ಬಾಲವಾಡಿ (ಈಗ ಎಲ್.ಕೆ.ಜಿ, ಯುಕೆಜಿ ಅಂತಾರೆ), ಒಂದನೆಯ ತರಗತಿಯ ಮಕ್ಕಳಿಗೆ ತಮ್ಮ ಶಿಕ್ಷಕರಿಗಿಂತ ಹೆಚ್ಚಿನದು ಯಾವುದೂ ಕಾಣುವುದಿಲ್ಲ. ಟೀಚರುಗಳ ವಾಕ್ಯವೇ ವೇದವಾಕ್ಯ. ಮಿಸ್ಸು ಹಾಕಿದ ಗೆರೆಯನ್ನು ಯಾವ ಕಾರಣಕ್ಕೂ ದಾಟರು. ಅಪ್ಪ ಅಮ್ಮನ ಮಾತಿಗಿಂತ ಟೀಚರುಗಳ ಮಾತಿಗೆ ಬೆಲೆ ಜಾಸ್ತಿ.
ನಾನೂ ಹೊರತಲ್ಲ. ನಮ್ಮ ಮಿಸ್ ಹೆಸರು ಮಂಗಳಾ ಮಿಸ್. (ಈಗ ಮೇಡಮ್ ಎಂದು ಕರೆಯುತ್ತೇನೆ!). ನನ್ನ ಬಗ್ಗೆ ಬಹಳ ಪ್ರೀತಿ! ಈಗಲೂ ನನ್ನ ಬಗ್ಗೆ ಅಕ್ಕರೆ. ಅವರಷ್ಟೇ ಅಲ್ಲ. ನನ್ನ ಎಲ್ಲ ಗುರುವರ್ಗದವರೂ ಅಷ್ಟೇ. ನಮ್ಮ ಅಪ್ಪ ಅಮ್ಮ ಸಿಕ್ಕಾಗಲೆಲ್ಲ ನಾನು ಮತ್ತು ತಂಗಿ ಏನು ಮಾಡುತ್ತಿದ್ದೇವೆ ಎಂದು ಪ್ರಗತಿಯನ್ನು ಕೇಳಿ ತಿಳಿದುಕೊಂಡು ಸಂತಸಗೊಳ್ಳುತ್ತಾರೆ.
ಮೊದಲನೆಯ ತರಗತಿಯಲ್ಲಿದ್ದಾಗ ನಡೆದದ್ದಿದು. ಆಗಾಗ ತರಗತಿಗಳಿಗೆ ಪೆನ್ನುಗಳನ್ನೋ, ಪುಸ್ತಕಗಳನ್ನೋ, ಮ್ಯಾಪುಗಳನ್ನೋ ಮಾರಲು ತರಗತಿಗಳಿಗೆ ಕೆಲವರು ಬರುತ್ತಿದ್ದರು. ಒಮ್ಮೆ ಮ್ಯಾಜಿಕ್ ಸ್ಲೇಟಿನವನು ಬಂದ. ಆ ಸ್ಲೇಟಿನ ಮೇಲೆ ಮಸಿ ಬಳಸದೇ ಬರೆಯಬಹುದುತ್ತು. ಪೆನ್ನಿನ ಹಿಂಬಾಗದಿಂದ ಬರೆಯಬಹುದಿತ್ತು. ಬರೆದ ಪುಟವನ್ನು ಹಿಂಬದಿಯ ಕಪ್ಪು ಭಾಗದಿಂದ ಬೇರ್ಪಡಿಸಿದರೆ ಬರೆದದ್ದು ಅಳಿಸಿ ಹೋಗುತ್ತಿತ್ತು. ನನಗೆ ಇದು ಆಕರ್ಷಕವಾಗಿ ಕಂಡರೂ ಕೊಂಡುಕೊಳ್ಳಲೇಬೆಕೆಂದು ಅನಿಸಲಿಲ್ಲ. ಸೇಲ್ಸಹುಡುಗ "ನೀವೊಮ್ಮೆ ಹೇಳಿ ಮೇಡಮ್" ಅಂತ ಮಂಗಳಾ ಮಿಸ್ಸಿಗೆ ಕೇಳಿದ.
"ನಾಳೆ ನಿಮ್ಮ ಅಪ್ಪ ಅಮ್ಮನ್ನ ಕೇಳಿ ಸ್ಲೇಟನ್ನು ಕೊಂಡುಕೊಳ್ಳಿ" ಎಂದು ಮಿಸ್ಸು ಹೇಳಿದರು.
ಅಲ್ಲಿಂದ ನನಗೆ ತುಡಿತ ಶುರುವಾಯಿತು! ಮನೆಗೆ ಹೋಗಿ ಮಿಸ್ಸು ಹೇಳಿದ್ದಾರೆ ಆ ಸ್ಲೇಟು ಬೇಕೇ ಬೇಕು ಅಂತ ರಚ್ಚೆ ಹಿಡಿದೆ. ನಾನು ಅಂಥ ಹಟಮಾರಿಯಲ್ಲ. ಆದರೆ ಅವತ್ತು ರಚ್ಚೆ ಹಿಡಿದೆ ಯಾಕೆಂದರೆ ಮಿಸ್ಸು ಹೇಳಿದ್ದರಲ್ಲ!
ಮರುದಿನ ಅಮ್ಮ ಶಾಲೆಗೆ ಬಂದರು. "ಇವಾ ನೋಡ್ರಿ, ಅದ್ಯಾದೋ ಮ್ಯಾಜಿಕ ಸ್ಲೇಟ್ ಬೇಕು ಅಂತ ಹಠ ಮಾಡತಾನ" ಅಂತ ದೂರಿದರು. ಮಂಗಳಾ ಮಿಸ್ಸು "ಯಾಕೋ ಸ್ಲೇಟ್ ಬೇಕು ಅಂತ ಹಟ ಮಾಡ್ತೀಯಾ?" ಅಂತ ಕಿವಿ ಹಿಂಡಿದರು! ನನಗೆ ಅವತ್ತು ಕಿವಿ ಹಿಂಡಿದ್ದಕ್ಕಿಂತ ಹೆಚ್ಚಿನ ಆಘಾತವಾದದ್ದು ಮಂಗಳಾ ಮಿಸ್ಸು ಪ್ಲೇಠ್ ತಿರುವಿ ಹಾಕಿದ್ದರಿಂದ. ನಿನ್ನೆ ತಾನೇ ಸ್ಲೇಟ್ ಕೊಂಡುಕೊಳ್ಳಿ ಎಂದವರು ಇವತ್ತು ಕಿವಿ ಹಿಂಡಿಬಿಡುವುದೇ? ಅವರು ಹೇಳಿದ್ದಕ್ಕೆ ತಾನೇ ನಾನು ಹಟ ಹಿಡಿದದ್ದು! ಮಂಗಳಾ ಮಿಸ್ಸು ನನಗೆ ಈ ಮೂಲಕ ದ್ರೋಹ ಬಗೆದರು ಎಂದೇ ಅಂದುಕೊಂಡೆ. ಅನೇಕ ದಿನಗಳವರೆಗೆ ಮಿಸ್ಸಿನ ಮೇಲೆ ಸಿಟ್ಟಿತ್ತು. ಮನಿಸಿಕೊಂಡೇ ಅಡ್ಡಾಡಿದ್ದಾಯಿತು! ಆಮೇಲೆ ಹಾಗೆಯೇ ರಮಿಸಿ ಕರಗಿಸಿದರೆನ್ನಿ!
ಇಲ್ಲಿ ತಪ್ಪು ಯಾರೆಂದು ತಿಳಿಯುತ್ತಿಲ್ಲ. ಸಹಜವಾಗಿ ’ಕೊಂಡುಕೊಳ್ಳಿ’ ಎಂದು ಹೇಳಿದ ಮಿಸ್ಸಿನದೋ? ಸಹಜವಾಗಿ ಹೇಳಿದ್ದನ್ನು ಸಿರಿಯಸ್ ಆಗಿ ತೆಗೆದುಕೊಂಡ ನನ್ನದೋ? ದೂರು ಹೇಳಿ ಮಿಸ್ಸು ಮತ್ತು ನನ್ನ ನಡುವೆ ತಂದಿಟ್ಟ ಅಮ್ಮನದೋ!
ಚಿಕ್ಕವನಿದ್ದಾಗ ನಾನು ಅಂಥ ತುಂಟನಾಗಿರಲಿಲ್ಲ ಅಥವಾ ನನಗೆ ಆ ’ಬಿರುದು’ ಇರಲಿಲ್ಲ. ಜೊತೆಗಿನವರೊಡನೆ ಆಡುವಾಗ ಸಾಕಷ್ಟು ತುಂಟತನಗಳು ಸೇರಿ ಹೋಗುತ್ತಿದ್ದವು. ಅಕ್ಕ ಪಕ್ಕದವರು ನನ್ನ ಮೇಲೆ ದೂರು ಹೇಳಿದ ಸಂದರ್ಭಗಳು ಇಲ್ಲವೇ ಇಲ್ಲ ಎನ್ನಬಹುದು. ಆದರೆ ನಮ್ಮಮ್ಮನಿಗೆ ನನ್ನನ್ನು ಉತ್ತಮ ನಾಗರೀಕನನ್ನಾಗಿ ಮಾಡಬೇಕೆಂಬ ತುಡಿತ! ’ಪಾಶ್ ಏರಿಯಾದಲ್ಲಿ’ ಮನೆ ಮಾಡಬಹುದಾದಷ್ಟು ಅನುಕೂಲ ಇರದ ಕಾರಣ ಸಲ್ಪ ಕೆಳಮಧ್ಯಮ ವರ್ಗದ ಏರಿಯಾದಲ್ಲಿ ನಮ್ಮ ಮನೆ ಇತ್ತು. ಸಹಜವಾಗಿಯೇ ಮಕ್ಕಳಲ್ಲೂ ’ಪಾಶ್’ತನ ಕಡಿಮೆ ಇದ್ದು ತುಂಟಾಟಗಳು ಸ್ವಲ್ಪ ಹೆಚ್ಚೇ ಇರುತ್ತಿದ್ದವು.
ಸಂಜೆ ಅಪ್ಪ ಮನೆಗೆ ಬರುತ್ತಿದ್ದಂತೆ ಅಮ್ಮ ನನ್ನ ಬಗ್ಗೆ ದೂರು ಹೇಳುತ್ತಿದ್ದರು. ಅಪ್ಪ ನನಗೆ "ಹೌದಾ?" ಅಂತ ಕೇಳುತ್ತಿದ್ದರು. ಸುಳ್ಳು ಹೇಳಬಾರದು ಎಂದು ಟೀಚರ್ ಹೇಳಿದ ವೇದವಾಕ್ಯದ ಪರಿಪಾಲಕನಾಗಿದ್ದ ನಾನು ’ಹೂಂ" ಅನ್ನುತ್ತಿದ್ದೆ. ಫಾರ್ಮಲ್ ಆಗಿ ಒಂದೆರಡು ಒದೆಗಳು ಬೀಳುತ್ತಿದ್ದವು.
ಒಮ್ಮೆ ಹೀಗೆಯೇ ಅಪ್ಪ "ಹೌದಾ?" ಎಂದು ಕೇಳಿದ ಪ್ರಶ್ನೆಗೆ ನಾನು "ಹೂ" ಎಂದಾಗ "ಸಲ್ಪರ ನಾಚಿಕೆ ಐತೆನ ನೋಡ ಅವ್ನಿಗೆ, ಎಷ್ಟ ಚಂದ ಹೂ ಅಂತಾನ" ಅಂದುಬಿಟ್ಟರು ಅಮ್ಮ! ಅಮ್ಮ ಹೀಗಂದರಲ್ಲ ಎಂಬ ಕಾರಣಕ್ಕೆ ಮರುದಿನ ಅಪ್ಪ "ಹೌದಾ?" ಅಂತ ಕೇಳಿದರೆ ನಾನು "ಇಲ್ಲ" ಎಂದೆ. "ಸುಳ್ಳು ಬೇರೆ ಹೇಳತೀಯಾ?" ಅಂತ ಒಂದೆರಡು ಬೋನಸ್ ಒದೆಗಳು ಬಿದ್ದವು!
ಇದು ವಾರದ ಬಹುತೇಕ ದಿನಗಳಲ್ಲಿ ನಡೆಯುತ್ತಿತ್ತು. ಒಮ್ಮೆ ಯಾವ ಕಾರಣಕ್ಕಾಗಿ ಒದೆ ಬೀಳುತ್ತಿತ್ತೋ ಆ ಕೆಲಸವನ್ನು ನಾನು ಮತ್ತೆ ಮಾಡುತ್ತಿರಲಿಲ್ಲ. ಆದರೂ ಪ್ರತೀ ದಿನ ಹೊಸ ದೂರುಗಳು ದಾಖಲಾಗುತ್ತಿದ್ದವು. ಅಮ್ಮ ದೂರು ಹೇಳುವವರೆಗೆ ನಾನು ಮಾಡಿದ್ದು ತಪ್ಪು ಎಂದು ನನಗ ಗೊತ್ತೇ ಆಗುತ್ತಿರಲಿಲ್ಲ! ಅಮ್ಮನಿಗೆ ನಾನು ಒದೆ ತಿನ್ನುವುದು ನೋಡಿ ಜೀವ ಚುರುಚುರು ಎನ್ನಿಸಿತೋ ಅಥವಾ ನನ್ನ ತಪ್ಪು ಕೆಲಸಗಳು ಕಡಿಮೆ ಆಯಿತೋ ಒಂದೆರಡು ತಿಂಗಳಲ್ಲಿ ಅಪ್ಪನ ಎದುರಿಗೆ ಅಮ್ಮ ದೂರು ಹೇಳುವುದನ್ನು ನಿಲ್ಲಿಸಿದರು.
ಸಂಪದದಲ್ಲಿ "ದೊಡ್ಡೋರ್ಯಾಕೆ ಹಿಂಗೆ" ಸರಣಿಯನ್ನು ನಿಲ್ಲಿಸುತ್ತಿದ್ದೇನೆ. (ಈ ಸರಣಿಯನ್ನು ಮಾತ್ರ, ಬೇರೆ ಬರೆಯುತ್ತಿರುತ್ತೇನೆ) ಆದರೆ ಇದು ಇದೇ ಹೆಸರಿನ ___LINK_OPEN_href="http://troublepeople.blogspot.com/" target=_blank___ನನ್ನ ಹೊಸ ಬ್ಲಾಗ್ ನಲ್ಲಿ ಮುಂದುವರಿಯುತ್ತದೆ. ಈ ಬ್ಲಾಗ್ ಆಹ್ವಾನಿತರಿಗೆ ಮಾತ್ರ ಲಭ್ಯವಿದೆ. ಓದಲು ಆಸಕ್ತಿ ಇರುವ ಸಹೃದಯರು ನನಗೆ ಒಂದು ಮಿಂಚೋಲೆ ([email protected]) ಕಳಿಸಿದರೆ ಆಹ್ವಾನವನ್ನು ಕಳಿಸುತ್ತೇನೆ. ಧನ್ಯವಾದಗಳು!
ಪ್ರತಿಕ್ರಿಯೆ (2)