ಸ್ಟೀಫಾನ್ ಹಾಕಿಂಗ್‌ಗೆ ಸಹಾಯಕ ಬೇಕಾಗಿದ್ದಾರೆ




ಸ್ತೀಫಾನ್ ಹಾಕಿಂಗ್ ಬಗ್ಗೆ ಕೇಳದವರೇ ಇರಲಿಕ್ಕಿಲ್ಲ.ಬ್ರಿಟನಿನ ಈ ಭೌತಶಾಸ್ತ್ರಜ್ಞ,ಗಾಲಿ ಕುರ್ಚಿಯ ಮೇಲೆ ಕುಳಿತು ತಮ್ಮ ಅದ್ಭುತ ಸಂಶೋಧನೆಗಳನ್ನು ಮಾಡುತ್ತಿದ್ದಾರೆ.ಅವರ ಇಡೀ ದೇಹ ಪಾರ್ಶ್ವವಾಯು ಪೀಡಿತವಾದಂತೆ ಜಡವಾಗಿದೆ.ಅವರ ದೇಹದಲ್ಲಿ ಮಿದುಳು ಮಾತ್ರಾ ಬಹು ಕ್ರಿಯಾಶೀಲವಾಗಿರುವ ಅಂಗ.ಅವರು ಮಾತಿನ ಶಕ್ತಿ ಕಳೆದುಕೊಂಡು ಈಗಾಗಲೇ ಇಪ್ಪತ್ತೈದು ವರ್ಷವಾಯಿತು.ಇಲೆಕ್ಟ್ರಾನಿಕ್ ಸಿಂಥೆಸೈಸರ್ ಬಳಸಿ,ಅವರ ತುಟಿಗಳ ಚಲನೆಯನ್ನು ಮಾತಾಗಿ ಬದಲಿಸಬೇಕಿದೆ.ಅವರು ಲೈಟುಗಳನ್ನು ಚಾಲೂ ಮಾಡಲು ರಿಮೋಟ್ ಬಳಸಬೇಕು.ಅದೂ ಅವರ ದೇಹದ ಚಲನೆಯನ್ನು ಗುರುತಿಸಿ ಕಾರ್ಯಾಚರಿಸುವ ಬಗೆಯಾಗಿದೆ.ಅವರ ಗಾಲಿ ಕುರ್ಚಿಯಲ್ಲಿ,ಇದಕ್ಕೆಲ್ಲಾ ನೆರವಾಗುವ ಕಂಪ್ಯೂಟರ್ ವ್ಯವಸ್ಥೆಯಿದೆ.ಇದನ್ನೆಲ್ಲಾ ನೋಡಿಕೊಂಡು,ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ಕೆಟ್ಟಾಗ ರಿಪೇರಿ ಮಾಡಬಲ್ಲ ಸಹಾಯಕನು ಬೇಕೆಂದು ಸ್ಟೀಫಾನ್ ಹಾಕಿಂಗ್ ಅವರು ತಮ್ಮ ಅಂತರ್ಜಾಲ ತಾಣದಲ್ಲಿ ಜಾಹೀರಾತು ಕೊಟ್ಟಿದ್ದಾರೆ.ಸಹಾಯಕನಾಗುವವನು ಪ್ರವಾಸ ಹೋಗಲು ಸಿದ್ಧರಿರಬೇಕು ಯಾಕೆಂದರೆ,ಅವರು ಇಂತಹ ಸ್ಥಿತಿಯಲ್ಲೂ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹೊಂದಿರುತ್ತಾರೆ.ಸಂಬಳ ವರ್ಷಕ್ಕೆ ಮೂವತ್ತೆಂಟುಸಾವಿರ ಡಾಲರ್‌ಗಿಂತ ಹೆಚ್ಚು.
------------------------------------------------------
ಗೂಗಲ್‌ಗೆ ಫೇಸ್‌ಬುಕ್ ಸ್ಪರ್ಧೆ
ಸರಿದು ಹೋದ ವರ್ಷ 2011ದಲ್ಲಿ ಅಂತರ್ಜಾಲದ ಮಟ್ಟಿಗೆ ಫೇಸ್‌ಬುಕ್-ಗೂಗಲ್ ನಡುವಿನ ಹಣಾಹಣಿ ಒಂದು ಮುಖ್ಯ ಅಂಶವಾಗಿತ್ತು.ಹಿಂದೆಲ್ಲಾ ಯಾವುದೇ ವಿಷಯದ ಬಗ್ಗೆ ತಿಳಿಯಬೇಕಾದವರು,ಗೂಗಲ್ ತಾಣದ ಮೂಲಕ ಶೋಧ ನಡೆಸಿ,ಮುಂದುವರಿಯುವ ಕಾರಣ,ಗೂಗಲ್ ತಾಣದಲ್ಲಿ ಜನರು ಕಳೆಯುವ ಸಮಯ ಹೆಚ್ಚುತ್ತಿತ್ತು.ಈಗ ಜನ ಹೆಚ್ಚು ಹೆಚ್ಚು ಫೇಸ್‌ಬುಕ್ ತಾಣಕ್ಕೆ ಹೋಗುವ ಪ್ರವೃತ್ತಿ ಹೆಚ್ಚಿದೆ.ಅಲ್ಲಿ ತಮ್ಮ ಸ್ನೇಹಿತರು ಹಂಚಿಕೊಂಡ ಸಂಗತಿಗಳನ್ನು ನೋಡುವುದೇ ಹೆಚ್ಚಿನವರು ಅಂತರ್ಜಾಲದಲ್ಲಿ ಕಳೆಯುವ ಸಮಯವನ್ನು ವ್ಯಯಿಸುವ ಪರಿಯಾಗಿದೆ.ಫೇಸ್‌ಬುಕ್ ತಿಂಗಳಿಗೆ ಹದಿಮೂರು ಕೋಟಿಗೂ ಹೆಚ್ಚು ಜನರ ಭೇಟಿಯನ್ನು ಕಾಣುತ್ತಿದೆ.ಗೂಗಲ್ ಮುಂದಿದ್ದರೂ,ಈ ಮುನ್ನಡೆ ಹೆಚ್ಚೇನೂ ಇಲ್ಲ-ಹದಿನೈದು ಕೋಟಿ ಜನರು ಗೂಗಲ್ ತಾಣವನ್ನು ಪ್ರತಿ ತಿಂಗಳೂ ಬಳಸುತ್ತಾರೆ.ಫೇಸ್‌ಬುಕ್ ತಾಣದಲ್ಲಿ ಜನರು ತಮ್ಮ ಅಂತರ್ಜಾಲ ಸಮಯದ ಶೇಕಡಾ ಹದಿನಾರು ಭಾಗ ಕಳೆಯುತ್ತಿದ್ದಾರೆ.ಈ ಸ್ಪರ್ಧೆಯಿಂದ ಕಂಗೆಟ್ಟಿರುವ ಗೂಗಲ್,ಈಗ ಗೂಗಲ್ ಪ್ಲಸ್ ಮೂಲಕ ಸಾಮಾಜಿಕ ಜಾಲತಾಣವನ್ನು ಆರಂಭಿಸಿ,ಪೇಸ್‌ಬುಕ್ ತಾಣಕ್ಕಿಂತ ಹೇಗಾದರೂ ಮುನ್ನಡೆಯಲ್ಲಿರಲು ಶತಪ್ರಯತ್ನ ಮಾಡುತ್ತಿದೆ.
2011 ಟ್ವಿಟರ್ ಹಾಗೂ ಫೇಸ್‌ಬುಕ್ ಅಂತಹ ತಾಣಗಳು ಸಾಮಾಜಿಕ ಚಳುವಳಿಗೆ ಬಳಕೆಯಾಗುವುದಕ್ಕೂ ನಾಂದಿ ಹಾಡಿದೆ.ಟ್ವಿಟರ್ ಸಂದೇಶಗಳೇ ಸುದ್ದಿ ಮಾಡುವುದೂ ಹೊಸ ವೈಖರಿಯಾಗಿದೆ.ಗಣ್ಯರು ಟ್ವಿಟರ್ ತಾಣಗಳ ಮೂಲಕ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಮೂಲಕ ಇಂತಹ ಸುದ್ದಿ ಸ್ಫೋಟ ಸಂಭವಿಸುತ್ತಿದೆ.
--------------------------------------------------------
ಸೆಕ್ಸ್ ಬಗ್ಗೆ ಶೋಧಿಸುವ ಭಾರತೀಯರು
ಭಾರತ ಸೆಕ್ಸ್ ಬಗ್ಗೆ ಶೋಧಿಸಲು ಅಂತರ್ಜಾಲ ಬಳಸುವ ದೇಶಗಳ ಪೈಕಿ ಅಗ್ರಗಣ್ಯ ಸ್ಥಾನ ಪಡೆದಿದೆ.ಆ ಬಗ್ಗೆ ಶೋಧಿಸುವ ಜಗತ್ತಿನ ನಗರಗಳ ಪಟ್ಟಿ ಮಾಡಿದಾಗ,ಮೊದಲ ಹತ್ತು ಸ್ಥಾನಗಳ ಪೈಕಿ ಏಳು ಸ್ಥಾನಗಳು ಭಾರತದ ನಗರಗಳು ಪಡೆದಿವೆ.ಅವುಗಳಲ್ಲಿ ಮುಂಬೈ,ಚೆನ್ನೈ,ಕೊಲ್ಕತಾ,ದೆಹಲಿ ಹೊರತು ಪಡಿಸಿದರೆ,ಬೆಂಗಳೂರು,ಪುಣೆ ಮತ್ತು ಲಕ್ನೋವೂ ಸೇರಿವೆ.ಕೊಲಂಬೋ,ಲಾಹೋರ್,ಹಾನೊಯ್ ಹತ್ತರ ಪಟ್ಟಿಯಲ್ಲಿ ಕಾಣಿಸುವ ಇತರ ನಗರಗಳು.ಚುಂಬಿಸುವುದು ಹೇಗೆ ಎನ್ನುವುದರ ಬಗ್ಗೇ ಅತಿ ಹೆಚ್ಚು ಜನ ತಲೆ ಕೆಡಿಸಿಕೊಂಡಿರುವ ಹಾಗೆ ಗೂಗಲ್ ಶೋಧದ ಟ್ರೆಂಡ್‌ಗಳು ತೋರಿಸುತ್ತಿವೆ!
--------------------------------------------
ಆಂಡ್ರ್ರಾಯಿಡ್ ಫೊನ್:ನಕಲಿ ಸಿರಿ ಹಾವಳಿ
ಐಫೋನುಗಳಲ್ಲಿ ಸಹಾಯಕನಂತೆ ನೆರವಾಗಬಲ್ಲ ಸಿರಿ ತಂತ್ರಾಂಶ ಭಾರೀ ಸುದ್ದಿ ಮಾಡಿತ್ತು.ಸಿರಿ ತಂತ್ರಾಂಶ,ಜನರ ಮಾತಿಗೆ ಸ್ಪಂದಿಸುವ ಸಾಮರ್ಥ್ಯ ಹೊಂದಿದೆ.ಧ್ವನಿಯ ಆಜ್ಞೆಗಳನ್ನು ಪಾಲಿಸುವ ಇತರ ತಂತ್ರಾಂಶಗಳಿಗಿಂತ ಸಿರಿ ವಿಬಿನ್ನ.ಇದು ಹೇಗೆಂದರೆ,ಇದರಲ್ಲಿ ನಿಗದಿತ ಶಬ್ದಗಳನ್ನಷ್ಟೇ ಹೇಳಿ ಕೆಲಸ ಮಾಡಿಕೊಳ್ಳಿಸಬೇಕಿಲ್ಲ.ಇದು ಜನರಾಡುವ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸಮರ್ಥವಾಗಿದೆ.ಪೂರಕ ಮಾಹಿತಿಯನ್ನು ಒದಗಿಸಲೂ ಅದಕ್ಕೆ ಸಾಧ್ಯವಿದೆ.ಮಿಂಚಂಚೆ,ಶೋಧ,ಹವಾಮಾನ,ಕ್ಯಾಲೆಂಡರ್,ಸಂಗೀತ,ವೀಡಿಯೋ,ಫೋನ್‌ಗೆ ಸಂಬಂಧಿಸಿದ ತಂತ್ರಾಂಶಗಳ ಜತೆಯೂ ಸಿರಿ ಕೆಲಸ ಮಾಡಬಲ್ಲುದು.ಹಾಗಾಗಿ ಫೋನ್ ಕರೆ ಮಾಡಲು,ಹವಾಮಾನದ ಬಗ್ಗೆ ತಿಳಿಯಲು,ಕಾರ್ಯಕ್ರಮ ನಿಗದಿಪಡಿಸಲು,ಶೋಧಿಸಲು,ಬೇಕಾದ ಹಾಡನ್ನು ನುಡಿಸಲು-ಹೀಗೆ ಪ್ರತಿಯೊಂದಕ್ಕೂ ಸಿರಿಯನ್ನು ಬಳಸಬಹುದು.ಇಂತಹ ತಂತ್ರಾಂಶಕ್ಕಾಗಿ ಆಂಡ್ರಾಯಿಡ್ ಫೋನ್ ಬಳಕೆದಾರರು ಕಾತರದಿಂದ ನಿರೀಕ್ಷಿಸುತ್ತಿರುವಂತೆ,ಹಲವರು ಇದೇ ಹೆಸರಿನ ತಂತ್ರಾಂಶಗಳನ್ನು ಆಂಡ್ರಾಯಿಡ್ ಸ್ಟೋರಿನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.ಆದರಿವು ಮೂಲ ಐಫೋನ್ ಸಿರಿಯ ಹಾಗೆ ಕೆಲಸ ಮಾಡದೆ,ನಕಲಿ ಶಾಮಣ್ಣರಾಗಿವೆ.ಇತ್ತೀಚಿನ ಸಿರಿ ಹೆಸರಿನ ತಂತ್ರಾಂಶ ಧ್ವನಿಗೆ ಸ್ಪಂದಿಸುತ್ತದಾದರೂ,ಅದು ಗೂಗಲ್‌ನ ಧ್ವನಿ ಗುರುತಿಸುವ ತಂತ್ರಾಂಶವನ್ನು ಬಳಸಿ ಕೆಲಸ ಮಾಡುವ ತಂತ್ರಾಂಶ.ಹಾಗಿದ್ದೂ ಇದು ಸಿರಿಗೆ ಸಾಟಿಯಾಗದು.ಇಂತಹ ತಂತ್ರಾಂಶಗಳು ನಕಲಿ ಎಂದಾದರೆ,ಗೂಗಲ್ ಅದನ್ನು ಆಂಡ್ರಾಯಿಡ್ ಸ್ಟೋರಿನಿಂದ ಕಿತ್ತೆಸೆಯುತ್ತದೆ ಎನ್ನುವುದು ಬೇರೆ ವಿಷಯ.
-------------------------------------------
ಮಾರುವ ಯಂತ್ರಗಳ ಸುತ್ತ ವೈ-ಫೈ
ಜಪಾನಿನಲ್ಲಿ ವಿವಿಧ ವಸ್ತುಗಳನ್ನು ಮಾರಲು ವೆಂಡಿಂಗ್ ಯಂತ್ರಗಳನ್ನು ಬಳಸುತ್ತಿದ್ದಾರೆ.ಕಡಿಮೆ ಜಾಗ ಸಾಕೆನ್ನುವುದು,ಈ ಮಾರುವ ಯಂತ್ರಗಳ ಸ್ಥಾಪನೆಯ ಹಿಂದಿನ ಗುಟ್ಟು.ಪಾನೀಯಗಳನ್ನು ಮಾರುವುದರಿಂದ ಯಾವುದೇ ವಸ್ತುವನ್ನು ಮಾರಲು ಇವು ಸೂಕ್ತವಾಗಿವೆ.ಮೊದಲೆಲ್ಲಾ ನಾಣ್ಯ ತುರುಕಿ,ಇವನ್ನು ಬಳಸಬೇಕಿದ್ದರೆ,ಈಗ ಮೊಬೈಲ್ ಮೂಲಕವೂ ಪಾವತಿಸಬಹುದು.ಈಗ ಜನರನ್ನು ಆಕರ್ಷಿಸಲು,ವೆಂಡಿಂಗ್ ಯಂತ್ರಗಳನ್ನು ಅಂತರ್ಜಾಲ ಸಂಪರ್ಕಕ್ಕೆ ಬಳಸಲು ಅನುವು ನೀಡುವ ವೈ-ಫೈ ಜಾಲ ಏರ್ಪಡಿಸುವ ಹಾಟ್‌ಸ್ಪಾಟ್ ಆಗಿಯೂ ಯಂತ್ರಗಳನ್ನು ಬಳಸುವ ಪ್ರವೃತ್ತಿ ಶುರುವಾಗಿದೆ.ಇವುಗಳ ಸುತ್ತ ಐವತ್ತು ಮೀಟರ್ ತ್ರಿಜ್ಯದಲ್ಲಿ ವೈ-ಫೈಯನ್ನು ಉಚಿತವಾಗಿ ಪಡೆಯಬಹುದು.ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್,ಲ್ಯಾಪ್‌ಟಾಪ್ ಮುಂತಾದ ಸಾಧನಗಳಲ್ಲಿ ಅಂತರ್ಜಾಲ ಜಾಲಾಟಕ್ಕೆ ವೈ-ಫೈ ಅನುವು ಮಾಡುತ್ತದೆ.ಒಮ್ಮೆಗೆ ಅರ್ಧ ಗಂಟೆ ಕಾಲ ಜಾಲಾಡಲು ಬಳಕೆದಾರನಿಗೆ ಅವಕಾಶ ಸಿಗುತ್ತದೆ.ನಂತರ ಸಂಪರ್ಕ ಕಡಿಯುತ್ತದೆ.ಬಳಿಕ ಜಾಲಾಟ ಮುಂದುವರಿಸಲು ಮತ್ತೊಮ್ಮೆ ಸಂಪರ್ಕ ಸಾಧಿಸಬೇಕು.ಮುಂದಿನ ವರ್ಷದಲ್ಲಿ ಒಂದು ಸಾವಿರ ವೆಂಡಿಂಗ್ ಯಂತ್ರಗಳಲ್ಲಿ ವೈ-ಫೈ ಸಿಗಲಿದೆ.ಉಚಿತವಾಗಿ ಈ ಸೇವೆ ನೀಡಿದ್ದಕ್ಕೆ,ಸೇವೆಯ ಜತೆಗೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ.ಈ ಜಾಹೀರಾತುಗಳು ಸುತ್ತಲಿನ ವ್ಯವಹಾರದ ಬಗೆಗೆ ಇರುತ್ತವೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ.ಅಂಗಡಿ-ಮುಂಗಟ್ಟುಗಳ ಬಗ್ಗೆ,ಅಲ್ಲಿ ಲಭ್ಯವಿರುವ ಕಡಿತದ ಮಾರಾಟದ ಬಗೆಗೆ ಜಾಹೀರಾತುಗಳು ಇರುವುದು ಸಾಮಾನ್ಯ.
------------------------------------------------
ಅಗ್ಗದ ಸಾಧನ ಕೊಂಡರೆ ಜಾಹೀರಾತು 
ಕಿಂಡ್ಲ್ ಟ್ಯಾಬ್ಲೆಟ್ ಸಾಧನ ಎಪ್ಪತ್ತೊಂಭತ್ತು ಡಾಲರಿಗೂ ಸಿಗುತ್ತದೆ,ಹಾಗೆಯೇ ನೂರ ಒಂಬತ್ತು ಡಾಲರಿನ ಕಿಂಡ್ಲ್ ಕೂಡಾ ಇದೆ.ವ್ಯತ್ಯಾಸ ಏನು ಗೊತ್ತೇ? ಅಗ್ಗದ ಸಾಧನ ಕೊಂಡು ಬಳಸುವಾಗ ಜಾಹೀರಾತು ನೋಡಲು ಬಳಕೆದಾರ ತಯಾರಿರಬೇಕು.ದುಬಾರಿ ಹಣ ತೆತ್ತ ಬಳಕೆದಾರನಿಗೆ ಇ-ಪುಸ್ತಕಗಳ ಜತೆ ಜಾಹೀರಾತು ಮೂಡದು.ಕಿಂಡ್ಲ್ ಮಾರುವ ಅಮೆಜಾನ್ ಕಂಪೆನಿ,ಇದರ ಬಗ್ಗೆ ಹೆಚ್ಚು ಪಾರದರ್ಶಕವಾಗಿರದ ಕಾರಣ,ಬಳಕೆದಾರರು ಬೇಸ್ತು ಬೀಳುವುದಿದೆ.
----------------------------------------------

ಅಶೋಕ್‌ಕುಮಾರ್ ಎ