ಪರರ ಹಣ:
ಹಣವನ್ನು ಬ್ಯಾಗಿನಲ್ಲಿ ತೆಗೆದುಕೊಂಡು ಹೋದಲ್ಲಿ, ಸುಳಿವು ಅರಿತು, ಕಳ್ಳರು ದೋಚಿಯಾರು ಎಂದುಕೊಂಡು ಆತ, ದಿನ ಪತ್ರಿಕೆಯ ಹಾಳೆಗಳನ್ನು ಹಣದ ಬಂಡಲ್ ಮೇಲೆ ಸುತ್ತಿ, ಕೋಟಿನ ಜೇಬಿನಲ್ಲಿಟ್ಟುಕೊಂಡು, ಪಾವತಿಸಲು ಬ್ಯಾಂಕಿಗೆ ನೆಡೆದಿದ್ದ. ಇನ್ನೇನು ಆಚೆ ಬದಿ ತಲುಪುವಷ್ಟರಲ್ಲಿ, ಪಾದಚಾರಿಗಳು ಕ್ರಾಸ್ ಮಾಡುವ ಹಸಿರು ದೀಪ ಕೆಂಪಾಗಿತ್ತು. ಧಡ ಭಡ ಎಂದು ಆತ ಓಡುತ್ತ ಆ ಬದಿ ತಲುಪಿ ಬ್ಯಾಂಕಿನ ಒಳ ನೆಡೆದ. ಓಡುವಾಗ ಜಾರಿದ ಹಣ ಮೂಲೆಯಲ್ಲೇ ಫುಟ್ ಪಾಥ್ ಮೇಲೆ ಕುಳಿತಿದ್ದ ಮುದಿ ಭಿಕ್ಷುಕನ ತಟ್ಟೆಯಲ್ಲಿ ಬಿತ್ತು. ಬಯಸದೇ ಬಂದ ಭಾಗ್ಯವದು. ಬೇಡುವವನ ತಟ್ಟೆಯಲ್ಲಿ ಬಿದ್ದ ಹಣ ಹಾಗಾಗಿ ಅಕ್ರಮವೂ ಅಲ್ಲ. ಆದರೆ ಅವಶ್ಯಕತೆಗಿಂತ ಅತಿ ಅಧಿಕ ಎಂದರಿತ ಆ ಮುದುಕ, ಪೇಪರ್ ಸುತ್ತಿದ್ದ ಬಂಡಲ್ ಹೊತ್ತು ನಿಧಾನವಾಗಿ ಆತ ಹೋದ ದಾರಿಯತ್ತಲೇ ನೆಡೆದ. ಧಾವಿಸುತ್ತ ಬ್ಯಾಂಕಿನಿಂದ ಹೊರ ಬಂದಾತನ ಕೈಗೆ ಹಣದ ಬಂಡಲ್ ಇತ್ತ. ಒಂದು ಒಳ್ಳೆಯ ಕೆಲಸ ಮಾಡಿದ ಸಂತಸದ ನಗುವಿನ ಎಳೆ ಆ ಮುದುಕನ ಮುಖದಲ್ಲಿ. ಕಷ್ಟದ ಸಂಪಾದನೆಯ ಹಣ ದೊರೆತ ಸಂತಸದ ಕಣ್ಣೀರು ಹರಿದಿತ್ತು ಈತನ ಕಣ್ಣಲ್ಲಿ!  ಕಣ್ಣಿಂದ ಬಿದ್ದ ಹನಿ, ಸುತ್ತಿದ್ದ ಪೇಪರ್ ಮೇಲಿದ್ದ ರೆಡ್ಡಿ-ಯಡ್ಡಿಯರ ಮೇಲೆ ಬಿದ್ದಿತ್ತು !!!


ನನಗೂ ಮುನ್ನ:
ನಾನು ಬಸ್ ಸ್ಟಾಂಡಿಗೆ ಬಂದೆ. ನನಗಿಂತ ಮುನ್ನವೇ ಅಲ್ಲಿ ಬಸ್ ಬಂದಿತ್ತು. ಖಾಲೀ ಸೀಟು ಕಂಡು ಕೂರಲು ಹೋದೆ. ನನಗಿಂತ ಮುನ್ನವೇ ಒಬ್ಬ ಕುಳಿತ. ಟಿಕೆಟ್ ಕೊಳ್ಳಲು ನಾನು ಪ್ಯಾಂಟಿನ ಜೇಬಿಗೆ ಕೈ ಹಾಕಿದೆ. ನನಗಿಂತ ಮುನ್ನವೇ ಅಲ್ಲಿ ಮತ್ತೊಬ್ಬ ಕೈ ಹಾಕಿದ್ದ. ನನ್ನ ಕೈ ಹೊರತೆಗೆಯುವ ಮುನ್ನವೇ ಆ ಚಾಲಾಕಿ ಹಣ ಹೊಡೆದ ಕೈ ತೆಗೆದಿದ್ದ. ನಾನು ತಿರುಗಿ ನೋಡುವ ಮುನ್ನವೇ ಅವನು ಬಾಗಿಲ ಬಳಿ ಹೋಗಿದ್ದ. ’ಕಳ್ಳ’ ಎಂದು ಕೂಗುವ ಮುನ್ನವೇ ಇಳಿದು ಓಡಿದ್ದ. ನಾನು ಬಸ್ ಇಳಿಯುವ ಮುನ್ನವೇ ಬಸ್ ಭರ್ರನೆ ಹೊರಟೇ ಬಿಟ್ಟಿತ್ತು. ಕಳ್ಳ ಓಡಿದ ದಿಕ್ಕನ್ನು ಹಾಗೇ ನೋಡುತ್ತಿದ್ದೆ. ಅವನು ರಸ್ತೆ ದಾಟುವ ಮುನ್ನವೇ ಅವನ ಹತ್ತಿರಕ್ಕೇ ವೇಗವಾಗಿ ಬಸ್ಸೊಂದು ಬಂದಿತ್ತು. ಅವನನ್ನು ಎಚ್ಚರಿಸಲು ಕೂಗುವ ಮುನ್ನವೇ ಅವನಿಗೆ ಆ ಬಸ್ ಗುದ್ದಿತ್ತು. ನನ್ನ ಹಿಂದಿನಿಂದ ಕಂಡಕ್ಟರ್ "ಟಿಕೆಟ್ ಆಯ್ತಾ?" ಎಂದು ಕೇಳಿದ್ದ. ನಾನು ಇಲ್ಲಿ ಟಿಕೆಟ್ ಕೊಳ್ಳುವ ಮುನ್ನವೇ ಆ ಕಳ್ಳ ಟಿಕೆಟ್ ತೆಗೆದುಕೊಂಡಿದ್ದ !!!


ಪ್ರಕೃತಿ-ಪುರುಷ:
ಬೆಟ್ಟದಾ ಮೇಲೆ ಸಾಗುತ್ತಿತ್ತು ನನ್ನೀ ಕಾರು. ಅಲ್ಲೇ ಬದಿಯಲ್ಲಿ ಕಂಡ scenic view’ನಲ್ಲಿ ಕಾರನ್ನು ನಿಲ್ಲಿಸಿ, ಮೂಲೆಯ ಕಟ್ಟೆಯ ಮೇಲೆ ಕುಳಿತು, ಕ್ಯಾಮೆರಾ ಪಕ್ಕಕ್ಕಿಟ್ಟು, ಮರಗಿಡಗಳ ನೋಡುತ್ತಿದ್ದೆ. ಒಂದೊಂದು ಮರಗಳ ಎಲೆಗಳೂ ಒಂದೊಂದು ವಿಧ ಬಣ್ಣದಿ ಕಂಗೊಳಿಸುತ್ತ ಮನಸೂರೆಗೊಂಡಿತ್ತು... ಬಿಳಿಮೋಡದ ತುಣುಕುಗಳು, ತಲೆಯಿಂದ ಕೇವಲ ಇಪ್ಪತ್ತೇ ಅಡಿಯ ಮೇಲೆ ಹಾದು ಹೋಗುತ್ತಿತ್ತು... ಹಕ್ಕಿಪಿಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು... ತಂಗಾಳಿ ತಂಪಾಗಿ ಬೀಸುತ್ತ, ದೇಹವನ್ನು ಅಪ್ಪಿ ಮುಂದೆ ಸಾಗುತ್ತಿತ್ತು... ಎಲ್ಲೋ ಬೀಳುತ್ತಿದ್ದ ಮಳೆಯಿಂದಾಗಿ ಮಣ್ಣಿನ ವಾಸನೆ ಮೂಗಿಗೆ ಬಡಿದಿತ್ತು... ಮಣ್ಣಿನ ಮೇಲೆ, ಉದುರಿದ್ದ ಒಣ ಎಲೆಗಳ ನಡುವೆ ಹುಳು ಹುಪ್ಪಟೆಗಳು ನಿರ್ಭೀತರಾಗಿ ಸಾಗುತ್ತಿದ್ದವು... ಕೇಳರಿಯದ ಕಾಡಿನ ಪುಷ್ಪಗಳು ತಂಪಾದ ಗಾಳಿಗೆ ತಲೆದೂಗುತ್ತಿದ್ದವು... ಬಂಡೆಗಳ ಮೇಲಿನ ಪಾಚಿಯ ಹಸಿರು ಕಂಗೊಳಿಸುತ್ತಿತ್ತು... ತಂಗಾಳಿ ತನ್ನೊಡನೆ ಯಾವುದೋ ಪುಷ್ಪದ ಸುವಾಸನೆಯನ್ನು ನಿರ್ವಂಚನೆಯಿಂದ ಹಂಚುತ್ತ ಸಾಗಿತ್ತು... ಕವಿ ಮನದಿ ಕಾವ್ಯ ಸರಸತಿ ನಲಿಯುತ್ತಿದ್ದಳು... ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಅರಿವಿಲ್ಲದೆ ಕುಳಿತಿದ್ದೆ... ದೈವದತ್ತ ಸೌಂದರ್ಯದ ನೋಟವನ್ನು ಭಾಗಶ: ವಾದರೂ ಹಿಡಿಯಲು, ಕೈಗಳು ಪಕ್ಕದಲ್ಲಿ ಇಟ್ಟಿದ್ದ ಕ್ಯಾಮೆರಾದ ಕಡೆ ಹೊರಟಿತ್ತು... ಕಣ್ಣಿಲ್ಲದ ಕೈಗಳು ಪಕ್ಕದವಳ ನೀಳಗೂದಲ ಎಳೆದಿತ್ತು ! ಹಾಗೇ ದೃಷ್ಟಿ ಹರಿಸಿ ಅವಳ ಹೊಳೆವ ಕೆಂಗೂದಲನ್ನೇ ನೋಡುತ್ತಿದ್ದೆ... ಆಕೆಯೂ ಸಿನಿಮಾ ನಾಯಕಿಯಂತೆ ನಿಧಾನವಾಗಿ ತಲೆ ತಿರುಗಿಸಿದಾಗ ಆ ನೀಲಿ ಕಂಗಳನ್ನು ನೋಡಿ ಮನ ಸೋಲುವಷ್ಟರಲ್ಲಿ ನನ್ನ ಕಂಗಳಿಗೆ ಬಿದ್ದಿದ್ದು ಅವಳ ಹವಳದಾ ತುಟಿಯ ಮೇಲಿನ ಢಾಳಾದ ಮೀಸೆ !!! ಆ ಕ್ಷಣದಲ್ಲೇ ಪ್ರಕೃತಿ ಸೌಂದರ್ಯದ ಮತ್ತು ಇಳಿದಿತ್ತು ! ಪಕ್ಕದಲ್ಲಿದ್ದುದು ಪ್ರಕೃತಿ ಅಲ್ಲ ಪುರುಷ ಎಂದರಿವಾಗಿ, ನನ್ನ ಕ್ಯಾಮರಾ ಹೊತ್ತ ಕೈಗಳು ಕಾಲಿಗೆ ಬುದ್ದಿ ಹೇಳಿತ್ತು !!!