ಲಲಿತಾ ಸಹಸ್ರನಾಮ ೯೯-೧೦೩
Mūlādhāraika-nilayā मूलाधारैक-निलया (99)
೯೯. ಮೂಲಾಧಾರೈಕ-ನಿಲಯಾ
ದೇವಿಯು ಮೂಲಾಧಾರ ಚಕ್ರದಲ್ಲಿ ನಿವಸಿಸುತ್ತಾಳೆ. ಮೂಲವೆಂದರೆ ಬೇರು ಮತ್ತು ಆಧಾರವೆಂದರೆ ಎತ್ತಿಹಿಡಿಯುವುದು. ಆದ್ದರಿಂದ ಮೂಲಾಧಾರ ಚಕ್ರವನ್ನು ಬುನಾದಿ ಚಕ್ರವೆಂದು ಕರೆದಿದ್ದಾರೆ. ಮೂಲಾಧಾರ ಚಕ್ರದ ಕುರಿತಾಗಿ ವಿಶೇಷ ಅಧ್ಯಯನವನ್ನು ೫೧೪ರಿಂದ ೫೨೦ನೇ ನಾಮಾವಳಿಗಳವರೆಗೆ ಮಾಡಲಾಗಿದೆ.
Brahmagranthi-vibhedini ब्रह्मग्रन्थि-विभेदिनी (100)
೧೦೦. ಬ್ರಹ್ಮಗ್ರಂಥಿ- ವಿಭೇದಿನೀ
ದೇವಿಯು ಬ್ರಹ್ಮಗ್ರಂಥಿಯನ್ನು ಛೇದಿಸುತ್ತಾಳೆ. ಕುಂಡಲಿನಿಯ ಮಾರ್ಗದಲ್ಲಿ ಮೂರು ಗಂಟುಗಳಿವೆ ಅವನ್ನು ಗ್ರಂಥಿಗಳೆನ್ನುತ್ತಾರೆ. ಈ ಗ್ರಂಥಿಗಳನ್ನು ಛೇದಿಸಿದಾಗ ಅವುಗಳ ಮೂಲಕ ಕುಂಡಲಿನಿಯು ಉನ್ನತ ಚಕ್ರಗಳಿಗೆ ಹೋಗಲು ಮಾರ್ಗವುಂಟಾಗುತ್ತದೆ. ಮೊದಲನೆಯದಾದ ಬ್ರಹ್ಮಗ್ರಂಥಿಯು ಮೂಲಾಧಾರ ಚಕ್ರದ ಮೇಲುಗಡೆ ಮತ್ತು ಸ್ವಾಧಿಷ್ಟಾನ ಚಕ್ರದ ಕೆಳಗಡೆ ಇರುತ್ತದೆ. ಕುಂಡಲಿನಿಯು ಈ ಗ್ರಂಥಿಯನ್ನು ಛೇದಿಸಿದಾಗ ಮಾತ್ರ ಸ್ವಾಧಿಷ್ಟಾನ ಚಕ್ರಕ್ಕೆ ಹೋಗಲು ಅನುಕೂಲವಾಗುತ್ತದೆ.
Maṇipūrāntha-ruditā मणिपूरान्थ-रुदिता (101)
೧೦೧. ಮಣಿಪೂರಾಂತ-ರುದಿತಾ
ದೇವಿಯು ಮಣಿಪೂರಕದಲ್ಲಿ (ನಾಭಿ ಚಕ್ರದಲ್ಲಿ) ಕಾಣಿಸಿಕೊಳ್ಳುತ್ತಾಳೆ. ಚೆನ್ನಾಗಿ ಅಲಂಕೃತಳಾದ ದೇವಿಯು ನಾಭಿ ಚಕ್ರದ ಸಿಂಹಾಸನದ ಮೇಲೆ ಆಸೀನಳಾಗಿರುತ್ತಾಳೆ ಎನ್ನುವುದನ್ನು ನಾಮಾವಳಿ ೯೮ರಲ್ಲಿ ನೋಡಿದ್ದೇವೆ. ಸೌಂದರ್ಯ ಲಹರಿಯ ೪೦ನೇ ಶ್ಲೋಕವು ಮಣಿಪೂರಕ ಚಕ್ರವನ್ನು ಬಹು ಸುಂದರವಾಗಿ ವರ್ಣಿಸುತ್ತದೆ. "ನಿನ್ನ ಮಣಿಪೂರಕ ಚಕ್ರದಲ್ಲಿ ನಿರಂತರವಾಗಿ ನೆಲೆಸಿರುವ, ಮಿಂಚಿನಂತಹ ಶಕ್ತಿಯ ರೂಪದಲ್ಲಿರುವಂತೆ ವರಪಡೆದಿರುವ, ಯಾರ ಕಾಂತಿಯು ಕತ್ತಲೆಗೆ ವಿರುದ್ಧವಾಗಿದೆಯೋ, ಕುಂಡಲಿನಿಯ ಆಭರಣಗಳಲ್ಲಿ ಅಡಕವಾಗಿರುವ ವಿವಿಧ ರತ್ನಗಳ ಪ್ರಭೆಯಿಂದ ಕಾಮನಬಿಲ್ಲು ಉಂಟಾಗಿದೆಯೋ ಮತ್ತು ಹರನ (ಬೆಂಕಿಯಿಂದ) ಮತ್ತು ಮಿಹಿರನ (ಸೂರ್ಯನಿಂದ/ಕೆಲವೊಂದು ನಿಘಂಟುಗಳು ಚಂದ್ರನಿಂದ ಎನ್ನುತ್ತವೆ) ತಾಪಗಳಿಂದ ತೃಷೆಗೊಂಡ ಪ್ರಪಂಚಗಳಿಗೆ ಮಳೆಯನ್ನು ಸುರಿಸುತ್ತದೆಯೋ ಆ ದಟ್ಟವಾದ ಕಡು-ನೀಲಿ ಮೇಘವನ್ನು ನಾನು ಪೂಜಿಸುತ್ತೇನೆ." ಗಾಢ ಧ್ಯಾನದ ಸ್ಥಿತಿಯಲ್ಲಿ ಬಿಲ್ಲಿನಾಕಾರದ ಪ್ರಬಲ ಕಾಂತಿಯು ಕಾಣಿಸುತ್ತದೆ. ಈ ಚಕ್ರದ ಕುರಿತಾದ ವಿಶೇಷ ಅಧ್ಯಯನವನ್ನು ನಾಮ ೪೯೫ರಿಂದ ೫೦೩ರವರೆಗೆ ಕೈಗೊಳ್ಳಲಾಗಿದೆ.
Viṣṇugranthi-vibhedinī विष्णुग्रन्थि-विभेदिनी (102)
೧೦೨. ವಿಷ್ಣುಗ್ರಂಥಿ-ವಿಭೇದಿನೀ
ದೇವಿಯು, ನಾಭಿಯ ಚಕ್ರದ ಸ್ವಲ್ಪ ಮೇಲೆ ಇರುವ ಎರಡನೇ ಗ್ರಂಥಿಯಾದ ವಿಷ್ಣುಗ್ರಂಥಿಯನ್ನು ಛೇದಿಸುತ್ತಾಳೆ. ಮಹಾ ವಿಷ್ಣುವು ಮಣಿಪೂರಕ ಚಕ್ರದಲ್ಲಿ ನಿವಸಿಸುತ್ತಾನೆ ಆದ್ದರಿಂದ ಮಣಿಪೂರಕ ಚಕ್ರದ ಮೇಲಿನ ಗ್ರಂಥಿಯನ್ನು ವಿಷ್ಣು ಗ್ರಂಥಿ ಎಂದು ಕರೆಯಲಾಗಿದೆ. ಈ ಜಗತ್ತನ್ನು ಸುಸ್ಥಿತಿಯಲ್ಲಿಡುವ ಹೊಣೆಯು ಮಹಾವಿಷ್ಣುವಿನದಾಗಿದೆ. ಯಾವಾಗ ಸಾಧಕನು ಈ ವಿಷ್ಣುಗ್ರಂಥಿಯನ್ನು ದಾಟಲು ಶಕ್ಯನಾಗುವನೋ ಅವನು ಸ್ಥಿತಾತೀತನಾಗುತ್ತನೆ ಅಂದರೆ ಈ ಸ್ಥಿತಿಯ ಅವಸ್ಥೆಗೆ ಅತೀತನಾಗುತ್ತಾನೆ. ಕೇವಲ ಜೀವಿಸುವುದು ಸಾಮಾನ್ಯ ಜೀವಿಗಳಿಗಷ್ಟೇ ಅನ್ವಯಿಸುತ್ತದೆ; ಇದರಿಂದ ಅತೀತರಾಗುಳಿಯುವವರು ಯೋಗಿಗಳು ಮತ್ತು ಋಷಿ-ಮುನಿಗಳು. ಈ ಯೋಗಿಗಳು ಚಿರಕಾಲ ಜೀವಿಸುವುದು ಅಮೃತ ಅಥವಾ ದೈವೀ ಮಕರಂದದ ಸೇವನೆಯಿಂದ ಎನ್ನುವುದರ ಕುರಿತಾಗಿ ಈ ಮೊದಲೇ ಚರ್ಚಿಸಲಾಗಿದೆ.
Ājñā-cakrāntarālasthā आज्ञा-चक्रान्तरालस्था (103)
೧೦೩. ಆಜ್ಞಾ-ಚಕ್ರಾಂತರಾಲಸ್ಥಾ
ದೇವಿಯು ಮೂರನೇ ಕಣ್ಣು ಎಂದು ಕರೆಯಲ್ಪಡುವ ಆಜ್ಞಾ ಚಕ್ರದಲ್ಲಿ ನಿವಸಿಸುತ್ತಾಳೆ. ಇದು ಆರು ಚಕ್ರಗಳಲ್ಲಿ ಕಡೆಯದಾಗಿದ್ದು ಈ ಚಕ್ರವು ಗುರುವಿಗೆ ಸೇರಿದ್ದು; ಇದರ ಮೂಲಕ ಆತನು ಸಾಧಕನಿಗೆ ಆಜ್ಞೆಗಳನ್ನು ವಿಧಿಸುತ್ತಾನೆ. ಈ ಚಕ್ರದಲ್ಲಿ ಸಾಧಕನಿಗೆ ಅಲ್ಪಪ್ರಮಾಣದ ಬ್ರಹ್ಮಜ್ಞಾನವು ಉಂಟಾಗುತ್ತದೆ. ಹಿಂದಿನ ಐದು ಚಕ್ರಗಳು ಪಂಚಭೂತಗಳಿಗೆ ಸಂಭಂದಿಸಿದರೆ, ಈ ಚಕ್ರವು ಮನಸ್ಸಿಗೆ ಸಂಭಂದಿಸಿದ್ದಾಗಿದೆ ಮತ್ತು ಜ್ಞಾನವನ್ನು ಸಂಪಾದಿಸಲು ಇರುವ ಸಾಧನವೇ ಮನಸ್ಸು. ಸೌಂದರ್ಯ ಲಹರಿಯ ೩೬ನೇ ಶ್ಲೋಕವು, ಈ ಚಕ್ರವನ್ನು ಹೀಗೆ ವರ್ಣಿಸುತ್ತದೆ. “’ಪರಾಚಿತ್’ನಿಂದ ಆವರಿಸಲ್ಪಟ್ಟು, ಕೋಟ್ಯಂತರ ಸೂರ್ಯ ಚಂದ್ರರ ಪ್ರಭೆಯುಳ್ಳ, ನಿನ್ನ ಆಜ್ಞಾ ಚಕ್ರದಲ್ಲಿ ನೆಲೆಸಿರುವ ಆ ಪರಮ ಶಂಭುವನ್ನು (ಪರಶಿವನನ್ನು) ನಾನು ಪೂಜಿಸುತ್ತೇನೆ". ಈ ಶ್ಲೋಕವು ಶಿವ ಮತ್ತು ಶಕ್ತಿಯರಿಬ್ಬರ ಮಾನಸ ಪೂಜೆಯ ಕುರಿತು ಒತ್ತಿ ಹೇಳುತ್ತದೆ. ಆಜ್ಞಾ ಚಕ್ರವು ಮನಸ್ಸಿನೊಂದಿಗೆ ಸಂಭಂದ ಹೊಂದಿದೆ. ಕೃಷ್ಣನು ಭಗವದ್ಗೀತೆಯ ೧೧ನೇ ಅಧ್ಯಾಯದ ೮ನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾನೆ. "ನಿನ್ನ ಭೌತಿಕ ಕಣ್ಣುಗಳಿಂದ ನೀನು ನನ್ನನ್ನು ನೋಡಲಾರೆ. ನಾನು ನಿನಗೆ ದಿವ್ಯವಾದ ದೃಷ್ಟಿಯನ್ನು (ಮೂರನೆಯ ಕಣ್ಣು ಅಥವಾ ಆಜ್ಞಾ ಚಕ್ರ) ಕೊಡುತ್ತಿದ್ದೇನೆ".
ಆಜ್ಞಾ ಚಕ್ರದ ಕುರಿತು ೫೨೧ರಿಂದ ೫೨೮ ನಾಮಾವಳಿಗಳಲ್ಲಿ ವಿವರವಾಗಿ ಹೇಳಲಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 99-103 http://www.manblunder.com/2009/08/lalitha-sahasranamam.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪ್ರತಿಕ್ರಿಯೆ (1)