ನನ್ನ ಪ್ರೇಮದ ಭಾಷೆ ತುಂಬಾ ಸರಳ

ಅರಿಯಲು ಹೋಗದಿರು ಅನುಭವಿಸು ಸಾಕು

ಇದಕಿಲ್ಲ ಯಾವುದೇ ರೂಪಕ, ಛಂದಸ್ಸು

ನಾನು ಚಂದ್ರನ ತರುವೆ ಎನ್ನಲಾರೆ

ಸೂರ್ಯನ ತಂದು ಹಾರ ಮಾಡುವ

ಸುಳ್ಳು ಕನಸು ಬಿತ್ತುವ ಕೆಲಸ ಮಾಡಲಾರೆ

ನಿನ್ನ ಕಂಠವ ಕೋಗಿಲೆಗೆ, ಅಂದವ ಹೂವಿಗೆ

ನಗುವನು ನಕ್ಷತ್ರಗಳಿಗೆ ಹೋಲಿಸಲಾರೆ

ನನಗೆ ನೀನು ನೀನಷ್ಟೆ…

ಇಂದು ಮಿರಿ ಮಿರಿ ಮಿಂಚಿ

ನಾಳೆ ಮರೆಯಾಗುವ ದೇಹವ

ಲೋಭಿಸುವ, ಹೊಗಳಿ ಅಟ್ಟಕ್ಕೇರಿಸುವ

ಉಸಾಬರಿಯೇ ನನಗೆ ಬೇಕಿಲ್ಲ

ನೀನೇ ನನಗೆ ಲೋಕವೂ ಅಲ್ಲ, ಪರಲೋಕವೂ

ನನ್ನ ಪ್ರೇಮದಿ ಲೋಪವಿಲ್ಲ ಅದಿಷ್ಟೆ ಹೇಳಬಲ್ಲೆ

ನನಗೆ ನಿನ್ನ ಮೇಲೆ ಪ್ರೀತಿ ಮತ್ತು ಪ್ರೀತಿ ಅಷ್ಟೇ..

ಇದಕ್ಕಿಂತ ನನಗೆ ಮತ್ತೇನಿಲ್ಲ…

ನನ್ನ ಪ್ರೀತಿಯ ಭಾಷೆಯೂ ಸಿಂಪಲ್

ಹೃದಯ ತೆರೆದಿಡು ಸಾಕು...

-ರಾಘವೇಂದ್ರ ಗುಡಿ