ಲಲಿತಾ ಸಹಸ್ರನಾಮ ೬೪-೬೫

Devarṣi-gaṇa- saṃghāta -stūyamānātma-vaibhavā देवर्षि-गण-संघात-स्तूयमानात्म-वैभवा (64)

೬೪. ದೇವರ್ಷಿ-ಗಣ-ಸಂಘಾತ-ಸ್ತೂಯಮಾನಾತ್ಮ-ವೈಭವಾ

        ಈ ನಾಮದಿಂದ ಪ್ರಾರಂಭವಾಗಿ ೮೪ನೇ ನಾಮದವರೆಗೆ ರಾಕ್ಷಸನಾದ ಭಂಡಾಸುರನನ್ನು ಸಂಹರಿಸುವ ವರ್ಣನೆಯಿದೆ. ದೇವ+ಋಷಿ+ಗಣ. ದೇವ ಎಂದರೆ ಪುಂ. ಮತ್ತು ಸ್ತ್ರೀ ದೇವರುಗಳು ಅಥವಾ ದೇವ-ದೇವಿಯರು, ಋಷಿ ಎಂದರೆ ಮಹಾನ್ ಮುನಿ, ಗಣ ಎಂದರೆ ದೇವತೆಗಳ ಅಥವಾ ಉಪದೇವರುಗಳ ಸಮೂಹ. ಅಗ್ನಿ ಪುರಾಣವು ಏಳು ವಿಧವಾದ ಗಣಗಳನ್ನು ಹೆಸರಿಸುತ್ತದೆ. ಉದಾಹರಣೆಗೆ ರುದ್ರ ಗಣವೆಂದರೆ ಶಿವನ ಸಹಾಯಕರು ಅಥವಾ ಆಜ್ಞಾಪಾಲಕರು. ’ಶ್ರೀ ರುದ್ರಂ’ನ ೧೧ನೇ ಶ್ಲೋಕವು ಈ ರುದ್ರ ಗಣಗಳನ್ನು ಪ್ರಾರ್ಥಿಸುವುದಕ್ಕಾಗಿಯೇ ಪ್ರತ್ಯೇಕವಾಗಿ ರಚಿಸಲ್ಪಟ್ಟಿದೆ. ಋಷಿ ಎಂದರೆ ಮಹಾ ಮುನಿಗಳಾದ ವಶಿಷ್ಠ, ನಾರದ ಮೊದಲಾದವರು. ನಾರದನನ್ನು ದೇವರ್ಷಿ ಎಂದೂ ಕರೆದಿದ್ದಾರೆ. ದೇವಿಯನ್ನು ದೇವ-ದೇವಿಯರು, ಋಷಿಮುನಿಗಳು, ಉಪದೇವ-ದೇವಿಯರು ಅಥವಾ ದೇವತೆಗಳ ಸಮೂಹವು ಪೂಜಿಸುತ್ತದೆ. ದೇವರುಗಳು ಮತ್ತು ಋಷಿಗಳು ಪರಬ್ರಹ್ಮಕ್ಕಿಂತ ಕಡಿಮೆ ಸ್ತರದಲ್ಲಿರುವವರನ್ನು ಪೂಜಿಸುವುದಿಲ್ಲ ಹಾಗಾಗಿ ಈ ನಾಮವು ದೇವಿಯು ನಿರ್ಗುಣ ಬ್ರಹ್ಮಳೆಂದು ಪರೋಕ್ಷವಾಗಿ ಪ್ರತಿಪಾದಿಸುತ್ತದೆ.

        ನಾರದ ಮಹರ್ಷಿಯು ಶ್ರೀ ಲಲಿತೆಯ ಬಳಿ ಸಾರಿ ದೇವತೆಗಳಿಗೆ ಮತ್ತು ಋಷಿಗಳಿಗೆ ಕಂಟಕ ಪ್ರಾಯನಾಗಿದ್ದ ಭಂಡಾಸುರನನ್ನು ಸಂಹರಿಸುವಂತೆ ಬೇಡಿಕೊಂಡನಂತೆ. ಈ ನಾಮದ ಗೂಡಾರ್ಥವೇನೆಂದರೆ; ಇಲ್ಲಿ ದಾನವರೆಂದರೆ ಅಜ್ಞಾನದಿಂದ ಉಂಟಾಗುವ ಅಹಂಕಾರ ಅಥವಾ ಅಹಮಿಕೆ. ತಮ್ಮ ಅಹಂಕಾರವನ್ನು ನಾಶಗೊಳಿಸಲು ಜನರು ಶ್ರೀ ಲಲಿತೆಯ ಬಳಿಗೆ ಬರುತ್ತಾರೆ; ಏಕೆಂದರೆ ಆಕೆಗೆ ಮಾತ್ರವೇ ಅದನ್ನು ನಾಶಮಾಡುವ ಶಕ್ತಿಯಿದೆ. ಪಾಪಕಾರ್ಯಗಳು ಅಜ್ಞಾನದಿಂದಾಗಿ ಮಾಡಲ್ಪಡುತ್ತವೆ.

Bhaṇḍāsura-vadhodyukta-śakti-senā-samanvitā भण्डासुर-वधोद्युक्त-शक्ति-सेना-समन्विता (65)

೬೫. ಭಂಡಾಸುರ-ವಧೋದ್ಯುಕ್ತ-ಶಕ್ತಿ-ಸೇನಾ-ಸಮನ್ವಿತಾ

        ದೇವಿಯು ಭಂಡಾಸುರನೊಡನೆ ಯುದ್ಧ ಮಾಡಲು ತನ್ನ ಸೇನೆಯೊಂದಿಗೆ ಸಿದ್ಧಳಾಗಿದ್ದಾಳೆ. ಅವಳ ಸೈನ್ಯವು ಶ್ರೀ ಚಕ್ರದಲ್ಲಿ ಹೆಸರಿಸಿರುವ ವಿವಿಧ ದೇವಿಯರಿಂದ ಕೂಡಿದೆ. ಈ ನಾಮದೊಂದಿಗೆ ಒಂದು ಕತೆಯು ಅನುಬಂಧಹೊಂದಿದೆ. ಪ್ರೇಮದೇವತೆಯಾದ ಮನ್ಮಥನು ಶಿವನಿಂದಾಗಿ ಸುಟ್ಟು ಬೂದಿಯಾದನು. ಗಣೇಶನು ಆಟವಾಡುತ್ತಾ ಈ ಬೂದಿಯನ್ನು ಒಟ್ಟುಮಾಡಿ ಅದರಿಂದ ಒಬ್ಬ ಮನುಷ್ಯನನ್ನು ಸೃಷ್ಟಿಸಿದನು. ಅದನ್ನು ಸೃಷ್ಟಿಕರ್ತನಾದ ಬ್ರಹ್ಮನು ನೋಡಿ ಭಂಡ ಭಂಡ ಅಂದರೆ ಭಲೇ ಭಲೇ ಎಂದು ಅವನನ್ನು ಪ್ರಶಂಸಿದನು. ಅಂದಿನಿಂದಾಗಿ ಆ ರಾಕ್ಷಸನಿಗೆ ಭಂಡಾಸುರ ಎಂದು ಹೆಸರಾಯಿತು. ಶಿವನ ಉಗ್ರವಾದ ಮೂರನೆಯ ಕಣ್ಣಿನಿಂದ ಮನ್ಮಥನು ಸುಡಲ್ಪಟ್ಟದ್ದರಿಂದ ಭಂಡಾಸುರನು ಬಹಳಷ್ಟು ಶಕ್ತಿಶಾಲಿಯಾಗಿದ್ದನು. ಅವನು ಎಲ್ಲಾ ವಿಧವಾದ ಕೆಡಕುಗಳ ಮೂರ್ತರೂಪನಾಗಿದ್ದ.

        ಭಂಡ ಎಂದರೆ ಬಂಧನ ಎನ್ನುವ ಅರ್ಥವೂ ಇದೆ. ಶಿವ ಸೂತ್ರದ ೧ನೇ ಅಧ್ಯಾಯದ ಎರಡನೇ ಶ್ಲೋಕವು ’ಜ್ಞಾನಮ್ ಬಂಧಃ’ ಎನ್ನುತ್ತದೆ. ಬಂಧಕ್ಕೆ ಇರುವ ವ್ಯಾಖ್ಯೆಯೆಂದರೆ ಪರಿಮಿತ ಜ್ಞಾನ. ಆದ್ದರಿಂದ ಅಜ್ಞಾನವು ಬಂಧನಕ್ಕೆ ಕಾರಣವಾಗಿದೆ ಎಂದು ಅರ್ಥೈಸಬಹುದು. ಬಂಧನವೆಂದರೆ ಎಲ್ಲಾ ವಿಧವಾದ ಆಕರ್ಷಣೆಗೆ ಒಳಗಾಗುವುದು, ಆಸೆಗಳಿಗೆ ದಾಸನಾಗುವುದು, ಮೊದಲಾದವು ಎನ್ನಬಹುದು. ಅಜ್ಞಾನವು ದ್ವೈತ ಅನುಭವಕ್ಕೆ (ಆತ್ಮ ಮತ್ತು ಪರಮಾತ್ಮವು ಬೇರೆ ಎಂದು ತಿಳಿಸುವ ಅನುಭವ) ಕಾರಣವಾಗಿದೆ ಆದ್ದರಿಂದ ಅಜ್ಞಾನವನ್ನು ಬಂಧನವೆಂದಿದ್ದಾರೆ. ಒಬ್ಬನಿಗೆ ಜ್ಞಾನವಿದ್ದರೆ ಅವನು "ನಾನು ಅದೇ (ಅಹಂ ಬ್ರಹ್ಮಾಸ್ತ್ಮಿ)" ಎನ್ನುತ್ತಿದ್ದ. ಅಂತಹ ಬ್ರಹ್ಮಾಂಡ ಚೈತನ್ಯವಾದ ಆತ್ಮನನ್ನು ಜೀವಿಯ ಅಥವಾ ಅಣುವಿನಷ್ಟು ಚಿಕ್ಕದಾದ ವೈಯ್ಯಕ್ತಿಕ ಆತ್ಮದ ಸ್ಥಾಯಿಗೆ ಪರಿಮಿತಗೊಳಿಸಿರುವುದಕ್ಕೆ ಮೂಲ ಕಾರಣ ಮನಸಿನ ಹುಟ್ಟುಗುಣ ಅಥವಾ ಸಂಸ್ಕಾರಗೊಂಡಿರದ ಮನಸ್ಸು; ಇದನ್ನೇ ’ಆಣವ ಮಲ’ ಎನ್ನುತ್ತಾರೆ. (ಆಣವ ಮಲದ ಕುರಿತಾಗಿ ಹೆಚ್ಚಿನ ವಿವರಗಳಿಗೆ - ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A9-%E0%B2%AA%E0%B2%BE%E0%B2%B6%E0%B3%81%E0%B2%AA%E0%B2%A4-%E0%B2%AE%E0%B2%A4/08/08/2012/37856 ನೋಡಿ). ಇದನ್ನು ಮನಸ್ಸಿನ ಹುಟ್ಟುಗುಣವೆಂದಿದ್ದಾರೆ ಇಲ್ಲವಾಗಿದ್ದರೆ ಅದು ಪರಬ್ರಹ್ಮವನ್ನು ಅರಿತು ಮುಕ್ತವಾಗದೇ ಹೇಗಿರುತ್ತಿತ್ತು? ಬಿಡುಗಡೆಯಿಂದ ಮಾತ್ರವೇ ಈ ಬಂಧನದಿಂದ ಮುಕ್ತನಾಗಲು ಸಾಧ್ಯ. ಮತ್ತು ಮುಕ್ತಿಯು ಕೇವಲ ಜ್ಞಾನದಿಂದಷ್ಟೇ ದೊರೆಯುತ್ತದೆ. ಮನಸ್ಸಿನ ಈ ಸ್ಥಿತಿಯಿಂದ ಮುಕ್ತವಾಗಬೇಕೆಂದರೆ; ಶಿವ ಸೂತ್ರದ ೧ನೇ ಅಧ್ಯಾಯದ ೬ನೇ ಶ್ಲೋಕವು, "ಉನ್ನತವಾದ ಪ್ರಜ್ಞೆಯಿಂದ, ವಿವಿಧ ಶಕ್ತಿಗಳು (ಶಕ್ತಿದೇವತೆಯ ವಿವಿಧ ಕ್ರಿಯಾ ಶಕ್ತಿಗಳು) ಒಂದಾಗಿ ಮಾಯೆಯಿಂದುಂಟಾದ ಈ ಪ್ರಪಂಚನ್ನು ಇಲ್ಲವಾಗಿಸುತ್ತದೆ ಮತ್ತು ಪರಮಚೈತನ್ಯವನ್ನು ಅರಿಯುವತ್ತ ಕೊಂಡೊಯ್ಯುತ್ತವೆ", ಎಂದು ಹೇಳುತ್ತದೆ. ಈ ಕ್ರಿಯೆಯೇ ಆತ್ಮಸಾಕ್ಷಾತ್ಕಾರ.

       ಈ ನಾಮದ ಗೂಡಾರ್ಥವೇನೆಂದರೆ, ಶ್ರೀ ಲಲಿತೆಯು ನಮಗೆ ಮರಣ ಮತ್ತು ಜನನಗಳ ಚಕ್ರದಿಂದ ಬಿಡುಗಡೆಯನ್ನು ಕೊಡಲು ಸಿದ್ಧಳಿದ್ದಾಳೆ ಆದರೆ ನಾವು ಅವಳನ್ನು ತಿಳಿಯುವುದಕ್ಕೆ ಕಾತುರವನ್ನು ಹೊಂದಿರಬೇಕು. ಭಂಡಾಸುರನು ಅಜ್ಞಾನ ಮತ್ತು ಅದರಿಂದ ಉಂಟಾಗುವ ಕೆಡಕುಗಳ ಮೂರ್ತರೂಪವಾಗಿದ್ದಾನೆ. ಅವಳು ಅಜ್ಞಾನ ಮತ್ತು ಅದಕ್ಕೆ ಸಂಭಂದಿಸಿದ ಎಲ್ಲಾ ಕ್ರಿಯೆಗಳೊಂದಿಗೆ ಯುದ್ಧ ಮಾಡಲು ಸಿದ್ಧಳಿದ್ದಾಳೆ. ಶಕ್ತಿ-ಸೇನಾ ಎಂದರೆ ಅವಳ ವಿವಿಧ ರೀತಿಯ ಶಕ್ತಿಗಳು; ಕೇವಲ ಸೃಷ್ಟಿ ಮಾತ್ರವಲ್ಲ, ಪಾಲನೆ ಮತ್ತು ಲಯ ಶಕ್ತಿಗಳೂ ಕೂಡಾ. ಅವಳ ವಿವಿಧ ಕಾರ್ಯಗಳನ್ನು ಶ್ರೀ ಚಕ್ರದ ೯೯೬ನೇ ನಾಮಾವಳಿಯಲ್ಲಿ ಪ್ರಸ್ತಾಪಿಸಲಾಗಿರುವ ವಿವಿಧ ದೇವಿಯರ ಮೂಲಕ ಸಾಂಕೇತಿಕವಾಗಿ ಬಿಂಬಿಸಲಾಗಿದೆ. 

******

        ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 64,65 http://www.manblunder.com/2009/07/lalitha-sahasranamam-6465.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.