ಅಂದು ಡಿಸೆಂಬರ್ ೩೧ರ ಮಧ್ಯರಾತ್ರಿ, ವಿಶ್ವದೆಲ್ಲೆಡೆ ಹೊಸವರ್ಷದ ಸಂಭ್ರಮ. ಮಧ್ಯ, ಸಿಹಿ, ಶುಭಾಶಯಗಳ ವಿನಿಮಯ ಪರ್ವ. ಅಗಣಿತ ನೆನಪುಗಳನ್ನು ನೀಡಿದ ೨೦೧೧ಕ್ಕೆ ವಿದಾಯ ಹೇಳಿ, ಹೊಸ ಕನಸು ಹೊಸ ಭರವಸೆ ಹೊಸ ನಿರ್ಧಾರಗಳೊಂದಿಗೆ ೨೦೧೨ನ್ನು ಬರಮಾಡಿಕೊಳ್ಳುವ ಸಮಯ.
ನಮ್ಮ ದೇಶವೂ ಸಂಭ್ರಮಕ್ಕೆ ಹೊರತಲ್ಲ. ಮಕ್ಕಳಿಂದ ಮುದುಕರವರೆಗೂ ’ಹ್ಯಾಪಿ ನ್ಯೂ ಇಯರ್ನ್ನು’ ಆಚರಿಸುವ ತುಡಿತ, ಕುಡಿತ! ಎಲ್ಲೆಲ್ಲೂ ಮೋಜು ಮಸ್ತಿ. ಪಟಾಕಿಗಳ ಸಿಡಿತ, ಕೇರಿಗಳಲ್ಲಿ, ಓಣಿಗಳಲ್ಲಿ, ಪಾರ್ಟಿಗಳಲ್ಲಿ ಕುಣಿತ!
ಮೊನ್ನೆ ತಾನೆ ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ’ಥೇನ್’ ಚಂಡಮಾರುತದಿಂದಾಗಿ ಸುಮಾರು ೪೭ ಜನರು ಅಸುನೀಗಿದ್ದರೆ ಸಾವಿರಾರು ಜನ ಮನೆಮಠಗಳನ್ನು ಕಳೆದು ಕೊಂಡು ನಿರ್ಗತಿಕರಾದ ನೆನಪು ಈಗೇಕೆ? ಕೋಲ್ಕತ್ತಾದ ಎಮ್ಆರ್ಐ ಆಸ್ಪತ್ರೆಯಲ್ಲಿ ನೂರಾರು ಜನ ಬೆಂದು ಕರಕಲಾದ ವಿದ್ರಾವಕ ಘಟನೆಯಾದರೇನಾಯಿತು, ಅಲ್ಲವೇ? ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳಲ್ಲಿ ನೂರಾರು ಮಕ್ಕಳು ಅಪೌಷ್ಠಿಕತೆಯಿಂದಾಗಿ ಅಸು ನೀಗಿದರೇನಾಯಿತು? ಅದರ ಕುರಿತೆಲ್ಲ ಯೋಚಿಸುತ್ತಾ, ನಮ್ಮ ಮಸ್ತಿಯನ್ನು ಮರೆಯಬೇಕೆ? ಅದಕ್ಕೆಲ್ಲ ನಾವೇ ಕಾರಣ? ಅದು ಸರ್ಕಾರದ ಜವಾಬ್ದಾರಿ ನಮಗೇನು ಸಂಬಂಧ? ಅಲ್ಲವೇ. ಪಾಪ ನಮ್ಮ ಮದ್ಯದ ದೊರೆಗಳೂ ಕೂಡ ದಿವಾಳಿ ಹಂತವನ್ನು ತಲುಪಿದ್ದಾರೆ. ಅವರನ್ನು ಕಾಪಾಡುವವರಾರು? ಅದೂ ನಮ್ಮ ಕೆಲಸವೇ!
ಕಳೆದ ಆಗಸ್ಟ್ನಲ್ಲಿ ೭೦ರ ಹರೆಯದ ಅಣ್ಣಾ ಹಜಾರೆಯವರು ಲೋಕಪಾಲ ಮಸೂದೆಯನ್ನು ಕೇಂದ್ರ ಜಾರಿಗೆ ತರಬೇಕು, ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಿಗ್ರಹವಾಗಬೇಕು ಎಂಬ ಸದುದ್ದೇಶದಿಂದ ೧೨ ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಆಗ ನೋಡಬೇಕು ಎಲ್ಲರೂ ’ನಾನು ಅಣ್ಣಾ, ನೀನು ಅಣ್ಣ, ಎಲ್ಲರೂ ಅಣ್ಣಾ’ ಎನ್ನುತ್ತಾ ಅಣ್ಣಾಗಿರಿಯನ್ನು ಪ್ರದರ್ಶಿಸಿದ್ದೇ ಪ್ರದೇಶಿಸಿದ್ದು. ಫೇಸ್ ಬುಕ್ನಲ್ಲೂ ಅದೇ, ಟ್ವಿಟರ್ನಲ್ಲೂ ಅದೇ. ಆದರೆ ಅದೇ ಅಣ್ಣಾ ವರ್ಷದ ಕೊನೆಯಲ್ಲಿ ನಿತ್ರಾಣರಾಗಿ ಆಸ್ಪತ್ರೆಯನ್ನು ಸೇರಿದಾಗ ಆ ಆಂದೋಲನವನ್ನು ಮುನ್ನಡೆಸಬಲ್ಲ, ಇಲ್ಲವೇ ಆಂದೋಲನ ದಾರಿ ತಪ್ಪುತ್ತಿರುವಾಗ ಎಚ್ಚರಿಸಬಲ್ಲ ಅಣ್ಣಾಗಳೂ ಕಾಣಲಿಲ್ಲ ಅಥವಾ ಆಸ್ಪತ್ರೆ ಸೇರಿದ ಅಣ್ಣಾರನ್ನೂ ನೆನಪಿಸಿಕೊಂಡವರೂ ಅಷ್ಟಕ್ಕಷ್ಟೆ. ಅಷ್ಟಕ್ಕೂ ಯಾಕೆ ನೆನಪಿಸಿಕೊಳ್ಳಬೇಕು? ಅವರು ಆಸ್ಪತ್ರೆ ಸೇರಿದರೆಂದ ಮಾತ್ರಕ್ಕೆ ನಾವೇಕೆ ನಮ್ಮ ’ಮಸ್ತಿ’ಯನ್ನು ಹಾಳು ಮಾಡಿಕೊಳ್ಳಬೇಕು? ನಾವೇನು ಅವರಿಗೆ ಸತ್ಯಾಗ್ರಹವನ್ನು ನಡೆಸುವಂತೆ ಕೇಳಿದ್ದೆವೆ? ಭ್ರಷ್ಟಾಚಾರ ಎಲ್ಲಿಲ್ಲ? ನಮಗೇನಾದರೂ ಭ್ರಷ್ಟಾಚಾರದಿಂದ ತೊಂದರೆ ಆದರೆ, ಇಲ್ಲವೇ ನಮಗೆ ಬೇಕಾದವರು ಯಾರಾದರೂ ಭ್ರಷ್ಟಾಚಾರಕ್ಕೆ ಬಲಿಯಾದರೆ, ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿ, ಒಂದು ನಾಲ್ಕು ಲೈಕ್ಗಳನ್ನು, ಪ್ರಪಂಚವನ್ನೇ ಬದಲಿಸುವಂತಹ ಹುಮ್ಮಸ್ಸಿನ ಒಂದೈದು ಕಾಮೆಂಟ್ಗಳನ್ನು ಹಾಕಿ ನಂತರ ಮರೆಯುವುದಿಲ್ಲವೇ? ಅಷ್ಟಕ್ಕೂ ಇವೆಲ್ಲದರ ಬಗ್ಗೆ ಚಿಂತಿಸಿ ನಮ್ಮ ಮಸ್ತಿಯನ್ನು ಏಕೆ ಹಾಳು ಮಾಡಿಕೊಳ್ಳಬೇಕು?
ಹೊಸ ವರ್ಷದ ಸಮಯದಲ್ಲಿ ನಾನು ಆ ’ರೆಸಲ್ಯೂಷನ್’ ತೆಗೆದುಕೊಂಡಿದ್ದೀನಿ, ನಾನು ಈ ರೆಸಲ್ಯೂಷ್ನ್ ತೆಗೆದುಕೊಂಡಿದ್ದೇನೆ ಎಂದು ನಮ್ಮ ಗೆಳೆಯರೆಲ್ಲ ಹೇಳಿದ್ದೇ ಹೇಳಿದ್ದು. ಆದರೆ ಇನ್ನು ಮೇಲಾದರೂ ಯಾವುದೇ ಆಮಿಷಗಳಿಗೆ ಬಲಿಯಾಗದೇ, ಚುನಾವಣೆಗಳಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ಮತ ಚಲಾಯಿಸಿ, ಸದೃಢ ದೇಶವನ್ನು ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದು ರೆಸಲ್ಯೂಷನ್ ತೆಗೆದುಕೊಂಡಿದ್ದು ನನ್ನ ಕಿವಿಗಂತೂ ಬೀಳಲಿಲ್ಲ. ಯಾಕೆ ಇಂತಹ ರೆಸಲ್ಯೂಷನ್ ತೆಗೆದುಕೊಳ್ಳಬೇಕು ನೀವೇ ಹೇಳಿ. ಚುನಾವಣೆ ದಿನದಂದು ಸಿಗುವ ರಜೆಯಲ್ಲಿ ಕುಟುಂಬದೊಂದಿಗೆ ಯಾವುದಾದರೂ ಪ್ರವಾಸಕ್ಕೋ, ತಿರುಗಾಡಲಿಕ್ಕೋ ಹೋಗಿ ’ರಿಲ್ಯಾಕ್ಸ್’ ಆಗುವುದನ್ನು ಬಿಟ್ಟು ಯಾರಾದರೂ ಜಾಣರು ಮತ ಹಾಕಲು ಹೋಗುತ್ತಾರೆಯೆ? ಫೇಸ್ ಬುಕ್ನಲ್ಲೋ, ಟ್ವಿಟ್ಟರ್ನಲ್ಲೋ ಈ ಅವಕಾಶ ಇದ್ದಿದ್ದರೆ ಯೋಚಿಸಿಬಹುದಿತ್ತು. ದೇಶ ಏನಾದರೆ ನನಗೇನು? ನಾಳೆ ನಮ್ಮ ಮಕ್ಕಳಿಗೆ ಈ ದೇಶದಲ್ಲಿ ಬದುಕಲಾರದಂತಹ ಸನ್ನಿವೇಶ ಬಂದರೇನಾಯಿತು? ಅವರ ದಾರಿ ಅವರು ನೋಡಿಕೊಳ್ಳುತ್ತಾರೆ. ಅಂತಹುದ್ದರಲ್ಲಿ ಇವುಗಳ ಬಗ್ಗೆ ಎಲ್ಲ ಯೋಚಿಸುತ್ತ ನಮ್ಮ ಮಸ್ತಿಯನ್ನು ಹಾಳು ಮಾಡಿಕೊಳ್ಳಬೇಕೇ? ಜಸ್ಟ್ ಹ್ಯಾವ್ ಫನ್ ಯಾರ್ !
ಇದೆಲ್ಲ ಹೋಗಲಿ ಬಿಡಿ, ಇನ್ನು ನಮ್ಮ ಹೊಸ ವರ್ಷದ ಸಂಭ್ರಮಾಚರಣೆ ಹೇಗಿತ್ತು ನೋಡೋಣ ಬನ್ನಿ.
ಅಂದು ರಾತ್ರಿ ’ಗುರುಗಾಂವ್’ನ ಎಮ್ಜಿ ರೋಡಿನಲ್ಲಿ ಸಾವಿರಾರು ಜನ ನೆರದಿದ್ದರು, ಎಲ್ಲೆಲ್ಲು ಕೇಕೆ, ಕುಣಿತ. ಸಮೀಪದ ’ಶಾಪಿಂಗ್ ಮಾಲ್’ಗಳಲ್ಲಿ ಜೋಡಿ ಹಕ್ಕಿಗಳ ಪಾರ್ಟಿಗಳು ಸಹ ಆಯೋಜನೆಯಾಗುತ್ತಿದ್ದವು. ಸ್ಥಳೀಯ ಯುವಕರಂತೂ ದಾರಿಯಲ್ಲಿ ಬರುತ್ತಿರುವ ವಾಹನಗಳನ್ನು ನಿಲ್ಲಿಸುತ್ತಾ, ಅವರಿಗೆ ತೊಂದರೆ ಕೊಡುತ್ತ, ಆ ವಾಹನಗಳ ಮೇಲೆ ಹತ್ತಿ ಮೈಮೇಲೆ ದೆವ್ವ ಬಂದವರಂತೆ ಕುಣಿಯುವುದು, ಅಂಗಿ ತೆಗೆದು ಅರೆಬೆತ್ತಲೆಯಾಗುತ್ತ, ಕೆಟ್ಟ ಕೆಟ್ಟ ಸಂಜ್ಞೆಗಳನ್ನು ಮಾಡುತ್ತ, ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತ ಮಸ್ತಿ ಮಾಡುತ್ತಿದ್ದರು. ಮುಂದೆ ನಡೆದದ್ದು ತೀರ ಅಸಹ್ಯ, ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಗಳು. ಸುಮಾರು ೫೦ ಜನ ಯುವಕರ ಗುಂಪೊಂದು ಪಾರ್ಟಿಗೆ ಎಂದು ಬಂದಿದ್ದ ಒಂದು ಜೋಡಿಯ ಮೇಲೆ ದಾಳಿ ಮಾಡಿದ್ದಲ್ಲದೇ ಆ ಹುಡುಗನಿಗೆ ಮನಬಂದಂತೆ ಹೊಡೆದು ಹುಡುಗಿಯನ್ನು ಅಕ್ಷರಶಃ ಕಾಡುಪ್ರಾಣಿಗಳಂತೆ ಮುತ್ತಿ ಅವಳ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿದ್ದರು, ಸಕಾಲದಲ್ಲಿ ಪೋಲಿಸರು ತಮ್ಮ ಲಾಠಿಯ ರುಚಿಯನ್ನು ತೋರಿಸಿದ್ದರಿಂದ ಆ ಜೋಡಿಗಳ ಜೀವ ಉಳಿಯಿತೆಂದೇ ಹೇಳಬೇಕು, ಇಲ್ಲದಿದ್ದರೆ ಆ ಯುವತಿಯ ಪಾಡಂತೂ ಹೇಳತೀರದು. ಅವಳ ಮಾನ ಹಾಗೂ ಪ್ರಾಣವೇನೋ ಉಳಿಯಿತು. ಆದರೆ ಹೊಸವರ್ಷದ ಮಸ್ತಿಯ ಹೆಸರಲ್ಲಿ ಆದ ಆಘಾತವನ್ನ ಭರಿಸಲು ಸಾಧ್ಯವೇ?
ಇನ್ನು ನೋಯ್ಡಾದಲ್ಲಿ ಹೊಸವರ್ಷದ ಹರುಷಕ್ಕೆಂದು ಗಾಳಿಯಲ್ಲಿ ಹಾರಿಸಿದ ಗುಂಡಿನಿಂದಾಗಿ ಅನೇಕರು ಗಾಯಗೊಂಡ ವರದಿ ಬಂದಿದೆ. ಇಷ್ಟೇ ಅಲ್ಲದೇ ರಸ್ತೆಯಲ್ಲಿ ಎಲ್ಲಿ ಬೇಕಲ್ಲಿ ಕುಡಿದು ರಸ್ತೆಯ ಮಧ್ಯದಲ್ಲಿ ಒಡೆದ ಬಾಟಲಿಯ ಚೂರುಗಳೂ ಮಸ್ತಿಗೆ ಸಾಕ್ಷಿಯಾಗಿ ಬಿದ್ದುಕೊಂಡಿರುವ ದೃಶವೂ ಸಾಮಾನ್ಯವಾಗಿತ್ತು.
ಇದು ಕೇವಲ ಗುರಗಾಂವ್ ಅಥವಾ ನೋಯ್ಡಾದ್ದೊಂದೇ ವ್ಯಥೆಯಲ್ಲ, ಮನುಷ್ಯನ ಮಸ್ತಿಯ ಹುಚ್ಚಿನಲ್ಲಿ ನೊಂದ ಅನೇಕ ನಗರ, ಪ್ರದೇಶಗಳ ವ್ಯಥೆ. ನಮ್ಮ ಬೆಂಗಳೂರಿನ ಎಮ್.ಜಿ. ರೋಡಿನಲ್ಲಿ ಮರುದಿನ ನೋಡಿದಾಗಲಂತೂ ಯಾವುದೋ ಚಂಡಮಾರುತ ಬೀಸಿ ಹೋದಂತಹ ಅನುಭವ. ಈ ಹುಚ್ಚು ಮಸ್ತಿಯ ನಶೆಯಲ್ಲಿ ರಸ್ತೆಯನ್ನು ಗಬ್ಬೆಬ್ಬಿಸಿ ಎಸೆದ ಬಾಟಲಿಯ ಚೂರುಗಳು ಮುಂತಾದ ಕಸವೇ ಟ್ರಕ್ಕುಗಟ್ಟಲೇ ಇತ್ತೆಂದರೆ ಊಹಿಸಿ ಮಸ್ತಿಯ ಮಬ್ಬು ಎಷ್ಟಿತ್ತೆಂದು, ಇನ್ನು ಮುಂಬೈ, ಗೋವಾ, ಚೆನ್ನೈ ಮುಂತಾದ ಸಮುದ್ರದ ತೀರಪ್ರದೇಶಗಳ ಕಥೆಯಂತೂ ಇನ್ನೂ ವಿದ್ರಾವಕ. ಪಾಪ ನಾವು ಭಕ್ತಿಯಿಂದ ಆಚರಿಸುವ ಗಣೇಶ ಚತುರ್ಥಿ, ದೀಪಾವಳಿಗಳ ಸಮಯದಲ್ಲಿ ಅವುಗಳು ನಮ್ಮ ಪರಿಸರವನ್ನು ಮಲೀನಗೊಳಿಸುತ್ತವೆ ಎಂದು ಬೊಬ್ಬಿರಿಯುವ ನಮ್ಮ ಮಾಧ್ಯಮಗಳಿಗೆ, ಬುದ್ಧಿ ಜೀವಿಗಳಿಗೆ, ಗಂಟೆಗಟ್ಟಲೇ ಚರ್ಚಿಸುವ ಟಿವಿ ಚಾನೆಲ್ಗಳಿಗೆ ಇದೆಲ್ಲ ಕಂಡು ಬರುವುದಿಲ್ಲ. ಅಯ್ಯೋ, ಅದೆಲ್ಲ ಯಾಕೆ ಕಂಡು ಬರಬೇಕು ಅಲ್ಲವೆ? ನಮ್ಮ ಹಬ್ಬಗಳ ಓಳಿತನ್ನು ತೋರಿಸಿದರೆ ಟಿಆರ್ಪಿ ಏನಾದರೂ ಹೆಚ್ಚಾಗುತ್ತದಾ? ದೊಡ್ಡವರಿಗೆ ನಮಸ್ಕರಿಸುವುದು, ದೇವರನ್ನು ಭಯಭಕ್ತಿಯಿಂದ ಪೂಜಿಸುವುದು, ನೆಂಟರಿಗೆ, ಸ್ನೇಹಿತರಿಗೆ, ಉತ್ತಮ ಭೋಜನ ಫಲ ತಾಂಬೂಲಗಳ ಮುಖಾಂತರ ಆದರಿಸುವುದೆಲ್ಲ ಮೂಢನಂಬಿಕೆ ಹಾಗೂ ಮಾನಸಿಕ ಹಿಂಸೆಯಲ್ಲವೇ? ಅದು ಹಿಂಸೆ ಇದು ಮಸ್ತಿ! ಅಷ್ಟಕ್ಕೂ ಆ ಹಬ್ಬಗಳನ್ನು ಆಚರಿಸುತ್ತ, ನಮ್ಮ ಸಂಸ್ಕೃತಿಯನ್ನು ಬೆಳೆಸುತ್ತಾ ಸುಮ್ಮನೆ ಕಾಲಹರಣ ಯಾಕೆ ಮಾಡಬೇಕು? ಇದೆಲ್ಲ ಯೋಚಿಸುತ್ತಾ ನಮ್ಮ ಮಸ್ತಿಯನ್ನು ಯಾಕೆ ಹಾಳು ಮಾಡಿಕೊಳ್ಳಬೇಕು? ಅಲ್ಲವೆ?
ಈ ನಡುವಳಿಕೆ ಎಷ್ಟು ಸರಿ?
ಬನ್ನಿ ಗೆಳೆಯರೆ, ನಾವು ಸಾಗುತ್ತಿರುವ ಹಾದಿಯ ಬಗ್ಗೆ ಒಂದೇ ಒಂದು ಬಾರಿ ಗಂಭೀರವಾಗಿ ಯೋಚಿಸಬೇಕಾಗಿದೆ. ಪಾರ್ಟಿ ಮಾಡುವುದಾಗಲಿ, ಹೊಸ ವರ್ಷದ ಸಂಭ್ರಮಾಚರಣೆಯಾಗಲಿ ತಪ್ಪಲ್ಲ. ಆದರೆ ಹೇಗೆ ಆಚರಿಸಬೇಕು? ಹೇಗೆ ಸಂಭ್ರಮಿಸಬೇಕು? ಎಂಬುವುದರ ಕುರಿತು ವಿವೇಚನೆಯನ್ನು ಹೊಂದಿರಬೇಕಾದದ್ದು ಅವಶ್ಯ. ನಿವೇನಂತೀರಿ?
ಇನ್ನೊಂದು ಹೊಸ ವಿಚಾರ, ಪ್ರತಿ ವರ್ಷ ಮದ್ಯ ಸೇವಿಸುವವರ ಸಂಖ್ಯೆ ಕರ್ನಾಟಕವೊಂದರಲ್ಲೇ ೨೫ಲಕ್ಷ ಹೆಚ್ಚಾಗುತ್ತಿದೆಯಂತೆ!!! ಭಾರತ ಅಂತೂ ಇಂತೂ ಉದ್ಧಾರ ಆಗುತ್ತಿದೆ! ಛೀ ನಾಚಿಕೆಯಾಗಬೇಕು........
ಜೈ ಭಾರತ ಮಾತೆ !!!
- ರಾಘವೇಂದ್ರ ಗುಡಿ
{ Note: Thi article also published in our website http://thesundayindian.com/kn/story/we-need-to-be-mature-and-responsible-/1332/ }
ಪ್ರತಿಕ್ರಿಯೆ (3)