀತಿಯಲ್ಲಿ ಪಾಲಿಸಿ, ಪೋಷಿಸಿ, ಉತ್ತಮ ಶಿಕ್ಷಣವನ್ನು ನೀಡಿ ರಾಷ್ಟ್ರದ ಉತ್ತಮ ಪ್ರಜೆಯನ್ನಾಗಿ ಮಾಡುವ ಹೊಣೆಗಾರಿಕೆಗೆ ಬದ್ಧನಾಗಿದ್ದಾನೆ. ಒಂದರ ಹಿಂದೆ ಒಂದು ಮಗುವನ್ನು ಹೆರುತ್ತಾ ಹೋದರೆ, ಈ ಕರ್ತವ್ಯದ ಪಾಲನೆ ಆಗುವುದಿಲ್ಲ. ಮಿತಿಯಿದ್ದು, ಅಂತರವಿದ್ದಲ್ಲಿ ಮಾತ್ರ ಇದು ಸಾಧ್ಯ. ಈ ನಿಯಮಕ್ಕೆ ವಿರುದ್ದವಾದ ಆಚರಣೆ ಸಂತಾನವನ್ನು ಶಕ್ತಿಹೀನವನ್ನಾಗಿ ಮಾಡುತ್ತದೆ. ಈ ಮಿತಿಯಲ್ಲಿ ಬಾಳುವ ಗೃಹಸ್ಥ-ಗೃಹಿಣಿಯರು ಬ್ರಹ್ಮಚಾರಿ-ಬ್ರಹ್ಮಚಾರಿಣಿಯರೇ ಸರಿ|

ಸಂಗ್ರಹ ಮತ್ತು ವ್ಯಾಖ್ಯೆ: ಸರಳಾ ನಿರ್ಮಲ್