ಇದು ಸಂಘದ ಹುಟ್ಟು ಮತ್ತು ಬೆಳವಣಿಗೆಯ ಕಥೆ.. ನಮ್ಮ (ಸ್ವಯಂಸೇವಕರ) ರಾಷ್ಟ್ರಜೀವನಕ್ಕೆ ಸಂಘದ ಕೊಡುಗೆ ಅಪಾರ, ಅಷ್ಟೇ ಮೌಲ್ಯವತ್ತಾದುದು ಕೂಡ. ಸ್ವತ: ಓರ್ವ ಸ್ವತಂತ್ರ ಹೋರಾಟಗಾರರಾಗಿದ್ದ ಸಂಘದ ಸಂಸ್ಥಾಪಕ ಡಾ|| ಕೇಶವ ಬಲಿರಾಮ ಹೆಡಗೆವಾರರು ಸ್ವಾತಂತ್ರದ ಗಳಿಕೆಗಾಗಿಯೆ ಅದನ್ನು ಆರಂಭಿಸಿದರು. ಆದರೆ ಪರಕೀಯರ ಕೈಗಳಿಂದ ಸ್ವಕೀಯರ ಕೈಗಳಿಗೆ ರಾಜ್ಯಾಧಿಕಾರ ಹಸ್ತಾಂತರವಾಗುವುದನ್ನೇ ಸ್ವಾತಂತ್ರ್ಯವೆಂದು ಬಗೆಯದೇ ಈ ನಾಡಿನ ಸ್ವಂತಿಕೆ, ಇಲ್ಲಿನ ಜೀವನದ ಎಲ್ಲ ರಂಗಗಳಲ್ಲಿ 

ವಿಕಾಸಗೊಳ್ಳುವುದೇನೈಜ ಸ್ವಾತಂತ್ರ್ಯವೆಂದು ಅಸಂಧಿಗ್ಧವಾಗಿ ಗುರುತಿಸಿದವರು ಅವರು.

 

ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರ್ವಸಾಮಾನ್ಯ ಎಲ್ಲರಿಗೂ ಚಿರಪರಿಚಿತ. ಸಂಘದ ಗುರಿ, ಅದರ ಕಾರ್ಯಶೈಲಿ, ಸಂಘದಿಂದ ಪ್ರೇರಣೆಪಡೆದು ಅದರ ಕಾರ್ಯಕರ್ತರು ನಡೆಸುತ್ತಿರುವ ಬಹುವಿಧ ಚಟುವಟಿಕೆಗಳು ಇವೆಲ್ಲ ಜನರಿಗೆ ಚನ್ನಾಗಿಯೇ ಗೊತ್ತು. ಅದರ ಮಜಲು ಮಜಲಾಗಿ ಬೆಳೆದ ಸಂಘದ ಕಥೆ ತುಂಬ ಸ್ವಾರಸ್ಯಕರವಾದುದು. ಅದರ ವಿಕಾಸದ ಈ‌ಕಥೆಯನ್ನು ತಿಳಿಯದವರಿಗಾಗಿ ತಿಳಿಸುವ ಕಿಂಚಿತ್ ಪ್ರಯತ್ನ ಇದು.

 

ಬರುವ ವಿಜಯದಷಮಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೮೫ ವರುಷ.. ಅದರನಿಮಿತ್ತ, ಸಂಘದ ಪರಿಚಯ ಮಾಡುವ ಸಲುವಾಗಿ ಈ ಲೇಖನ ಸರಣಿಯನ್ನು ಬರೆಯುತ್ತಿದ್ದೇನೆ. ಇಲ್ಲಿನ ಎಲ್ಲ ಮಾಹಿತಿ ಸಂಘದ ಹಿರಿಯ ಪ್ರಚಾರಕರಾದ ಶ್ರೀಯುತ ಚಂದ್ರಶೇಖರ ಭಂಡಾರಿ ಅವರು ಬರೆದ “ಮನುವಿನ ಮೀನು" ಪುಸ್ತಕದಿಂದ ತೆಗೆದುಕೊಂಡಿದ್ದೇನೆ, ಅದಕ್ಕೆ ಅವರ ಅನುಮತಿಯನ್ನೂ ಪಡೆದಿದ್ದೇನೆ. ಮುಕ್ತ ವಿಷಯ ವಿನಿಮಯಕ್ಕೆ / ಚರ್ಚೆಗೆ ಸ್ವಾಗತ.