ಗಜಲ್ ಕವಯತ್ರಿ, ನಿವೃತ್ತ ಮುಖ್ಯ ಶಿಕ್ಷಕಿ ರತ್ನ ಕೆ.ಭಟ್, ತಲಂಜೇರಿ ಇವರಿಗೆ ಖ್ಯಾತ ಗಜಲ್ ಕವಿ ಮಿರ್ಜಾ ಗಾಲಿಬ್ ಅವರ ನೆನಪಿನಲ್ಲಿ ನೀಡುವುದೆಂದು ನಿರ್ಧರಿಸಲಾದ ಪ್ರಥಮ ವರ್ಷದ ರಾಷ್ಟ್ರೀಯ ಗಾಲಿಬ್ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಆಗಸ್ಟ್ ೨೩ರಂದು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಸೇರಿದ ನೂರಾರು ಆಸಕ್ತ ಗಣ್ಯ ಸಭಿಕರ ಸಮ್ಮುಖದಲ್ಲಿ ಅತಿಥಿ ಗಣ್ಯರಿಂದ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು ಇವರು ಆಯೋಜಿಸಿದ್ದ ಮೂರನೇ ವರ್ಷದ ಅಖಿಲ ಕರ್ನಾಟಕ ಗಜಲ್ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರತ್ನ ಭಟ್ ಅವರು ‘ಸಂಪದ’ ಓದುಗರಿಗೆ ಹೊಸಬರೇನಲ್ಲ. ಕಳೆದ ಐದಾರು ವರ್ಷಗಳಿಂದ ಸಂಪದಲ್ಲಿ ಕವನಗಳು, ಗಜಲ್ ಗಳು, ಒಳ್ಳೆಯ ನುಡಿ, ವಿವಿಧ ಲೇಖನಗಳನ್ನು ಬರೆಯುತ್ತಾ ಚಿರಪರಿಚಿತರಾಗಿದ್ದಾರೆ. ಇವರ ‘ಹೆಜ್ಜೆಯೊಳಗಿನ ಗೆಜ್ಜೆನಾದ’ ಎನ್ನುವ ಗಜಲ್ ಸಂಕಲನವು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಸಂಪದ’ ಜಾಲತಾಣದಲ್ಲಿ ತಮ್ಮ ಮೌಲ್ಯಯುತ ಬರಹಗಳನ್ನು ಪ್ರಕಟಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಗಾಲಿಬ್ ಪ್ರಶಸ್ತಿ ಪುರಸ್ಕೃತರಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ.