ಗೂಗಲ್ ಗಾಗಲ್ಸ್

ಗೂಗಲ್ನ ಹಲವು ಸೇವೆಗಳನ್ನು ಬಳಸಿ,ವಿಶಿಷ್ಟ ಅನುಭವ ನೀಡುವ ಅದ್ಭುತ ಕಲ್ಪನೆಯ ಗೂಗಲ್ ಕನ್ನಡಕ ಈ ವರ್ಷದ ಅಂತ್ಯದ ವೇಳೆಗೆ ಲಭ್ಯವಾಗಲಿದೆಯೆಂಬುದು ಬಿಸಿಬಿಸಿ ಸುದ್ದಿ.ಗೂಗಲ್ ಗಾಗಲ್ಸ್,ಬರೇ ಗಾಗಲ್ಸ್ ಅಲ್ಲ-ಇದರಲ್ಲಿ ಕ್ಯಾಮರಾ,ಸಂವೇದಕಗಳು ಮತ್ತು ನಿಸ್ತಂತು ಅಂತರ್ಜಾಲ ಸಂಪರ್ಕ ಎಲ್ಲವೂ ಲಭ್ಯವಿವೆ.ಕ್ಯಾಮರಾವು ಗಾಗಲ್ಸ್ನ ಮುಂಭಾಗದ ದೃಶ್ಯಗಳನ್ನು ಸೆರೆ ಹಿಡಿಯಲು ಅನುವಾಗುವ ಹಾಗೆ ಅಳವಡಿಸಲಾಗಿರುತ್ತದೆ.ಕಚೇರಿಗೆ ಹೊರಟ ಗಾಗಲ್ಸ್ಧಾರಿ ಯಾವೆಡೆಗೆ ಸಾಗಬೇಕೆಂದು ಸೂಚಿಸಿದರೆ,ಗೂಗಲ್ ನಕ್ಷೆ ಬಳಸಿ ದಾರಿಯನ್ನು ಗಾಗಲ್ಸ್ನ ತೆರೆಯಲ್ಲಿ ಮೂಡಿಸಲಾಗುತ್ತದೆ.ಧರಿಸಿದವ ಸಾಗಿದಂತೆ,ಆತನಿಗೆ ಅಲ್ಲಿನ ವಾಣಿಜ್ಯ ಮಳಿಗೆಗಳಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ತಿಳುವಳಿಕೆ ಸಿಗುತ್ತದೆ.ರಸ್ತೆಯಲ್ಲಿ ಅಡೆತಡೆಗಳಿದ್ದರೆ,ಬೇರೆ ದಾರಿ ಹಿಡಿಯಲು ಸೂಚನೆ ಸಿಗುತ್ತದೆ.ಹೊಸ ಪ್ರದೇಶದಲ್ಲಿ ಸಾಗುವಾಗ,ವಸ್ತು ಸಂಗ್ರಾಹಲಯಕ್ಕೆ ಭೇಟಿ ಕೊಟ್ಟರೆ,ಗೂಗಲ್ ಶೋಧ ಬಳಸಿ,ಗಾಗಲ್ಸ್ಧಾರಿ ನಿಂತಿರುವ ವಸ್ತುವಿನ ಬಗ್ಗೆ ಭರಪೂರ ಮಾಹಿತಿ ಸಿಗುತ್ತದೆ.ಬರೇ ಲಿಪಿ ಆಧಾರಿತ ಮಾಹಿತಿ ಅಂದುಕೊಳ್ಳಬೇಡಿ-ಆಡಿಯೋ ಮತ್ತು ವಿಡಿಯೋಗಳನ್ನೂ ಹುಡುಕಿ,ತೆರೆಯಲ್ಲಿ ವಿಡಿಯೋ ದೃಶ್ಯಗಳು ಮೂಡಿದಂತೆ,ಕಿವಿಯಲ್ಲಿ ಆಡಿಯೋ ಕೇಳಿಸುತ್ತದೆ.ಸ್ಮಾರ್ಟ್ಪೋನ್ ಬೆಲೆಯಲ್ಲಿ ಈ ಗಾಗಲ್ಸ್ ಸಿಗುವ ಸೂಚನೆಗಳಿವೆ.ಗೂಗಲ್ ತನ್ನ ಹೊಸ ಉತ್ಪನ್ನದ ಬಗ್ಗೆ ಬಾಯಿ ಬಿಡುತ್ತಿಲ್ಲ.
--------------------------------------------------------
ತುಸು ಬರವೂ ನಾಗರಿಕತೆಗೆ ಎರವಾಯಿತೇ?
ಮಾಯಾ ನಾಗರಿಕತೆ ತನ್ನ ಭಾಷಾ ಪ್ರೌಢಿಮೆ,ಗಣಿತಶಾಸ್ತ್ರ ಮತ್ತು ಖಗೋಳವಿಜ್ಞಾನದಲ್ಲಿನ ಜ್ಞಾನಕ್ಕಾಗಿ ಹೆಸರು ಮಾಡಿದ ನಾಗರಿಕತೆಯಾಗಿತ್ತು.ಆದರಿದು ನಾಶವಾಗಿ ಹೋಯಿತು.ಇದಕ್ಕೆ ಕಾರಣ ಆ ಕಾಲಘಟ್ತದಲ್ಲಿ ಬಂದ ಕೆಲವು ವರ್ಷಗಳ ತುಸು ಬರ ಪರಿಸ್ಥಿತಿ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.ಮೆಕ್ಸಿಕೋ ಮತ್ತು ಬ್ರಿಟನ್ ಸಂಶೋಧಕರ ಪ್ರಕಾರ,ಮಾಯಾ ನಾಗರಿಕತೆ ನೀರಿಗಾಗಿ ಮಳೆಯನ್ನೇ ಅವಲಂಬಿಸಿತ್ತು.ಕೆಲವು ವರ್ಷಗಳು ಸತತವಾಗಿ ಮಳೆಯಲ್ಲಿ ಕೊರತೆಯುಂಟಾಗಿ,ಇದ್ದ ನೀರಿನ ಮೂಲಗಳೂ ಒಣಗಿ ಹೋಗಿ,ಅವರಿಗೆ ಕುಡಿವ ನೀರಿನ ಕೊರತೆಯೆದುರಿಸಬೇಕಾಗಿ ಬಂತು.ಇದುವೇ ನಾಗರಿಕತೆ ಅಳಿಸಿಹೋಗಲು ಕಾರಣವಾಯಿತು.ಈಗದ ಮಟ್ಟಿಗೆ ಹೇಳುವುದಾದರೆ,ಇಂತಹ ಪರಿಸ್ಥಿತಿಯನ್ನು ಎದುರಿಸಲು ಹೆಚ್ಚು ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳಿವೆ.ಆದರೆ ನದಿ ಮತ್ತು ಇತರ ನೀರಿನ ಮೂಲಗಳಿಲ್ಲದ ಆಗಿನ ಮಾಯಾ ನಾಗರೀಕತೆ,ವಲಸೆಯ ಹೊರತಾಗಿಯೂ ಅಳಿಸಿಯೇ ಹೋಯಿತು ಎಂದು ಸಂಶೋಧಕರು ಹೇಳುತ್ತಾರೆ.
-------------------------------------------
ನಾಲಿಗೆ ಮೂಲಕ ವೀಲ್ಚೇರ್ ನಿಯಂತ್ರಣ
ನಾಲಿಗೆಗೆ ಅಳವಡಿಸಿದ ಕಿರುಅಯಸ್ಕಾಂತೀಯ ತುಂಡೊಂದರ ಸ್ಥಾನವನ್ನು ಬಾಯಿಯೊಳಗೆ ಅಳವಡಿಸಿದ ಕಾಂತಕ್ಷೇತ್ರ ಪತ್ತೆ ಮಾಡುವ ಸೆನ್ಸರುಗಳ ಮೂಲಕ ಐಫೋನಿಗೆ ನಿಸ್ತಂತು ಸಂಪರ್ಕದ ಮೂಲಕ ತಿಳಿಯ ಪಡಿಸಿ,ಐಫೋನಿಗೆ ಸಂಪರ್ಕಿಸಿದ,ವೀಲ್ಚೇರನ್ನು ಅತ್ತಿತ್ತ ತಿರುಗಿಸುವ ಅಪ್ಲಿಕೇಶನ್ ಈಗ ಲಭ್ಯವಿದೆ.ಐಫೋನಿನ ಈ ಅಪ್ಲಿಕೇಶನ್ನ್ನು ಅನುಸ್ಥಾಪಿಸಿದರೆ ನಾಲಿಗೆಯ ಮಧ್ಯೆ ಅಳವಡಿಸಿದ ಅಯಸ್ಕಾಂತ ತುಂಡನ್ನು ಬೇಕಾದ ದಿಕ್ಕಿನ ಕಡೆ ಸೂಚಿಸಿ,ವೀಲ್ಚೇರಿನ ಮೇಲೆ ಕುಳಿತವನು ನಿರ್ದೇಶಿಸಬಹುದು.
----------------------------------------
ನಿಮ್ಮ ಪಕ್ಕ ಯಾರು ಕುಳಿತರಬೇಕು?
ವಿಮಾನಯಾನದ ವೇಳೆ ನಿಮ್ಮ ಪಕ್ಕ ನಿಮ್ಮ ಆಸಕ್ತಿಗನುಗುಣವಾದ ಸಹಪ್ರಯಾಣಿಕೆ ಕುಳಿತರೆ ಒಳಿತು ಎಂದು ನಿಮಗನಿಸಿದರೆ,ಅಂತವರನ್ನು ಆ ದಿನದ ಪ್ರಯಾಣಿಕರ ಪೈಕಿ ಕಂದುಕೊಳ್ಳುವ ವಿನೂತನ ಸವಲತ್ತು ಇದೀಗ ಲಭ್ಯ.ಏರ್ ಫ್ರಾನ್ಸ್.ಲುಫ್ತಾನ್ಸಾ,ವರ್ಜಿನ್ ಅಟ್ಲಾಂಟಿಕ್ ಅಂತಹ ಕೆಲವು ವೈಮಾನಿಕ ಸಂಸ್ಥೆಗಳು ಫೇಸ್ಬುಕ್ ಅಥವಾ ಲಿಂಕ್ಡ್ಇನ್ ಅಂತಹ ಸಾಮಾಜಿಕ ತಾಣಗಳ ಪ್ರಯಾಣಿಕನ ವ್ಯಕ್ತಿಚಿತ್ರಣವನ್ನು ಅಪ್ಲೋಡ್ ಮಾಡಿ,ಪ್ರಯಾಣಿಕರುಗಳಿಗೆ ತಮ್ಮ ಪಕ್ಕ ಯಾರು ಕುಳಿತುಕೊಳ್ಳಬೇಕು ಎನ್ನುವುದನ್ನು ಸೂಚಿಸಲು ಅನುವು ಮಾಡಿಕೊಟ್ಟಿವೆ.ಪ್ರಯಾಣಿಕರಲ್ಲಿ ನಿಮ್ಮ ಗೆಳೆಯರೇ ಇದ್ದರೆ ತೊಂದರೆಯೇ ಇಲ್ಲ.ಅಪರಿಚಿತರ ಬಗ್ಗೆ ಅವರ ಸಾಮಾಜಿಕ ಜಾಲತಾಣಗಳ ವ್ಯಕ್ತಿಚಿತ್ರಣದಿಂದ ತಿಳಿದುಕೊಂಡು,ನಿಮ್ಮ ಆಸಕ್ತಿಗನುಗುಣವಾದ ವ್ಯಕ್ತಿಯನ್ನು ನಿಮ್ಮ ಸಮೀಪ ಕುಳಿತುಕೊಳ್ಳಲು ಆಯ್ಕೆ ಮಾಡಬಹುದು.ತುಸು ಜಾಸ್ತಿ ದರ ನೀಡಿ,ನಿಮ್ಮ ಪಕ್ಕ ಯಾರೂ ಬೇಡವೆಂದೂ ಆಯ್ದುಕೊಳ್ಳಲು ಸಾಧ್ಯ.ಒಂದುವೇಳೆ ವಿಮಾನ ಭರ್ತಿಯಾದರೆ,ನಿಮ್ಮ ಹೆಚ್ಚಿನ ದರ ವಾಪಸ್ಸು ನೀಡಿ,ಯಾರನ್ನಾದರೂ ನಿಮ್ಮ ಪಕ್ಕ ಕುಳಿತುಕೊಳ್ಳಿಸುವ ಹಕ್ಕು ವೈಮಾನಿಕ ಸಂಸ್ಥೆಗಿದೆ.
-------------------------------------------------------
ದುರ್ಬಲರ ಕೂಗು ಕೇಳಿಸುವ "ಸ್ವರ"
ಛತ್ತೀಸ್ಘರ್ನ ಆದಿವಾಸಿಗಳು ವಸ್ತುಶ: ಹೊರಜಗತ್ತಿನ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ವಾಸವಿದ್ದಾರೆ.ನದಿಗಳನ್ನು ದಾಟಿ,ಮೈಲುಗಟ್ಟಲೆ ನಡೆದು ಪಟ್ಟಣಗಳಿಗೆ ಬರಬೇಕಾದ ಪರಿಸ್ಥಿತಿ ಇಲ್ಲಿಯದ್ದು.ಹಾಗಾಗಿ ಬೇಸತ್ತ ಜನರು ನಕ್ಸಲ್ ಚಟುವಟಿಕೆಗಳ ಮೂಲಕ ಸರಕಾರದ ಗಮನ ಸೆಳೆಯಲು ಪ್ರಯತ್ನಿಸುವುದರಲ್ಲಿ ಅಚ್ಚರಿಯೇನೂ ಇಲ್ಲ.ಮೊಬೈಲ್ ಸಂಪರ್ಕ ಇಲ್ಲಿನವರಿಗೆ ಈಗ ಲಭ್ಯವಾಗಿರುವುದು ತುಸು ಬದಲಾವಣೆ ತಂದಿದೆ.ಮೊಬೈಲ್ ಫೋನ್ ಕಡು ಹಳ್ಳಿಗಳನ್ನು ಹೊರಜಗತ್ತಿನ ಜತೆ ಬೆಸೆಯಲಾರಂಭಿಸಿದೆ.ಇಲ್ಲಿನ ಸಮಾಚಾರ ಮತ್ತು ಆಗುಹೋಗುಗಳನ್ನು ಹೊರಜಗತ್ತಿಗೆ ತಿಳಿಯಪಡಿಸಲು "ಸಿಜಿನೆಟ್ಸ್ವರ" ಎನ್ನುವ ಧ್ವನಿ ಆಧಾರಿತ ಸೇವೆ ಕೂಡಾ ಆರಂಭವಾಗಿದೆ.ನಿಗದಿತ ಸಂಖ್ಯೆಗೆ ಕರೆ ಮಾಡಿದಾಗ,ವರದಿಯನ್ನು ಧ್ವನಿಮುದ್ರಿಸಿಕೊಳ್ಳುವ ಅಥವಾ ಕೇಳಿಸುವ ಆಯ್ಕೆ ಲಭ್ಯವಾಗುತ್ತದೆ.ಕೇಳಲಾದರೆ ಲಭ್ಯವಿರುವ ವರದಿಗಳಲ್ಲಿ ಬೇಕಾದ್ದನ್ನು ಆಲಿಸಬಹುದು.ಒಂದುವೇಳೆ ಧನಿಮುದ್ರಿಸಲಾಯ್ಕೆ ಮಾಡಿಕೊಂಡರೆ,ಕರೆ ಮಾಡಿದಾತನು ತನ್ನ ವರದಿಯನ್ನು ಒಪ್ಪಿಸಬಹುದು.ನಂತರ ಸಂಪಾದಕ ಮಂಡಲಿ,ವರದಿಯನ್ನು ಪರಿಶೀಲಿಸಿ,ಸೂಕ್ತವಾಗಿ ಕತ್ತರಿಪ್ರಯೋಗ ಮಾಡಿ,ವರದಿಯನ್ನು ಇತರರಿಗೂ ಕೇಳಲು ಅನುವು ಮಾಡಿಕೊಡಬಹುದು.ಸ್ವರ ಸೇವೆ ಬಹುಜನಪ್ರಿಯವಾಗಿದೆಯಲ್ಲದೆ,ಜನರ ಸಮಸ್ಯೆಗಳನ್ನು ಪರಿಹರಿಸಲೂ ಹೊಸ ಮಾಧ್ಯಮವಾಗಿ ಮೂಡಿಬರುತ್ತಿದೆಯೆಂದು ಸಿಎನ್ಎನ್ ವರದಿ ಮಾಡಿದೆ.ಇದರ ಯಶಸ್ಸಿನಿಂದ ಉತ್ತೇಜಿತರಾಗಿ ಇಂಡೋನೇಶ್ಯಾದದಲ್ಲು ಇಂತಹದ್ದೇ ಸೇವೆ ಆರಂಭಿಸಲಾಗಿದೆ.
-----------------------------------------------------
ಫೇಸ್ಬುಕ್ ಸ್ಕೋರ್ ಅಳೆದು ನೌಕರಿ!
ಅಮೆರಿಕಾದಲ್ಲಿ ಜನರ ಐಕ್ಯು,ಸಾಲದರ್ಹತೆಯ ಸ್ಕೋರು ಹೀಗೆ ವ್ಯಕ್ತಿಯ ಬಗೆಗಿನ ದತ್ತಾಂಶಗಳನ್ನು ಅಳೆದು ಆತನ ಮೌಲ್ಯಮಾಪನ ಮಾಡುವ ಹುಚ್ಚು ಹೆಚ್ಚಿದೆ.ಈಗದಕ್ಕೆ ಜನರ ಫೇಸ್ಬುಕ್ ಖಾತೆಯಿಂದ ತೆಗೆದ ಮಾಹಿತಿಯ ಮೂಲಕ ನೀಡಲಾಗುವ ಫೇಸ್ಬುಕ್ ಸ್ಕೋರ್,ಸಂಗೀತ ರಸಿಕ ಸ್ಕೋರ್ ಇತ್ಯಾದಿಗಳು ಸೇರಿಕೊಳ್ಳಲಿವೆಯಂತೆ.ವ್ಯಕ್ತಿಯ ನೌಕರಿ ಅರ್ಜಿಯ ಮೌಲ್ಯಮಾಪನ ಮಾಡುವಾಗ,ಆತನು ಸಾಮಾಜಿಕ ಜಾಲತಾಣದಲ್ಲಿ ಹೊಂದಿರುವ ಇಮೇಜ್ ಯಾವಬಗೆಯದ್ದು ಎಂದಳೆದು ನೀಡುವ ಫೇಸ್ಬುಕ್ ಸ್ಕೋರನ್ನು ಬಳಸುವ ಪರಿಕಲ್ಪನೆ ಕೆಲವು ಕಂಪೆನಿಗಳಿಗೆ ಬಂದಿದೆ.ಆತನ ಇಮೇಜ್ ಚೆನ್ನಾಗಿದ್ದರೆ,ಆತನನ್ನು ನೌಕರಿಗೆ ಪರಿಗಣಿಸುವುದು,ಇಲ್ಲವಾದರೆ,ಅವನನ್ನು ತಿರಸ್ಕರಿಸುವುದು ಹೊಸ ಖಯಾಲಿ.ಆದರೆ ಇದು ಸರಿಯಾದ ಕ್ರಮವೆ ಎನ್ನುವುದರ ಬಗ್ಗೆ ಒಮ್ಮತವಿಲ್ಲ.ಇದರ ಬಗ್ಗೆ ನಡೆದ ಸಂಶೋಧನೆ ಸೀಮಿತ ಸಂಖ್ಯೆಯ ಜನರ ಮೇಲೆ ಪ್ರಯೋಗಿಸಿ,ಸರಿಯಾಗುತ್ತದೆ ಎಂದು ಹೇಳಲಾಗಿದೆಯಾದರೂ,ಎಲ್ಲರನ್ನೂ ಪರಿಗಣಿಸಿದಾಗ,ಇದು ನಿರೀಕ್ಷಿತ ಪರಿಣಾಮ ಬೀರುತ್ತದೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.ಅಲ್ಲದೆ ಕಂಪೆನಿಗಳು ಹೀಗೆ ಮಾಡುತ್ತಿವೆ ಎನ್ನುವುದು ಬಹಿರಂಗವಾದೊಡನೆ,ಇದನ್ನು ದುರುಪಯೋಗ ಮಾಡಿಕೊಳ್ಳಲು ತಮ್ಮ ಫೇಸ್ಬುಕ್ ಮಾಹಿತಿಯನ್ನೇ ಬದಲಾಯಿಸಿಕೊಂಡು,ಹೆಚ್ಚಿನ ಸ್ಕೋರ್ ಗಳಿಸಿಕೊಳ್ಳುವ ವಾಮಮಾರ್ಗಿಗಳ ಹಾವಳಿ ಹೆಚ್ಚುತ್ತದೆ.
*ಅಶೋಕ್ಕುಮಾರ್ ಎ
UDAYAVANIhttp://epaper.udayavani.com/PDFDisplay.aspx?Er=1&Edn=MANIPAL&Id=415131
ಪ್ರತಿಕ್ರಿಯೆ (1)