ಸಾರ್ಥಕ ವಾರಾಂತ್ಯ- ನಾಲ್ಕನೆಯ ಸಂಪದ ಸಮ್ಮಿಲನ
ಸಂಪದವನ್ನು ನಾಡಿಗರು ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಹುಟ್ಟು ಹಾಕಿದರು ಎಂಬುದು ಕೇಳಿ ಈ ಮೂವತ್ತರ ಹರೆಯದ ಯುವಕ ಹರಿಪ್ರಸಾದ ನಾಡಿಗರ ಮೇಲಿನ ನನ್ನ ಗೌರವ ಮತ್ತೂ ನೂರ್ಮಡಿಯಾಯ್ತು.
ಐದು ವರುಷ ಹಿಂದಿನ ಈ ಒಂದು ಸಮೂಹ ಮಾಧ್ಯಮವಾಗಿ ಬ್ರಹದಾಕಾರವಾಗಿ ಬೆಳೆಯುತ್ತ ಬಂದಿರುವುದು ಅವರಿಗೇ ಅಪಾರ ಉತ್ಸಾಹ ಮತ್ತು ಖುಷಿಯನ್ನು ತಂದಿದೆ. ಈ ಖುಷಿಯನ್ನು ವ್ಯಕ್ತ ಪಡಿಸುವುದನ್ನು ನೋಡಿದ ನನಗೆ ಇವತ್ತಿನ ಸಮ್ಮೇಲನಕ್ಕೆ ಬರುತ್ತೇವೆಂದು ನಿರ್ಧರಿಸಿಯೂ ಬರಲಾಗದವರ ಮೇಲೆ ಕರುಣೆ ಉಕ್ಕಿತು.
ನಿಜ !! ಐದು ವರುಷದ ಹಿಂದೆ ಇಂಗ್ಲೀಷಿನಲ್ಲಿರುವ ವಿಕಿಪೀಡಿಯದಲ್ಲಿ ತಮಗೆ ಗೊತ್ತಿರುವ ವಿಷಯವನ್ನು ವ್ಯಕ್ತ ಪಡಿಸಿ ಯಾರು ಬೇಕಾರೂ ವಿಶದೀಕರಿಸುವಂತೆ ಮಾಡುವ ಮಾಧ್ಯಮ ಕನ್ನಡದಲ್ಲಿಯೂ ಇದ್ದರೆ ಎಷ್ಟು
ಚೆನ್ನ ಎಂದೆಣಿಸಿದಾಗ ಉಧ್ಭವಿಸಿದ ಕಿರು ಮೂರ್ತಿಯೇ ಈ ಸಂಪದ. ಮಾತನಾಡಿದಂತೆ ಬರೆಯಲೂ ಸಹಾ, ನಮಗನ್ನಿಸಿದ್ದನ್ನು ಅನ್ನಿಸಿದ ಹಾಗೆ ಬರೆಯಲು ಮತ್ತು ಅದನ್ನೇ ನಾಲ್ಕು ಜನರಿಗೆ ಉಪಯೋಗವಾಗುವಂತೆ ಮಾಡುವ ಕನಸು ಕಂಡ ನಾಡಿಗರು ಅದಕ್ಕೆ ಅನುಗುಣವಾಗಿ ಪ್ರಯತ್ನಿಸಿ ನಮಗೆಲ್ಲಾ ಕಂಡರಿಯದ ಕೇಳರಿಯದ ಸಂಪದಿಗ ಸ್ನೇಹವನ್ನು ಸಂಪಾದಿಸಿಕೊಟ್ಟರು.
ಇವತ್ತಿನ ಈ ಸಮ್ಮೇಳನದಲ್ಲಿ ತಾಂತ್ರಿಕ ವಿಷಯ ನಿರೂಪಣೆ ನಾಡಿಗರೇ ಹೇಳುವ ಹಾಗೆ ಸರ್ವರಿಗೂ ಅರ್ಥವಾಗದಿದ್ದರೂ ತಮ್ಮ ಅಷ್ಟೆಲ್ಲಾ ಕೆಲಸ ಕಾರ್ಯಗಳನಡುವೆಯೂ ಸಮಾಜಕ್ಕಾಗಿ ಒಂದು ಉತ್ತಮ ಸಮೂಹ ಮಾಧ್ಯಮವನ್ನು ಅರ್ಪಿಸಿದ ಕೀರ್ತಿಯು ಅವರನ್ನು ಸಂಪದಿಗರೆಲ್ಲರ ಹೃದಯದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿರುವುದಂತೂ ನಿಜ. ನನ್ನಂತಹ ಅನೇಕ ಕಿರು ಸಾಹಿತಿಗಳಿಗೆ ಬರೆಯುವ ಗೀಳು ಹುಟ್ಟಿಸಿರುವ ಈ ಸಂಪದ, ಶಾಸ್ತ್ರಿ, ಡಿ ಎಸ್ ರಾಮಸ್ವಾಮಿ, ಶ್ರೀವತ್ಸ ಜೋಶಿ, ಸೋಮಯಾಜಿಯವರಂತಹ ದಿಗ್ಗಜರನ್ನೂ ತಾವೇ ಬರೆಯುವಂತೆ ಪ್ರೇರೇಪಿಸಿ ಶೀಲವಂತ, ಪಾಲ ರಂತವರ ಮಾಹಿತಿಪೂರ್ಣಲೇಖನಗಳನ್ನೂ ಸದಸ್ಯರೆಲ್ಲರಿಗೂ ಉಣ್ಣಿಸಿ ಸಂಪದಿಗರನ್ನು
ಭಾಗ್ಯವಂತರನ್ನಾಗಿ ಮಾಡಿದೆ.
ಈ ಲೇಖನದಲ್ಲಿ ಎಲ್ಲರ ಹೆಸರು ಬರೆಯುವದಂತೂ ಸಾಧ್ಯವಿಲ್ಲ ಅದು ನನ್ನ ಉದ್ದೇಶವೂ ಅಲ್ಲ, ನನಗಂತೂ ಇವತ್ತಿನ ಸಮ್ಮಿಲನ ಮಾಹಿತಿ ಪೂರ್ಣ ಕಣಜವಾಗಿತ್ತು, ನಾಡಿಗರ ಉದ್ದೇಶ ಸಫಲವಾಗಿ ತಾನೇ ಬೆಳೆದ ಈ ಬ್ಲಾಗಲ್ಲದ ಮಾಧ್ಯಮ ತನ್ನ ಸಹಾಯವೂ ಇಲ್ಲದೇ ತಾನೇ ನಡೆಯುವಂತಾಗಲೀ ಎನ್ನುವುದು ಅವರ ಮೂಲ ಆಶಯ ಎನ್ನುವುದನ್ನು ಅವರ ಬಾಯಿಯಿಂದ ಕೇಳಿದ ನನಗೆ ಕನ್ನಡ ತನ್ನಿಂದಲೇ ನಡೆಯುವುದು, ಬೆಳೆಯುವುದು ಎಂಡುಕೊಂಡಿರುವ ರಾಜಕೀಯ ಧುರೀಣರ ಮಾತಿಗೂ, ಯಾವುದೇ ರೀತಿಯ ಪ್ರಚಾರವನ್ನು ಅಪೇಕ್ಷಿಸದೇ ತನ್ನ ಸ್ವಪ್ರಯತ್ನದಿಂದಲೇ ಕಾಯಾ ವಾಚಾ ಮನಸಾ ಬೇರೆ ಯಾರ ಸಹಾಯವಿಲ್ಲದೇ ಸಂಪದದ ಮೂಲಕ ಕನ್ನಡ ಕಟ್ಟುತ್ತ ನಡೆಸುತ್ತಿರುವ ಬೆಳೆಸುತ್ತಿರುವ ನಾಡಿಗರ ಈ ಪರೋಪಕಾರೀ ಕಾರ್ಯದ ರೀತಿ ಕಣ್ಣಿಗೆ ಕಟ್ಟಿತು ಮನಕ್ಕೆ ತಟ್ಟಿತು.
ಸಮಯದ ಅಭಾವದಿಂದಾಗಿ ಮೂಲ ಉದ್ದೇಶ ಸಂಪೂರ್ಣವಾಗಿಯಲ್ಲದಿದ್ದರೂ ಅತ್ಯಂತ ಸಮರ್ಪಕವಾಗಿ ಯಶಸ್ವಿಯಾಯಿತೆಂದೇ ಹೇಳಬೇಕು.
ಇವತ್ತಿನವರೆಗೆ ನೊಂದಾಯಿಸಿದವರು ೭೫ ಆಗಿದ್ದರೂ ೨೫ ಜನರು ಬಂದಿದ್ದರೂ ಸಂಪದಲ್ಲಿನ ಬೆಳವಣಿಗೆ ಸಂಪದಿಗರೆಲ್ಲರ ಆಸಕ್ತಿ, ಬರಹಗಳು ಎಲ್ಲವೂ ಸಂಪದಿಗರ ಪರಿಚಯದೊಂದಿಗೆ ಆರಂಭವಾಗಿ ತಮ್ಮ ತಮ್ಮ ಅನಿಸಿಕೆಯನ್ನೂ ಸಂಪದದೊಂದಿಗಿನ ಅವಿನಾಭಾವ ಸಂಭಂಧವನ್ನೂ ವಿವರಿಸಿದ ರೀತಿ ಖುಷಿ ತಂದಿತು
ನನಗಂತೂ ಇವತ್ತು ನಾನು ಇದುವರೆವುಗೂ ನೋಡಿರದಿದ್ದ ಸುಪ್ರೀತ್, ಹರ್ಶ ಸಾಲಿಮಟ್, ಪ್ರಸನ್ನ, ಶ್ರೀನಿವಾಸ, ಎನ್ ಎಲ್ ಎನ್, ಮಲ್ಲೇಶ, ಸಂದೀಪ್, ಬಿ ವಿ ಜಿ, ಭಾಷಾಪ್ರಿಯ, ಸುನಿಲ್,ಅರವಿಂದ್ ರನ್ನು ನೋಡಿ ತುಂಬಾ ಸಂತಸವಾಯ್ತು. ಪ್ರಭು ಮೂರ್ತಿಯವರ ಹೊಸ ಅವಿಷ್ಕಾರ ಭರಿತ " ಮಾತಿನ ಮಲ್ಲರು" ಹೊಸ ಪಂಗಡ ವನ್ನುಹುಟ್ಟು ಹಾಕಿ ಸಮೂಹದಲ್ಲಿ ಮಾತನಾಡುವ,ವಾಗ್ಮಿಯನ್ನಾಗಿಸುವ ಆಸಕ್ತಿ ತೋರಿದರೆ, ಕಸಗುಡಿಸುವ ಮಾಲಿಗೂ ಕಂಪ್ಯೂಟರ್ ಕಲಿಸುವೆ ಎನ್ನುವ ಛಲ ಮತ್ತು ಆತ್ಮ ವಿಶ್ವಾಸ ಹೊತ್ತ ಸತ್ಯ ಚರಣರನ್ನೂ ಪರಿಚಯಿಸಿದ ಸಂಪದಕ್ಕೂ , ನಮ್ಮೆಲ್ಲರ ಕಣ್ಮಣಿ ಹರಿ ಪ್ರಸಾದ ನಾಡಿಗರಿಗೂ ಮತ್ತೊಮ್ಮೆ ಶರಣು.
ಬರೆದು ಪ್ರಕಟಿಸಲಾಗದೇ ಉಳಿದ ಸಾಲುಗಳು
ದಯವಿಟ್ಟು ಕ್ಷಮಿಸಿ
ನನ್ನ ವರದಿ ನಿಮಗೊಪ್ಪಿಸುವ ಭರದಲ್ಲಿ ಏನೋ ಅಚಾತುರ್ಯ ನಡೆದು ನನ್ನ ಕಂಪ್ಯೂಟರ್ ನೆಗೆದು ಬಿತ್ತು. ಅದು ರಿಪೇರಿಗೆ ಹೋಗಿ ಬರುವಾಗ ಅದಾಗಲೇ ನಾಲ್ಕೈದು ದಿನಗಳು ಗತಿಸಿಯಾಗಿದ್ದವು.
ಆತುರದಲ್ಲಿ ಎರಡು ತಪ್ಪುಗಳಾದವು ಮೊದಲಿನದ್ದು ತಲೆ ಬರಹ " ಸಾರ್ಥಕ್ಯ" ದ ಬದಲು "ಸಾರ್ಥೈಕ್ಯ" ಎಂದಾಗಿತ್ತು,
ಇನ್ನೊಂದು
ನಮಗೆಲ್ಲಾ ಪ್ರೀತಿಯಿಂದ ಕಾಫಿ ತಿಂಡಿ ಕೊಟ್ಟ ಅಮೃತಮತಿಯಾದ, ನಮ್ಮನಿಮ್ಮೆಲ್ಲರ ಕಣ್ಮಣಿ ಹರಿಪ್ರಸಾದ ನಾಡಿಗರ ಧರ್ಮ ಪತ್ನಿ ಸುಮಾ ನಾಡಿಗರವರಿಗೆ ಕ್ರತಜ್ಞತೆ ಅರ್ಪಿಸಲಾಗದಿದ್ದುದು.ನಾವೆಲ್ಲಾ ಸಮ್ಮಿಲನದ ಅಕ್ಕರೆಯ ಸವಿಯೂಟದಲ್ಲಿದ್ದರೆ ಇವರು ತಾವೇ( ನಾವು ಹೋಗ್ತೇವೆ ಅಂದರೂ ಕೇಳದೇ) ಹೋಗಿ ಅಷ್ಟೂ ಜನರಿಗೆ ಕಾಫಿ ತಿಂಡಿ ತಂದು ಸರಬರಾಜು ಮಾಡಿದ ಕೀರ್ತಿ ಇವರದ್ದು. ನಾಡಿಗರಿಗೆ ಸಂಪದಕ್ಕೆ ತಕ್ಕ ಮಾರ್ಗದರ್ಶಿ.
ಹೊಸತನ ಸಂಪದದಲ್ಲಿ ನಾವೇ ನೋಡುತ್ತಿದ್ದೇವಲ್ಲ ಹಲವಾರು ಬದಲಾವಣೆಗಳು ದಿನೇ ದಿನೇ ಸಂಪದದ ಆಂತರ್ಯವನ್ನು ಬಯಲು ಮಾಡುತ್ತಿವೆಯಲ್ಲ. ಸಂಪದ ಮೊದಲಿಗ್ಂತ ಸಧೃಢವಾಗಿ, ಸರ್ವಾಂಗಸುಂದರವಾಗಿ ಕನ್ನಡಿಗರೆಲ್ಲರ ಕಣ್ಮಣಿಯಾಗಿ ಸದಾಕಾಲ ಕಂಗೊಳಿಸಲಿ ಎಂಬುದೇ ಸಂಪದಿಗರೆಲ್ಲರ ಬಯಕೆ ಹಾರೈಕೆ.
ಪ್ರತಿಕ್ರಿಯೆ (15)