ನಾವು ಕೂಡ ಎಳೆಯರು

ನಮ್ಮ ಹಾಡು ಕೇಳುವರಾರು

ಗುಡಿಸಲು ಮನೆಯು, ಕುಡುಕ ಅಪ್ಪನು

ಪುಸ್ತಕ ಕೊಳ್ಳಲು ಹಣವಿಲ್ಲ

ಶಾಲೆಗೆ ಸೇರಿ ವಿದ್ಯೆಯ ಕಲಿಯುವ

ಅದೃಷ್ಟವೆಂದೂ ನಮದಲ್ಲ

ಫ್ಯಾಕ್ಟರಿಯಲ್ಲಿ ಜೀತವ ಮಾಡುತ

ಪುಡಿಗಾಸನ್ನು ದುಡಿಯುವೆವು

ಮಾಲೀಕನ ಚಾಟಿಯ ಏಟಿಗೆ

ಬೆನ್ನು ಬಗ್ಗಿಸಿ ಅಳುತಿಹೆವು

ಕೆಂಪು ದೀಪದ ಬೀದಿಗಳಲ್ಲಿ

ರಂಗಿನ ಲಂಗ ತೊಟ್ಟಿಹೆವು

ಕಾಮಿ ಪುರುಷರ ಅಟ್ಟಹಾಸಕೆ

ನಲುಗುತ ದಿನವೂ ಸತ್ತಿಹೆವು

ಹೋಟೆಲಿನಲ್ಲಿ ಬಟ್ಟೆಯ ಹಿಡಿದು

ಟೇಬಲ್ ಒರೆಸಲು ಕಾದಿಹೆವು

ಗ್ರಾಹಕ ಕೊಡುವ ಕಿಲುಬಿನ ಟಿಪ್ಸಿಗೆ

ಹಲ್ಲನು ಗಿಂಜುತ ನಿಂತಿಹೆವು

ನಲಿವೂ ಇಲ್ಲ, ಕಲಿಕೆಯೂ ಇಲ್ಲ

ಆಟ ಪಾಠವು ನಮಗಿಲ್ಲ

ನೋವೇ ತುಂಬಿದ ಬಾಳಿನ ತುಂಬಾ

ಖುಷಿ ನೆಮ್ಮದಿಯ ಕುರುಹಿಲ್ಲ

ನಾವು ಕೂಡ ಎಳೆಯರು

ನಮ್ಮ ಹಾಡು ಕೇಳುವರಾರು