ಹೋಗ್ಬ್ಯಾಡ್ ಕಣೋ ಇಲ್ಲಿರೋ !!!

ಸದಾಶಿವರಾಯರು, ಪತ್ನಿ ಅಂಬುಜಮ್ಮ ಮತ್ತು ಮಗ ವಿನೋದ ಒಂದು ಸುಖೀ ಕುಟುಂಬ. ವಿನೋದ ಒಬ್ಬ no problem child ಆಗಿ ಬೆಳೆದು ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆ ಕೆಲಸದಲ್ಲೂ ಇದ್ದ.

ದಂಪತಿಯರು ಮಗನ ಮದುವೆ ಬಗ್ಗೆ ಯೋಚನೆ ಶುರು ಮಾಡಿದ್ದರು. ವಿನೋದ ಅದಕ್ಕೆ ತಾತ್ಕಾಲಿಕವಾಗಿ ತಡೆ ಒಡ್ಡಿದ್ದ. ತಾನು ಬೇರೊಂದು ಕಂಪನಿಗೆ ಸೇರುವ ಸಂಭವ ಇದೆಯೆಂದೂ, ಉನ್ನತ ಹುದ್ದೆ ಜೊತೆಗೆ ಮೊದಲಿಗೆ ವಿಪರೀತ ಓಡಾಟ ಇರುವುದರಿಂದ, ಒಂದು ವರ್ಷದ ಕಾಲ ಮುಂದೂಡಿದ್ದ.

ಅಂಬುಜಮ್ಮನವರು ಮಗನು ತಮ್ಮೆದುರಿಗೇ ಇದ್ದರೆ ಚೆನ್ನ ಎಂದು ಮನದಲ್ಲೇ ಹಲುಬುತ್ತಿದ್ದರೂ ಮಗನ ಆಸೆ ಆಕಾಂಕ್ಷೆಗಳಿಗೆ ಅಡ್ಡಿ ಬರುವ ಹಾಗೆ ಎಂದೂ ಮಾತನಾಡಿರಲಿಲ್ಲ. ರಾಯರೂ ಅಷ್ಟೇ, ಉನ್ನತಿಯ ಹಾದಿಗೆ ವ್ಯಾಮೋಹವನ್ನು ಕಂದಕವಾಗಿ ಇರಿಸಿರಲಿಲ್ಲ. ಎಲ್ಲೇ ಇದ್ದರೂ ಕ್ಷೇಮವಾಗಿ, ನಾಲ್ಕು ಜನರಿಗೆ ಸಹಾಯಕವಾಗಿ ಇದ್ದುಗೊಂಡಿದ್ದರೆ ಸಾಕು ಎಂದುಕೊಂಡಿದ್ದರು. ಕನಿಷ್ಟ ಸಲೀಸಾಗಿ ಹೋಗಿ ಬರುವಷ್ಟು ದೂರದಲ್ಲಿ ಇದ್ದರೆ ಸಾಕು ಎಂದು ಮನದಲ್ಲೇ ಒಂದು ಒಡಂಬಡಿಕೆ ಮಾಡಿಕೊಂಡಿದ್ದರು ! ಆದರೆ ...

ತಾನೊಂದು ಬಗೆದರೆ ದೈವ ಮತ್ತೊಂದು ಬಗೆವುದಂತೆ ...

ರಾತ್ರಿಯ ಊಟಕ್ಕೆ ತಟ್ಟೆಯ ಮುಂದೆ ಕುಳಿತು ತಟ್ಟೆಯಲ್ಲೇ ಕೈ ಓಡಾಡುತ್ತಿದ್ದರೂ ಕೈ ಮಾತ್ರ ಅನ್ನವನ್ನು ಬಾಯಿಗೆ ತೆಗೆದುಕೊಂಡು ಹೋಗುವುದಕ್ಕೆ ಮುಷ್ಕರ ಹೂಡಿತ್ತು ...

ಮಗ ವಿದೇಶಕ್ಕೆ ಹೊರಡಲಿದ್ದಾನೆ !!! ತಮ್ಮಿಬ್ಬರನ್ನು ಇಲ್ಲಿ ಬಿಟ್ಟು ದೂರ ಹೋಗಲಿದ್ದಾನೆ ...

ರಾಯರ ಮನದಲ್ಲಿ ಹತ್ತು ಹಲವು ಆಲೋಚನೆಗಳು ಹೊಯ್ದಾಡುತ್ತಿತ್ತು ....

ರೆಕ್ಕೆ ಬಲಿತ ಮೇಲೆ ಹಕ್ಕಿ ದೂರ ಹಾರುವುದು ಪ್ರಕೃತಿ ನಿಯಮ ಅಲ್ಲವೇ? ಕೆಲಸಕ್ಕೆಂದೇ ಅಲ್ಲವೇ ತಾವೂ ಮನೆಯಿಂದ ಹೊರಗೆ ಬಂದಿದ್ದು? ಹುಡುಗು ವಯಸ್ಸಿನಲ್ಲಿ ತಾವು ತೆಗೆದುಕೊಂಡ ನಿರ್ಧಾರದಿಂದ ಹೆತ್ತವರ ಮನಸ್ಸಿನಲ್ಲಿ ಎಂತಹ ಕೋಲಾಹಲ ಎದ್ದಿತ್ತು ಎಂಬುದು ಈಗ ಅರಿವಾಗುತ್ತಿದೆ. ಇರಲಿ, ತಾವು ಅಂದು ತೆಗೆದುಕೊಂಡ ನಿರ್ಧಾರದಿಂದ ಎಲ್ಲವೂ ಒಳ್ಳೆಯದೇ ಆಗಿತ್ತಲ್ಲ?

"ಎಲ್ಲವೂ ಒಳ್ಳಯದೇ ಆಗಿತ್ತಲ್ಲ" ಎಂಬ ಮಾತು ಮನದಲ್ಲಿ ಮೂಡಿದಾಗ ಮುಖದ ಮೇಲೆ ಅರಿವಿಲ್ಲದೇ ವಿಷಾದ ಒಣನಗೆ ಮೂಡಿತ್ತು .... ಎಲ್ಲವೂ ಅಂದರೆ ಎಲ್ಲವೂ ಅಲ್ಲ .... ಇಂದಿನ ಈ ಸ್ಥಿತಿಗೆ ಬರಲು ಸಾಕಷ್ಟು ಬವಣೆ ಅನುಭವಿಸಿರುವುದು ಸುಳ್ಳಲ್ಲ...

ಇರಲಿ, ಈಗ ಮಗ ವಿದೇಶಕ್ಕೆ ಹೊರಡುತ್ತಿದ್ದಾನೆ ... ಎಲ್ಲಿಗೆ? ಏನು? ತನಗೆ ಪರಿಚಯವಿರುವ ಜನ ಅಲ್ಲಿದ್ದಾರೆಯೇ? ಇಲ್ಲವೇ? ಒಂದೇ, ಎರಡೆ ನೂರಾರು ಪ್ರಶ್ನೆಗಳು ಉದ್ಭವಿಸಿತ್ತು ...

ವಿನೋದ ತಾನು ಪರದೇಶಕ್ಕೆ ಹೋಗುವ ವಿಚಾರ ತಿಳಿಸುತ್ತಿದ್ದಂತೆಯೇ ಯಾವುದೋ ಕರೆ ಬಂತು. "ಈಗ ಬಂದೆ" ಎಂದು ನುಡಿದ ಹೋದವ ಅರ್ಧ ಘಂಟೆಯಾದರೂ ಬರಲಿಲ್ಲ. ಮಧ್ಯೆ ಕರೆಯಲು ಹೋದಾಗ "ನೀವು ಊಟ ಶುರು ಮಾಡಿ, ಹತ್ತು ನಿಮಿಷದಲ್ಲಿ ಬರ್ತೀನಿ" ಎಂದಿದ್ದ.

ನೆಮ್ಮದಿ ಇದ್ದರಲ್ಲವೇ ಊಟ ಸೇರುವುದು?

ಅಂಬುಜಮ್ಮನವರ ಮನಸ್ಸಿನಲ್ಲಿ ಕೋಲಾಹಲವೇ ಎದ್ದಿತ್ತು ... ನೆಮ್ಮದಿಯಾಗಿ ಮಗನ ಸಂಸಾರವನ್ನು ನೋಡಿಕೊಂಡು ಇರೋಣವೆಂದರೆ ಹೊಸತೊಂದು ಸಮಸ್ಯೆ ಉದ್ಭವವಾಯಿತಲ್ಲ? ಮೊದಲಿಗೆ ಅವರ ಮನದಲ್ಲಿ ಇಂತಹ ಪರಿಸ್ಥಿತಿ ಎದುರಾಗಬಹುದೆಂಬ ವಿಚಾರವೇ ಹೊಳೆದಿರಲಿಲ್ಲ ...

ಯಾವ ದೇಶವೋ? ಏನು ಸಂಸ್ಕೃತಿಯೋ?  ಯಾವ ಭಾಷೆಯೋ? ಒಂದೂ ಗೊತ್ತಿಲ್ಲ ....

ಹೊರಗೆ ಕೆಲಸಕ್ಕೆ ಹೋಗದೆ ಸದ್ಗೃಹಿಣಿಯೇ ಆಗಿದ್ದರೂ, ಸಾಮಾಜಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರಿಂದ ಅವರ ಸ್ನೇಹಿತರ ವಲಯದಲ್ಲಿ ಹಲವು ರೀತಿಯ ಜನರು ಇದ್ದರು .. ಅವರ ಮಕ್ಕಳೊಂದಿಗೆ ವಿನೋದನ ಒಡನಾಟ ಇದ್ದುದರಿಂದ, ಅರಿಯದ ಸಂಸ್ಕೃತಿ ಎಂಬ ವಿಚಾರ ಸಮಸ್ಯೆಯಾಗಿ ಕಾಡಲಿಲ್ಲ ಅವರಿಗೆ ... ಆದರೂ ....

ಇಂದಿನ ತಂತ್ರಜ್ಞ್ನಾನ ಯುಗದಲ್ಲಿ ಎಲ್ಲವೂ ಅಂಗೈಯಲ್ಲೆ ಇರುವಂತೆ ಇದ್ದರೂ, ತಾಂತ್ರಿಕತೆಯು ಎರಡು ದೇಶಗಳು ನಡುವೆ ಹೋಗಿ-ಬರುವ ದೂರವನ್ನು ಕಡಿಮೆಗೊಳಿಸಲು ಸಾಧ್ಯವೇ?

ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ವಿಮಾನ ಹತ್ತಲೇ ಬೇಕು ... ಅಲ್ಲವೇ? ವಿಡಿಯೋ ಮೂಲಕ ಮಾತು ಕತೆ ಇದ್ದರೂ, ಕೂತಲ್ಲಿ ನಿಂತಲ್ಲಿ status update ಕೊಡುತ್ತಿದ್ದರೂ ...

ಮಗನ ಮೈದಡವಿ ತಲೆನೇವರಿಸಲು ಸಾಧ್ಯವೇ? ಜ್ವರ ಬಂದಾಗ ಹಣೆ ಮೇಲೆ ಒದ್ದೆ ಬಟ್ಟೆ ಹರವಲು ಸಾಧ್ಯವೇ? ತಮಗೆ ದು:ಖವಾದಾಗ ಅವನ ಭುಜದ ಮೇಲೆ ತಲೆ ಇಟ್ಟು ಸಾಂತ್ವನ ಪಡೆಯಲು ಸಾಧ್ಯವೇ? ಏನಿಲ್ಲವಾದರೂ ಕೊನೇ ಘಳಿಗೆಯಲ್ಲಿ ಬಾಯಿಗೆ ಒಂದು ಹನಿ ನೀರು ಹಾಕಲು ಇದ್ದಕ್ಕಿದ್ದಂತೆ ಹೊರಟು ಬರಲು ಸಾಧ್ಯವೇ?

ಹೋಗ್ಬ್ಯಾಡ್ ಕಣೋ ಇಲ್ಲಿರೋ ಎಂದು ಚೀರಿತ್ತು ಆ ಮನ ....

ತಾನು ತೀರ ಆಳವಾಗಿ ಯೋಚಿಸುತ್ತಿದ್ದೇನೆ ಎಂದು ಅರಿವಾಗಿ ಆ ತಾಯಿ, ತಮ್ಮ ವ್ಯಾಮೋಹದಿಂದ ಅವನ ಹಾದಿಗೆ ಮುಳ್ಳಾಗದಿರಲು ತಮ್ಮೆಲ್ಲ ಭಾವನೆಗಳನ್ನು ಮನದಲ್ಲೇ ಹುಗಿದಿಟ್ಟು ಅವನ ಮಾತುಗಳಿಗೆ ಕಾದು ಕುಳಿತರು.

ನುಡಿದಂತೆ ಹತ್ತು ನಿಮಿಷಗಳಲ್ಲಿ ಉತ್ಸಾಹದಿಂದ ಡೈನಿಂಗ್ ಟೇಬಲ್’ಗೆ ಬಂದು ಊಟಕ್ಕೆ ಸೇರಿಕೊಂಡ.

"ಅಪ್ಪಾ, ಈಚೆಗೆ ನಾನು ಮಾಡಿದ ಪ್ರಾಜಕ್ಟ್’ಗೆ ರಾಷ್ಟ್ರ ಮಟ್ಟದ ಮನ್ನಣೆ ದೊರಕಿತ್ತಲ್ಲಾ, ಅದರಿಂದ ಉತ್ಸಾಹಗೊಂಡು, ನಮ್ಮ ಕಂಪನಿಯವರೇ ಮತ್ತೊಂದು ದೇಶದಲ್ಲಿ ಹೊಸ ಯೋಜನೆ ಕಾರ್ಯಗತಗೊಳಿಸಲು, ನನ್ನನ್ನು  ಯೂನಿಟ್ ಹೆಡ್’ಆಗಿ ನೇಮಕ ಮಾಡಿದ್ದಾರೆ. ಹಾಗಾಗಿ ನಾನು ದೇಶ ಬಿಟ್ಟು ಅಲ್ಲಿಗೆ ಹೋಗಬೇಕಿದೆ" ಎಂದ

ಇಂತಹ ಮನ್ನಣೆಯೊಂದು ಹೆಮ್ಮೆಪಡುವ ವಿಚಾರವಾದರೂ, ಸಂತೋಷವಾದರೂ, ಅವರಿಗೆ ಜೀರ್ಣಿಸಿಕೊಳ್ಳಲಾಗದ ವಿಚಾರ ಎಂದರೆ ಪರದೇಶಕ್ಕೆ ಹೊರಟಿರುವುದು. ಇಷ್ಟು ದೊಡ್ಡ ದೇಶದಲ್ಲಿ ಹೊಸ ಯೋಜನೆ ಮಾಡಲು ಇವನಿಗೆ ಸ್ಥಳವಿಲ್ಲದಾಯಿತೇ?

ವಿನೋದ ಮರುನುಡಿದ "ನಾನು ಅಂದುಕೊಂಡಿರುವ ಪ್ರಕಾರ, ಹೆಚ್ಚೆಂದರೆ ಒಂದು ವರ್ಷ ಅಲ್ಲಿರುತ್ತೇನೆ. ಆಮೇಲೆ ವಾಪಸ್ ಬಂದುಬಿಡುತ್ತೇನೆ"

ರಾಯರಿಗೆ ನಗು ಬಂತು .... "ಎಲ್ಲೋ ಕೇಳಿದಂತಿದೆ" ಎಂದು

"ಅಮ್ಮ, ಅದೂ ಅಲ್ಲದೇ, ಅಪ್ಪ ಕೂಡ ಇನ್ನೊಂದು ವರ್ಷದಲ್ಲಿ ರಿಟೈರ್ಮೆಂಟ್ ತೆಗೆದುಕೊಂಡು ವಿಶ್ರಾಂತಿ ಪಡೆಯಲಿ. ನಾನು ಇನ್ನೂ ಅಲ್ಲೇ ಇದ್ದಲ್ಲಿ, ಆರು ತಿಂಗಳು ಇಲ್ಲಿರಿ, ಮತ್ತಾರು ತಿಂಗಳು ಅಲ್ಲಿರಿ. ಏನಂತೀರಾ?"

ಅಂಬುಜಮ್ಮನವರಿಗೆ ಸಾಕಾಯ್ತು "ಅಲ್ವೋ ವಿನೋದ. ಮೊದಲಿಗೆ ಯಾವ ಊರೋ, ಯಾವ ಭಾಷೆಯೋ ಗೊತ್ತಿಲ್ಲ. ಅಲ್ಲಿಗೆ ಬಂದು ಆರು ತಿಂಗಳಿದ್ದು ಮಾಡೋದೇನಿದೆ?"

ನಸುನಗುತ್ತ ನುಡಿದ ವಿನೋದ "ಅಲ್ಲಿ ನಿನಗೆ ಜನರಿಗೆ ಏನಮ್ಮ ಕೊರತೆ? ಎದುರು ಮನೆ ಇಂದ್ರಮ್ಮ, ಪಕ್ಕದ ಮನೆ ಪಂಕಜಮ್ಮ, ಬಂಧು ಬಳಗ, ಎಲ್ಲ ಅಲ್ಲೇ ತಾನೇ ಇರೋದು? ಎಲ್ಲಕ್ಕಿಂತ ಹೆಚ್ಚಾಗಿ ನನ್ನಿಬ್ಬರು ಅಜ್ಜಿಯರು ಇರೋದೂ ಅಲ್ಲೇ ತಾನೆ?"

ದಂಪತಿಯರು ತಬ್ಬಿಬ್ಬಾಗಿ ಹೆಚ್ಚು ಕಮ್ಮಿ ಒಟ್ಟಿಗೆ ನುಡಿದರು "ಏನೋ ಹಾಗಂದ್ರೆ?"

ವಿನೋದ ನುಡಿದ "ಅಮ್ಮ, ನಿಮ್ಮನ್ನು ಸ್ವಲ್ಪ ಆಟ ಆಡಿಸಿ ವಿಷಯ ಹೇಳೋಣ ಅಂತಿದ್ದೆ. ಸಾರಿ ... ಹೌದಪ್ಪ ... ನಾನು ವಿದೇಶಕ್ಕೆ ಅಂದರೆ ಭಾರತಕ್ಕೆ ಹೊರಟಿರೋದು ... ನಿಮ್ಮಿಬ್ಬರಿಗೂ ವಯಸ್ಸಾಯಿತು. ಅಲ್ಲಿಗೇ ವಾಪಸ್ಸು ಹೋಗಿಬಿಡಬೇಕೆಂದಿದೆ ಅಂತ ನನಗೆ ಗೊತ್ತು. ಚಿಕ್ಕಂದಿನಲ್ಲೇ ನನ್ನನ್ನು ಇಲ್ಲಿಗೆ ಕರೆತಂದು, ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಿ ಒಂದು ಉನ್ನತ ಮಟ್ಟಕ್ಕೆ ತಂದಿರೋ ನಿಮಗೆ, ನಾನು ಇಷ್ಟೂ ಮಾಡದೆ ಇದ್ದರೆ ಹೇಗೆ?"

ರಾಯರಿಗೆ ಮತ್ತು ಅಂಬುಜಮ್ಮನವರಿಗೆ ಏನು ಹೇಳಲೂ ತೋರಲಿಲ್ಲ ...

ಇಪ್ಪತ್ತೈದು ವರ್ಷಗಳ ಹಿಂದೆ ಭಾರತ ಬಿಟ್ಟು ಅಮೇರಿಕಕ್ಕೆ ಬಂದು ನೆಲೆಸಿದ ದಂಪತಿಗಳಿಗೆ, ಕಳೆದ ಒಂದು ವರ್ಷದಿಂದ ಹುಟ್ಟಿದ ನಾಡಿಗೆ ಹಿಂದಿರುಗಬೇಕೆಂಬ ಹಂಬಲ ಹೆಚ್ಚಾಗಿತ್ತು.

ಮೊದಲಿಗೆ, ಮಗನ ಮದುವೆ ಮಾಡಿ ಹೊರಡಬೇಕೆಂದಿದ್ದರು. ಮೊಮ್ಮಗುವನ್ನು ಬಿಟ್ಟು ತಾವು ಅಲ್ಲಿ ಹೋಗಿ ಮಾಡುವುದೇನಿದೆ? ಹೀಗೆ ನೂರೆಂಟು ಆಲೋಚನೆಗಳು ಅವರನ್ನು ಒಂದು ನಿರ್ಧಾರಕ್ಕೆ ಬರಲು ಎಡೆಗೊಡಲಿಲ್ಲ. ಎಲ್ಲ ಸಮಸ್ಯೆಗಳಿಗೂ ಒಮ್ಮೆಲೆ ಪರಿಹಾರ ಕೊಟ್ಟ ಮಗನನ್ನು ಅಪ್ಪಿ ಕಣ್ಣೀರು ಹರಿಸಿದರು.