ಹಂಸಾನಂದಿಯವರು ಪುಳಿಯೋಗರೆಯನ್ನು ಬಹುತೇಕ ಕನ್ನಡಿಗರು ಚೆನ್ನಾಗಿ ಮಾಡುವುದಿಲ್ಲವೆಂಬ ಭಾವನೆ ಬರುವಹಾಗೆ ಅಲವತ್ತುಕೊಂಡಿದ್ದನ್ನು( ! ) ಓದಿದ ಮೇಲೆ ಇದನ್ನು ಬರೆಯಲೇ ಬೇಕೆನಿಸಿತು.
ಕರ್ನಾಟದಲ್ಲೇ ಹುಟ್ಟಿ, ಮಾತೃ ಭಾಷೆ ತಮಿಳಾದರೂ, ಕನ್ನಡದಲ್ಲೇ ಅ ಆ ಇ ಈ .. ಅಕ್ಷರಾಭ್ಯಾಸ ಪ್ರಾರಂಭಿಸಿ ೭ನೆಯ ಇಯತ್ತೆಯವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದ ನನ್ನನ್ನು ನೀವು ಕನ್ನಡಿಗ ಎನ್ನುತ್ತೀರೋ, ತಮಿಳು-ನಿರಕ್ಷರಕುಕ್ಷಿ ಎನ್ನುತ್ತೀರೋ ನಿಮಗೆ ಬಿಟ್ಟದ್ದು. ಆದರೆ ಈ ಪುಳಿಯೋಗರೆಯ ವಿಷಯಕ್ಕೆ ಬಂದರೆ, ಹುಟ್ಟಿನಿಂದ ನಾನು ಈ ಪುಳಿಯೋಗರೆ-ತಯಾರಿಕಾ-ವಿಧಾನದ ಪೇಟೆಂಟ್ ಪಡೆದಿರುವ (ವಿವಾದಾಸ್ಪದವಾದ ಘೋಷಣೆ!) ಐಯಂಗಾರ್ ಜಾತಿಯಲ್ಲಿ ಹುಟ್ಟಿ, ಆ ಕಾರಣದಿಂದಲೇ ಈ ವಿಷಯದ ಬಗ್ಗೆ ಅಧಿಕೃತವಾಗಿ ಮಾತನಾಡುವ ಹಕ್ಕನ್ನು ನನಗೆ ನಾನೇ ಕೊಟ್ಟುಕೊಂಡಿರುವುದರಿಂದ ನಾನು ಈ ಬಗ್ಗೆ ಇದುವರೆಗೂ ಯಾವ ಐಯಂಗಾರಿಯೂ ಹೇಳದ ಗುಟ್ಟೊಂದನ್ನು ಸಂಪದಿಗರಲ್ಲಿ ಹಂಚಿಕೊಳ್ಳುತ್ತೇನೆ ಕೇಳಿ! (ಜಾತಿಯ ಉಲ್ಲೇಖ ಈ ವಿಷಯದ ಬಗೆಗೆ ಬರೆಯುವುದಕ್ಕಷ್ಟೇ! ಮಿಕ್ಕಂತೆ ನಾನು ಸ್ವಂತ ಆಚರಣೆಯಲ್ಲಿ ಸಹ ಜಾತಿಯನ್ನು ವಿರೋಧಿಸುವವನು - ಇಷ್ಟೆಲ್ಲಾ ವಿವರಣೆ ಏಕೆಂದರೆ ಪುರೋಹಿತಶಾಹಿ ಎಂದೆಲ್ಲಾ ಯಾರೂ ಕ್ಯಾತೆ ತೆಗೆಯಬಾರದು ನೋಡಿ!)
ಪುಳಿಯೋಗರೆಗೆ ಬೇಕಾದ ಪದಾರ್ಥಗಳಲ್ಲಿ ಮುಖ್ಯವಾದದ್ದು ೪ - ೧) ಅಕ್ಕಿ, ೨) ಹುಣಿಸೇರಸದ ಗೊಜ್ಜು, ೩) ಗೊಜ್ಜಿಗೆ ಮತ್ತು ಗೊಜ್ಜನ್ನು ಅನ್ನಕ್ಕೆ ಕಲಸುವಾಗ ಉಪಯೋಗಿಸುವ ಸಾರಿನ (ಸಾಂಬಾರ್) ಪುಡಿ ಮತ್ತು ೪) ಉಪಯೋಗಿಸುವ ಎಣ್ಣೆ
೧) ಅಕ್ಕಿ ಬಾಸ್ಮತಿ ಅಥವಾ ಇನ್ನಾವುದೇ ಸುವಾಸನೆಯುಳ್ಳದಾಗಿರಕೂಡದು!
೨) ಹುಣಿಸೇರಸದ ಗೊಜ್ಜು - ಇದನ್ನು ಯಾರೇ ಮಾಡಿದರೂ ಒಂದೇ ರುಚಿ.
೩) ಆದರೆ ಈ ಗೊಜ್ಜಿಗೆ ಮತ್ತು ಗೊಜ್ಜನ್ನು ಅನ್ನಕ್ಕೆ ಕಲೆಸುವಾಗ ಉಪಯೋಗಿಸುವ ಸಾರಿನ ಪುಡಿಯಲ್ಲಿ ಈ ಪದಾರ್ಥಗಳು ಇರಲೇಕೂಡದು - ಗಸಗಸೆ, ಚಕ್ಕೆ(ದಾಲ್ಚಿನ್ನಿ), ಲವಂಗ, ಏಲಕ್ಕಿ, ಚಕ್ರ ಮೊಗ್ಗು, ಮರಾಠ ಮೊಗ್ಗು (ಇವೆಲ್ಲಾ ತಿಂದು ಜೀರ್ಣವಾಗುವವರೆಗೂ ವಾಸನೆಯನ್ನು ಸೂಸುವಂತಹ ಶಕ್ತಿಯುತ ಸಾಂಬಾರಗಳು!) ಅಂಗಡಿಯಲ್ಲಿ ಸಿಗುವ ಅಶೋಕ , ಬಾದ್ ಷಾ ಅಥವಾಬೇರೆ ಯಾವುದೇ ಸಾರಿನ ಪುಡಿಗಳಲ್ಲಿ ಅಥವಾ ನೀವು ನಿಮ್ಮ ಮನೆಯಲಿಯೇ ತಯಾರಿಸುವ ಸಾರಿನ ಪುಡಿಯಲ್ಲಿ ಈ ಮೇಲಿನ ಯಾವುದಾದರೂ ಒಂದು ಇದ್ದರೂ (ಇರುವುದು ಸಾಮಾನ್ಯ) ನಿಮಗೆ ಆ ’ಒರಿಜಿನಲ್’ರುಚಿ ಬರುವುದಿಲ್ಲ.
೪) ರಿಫೈನ್ಡ್ ಅಲ್ಲದ ಕಡಲೇಕಾಯಿ ಎಣ್ಣೆ ಅಥವಾ ಎಳ್ಳೆಣ್ಣೆ. ಆರೋಗ್ಯದ ದೃಷ್ಟಿಯಿಂದ ಉಪಯೋಗಿಸುವ ಸೂರ್ಯಕಾಂತಿಯದೋ ಅಥವಾ ರಿಫೈನ್ ಮಾಡಿದ ಕಡಲೇಕಾಯಿ ಎಣ್ಣೆಯೂ ಕೂಡ ನಿಮಗೆ ಆ ’ಒರಿಗಿನಲ್’ ರುಚಿ ಕೊಡುವುದಿಲ್ಲ!
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ವಿಧಾನದಲ್ಲಿ ಪ್ರಪಂಚದ ಯಾವುದೇ ದೇಶ-ಜಾತಿಯ ಮನುಷ್ಯಪ್ರಾಣಿ ಪುಳಿಯೋಗರೆಯನ್ನು ತಯಾರಿಸಿದರೂ ಕೂಡ ಅದಕ್ಕೆ ’ಒರಿಜಿನಲ್’ ಬಂದಿರುತ್ತೆ. ಬೇಕಾದರೆ ಮಾಡಿ ನೋಡಿ, ಆಮೇಲೆ ಹೇಳಿ!
ಕೇಶವ ಮೈಸೂರು
-
ಪ್ರತಿಕ್ರಿಯೆ (4)