ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ ಆರಾಧಿಸುವ ಪರಮಾತ್ಮನಿಗೆ ಮಂದಿರವೋ ಮಸೀದಿಯೋ ಎನ್ನುವ ತಕಾರಾರಿಗೆ ಸಿಕ್ಕಿತು ಮುಕ್ತಿ. ಅದೂ ಸಂಕೀರ್ಣಮಯ ಮುಕ್ತಿ. ಸಂಕೀರ್ಣ ಸಮಸ್ಯೆಗೊಂದು ಅಷ್ಟೇ ಸಂಕೀರ್ಣವಾದ ಪರಿಹಾರ. ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “ವಸುಧೈವ ಕುಟುಂಬಕಮ್” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ. ಬದುಕು, ಬದುಕಲು ಬಿಡು (ಜಿಯೋ ಔರ್ ಜೀನೇದೋ) ಎನ್ನುವ ಸಮೀಕರಣಕ್ಕೆ ಒಲ್ಲೆ ಎಂದು ಪಟ್ಟು ಹಿಡಿದ ವಿವಾದ. ಮೂರು ನ್ಯಾಯಾಧೀಶರುಗಳ ಪೀಠ ಕೊನೆಗೂ ಕೊಟ್ಟಿತು ತೀರ್ಪು, ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು. ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.
ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಹೊಟ್ಟೆ ಹೊರೆದು ಕೊಳ್ಳುವವರಿಗೆ ಯಾವ ಸಂದಿಗ್ಧ ಪರಿಸ್ಥಿತಿಯೂ ವಿಜಯೋಲ್ಲಸವೇ. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುವವನಿಗೆ ತನ್ನ ಹಸಿದ ಹೊಟ್ಟೆಗೆ ಊಟ ಯಾವ ಕಡೆಯಿಂದ ಬರಬಹುದು ಎನ್ನುವ ಕಾತುರ, ನಿರೀಕ್ಷೆ. ಇಂದು ಬೆಳಗ್ಗಿನ ಹಲವು ಪತ್ರಿಕೆಗಳನ್ನು ನೋಡಿದ ನನಗೆ ಅನ್ನಿಸಿದ್ದು ಈಗಲೂ ಮಾಧ್ಯಮಕ್ಕೆ ಭಾರತೀಯರ ನಡುವೆ ಕಂದಕ ತೊಡುವುದೇ ಇವರ ಕಾಯಕ ಎಂದು. ಕರಾವಳಿಯ ಗುಡ್ಡದ ಮೇಲೊಂದರಿಂದ ಪ್ರಕಾಶಿತವಾಗುವ ಪತ್ರಿಕೆಯಾಗಲಿ, ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಘೋಷಣೆ ಹೊತ್ತ ಪತ್ರಿಕೆಯಾಗಲಿ ತಮ್ಮ screaming headlines ಮೂಲಕ ಒಂದು ಸಮಾಜಕ್ಕೆ ಸಂದ ವಿಜಯವೆಂದೇ ಪ್ರತಿಬಿಂಬಿಸಿದವು. ಆದರೆ ಈ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.
ದೇಶದ ಜನಸಂಖ್ಯೆಯ ಶೇಕಡಾ ೭೭ ಭಾಗ ಇಪ್ಪತ್ತಕ್ಕೂ ಕಡಿಮೆ ರೂಪಾಯಿಯ ಆದಾಯದ ಮೇಲೆ ಕಳೆಯುತ್ತಾರಂತೆ. ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಅಸಮಾನತೆ, ಹಸಿವು, ಲಂಚ, ಕೊಲೆ ಸುಲಿಗೆ ಬಗ್ಗೆ ಮೇಲಿನ ಸಮಸ್ಯೆಗಳಿಗೆ ತೋರಿಸಿದ ಕಾಳಜಿ, ಕಾತುರ ತೋರಿದ್ದಿದ್ದರೆ ಪಕ್ಕದ ಚೀನಾ ಅಥವಾ ಮಲೇಷ್ಯ ದಂಥ ದೇಶಗಳ ಪ್ರಗತಿ ಕಂಡು ಕರುಬುವ ಅವಶ್ಯಕತೆ ಇರಲಿಲ್ಲ. ಏನೇ ಆಗಲಿ ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್). ಈ ತೀರ್ಪು ದೇಶಕ್ಕೆ ಅವಶ್ಯ ಬೇಕಾದ ಶಾಂತಿ ನೆಮ್ಮದಿ ಕೊಡಿಸುವುದೋ ಎಂದು ನ್ಯಾಯ ಮೂರ್ತಿಗಳು ವಿಧಿಸಿದ ಮೂರು ತಿಂಗಳುಗಳ status quo ಉತ್ತರ ನೀಡಬಹುದು.
ಇಂದು ಬೆಳಿಗ್ಗೆ ನನ್ನ mobile ಗೆ ಬಂದ ಸಂದೇಶ; who are we Hindu or Muslim? When there is “Ali” in “Diwali” and “Ram” in “Ramadan” cant we help India to be united?
ಈ ಮೇಲಿನ ಉದಾತ್ತ, ಸಾಮರಸ್ಯದ ಭಾವನೆ ಸರ್ವರಲ್ಲೂ ಕಾಣುವಂತಾಗಲಿ ಎಂದು ಆಶಿಸುತ್ತಾ..
ಪ್ರತಿಕ್ರಿಯೆ (14)