ಶುದ್ದ ಸೋಮವಾರ ಬೆಳಿಗ್ಗೆ ಆಫೀಸಿಗೆ ಕಾಲಿಟ್ಟಾಗ "ಹೇಯ್, ಹೇಗಿತ್ತು ವೀಕ್ ಎಂಡ್’ಉ" ಅಂತ ಕೇಳಿದರಾರೋ. ನಾನೆಂದೆ "ವಿಶ್ವ ಪರ್ಯಟನೆ’ಗೆ ಹೋಗಿದ್ದೆ. ಮಜವಾಗಿತ್ತು" ಅಂತ. ನನ್ನೆಡೆ ವಿಚಿತ್ರವಾಗಿ ನೋಡಿ  "wish you speedy recovery man ... Take care" ಎಂದು ಹೊರಟುಹೋದರು. ಏನ್ ಸಕತ್ತಾಗಿ ಇಂಗ್ಲೀಷ್ ಮಾತಾಡ್ತಾರ್ರೀ ನಮ್ ಕನ್ನಡಿಗರು ....

ಜನ ನಾನು ಏನು ಹೇಳಿದರೂ ನಂಬೋಲ್ಲ! ಅದರಲ್ಲೂ ಸತ್ಯ ಹೇಳಿದರಂತೂ ನಂಬೋದೇ ಇಲ್ಲ. ಏನು ಮಾಡಲಿ ನಾನು ಹಾಕೋ ಡ್ರಸ್ ಹಾಗಿರುತ್ತೆ. ನಾನೂ ಬಿಳೀ ಪಂಚೆಯೋ, ಪ್ಯಾಂಟೋ ಅಥವಾ ಪೈಜಾಮ ಧರಿಸಿ ಬಿಳೀ ಶರಾಯಿ ತೊಟ್ಟರೆ, ಬ್ಯಾಡ ಅಂದ್ರೂ ನಂಬ್ತಾರೆ.

ಹೋಗ್ಲಿ ಬಿಡಿ, ಮೂರು ವರ್ಷಗಳಿಂದ ... ಹೌದ್ರೀ, ನಾನು ಸಂಪದಕ್ಕೆ ಕಾಲಿಟ್ಟು ಇವತ್ತಿಗೆ ಮೂರು ವರ್ಷವಾಯ್ತು ...  ವಿಷಯಕ್ಕೆ ಬರೋಣ, ಮೂರು ವರ್ಷಗಳಿಂದ ನನ್ನನ್ನು ಪೋಷಿಸಿರುವ ನೀವು ಇನ್ನೊಂದು ಸಾರಿ ನನ್ನನ್ನು ನಂಬಿ..

ನಮ್ಮ ಶ್ರೀಧರ್ ಭಂಡ್ರಿ ಅವರು ನನ್ನ ಕೊಳಗೇರಿ ಹಾಡಿಗೆ ಪ್ರತಿಕ್ರಿಯೆ ಬರೆದಾಗ ಹೇಳಿದ್ದರು "ಕೊಲವೇರಿ ಹಾಡು ಬರೀ ಭಾರತದಲ್ಲಿ ಇರುವವರನ್ನು ಮಾತ್ರ ಕಲರವಗೊಳಿಸಿದೆ ಅಂದುಕೊಂಡಿದ್ದೆ..." ಅಂತ. ಆಗ  "ಯಾಕೆ ಒಂದು ರೌಂಡ್ ವಿಶ್ವ ಪರ್ಯಟನೆ ಮಾಡಿ, ಯಾರು ಯಾರಿಗೆ ಕೊಲವೇರಿಯ ಕಲರವ ತಲೆಗೇರಿದೆ" ಎಂದು ಯೋಚನೆ ಬಂದು, ನೋಡ್ಕೊಂಡ್ ಬರುವಾ ಅಂತ ಹೊರಟೆ ಕಣ್ರೀ ....

ಪಾರ್ಕ್ ಅಲ್ಲದ ’ಸಿಲ್ವರ್ ಜ್ಯೂಬಿಲಿ ಪಾರ್ಕ್’ಗೆ ಹೋದೆ ... ಒಂದು ಸಿಮೆಂಟ್ ಬೆಂಚಿನ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡೆ ... ’ಕುಳಿತಿದ್ದ’ ಅನ್ನೋದೇ ಒಂದು ಆಶ್ಚರ್ಯ ನೋಡಿ ... ಸಾಮಾನ್ಯವಾಗಿ ಅಲ್ಲಿರೋ ಬೆಂಚಿನ ಮೇಲೆ ಮಲಗಿರೋವ್ರೇ ಜಾಸ್ತಿ ...

"ಏನಪ್ಪ, ಇಲ್ಲಿ ಕುಳಿತಿದ್ದೀಯಾ?" ಅಂದೆ ... "ಈಗ್ತಾನೆ ಎದ್ದೆ" ಅಂದ ... "ಯಾಕೋ ಬ್ಯಾಸರ ಮಾಡಿಕೊಂಡ ಹಾಗಿದೆ" ಅಂದೆ ಅದಕ್ಕವನು

ಒಂಟಿ life-ಉ ಗರ್ಲ್-ಉ come-ಉ
life-ಉ ಫುಲ್ಲ್-ಉ ಟಿಯರ್-ಉ
ಗರ್ಲ್-ಉ ಜೋಡಿ ಅತ್ತೆ come-ಉ
life-ಉ ಫುಲ್ಲ್-ಉ ಫಿಯರ್-ಉ

ಅನ್ನೋದೇ? ನೀವೇ ನೋಡಿದ್ರಲ್ಲ ಈಗ, ಕೊಲವೇರಿ ಹಾಡು ಯಾವ ರೀತಿ ಪ್ರಭಾವ ಬೀರಿದೆ ಅಂತ ... ತಮ್ಮ ಭಾವನೆ ಹೇಳಿಕೊಳ್ಳಲೂ ಕೊಲವೇರಿ ಹಾಡೇ ಆಗಬೇಕು... "ಏನು ಮಾಡೊಕ್ಕಾಗುತ್ತೆ, ಅಡ್ಜಸ್ಟ್ ಮಾಡ್ಕೋ" ಅಂತ ಅಂದು ಎದ್ದೆ ... "ಏನ್ಸಾರ್, ನನ್ನ ಬಿಜಿ ಟೈಮ್’ನಲ್ಲೂ ನಿಮಗೆ ಇಂಟರ್ವ್ಯೂ ಕೊಟ್ಟಿದ್ದಕ್ಕೆ, ಕುಡಿಯಕ್ಕೆ ಕಾಸಿಲ್ವಾ?" ಅಂದ. ಕಾಫಿಗೆ ಕಾಸು ಕೇಳಿ ಮತ್ತೇನೋ ಕುಡಿಯೋವ್ರಿಗಿಂತ, ಇವನು ವಾಸಿ ಎಂದುಕೊಂಡು ಏನೋ ಸ್ವಲ್ಪ ಭಿಕ್ಷೆ ಕೊಟ್ಟು ಮುನ್ನೆಡೆದೆ.

ಅಷ್ಟರಲ್ಲಿ ಒಂದು ಕರೆ ಬಂತು. ನಾನು "ಹಲೋ" ಎಂದ ಮರುಕ್ಷಣದಲ್ಲೇ, ಲಂಡನ್’ನ ಒಂದು ಆಸ್ಪತ್ರೆಯಲ್ಲಿದ್ದೆ. ಬೆಡ್ ಮೇಲೆ ಮಲಗಿದ್ದೋರು ನುಡಿದರು (ಹಾಡಿದರು)

ಜೈಲ್-ಉ life-ಉ ಕ್ಯಾನ್ಸರ್ come-ಉ
ಟ್ರೀಟ್ಮೆಂಟ್ ಇನ್-ಉ ಲಂಡನ್-ಉ
ಜೈಲ್-ಉ life-ಉ ಆಗಲು ಬೋರ್-ಉ
ನನ್ನ ಸನ್ನು come-ಉ
ಸನ್ನು ಸನ್ನು ಓ ಮೈ ಸನ್ನು
ವಿಸಿಟ್ ಮಾಡು ನೀ ಲಂಡನ್-ಉ
ದಿಸ್ ಸಾಂಗ್-ಉ ಫಾರ್ ಕಟ್ಟಾಸ್-ಉ
ಯೂ ಡೊಂಟ್ ಹ್ಯಾವ್ ಚಾಯ್ಸ್-ಉ

ನಾನು ಕಣ್ಣು-ಬಾಯಿ ಮುಚ್ಚಿಕೊಂಡು, ಕಟ್ಟ ಅವರು ಹೇಳಿದ್ದನ್ನ ಬರೆದುಕೊಂಡು, ಕಣ್ಣು ಬಿಟ್ಟೆ....

ಸ್ವರ್ಗದಲ್ಲಿದ್ದೆ .... ನನ್ನೆದುರಿಗೆ ಬರುತ್ತಿದ್ದ ವ್ಯಕ್ತಿಯನ್ನು ಕಂಡು ಭಯಂಕರ ಕಸಿವಿಸಿ ಆಯ್ತು, ಭಯವೂ ಅಯ್ತು .. ಜೊತೆಗೆ "ಹೋದೋರೆಲ್ಲ ಒಳ್ಳೆಯವರು .." ಅನ್ನೋ ಹಾಡು ನೆನಪಾಯ್ತು .. ಧೈರ್ಯ ತಂದುಕೊಂಡೆ ... "ನೀವು? .. ಇಲ್ಲಿ? .." ಎಂದು ಆಶ್ಚರ್ಯದಿಂದ ಹೇಳಲೂ ಆಗೋಲ್ಲ ... ಅಂಥಾ ಪರಿಸ್ಥಿತಿ ...

ಕಿಂಗ್-ಉ life-ಉ ಬುಶ್-ಉ come-ಉ
ನಮ್ಮೂರಲ್ ನನ್ನ ಹ್ಯಾಂಗ್-ಉ

ಸದ್ದಾಮನಿಗೆ ನಾನು ಅಮೇರಿಕದ ಪ್ರಜೆ ಅಂತ ಏನಾದ್ರೂ ಗೊತ್ತಾದರೆ ಏನು ಮಾಡಲಿ ... ಹೇಗೆ ತಪ್ಪಿಸಿಕೊಳ್ಳಲಿ ಎಂದು ಯೋಚನೆ ಮಾಡುತ್ತಿದ್ದಾಗ ನಮ್ ’ರಾವಣ’ ಕಾಣಬೇಕೆ?

ಮಾತಾಡೋಕ್ಕೆ ಮುನ್ನವೇ, ಆಕ್ರೋಶದಿಂದ ನುಡಿದ:

ಸೆಕ್ಯೂರ್ಡ್ life-ಉ ಹನುಮ come-ಉ
ಲಂಕೆ ತುಂಬ ಫೈರ್-ಉ

ಅತ್ತದರಿ ಇತ್ತ ಪುಲಿ ಎಂದಾಯ್ತಲ್ಲ ನನ್ನ ಕಥೆ?

ಸದ್ಯ ವಾಲ್ಮೀಕಿ ಮಹಾಮುನಿ ಕಣ್ಣಿಗೆ ಬಿದ್ದೊಡನೆ ಇವರಿಬ್ಬರೂ ಅಗೋಚರರಾದರು ... ವಾಲ್ಮೀಕಿ ಮಹಾಮುನಿಗಳ ಬಗ್ಗೆ ಒಂದು ವಿಷಯ ಹೇಳಲೇಬೇಕ್ರಿ ...

ಈತ ’ಹಾದಿಬದಿಯ ದರೋಡೆಕೋರ’ನಾಗಿದ್ದು ಕೊಲೆ ಸುಲಿಗೆ ನೆಡೆಸಿ ನಂತರ ಜ್ಞ್ನಾನೋದಯ ಹೊಂದಿ ರಾಮಾಯಣ ಬರೆದರು .. ಇವರ ಜೀವನಗಾಥೆಯಿಂದ ನಮಗೆ ತಿಳಿದುಬಂದ ವಿಷಯವೇ "ಕತ್ತಿಗಿಂತ ಲೇಖನಿ ಹರಿತ" ಅಂತ !!!

ಮಹಾಮುನಿಗಳು ನುಡಿದರು ...

ವೈಲ್ಡ್-ಉ life-ಉ ರಾವಣ come-ಉ
ರಾಮನ್ ವೈಫ್ ಕಿಡ್-ನ್ಯಾಪ್-ಉ

ಅವರಿಗೆ ನನ್ನ ವಂದನೆ ಅರ್ಪಿಸಿ ಮುಂದೆ ಹೋದಂತೆ ಎಡವಿದೆ ... ದೊಡ್ಡ ಸೈಜು ಕಲ್ಲು ... ಅಲ್ಲಿಂದಲೇ ಒಂದು ವಾಯ್ಸು

ಮಾರ್ನಿಂಗ್ ಟೈಮ್-ಉ ಇಂದ್ರ come-ಉ
ನಾನು ಆದೆ ರಾಕ್-ಉ
ಟಚ್-ಉ ಟಚ್-ಉ ಪಾದ ಟಚ್-ಉ
ನಾನು ಸ್ವರ್ಗಕ್ ಬ್ಯಾಕ್-ಉ

ಅಯ್ಯೋ, ತಾಯೇ .. ಎಂತಹ ಸ್ಥಿತಿ ಬಂತು ನಿನಗೆ ... ದೇವಾನುದೇವತೆಗೇ ಕಾಮದ ಮೋಹ ... ಛೇ, ಛೇ ಎಂದುಕೊಳ್ಳುತ್ತಿದ್ದಂತೆಯೇ ವಿಶ್ವಾಮಿತ್ರರು ಕಂಡರು ...

ತಪಸ್-ಉ life-ಉ ಮೇನಕೆ come-ಉ
life ರಿವರ್ಸ್-ಉ ಗಿಯರ್-ಉ
ಚೈಲ್ಡ್-ಉ come-ಉ ನಾನು ರನ್-ಉ
ಚೈಲ್ಡ್ ಕೇರ್ ಆಫ್ ಫಾಸ್ಟರ್-ಉ

ಮುನಿಗಳೇ, ನೀವು ಮಾಡಿದ್ದು ಸರಿಯೇ? ಕೈಗೆ ಜವಾಬ್ದಾರಿ ಬಂದೊಡನೇ ಓಡಬಹುದೇ ... ಇದೇ ಧರ್ಮ ಎಂದುಕೊಂಡು ಇಂದಿಗೂ ಹಲವು ಜನ ನಿಮ್ಮ ಹಾದಿಯಲ್ಲೇ ನೆಡೆಯುತ್ತಿದ್ದಾರೆ ... ಇಷ್ಟಕ್ಕೂ ನೀವು ಮಾಡಿದ ಈ ಕೆಲಸದಿಂದ ತೊಂದರೆಗೆ ಒಳಗಾದವರು ಯಾರು? ದುಷ್ಯಂತ ಕಣ್ರೀ ... ಬನ್ನಿ ಆತನನ್ನೇ ಕೇಳೋಣ ...

ಫಾರೆಸ್ಟ್ lifeಉ, ದುಂಬಿ come-ಉ
ಸೂಪರ್ ಬ್ಯೂಟಿ ಫಿಯರ್-ಉ
ಐಯ್ಸ್ - ಐಯ್ಸ್ ಮೀಟ್-ಉ ಮೀಟ್-ಉ
ನನಗೆ memory ಲಾಸ್-ಉ

ನೋಡಿ ಏನಾಯ್ತು ಗತಿ .... ಒಂದೆರಡು ಹೆಜ್ಜೆ ಹಾಕುತ್ತಿದಂತೇ, ಜರಾಸಂಧ ಸಿಕ್ಕಿದ ... ಛೇ! ಪಾಪ ವಿಜಯ್ ಅಲ್ಲ ಕಣ್ರೀ ... ಸ್ವರ್ಗದಲ್ಲಿ ಅವನಿಗೇನು ಕೆಲ್ಸ ... ದಿ ರಿಯಲ್ ಜರಾಸಂಧ ...

ಜಾಯಿಂಟ್ life-ಉ ಭೀಮ come-ಉ
ಬಾಡಿ ಎರಡು ಪೀಸ್-ಉ
ಲೆಫ್ಟ್ ರೈಟ್-ಉ ಮೀಟ್-ಉ ಮೀಟ್-ಉ
ಭೀಮ ಫುಲ್ confuseಉ

ನಿಜ ಕಣಪ್ಪ ... ನೀನೊಬ್ಬ ಹೋದರೇನು ಗುರೂ ... ಈಗ ಬೇಕಾದಷ್ಟು ಸ್ಯಾಂಪಲ್’ಗಳು ವಿಶ್ವಾದ್ಯಂತ ಇದ್ದಾರೆ ...

ಮಗನನ್ನೇ ಶತ್ರುವಂತೆ ಕಂಡ ’ಹಿರಣ್ಯಕಶಿಪು’ ಸಿಕ್ಕ ... ಹಾಗೇ ಲೈಟಾಗಿ ಕಂಬಕ್ಕೊಮ್ಮೆ ಗದೆಯನ್ನು ಬಡಿದು,

ಸನ್-ಉ ಕಿಲ್-ಉ ಸಕತ್ ಪ್ಲಾನ್ಸ್-ಉ
ಎಲ್ಲ attempt-ಉ ಫೈಲ್-ಉ
ಸನ್-ಉ ಲಯನ್-ಉ ಮೀಟ್-ಉ ಮೀಟ್-ಉ
ನನ್ನ ಕರುಳು ಪೀಸ್-ಉ

ನಾನೇನು ತಪ್ಪು ಮಾಡಿದ್ದೆ ಅಂತೀನಿ ... ಇಷ್ಟು ಹೊತ್ತಿಂದ ಇಲ್ಲಿ ತಿರುಗುತ್ತಿದ್ದೀನಿ ... ಬರೀ ತಪ್ಪು ಮಾಡಿರೋವ್ರೇ ಸಿಕ್ತಿದ್ದಾರಲ್ಲ? ಈ ಮೇನಕೆ, ಊರ್ವಷಿ, ರಂಭೆ ಎಲ್ಲ ಎಲ್ಲಿ ಹೋದರು ... ಇಂದ್ರ ಬಿಡಿ, ಬೆಳಿಗ್ಗೆ ಹೊತ್ತು ಸಿಗೋಲ್ಲ ... ಈ ಮಂದಿಯೇ ಇಲ್ಲಿರಬೇಕಾದ್ರೆ, ನರಕದಲ್ಲಿ ಯಾರಿರಬಹುದು?

ಕಣ್ಣು ಮುಚ್ಚಿ, ಕಣ್ ತೆರೆದೆ ...

ಎಲ್ಲೆಡೆ ಸಿಕ್ಕಾಪಟ್ಟೆ ಗಲಾಟೆ ನೆಡೀತಿತ್ತು ... ಒಬ್ಬರ ಮಾತು ಒಬ್ಬರಿಗೆ ಕೇಳಿಸ್ತಿಲ್ಲ ... ಜನ ಬಿಳೀ ವಸ್ತ್ರಧಾರಿಗಳಾಗಿದ್ದರು ... ಎಣ್ಣೆ ಬಾಂಡ್ಳೆ, ಉರಿಯೋ ಬೆಂಕಿ ಏನೂ ಕಾಣ್ತಿಲ್ಲ ... ಅಯ್ಯೋ! ದಡ್ಡ ಕಣ್ರೀ ನಾನು ... ನರಕ ಅಂದುಕೊಂಡಿದ್ದೆ ... ಅದು ವಿಧಾನಸೌಧ !

ಇಲ್ಲಿಂದ ಹೊರಟು ಬೀಡೋಣ ಅಂತ ಹೊರಟೆ ... ಯಾರೋ ನನ್ನನ್ನು ನೋಡಿಯೇ ಬಿಟ್ಟರು ... "ಲೇ, ಇವನೇ ಕಣ್ಲಾ, ನಮ್ ಪವಿತ್ರ ಕಸುಬನ್ನು ಕೊಳಗೇರಿ ಅಂದೋನು" ...

ಬೇಕಿತ್ತಾ ನನಗೆ ಅಂತ ಎದ್ದು ಬಿದ್ದು ಓಡಿದೆ ... ಎರಡೇ ನಿಮಿಷದಲ್ಲಿ ಅಮೇರಿಕಕ್ಕೆ ಬಂದುಬಿಟ್ಟಿದ್ದೆ ...

ಕಣ್ಣು ಮುಚ್ಚಿ, ಕಣ್ಣು ತೆರೆದೆ ಅಂತ ಹೇಳಿದ ಮಾತ್ರಕ್ಕೆ ಇದೆಲ್ಲ ಕನಸಲ್ಲ ... ನನಗೆ ಕಣ್ಣು ಬಿಟ್ಕೊಂಡೇ ನಿದ್ದೆ ಮಾಡಿ ಅಭ್ಯಾಸ ಇದೆ !