Yashoda feeding to Lord Shri Krishna.

ಅಮ್ಮ ನಿನ್ನ ಮಡಿಲ ತುಂಬ
ಎಷ್ಟು ಮಮತೆ ತುಂಬಿದೆ?
ಹಗಲು ಇರುಳು ಎನ್ನನಿದುವೆ
ರಾಜನಂತೆ ಬೆಳೆಸಿದೆ.

ನಿನ್ನ ಪ್ರೀತಿ ಕರುಣೆ ಎನಗೆ
ಧಾರೆಯೆರೆದು ಕೊಡುತಿಹೆ.
ಇದನು ಸಹಿಪ ಶಕ್ತಿ ದೇವ
ನೀಡು ಎನಗೆ ಎನುತಿಹೆ.

ನಿನ್ನ ಸಹನೆ ಶಾಂತಿ ಕಾಂತಿ
ನೋಡಿ ಮನವು ಅರಳಿದೆ.
ಕಣ್ಣ ತಣಿಪ ಸರಳ ರೂಪ
ನೋಡಿ ಹೃದಯ ಕರಗಿದೆ.

ಅಮ್ಮ ನಿನ್ನ ಬಿಟ್ಟು ಕ್ಷಣವೂ
ನಾನು ಬದುಕಲಾರೆನು.
ನಿರುತ ನಿನ್ನ ಸೇವೆ ಗೈದು
ತೃಪ್ತಿ ನಾನು ಪಡೆವೆನು.

ತಾಯೇ, ನಿನ್ನ ಪಡೆದ ನಾನೇ
ಧನ್ಯನೆಂದು ಬೀಗುವೆ.
ನಿನ್ನ ಎನಗೆ ಕೊಟ್ಟ ದೇವ
ಮಾನ್ಯನೆನುತ ಸಾರುವೆ.

ನಿನ್ನ ಮಾನ ಪ್ರಾಣಗಳನು
ಎನ್ನದೆನುತ ಸಲಹುವೆ.
ನೀನೇ ದೈವ ಎನಗೆ ಎಂದು
ಸಾರಿ ಸಾರಿ ಮೆರೆಯುವೆ.

         - ಸೀತಾತನಯ.

ಸಹೃದಯಿ ಸಂಪದಿಗರು ಈ ಕವನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿರಿ.