ರಾಕೆಟ್ ವಿಜ್ಞಾನ:ಕಸದಿಂದ ರಸ
ನೈಟ್ರಸ್ ಆಕ್ಸೈಡ್ ಗೊತ್ತಲ್ಲಾ? ನಗೆಯುಕ್ಕಿಸುವ ಈ ಅನಿಲವು ರಾಕೆಟಿಗೆ ನೂಕು ಶಕ್ತಿಯನ್ನು ಉತ್ಪಾದಿಸಲು ಬಳಕೆಯಾಗುತ್ತದೆ.ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರಾದ ಬ್ರಯಾನ್ ಕಾಂಟ್ವೆಲ್ ಅವರು ರಾಕೆಟ್ಗಳನ್ನು ಬಾಹ್ಯಾಕಾಶಕ್ಕೆ ದೂಡಲು ಬೇಕಾದ ಶಕ್ತಿಯ ಉತ್ಪಾದನೆಗೆ ನೈಟ್ರಸ್ ಆಕ್ಸೈಡ್ ಅನ್ನು ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದರು.ಈಗ ಇದೇ ವಿಧಾನ ಬಳಸಿ,ಕಸದಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಬಗೆಯನ್ನು ಸಂಶೋಧಿಸಿದ್ದಾರೆ.ತ್ಯಾಜ್ಯವನ್ನು ಸಾಮಾನ್ಯವಾಗಿ ಹೆಚ್ಚು ಆಮ್ಲಜನಕವಿರುವ ವಾತಾವರಣದಲ್ಲಿ ಬಿಟ್ಟು,ನೈಟ್ರಸ್ ಆಕ್ಸೈಡ್ ಉತ್ಪಾದನೆ ಸೀಮಿತಗೊಳಿಸಿ,ಹೆಚ್ಚು ಸಾರಜನಕ(ನೈಟ್ರೋಜನ್) ಉತ್ಪಾದನೆಯಾಗುವಂತೆ ಮಾಡಲಾಗುತ್ತದೆ.ಹೆಚ್ಚಿನ ಆಮ್ಲಜನಕವಿರುವ ವಾತಾವರಣದಲ್ಲಿ,ಆಮ್ಲಜನಕ ಬಯಸುವ ಬ್ಯಾಕ್ಟೀರಿಯಾ ಹೆಚ್ಚು ಬೆಳೆದು,ಅದು ಸಾವಯವ ವಸ್ತುಗಳನ್ನು ತಿಂದು ಮುಗಿಸುತ್ತವೆ.ಈಗ ಸ್ಟಾನ್ಫರ್ಡ್ ಸಂಶೋಧಕರು ಆಮ್ಲಜನಕ ವಾತಾವರಣದಲ್ಲಿ ಕಸವನ್ನು ಬಿಟ್ಟು, ಹೆಚ್ಚು ನೈಟ್ರಸ್ ಆಕ್ಸೈಡ್ ಮತ್ತು ಮಿಥೇನ್ ಉತ್ಪಾದನೆಯಾಗುವಂತೆ ಮಾಡುತ್ತಾರೆ. ಆಮ್ಲಜನಕ ಬಯಸುವ ಬ್ಯಾಕ್ಟೀರಿಯಾಗಳು ಇಲ್ಲದ ಕಾರಣ,ಸಾವಯವ ಪದಾರ್ಥಗಳು ಕೊಳೆತು,ಮಿಥೇನ್ ಹೆಚ್ಚು ಬಿಡುಗಡೆಯಾಗುತ್ತದೆ.ಬಳಿಕ ವಿದ್ಯುತ್ ಘಟಕದಲ್ಲಿ ನೈಟ್ರಸ್ ಆಕ್ಸೈಡ್ ಬಳಸಿ ನೂಕುಶಕ್ತಿ ಉಂಟು ಮಾಡಿ,ಜತೆಗೇ ಬಿಡುಗಡೆಯಾಗುವ ಆಮ್ಲಜನಕದಿಂದ,ಮಿಥೇನ್ ದಹಿಸಲು ಅನುಕೂಲ ಕಲ್ಪಿಸಿಕೊಡುತ್ತಾರೆ.ದಹನದಿಂದ ದೊರಕಿದ ಉಷ್ಣಶಕ್ತಿಯಿಂದ ಆವಿ ಉತ್ಪಾದಿಸಿ,ಅದನ್ನು ಟರ್ಬೈನ್ ತಿರುಗಿಸಿ, ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ.ಈ ವಿಧಾನದಲ್ಲಿ ಕಸವನ್ನು ಗಾಳಿಗೊಡ್ಡುವ ಅಗತ್ಯವಿಲ್ಲ.ಗಾಳಿ ಹೆಚ್ಚು ಪೂರೈಸುವುದು ಬಹಳ ಶಕ್ತಿ ಬಳಸುವ,ದುಬಾರಿ ಪ್ರಕ್ರಿಯೆ.ಸುಧಾರಿತ ವಿಧಾನದಲ್ಲಿ ಕಡಿಮೆ ಖರ್ಚು-ಕಡಿಮೆ ಶಕ್ತಿ ಬಳಸಿ,ಕಸದಿಂದ ರಸ ಉತ್ಪಾದಿಸಬಹುದು.ನೈಟ್ರಸ್ ಆಕ್ಸೈಡ್ ಮತ್ತು ಮಿಥೇನ್ ಅನಿಲಗಳು ಹಸಿರು ಮನೆ ಅನಿಲಗಳು.ಇವನ್ನು ವಾತಾವರಣಕ್ಕೆ ಸೇರಲು ಬಿಡುವುದು ಅಪಾಯಕರ.ಹೀಗಾಗಿ ಕಸ ವಿಲೇವಾರಿ ಮಾಡುವಾಗ,ಈ ಅನಿಲಗಳು ಉತ್ಪಾದನೆಯಾಗದಂತೆ,ಮಾಡುವ ಎಚ್ಚರಿಕೆ ಬೇಕು.ಆದರೆ ರಾಕೆಟ್ ವಿಜ್ಞಾನ ಬಳಸಿದ ಕಸದಿಂದ ವಿದ್ಯುತ್ಪಾದಿಸುವ ಹೊಸ ವಿಧಾನದಲ್ಲಿ,ನೈಟ್ರಸ್ ಆಕ್ಸೈಡಿನಿಂದ ಸಾರಜನಕ ಮತ್ತು ಆಮ್ಲಜನಕ ಪಡೆದು,ಬಳಿಕ ಮಿಥೇನ್ ದಹಿಸಿ,ಶಕ್ತಿ,ಉತ್ಪಾದಿಸುವುದರಿಂದ ಹಸಿರು ಮನೆ ಅನಿಲಗಳು ವಾತಾವರಣ ಸೇರುವ ಭಯವೂ ಇಲ್ಲ.
------------------------------------
ಯುನಿಕೋಡಿನಲ್ಲಿ "ಉದಯವಾಣಿ"
___LINK_OPEN_ href="http://1.bp.blogspot.com/_PU7BmR35lao/TFYGU5et5_I/AAAAAAAABWM/sSvpfVtmtV0/s1600/udayavani.JPG"___
ಪತ್ರಿಕೆಗಳ ಇ-ಪೇಪರ್ ಅಂತರ್ಜಾಲದಲ್ಲಿ ಲಭ್ಯವಾಗುವುದು ಓದುಗರಿಗೆ,ಪತ್ರಿಕೆ ಮುದ್ರಣದಲ್ಲಿ ಕಾಣಿಸುವ ಪುಟಗಳ ದರ್ಶನವನ್ನು ಇದ್ದದ್ದನ್ನು ಇದ್ದಂತೆ ಮಾಡಿಸುತ್ತದೆ.ಆದರೆ ಪತ್ರಿಕೆಯ ಬರಹವನ್ನೋ,ಸುದ್ದಿಯನ್ನೋ ಶೋಧಿಸುವಾಗ, ಇ-ಪತ್ರಿಕೆಯು ಶೋಧಪುಟದಲ್ಲಿ ಕಾಣಿಸಿಕೊಳ್ಳದು.ಪತ್ರಿಕೆಯು ತನ್ನದೇ ಅಕ್ಷರಶೈಲಿ ಬಳಸಿ,ತನ್ನ ಅಂತರ್ಜಾಲ ಪುಟ ಪ್ರಕಟಿಸಿದರೂ ಅದು ಶೋಧದಲ್ಲಿ ಕಾಣಿಸಿಕೊಳ್ಳದು.ಯುನಿಕೋಡ್ ವಿಧಾನದಲ್ಲಿ ಪತ್ರಿಕೆಯನ್ನು ಪ್ರಕಟಿಸಿದರಷ್ಟೇ ಭಾರತೀಯ ಭಾಷೆಗಳು ಅಂತರ್ಜಾಲದ ಶೋಧ ಫಲಿತಾಂಶದಲ್ಲಿ ಕಾಣಿಸಿಕೊಳ್ಳುತ್ತವೆ."ಉದಯವಾಣಿ"ಯ ಅಂತರ್ಜಾಲತಾಣ ಇದೀಗ ಹೊಸ ರೂಪ ಪಡೆಯುತ್ತಿದ್ದು,ಯುನಿಕೋಡಿನಲ್ಲಿ ಪ್ರಕಟವಾಗ ಹತ್ತಿದೆ. ಈಗಾಗಲೇ ಇ-ಪೇಪರ್ ರೂಪದಲ್ಲಿ ತಾಣ ಪ್ರಕಟವಾಗುತ್ತಿದ್ದಾದರೂ,ಯುನಿಕೋಡಿನ ಶಿಷ್ಟತೆಯನ್ನು ಬಳಸತೊಡಗಿರುವುದು ಇದೀಗಲಷ್ಟೇ.www.udayavani.com ಅಂತರ್ಜಾಲ ತಾಣ ನೋಡಿ.ಇ-ಪೇಪರ್ ನೋಡಲು,ಈ ತಾಣದಲ್ಲಿ ಕೊಂಡಿ ಸಿಗುತ್ತದೆ.ಕನ್ನಡದ ಪತ್ರಿಕೆಗಳೆಲ್ಲವೂ ಯುನಿಕೋಡಿನಲ್ಲಿ ಲಭ್ಯವಾದರೆ ಚೆನ್ನ.
------------------------------------------------------------
ಹಳ್ಳಿಮನೆ ಹುಡುಗ
ತಮ್ಮ ಹೆಸರಿನ ಅಂತರ್ಜಾಲತಾಣದಲ್ಲೇ ತಮ್ಮ ಬ್ಲಾಗ್ ಬರೆಯುವ ಅರವಿಂದ ವಿ ಕೆ ತಂತ್ರಾಂಶ ಪ್ರವೀಣ.ಕನ್ನಡ ಬರಹಗಳ ಜತೆಯೇ,ತಮ್ಮ ಮೆಚ್ಚಿನ ತಂತ್ರಾಂಶ ಅಭಿವೃದ್ಧಿಯ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.ಛಾಯಾಚಿತ್ರಗ್ರಹಣ ಇವರ ಇನ್ನೊಂದು ಹವ್ಯಾಸ.ಇವರು ಇತರರಂತೆ ಜನರ ಚಿತ್ರ ಕ್ಲಿಕ್ಕಿಸದೆ,ಪ್ರಕೃತಿಯ ಸೂಕ್ಷ್ಮ ವಿಷಯಗಳ ಕಡೆಗೆ ನೋಟ ಹರಿಸಿರುವುದೇ ಹೆಚ್ಚು.ಚಿತ್ರಗಳಿಗಾಗಿ http://picasaweb.google.com/hallimanearavind ನೋಡಿ.ಕುಂಗ್ಫು-ಪ್ರವಾಸಗಳಿವರ ಇತರ ಹವ್ಯಾಸಗಳು.ಲಿಂಬರ್ಲಿಂಕ್ನ ಉದ್ಯೋಗಿಯಾದ ಇವರು ಮುಕ್ತತಂತ್ರಾಂಶ,ಉಚಿತ ತಂತ್ರಾಂಶಗಳ ಪ್ರತಿಪಾದಕರು.ಲಿನಕ್ಸ್ ಉತ್ಸಾಹಿ.ಇವರ ತಾಣದ ಕಡೆ ಗಮನ ಹರಿಸಲು http://aravindavk.in ತೆರೆಯಿರಿ.
----------------------------------------------
ಟ್ವಿಟರ್ ಚಿಲಿಪಿಲಿ
*ಪುಸ್ತಕ ಬಿಸಿದೋಸೆಯಂತೆ ಖರ್ಚಾಗಲು ಏನು ಮಾಡಬೇಕು?ಪುಸ್ತಕದ ಹೊದಿಕೆ ಮೇಲೆ ಹುಡುಗಿ ಚಿತ್ರ ಹಾಕಿ,ಹುಡುಗಿ ಮೇಲೆ ಹೊದಿಕೆ ಹಾಕದಿರಲಿ.
*ಇಸ್ತ್ರಿ ಪೆಟ್ಟಿಗೆ ಸ್ತ್ರೀಲಿಂಗವೇ,ಪುಲ್ಲಿಂಗವೇ? ಸ್ತ್ರೀಲಿಂಗ ಅನುಮಾನ ಬೇಡ,ಇ-"ಸ್ತ್ರೀ" ಪೆಟ್ಟಿಗೆ
-------------------------------------------------
ಕಿಂಡಲ್ ಇ-ಬುಕ್ ರೀಡರ್ ಅಗ್ಗ
ಐಪ್ಯಾಡ್ ಸಾಧನದ ಸ್ಪರ್ಧೆ ಎದುರಿಸಲು ಅಮೇಜಾನ್ ಕಂಪೆನಿಯು ತನ್ನ ಅಂತಹುದೇ ಸಾಧನ ಕಿಂಡಲ್ನ ಬೆಲೆ ಇಳಿಸಿದೆ.ಕಿಂಡಲ್ ಬರೇ ನೂರನಲುವತ್ತು ಡಾಲರಿಗೆ ದೊರೆಯುತ್ತದೆ.ಮಾತ್ರವಲ್ಲ,ಇದರಲ್ಲಿಯೂ ವೈ-ಫೈ ಸಂಪರ್ಕ ಲಭ್ಯವಿರುವ ಕಾರಣ,ಅಂತರ್ಜಾಲಕ್ಕೆ ಸಾಧನವನ್ನು ನಿಸ್ತಂತು ಮಾಧ್ಯಮದ ಮೂಲಕ ಸಂಪರ್ಕಿಸಿ,ಇ-ಪುಸ್ತಕಗಳನ್ನು ಇಳಿಸಿಕೊಳ್ಳಬಹುದು.ಅಮೇಜಾನ್ ಪುಸ್ತಕಗಳನ್ನು ಮಾರುವುದರಲ್ಲಿ ಅಗ್ರಗಣ್ಯ ತಾಣ.ಇಲ್ಲಿ ಆರು ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು ಲಭ್ಯ.ಶೇಕಡಾ ತೊಂಭತ್ತು ಪುಸ್ತಕಗಳ ಬೆಲೆ ಹತ್ತು ಡಾಲರುಗಳಿಗೂ ಕಡಿಮೆ.ಇಲ್ಲಿಂದ ಇಳಿಸಿಕೊಂಡ ಪುಸ್ತಕಗಳನ್ನು ಕಿಂಡಲ್ ಸಾಧನದ ಮೂಲಕ ಮಾತ್ರಾ ಓದಲು ಸಾಧ್ಯ.ಸೂರ್ಯನ ಬೆಳಕಿನಲ್ಲೂ ಓದಲು ಸಾಧ್ಯ,ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುತ್ತದೆ ಎನ್ನುವುದು ಕಿಂಡಲಿನ ಪ್ಲಸ್ ಪಾಯಿಂಟ್.ಕಪ್ಪು-ಬಿಳುಪು ತೆರೆಯನ್ನು ವರ್ಣವಾಗಿಸಲು ಅಮೇಜಾನ್ ಕಂಪೆನಿ ಯೋಚಿಸಿದೆ.ಸದ್ಯ ಮೂರು ದಶಲಕ್ಷ ಕಿಂಡಲ್ಗಳು ಮಾರಾಟವಾಗಿವೆ.ಅಂದಹಾಗೆ ಐಪ್ಯಾಡ್ ಕಿಂಡಲಿನ ಏಳುಪಟ್ಟು ದುಬಾರಿಯಾದರೂ ಕೆಲವೇ ತಿಂಗಳುಗಳೊಳಗೆ ಅಷ್ಟೇ ಸಂಖ್ಯೆಯ ಐಪ್ಯಾಡ್ಗಳು ಮಾರಾಟವಾಗಿವೆ.
-----------------------------------------------------------
ಬಿಸಿಯಾಗುವ ಐಪ್ಯಾಡ್ ಬಗ್ಗೆ ಮಂಡೆಬಿಸಿ
ಮೂರು ಜನ ಐಪ್ಯಾಡ್ ಬಳಕೆದಾರರು ಸೂರ್ಯನ ಬೆಳಕಿನಲ್ಲಿ ಐಪ್ಯಾಡ್ ಬಳಸಿದರೆ,ಅವು ಬಿಸಿಯಾಗಿ,ತಂತಾನೇ ಬಂದ್ ಆಗುತ್ತವೆ ಎಂದು ತಗಾದೆ ಹೂಡಿದ್ದಾರೆ.ಐಪ್ಯಾಡ್ನ ಜಾಹೀರಾತಿನಲ್ಲಿ ಐಪ್ಯಾಡ್ ಬಳಸಿ,ಪುಸ್ತಕ ಓದಿದಂತೆ ಇ-ಪುಸ್ತಕವನ್ನು ಓದಬಹುದು ಎನ್ನುವ ರೀತಿ ಬಿಂಬಿಸಲಾಗಿದೆ.ಆದರೆ ಐಪ್ಯಾಡನ್ನು ಬಿಸಿಲಿನಲ್ಲಿ ಓದಿದರೆ,ಅದು ಬಿಸಿಯೇರಿ,ತನ್ನಷ್ಟಕ್ಕೆ ಬಂದ್ ಆಗುತ್ತದೆ-ಹೀಗಾಗಿ,ಜಾಹೀರಾತು ಜನರನ್ನು ತಪ್ಪು ದಾರಿಗೆಳೆಯುತ್ತದೆ ಎನ್ನುವುದು ಅಮೆರಿಕಾದ ಕೆಲ ಬಳಕೆದಾರರ ಆರೋಪ.ಅವರ ಸಂಖ್ಯೆ ಕೈಬೆರಳೆಣಿಕೆಯಲ್ಲಿದೆ ಎನ್ನುವುದು ಐಪ್ಯಾಡ್ ತಯಾರಿಕಾ ಆಪಲ್ ಕಂಪೆನಿಗೆ ಸಮಾಧಾನ ತಾರದೆ ಇರದು.
----------------------------------------------------------
ಪ್ರವಾಸೀ ತಾಣದಲ್ಲಿದ್ದ ಅವಧಿ ಎಷ್ಟು?
ಪ್ರವಾಸಿಗಳು ಒಂದು ಪ್ರವಾಸೀ ತಾಣದಲ್ಲಿ ಎಷ್ಟು ಸಮಯ ಕಳೆಯುತ್ತಾನೆ ಎನ್ನುವುದು,ವ್ಯವಹಾರಸ್ಥರಿಗೆ ಉಪಯುಕ್ತ ಮಾಹಿತಿಯಾದೀತು.ಇದನ್ನು ಕಲೆ ಹಾಕುವ ಸುಲಭ ವಿಧಾನ ಯಾವುದು?ಪ್ರವಾಸಿಗಳು ತೆಗೆದ ಮೊದಲ ಹಾಗೂ ಕೊನೆಯ ಚಿತ್ರಗಳ ಸಮಯ ಇದರ ಬಗ್ಗೆ ಸುಳಿವು ಕೊಡುತ್ತದೆಯಷ್ಟೇ? ಪ್ರವಾಸಿಗಳು ತಾವು ತೆಗೆದ ಚಿತ್ರಗಳನ್ನು ಫ್ಲಿಕರ್ ಅಂತಹ ಅಂತರ್ಜಾಲ ತಾಣಗಳಲ್ಲಿ ಹಾಕುವುದು ಮಾಮೂಲಾಗಿ ಬಿಟ್ಟಿದೆ.ಈ ಚಿತ್ರಗಳ ವಿಶ್ಲೇಷಣೆ ಮಾಡುವುದರ ಮೂಲಕ ಪ್ರವಾಸಿ ಬೇರೆ ಬೇರೆ ತಾಣಗಳಲ್ಲಿ ಕಳೆದ ಸಮಯದ ಅವಧಿಯನ್ನು ಲೆಕ್ಕ ಹಾಕುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.ಬೆಂಗಳೂರಿನಲ್ಲಿ ನಡೆದ ಮೂರನೇ ಮುಕ್ತ ಹ್ಯಾಕ್ ಸ್ಪರ್ಧೆಗಳಲ್ಲಿ ಅಭಿವೃದ್ಧಿಯಾದ ತಂತ್ರಾಂಶಗಳಲ್ಲಿ ಇದೂ ಒಂದು.ಚಿರ್ಪ್ಶೈರ್ ಎನ್ನುವ ಇನ್ನೊಂದು ಹ್ಯಾಕ್ ಮೂಲಕ ತಾಣವೊಂದನ್ನು ಆರಂಭಿಸಲಾಗಿದೆ.ಅತಿ ಹೆಚ್ಚು ಟ್ವಿಟರ್ ಸಂದೇಶ ಹಾಕಿದವರು,ಮುಂಜಾನೆ ಅತಿ ಹೆಚ್ಚು ಸುದ್ದಿಯ ಕೊಂಡಿಗಳನ್ನು ಟ್ವಿಟರ್ ಸಂದೇಶಗಳಾಗಿ ಹಾಕಿದವರು,ಉತ್ಪನ್ನದ ಬ್ರಾಂಡ್ನೇಮ್ ಬಳಸಿದ ಸಂದೇಶಗಳಿಗೆ ಬಹುಮಾನಕ್ಕೆ ಆಯ್ಕೆ ಮಾಡುವ ತಂತ್ರಾಂಶವನ್ನು,ಈ ತಾಣದಲ್ಲಿ ಬಳಸಲಾಗಿದೆ.ಅಂದ ಹಾಗೆ ಲಭ್ಯವಾಗಿರುವ ತಂತ್ರಾಂಶಗಳನ್ನೇ ತುಸು ಬದಲಿಸಿ ಅಥವಾ ಅಭಿವೃದ್ದಿ ಪಡಿಸಿ,ಕಡಿಮೆ ಸಮಯದಲ್ಲಿ ತಂತ್ರಾಂಶ ರಚಿಸುವುದನ್ನು "ಹ್ಯಾಕ್" ಮಾಡುವುದು ಎನ್ನಲಾಗುತ್ತದೆ.
-----------------------------------------------------------------
udayavani
*ಅಶೋಕ್ಕುಮಾರ್ ಎ
ಪ್ರತಿಕ್ರಿಯೆ (2)