ಲೋಹದ ಹಕ್ಕಿ ಹಾರಲು,
ಕಂಡಿದ್ದೇನು ಇರುಳಲು?
ಊರೆಲ್ಲಾ ಹೊಳೆವ ಕೆಂಡ.
ವೀರಭದ್ರನ  ಕೊಂಡ
ಉರಿದಿದೆ ಮೆರೆದಿದೆ ಜಗಜಗ ದೀಪ
ಇರುಳಿನ ಕೊರಳಿಗೇ ಉರುಳು ಪಾಪ
ಕತ್ತಲ ಕೊಲ್ಲಲು, ಬೆಳಕಿನ ಹೊನಲು
ಶಿವಸತಿ ಚಿತೆಯುರಿ ನಾಡಿನ ಮಡಿಲು
ಭೂಸುತೆಯಗ್ನಿ ಪರೀಕ್ಷೆಯ ಭುಗಿಲು
ಬೆಳಕಿನ ಹೊನಲಲಿ ಮುಗಿಲಿಗು ದಿಗಿಲು
ಹಿಮವಂತನ ಯಙ್ಞ ಕುಂಡದ ಒಡಲು
ಬದುಕಿನ ಬೆಳಕನು ನಂದಿಸದಿರಲು  
ಬರುವನೋ ರುದ್ರ
ಅಗ್ನಿಯ ಮೇಲೆ ರಕ್ತದ ಮಳೆಯನು
ಸುರಿವನೋ ರುದ್ರ

ಮಂಜುನಾಥ ವಿ. (ಮೊದ್ಮಣಿ)

 



ಮಂಜುನಾಥ್ (ಮೊದ್ಮಣಿ) ರ ಈ ಕವನ ಓದಿದಾಗ ಮೊದಲಿಗೆ ನನ್ನ ನೆನಪುಗಳ ನಾಗಾಲೋಟ ಓಡಿದ್ದು ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳು. ಆ ಸಮಯದಲ್ಲಿ ಪ್ರತಿಬಾರಿ ಊರಿಗೆ ಹೋಗಿ ಹಿಂದುರಿಗಿ ಬರುವಾಗ ಬೆಂಗಳೂರಿಗೆ ಎಂಟ್ರಿ ಕೊಡುವಾಗಲೆಲ್ಲಾ.. ಅಂದರೆ ಕೃಷ್ಣರಾಜಪುರಂ ದಾಟಿ ಹಲಸೂರು, ಬೇಗಂಹಾಲ್, ರಿಚ್ಮಂಡ್ ರಸ್ತೆಯ ಬಳಿಗೆ ಬರುವಾಗಿನ ಹೊತ್ತಿಗೆ ಸಂಜೆಯ ಕತ್ತಲಾಗಿರುತ್ತಿತ್ತು. ಆಗಿನ್ನು ರಾತ್ರಿಗಳಲ್ಲಿ ನಗರದ ಸವರ್ೇ ಕಾರ್ಯ ಪ್ರಾರಂಭವಾಗಿಲ್ಲದಿದ್ದುದರಿಂದ, ಆ ರಸ್ತೆಗಳಿಗೆ ಬರುವ ಹೊತ್ತಿಗೆ, ನನಗೇ ತಿಳಿಯದ ಅವ್ಯಕ್ತ ಭಯವೊಂದು ಕಾಡಲು ಶುರುವಾಗುತ್ತಿತ್ತು.

 

 

ಬೆಂಗಳೂರಿನ ನಗರ ಜೀವನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಹೋದಂತೆ ಭಯವು ಮಾಯವಾಯಿತಾದರು, ಆ ನೆನಪುಗಳು, ಮನದ ಮೂಲೆಯಲ್ಲಿ ಆಗಾಗ ಕಂಡೂಕಾಣದಂತಿರುವುದು, ರಾತ್ರಿಗಳಲ್ಲಿ ಒಂಟಿಯಾಗಿ ಸಂಚರಿಸುವಾಗ ನನ್ನ ಅರಿವಿಗೆ ಬರುತ್ತಿರುತ್ತದೆ. ಸ್ನಾತಕೋತ್ತರದ ಅವದಿಯಲ್ಲಿ ನನಗೆ ಪದೇ ಪದೇ ಕಾಡಿದ ಪ್ರಶ್ನೆ ಇದು.. ಗ್ರಾಮೀಣ ಹಿನ್ನಲೆಯ ನಾನು ನಗರದ ಜೀವನದ ಅಭ್ಯಾಸ ಕ್ರಮಗಳಿಗೆ ಒಗ್ಗಿ ಹೋದಂತಿದ್ದರೂ ಸಹ ನನ್ನ ಚಿಂತನೆಗಳ ಅರಿವಿನ ಇರುವು ನೆಲೆ ಕಂಡುಕೊಳ್ಳುತ್ತಿರುವ ಅಸ್ತಿತ್ವ ಯಾವುದು? ನನ್ನ ಇಲ್ಲಿಯವರೆಗಿನ ಜೀವನದ ಬಹುತೇಕ ಭಾಗವು ಕಳೆದಿರುವುದು ಆಸ್ತಿಕದ ವಾತಾವರಣದಲ್ಲಿಯಾದರು, ಈಗೇಕೆ ಆಸ್ತಿಕದ ಹಿನ್ನಲೆಗಳು ನನಗೆ ನನ್ನ ಅರಿವಿನ ಬೇರೆಯದೇ ಆದ ಅನುಭವಗಳ ಅನಾವರಣದಲ್ಲಿ ತೊಡಗಿಕೊಳ್ಳುವುದು ಎಂದು.

 

ಹಗಲಿನ ಬೆಂಗಳೂರಿಗಿಂತ ಇರುಳಿನ ಬೆಂಗಳೂರೇ ಹೆಚ್ಚು ಪರಿಚಿತವಾದದ್ದು ಏಕೆ..? " ಅನುಭವಗಳ ಹಿನ್ನಲೆಯ 'ಮುಂದೆ' ನಾನಿರುವೆ ಎಂದಾದರೆ.. ಮುಂದಾಗಲಿರುವ ಅನುಭವಗಳ ”ಹಿಂದೆ' ಇದ್ದೇನೆ ಎಂದು ಒಪ್ಪಿದಂತಾಯಿತು.. ಹಾಗಾದ್ರೆ ನಾನೀಗ ಎಲ್ಲಿದ್ದೇನೆ..? ಆಸ್ತಿಕ ಪುರಾಣಗಳ ರೂಪಕದಲ್ಲಿ ಇರುಳಿನಲ್ಲಿ ಕಾಣಸಿಗುವ ಬೆಂಗಳೂರಿನ ಚಿತ್ರಣ ಈ ಕವನದಲ್ಲಿದೆ. ಆ ಕವನದೊಳಗಿನ ಆಸ್ತಿಕತೆ ಮೂಡಿಸುವ ಅವ್ಯಕ್ತ ಭಾವ ನನಗೆ ನನ್ನ ಅನುಭವದ ಇರುಳಲ್ಲಿ ಬೆತ್ತಲಾಗುವ ಬೆಂಗಳೂರನ್ನು ಕಂಡಾಗ, ಶಿಷ್ಠ ಬದುಕಿನ ಬಟ್ಟೆ ತೊಟ್ಟು ಬದುಕುವ ಸಮಾಜದೊಳಗಿನ ನಾವು ಆಕಸ್ಮಿಕವಾಗಿ ನಮ್ಮನ್ನು ನಾವೇ ಸಂಪೂರ್ಣ ಬೆತ್ತಲಾಗಿ ಕನ್ನಡಿಯಲ್ಲಿ ಕಂಡಾಗ ಉಂಟಾಗುವ ಅನಾಮಿಕ ಭಾವದ ಮೂಲಕ ನಮ್ಮ ಇರುವನ್ನು ಪ್ರಶ್ನಿಸಿದಂತಾಗುತ್ತದೆ.