ಕಾರು ತುಂಬಾ ಹಸಿರಾದ ವಾತಾವರಣದಲ್ಲಿ ಹೊಕ್ಕ ಹಾಗಿತ್ತು, ವಿಶಾಲವಾದ ಜಾಗ ಆವರಣದಲ್ಲಿ ಕಾರು ನಿಂತಿತು. ಕಾರಿನಿಂದ ಕೆಳಗಿಳಿಯುತ್ತಲೇ ದೂರದಲ್ಲಿ ದೊಡ್ಡದಾಗಿ ಬರೆದ " ನಿಮಾನ್ಸ್ ಮಾನಸ ಚಿಕಿತ್ಸಾಲಯ" ಕಂಡಿತು.
ಪಕ್ಕಕ್ಕೆ, ತಿರುಗಿದೆ ದೊಡ್ಡ ದೊಡ್ಡ ಸರಳುಗಳ ಮುಚ್ಚಿದ ಬಾಗಿಲಿನ ಹಿಂದೆ ಒಬ್ಬನನ್ನು ಹಿಡಿದು ಎಳೆಯುತ್ತಿದ್ದರು ಇಬ್ಬರು, "ನಾನು ಹುಚ್ಚ ಅಲ್ಲ ನಾನು ಹುಚ್ಚ ಅಲ್ಲ " ಎನ್ನುವ ಮಾತು ಆ ರೋಗಿಯ ಬಾಯಿಂದ.
ಯಾಕೋ ಸ್ವರ ಕೇಳಿದ ಹಾಗೆಯೇ ಇತ್ತು. ಸ್ವಲ್ಪ ಈ ಕಡೆ ತಿರುಗಿದ ಮುಖ ನೋಡಿ ಬೆಚ್ಚಿದೆ!!! ತ್ಯಾಂಪ....ಅವನಿಗೇನಾಯ್ತು... ? ಆತನೂ ಈ ಕಡೆ ತಿರುಗಿ... ಸೀನಾ ನಾನು ಹುಚ್ಚ ಅಲ್ಲ ಕಣೋ ಇವರು ಸುಮ್ಮನೇ ಕರೆತಂದಿದ್ದಾರೆ ನನ್ನ ಬಾರೋ ಇಲ್ಲಿಂದ ಬಿಡಿಸೋ ಅನ್ನುತ್ತಿದ್ದ.....
ಥಟ್ಟನೆ ಎಚ್ಚರಾಯ್ತು..
ಹೌದು ಇದು ಕನಸೇ...
ಪಕ್ಕದಲ್ಲೇ ದೂರವಾಣಿಯ ಸದ್ದು.. ಅದೇ ಸ್ವರ " ಹಿಲ್ಲೋ...?" ಸೀನನದ್ದು
"ಏನಾಯ್ತೋ..?"
"ತ್ಯಾಂಪನ್ನ ಕಂಡಿದ್ಯಾ..?"
"ಇಲ್ಲೆ ಯಾಕೆ...?"
"ಹುಶಾರಿಲ್ಲೆ ಅಂಬ್ರ..."
"ಎಂತ ಆಯ್ತಾ..?"
"ನೀ ಹೋಯ್ ಕಾಣ ಅಕ್ಕಾ... ನಾನ್ ಕಡಿಗ್ ಬತ್ತೆ."
ಏನು ಮಾಡಲೂ ಗೊತ್ತಾಗದೇ ಅವನ ಮನೆಗೆ ಫೋನಾಯ್ಸಿದೆ. ಯಾರೋ ಎತ್ತಿದರು. "ಯಾರು ಮಾತಾಡೋದು?...ತ್ಯಾಂಪ....?"
ತ್ಯಾಂಪಾ... ಏನಾಯ್ತೋ ಹುಷಾರಿಲ್ಲ ಅಂಬ್ರಲ್ಲ ಏನಾಯ್ತು..?
ಯಾರು ತ್ಯಾಂಪ..? ಇಲ್ಲಿಯಾರೂ ತ್ಯಾಂಪ ಇಲ್ಲಲ್ಲ..
ಮತ್ತೆ ನೀವು ಯಾರು..? ನಾನು ಮಂಗ್ಯಾ...
ನಂಬರ್ ಪುನಹ ತಾಳೆ ನೋಡಿದೆ ಅದೇ ಇದೆ ಮತ್ತೆ ಸ್ವರ ಅವನದ್ದೇ ಆದರೆ ಯಾಕೆ ಮಂಗ್ಯಾ ಅಂದ...
ಅಂದರೆ ಕೇಸು ಸೀರಿಯಸ್ಸೇ... ಅಲ್ಲಿಗೇ ಹೋಗ ಬೇಕಾಗಿದೆ
ಅವನ ಚಿಕ್ಕಂದಿನ ಕಥೆಯಿದು. ಅವನಿಗೊಂದು ಅಭ್ಯಾಸ ಇತ್ತು. ಬೆಳಿಗ್ಗೆ ಎದ್ದ ಕೂಡಲೇ ಮೊದಲು ಆತ ಯಾರನ್ನ ನೋಡುತ್ತಾನೋ , ಯಾರೇ ಸಿಗಲಿ, ಅವರ ಹತ್ತಿರ ಇವ ನಾನು ಯಾರು? ಅಂತ ಕೇಳುವ. ಉತ್ತರಕ್ಕೆ ಅವರು ಏನೇ ಹೇಳಲಿ ಆ ದಿನವಿಡೀ ಮನೆಯಲ್ಲಿ ಎಲ್ಲರೂ ಅದೇ ಹೆಸರು ಹಿಡಿದೇ ಕರೆಯ ಬೇಕು. ಬೇರೆ ಯಾವ ಹೆಸರೂ ಕರೆಯ ಕೂಡದು. ಯಾರೋ ಬೆಳಿಗ್ಗೆಮಕ್ಕಳು ತಮಾಷೆಗೆ "ನಿನ್ನ ಹೆಸರು ನಾಯಿ" ಅಂದಿದ್ದರು. ಎಲ್ಲರೂ ಅವನನ್ನು ಆ ದಿನವಿಡೀ ನಾಯಿ ಅಂತಲೇ ಕರೆಯ ಬೇಕಲ್ಲ. ಅವನಿಗೇನೂ ಬೇಸರವಿಲ್ಲ, ಬೇಸರವೆಂದರೆ ಹಾಗೆ ಕರೆಯದಿದ್ದರೆ ಮಾತ್ರ. ಕೆಲವೊಮ್ಮೆ ಇದು ವಿಪರಿತಕ್ಕೆ ಹೋಗಿ ಬೆಳಿಗ್ಗೆ ಅವನಿಗೆ ಏನಂತ ಹೆಸರು ಹೇಳಿದ್ದರೋ ಅದು ಮರೆತು ಹೋಗಿ, ಆ ಹೆಸರು ಕರೆಯದಿದ್ದುದ್ದಕ್ಕಾಗಿ ಇಡೀ ದಿನ ಆತ ಅಳುತ್ತಿದ್ದೂ ಉಂಟು.
ಮನೆಯಲ್ಲಿ ಆತನೇ ಇದಿರ್ಗೊಂಡ . ಏನಾಯ್ತಪ್ಪಾ ತ್ಯಾಂಪ ಎಂದರೆ ತ್ಯಾಂಪ ಯಾರು? ನಾನು ಮಂಗ್ಯಾ ಅಂದ
ಸರಿ ಬಿಡು ಮಂಗ್ಯಾ..ನಿನ್ನ ಪತ್ನಿ ಎಲ್ಲಿ" ಕೇಳಿದೆ
ಅಷ್ಟರಲ್ಲಿ ಅವನ ಹೆಂಡತಿ..
"ಇಲ್ಲಣ್ಣಾ ಅವರು ಬೇರೆಯೇ ಆಗಿದ್ದಾರೆ, ಈಗ ಯಾವಾಗಲೂ ಮಂಕಾಗಿ ಕುಳ್ತಿರ್ತಾರೆ, ಏನಾಯ್ತು ಅಂತ ಕೇಳಿದರೆ ಹೇಳೋಲ್ಲ"
"ಒಂದುಉಪಾಯ ಮಾಡು ಮಾವಿನಕಾಯಿ ತಂಬುಳಿ ಮತ್ತಿ ಹುರುಳಿ ಚಟ್ನಿ ಬೆಳ್ಳುಲ್ಲಿ ಹಾಕಿ ಊಟ ಮಾಡಿಸು, ಸರಿ ಹೋಗ್ತಾನೆ ಬಿಡು."
"ಪ್ರಯೋಜನ ಇಲ್ಲೆ, ಮೊನ್ನೆ ಏನಾಯ್ತು ಗೊತ್ತಾ? ಇವರು ಹೊರಗಡೆ ಹೋಗಿದ್ದರು!!!"
"ಯಾಕೆ ಮನೆಯಲ್ಲಿ ಪಾಯಿಖಾನೆ ಇತ್ತಲ್ಲಾ..?"
"ಅಲ್ಲಣ್ಣಾ...... ಹಾಗೇ ಅಡ್ಡಾಡಲು ಹೋಗಿದ್ದರು. ಮನೆಗೆ ಬರುವಾಗ ಮರೆತು ಹೋಗಿ ದಾರಿ ತಪ್ಪಿ ತು ಪಕ್ಕದ ಮನೆಯವರಿಗೆ ಅಂತ ಕೊಟ್ಟ ಕಾಗದ ಅವರ ಕೈಯಲ್ಲೇ ಇತ್ತು, ಅದರಲ್ಲಿದ್ದ ವಿಳಾಸ ಯಾರ್ಯಾರ ಹತ್ರಾನೋ ಕೇಳ್ಕಂಡು ಬಂದು ಪಕ್ಕದ ಮನೇನೇ ತಮ್ ಮನೆ ಅಂತ ತಿಳ್ಕೋಂಡು ಮಧ್ಯಾಹ್ನದ ವರೆಗೆ ಅಲ್ಲಿಯೇ ಆರಾಮ್ ಆಗಿ ಇದ್ದರು,ಸಂಜೆ ಮನೆ ಹೆಂಗ್ಸಿಗೇ ಏನಮ್ಮ ಬೆಳಗಿಂದ ಇಲ್ಲೇ ಇದ್ದೀಯಲ್ಲ ನಿಮ್ ಗಂಡ ನೋಡಿದ್ರೆ ಏನ್ ಅಂದ್ಕೊಳ್ಳೊಲ್ಲ ಅಂತ ಕೇಳೋದೇ..ಅಷ್ಟೇ ಆದ್ರೆ ಚಿಂತೆ ಇಲ್ಲಾ"
"ಹೇಳಿ ಹೇಳಿ"
"ಮೊನ್ನೆ ನಮ್ಮ ಮಗನ್ನ ಪಕ್ಕದಮನೆ ಹುಡುಗ ಅಂತ ಮಾತಾಡ್ಸಿದ್ರು, ಕೆಲವು ಸಾರಿ ನನ್ನನ್ನೇ ಯಾರು ಅಂತ ಕೇಳೋರು. . ಕಳೆದ ಹದಿನೈದ್ ದಿನದಿಂದ ಕಲ್ಲೂರಾಮ್ ರವರ ಆಫೀಸಿಗೆ ಇವ್ರ ಹೋಗಿಯೇ ಇಲ್ಲವಂತೆ , ಮನೆಯಿಂದ ದಿನಾ ಬೆಳಿಗ್ಗೆ ಹೊರಟು ಸಂಜೆ ಬರ್ತಾ ಇದ್ರು , ಎಲ್ಲಿಗೆಲ್ಲ ಹೋಗಿ ಎನೇನ್ ಮಾಡಿ ಬಂದ್ರೋ ಗೊತ್ತಿಲ್ಲ. ಈಗ ತಲೆಗೊಬ್ರ ಮಾತಾಡೋರು"
"ಯಾಕೆ ಡಾಕ್ಟ್ರ ಹತ್ರ ಹೋಗ್ಲಿಲ್ಲವಾ?"
"ಅದೇ ದೊಡ್ಡ ಕಥಿ, ನನ್ನ ಅಕ್ಕ ಡಾಕ್ಟ್ರ ಬೇಡ, ಗುರುಗಳಹತ್ರ ಹೋಗೋಣ ಅಂತ ಹೇಳಿ ಯಾವ್ದೋ ಗುರುಗಳ ಹೋಗಿ ಅವ್ರ ಹೇಳಿದ್ದ ಕೇಳ್ಕಂಡ್ ಬಂದ್ವಿ"
"ಸರಿ ಆಮೇಲೆ..?"
"ಆಮೇಲೆಂತ...? ನವಗೃಹರಿಗೆ ೯ ಸುತ್ತು, ಅಶ್ವತ್ಥನಿಗೆ ೭ ಸುತ್ತು ಅಂತ ಅಲ್ಲೆಲ್ಲ ಹೋಗಿ ತಿರುಗಿ ತಿರುಗಿ ಯಾರ್ಯಾರಿಗೋ ಡ್ಯಾಷ್ ಹೊಡ್ದ ಚಪ್ಪಲಿ ಸೇವೆ ಮಾಡ್ಕಂಡ್ ಬಂದದ್ದಾಯ್ತ್.
"ಅಯ್ಯೋ ಪಾಪ"
"ಅನುಭವಿಸ್ದೋರಿಗೇ ಗೊತ್ತು ಸಂಕಟ ,ಮೊನ್ನೆ ಇದೆಲ್ಲ ಬ್ಯಾಡ ಅಂತೇಳಿ ಯಾವ್ದೋ ಗಲ್ಲಿ ಡಾಕ್ಟ್ರ ಹತ್ರ ಹೋಯ್ತ್ ,ಅವ್ರ್ ೧೦-೧೫ ಬೇರೆ ಬೇರೆ ಮಾತ್ರೆ ಕೊಟ್ಟಿದ್ರ. ಮೊನ್ನೆ ನಾನಿಲ್ಲೆ ಅಂತೇಳಿ ಯ್ವ್ಯಾವ್ದೋ ಮಾತ್ರೆ ಎಲ್ಲ ಒಟ್ಟಿಗೇ ತಿಂದರು. ಅದ್ಕೇ ಈಗ ಬೆಳಿಗ್ಗೆ ಎದ್ದ ಕೂಡ್ಲೇ ನಾನ್ ಯಾರ?ನನ್ನ ಹೆಸರು ಎಂತ..? ಅಂತ ಕೇಳೋದು, ಎಂತ ಹೆಸರ್ ಕೇಳ್ತ್ರೋ ,ಅದೇ ಹೆಸ್ರ ದಿನಾ ಇಡೀ ಕರೆಯ ಬೇಕು
ಪಕ್ಕದ್ಮನೆ ಖಿಲಾಡಿ ಮಕ್ಕಳು ಎಂತೆಂತದ್ದೋ ಹೆಸ್ರ್ ಹೇಳಿ ಅದನ್ನ ಕರೆಯಕಾಗ್ದೇ ನಮ್ಗೆ ಪಜೀತಿ. ನನ್ನ ಖರ್ಮ
"ಮೊನ್ನೆ ಆ ಗುರುಗಳು ಬಂದ್, ಡಾಕ್ಟ್ರ ಕೊಟ್ಟ ಆ ಮಾತ್ರೆ ತಿನ್ನಿಸ ಬೇಡಿ, ಅಂದ್ರ ಅವನು ಹಾಗೇ ಸರಿಯಾಗ್ತಾನೆ ಅಂದ್ರು'
"ನಿನ್ನೆ ನನ್ನ ಅಪ್ಪ ಇವರನ್ನು ನಿಮ್ಹಾನ್ಸ್ ಗೆ ತೋರಿಸಿ ಅಂದರು, ನೀವೇ ಹೇಳಿ ಅಣ್ಣಾ..? ನಾನು ಯಾರ ಮಾತು ಕೇಳೋದು? "
ನಿಮ್ಹಾನ್ಸ್ ಗಾ" ಎಂದೆ ಗಾಬರಿಯಿಂದ.
ಪ್ರತಿಕ್ರಿಯೆ (12)