16/07/2007
ಮೈಸೂರು!! ಯುವದಸರ!! ನರೇಶ್ ಐಯರ್ ರಸಸ೦ಜೆ ಕಾರ್ಯಕ್ರಮ ನೋಡಲು ಬ೦ದಾಗ ಸರಿ ಸುಮಾರು ಎ೦ಟು ಗಂಟೆ.
ಯುವರಾಜ ಕಾಲೇಜು ಮೈದಾನ ಜನರಿ೦ದ ತು೦ಬಿತ್ತು.ಆದರು ನೆನ್ನೆಯಷ್ಟು ಕಿಕ್ಕಿರಿದು ತು೦ಬಿರಲಿಲ್ಲ.
ನೆನ್ನೆಯ ದಿವಸ ಸುನಿಧಿ ಚೌಹಾನ್ ರಸಸ೦ಜೆ!!
ಅತ್ತ ಸುನಿಧಿ "ಬೀಡಿ ಜಲೈ ,,, ಜಿಗರ್ ಸೆ ಪಿಯಾ... ಜಿಗರ್ ಬಡಿ ಆಗ್ ಹೈ.. ಥಡುಂ ನಾ ದಡುಂ... " ಅ೦ತಿದ್ದರೆ
ಇತ್ತ ಯುವಸಮೂಹದ ಎದೆಗೆ ಬೆ೦ಕಿ ಇಟ್ಟ೦ತಾಗಿ ಕುಣಿಯುತ್ತಿದ್ದರು. ಅದೊ೦ದು ಉದ್ರೇಕದ ಪೀಕ್ ಅ೦ದರೂ ತಪ್ಪಿಲ್ಲ.
ಕಾರ್ಯಕ್ರಮದ ಹೊರ ನಡೆಯುತ್ತಿದ್ದ ಹೆಣ್ಣು ಮಕ್ಕಳು, ಅಪ್ಪಿ ತಪ್ಪಿ ಪು೦ಡ ಹುಡುಗರ ಮಧ್ಯೆ ಸಿಕ್ಕು!!
ಗು೦ಪಲ್ಲಿ ಗೋವಿ೦ದ ಎ೦ದು ಕೆಲವರು ಮುಟ್ಟಿ ತಟ್ಟುವುದು, ಪೊಲೀಸರು ಬ೦ದಾಗ ಚೆಲ್ಲಾಪಿಲ್ಲಿಯಾಗಿ ಓಡುವುದು... ನಡೆದಿತ್ತು. ಈ ಪು೦ಡನಕ್ಕೆ ಭಾಷೆ , ಪ್ರಾ೦ತ್ಯ , ಜಾತಿಯ ಹ೦ಗಿಲ್ಲ... ಕೇವಲ ತೀಟೆ ಅಷ್ಟೇ ..
ಈ ರೀತಿಯ ಮೊಲೆಸ್ಟೇಶನ್ ಗಳು ನಮ್ಮ ಮಧ್ಯೆ ನಡೆದ೦ತವು. ಯಾವುದೋ ಅಸ್ಸಾಮು, ಒರಿಸ್ಸಾದಲ್ಲಲ್ಲ.
ನರೇಶ್ ಅಯ್ಯರ್ ರಸಸಂಜೆ ಸಾ೦ಗವಾಗಿ ನಡೆಯುತ್ತಿತ್ತು. ಸ್ವಲ್ಪ ಹೊತ್ತು ಸುತ್ತಾಡಿಕೊ೦ಡು ಬರೋಣವೆ೦ದು ಕ್ರೌಡ್ ನಿ೦ದ ಹೊರ ಬ೦ದೆ.
ಪೋಲೀಸ್ ಬಂದೋಬಸ್ತು ಜಾಸ್ತಿನೆ ಇತ್ತು. ಬಹುಶಃ ಹಿ೦ದಿನ ದಿನ ಮುರಿದಿದ್ದ ಚೇರುಗಳ ಫಲಶ್ರುತಿ ಇರಬೇಕು.
ಒಳ ಬರುವವರಲ್ಲಿ ಅನುಮಾನ ಬ೦ದವರನ್ನು, ಅಥವಾ ರಾ೦ಡಾಮ್ ಆಗಿ ಅಡ್ಡ ಹಾಕಿ ಮೆಟಲ್ ದಿಟೆಕ್ತರ್ ಹಿಡಿದು , ಜೇಬುಗಳನ್ನು ತಡವಿ ಪರಿಶೀಲಿಸುತ್ತಿದ್ದರು.
ಅವರು ಜೇಬುಗಳನ್ನು ಮುಟ್ಟುವಾಗ ಕಚಗುಳಿ ಇಟ್ಟ೦ತಾದರು , ಖೈದಿಗಳ೦ತೆ ಅವರಿಗೆ ಸಹಕರಿಸಬೇಕು.
ಅದೇ ಸಮಯಕ್ಕೆ ಒ೦ದು ಟಿಬೆಟಿಯನ್ ಫ್ಯಾಮಿಲಿ ಬ೦ತು. ಮೈಸೂರಿನಲ್ಲಿ ಟಿಬೇಟಿ ಯನ್ನರನ್ನು ಹೆಚ್ಚಾಗಿ ಕಾಣಬಹುದು.
ಏಕೆ೦ದರೆ ಮೈಸೂರಿಗೆ ಸಮೀಪವಿರುವ ಬೈಲುಕುಪ್ಪೆಯಲ್ಲಿ ಚೈನಾ ದಾಳಿಯಿ೦ದಾಗಿ ನಿರಾಶ್ರಿತರಾಗಿರುವ ಟಿಬೇಟಿಯನ್ನರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಇದು ನೆಹರು ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಆಗಿರುವ ರಾಜಕೀಯ ಒಪ್ಪ೦ದ.
ಈಗಲೂ ಟಿಬೇಟಿಯನ್ನರು ತಮಗೆ ನೀಡಿರುವ ಸ್ಥಳಗಳಲ್ಲಿ ತಮ್ಮ ಕಲೆ, ಸ೦ಸ್ಕ್ರುತಿ ಹಾಗು ಜೀವನ ಪದ್ಧತಿಯನ್ನು ಪೋಷಿಸಿಕೊ೦ಡು ಬ೦ದಿದ್ದಾರೆ.
ಆ ಟಿಬೆಟಿಯನ್ ಫ್ಯಾಮಿಲಿಯಲ್ಲಿ, ವಯಸ್ಸಾದ ದಂಪತಿಗಳ ಜೊತೆ ಮಧ್ಯವಯಸ್ಸಿನ ಹುಡುಗ ಹುಡುಗಿ ಇದ್ದರು. ಬಹುಶಃ ಅವರ ಮಕ್ಕಳಿರಬೇಕು.
" ಅವರು ಒಳಬರುವಾಗ ನಮ್ಮ ಪೋಲಿಸ್ ಅ೦ಕಲ್ ಆ ಫ್ಯಾಮಿಲಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಲು ಮು೦ದಾದರು.
ಆ ವಯಸ್ಸಾದ ವ್ಯಕ್ತಿ ನಿ೦ತುಕೊಳ್ಳಲು ಕಷ್ಟ ಪಡುತ್ತಿದ್ದರೂ ಪೊಲೀಸರಿಗೆ ಸಹಕರಿಸಿದ. "
ನಡೆದದ್ದು ಇಷ್ಟೇ!! ಆ ವಯಸ್ಕ ವ್ಯಕ್ತಿಯ ಹೆ೦ಡತಿಗೆ ಇದು ಸರಿ ಬರಲಿಲ್ಲ. ಪರಿಶೀಲನೆ ನಡೆಸಿದ ಪೊಲೀಸರಿಗೆ ಜೋರು ಮಾಡಲು ಶುರು ಮಾಡಿದಳು.
"ರೂಲ್ಸು!! ಅಂದ್ರೆ ರೂಲ್ಸು!! ಎಲ್ಲರಿಗೂ ಒ೦ದೇ ತರದ ರೂಲ್ಸು ಫಾಲೋ ಮಾಡಬೇಕು.
ಅಲ್ಲಿ ನೋಡಿ!! ಎಷ್ಟೋ ಜನಗಳನ್ನ ಸ್ವಲ್ಪಾನು ಚೆಕ್ ಮಾಡದೆ ಒಳ ಬಿಡ್ತಾ ಇದೀರ.
ಆದರೆ ನನ್ನ ಗ೦ಡನನ್ನ ನಿ೦ತುಕೊಳ್ಳಲು ಕಷ್ಟ ಪಡ್ತಾ ಇದ್ದರೂ, ಅವರನ್ನ ಈ ರೀತಿ ಚೆಕ್ ಮಾಡ್ತಾ ಇದೀರ. ಇದು ತಪ್ಪು.
ನಾವು ಇಲ್ಲಿನ ಲೋಕಲ್ ಜನಗಳ ರೀತಿ ಕಾಣೋದಿಲ್ಲ ಅ೦ತ ತಾನೇ!! ನೀವು ಈ ರೀತಿ ಮಾಡ್ತಾ ಇರೋದು.
ನಮ್ಮನ್ನ ಅನುಮಾನದಿ೦ದ ನೋಡೋದು ಸರಿ ಅಲ್ಲ " ಹೀಗೆ ಇವೆ ಪದಗಳನ್ನು ಹಿ೦ದೆ ಮು೦ದೆ ಮಾಡಿ ರೂಲ್ಸು ಕೇಳುತ್ತಿದ್ದಳು.
ಪೋಲಿಸು ಅಂಕಲ್ ಕ್ಯಾರೆ!! ಅನ್ನಲಿಲ್ಲ .. "ಅಯ್ಯೋ!! ಹೋಗಮ್ಮ ನಮ್ಮ ಡ್ಯೂಟಿ!! ನಾವು ಮಾಡ್ತಾ ಇದಿವಿ" ಎನ್ನುತ್ತಾ ತಮ್ಮ ಕೆಲಸದಲ್ಲಿ ಮಗ್ನರಾದರು.
ಗ೦ಡ, ಮಕ್ಕಳು ಎಲ್ಲರೂ ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಆಕೆ ಸುಮ್ಮನಾಗಲಿಲ್ಲ.
ಬಿಕ್ಕಳಿಸಿ ಅಳುತ್ತಾ!! ರಸ್ತೆಯ ಮಧ್ಯೆ ಇದ್ದ ಡಿವೈಡರ್ ಪಾರ್ಕಿನಲ್ಲಿ ಕೆಲ ಕಾಲ ಕುಳಿತರು.
ನ೦ತರ ಆ ನಾಲ್ಕೂ ಜನ ಕಾರ್ ಪಾರ್ಕಿ೦ಗ್ ಕಡೆಗೆ ನಡೆದು , ಕಾರು ಹತ್ತಿ ವಾಪಾಸ್ ಸುಯ್ಯನೆ ಹೊರಟು ಹೋದರು.
*******
ಆಕೆಗೆ ಇದ್ದದ್ದು ಗ೦ಡನ ಮೇಲಿನ ಮಮಕಾರವೋ!!! ತಮ್ಮ ಜನಾ೦ಗದ ಮೇಲಿನ ಅಭಿಮಾನವೋ!! ಅಥವಾ
ಇಷ್ಟು ವರುಷಗಳಲ್ಲಿ ಈ ದೇಶದ ಸಂಸ್ಕೃತಿಯ ಜೊತೆಗೆ ತಮ್ಮ ಬೇರುಗಳನ್ನು ಬಿಟ್ಟರು ಸಹ ಅವರನ್ನು ಕಾಡುತ್ತಿರುವ ಅಭದ್ರತೆಯೋ!!!
ಅರ್ಥವಾಗಲಿಲ್ಲ.
ನಿಜವಾಗಿಯೂ ಈ ದೇಶಕ್ಕೆ ಬ೦ದವರಲ್ಲಿ ಟಿಬೆಟಿಯನ್ನರಷ್ಟು ಕೃತಜ್ಞರು ಬೇರಿಲ್ಲ ಎ೦ದು ಕೇಳಿದ್ದೇನೆ.
ಬೈಲುಕುಪ್ಪೆಯ ಗೋಲ್ಡನ್ ಟೆ೦ಪಲ್ ನೋಡಲು ಹೋಗಿದ್ದಾಗ ಗೆಳೆಯ ಅಭಿ ಅಲ್ಲಿ ಒಬ್ಬನನ್ನು ಕೇಳಿದ..
" ಇಲ್ಲಿ ಇದನ್ನ ಬಿಟ್ಟು ಬೇರೆ ಏನೆಲ್ಲಾ ಇದೆ ನೋಡುವ೦ತದ್ದು ..?" ಎ೦ದು .
ಅದಕ್ಕೆ ಆತ " ಇಷ್ಟೇ!! ಸಾಬ್!! ನಿಮ್ಮ ದೇಶ ನಮಗೆ ಆಶ್ರಯ ನೀಡಿದೆ.
ನಮ್ಮ ಆಚಾರಗಳನ್ನ ಪಾಲಿಸೋದಕ್ಕೆ ಸ್ವಾತ೦ತ್ರ ನೀಡಿದೆ.
ನಮಗೆ ಸಿಕ್ಕ ಸವಲತ್ತುಗಳಲ್ಲಿ ನಮ್ಮ ಕೈಲಿ ಮಾಡಲಿಕ್ಕಾಗಿದ್ದು ಇಷ್ಟು ಮಾತ್ರ" ಎ೦ದ.
ಗೆಳೆಯ ರವಿ ಗೋಲ್ಡನ್ ಟೆ೦ಪಲ್ ನಲ್ಲಿ ಬುದ್ಧನ ಮೂರ್ತಿ ನೋಡಿ ಹೇಳಿದ್ದ " ನಿಜವಾಗಲು ದೇವರು ಅನ್ನೋನು ಇದ್ದರೆ, ಇವರ ಕೂಗು ಅವನಿಗೆ ಕೇಳಿಸದೆ ಇರುತ್ತಿತ್ತಾ ...? ಯಾವ ದೇವರು ಇಲ್ಲ . ಪಾಪ ಇವರು ಸುಮ್ನೆ ಬೇಡಿಕೊಳ್ಳುವುದೇ ಆಯ್ತು " ಎ೦ದು.
ಇನ್ನು ಟಿಬೇಟಿನ ವಿಚಾರವನ್ನು ಬಿಟ್ಟು ಬಿಡೋಣ.
ಅಸ್ಸಾಮಿನ ಮೂಲ ನಿವಾಸಿಗಳಿಗೂ , ಬಾ೦ಗ್ಲಾ ವಲಸಿಗರಿಗೂ ನಡೆಯುತ್ತಿರುವ ಕಾದಾಟ ನೋಡುತ್ತಿದ್ದೇವೆ.
ವಲಸೆ ಬ೦ದವರಿಗೂ , ಮೂಲ ನಿವಾಸಿಗಳಿಗೂ ಇರುವ ತಿಕ್ಕಾಟವನ್ನು ನೋಡುತ್ತಾ ಹೋದರೆ ಇತಿಹಾಸಕ್ಕೆ ಇತಿಹಾಸವೇ ಮೂಖ ಸಾಕ್ಷಿಯ೦ತೆ ನಿ೦ತಿದೆ.
ಗೌರವಯುತ ಜೀವನವನ್ನು ಅರಸಿ ಹೊರಡುವುದು ಪ್ರತಿಯೊಬ್ಬರ ಹಕ್ಕು ಮಾತ್ರವಲ್ಲ, ಅದು ಪ್ರತಿ ಜೀವಿಯ ಮೂಲಭೂತ ತುಡಿತ.
ಈ ರೀತಿ ಬ೦ದವರು ತಮ್ಮ ಬೇರುಗಳನ್ನು ಇಳಿ ಬಿಟ್ಟು, ತಮ್ಮ ಸ೦ಸ್ಕುತಿಯನ್ನು ಹೆಮ್ಮರವಾಗಿ ಬೆಳೆಸಿ ಮೂಲತಃ ಇದ್ದವರನ್ನು ತುಳಿಯುವುದು ಸಾಧುವಾ!!!
ಅಥವಾ ಮೂಲ ನಿವಾಸಿಗಳು ಗುಳೆ ಬ೦ದವರನ್ನು ಜೀತದವರ೦ತೆ ಕ೦ಡು ಶೋಷಿಸುವುದು ಸಾಧುವಾ!!
ಅಥವಾ ಹೊ೦ದಾಣಿಕೆ ಸಾಧುವಾ!! .
ಇ೦ತಹ ಪ್ರಶ್ನೆಗಳ ಮೂಲಕ್ಕೆ ಇಳಿದರೆ ಒ೦ದಾ!! ನಾವಿರುವ ತಾಣದಲಿ ನಾವೇ ಪರಕೀಯರ೦ತೆ ಕಾಣುತ್ತೇವೆ ಅಥವಾ ಗುಳೆ ಬ೦ದಿರುವ ನಮ್ಮ ಜೊತೆಯಲ್ಲೇ ಇರುವ ಸೋದರ ಮಿತ್ರನೊಬ್ಬ ಶತ್ರುವ೦ತೆ ಕಾಣುತ್ತಾನೆ.
ಇದಕ್ಕೆಲ್ಲಾ ನೀತಿ, ನಿಯಮ, ಸಾಂವಿಧಾನಿಕ ಕಟ್ಟುಪಾಡುಗಳು ಉತ್ತರವಾಗಲಾರದು.
ಮನುಷ್ಯನ ಸ್ವಭಾವ, ಮೌಲ್ಯ, ಮಾನವೀಯತೆ ಮಾತ್ರ ಸ್ವಲ್ಪ ಉತ್ತರ ನೀಡಿಯಾವು.
ಇನ್ನಷ್ಟು ಆಳಕ್ಕೆ ಹೋದರೆ ಜೀವ ವಿಕಾಸವಾದ " survival of the fittest" ನಲ್ಲಿ ಸ್ಪಷ್ಟ ಉತ್ತರ ಸಿಗಬಹುದು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!